ಪ್ರಧಾನಿಯಾಗಬೇಕೆಂಬ ಆಸೆ ತಪ್ಪೇ? ದಶಕಗಳ ರಾಜಕೀಯ ಅನುಭವ, ಅಪಾರ ಆಡಳಿತ ಜ್ಞಾನ, ಸಂಸದೀಯ ಪರಂಪರೆ ಮತ್ತು ದೇಶದ ಆರ್ಥಿಕ ನೀತಿಗಳ ರೂಪಿಸುವಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪ್ರಣಬ್ ಮುಖರ್ಜಿ ಅವರಿಗೆ ಪ್ರಧಾನಿಯಾಗುವ ಅವಕಾಶ ಏಕೆ ಸಿಗಲಿಲ್ಲ? ಕಾಂಗ್ರೆಸ್ ಪಕ್ಷದಲ್ಲಿ ನೆಹರು–ಗಾಂಧಿ ಕುಟುಂಬದ ಪ್ರಭಾವ ಎಷ್ಟರ ಮಟ್ಟಿಗೆ ಪ್ರಬಲವಾಗಿತ್ತು? ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಿಗೆ ಪ್ರಣಬ್ ದಾ ಅವರಿಗಿಂತ ಹೆಚ್ಚಿನ ರಾಜಕೀಯ ಅನುಭವ ಅಥವಾ ಆಡಳಿತದ ಜ್ಞಾನವಿತ್ತೇ? ಅಥವಾ ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಕುಟುಂಬದ ನಿಷ್ಠೆಯೇ ಅತ್ಯುನ್ನತ ಹುದ್ದೆಗೇರಲು ಪ್ರಮುಖ ಅರ್ಹತೆಯಾಗಿತ್ತೇ?

ಭಾರತದ ರಾಜಕೀಯ ಇತಿಹಾಸದಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗುವುದು ಕಷ್ಟ. ಆದರೆ ಆ ಪ್ರಶ್ನೆಗಳನ್ನು ಕೇಳುವುದೇ ತಪ್ಪಲ್ಲ. ಅಂತಹ ಪ್ರಶ್ನೆಗಳಲ್ಲಿ ಮಾಜಿ ರಾಷ್ಟ್ರಪತಿ, ಹಿರಿಯ ಕಾಂಗ್ರೆಸ್ ನಾಯಕ ಪ್ರಣಬ್ ಮುಖರ್ಜಿ ಅವರ ರಾಜಕೀಯ ಜೀವನ ಮತ್ತು ಅವರಿಗೆ ಪ್ರಧಾನಿಯಾಗುವ ಅವಕಾಶ ಸಿಗದಿರುವ ವಿಚಾರವೂ ಒಂದು. ಇತ್ತೀಚೆಗೆ ಸೋನಿಯಾ ಗಾಂಧಿ ಅವರ ಆತ್ಮಕಥನದಲ್ಲಿ ಪ್ರಣಬ್ ಮುಖರ್ಜಿ ಅವರ ಪ್ರಧಾನಿಯಾಗುವ ಮಹತ್ವಾಕಾಂಕ್ಷೆಯ ಕುರಿತು ಉಲ್ಲೇಖಿಸಿರುವ ವಿಚಾರ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಇದಕ್ಕೆ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ನೀಡಿರುವ ಪ್ರತಿಕ್ರಿಯೆಯೂ ಗಮನ ಸೆಳೆದಿದೆ.

ಒಬ್ಬ ವ್ಯಕ್ತಿ ತನ್ನ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ದೇಶದ ಪ್ರಧಾನಿಯಾಗಬೇಕೆಂದು ಬಯಸುವುದರಲ್ಲಿ ತಪ್ಪೇನಿದೆ? ಎಂಬ ಶರ್ಮಿಷ್ಠಾ ಅವರ ಪ್ರಶ್ನೆ ಸಹಜವಾಗಿಯೇ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಇದು ಕೇವಲ ತಂದೆಯ ಪರವಾಗಿ ಮಗಳೊಬ್ಬರು ನೀಡಿದ ಪ್ರತಿಕ್ರಿಯೆಯಲ್ಲ. ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷಗಳಲ್ಲಿ ಒಂದಾದ ಕಾಂಗ್ರೆಸ್‌ನ ಆಂತರಿಕ ನಾಯಕತ್ವ, ಅಧಿಕಾರದ ಹಂಚಿಕೆ, ಕುಟುಂಬ ರಾಜಕಾರಣ ಮತ್ತು ಅರ್ಹ ರಾಜಕಾರಣಿಗಳಿಗೆ ದೊರೆತ ಅವಕಾಶಗಳ ಕುರಿತಾದ ಚರ್ಚೆಯೂ ಹೌದು.

