“ಸೀಸನ್‌ ಫ್ರೂಟ್ಸ್ ನಿಂದ ತಯಾರಾದ ಈ ಕುಲ್ಛಿ ಹಾಗೂ ಐಸ್‌ ಕ್ರೀಮ್ಸ್, ನಿಮ್ಮ ಭಾನುವಾರದ ಮಜಾ ಹೆಚ್ಚಿಸಲಿ…. ಮಾಡಿ ಸವಿಯಿರಿ!”

ಚಾಕಲೇಟ್‌ ಮ್ಯಾಂಗೋ ಐಸ್‌ ಕ್ರೀಂ

ಸಾಮಗ್ರಿ : 1 ಲೀ. ಕೆನೆಬರಿತ ಗಟ್ಟಿ ಹಾಲು, 1-2 ಮಾಗಿದ ಮಾವಿನ ತಿರುಳು, 1 ಕಪ್‌ ತಾಜಾ ಕ್ರೀಂ, ರುಚಿಗೆ ತಕ್ಕಷ್ಟು ಸಕ್ಕರೆ, ಪಿಸ್ತಾ ಚೂರು, ತುರಿದ ಚಾಕಲೇಟ್‌, ಕಾರ್ನ್‌ ಫ್ಲೋರ್‌.

ವಿಧಾನ : ಮೊದಲು ಹಾಲು ಕಾಯಿಸಿ ಚೆನ್ನಾಗಿ ಆರಲು ಬಿಡಿ. ಮತ್ತೆ ಅದನ್ನು ಒಲೆ ಮೇಲಿರಿಸಿ ಅರ್ಧ ಹಿಂಗುವಂತೆ ಮಂದ ಉರಿಯಲ್ಲಿ ಕುದಿಸಿರಿ. ಈ ಮಧ್ಯೆ ಆರಿದ ತುಸು ಹಾಲಿಗೆ ಕಾರ್ನ್‌ ಫ್ಲೋರ್‌ ಬೆರೆಸಿ ಚೆನ್ನಾಗಿ ಕದಡಿಕೊಳ್ಳಿ. ನಂತರ ಇದನ್ನು ಹಿಂಗಿದ ಹಾಲಿಗೆ ಬೆರೆಸಿ ಚೆನ್ನಾಗಿ ಗೊಟಾಯಿಸಿ. ನಂತರ ಕೆಳಗಿಳಿಸಿ, ಮತ್ತೆ ತಣ್ಣೀರ ಟ್ರೇನಲ್ಲಿರಿಸಿ 100% ತಂಪಾಗಿಸಿ. ನಂತರ ಇದಕ್ಕೆ ಮಾವು, ಇನ್ನಿತರ ಸಾಮಗ್ರಿ ಬೆರೆಸಿ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಈ ಮಿಶ್ರಣವನ್ನು ಐಸ್‌ ಟ್ರೇಗೆ ತುಂಬಿಸಿ ಫ್ರೀಝರ್‌ ನಲ್ಲಿಟ್ಟು ಸೆಟ್ ಮಾಡಿ. ಅರ್ಧ ಸೆಟ್‌ ಆದಾಗ ಹೊರ ತೆಗೆದು, ಬಟ್ಟಲಿಗೆ ಹಾಕಿಕೊಂಡು, ಫ್ರೆಶ್‌ ಕ್ರೀಂ ಬೆರೆಸಿ, ಚೆನ್ನಾಗಿ ಗೊಟಾಯಿಸಿ. ನಂತರ ಮತ್ತೆ ಫ್ರೀಝರ್‌ ನಲ್ಲಿಟ್ಟು ಸೆಟ್‌ ಮಾಡಿ. ಆಮೇಲೆ ಪಿಸ್ತಾ ಉದುರಿಸಿ, ತಣ್ಣಗೆ ಸವಿಯಲು ಕೊಡಿ.

Mango-Bread-Kulfi

ಮ್ಯಾಂಗೋ ಬ್ರೆಡ್‌ ಕುಲ್ಛಿ

ಸಾಮಗ್ರಿ : 2 ಕಪ್‌ ಮಾಗಿದ ಮಾವಿನ ತಿರುಳು, 2-3 ಬ್ರೆಡ್‌ ಸ್ಲೈಸ್‌, 2 ಕಪ್‌ ಕಾದಾರಿದ ಕೆನೆಭರಿತ ಗಟ್ಟಿ ಹಾಲು, ರುಚಿಗೆ ತಕ್ಕಷ್ಟು ಸಕ್ಕರೆ, ಹಾಲಿನ ಪುಡಿ, ಪಿಸ್ತಾ ಚೂರು.

