ರಾಜಸ್ಥಾನದ ಕಲೆಯನ್ನು ಆಕಾಶದೆತ್ತರಕ್ಕೆ ಕೊಂಡೊಯ್ದರು

ಗ್ರಾಸ್‌ ರೂಟ್‌ ಚೇಂಜ್‌ ಮೇಕರ್‌ ಐಕಾನ್‌ ಅವಾರ್ಡ್‌

ಗೃಹಶೋಭಾ ಅವಾರ್ಡ್ಸ್ ಫಂಕ್ಷನ್‌ ನಲ್ಲಿ ಯಾರು ಅತಿ ಹೆಚ್ಚಿನ ಕರತಾಡನ ಪಡೆದವರು ಹಾಗೂ ಅತಿ ಹೆಚ್ಚಿನ ಹೊಗಳಿಕೆ ಗಳಿಸಿದವರು ಎಂದರೆ, ಮರಳುಗಾಡಿನ ನಗರಿ ಬಾಡ್‌ ಮೇರ್‌ ನಲ್ಲಿ ಹುಟ್ಟಿ ಬೆಳೆದ ರೂಮಾ ದೇವಿ. ಈಕೆ ತಮ್ಮ ಸತತ ಪ್ರಯಾಸಗಳಿಂದ, ಕೆಲಸಗಳಿಂದ ಕೇವಲ ತಮ್ಮ ಜೀವನವನ್ನು ಉತ್ಕೃಷ್ಟಗೊಳಿಸಿಕೊಂಡದ್ದು ಮಾತ್ರವಲ್ಲದೆ, ಇವರಂತೆಯೇ ಹಳ್ಳಿಗಾಡಿನಿಂದ ಬಂದ ಸಾವಿರಾರು ಹೆಂಗಸರ ಆರ್ಥಿಕ ಸ್ಥಿತಿ ಉನ್ನತಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈಕೆಯ ಉತ್ಕೃಷ್ಟ ಕೆಲಸ ಕಾರ್ಯಗಳನ್ನು ಇಡೀ ದೇಶವೇ ಹಲವು ವರ್ಷಗಳಿಂದ ನಿಬ್ಬೆರಗಾಗಿ ನೋಡುತ್ತಿದೆ. ಇವರ ಕೆಲಸ, ಕಲೆ, ಸಾಮರ್ಥ್ಯ ಅತಿ ಪ್ರಶಂಸನೀಯ. ಇವರು 40 ಸಾವಿರಕ್ಕೂ ಹೆಚ್ಚಿನ ಹೆಂಗಸರನ್ನು ಹಳ್ಳಿಗಾಡಿನಲ್ಲೂ ತಮ್ಮದೇ ಆದ ಆದಾಯ ಗಳಿಸಲು ನೆರವಾಗಿದ್ದಾರೆ.

ಈಕೆ 5 ವರ್ಷದವಳಿದ್ದಾಗಲೇ ತಾಯಿಯನ್ನು ಕಳೆದುಕೊಂಡರು. ನಂತರ ಮಲತಾಯಿ ಮನೆಗೆ ಬಂದಳು. ತಾಯಿ ವಾತ್ಸಲ್ಯದಿಂದ ವಂಚಿತ ರೂಮಾ, ಅಕ್ಕನ ಮನೆಗೆ ಹೋಗಿ ಅವರ ಬಳಿ ಹೊಲಿಗೆ, ಹೆಣಿಗೆ ಕಲಿತರು. ನಂತರ ನಿಧಾನವಾಗಿ ಅಕ್ಷರಾಭ್ಯಾಸ ಶುರು ಮಾಡಿದರು. ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದ ಕಾರಣ, 8ನೇ ಕ್ಲಾಸ್‌ ನಂತರ ಕಲಿಕೆ ನಿಲ್ಲಿಸಬೇಕಾಯಿತು. ನಂತರ ಅತಿ ಬೇಗ ಅವರ ಮದುವೆ ನಡೆದು ಹೋಯಿತು.

