ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಹಾಗೂ ಅವರ ಪತ್ನಿ ಅನ್ನಾ ಕೊನಿಡೇಲಾ ಅವರು ತಮ್ಮ 13 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ಬೇರೆಯಾಗುತ್ತಿರುವುದಾಗಿ ದಂಪತಿಗಳು ಅಧಿಕೃತವಾಗಿ ಘೋಷಿಸಿದ್ದಾರೆ.

ಪವನ್ ಕಲ್ಯಾಣ್ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಡರಾತ್ರಿ ಪ್ರಕಟಿಸಿರುವ ಜಂಟಿ ಹೇಳಿಕೆಯಲ್ಲಿ, ಪರಸ್ಪರ ಒಪ್ಪಿಗೆ ಮತ್ತು ಗೌರವದೊಂದಿಗೆ ಈ ನಿರ್ಧಾರ ಕೈಗೊಂಡಿರುವುದಾಗಿ ದಂಪತಿ ತಿಳಿಸಿದ್ದಾರೆ. ಬೇರ್ಪಟ್ಟರೂ ಉತ್ತಮ ಸ್ನೇಹಿತರಾಗಿ ಮುಂದುವರಿಯುವುದಾಗಿ ಅವರು ಹೇಳಿದ್ದಾರೆ.

ನಮ್ಮ ದಾಂಪತ್ಯ ಜೀವನ ಅಂತ್ಯಗೊಂಡಿದ್ದರೂ, ನಾವು ಉತ್ತಮ ಸ್ನೇಹಿತರಾಗಿ ಮತ್ತು ನಮ್ಮ ಮುದ್ದಾದ ಮಕ್ಕಳ ಬಗ್ಗೆ ಸಮಾನ ಕಾಳಜಿ ಹೊಂದಿರುವ ಪೋಷಕರಾಗಿ ಮುಂದುವರಿಯುತ್ತೇವೆ. ಅವರ ಸಂತೋಷ ಮತ್ತು ಯೋಗಕ್ಷೇಮವೇ ನಮ್ಮಿಬ್ಬರ ಆದ್ಯತೆಯಾಗಿರಲಿದೆ ಎಂದು ತಿಳಿಸಿದ್ದಾರೆ.

ಈ ವೈಯಕ್ತಿಕ ಬದಲಾವಣೆಯ ಸಂದರ್ಭದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಹಿತೈಷಿಗಳಲ್ಲಿ ದಂಪತಿ ಮನವಿ ಮಾಡಿದ್ದಾರೆ.

ನಮ್ಮ ಜೀವನದ ಈ ವೈಯಕ್ತಿಕ ಬದಲಾವಣೆಯ ಸಂದರ್ಭದಲ್ಲಿ ನಿಮ್ಮ ತಿಳಿವಳಿಕೆ, ದಯೆ ಮತ್ತು ನಮ್ಮ ಖಾಸಗಿತನಕ್ಕೆ ಗೌರವ ನೀಡಬೇಕೆಂದು ಕೋರುತ್ತೇವೆ. ಈ ಪಯಣದಲ್ಲಿ ನಮ್ಮೊಂದಿಗೆ ನಿಂತ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಈ ಬೇರ್ಪಡುವಿಕೆಯೊಂದಿಗೆ ಪವನ್ ಕಲ್ಯಾಣ್ ಅವರ ಮೂರನೇ ದಾಂಪತ್ಯ ಜೀವನವೂ ಅಂತ್ಯಗೊಂಡಂತಾಗಿದೆ.