ವಿಧಾನ : ಅರ್ಧದಷ್ಟು ಹಾಲು, ಹಾಲಿನ ಪುಡಿ, ಸಕ್ಕರೆ, ಕಿವುಚಿದ ಬ್ರೆಡ್‌ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಳ್ಳಿ. ಈ ಮಿಶ್ರಣವನ್ನು ಕುಲ್ಛಿಯ ತೆಳು ಅಚ್ಚಿಗೆ ತುಂಬಿಸಿ, 5-6 ಘಂಟೆ ಕಾಲ ಫ್ರೀಝರ್‌ ನಲ್ಲಿಟ್ಟು ಸೆಟ್‌ ಮಾಡಿ. ನಂತರ ಉಳಿದ ಹಾಲು, ಸಕ್ಕರೆ, ಹಾಲಿನ ಪುಡಿ, ಮಾವಿನ ತಿರುಳು ಸೇರಿಸಿ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ. ಇದನ್ನು ಕುಲ್ಛಿಯ ದಪ್ಪ ಅಚ್ಚುಗಳಲ್ಲಿ ಅರ್ಧ ಭಾಗ ತುಂಬಿಸಿ. ತೆಳು ಕುಲ್ಛಿ ರೆಡಿ ಆದಾಗ, ಅದನ್ನು ಹೊರತೆಗೆದು ದಪ್ಪ ಕುಲ್ಛಿಯ ಮೇಲ್ಭಾಗದಲ್ಲಿ ಇರಿಸಿಬಿಡಿ. ಇದನ್ನು ಮತ್ತೆ ಫ್ರೀಝರಿನಲ್ಲಿಟ್ಟು 7-8 ಘಂಟೆ ಕಾಲ ಸೆಟ್‌ ಮಾಡಿ. ನಂತರ ಕುಲ್ಛಿ ಹೊರತೆಗೆದು, ಕತ್ತರಿಸಿ, ಮೇಲೆ ಪಿಸ್ತಾ ಉದುರಿಸಿ, ಸವಿಯಲು ಕೊಡಿ.

Mango-Dust-With-Gulab-Jamun

ಮ್ಯಾಂಗೋ ಡಸ್ಟ್ ವಿತ್‌ ಗುಲಾಬ್‌ ಜಾಮೂನು

ಸಾಮಗ್ರಿ : 1-2 ಕಪ್‌ಮಾಗಿದ ಮಾವಿನ ತಿರುಳು, 5-6 ಸಣ್ಣ ಗುಲಾಬ್‌ ಜಾಮೂನು, ರುಚಿಗೆ ತಕ್ಕಷ್ಟು ಪುಡಿ ಸಕ್ಕರೆ, ಗುಲಾಬಿ ಜಲ, ತಂಪಾದ ಕಾದಾರಿದ ಹಾಲು, ನಿಂಬೆರಸ.

ವಿಧಾನ : ಮಾವಿನ ತಿರುಳನ್ನು ಸಕ್ಕರೆ ಜೊತೆಗೆ ಮಿಕ್ಸಿಗೆ ಹಾಕಿ. ಇದಕ್ಕೆ ತಂಪು ಹಾಲು ಬೆರೆಸಿ ನುಣ್ಣಗೆ ಪೇಸ್ಟ್ ಮಾಡಿ. ಇದಕ್ಕೆ ನಿಂಬೆರಸ, ಗುಲಾಬಿಜಲ ಬೆರೆಸಿ ಮತ್ತೊಮ್ಮೆ ಚಲಾಯಿಸಿ. ಇದನ್ನು ಐಸ್‌ ಕ್ರೀಂ ಬಟ್ಟಲುಗಳಿಗೆ ಸಮನಾಗಿ ಹಾಕಿಡಿ. ಇದನ್ನು ಫ್ರೀಝರಿನಲ್ಲಿಟ್ಟು 2-3 ಗಂಟೆ ಕಾಲ ಸೆಟ್‌ ಮಾಡಿ. ನಂತರ ಇದನ್ನು ಹೊರತೆಗೆದು ಚಮಚದಿಂದ ಕದಡಿಕೊಳ್ಳಿ. ಮತ್ತೆ ಫ್ರೀಝರಿನಲ್ಲಿ 1 ಗಂಟೆ ಕಾಲ ಇಡಿ. ಹೀಗೆ ಮತ್ತೆ ಮತ್ತೆ ಮಾಡಿ, ಅದನ್ನು ಮರಳಿನಾಕಾರ ಬರುವಂತೆ ಮಾಡಿ. ಆ ಮಾವಿನ ಮರಳನ್ನು ಬಟ್ಟಲುಗಳಿಗೆ ತುಂಬಿಸಿ, ಅದರ ಮೇಲೆ ಜಾಮೂನು ಇರಿಸಿ, ತಂಪಾಗಿ ಸವಿಯಲು ಕೊಡಿ.

“ಫಿರನಿಗೆ ಮ್ಯಾಂಗೋ ಫ್ಲೇವರ್‌ ಹಾಕಿ, ಆ ಡಿಶ್‌ ಗೆ ಹೊಸ ಟ್ವಿಸ್ಟ್ ಕೊಟ್ಟು ನೋಡಿ…..”

