ಏಕಾಂಗಿತನವನ್ನು ಹೊರೆ ಎಂದು ಭಾವಿಸುವವರು ಈ ಲೇಖನದಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳ ಜೀವನಶೈಲಿ ಅರಿತರೆ ಅವರ ಯೋಚನೆಯ ಶೈಲಿಯೇ ಬದಲಾಗಿಬಿಡಬಹುದು……..
ಇಂದಿನ ದಿನಗಳಲ್ಲಿ ಬಹಳಷ್ಟು ಜನರು ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಅಂಥವರಲ್ಲಿ ನೀವು ಒಬ್ಬರಾಗಿದ್ದರೆ, ಏಕಾಂಗಿಯಾಗಿ ವಾಸಿಸುವುದು ನಿಮಗೆ ಅತ್ಯಂತ ಕಷ್ಟಕರ ಸಂಗತಿ ಎನಿಸುತ್ತದೆಯೇ? ನೀವು ನಿಮ್ಮ ಏಕಾಂಗಿತನದ ಸಮಯವನ್ನು ಎಂಜಾಯ್ ಮಾಡುವ ಬದಲು ರಿಲ್ಯಾಕ್ಸ್ ಮಾಡುವ ಬದಲು ಅತ್ತಿತ್ತ ಎಡತಾಕುತ್ತಾ ಏನು ಮಾಡಬೇಕೆಂದು ಯೋಚನೆ ಮಾಡುವುದರಲ್ಲಿ ಕಳೆಯುತ್ತಿದ್ದೀರಾ?
ನೀವು ಅದೇ ರೀತಿ ಮಾಡುವವರಾಗಿದ್ದರೆ, ಈ ಕೆಳಕಂಡ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಿ :
65 ವರ್ಷದ ಶ್ಯಾಮಲಾ ಏಕಾಂಗಿಯಾಗಿ ವಾಸಿಸುತ್ತಾರೆ. ಅವರ ಪತಿ ನಿಧನರಾಗಿದ್ದಾರೆ, ಮಗಳು ತನ್ನ ಗಂಡನ ಜೊತೆ ಆಸ್ಟ್ರೇಲಿಯಾದಲ್ಲಿದ್ದಾಳೆ. ಶ್ಯಾಮಲಾ ಎಲ್ಲರಿಗೂ ಪ್ರೇರಣದಾಯಿ ಆಗಿದ್ದಾರೆ. ಅವರು ಯಾರೊಬ್ಬರ ಮೇಲೂ ಆಶ್ರಿತರಾಗಿದ್ದುದನ್ನು ನಾನು ಕಂಡಿಲ್ಲ. ಅವರು ತಮ್ಮ ಏಕಾಂಗಿತನವನ್ನು ಅತ್ಯಂತ ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾರೆ. ಅವರಿಗೆ ಏನಾದರೂ ಅನಾರೋಗ್ಯದ ಸಮಸ್ಯೆಯಾದರೆ ಅವರು ತಾವೇ ವೈದ್ಯರ ಬಳಿ ತೋರಿಸಿಕೊಳ್ಳುತ್ತಾರೆ. ತನ್ನ ಜೊತೆ ಯಾರಾದರೂ ಬರಬೇಕು ಎಂದು ಅವರು ಅಪೇಕ್ಷೆ ಪಡುವುದಿಲ್ಲ. ಮನೆಗೆಲಸದವಳು ಅಗತ್ಯ ಕೆಲಸಗಳನ್ನು ಮಾಡಿ ಹೋದರೆ ಸಾಕು, ಉಳಿದ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ.
