ಮಿದುಳು ನಿಷ್ಕ್ರಿಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೆಜಿಎಫ್ ನಗರದ ಶ್ವೇತಾ (28) ಕುಟುಂಬದವರು, ಮಗಳನ್ನು ಕಳೆದುಕೊಂಡ ನೋವಿನಲ್ಲೂ ಆಕೆಯ ಲಿವರ್ ಹಾಗೂ ಹೃದಯದ ಕವಾಟುಗಳನ್ನು ದಾನ ಮಾಡುವ ಮೂಲಕ ಇಬ್ಬರ ಜೀವ ಉಳಿಸಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನಳಾದ ಮಗಳನ್ನು ಕಳೆದುಕೊಂಡ ತೀವ್ರ ದುಃಖದಲ್ಲೂ ಪೋಷಕರು ಅಂಗಾಂಗ ದಾನಕ್ಕೆ ಮುಂದೆ ಬಂದಿದ್ದಾರೆ. ಶ್ವೇತಾರ ಲಿವರ್ ಹಾಗೂ ಹೃದಯದ ಕವಾಟುಗಳನ್ನು ದಾನ ಮಾಡಲಾಗಿದ್ದು, ಇಬ್ಬರು ರೋಗಿಗಳ ಬಾಳಿಗೆ ಹೊಸ ಭರವಸೆ ಮೂಡಿದೆ.
ಪೋಷಕರ ಈ ಶ್ಲಾಘನೀಯ ಕಾರ್ಯಕ್ಕೆ ಸಾರ್ವಜನಿಕವಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಪೋಷಕರ ನಿರ್ಧಾರವನ್ನು ಪ್ರಶಂಸಿಸಿದ್ದು, “ಮಗಳನ್ನು ಕಳೆದುಕೊಂಡ ನೋವಿನಲ್ಲೂ ಮತ್ತೊಬ್ಬರ ಬಾಳಿಗೆ ಬೆಳಕಾಗಿದ್ದಾರೆ” ಎಂದು ಗೌರವ ಸಲ್ಲಿಸಿದ್ದಾರೆ.
ಕೋಲಾರ ಜಿಲ್ಲೆಯ ಕೆ.ಜಿ.ಎಫ್ ತಾಲೂಕಿನ ನಿವಾಸಿ, ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶ್ವೇತಾ, ತೀವ್ರ ತಲೆನೋವಿನಿಂದ ಬಳಲುತ್ತಿದ್ದರು, ಚಿಕಿತ್ಸೆಗಾಗಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಅವರಿಗೆ ಬ್ರೈನ್ ಡೆತ್ (ಮೆದುಳು ನಿಷ್ಕ್ರಿಯ) ಆಗಿರುವುದಾಗಿ ವೈದ್ಯರು ಮುಂಜಾನೆ ದೃಢಪಡಿಸಿದರು. ದುಃಖ ಹಾಗೂ ನೋವಿನಲ್ಲೂ ಶ್ವೇತಾ ಅವರ ಕುಟುಂಬದವರು ತೋರಿದ ಮಾನವೀಯತೆ ನಿಜಕ್ಕೂ ಅನುಕರಣೀಯವಾಗಿದೆ. ತಮ್ಮ ಮಗಳ ಅಗಲಿಕೆಯಲ್ಲೂ ಇತರರಿಗೆ ಮರುಜೀವ ನೀಡುವ ಮಹತ್ತರ ಉದ್ದೇಶದಿಂದ ಕುಟುಂಬಸ್ಥರು ಸ್ವಯಂಪ್ರೇರಿತರಾಗಿ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು.
ಶ್ವೇತಾ ಅವರ ಯಕೃತ್ (ಲಿವರ್) ಹಾಗೂ ಹೃದಯದ ಕವಾಟುಗಳನ್ನು ದಾನ ಮಾಡುವ ಮೂಲಕ ಇಬ್ಬರು ರೋಗಿಗಳ ಬಾಳಿನಲ್ಲಿ ಹೊಸ ಬೆಳಕು ಮೂಡಿಸಲಾಗಿದೆ.
ಶ್ವೇತಾ ಅವರು ಇದಕ್ಕೂ ಮೊದಲೇ ತಮ್ಮ ತಾಯಿಯಿಂದ ಒಂದು ಕಿಡ್ನಿಯನ್ನು ದಾನವಾಗಿ ಪಡೆದಿದ್ದರು, ಅಂಗಾಂಗ ದಾನದ ಮಹತ್ವ ಅರಿತಿದ್ದ ಕುಟುಂಬಸ್ಥರು ಶ್ವೇತಾ ಅವರ ಮರಣ ನಂತರ ತಕ್ಷಣವೇ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿರುವುದು ಅಂಗಾಂಗ ದಾನದ ಒಂದು ಜೀವಸಾರ್ಥಕತೆ.





