ಅಕ್ರಮ ಸಾಗುವಳಿ ಆರೋಪಕ್ಕೆ ಸಂಬಂಧಿಸಿದಂತೆ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ಜಮೀನಿನಲ್ಲಿದ್ದ 300ಕ್ಕೂ ಅಧಿಕ ದಾಳಿಂಬೆ ಮರಗಳನ್ನು ಏಕಾಏಕಿ ಕಡಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್ ಕೋಲಾರ ತಹಶೀಲ್ದಾರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಏಕಾಏಕಿ ಈ ಕ್ರಮ ಕೈಗೊಳ್ಳದಿದ್ದರೆ ಸ್ವರ್ಗವೇನು ಧರೆಗಿಳಿದು ಬರುತ್ತಿರಲಿಲ್ಲ” ಎಂದು ಮಾರ್ಮಿಕವಾಗಿ ಚಾಟಿ ಬೀಸಿದೆ.
ಕೋಲಾರ ಜಿಲ್ಲೆಯ ವೆಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಮೀನೊಂದರಲ್ಲಿ ಅಕ್ರಮ ಸಾಗುವಳಿ ಮಾಡಲಾಗಿದೆ ಎಂಬ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಪೂರ್ವ ಸೂಚನೆ ನೀಡದೆ ಕಂದಾಯ ಅಧಿಕಾರಿಗಳು, ನವೆಂಬರ್ 7ರ ರಜಾದಿನದಂದು ಅಧಿಕಾರಿಗಳು ಏಕಾಏಕಿ ಕಾರ್ಯಾಚರಣೆ ಜಮೀನಿಗೆ ನುಗ್ಗಿ ಅಲ್ಲಿದ್ದ 300ಕ್ಕೂ ಅಧಿಕ ದಾಳಿಂಬೆ ಮರಗಳನ್ನು ಕಡಿದು ತೆರವುಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಸಾಗುವಳಿದಾರೆ ಟಿ.ಎನ್. ಮೋನಿಕಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಶೇಷ ಏಕಸದಸ್ಯ ನ್ಯಾಯಪೀಠವು, “ನವೆಂಬರ್ 7ರಂದು ನೀವು ಕ್ರಮ ಕೈಗೊಳ್ಳದಿದ್ದರೆ ಸ್ವರ್ಗವೇನು ಧರೆಗಿಳಿದು ಬರುತ್ತಿರಲಿಲ್ಲ” ಎಂದು ತಹಶೀಲ್ದಾರ್ ಅವರ ಅವಸರದ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿದೆ.
ಅರ್ಜಿದಾರರು ಕಾನೂನು ಮೊರೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ, ದೀಪಾವಳಿ ಹಬ್ಬದ ಸಾಲು-ಸಾಲು ರಜೆಗಳಿರುವುದನ್ನು ಬಳಸಿಕೊಂಡು ತಹಶೀಲ್ದಾರ್ ಅವರು ಏಕಾಏಕಿ ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಅಲ್ಲದೆ, ಅಧಿಕಾರಿಗಳ ಇಂತಹ ನಡವಳಿಕೆಯಿಂದ ಸರ್ಕಾರಿ ರಜಾದಿನದಲ್ಲೂ ಹೈಕೋರ್ಟ್ನ ನೂರಾರು ಸಿಬ್ಬಂದಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನ್ಯಾಯಾಲಯ ಹೇಳಿತು. ಇದರೊಂದಿಗೆ, ವಿವಾದಿತ ಜಮೀನಿನ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಹಾಗೂ ಮುಂದಿನ ಆದೇಶದವರೆಗೆ ಯಾವುದೇ ಅಧಿಕಾರಿಗಳು ಆ ಆಸ್ತಿಗೆ ಪ್ರವೇಶಿಸಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ ಹೈಕೋರ್ಟ್, ರಾಜ್ಯ ಸರ್ಕಾರ, ಕೋಲಾರ ಜಿಲ್ಲಾಡಳಿತ ಹಾಗೂ ತಹಶೀಲ್ದಾರ್ಗೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಪೀಠ, ಈ ಕುರಿತು ಸರ್ಕಾರದ ನಿಲುವು ತಿಳಿಸುವಂತೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಿದೆ.
ಈ ನಡುವೆ, ಅರ್ಜಿದಾರರ ಕುಟುಂಬವು ಹಲವು ದಶಕಗಳಿಂದ ಈ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದು, 2023ರಲ್ಲಿ ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸಿದ್ದು ಅದು ಇನ್ನೂ ಪರಿಶೀಲನೆಯಲ್ಲಿದೆ ಎಂದು ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ವಾದ ಮಂಡಿಸಿದರು.
ನವೆಂಬರ್ 15 ಮತ್ತು 16ರಂದು ಅರ್ಜಿದಾರರ ಮದುವೆ ನಿಗದಿಯಾಗಿದ್ದು, ಅಲ್ಲಿಯವರೆಗಾದರೂ ಕ್ರಮ ಕೈಗೊಳ್ಳದಂತೆ ಕೋರಿದರೂ ತಹಶೀಲ್ದಾರ್ ಮಣಿಯದೆ, ನವೆಂಬರ್ 7ರಂದು ಪೊಲೀಸ್ ಪಡೆಯೊಂದಿಗೆ ಜಮೀನಿಗೆ ನುಗ್ಗಿ ಬೆಳೆದು ನಿಂತಿದ್ದ ದಾಳಿಂಬೆ ಮರಗಳನ್ನು ಧ್ವಂಸ ಮಾಡಿದ್ದಾರೆ ಎಂದು ತಿಳಿಸಿದರು.





