– ರಾಘವೇಂದ್ರ ಅಡಿಗ ಎಚ್ಚೆನ್.
ಜೆಇಇ, ನೀಟ್ ಹಾಗೂ ಫೌಂಡೇಶನ್ ಹಂತದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ದೇಶದ ಮುಂಚೂಣಿ ತರಬೇತಿ ಸಂಸ್ಥೆಯಾದ ಪೇಸ್ ಐಐಟಿ & ಮೆಡಿಕಲ್, ನಗರದಲ್ಲಿ ತನ್ನ ನೂತನ ಪ್ರಾದೇಶಿಕ ಕೇಂದ್ರವನ್ನು ಭಾನುವಾರ ವಿಧ್ಯುಕ್ತವಾಗಿ ಉದ್ಘಾಟಿಸಿತು. ನೂತನ ಕೇಂದ್ರವು ಬೆಳತ್ತೂರು ಮುಖ್ಯರಸ್ತೆ ಸಮೀಪದ ಆವಲಹಳ್ಳಿ, ಕುರುಡುಸೊಣ್ಣೆನಹಳ್ಳಿಯ ವರ್ಜೋನಗರ ಇಂಡಸ್ಟ್ರಿಯಲ್ ಎಸ್ಟೇಟ್ನ ಎಂಜಿ ಸ್ಕ್ವೇರ್ನ 2ನೇ ಮಹಡಿಯಲ್ಲಿ (ಬೆಂಗಳೂರು – 560049) ಕಾರ್ಯಾರಂಭ ಮಾಡಿದೆ.
ನೂತನ ಕೇಂದ್ರದ ಆರಂಭದ ಅಂಗವಾಗಿ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00 ರವರೆಗೆ ಮುಕ್ತ ವಿಜ್ಞಾನ ಮತ್ತು ಗಣಿತ ಉತ್ಸವವನ್ನು (ಕಾರ್ನಿವಲ್) ಆಯೋಜಿಸಲಾಗಿತ್ತು. ಅನ್ವೇಷಣೆ, ಪ್ರಯೋಗ ಹಾಗೂ ಸಂವಾದಾತ್ಮಕ ಕಲಿಕೆಯ ಅನುಭವ ಪಡೆಯಲು ವಿದ್ಯಾರ್ಥಿಗಳು ಮತ್ತು ಪೋಷಕರು ಉತ್ಸಾಹದಿಂದ ಭಾಗವಹಿಸಿದ್ದರು.
ಬ್ರಿಕ್ಸ್ ಇಂಟರ್ನ್ಯಾಷನಲ್ ಹಾಗೂ ಬ್ರಿಕ್ಸ್ ಪೇ ಇಂಡಿಯಾದ ಅಧ್ಯಕ್ಷ ಡಾ. ಪವನ್ ಜೋಷ್ ಮುಖ್ಯ ಅತಿಥಿಯಾಗಿ ಮತ್ತು ಗೌರವಾನ್ವಿತ ವಾಣಿಜ್ಯ ಆಯುಕ್ತ ರಫಿ ಅಹಮದ್ ಗೌರವ ಅತಿಥಿಯಾಗಿ ಪಾಲ್ಗೊಂಡು ಕೇಂದ್ರವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕ ಕುಲದೀಪ್ ತ್ಯಾಗಿ, ಹಿರಿಯ ಅಧ್ಯಾಪಕ (ರಸಾಯನಶಾಸ್ತ್ರ) ಅಂಕಿತ್ ಅಗರ್ವಾಲ್ ಹಾಗೂ ಬೆಂಗಳೂರು ಕೇಂದ್ರದ ಮಾಸ್ಟರ್ ಫ್ರಾಂಚೈಸಿ ವೀಣಾ ರಜಾಯಿ ಉಪಸ್ಥಿತರಿದ್ದರು. ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ತ್ಯಾಗಿ ಅವರು ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವೈಟ್ ಫೀಲ್ಡ್ ನ ಪಾರ್ಸೆಕ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಉತ್ಸವದಲ್ಲಿ ಪ್ರಾಯೋಗಿಕ ವಿಜ್ಞಾನ ಪ್ರಾತ್ಯಕ್ಷಿಕೆಗಳು, ಗಣಿತ ಸವಾಲುಗಳು, ಮೆದುಳಿಗೆ ಕಸರತ್ತು ನೀಡುವ ಒಗಟುಗಳು ಹಾಗೂ ಸಂವಾದಾತ್ಮಕ ಚಟುವಟಿಕೆಗಳು ಗಮನಸೆಳೆದವು. ವಿದ್ಯಾರ್ಥಿಗಳಲ್ಲಿ ಕುತೂಹಲ, ವಿಮರ್ಶಾತ್ಮಕ ಚಿಂತನೆ ಮತ್ತು ವೈಜ್ಞಾನಿಕ ಪರಿಕಲ್ಪನೆಗಳ ಪ್ರಾಯೋಗಿಕ ತಿಳುವಳಿಕೆಯನ್ನು ಬೆಳೆಸಲು ಈ ಚಟುವಟಿಕೆಗಳನ್ನು ವಿನ್ಯಾಸಗೊಳಿಸಲಾಗಿತ್ತು. ವಿದ್ಯಾರ್ಥಿಗಳು ನೂತನ ಕೇಂದ್ರವನ್ನು ವೀಕ್ಷಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಪ್ರಾಯೋಗಿಕ ಕಲಿಕೆಗೆ ಜಂಟಿ ಪ್ರಯತ್ನ: ಪೇಸ್–ಪಾರ್ಸೆಕ್ ಸಹಭಾಗಿತ್ವ
ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಯಾಗಿ, ಪಾರ್ಸೆಕ್ನ ವಿಜ್ಞಾನ ಪ್ರಯೋಗಾಲಯಗಳು ಹಾಗೂ ಬೆಂಗಳೂರಿನ ಪೇಸ್ ಐಐಟಿ & ಮೆಡಿಕಲ್ ನಡುವಿನ ಸಹಯೋಗವನ್ನು ಮುಖ್ಯ ಅತಿಥಿ ಡಾ. ಪವನ್ ಜೋಷ್ ಘೋಷಿಸಿದರು. ತರಗತಿಯ ಬೋಧನೆಗೆ ಪೂರಕವಾಗಿ ನೈಜ, ಪ್ರಾಯೋಗಿಕ ಅನ್ವೇಷಣೆಯನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ವಿಜ್ಞಾನ ಕಲಿಕೆಗೆ ಅವಕಾಶ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಶಿಕ್ಷಣವನ್ನು ಹೆಚ್ಚು ಆಸಕ್ತಿದಾಯಕ, ಅನ್ವಯಿಕ-ಆಧಾರಿತ ಹಾಗೂ ಇಂದಿನ ಯುವ ಕಲಿಯುವವರ ಅಗತ್ಯಗಳಿಗೆ ತಕ್ಕಂತೆ ರೂಪಿಸುವ ಜಂಟಿ ಬದ್ಧತೆಯನ್ನು ಈ ಸಹಭಾಗಿತ್ವ ಬಿಂಬಿಸುತ್ತದೆ.
ಈ ಯೋಜನೆ ಕುರಿತು ವಿಶ್ವಾಸ ವ್ಯಕ್ತಪಡಿಸಿದ ಡಾ. ಪವನ್ ಜೋಷ್, “ಶ್ರೀಮತಿ ವೀಣಾ ರಜಾಯಿ ಅವರ ದೂರದೃಷ್ಟಿ ಮತ್ತು ಮುಂಬೈನ ಪೇಸ್ ಐಐಟಿ & ಮೆಡಿಕಲ್ನ ಹಿರಿಮೆಯನ್ನು ಪರಿಗಣಿಸಿ ಬೆಂಗಳೂರು ಕೇಂದ್ರದೊಂದಿಗೆ ಕೈಜೋಡಿಸಲು ನಿರ್ಧರಿಸಲಾಯಿತು” ಎಂದು ತಿಳಿಸಿದರು.
ಈ ಪಾಲುದಾರಿಕೆಯು ಸೈದ್ಧಾಂತಿಕ ಪರಿಕಲ್ಪನೆಗಳನ್ನು ನೈಜ ಜಗತ್ತಿನ ಅನ್ವಯಗಳೊಂದಿಗೆ ಜೋಡಿಸಲು ವಿದ್ಯಾರ್ಥಿಗಳಿಗೆ ನೆರವಾಗಲಿದ್ದು, ಅವರಲ್ಲಿ ವೈಜ್ಞಾನಿಕ ಮನೋಭಾವ, ವಿಶ್ಲೇಷಣಾತ್ಮಕ ಚಿಂತನೆ ಹಾಗೂ ವಿಜ್ಞಾನದ ಆಳವಾದ ಗ್ರಹಿಕೆಯನ್ನು ರೂಪಿಸಲಿದೆ ಎಂದು ಸಂಸ್ಥೆ ತಿಳಿಸಿದೆ.
ಸಮಗ್ರ ಶಿಕ್ಷಣ ಪರಿಸರ ವ್ಯವಸ್ಥೆ: ವೀಣಾ ರಜಾಯಿ ಆಶಯ
ಬೆಂಗಳೂರು ಕೇಂದ್ರದ ಮಾಸ್ಟರ್ ಫ್ರಾಂಚೈಸಿ ವೀಣಾ ರಜಾಯಿ ಮಾತನಾಡಿ, “ಶೈಕ್ಷಣಿಕ ಉತ್ಕೃಷ್ಟತೆ, ಪರಿಕಲ್ಪನಾ ಸ್ಪಷ್ಟತೆ, ಪ್ರಾಯೋಗಿಕ ಕಲಿಕೆ ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯ ವೈಯಕ್ತಿಕ ಪ್ರಗತಿಯನ್ನು ಒಳಗೊಂಡ ಸಮಗ್ರ ಶಿಕ್ಷಣ ಪರಿಸರ ವ್ಯವಸ್ಥೆಯನ್ನು ರೂಪಿಸುವುದು ನಮ್ಮ ಗುರಿ” ಎಂದರು.