ಕೆಲಸ ಮಾಡಲೇಬೇಕೆಂಬ ನಿಷ್ಠೆ

2008ರಲ್ಲಿ ರೂಮಾ ತಮ್ಮ ಮೊದಲ ಮಗುವಿಗೆ ಜನ್ಮವಿತ್ತರು. ಇದರಿಂದ ಸಹಜವಾಗಿಯೇ ಅತಿ ಸಂಭ್ರಮಿಸಿದರು. ಇದ್ದಕ್ಕಿದ್ದಂತೆ ಪುಟ್ಟ ಮಗುವಿಗೆ ತೀವ್ರ ಅನಾರೋಗ್ಯ ಕಾಡಿತು. ಹಣದ ಕೊರತೆಯಿಂದಾಗಿ ವೈದ್ಯರ ಬಳಿ ಹೋಗಲು ಆಗಲೇ ಇಲ್ಲ. 23 ದಿನಗಳಲ್ಲಿ ಮಗು ತೀರಿಹೋಯ್ತು. ಆಕೆಗೆ ಈ ದುಃಖದಿಂದ ಹೊರಬರಲು ಆಗಲೇ ಇಲ್ಲ. ಆಗ ಹೊರಗೆ ಹೋಗಿ ದುಡಿಯುವ ನಿರ್ಧಾರಕ್ಕೆ ಬಂದರು. ಮುಂದೆ ಹಣದ ಕೊರತೆಯಿಂದ ಯಾವುದೇ ಹಾನಿ ಬೇಕಿರಲಿಲ್ಲ.

ರೂಮಾ ಸುಮಾರು ಹೆಂಗಸರಿಂದ 100-100 ರೂ. ಪಡೆದು ಒಂದು ಸೆಕೆಂಡ್‌ ಹ್ಯಾಂಡ್‌ ಹೊಲಿಗೆಯಂತ್ರ ಕೊಂಡರು. ಇದರಿಂದ ಸಣ್ಣಪುಟ್ಟ ಡ್ರೆಸ್‌ ಸಿದ್ಧಪಡಿಸಿದರು. ಸಣ್ಣ ಬ್ಯಾಗ್‌, ಕುರ್ತಿ, ರಾಜಸ್ಥಾನಿ ಲೆಹೆಂಗಾ…. ಇವೆಲ್ಲದರ ಮೇಲೆ ಕಸೂತಿಯ ಕಲೆ! ಅತಿ ಸುಂದರವಾದ ಈ ಸಾಮಗ್ರಿ ಮಾರುವುದು ಹೇಗೆ ಎಂಬುದೇ ದೊಡ್ಡ ಸಮಸ್ಯೆಯಾಯಿತು.

ತಾವಾಗಿ ಪೇಟೆ ಬೀದಿಯ ಅಂಗಡಿಗಳಿಗೆ ಹೋಗಿ, ಮಾರಾಟಕ್ಕಾಗಿ ಅವರ ಮನವೊಲಿಸಿದರು. ಹೀಗೆ ನಿಧಾನವಾಗಿ ಇವರ ಸಾಮಗ್ರಿ ವ್ಯಾಪಾರ ಕುದುರಿತು. ಕ್ರಮೇಣ ಇವರ ಕೆಲಸ ಹೆಚ್ಚತೊಡಗಿತು. ಇದರ ಸಲುವಾಗಿ ಈಕೆ 2009ರಲ್ಲಿ ಗ್ರಾಮೀಣ ವಿಕಾಸ  ಚೇತನಾ ಸಂಸ್ಥೆ ತಲುಪಿದರು. ಮುಂದೆ ಎಂದೂ ಹಿಂದುರಿಗಿ ನೋಡದ ಈಕೆ , ತಮ್ಮ ಪರಿಚಿತ ಎಲ್ಲಾ ಹೆಂಗಸರನ್ನೂ ಈ ಕೆಲಸಕ್ಕೆ ಸೇರಿಸಿಕೊಂಡು ಅವರ ಆದಾಯಕ್ಕೆ ದಾರಿ ಮಾಡಿಕೊಟ್ಟರು.

