ಮಳೆಗಾಲದ ದಿನಗಳಲ್ಲಿ ಬೀದಿ ಬದಿ ಚಾಟ್ಸ್ ರುಚಿ ರುಚಿಯಾಗಿ ಬಲು ಪ್ರಿಯವೆನಿಸುತ್ತವೆ. ಅದಕ್ಕೆ ಮುನ್ನ ನಿಮ್ಮ ಆರೋಗ್ಯದತ್ತ ಮೊದಲು ಗಮನ ಕೊಡಿ…..
ಮಳೆಗಾಲ ಬಂತು ಎಂದೊಡನೆ ಜನ ಈ ಸೀಸನ್ನಿನ ಮಜಾ ಪಡೆಯಲು ಬೀದಿ ಬದಿ ಮಾರಾಟ ಮಾಡುವ ಬೋಂಡ, ಬಜ್ಜಿ, ಪಕೋಡ, ಚಾಟ್ಸ್ ಇತ್ಯಾದಿಗಳಿಗೆ ಮುಗಿಬೀಳುತ್ತಾರೆ. ಮಳೆಗಾಲದಲ್ಲಿ ಹೊರಗಿನಿಂದ ದುಡಿದು ದಣಿದು ಬಂದಿರುವಾಗ, ಬಾಯಿಗೆ ಹಿತಕರ ಎನಿಸುವ, ರುಚಿ ರುಚಿಯಾದ ಈ ಬಿಸಿ ಬಿಸಿ ಹುಳಿ, ಸಿಹಿ, ಖಾರಖಾರದ ಚಾಟ್ಸ್ ಎಲ್ಲರಿಗೂ ಹೆಚ್ಚಿನ ಖುಷಿ ನೀಡುತ್ತದೆ. ಆಗ ಮನೆಯಲ್ಲೇ ಇದನ್ನು ತಯಾರಿಸಿಕೊಳ್ಳುವಷ್ಟು ಸಹನೆ, ಪುರಸತ್ತು ಇರುವುದಿಲ್ಲ. ಆದರೆ ನಮ್ಮ ಆರೋಗ್ಯದ ಮೇಲೆ ಇದರ ದುಷ್ಪರಿಣಾಮ ತಪ್ಪಿದ್ದಲ್ಲ.
ಅತ್ಯಾಕರ್ಷಕ ಬೀದಿ ಬದಿ ತಿನಿಸುಗಳು : ಈ ಕುರಿತಾಗಿ ಗ್ಯಾಸ್ಟ್ರೋ ಎಂಟಿರಾಲಜಿಯ ತಜ್ಞರು ಹೇಳುವುದೆಂದರೆ, ಅಸಲಿಗೆ ಮಳೆಗಾಲದಲ್ಲಿ ನಾವು ಬಾಯಿಚಪಲಕ್ಕೆ ಬಲಿಯಾಗಿ ಈ ಬೀದಿ ಬದಿಯ ತಿನಿಸನ್ನು ಸೇವಿಸಲೇಬಾರದು. ಆಗ ಮಳೆಗಾಲದ ರೋಗಗಳಿಂದ ಪಾರಾಗಬಹುದು. ಹಾಗೇ ನೋಡಿದರೆ, ಬೀದಿ ಬದಿಯ ಫುಡ್ ಬಲು ಆಕರ್ಷಕ, ರುಚಿಕರ ಹೌದು. ಆದರೆ ಇದು ಯಾವಾಗ ಮಾಡಲ್ಪಟ್ಟಿತ್ತೋ? ಹೇಗೆ ತಯಾರಾಗಿದ್ದೋ ಗೊತ್ತಿಲ್ಲ. ಹೀಗಾಗಿ ಮಳೆಗಾಲದಲ್ಲಿ ಸ್ಟ್ರೀಟ್ ಫುಡ್ ಸೇವಿಸುವ ಮುನ್ನ ಕೆಲವು ಮುನ್ನೆಚ್ಚರಿಕೆ ವಹಿಸಲೇ ಬೇಕು. ಸುರಕ್ಷತೆಯ ದೃಷ್ಟಿಯಿಂದ ಈ ತಿನಿಸು ಬಹಳ ರಿಸ್ಕ್ ಕಪ್ ಎಂಬುದರಲ್ಲಿ ಸಂದೇಹವಿಲ್ಲ. ಅದರಲ್ಲೂ ಮಳೆಗಾಲದಲ್ಲಿ ತೆರೆದಿಟ್ಟ ಈ ತಿನಿಸುಗಳು ಅಗಾಧ ಬ್ಯಾಕ್ಟೀರಿಯಾ ವೈರಸ್ ಗಳ ತವರೂರಾಗಿರುತ್ತವೆ. ಇದರಿಂದ ಸೋಂಕಿನ ಭೀತಿ ತಪ್ಪಿದ್ದಲ್ಲ. ಹೀಗಾಗಿ ಈ ಕುರಿತು ಎಚ್ಚರ ವಹಿಸಲೇಬೇಕು.