ತಿಂಗಳಿಗೆ ಒಂದು ಸಲ ತಮ್ಮ ಅಕ್ಕ ತಂಗಿಯರ ಮನೆಗೆ ಹೋಗುತ್ತಾರೆ. ಹೋಗುವಾಗ ತಾವೇ ಕ್ಯಾಬ್ ಬುಕ್ ಮಾಡುತ್ತಾರೆ. ಅದನ್ನು ಬಿಟ್ಟರೆ ಅವರು ಪ್ರತಿದಿನ ಸಂಜೆ ಹೊರಗೆ ವಾಕಿಂಗ್ ಹೋಗುತ್ತಾರೆ. ಅಲ್ಲಿ ಸಮಾನ ಮನಸ್ಕರ ಜೊತೆ ಕುಳಿತು ವಿಚಾರ ವಿನಿಮಯ ಮಾಡುತ್ತಾರೆ. ಹರಟೆ ಹೊಡೆಯುತ್ತಾರೆ. ತಮ್ಮ ಸೊಸೆಯಂದಿರು, ಕುಟುಂಬದವರನ್ನು ದ್ವೇಷಿಸುವ ಮಹಿಳೆಯವರನ್ನೆಂದೂ ಅವರು ತಮ್ಮ ಹತ್ತಿರ ಸುಳಿಯಲು ಕೊಡುವುದಿಲ್ಲ.
ಅವರಿಗೆ ಏಕಾಂಗಿತನ ಕಾಡುವುದಿಲ್ಲ ಎಂದಲ್ಲ, ಆದರೆ ಅವರು ಅದನ್ನು ಸ್ವೀಕರಿಸಿಬಿಟ್ಟಿದ್ದಾರೆ. ಜೊತೆಗೆ ಅದನ್ನು ಎಂಜಾಯ್ ಕೂಡ ಮಾಡುತ್ತಾರೆ. ತಮ್ಮ ಗ್ರೂಪ್ ನಲ್ಲಿ ಯಾರಿಗಾದರೂ ಪಾರ್ಟಿ ಮಾಡಬೇಕಿದ್ದರೆ ಅವರು ಅದನ್ನು ತಮ್ಮ ಮನೆಗಳಲ್ಲಿ ಮಾಡಲು ಆಗದಿದ್ದರೆ, ಆಂಟಿ ತಮ್ಮ ಮನೆಯಲ್ಲಿಯೇ ಪಾರ್ಟಿ ಮಾಡಲು ಅವಕಾಶ ಕೊಡುತ್ತಾರೆ. ಈ ಬಗ್ಗೆ ಆಂಟಿ ನಗುತ್ತಲೇ, “ನಮ್ಮ ಮನೆಯಲ್ಲಿ ಪಾರ್ಟಿ ಮಾಡಿಕೊಳ್ಳಿ. ಆ ಪ್ರಯುಕ್ತ ನಮ್ಮ ಮನೆಯ ಕ್ರಾಕರಿ ಆದರೂ ಹೊರಗೆ ಬರುತ್ತವೆ,” ಈ ರೀತಿ ಪಾರ್ಟಿ ಅವರ ಮನೆಯಲ್ಲಿ ಯಶಸ್ವಿಯಾಗಿ ಆಯೋಜಿಸಲ್ಪಡುತ್ತವೆ.
ಜೀವನದಲ್ಲಿ ಯಾರಾದರೂ ಏಕಾಂಗಿಯಾಗಿ ವಾಸಿಸಬೇಕಾಗಿ ಬಂದರೆ ಅದಕ್ಕೆ ಶ್ಯಾಮಲಾ ಆಂಟಿಯ ಪ್ರೇರಣೆ ಪಡೆಯುತ್ತಾರೆ.