ಕೇವಲ ಕೋಚಿಂಗ್ ಸೆಂಟರ್ ಸ್ಥಾಪಿಸುವುದಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವ, ಆತ್ಮವಿಶ್ವಾಸ ಹೆಚ್ಚಿಸುವ ಹಾಗೂ ಭವಿಷ್ಯದ ಶೈಕ್ಷಣಿಕ ಮತ್ತು ವೃತ್ತಿಪರ ಸವಾಲುಗಳಿಗೆ ಅವರನ್ನು ಅಣಿಗೊಳಿಸುವ ವಾತಾವರಣವನ್ನು ನಿರ್ಮಿಸುವುದು ತಮ್ಮ ಧ್ಯೇಯ ಎಂದು ಅವರು ವಿವರಿಸಿದರು.
“ನನ್ನ ದೃಷ್ಟಿಕೋನವೆಂದರೆ ಶಿಕ್ಷಣವು ಕೇವಲ ಪಠ್ಯಪುಸ್ತಕ ಮತ್ತು ಪರೀಕ್ಷೆಗಳಿಗಷ್ಟೇ ಸೀಮಿತವಾಗಿರದೆ ಅದನ್ನೂ ಮೀರಿದ ವ್ಯವಸ್ಥೆಯಾಗಬೇಕು. ವಿದ್ಯಾರ್ಥಿಗಳು ಕಲಿಕೆಯನ್ನು ಸ್ವತಃ ಅನುಭವಿಸಬೇಕು, ಪರಿಕಲ್ಪನೆಗಳನ್ನು ಪ್ರಶ್ನಿಸಬೇಕು, ಪ್ರಯೋಗ-ಅನ್ವೇಷಣೆಗಳನ್ನು ನಡೆಸಬೇಕು ಹಾಗೂ ತಮ್ಮ ಕನಸುಗಳನ್ನು ಬೆನ್ನಟ್ಟುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಮುಂಬೈನ ಪೇಸ್ ಸಂಸ್ಥೆಯ ಶ್ರೇಷ್ಠ ಪರಂಪರೆ ಮತ್ತು ಸಾಬೀತಾದ ಬೋಧನಾ ವಿಧಾನದ ಬೆಂಬಲದೊಂದಿಗೆ, ಬೆಂಗಳೂರಿನಲ್ಲಿ ಸಂಸ್ಥೆಯ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದು, ಶೈಕ್ಷಣಿಕ ಉತ್ಕೃಷ್ಟತೆಗೆ ಹೊಸ ಮಾನದಂಡಗಳನ್ನು ರೂಪಿಸುವುದು ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಭೆಯನ್ನು ಪೋಷಿಸುವುದು ನಮ್ಮ ಗುರಿ” ಎಂದು ಅವರು ಅಭಿಪ್ರಾಯಪಟ್ಟರು.
ಸೈದ್ಧಾಂತಿಕ ಜ್ಞಾನ ಮತ್ತು ಪ್ರಾಯೋಗಿಕ ಅನ್ವಯಗಳ ನಡುವಿನ ಕಂದಕವನ್ನು ಕಡಿಮೆ ಮಾಡಲು ಪಾರ್ಸೆಕ್ನಂತಹ ಸಂಸ್ಥೆಗಳೊಂದಿಗಿನ ಸಹಭಾಗಿತ್ವ ಅತ್ಯಂತ ನಿರ್ಣಾಯಕ ಎಂದು ಅವರು ಒತ್ತಿ ಹೇಳಿದರು.
ಬೆಂಗಳೂರಿನ ಈ ಕೇಂದ್ರವು ಪೇಸ್ ಸಂಸ್ಥೆಯ ಸುಸ್ಥಾಪಿತ ಪರಂಪರೆಯನ್ನು ಮುಂದುವರಿಸುವುದರೊಂದಿಗೆ, ಬದಲಾಗುತ್ತಿರುವ ಇಂದಿನ ಶೈಕ್ಷಣಿಕ ವ್ಯವಸ್ಥೆಗೆ ಹೊಂದುವ ವಿದ್ಯಾರ್ಥಿ-ಕೇಂದ್ರಿತ ಹಾಗೂ ಸಹಯೋಗಾತ್ಮಕ ಕಲಿಕಾ ಪದ್ಧತಿಯನ್ನು ಒದಗಿಸಲಿದೆ.