ಕಲುಷಿತ ನೀರು ಎಲ್ಲ ರೋಗಗಳಿಗೂ ಮೂಲ : ಮಳೆಗಾಲದಲ್ಲಿ ಸ್ಟ್ರೀಟ್ ಫುಡ್ ಸವಿಯುವುದರಿಂದ ಎಲ್ಲಕ್ಕೂ ದೊಡ್ಡ ಸಮಸ್ಯೆ ಆಗುವುದೆಂದರೆ ಫುಡ್ ಪಾಯಿಸನಿಂಗ್ಗ್ಯಾಸ್ಟ್ರೋಎಂಟೆರೈಟಿಸ್ ನ ತೊಂದರೆಗಳು. ಏಕೆಂದರೆ ಮಳೆಗಾಲದಲ್ಲಿ ನೀರು ಅತ್ಯಧಿಕ ಕಲುಷಿತಗೊಳ್ಳುತ್ತದೆ. ಬಹಳಷ್ಟು ಕಡೆ ವಾಟರ್ ಸಪ್ಲೈ ಪೈಪುಗಳಲ್ಲಿ ಬ್ರೇಕ್ ಡೌನ್ ಆಗುವುದರಿಂದ, ಕೊಳಕು ನೀರು ಕುಡಿಯುವ ನೀರಿಗೆ ಬೆರೆತು ಹೋಗುವ ಸಂಭವವನ್ನು ಅಲ್ಲಗಳೆಯಲಾಗುವುದಿಲ್ಲ. ಹೀಗಾಗಿ ಕುಡಿಯುವ ನೀರಿಗೆ ರಾಶಿ ರಾಶಿ ವೈರಸ್ ಬ್ಯಾಕ್ಟೀರಿಯಾಗಳ ಆಕ್ರಮಣವಾಗುತ್ತದೆ. ಹೀಗಾಗಿ ಅಂಥ ನೀರಿನಿಂದ ತಯಾರಾದ ಆಹಾರ ಪದಾರ್ಥಗಳಿಂದ ಬ್ಯಾಕ್ಟೀರಿಯಲ್/ವೈರಲ್ ಇನ್ ಫೆಕ್ಷನ್ ಆಗದೆ ಇರುತ್ತದೆಯೇ? ಇದರಿಂದ ಸಹಜವಾಗಿ ಫುಡ್ ಪಾಯಿಸನಿಂಗ್ ಗ್ಯಾಸ್ಟ್ರೋಎಂಟೆರೈಟಿಸ್ ಸಮಸ್ಯೆ ಹೆಚ್ಚುತ್ತವೆ. ಇದರಿಂದ ವಾಂತಿ, ಭೇದಿ ತಪ್ಪಿದ್ದಲ್ಲ. ಇದನ್ನು ನಿರ್ಲಕ್ಷಿಸಿದರೆ ಅತಿ ಭೇದಿಗೆ ತಿರುಗಿ, ಅತ್ಯಧಿಕ ಸುಸ್ತು ಹೆಚ್ಚಿ, ರೋಗಿ ಓಡಾಡುವುದಕ್ಕೂ ಆಗದೇ ಮಲಗಿಯೇ ಇರಬೇಕಾಗುತ್ತದೆ. ಜೊತೆಗೆ ಹೊಟ್ಟೆ ತೊಳಸುವಿಕೆ, ನುಲುಚುವುದು, ಹೊಟ್ಟೆನೋವು ತಪ್ಪಿದ್ದಲ್ಲ. ಫುಡ್ ಪಾಯಿಸನಿಂಗ್ ಎರಡು ವಿಧದಲ್ಲಿ ಆಗುತ್ತದೆ. ಯಾವ ಆಹಾರವನ್ನು ನೀವು ಬೀದಿ ಬದಿ ತಿಂದಿರೋ, ಅದರಲ್ಲಿ ಮೊದಲೇ ಬ್ಯಾಕ್ಟೀರಿಯಾ ಪ್ರೀ ಫಾರ್ಮ್ಸ್ ಟಾಕ್ಸಿಕ್ ಆಗಿರಬಹುದು. ಅಂದ್ರೆ ಮೊದಲೇ ಇದರಲ್ಲಿ ಕೋವೈ ಬ್ಯಾಕ್ಟೀರಿಯಾ ಫಾರ್ಮೇಶನ್ ಆಗಿಹೋಗಿರುತ್ತದೆ. ಇದರ ಪರಿಣಾಮ ಬೇಗ ಕಾಣಿಸುತ್ತದೆ. 2ನೇ ವಿಧ ಅಂದ್ರೆ, ಬ್ಯಾಕ್ಟೀರಿಯಾ ನಂತರ ಫಾರ್ಮ್ ಆಗುವುದು, ಇದರ ಪರಿಣಾಮ ಮಾರನೇ ದಿನ ಕಾಣಿಸಬಹುದು. ಆದರೆ ಎರಡರ ಲಕ್ಷಣಗಳೂ ಒಂದೇ ತರಹ ಇರುತ್ತವೆ.
ಲಕ್ಷಣ : ಹೊಟ್ಟೆ ನೋವು, ವಾಂತಿ, ಭೇದಿ, ಡೀಹೈಡ್ರೇಶನ್, ಬಿ.ಪಿ ತಗ್ಗುವಿಕೆ, ಅತಿ ಸುಸ್ತು, ಮೂತ್ರ ವಿಸರ್ಜನೆ ಕಡಿಮೆ ಆಗುವಿಕೆ ಇತ್ಯಾದಿ.