ನಿರ್ಮಲಾರ ಮಗಸೊಸೆ ವಿದೇಶದಿಂದ ಮೈಸೂರಿಗೆ ಬಂದುಬಿಟ್ಟರೆ ಅವರ ಮನಸ್ಸು ಖುಷಿಯಿಂದ ಕುಣಿದು ಬಿಡುತ್ತದೆ. ಅವರು ತಮ್ಮ ಪತಿ ಜೊತೆ ಸೇರಿ ಹಲವು ಯೋಜನೆಗಳನ್ನು ಹಾಕುತ್ತಾರೆ. ಅವರಿಗೆ ಇಷ್ಟವಾಗುವಂತಹ ಅದೆಷ್ಟೋ ತಿಂಡಿಗಳನ್ನು ಮಾಡಿ ಇಡುತ್ತಾರೆ. ಅವರು ಮನೆಗೆ ಬಂದಾಗ ಮನಸ್ಸು ಖುಷಿಯಿಂದ ಕುಣಿಯುತ್ತದೆ. ಆದರೆ ಅವರು ಹೊರಟು ಹೋದ ಬಳಿಕ ಏಕಾಂಗಿತನದ ಖಿನ್ನತೆ ಹಲವು ದಿನಗಳ ಕಾಲ ಅವರನ್ನು ಆವರಿಸಿಕೊಂಡಿರುತ್ತದೆ. ಆದರೆ ಕ್ರಮೇಣ ಮಗಸೊಸೆಯ ಬದಲಾಗುತ್ತಿರುವ ಲೈಫ್ ಸ್ಟೈಲ್ ಅವರ ಯೋಚನೆಯ ರೀತಿನೀತಿಯನ್ನೇ ಬದಲಿಸಿಬಿಟ್ಟಿತು.
ಈ ಕುರಿತಂತೆ ಅವರು ತಮ್ಮ ಅನುಭವವನ್ನು ಹೀಗೆ ಹಂಚಿಕೊಳ್ಳುತ್ತಾರೆ, “ನಾವು ಮಕ್ಕಳ ಬಗ್ಗೆ ದೂರು ಹೇಳುತ್ತಿಲ್ಲ. ಅವರ ಲೈಫ್ ಸ್ಟೈಲ್ ಬೇರೆ, ನಮ್ಮದು ಬೇರೆ. ಅವರು ಏಳುವುದೇ ಬೆಳಗ್ಗೆ 10ಕ್ಕೆ. ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಮರಳಲು 12 ದಾಟಿರುತ್ತದೆ. ನಮ್ಮ ಹತ್ತಿರ ಕುಳಿತುಕೊಳ್ಳಲು ಅವರಿಗೆ ಹೆಚ್ಚು ಸಮಯ ಸಿಗುವುದೇ ಇಲ್ಲ. ಮನೆಯ ಕೆಲಸ ಕಾರ್ಯಗಳಲ್ಲಿ ನನ್ನ ದೈನಂದಿನ ಜೀವನಶೈಲಿ ಅಸ್ತವ್ಯಸ್ತ ಆಗುತ್ತದೆ. ರಾತ್ರಿಯ ನಿದ್ದೆಗೂ ಡಿಸ್ಟರ್ಬ್ ಆಗುತ್ತದೆ. ಸೊಸೆ ಅಡುಗೆ ಮನೆಯ ಕಡೆ ಇಣುಕಿ ಕೂಡ ನೋಡುವುದಿಲ್ಲ. ನನ್ನ ಇಡೀ ದಿನ ಅಡುಗೆಮನೆಯಲ್ಲಿಯೇ ಕಳೆಯುತ್ತದೆ. ಅವರು ಹೊರಟು ಹೋದ ಬಳಿಕ ನಾನು ನೆಮ್ಮದಿಯ ನಿಟ್ಟುಸಿರು ಬಿಡುತ್ತೇನೆ. ಈಗ ನನಗೆ ಏಕಾಂಗಿತನದಲ್ಲಿಯೇ ಶಾಂತಿ ಎನಿಸುತ್ತದೆ. ಜೊತೆ ಜೊತೆಗಿದ್ದಾಗ ಯಾವುದಾದರೂ ಮಾತಿಗೆ ಮನಸ್ತಾಪ ಉಂಟಾಗುತ್ತದೆ. ಆಗ ನನ್ನ ಮನಸ್ಸಿನ ನೆಮ್ಮದಿ ಕೆಟ್ಟು ಹೋಗುತ್ತದೆ. ಅವರು ಅಲ್ಲಿಯೇ ಖುಷಿಯಿಂದಿರಬೇಕು. ನಾವು ಇಲ್ಲಿ ಖುಷಿಯಿಂದಿರುತ್ತೇವೆ. ಮಕ್ಕಳಿರದೇ ಇದ್ದರೂ ಏಕಾಂಗಿತನ ಕಾಡುವುದಿಲ್ಲ. ನಾವು ಏಕಾಂಗಿತನವನ್ನು ಎಂಜಾಯ್ ಮಾಡುತ್ತೇವೆ,” ಎನ್ನುತ್ತಾರೆ.