ಕನಸು ನನಸು

ಹೀಗೆ ಹಲವು ವರ್ಷ ಕಳೆಯಲು, ಇವರ ಶ್ರದ್ಧೆ, ಲೀಡರ್‌ ಶಿಪ್‌ ಕ್ವಾಲಿಟಿ ನೋಡಿ, ಆ ಗ್ರಾಮೀಣ ಸಂಸ್ಥೆ ಇವರನ್ನೇ ತನ್ನ ಪ್ರೆಸಿಡೆಂಟ್ ಮಾಡಿಕೊಂಡಿತು! ಹೀಗೆ ಇವರ ಯೋಜನೆಗಳು ವಿಸ್ತಾರಗೊಂಡವು. ಇವರ ಕೆಲಸದಲ್ಲಿನ ರಾಜಸ್ಥಾನಿ ಮಣ್ಣಿನ ಸುವಾಸನೆ, ವಿದೇಶೀ ಮಾರುಕಟ್ಟೆ  ಒದಗಿಸಿಕೊಡುವಲ್ಲಿ ಯಶಸ್ವಿಯಾಯಿತು. ಮುಂದಿನ ಇವರ ಪ್ರಾಡಕ್ಟ್ಸ್ ವಿದೇಶ ತಲುಪಿತು. ಹೀಗೆ ಇವರ ಕನಸು ನನಸಾಗ ತೊಡಗಿತು. ಇವರು ರಾಜಸ್ಥಾನದ ಸಾಂಪ್ರದಾಯಿಕ ಹೊಲಿಗೆ ಹೆಣಿಗೆಯನ್ನು ದೊಡ್ಡ ಪ್ರಮಾಣದಲ್ಲಿ ಮುಂದೆ ತಂದರು. ತಮ್ಮ ನೈಪುಣ್ಯದಿಂದ ವಿದೇಶಗಳಲ್ಲಿ ಈ ಕುರಿತು ಶೋ ನಡೆಸುವಂತಾದರು. ಹೀಗೆ ಇವರ ಕನಸು ವಿದೇಶಗಳಿಗೂ ಗರಿಗೆದರಿತು.

2018ರಲ್ಲಿ ರೂಮಾಗೆ `ನಾರೀ ಶಕ್ತಿ’ ಪ್ರಶಸ್ತಿ ದೊರಕಿತು. 2025ರ ಗೃಹಶೋಭಾ ಇನ್‌ ಸ್ಪೈರ್‌ ಅವಾರ್ಡ್ಸ್ಗಾಗಿ ಜ್ಯೂರಿ ತಂಡ ಇವರ ಹೆಸರನ್ನು ಅಂಗೀಕರಿಸಿತು. ಇದರಿಂದ ಇವರ ಸಂಸ್ಕೃತ ಮೇರೆ ಮೀರಿತು.

ಇವರ ಪ್ರಕಾರ, ಯಾರ ಜೀವನದಲ್ಲಿ ಕಷ್ಟ ಇಲ್ಲ ಹೇಳಿ? ಆದರೆ ಎಲ್ಲಕ್ಕೂ ಮುಖ್ಯ ಜೀವನದ ಕುರಿತಾಗಿ ಸಕಾರಾತ್ಮಕ ಧೋರಣೆ ಬೇಕೇ ಬೇಕು. ತಮ್ಮ ಪ್ರತಿಭೆಯನ್ನೇ ತಮ್ಮ ಐಡೆಂಟಿಟಿ ಮಾಡಿಕೊಂಡು ಸ್ವಾವಲಂಬಿ ಆಗಿ ಗುರಿ ಸಾಧಿಸಬೇಕು. ಇಂದಿನ ಹೆಣ್ಣುಮಕ್ಕಳಿಗೆ ಇವರ ಸಂದೇಶ, ನಿಮ್ಮ ನಿರ್ಧಾರಕ್ಕೆ ನೀವು ಬದ್ಧರಾಗಿ, ನಿಮ್ಮ ಕನಸನ್ನು ನನಸಾಗಿಸಿ! ಇವರ ಈ ಮಾತುಗಳು ಅದೆಷ್ಟು ಸತ್ಯ ಅಲ್ಲವೇ?

– ನಸೀಂ ಅನ್ಸಾರಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