ಪ್ರಣಬ್ ಮುಖರ್ಜಿ ಯಾರು? ಅವರ ರಾಜಕೀಯ ಅನುಭವ ಎಷ್ಟಿತ್ತು?

pranab1

 

ಪ್ರಣಬ್ ಮುಖರ್ಜಿ ಎಂದರೆ ಕೇವಲ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಂಬುದಷ್ಟೇ ಅಲ್ಲ. ಅವರು ಭಾರತೀಯ ರಾಜಕಾರಣದಲ್ಲಿ ಅಪಾರ ಅನುಭವ, ಅಧ್ಯಯನಶೀಲತೆ, ಆಡಳಿತದ ಪರಿಣತಿ ಮತ್ತು ಸಂಸದೀಯ ಕಾರ್ಯವೈಖರಿಗೆ ಹೆಸರಾದ ಅಪರೂಪದ ರಾಜಕಾರಣಿ. 1935ರ ಡಿಸೆಂಬರ್ 11ರಂದು ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಮಿರಾಟಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಕಾಮದ ಕಿಂಕರ್ ಮುಖರ್ಜಿ ಮತ್ತು ರಾಜಲಕ್ಷ್ಮಿ ದಂಪತಿಯ ಪುತ್ರ. ಅವರ ತಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಲ್ಲದೆ ಕಾಂಗ್ರೆಸ್ ಪಕ್ಷದಲ್ಲಿಯೂ ಸಕ್ರಿಯರಾಗಿದ್ದರು.

ಪ್ರಣಬ್ ಮುಖರ್ಜಿ ಅವರು ಇತಿಹಾಸ ಮತ್ತು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕಾನೂನು ಪದವಿ ಪಡೆದಿದ್ದರು. ಆರಂಭದಲ್ಲಿ ಉಪನ್ಯಾಸಕರಾಗಿ ಮತ್ತು ಪತ್ರಕರ್ತರಾಗಿಯೂ ಕೆಲಸ ಮಾಡಿದ್ದರು. ನಂತರ ರಾಜಕೀಯ ಪ್ರವೇಶಿಸಿ, 1969ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಪೂರ್ಣ ಪ್ರಮಾಣದ ರಾಜಕೀಯ ಜೀವನ ಆರಂಭಿಸಿದರು. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಗಮನ ಸೆಳೆದ ಅವರು, ಕ್ರಮೇಣ ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿ ಬೆಳೆದರು.

1973ರಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಉಪ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ ಅವರು, 1982ರಲ್ಲಿ ಮೊದಲ ಬಾರಿಗೆ ದೇಶದ ಹಣಕಾಸು ಸಚಿವರಾದರು. ನಂತರ ವಾಣಿಜ್ಯ, ವಿದೇಶಾಂಗ, ರಕ್ಷಣಾ ಮತ್ತು ಹಣಕಾಸು ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದರು. 1991ರಿಂದ 1996ರವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. 2004ರಿಂದ 2012ರವರೆಗೆ ಯುಪಿಎ ಸರ್ಕಾರದಲ್ಲಿ ಹಲವು ಮಹತ್ವದ ಸಚಿವ ಖಾತೆಗಳನ್ನು ನಿರ್ವಹಿಸುವುದರ ಜೊತೆಗೆ ಲೋಕಸಭೆಯಲ್ಲಿ ಸದನದ ನಾಯಕರಾಗಿದ್ದರು.

ಅವರ ರಾಜಕೀಯ ಅನುಭವದ ವ್ಯಾಪ್ತಿ ಎಷ್ಟಿತ್ತೆಂದರೆ, ಅಂತರರಾಷ್ಟ್ರೀಯ ಹಣಕಾಸು ನಿಧಿ (IMF), ವಿಶ್ವಬ್ಯಾಂಕ್, ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಮುಂತಾದ ಸಂಸ್ಥೆಗಳ ಆಡಳಿತ ಮಂಡಳಿಗಳಲ್ಲಿಯೂ ಸೇವೆ ಸಲ್ಲಿಸಿದ್ದರು. 2004ರಿಂದ 2012ರ ಅವಧಿಯಲ್ಲಿ ಆಡಳಿತ ಸುಧಾರಣೆ, ಮಾಹಿತಿ ಹಕ್ಕು, ಉದ್ಯೋಗ ಖಾತರಿ, ಆಹಾರ ಭದ್ರತೆ, ಇಂಧನ ಭದ್ರತೆ, ದೂರಸಂಪರ್ಕ ಮತ್ತು ಮೆಟ್ರೊ ರೈಲು ಸೇರಿದಂತೆ ಹಲವು ಮಹತ್ವದ ವಿಷಯಗಳಿಗೆ ಸಂಬಂಧಿಸಿದ 95ಕ್ಕೂ ಹೆಚ್ಚು ಸಚಿವರ ಗುಂಪುಗಳ ಅಧ್ಯಕ್ಷತೆಯನ್ನು ವಹಿಸಿದ್ದರು. ಇಂತಹ ಅನುಭವ ಹೊಂದಿದ್ದ ವ್ಯಕ್ತಿಗೆ ಪ್ರಧಾನಿಯಾಗುವ ಆಸೆ ಇರುವುದು ಸಹಜವಲ್ಲವೇ?