70 ವರ್ಷದ ಸುಧಾ ನಿವೃತ್ತ ಶಿಕ್ಷಕಿ. ಅವರ ಮಗ, ಮಗಳು ಅದೇ ನಗರದಲ್ಲಿ ತಮ್ಮ ತಮ್ಮ ಕುಟುಂಬಗಳೊಂದಿಗೆ ವಾಸಿಸುತ್ತಿದ್ದಾರೆ. ಗಂಡನ ನಿಧನದ ಬಳಿಕ ಸುಧಾ ಏಕಾಂಗಿಯಾಗಿಯೇ ವಾಸಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಅವರು ಬೇರೆಯವರಿಗೆ ಅವಲಂಬಿತರಾಗಿ ಬದುಕುವುದು ಇಷ್ಟವಾಗುವುದಿಲ್ಲ.
ಈ ಕುರಿತಂತೆ ಅವರು, “ನನಗೆ ಏಕಾಂಗಿಯಾಗಿ ವಾಸಿಸುವುದು ರೂಢಿ ಆಗಿಬಿಟ್ಟಿದೆ. ಮಗನ ಜೊತೆಗಿದ್ದು ಮನಸ್ತಾಪ ಮಾಡಿಕೊಳ್ಳುವುದು ನನಗಿಷ್ಟವಿಲ್ಲ. ಎಲ್ಲರಿಗೂ ಪ್ರೈವೆಸಿ ಬೇಕು, ನನಗೂ ಕೂಡ. ಯಾವುದೇ ಅವಶ್ಯಕತೆ ಉಂಟಾದರೂ ಒಂದು ಫೋನ್ ಮಾಡಿದರೂ ಸಾಕು, ಯಾರಾದರೂ ಬರುತ್ತಾರೆ. ಸುತ್ತಾಡಲು ಹೋಗಬೇಕೆನಿಸಿದರೆ ಹೋಗುತ್ತೇವೆ. ಏಕಾಂಗಿತನ ನನಗೆ ಸಮಸ್ಯೆಯೇ ಅಲ್ಲ, ಲೈಫ್ ಎಂಜಾಯ್ ಮಾಡುವುದು ಗೊತ್ತಿರಬೇಕು,” ಎಂದು ಹೇಳುತ್ತಾರೆ.
26 ವರ್ಷದ ಸಂಜಯ್ ವಿದೇಶದಲ್ಲಿ ಓದುತ್ತಿದ್ದಾನೆ. ಭಾರತಕ್ಕೆ ಬಂದಾಗ ಅವನ ಲೈಫ್ ಸ್ಟೈಲ್ ಬಗ್ಗೆ ಕೇಳಿದಾಗ ಅವನು, “ಆರಂಭದಲ್ಲಿ ಬಹಳ ಬೇಜಾರಾಗುತ್ತಿತ್ತು. ಏಕಾಂಗಿತನ ಕಾಡುತ್ತಿತ್ತು. ಸ್ನೇಹಿತರು ಯಾರೂ ಇರಲಿಲ್ಲ. ಈಗ ಎಲ್ಲ ಕೆಲಸವನ್ನು ನಾನೇ ಮಾಡಿಕೊಳ್ಳುತ್ತಾ ಏಕಾಂಗಿತನ ನನಗೆ ಅಭ್ಯಾಸ ಆಗಿಬಿಟ್ಟಿದೆ. ಅದನ್ನೀಗ ನಾನು ಎಂಜಾಯ್ ಮಾಡುತ್ತೇನೆ. ಯಾರ ಜೊತೆಗಾದರೂ ಇರಬೇಕೆಂದರೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ,” ಎಂದು ಹೇಳುತ್ತಾನೆ.
