– ರಾಘವೇಂದ್ರ ಅಡಿಗ ಎಚ್ಚೆನ್.
ಬೈಂದೂರು ಮೂಲದ ಶ್ರೀಷ ಇದೀಗ ‘ತರಂಗಾಂತರಂಗ’ ಚಿತ್ರದ ಮೂಲಕ ನಾಯಕ ನಟನಾಗಿ ಮತ್ತು ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ‘ತರಂಗಾಂತರಂಗ’ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿ ಜೊತೆಗೆ ಈ ಚಿತ್ರಕ್ಕೆ ನಿರ್ದೇಶನವನ್ನೂ ಮಾಡಿದ್ದಾರೆ. ಈ ಚಿತ್ರದ ಮೊದಲ ಟೀಸರ್ ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿತ್ತು. ಇದೀಗ ಚಿತ್ರದ ‘ಟ್ರೈ ಮಾಡಿ …’ ಹಾಡು ಬಿಡುಗಡೆ ಆಗಿದೆ.
ಚಿತ್ರದಲ್ಲಿ ನಾಲ್ಕು ಹಾಡುಗಳು ಇದ್ದು ಅವೆಲ್ಲವೂ ಕೂಡ ಹೇಗೆ ವಿಭಿನ್ನವಾಗಿದೆ ಎಂದು ಚಿತ್ರದ ನಿರ್ದೇಶಕ, ನಟ ಶ್ರೀಶ ವಿವರಿಸಿದರು. ಆಡಿಯೋ ರಿಲೀಸ್ ಪ್ರಯುಕ್ತ ಎರಡು ಹಾಡುಗಳ ಲಿರಿಕಲ್ ವಿಡಿಯೋಗಳನ್ನು ಮಾಧ್ಯಮದ ಮುಂದೆ ಪ್ರದರ್ಶಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಯಶಸ್ವಿನಿ ಕೆ.ಸ್ವಾಮಿ ಮಾತನಾಡಿ, “ಇದು ನನ್ನ ಮೊದಲ ಚಿತ್ರ. ಚಿತ್ರೀಕರಣ ತುಂಬ ಸುಲಲಿತವಾಗಿ ನಡೆಯಿತು. ರಾಕೇಶ್ ಪೂಜಾರಿ ಜತೆ ನಾನು ರಿಯಾಲಿಟಿ ಶೋನಲ್ಲಿ ಮಾಡುತ್ತಿದ್ದಾಗಲೇ ನಾವಿಬ್ಬರೂ ಈ ಸಿನೆಮಾದಲ್ಲಿ ನಟಿಸಿದ್ದೇವೆ. ಹಾಗಾಗಿ ಯಾವತ್ತೂ ಮರೆಯಲು ಸಾಧ್ಯವಾಗದಂಥ ಚಿತ್ರ ಇದು. ಆದರೆ ಈಗ ಪ್ರದರ್ಶಿಸಿದ ಕುಂದಾಪುರದ ಹಾಡು ಮಾತ್ರ ದೇವರಾಣೆ ಅರ್ಥಾಗಿಲ್ಲ” ಎಂದರು.

ಚಿತ್ರದ ಮತ್ತೋರ್ವ ನಾಯಕಿ ಅಶ್ವಿನಿ ಮಾತನಾಡಿ, ‘ತಮ್ಮ ಪಾತ್ರದ ಚಿತ್ರೀಕರಣವು ಮಂಗಳೂರಿನಲ್ಲಿತ್ತು. ಹದಿನೈದು ದಿನಗಳ ಕಾಲ ಶೂಟಿಂಗ್ ನಡೆದಿದ್ದಾಗಿ ಹೇಳಿದರು. ಪ್ರಸ್ತುತ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ಸಿನೆಮಾ ಮತ್ತು ಧಾರಾವಾಹಿಗೆ ಹೋಲಿಸಿದರೆ, ನಿರಂತರ, ನಿಗದಿತ ಸಂಪಾದನೆ ವಿಚಾರದಲ್ಲಿ ಧಾರಾವಾಹಿಯೇ ಉತ್ತಮ” ಎನ್ನುವ ಅನಿಸಿಕೆ ವ್ಯಕ್ತಪಡಿಸಿದರು.
ಊ
ಈ ಚಿತ್ರದಲ್ಲಿ ಚೆರಿಕಾ ಮೂರ್ತಿ ಮತ್ತು ಯಶಸ್ವಿನಿ ಸ್ವಾಮಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟರಾದ ರಮೇಶ್ ಪಂಡಿತ್, ಪ್ರಭಾಕರ ಕುಂದರ್, ಲಿಖಿತಾ ಶೆಟ್ಟಿ, ಮುರಳಿ ಮತ್ತಿತರರು ಇತರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿವಂಗತ ದಿನೇಶ್ ಮಂಗಳೂರು ಮತ್ತು ದಿವಂಗತ ರಾಕೇಶ್ ಪೂಜಾರಿ ಈ ಚಿತ್ರದಲ್ಲಿ ನಟಿಸಿದ್ದಾರೆ.





