– ರಾಘವೇಂದ್ರ ಅಡಿಗ ಎಚ್ಚೆನ್.

ಏಷ್ಯಾದಲ್ಲಿಯೇ ಮೊದಲ ಬಾರಿಗೆ ಐಇಇಇ ರಾಡಾರ್ ಸಮ್ಮೇಳನವು ನಗರದ ವೈಟ್‌ಫೀಲ್ಡ್‌ನ ಶೆರಾಟನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆಯಲಿದೆ.

‘2027ರ ಮೇ 1ರಿಂದ 6ರವರೆಗೆ ನಡೆಯುವ ಸಮ್ಮೇಳನದಲ್ಲಿ 231 ತಂತ್ರಜ್ಞರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಅವರಲ್ಲಿ ಅರ್ಧದಷ್ಟು ಮಂದಿ ಭಾರತೀಯರಾಗಿದ್ದಾರೆ’ ಎಂದು ಐಇಇಇ ಏರೊಸ್ಪೇಸ್ ಆ್ಯಂಡ್ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಸೊಸೈಟಿ ಉಪಾಧ್ಯಕ್ಷ ಪುನೀತ್ ಕುಮಾರ್ ಮಿಶ್ರಾ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಅಮೆರಿಕ ಮತ್ತು ಯೂರೋಪ್ ಆಚೆಗೆ ಮೊದಲ ಬಾರಿ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಭಾರತೀಯ ತಂತ್ರಜ್ಞಾನವನ್ನು ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸುವ ಅವಕಾಶ ಇದಾಗಿದೆ. ದೇಶದ ವಿದ್ಯಾರ್ಥಿಗಳು ಮತ್ತು ಯುವ ತಂತ್ರಜ್ಞರಿಗೆ ಕಲಿಕಾ ವೇದಿಕೆಯಾಗಿದ್ದು, ಜಾಗತಿಕ ತಂತ್ರಜ್ಞರು ರಾಡಾರ್ ತಂತ್ರಜ್ಞಾನದ ಸಾಧ್ಯತೆಯನ್ನು ತೆರೆದಿಡಲಿದ್ದಾರೆ. ಪ್ರಬಂಧ ಮಂಡನೆಗೆ ನೋಂದಾಯಿಸಲು ಸಾವಿರ ಡಾಲರ್ ಬದಲು 100 ಡಾಲರ್ ಭರಿಸಬೇಕಿದೆ. ಪ್ರಬಂಧ ಸಲ್ಲಿಕೆಗೆ ನವೆಂಬರ್ 30 ಕೊನೆಯ ದಿನವಾಗಿದೆ’ ಎಂದರು.

1001964529

‘ಕಾಗ್ನಿಟಿವ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸಂವಹನ ತಂತ್ರಜ್ಞಾನ, ಬಾಹ್ಯಾಕಾಶ, ಹವಾಮಾನ, ಭವಿಷ್ಯದ ಉಪಗ್ರಹಗಳು, ಜಾಗತಿಕ ಭದ್ರತೆ, ಸದೃಢ ವಿದ್ಯುನ್ಮಾನ ಯುದ್ಧ ವ್ಯವಸ್ಥೆ, ರಕ್ಷಣಾ ಕ್ಷೇತ್ರ‌ ಬಲವರ್ಧನೆಯಲ್ಲಿ ರಾಡಾರ್ ತಂತ್ರಜ್ಞಾನದ ಪಾತ್ರ ಕುರಿತು ತಜ್ಞರು ಮಾತನಾಡಲಿದ್ದಾರೆ’ ಎಂದು ತಿಳಿಸಿದರು.

ಡಿಆರ್‌ಡಿಒ ಪ್ರಧಾನ ನಿರ್ದೇಶಕ ಬಿ.ಕೆ.ದಾಸ್ ಮಾತನಾಡಿ, ‘ಸಮ್ಮೇಳನವು ದೇಶ, ಅದರಲ್ಲೂ ಬೆಂಗಳೂರಿನ ರಾಡಾರ್ ತಂತ್ರಜ್ಞಾನದ ಸಾಧನೆ ಹಾಗೂ ಯುವ ವಿಜ್ಞಾನಿಗಳ ಪ್ರತಿಭೆಯನ್ನು ಜಾಗತಿಕವಾಗಿ ತೋರಿಸಿಕೊಡಲಿದೆ’ ಎಂದರು.

‘ಕೃತಕ ಬುದ್ಧಿಮತ್ತೆ ಎಲ್ಲ ಕ್ಷೇತ್ರವನ್ನು ಪ್ರವೇಶಿಸಿದ್ದು, ಅದರ ಸವಾಲುಗಳನ್ನು ರಾಡಾರ್ ಕ್ಷೇತ್ರವೂ ಎದುರಿಸಲಿದೆ. ಪುಟ್ಟ ಡ್ರೋನ್ ಗಳನ್ನು ಯುದ್ಧಭೂಮಿಯಲ್ಲಿ‌ ಬಳಸಲಾಗುತ್ತಿದೆ. ಭವಿಷ್ಯದ ಯುದ್ಧಗಳನ್ನು ಎದುರಿಸಲು ರಾಡಾರ್ ತಂತ್ರಜ್ಞಾನ ನಿರ್ಣಾಯಕವಾಗಿದೆ’ ಎಂದು ಹೇಳಿದರು.

ಎಲ್‌ಆರ್‌ಡಿಇ ನಿರ್ದೇಶಕ ಶೇಖ್ ಅಲ್ತಾಫ್, ‘ರಾಡಾರ್ ತಂತ್ರಜ್ಞಾನ ರಕ್ಷಣೆ, ಏರೊಸ್ಪೇಸ್ ಅಲ್ಲಿ ಬಳಸಲಾಗುತ್ತಿತ್ತು. ಇದೀಗ ಅದರ ಬಳಕೆ ವ್ಯಾಪಕವಾಗಿದೆ. ಕೃತಕ ಬುದ್ಧಿಮತ್ತೆಯಿಂದಾಗಿ ಬಹು ಮಾದರಿಯ ರಾಡಾರ್ ಕಾರ್ಯಾಚರಣೆಯು ಅಗತ್ಯವಾಗಿದೆ’ ಎಂದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