42 ವರ್ಷದ ದೀಪಾಗೆ ಏಕಾಂಗಿಯಾಗಿ ಇರಬೇಕೆನ್ನುವ ಕಲ್ಪನೆಯೇ ಅವಳಲ್ಲಿ ಉಲ್ಲಾಸ ತುಂಬುತ್ತದೆ. ಈ ಬಗ್ಗೆ ಅವರು, “ಯಾವಾಗಲಾದರೂ ಒಮ್ಮೆ ಏಕಾಂಗಿಯಾಗಿರಬೇಕು ಎಂದು ಕನಸು ಕಾಣುತ್ತಿದ್ದೆ. ಗಂಡ ಟೂರ್ ಹೋದಾಗ ನನಗೆ ಖುಷಿಯಾಗುತ್ತದೆ. ಆಗ ನನ್ನ ರುಟೀನ್ ಚೇಂಜ್ ಆಗುತ್ತದೆ. ನನ್ನದೇ ಆದ ಹವ್ಯಾಸದಲ್ಲಿ ಮುಳುಗಲು ನನಗೆ ಆ ಸಮಯ ಉಪಯೋಗವಾಗುತ್ತದೆ,” ಎನ್ನುತ್ತಾರೆ.
24 ವರ್ಷದ ವೀಣಾ ಟ್ರೇನಿಂಗ್ ಗಾಗಿ ಹೈದರಾಬಾದ್ ಗೆ ಹೋದಾಗ ಕುಟುಂಬದವರು ಬಹಳ ಗಲಿಬಿಲಿಗೊಂಡರು. ಏಕೆಂದರೆ ಆಕೆ ಕುಟುಂಬದವರನ್ನು ಬಿಟ್ಟು ಒಂದು ದಿನ ಇದ್ದವಳಲ್ಲ. ಈಗ ಇನ್ನೂ ಇಬ್ಬರ ಜೊತೆ ರೂಮ್ ಶೇರ್ ಮಾಡಿಕೊಂಡು ಹಾಯಾಗಿ ಇದ್ದಾಳೆ. ಆಕೆ ವಾಪಸ್ ಬಂದ ಬಳಿಕ ಅದರ ಬಗ್ಗೆ ಹೀಗೆ ಹೇಳುತ್ತಾಳೆ, “ಪರಿಸ್ಥಿತಿಗೆ ತಕ್ಕಂತೆ ನಾನು ಅಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು. ಈಗ ಇಲ್ಲಿಯೂ ಅಮ್ಮಅಪ್ಪ ಹೊರಗೆ ಹೋದರೂ ನನಗೇನೂ ಬೇಜಾರಾಗುವುದಿಲ್ಲ.”
45 ವರ್ಷದ ದೀಪಾಗೆ ಬದಲಾವಣೆಯ ಅಭ್ಯಾಸವಿದೆ. ಅವರಿಗೆ ಹಿಂದೆ ರಾತ್ರಿ ಹೊತ್ತು ಎಂದೂ ಏಕಾಂಗಿಯಾಗಿ ವಾಸಿಸುವ ಅಭ್ಯಾಸವೇ ಇರಲಿಲ್ಲ. ಗಂಡ ಟೂರ್ ಗೆ ಹೋದಾಗ ಮಕ್ಕಳು ಜೊತೆಗೆ ಇರುತ್ತಿದ್ದರು. ಅದೊಂದು ಸಲ ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದರು. ರಾತ್ರಿಯಿಡೀ ಮಳೆ ಸುರಿದಿದ್ದರಿಂದ ಅವರು ವಾಪಸ್ ಬರಲಾಗಲಿಲ್ಲ. ಗಂಡ ಬೇರೆ ಮನೆಯಲ್ಲಿರಲಿಲ್ಲ. ಇಂತಹ ಸ್ಥಿತಿಯಲ್ಲಿ ತಾನೊಬ್ಬಳೇ ಹೇಗೆ ಇರುವುದೆಂದು ಆಕೆಗೆ ಭಯ ಆಗಿಬಿಟ್ಟಿತ್ತು. ಆದರೆ ನನ್ನ ಲೇಖನ ಹವ್ಯಾಸಕ್ಕೊಂದು ರೂಪ ಕೊಡಲು ನನಗೆ ಒಳ್ಳೆಯ ಸದವಕಾಶ ದೊರಕಿತು ಎಂದು ಭಾವಿಸಿದೆ. ನನ್ನಲ್ಲಿರುವ ಕಥೆಗಾರ್ತಿ ಹೊರಬಂದಿದ್ದೇ ಆ ದಿನದಂದು. ಆ ಬಳಿಕ ನಾನು ಸಮಯ ಸಿಕ್ಕಾಗೆಲ್ಲ ಬರೆಯುತ್ತ ಹೋದೆ, ಎನ್ನುತ್ತಾರೆ.
ಏಕಾಂಗಿತನ ಜನರು ಅಂದುಕೊಂಡಷ್ಟು ಸಮಸ್ಯೆ ಏನಲ್ಲ. ಏಕಾಂಗಿತನ ಸಾಮಾನ್ಯವಾಗಿ ನೆಗೆಟಿವ್ ವಿಚಾರಗಳನ್ನು ತುಂಬುತ್ತದೆ. ಹೀಗಾಗಿ ಜನರು ಏಕಾಂಗಿಯಾಗಿರಲು ಹೆದರುತ್ತಾರೆ. ನಿಮಗೆ ಏಕಾಂಗಿತನ ಹೊರೆಯಾಗದಿರಲು ಈ ಟಿಪ್ಸ್ ಗಮನಿಸಿ :
ಏಕಾಂಗಿಯಾಗಿದ್ದಾಗ ಮಾಡಲು ಏನಾದರೂ ರೋಚಕ ಆ್ಯಕ್ಟಿವಿಟಿಯನ್ನು ಹುಡುಕಿ. ಕೇವಲ ಟಿ.ವಿ ನೋಡುವುದೊಂದೇ ಕೆಲಸವಾಗಬಾರದು.
ಫೋನ್, ಟ್ಯಾಬ್, ಲ್ಯಾಪ್ ನ್ನು ಬಂದ್ ಮಾಡಿ ನಿಮ್ಮೊಂದಿಗೆ ನೀವು ಜೋಡಿಸಿಕೊಳ್ಳಿ. ಆಗ ನಿಮಗೆ, ಯಾವ ಅವಶ್ಯಕತೆಯೂ ಇಲ್ಲ ಎಂದು ಅನಿಸುತ್ತದೆ. ನೀವು ಏಕಾಂಗಿಯಾಗಿಯೇ ಸಹ ಎಂಜಾಯ್ ಮಾಡಬಹುದು.
ನಿಮ್ಮನ್ನು ನೀವು ಜೋಡಿಸಿಕೊಳ್ಳಲು, ನಿಮ್ಮನ್ನು ನೀವು ಅರಿತುಕೊಳ್ಳಲು ಇದು ಅತ್ಯಂತ ಒಳ್ಳೆಯ ಸಮಯ. ಅದು ನಿಮ್ಮದೇ ಸಮಯವಾಗಿರುತ್ತದೆ. ಹೀಗಾಗಿ ಅದನ್ನು ನೀವು ಹೇಗಾದರೂ ಬಳಸಿಕೊಳ್ಳಬಹುದು.
ಇದರರ್ಥ ನೀವು ಸದಾ ಮನೆಯಲ್ಲಿಯೇ ಇರಬೇಕೆಂದು ಅಲ್ಲ, ನೀವು ಹೊರಗೆ ಹೋಗಿ ಪರಿಚಿತರ ಜೊತೆ ಸಮಾಲೋಚಿಸಿ, ಕಾಫಿ ಕುಡಿಯಿರಿ, ಪಾರ್ಕ್ ನಲ್ಲಿ ಕುಳಿತು ಏನಾದರೂ ಓದಿ.
ಏಕಾಂಗಿಯಾಗಿ ಇರುವುದರ ಅರ್ಥ ನಿಮ್ಮ ಮೇಲೆ ಫೋಕಸ್ ಮಾಡಬಹುದು. ಬಹಳ ದಿನಗಳಿಂದ ನಿಮ್ಮ ಮನಸ್ಸಿನಲ್ಲಿದ್ದ ಒಂದು ಹವ್ಯಾಸಕ್ಕೆ ಅಂತಿಮ ರೂಪ ಕೊಡಲು ಸಾಧ್ಯ.
ನಾನು ಏಕಾಂಗಿಯಾಗಿದ್ದೇನೆ. ಹಾಗಾಗಿ ಲೈಫ್ ಎಂಜಾಯ್ ಮಾಡಲು ಆಗುವುದಿಲ್ಲ ಎನ್ನುವ ನೆಪ ಹೇಳಲು ಹೋಗಬೇಡಿ. ಜೀವನದಲ್ಲಿ ಒಳ್ಳೆಯ ಸಂಗತಿಗಳನ್ನು ನೋಡಲು ಕಲಿತುಕೊಳ್ಳಿ ಹಾಗೂ ಆಶಾವಾದಿ ದೃಷ್ಟಿಕೋನ ಹೊಂದಿ.
ಎಷ್ಟೋ ಸಲ ನೀವು ನಿಮ್ಮ ಸಂಗಾತಿಯ ಜೊತೆ, ಫ್ರೆಂಡ್ ಜೊತೆ ಕಳೆದ ಸಮಯವನ್ನು ಅಂದರೆ ಸಿನಿಮಾಕ್ಕೆ, ಡಿನ್ನರ್ ಗೆ ಹೋದದ್ದನ್ನು ನೆನಪಿಸಿಕೊಳ್ಳುತ್ತಿರಿ. ಈಗಲೂ ಅದನ್ನು ಮುಂದುವರಿಸಬಹುದು. ಹೊರಗೆ ಹೋಗಿ ಸಿನಿಮಾ ನೋಡಿ, ನಿಮಗಿಷ್ಟವಾದ ಕಡೆ ಹೋಗಿ ತಿಂಡಿ, ಊಟ ಮಾಡಿ.
ವ್ಯಾಯಾಮಕ್ಕೂ ಅಷ್ಟಿಷ್ಟು ಸಮಯ ಕೊಡಿ. ಹೊಸ ಸ್ನೇಹಿತರನ್ನು ಹೊಂದಲು ಇಷ್ಟಪಡುವಿರಾದರೆ ಜಿಮ್ ಸೇರಿ. ಮನೆಯಲ್ಲಿಯೇ ಅಂಟಿಕೊಂಡು ಕುಳಿತಿರಬೇಡಿ. ನಿಸರ್ಗದ ಆನಂದವನ್ನು ಎಂಜಾಯ್ ಮಾಡಿ.
ಕೆಲವೊಮ್ಮೆ ಚಾರಿಟಿ ವರ್ಕ್ ಕೂಡ ಮಾಡಿ. ಆಸ್ಪತ್ರೆ, ಅನಾಥಾಶ್ರಮದ ಜೊತೆ ಸಂಪರ್ಕ ಹೊಂದಿ.
ಏನಾದರೂ ಬರೆಯಿರಿ. ಬರವಣಿಗೆ ನಿಮ್ಮ ಕಲ್ಪನಾಶಕ್ತಿಯ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ.
ಸಂಗೀತ, ನೃತ್ಯ, ವಾದ್ಯ ನುಡಿಸುವಿಕೆ ಹೀಗೆ ಯಾವುದನ್ನಾದರೂ ಕಲಿಯಬಹುದು.
ಅಕ್ಕಪಕ್ಕದವರು, ಸಂಬಂಧಿಕರ ಜೊತೆ ಸಂಪರ್ಕದಲ್ಲಿರಿ.
– ಪೂರ್ವಿಕಾ