ಇದರ ಹೊರತಾಗಿ ಇನ್ನೊಂದು ಬಗೆಯ ವಿಶಿಷ್ಟ ಬ್ಯಾಕ್ಟೀರಿಯಾ ಮಳೆಗಾಲದಲ್ಲಿ ಹೆಚ್ಚುತ್ತದೆ. ಅದರಿಂದ ಕಾಲರಾ ರೋಗ ಹರಡುತ್ತದೆ. ಇದನ್ನು ಕಾಲರಾ ಎನ್ನುತ್ತಾರೆ. ಇದರಿಂದ ರೋಗಿಗೆ ಬಹು ಬೇಗ ಡೀಹೈಡ್ರೇಶನ್ ಸಮಸ್ಯೆ ಉಲ್ಬಣಿಸುತ್ತದೆ, ಬಿ.ಪಿ ಸಹ ತಗ್ಗಬಹುದು. ರೋಗಿಗೆ ಒಂದು ದಿನಕ್ಕೆ 15-20 ಸಲ ಭೇದಿ ಆಗುವ ಸಾಧ್ಯತೆಗಳಿವೆ. ಹೊಟ್ಟೆನೋವು, ತೊಳೆಸುವಿಕೆ, ನುಲುಚುವಿಕೆ ಅತಿ ಹಿಂಸೆ ಎನಿಸುತ್ತದೆ. ಇಲ್ಲಿ ಜ್ವರದ ಬಾಧೆ ಇರದು, ಆದರೆ ಡೀಹೈಡ್ರೇಶನ್ ಅತ್ಯಧಿಕ ಆದೀತು, ಹೀಗಾದಾಗ ಕಿಡ್ನಿ ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚು. ಈ ಸ್ಥಿತಿಯಲ್ಲಿ ಕಾಲರಾಗಾಗಿ ರಕ್ತ ಪರೀಕ್ಷೆ ಮಾಡಿಸಬೇಕು. ಇದು ಬಹುತೇಕ ಸಾಂಕ್ರಾಮಿಕ ರೋಗ ಆಗಿರುತ್ತದೆ. ಏಕೆಂದರೆ ಈ ಬ್ಯಾಕ್ಟೀರಿಯಾವುಳ್ಳ ಆಹಾರ ಸೇವಿಸಿದ ಎಲ್ಲಾ ವ್ಯಕ್ತಿಗಳಿಗೂ ಕಾಲರಾ ಖಂಡಿತಾ ಹರಡುತ್ತದೆ. ಮನೆಯಲ್ಲಿ ಒಬ್ಬರಿಗೆ ಕಾಲರಾ ಆಗಿದೆ ಎಂದು ಖಾತ್ರಿಯಾದ ತಕ್ಷಣ, ಮನೆಯವರೆಲ್ಲರೂ ಎಚ್ಚೆತ್ತು, ಆ ರೋಗಿಯ ಯಾವ ವೈಯಕ್ತಿಕ ವಸ್ತುಗಳನ್ನೂ ಬಳಸಬಾರದು. ಹಾಗೆಯೇ ಆ ಬೀದಿ ವಠಾರದ ಇತರರಿಗೂ ತಿಳಿಸಿದರೆ, ಅವರೂ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬಹುದು.
ಮಳೆಗಾಲದ ಮತ್ತೊಂದು ಮುಖ್ಯ ರೋಗ ಎಂದರೆ ಟೈಫಾಯ್ಡ್ ಜ್ವರ. ಇದು ಮತ್ತೊಂದು ಬ್ಯಾಕ್ಟೀರಿಯಾ ಕಾರಣ ಉಂಟಾಗುತ್ತದೆ. ಅದುವೇ ಸಾಲ್ ಮಿೂನೆಲಾ ಆ್ಯಂಟರಿಕಾ ನೆರೋರ್ ಟೈಫಿ. ಈ ಬ್ಯಾಕ್ಟೀರಿಯಾ ನಮ್ಮ ದೇಹ ಹೊಕ್ಕ ಬಹು ಗಂಟೆಗಳ ನಂತರ ತನ್ನ ದುಷ್ಪ್ರಭಾವ ತೋರಿಸುತ್ತದೆ. ಅಂದ್ರೆ ನೀವು ಮನೆಯದಲ್ಲದ, ಹೊರಗಿನ ಯಾವುದೇ ಆಹಾರ ಸೇವಿಸಿರಲಿ, ಹೊರಗಿನ ನೀರು ಕುಡಿದಿದ್ದರೆ, ಮಾರನೇ ದಿನ ಏನೂ ಆಗದು. ಫುಡ್ ಪಾಯಿಸನಿಂಗ್ 1-2 ದಿನಗಳ ನಂತರ ಖಂಡಿತಾ ಆಗುತ್ತದೆ. ಆದರೆ ಈ ಟೈಫಾಯ್ಡ್ 10-15 ದಿನಗಳ ನಂತರ ತನ್ನ ಕುಪ್ರಭಾವ ಬೀರಿ, ತೀವ್ರ ವಿಷಮಶೀತ ಚಳಿಜ್ವರಕ್ಕೆ ದಾರಿ ಆಗುತ್ತದೆ. ಮಳೆಗಾಲದಲ್ಲಿ ನಿಜಕ್ಕೂ ಇದು ದೊಡ್ಡ ಕಂಟಕವೇ ಸರಿ.
ಒಂದಿಷ್ಟು ಕಿವಿಮಾತು : ಹೊರಗಿನ ಆಹಾರ ಸೇವಿಸುವುದು ಅನಿವಾರ್ಯವಾದರೆ ಈ ಎಚ್ಚರಿಕೆಗಳನ್ನು ಮರೆಯದೆ ಪರಿಪಾಲಿಸಿ. ತಾಜಾ ಅಡುಗೆಯನ್ನಷ್ಟೇ ಸೇವಿಸಿ. ಆದಷ್ಟೂ ಬಿಸಿ ಆಹಾರವೇ ಇರಲಿ, ಸಲಾಡ್ ಇತ್ಯಾದಿ ಹಸಿ ಆಹಾರ ಕನಿಷ್ಠವಿರಲಿ ಅಥವಾ ಅದನ್ನು ಅವಾಯ್ಡ್ ಮಾಡಿದಷ್ಟೂ ಬೆಟರ್. ಚಟ್ನಿ, ಸಾಸ್, ಉಪ್ಪಿನಕಾಯಿ ಇತ್ಯಾದಿ ಬೇಡ. ಬಿಸಿ ಆಹಾರ ಕುದ್ದು ತಯಾರಾಗುವುದರಿಂದ ಅದರಲ್ಲಿ ವೈರಸ್, ಬ್ಯಾಕ್ಟೀರಿಯಾಗಳು ನಷ್ಟವಾಗಿರುತ್ತವೆ. ನಿಮ್ಮ ಜೊತೆ ಬಾಟಲಿಯಲ್ಲಿ ಸದಾ ಕಾದಾರಿದ ನೀರು ಇರಲಿ, ಹೊರಗಿನ ನೀರಿನ ಗೊಡವೆಯೇ ಬೇಡ.
ವೆಜ್ ನಾನ್ ವೆಜ್ ಆಹಾರದಲ್ಲಿ ವ್ಯತ್ಯಾಸ ಇಲ್ಲ : ವೆಜ್ ಫುಡ್ ಸೇಫ್, ನಾನ್ ವೆಜ್ ಅಲ್ಲ ಎಂದು ಈ ಮಳೆಗಾಲದಲ್ಲಿ ಎಣಿಸದಿರಿ. ಈ ಸೀಸನ್ ನಲ್ಲಿ ಎಂಥ ಫುಡ್ಡೇ ಇರಲಿ, ಅದು ಚೆನ್ನಾಗಿ ಕುದ್ದು ಬಿಸಿ ಬಿಸಿ ಆಗಿರಬೇಕು, ತಾಜಾ ಬಿಸಿ ಆಹಾರವನ್ನಷ್ಟೇ ಸೇವಿಸಿ. ಹಸಿ ಆಹಾರದ ಗೊಡವೆ ಬೇಡ. ನಾನ್ ವೆಜ್ ಆಹಾರ ಸೇವಿಸುವ ಮೊದಲು, ಅದರ ಮೂಲ ಯಾವುದು, ಅದು ಶುಚಿ, ಶುಭ್ರ, ಸ್ವಚ್ಛ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಅದು ಹೈಜಿನಿಕ್ ಅಲ್ಲದಿದ್ದರೆ, ತಿಂದವರಿಗೆ ರಿಸ್ಕ್ ತಪ್ಪಿದ್ದಲ್ಲ.
– ಜೆ. ಸುಮನಾ