Sw-Mango-Firni

ಮ್ಯಾಂಗೋ ಫಿರನೀ

ಸಾಮಗ್ರಿ : 1-2 ಕಪ್‌ ಮಾಗಿದ ಮಾವಿನ ತಿರುಳು, 3-4 ಮಾವಿನ ತುಂಡು, ಅರ್ಧ ಕಪ್‌ ಕಾದಾರಿದ ಮೆದು ಅನ್ನ, 1 ಲೀ. ಕೆನೆಭರಿತ ಗಟ್ಟಿ ಹಾಲು, ರುಚಿಗೆ ತಕ್ಕಷ್ಟು ಸಕ್ಕರೆ, ಏಲಕ್ಕಿ ಪುಡಿ, ಪಿಸ್ತಾ ಚೂರು.

ವಿಧಾನ : ಮೊದಲು ಹಾಲು ಕಾಯಿಸಿ, ಮಂದ ಉರಿಯಲ್ಲಿ ಅರ್ಧದಷ್ಟು ಹಿಂಗುವಂತೆ ಕುದಿಸಿ, ಕೆಳಗಿಳಿಸಿ 100% ತಂಪಾಗಿಸಿ. ನಂತರ ಅರ್ಧದಷ್ಟು ಹಾಲು, ಅನ್ನ ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿ. ಇದನ್ನು ಒಲೆಯ ಮೇಲಿರಿಸಿ ಕುದಿಸಬೇಕು. ಇದಕ್ಕೆ ಉಳಿದ ಹಾಲು ಬೆರೆಸಿ, ಎಲ್ಲ ಗಟ್ಟಿಯಾಗಿ ಒಂದಾಗುವಂತೆ ಮಾಡಿ. ನಂತರ ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ, ಕೈಯಾಡಿಸಿ. ಇದನ್ನು ಕೆಳಗಿಳಿಸಿ ತಂಪಾಗಿಸಿ. ನಂತರ ಮಾವಿನ ತಿರುಳು ಬೆರೆಸಿ, ಗೊಟಾಯಿಸಿ, ಫ್ರೀಝರ್‌ ನಲ್ಲಿಟ್ಟು ಸೆಟ್‌ ಮಾಡಿ. ನಂತರ ಚಿಕ್ಕ ಬಟ್ಟಲುಗಳಿಗೆ ತುಂಬಿಸಿ, ಪಿಸ್ತಾ ಚೂರು, ಮಾವಿನ ಹೋಳಿನೊಂದಿಗೆ ಸವಿಯಲು ಕೊಡಿ.

“ಕೋಲಾ ಮಾವಿನ ಈ ಕಂಬಿನೇಶನ್‌ ಬೇಸಿಗೆಗೆ ಬಲು ಮಜಾ ಕೊಡುತ್ತದೆ….”

Mango-Cola-Popsi

ಮ್ಯಾಂಗೋ ಕೋಲಾ ಪೆಪ್ಸಿ

ಸಾಮಗ್ರಿ : 1 ಕಪ್‌ ಮಾಗಿದ ಮಾವಿನ ತಿರುಳು, ರುಚಿಗೆ ತಕ್ಕಷ್ಟು ಪುಡಿಸಕ್ಕರೆ, ನಿಂಬೆರಸ, ಕೋಲ್ಡ್ ಡ್ರಿಂಕ್‌ ಯಾ ಕೋಲ್ಡ್ ಕೋಲಾ.

ವಿಧಾನ : ಮಾವಿನ ತಿರುಳನ್ನು ಮಿಕ್ಸಿಗೆ ಹಾಕಿ. ಸಕ್ಕರೆ, ನಿಂಬೆರಸ, 2 ಕಪ್‌ ನೀರು ಬೆರೆಸಿ ಚೆನ್ನಾಗಿ ಬ್ಲೆಂಡ್‌ ಮಾಡಿ. ಇದನ್ನು ಸೋಸಿಕೊಂಡು, ಪೆಪ್ಸಿ ಮೌಲ್ಡ್ ‌ನಲ್ಲಿ ಮುಕ್ಕಾಲು ಭಾಗ ತುಂಬಿಸಿ, ಫ್ರೀಝರಿನಲ್ಲಿಟ್ಟು ಸೆಟ್‌ ಮಾಡಿ. 3-4 ಗಂಟೆಗಳ ನಂತರ, ಮೌಲ್ಡ್ ‌ನ ಖಾಲಿ ಭಾಗಕ್ಕೆ ಕೋಲ್ಡ್ ಕೋಲಾ ತುಂಬಿಸಿ, ಮತ್ತೆ ಫ್ರೀಝರ್‌ ನಲ್ಲಿಟ್ಟು ಸೆಟ್‌ ಮಾಡಿ. ಇದು ಚೆನ್ನಾಗಿ ಸೆಟ್‌ ಆದ ನಂತರ, ಹೊರತೆಗೆದು, ಕೂಲ್ ‌ಕೂಲ್ ‌ಸರ್ವ್ ಮಾಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