ಪವನ್ ಕಲ್ಯಾಣ್ 1997ರಲ್ಲಿ ನಂದಿನಿ ಅವರನ್ನು ವಿವಾಹವಾಗಿದ್ದರು. ಆದರೆ, 1999ರಲ್ಲಿ ಇಬ್ಬರೂ ಪ್ರತ್ಯೇಕವಾಗಿದ್ದರು. ಬಳಿಕ 2009ರಲ್ಲಿ ನಟಿ ರೇಣು ದೇಸಾಯಿ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಒಬ್ಬ ಪುತ್ರಿ ಮತ್ತು ಒಬ್ಬ ಪುತ್ರ ಇದ್ದಾರೆ. 2012ರಲ್ಲಿ ಅವರ ದಾಂಪತ್ಯ ಜೀವನ ವಿಚ್ಛೇದನದೊಂದಿಗೆ ಅಂತ್ಯಗೊಂಡಿತ್ತು. 2013ರಲ್ಲಿ ರಷ್ಯಾ ಮೂಲದ ಅನ್ನಾ ಅವರನ್ನು ಪವನ್ ಕಲ್ಯಾಣ್ ವಿವಾಹವಾಗಿದ್ದರು. ಈ ದಂಪತಿಗೆ ಪೋಲೆನಾ ಅಂಜನಾ ಪವನೋವಾ ಮತ್ತು ಮಾರ್ಕ್ ಶಂಕರ್ ಪವನೋವಿಚ್ ಎಂಬ ಇಬ್ಬರು ಮಕ್ಕಳಿದ್ದಾರೆ.

ನಟರಾದ ಚಿರಂಜೀವಿ ಮತ್ತು ನಾಗೇಂದ್ರ ಬಾಬು ಅವರ ಕಿರಿಯ ಸಹೋದರರಾಗಿರುವ ಪವನ್ ಕಲ್ಯಾಣ್, 1996ರಲ್ಲಿ ತೆರೆಕಂಡ ‘ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.

2008ರಲ್ಲಿ ತಮ್ಮ ಹಿರಿಯ ಸಹೋದರ ಚಿರಂಜೀವಿ ಸ್ಥಾಪಿಸಿದ್ದ ಪ್ರಜಾರಾಜ್ಯಂ ಪಕ್ಷದ ಯುವ ಘಟಕ ‘ಯುವರಾಜ್ಯಂ’ನ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದ್ದರು.

2014ರ ಮಾರ್ಚ್‌ನಲ್ಲಿ ಜನಸೇನಾ ಪಕ್ಷವನ್ನು ಸ್ಥಾಪಿಸಿದ ಅವರು, ಅದೇ ವರ್ಷದ ಚುನಾವಣೆಯಲ್ಲಿ ಸಕ್ರಿಯವಾಗಿ ಪ್ರಚಾರ ನಡೆಸಿದ್ದರು. 2019ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜನಸೇನಾ ಪಕ್ಷ 140 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಪವನ್ ಕಲ್ಯಾಣ್ ಗಾಜುವಾಕ ಮತ್ತು ಭೀಮಾವರಂ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದರೂ, ಎರಡೂ ಕ್ಷೇತ್ರಗಳಲ್ಲಿ ವೈಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಸೋಲು ಕಂಡಿದ್ದರು. ಪಕ್ಷವು ರಜೋಲ್ ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿತ್ತು.

2024ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಜನಸೇನಾ, ತೆಲುಗು ದೇಶಂ ಪಕ್ಷ (ಟಿಡಿಪಿ) ಹಾಗೂ ಬಿಜೆಪಿ ನಡುವೆ ಮೈತ್ರಿ ಏರ್ಪಡಿಸುವಲ್ಲಿ ಪವನ್ ಕಲ್ಯಾಣ್ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಪಕ್ಷ ಸ್ಪರ್ಧಿಸುವ ಕ್ಷೇತ್ರಗಳ ಸಂಖ್ಯೆಯನ್ನು ಸೀಮಿತಗೊಳಿಸುವ ಮೂಲಕ ಮೈತ್ರಿಗೆ ಸಹಕರಿಸಿದ್ದರು. ಈ ಮೈತ್ರಿಕೂಟ ಭರ್ಜರಿ ಗೆಲುವು ದಾಖಲಿಸಿತ್ತು. ಜನಸೇನಾ ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳಲ್ಲೂ ಜಯಗಳಿಸಿತ್ತು. 2024ರ ಜೂನ್ 14ರಂದು ಪವನ್ ಕಲ್ಯಾಣ್ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