ಸೋನಿಯಾ ಗಾಂಧಿಯವರ ಆತ್ಮಕಥನದಲ್ಲಿ ಏನಿದೆ?

pranab2

ಸೋನಿಯಾ ಗಾಂಧಿಯವರ ಇತ್ತೀಚೆಗೆ ಬಿಡುಗಡೆಯಾದ Belonging A Journey of Love ಎಂಬ ಆತ್ಮಕಥನದಲ್ಲಿ 2010ರಲ್ಲಿ ಪ್ರಣಬ್ ಮುಖರ್ಜಿ ಅವರೊಂದಿಗೆ ನಡೆದ ಒಂದು ಸಂಭಾಷಣೆಯನ್ನು ಪ್ರಸ್ತಾಪಿಸಲಾಗಿದೆ. ಆ ಸಂದರ್ಭದಲ್ಲಿ ಆಗಿನ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಅವರೊಂದಿಗೆ ಪ್ರಣಬ್ ಮುಖರ್ಜಿ ಅವರಿಗೆ ಗಂಭೀರ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. ಈ ಹಿನ್ನೆಲೆಯಲ್ಲಿ ಒಂದು ದಿನ ಸೋನಿಯಾ ಗಾಂಧಿಯವರೊಂದಿಗೆ ಮಾತನಾಡುವಾಗ, ನಾಯಕತ್ವದ ಮೇಲ್ಮಟ್ಟದಲ್ಲಿ ಬದಲಾವಣೆಯಾಗಬೇಕಾದ ಸಮಯ ಬಂದಿದೆ ಎಂಬರ್ಥದಲ್ಲಿ ಪ್ರಣಬ್ ಮುಖರ್ಜಿ ಹೇಳಿದ್ದರಂತೆ.

ಇದನ್ನು ಸೋನಿಯಾ ಗಾಂಧಿಯವರು ತಮ್ಮನ್ನು ಪ್ರಧಾನಿಯಾಗಲು ಪರೋಕ್ಷವಾಗಿ ಕೇಳಿಕೊಳ್ಳುವ ಪ್ರಯತ್ನ ಅಥವಾ ಅವರ ಬಹುಕಾಲದ ಪ್ರಧಾನಿಯಾಗುವ ಆಸೆಯ ಸೂಚನೆ ಎಂದು ಅರ್ಥೈಸಿಕೊಂಡಿದ್ದಾಗಿ ಬರೆದಿದ್ದಾರೆ. ಅವರ ಮಾತಿನಂತೆ, ಪ್ರಣಬ್ ಮುಖರ್ಜಿ ಅವರ ಈ ಸೂಚನೆ ತಮಗೆ ಅಚ್ಚರಿ ಮೂಡಿಸಿತ್ತು. ತಕ್ಷಣವೇ ಅವರು ಮಾತಿನ ವಿಷಯವನ್ನು ಬದಲಾಯಿಸಿದರಂತೆ. ಆದರೆ ಪ್ರಣಬ್ ಮುಖರ್ಜಿ ಅವರು ಇದನ್ನು ತಮ್ಮ ವಿರುದ್ಧದ ನಿರ್ಧಾರವೆಂದು ಎಂದಿಗೂ ಪರಿಗಣಿಸಲಿಲ್ಲ ಎಂದು ಸೋನಿಯಾ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಈ ಘಟನೆಯನ್ನು ಪ್ರಸ್ತಾಪಿಸುವ ಮೂಲಕ ಸೋನಿಯಾ ಗಾಂಧಿಯವರು ತಮ್ಮ ಮತ್ತು ಪ್ರಣಬ್ ಮುಖರ್ಜಿ ಅವರ ನಡುವಿನ ರಾಜಕೀಯ ಸಂಬಂಧದ ಒಂದು ಒಳನೋಟವನ್ನು ನೀಡಿದ್ದಾರೆ. ಆದರೆ ಅದೇ ವೇಳೆ, ಪ್ರಣಬ್ ಮುಖರ್ಜಿ ಅವರ ಪ್ರಧಾನಿಯಾಗುವ ಆಸೆ ಇದೀಗ ಸಾರ್ವಜನಿಕ ಚರ್ಚೆಯ ವಿಷಯವಾಗಿದೆ.

ಪ್ರಧಾನಿಯಾಗಬೇಕೆಂಬ ಆಸೆ ಅಪರಾಧವೇ? ಶರ್ಮಿಷ್ಠಾ ಮುಖರ್ಜಿ ಪ್ರಶ್ನೆ

pranab3

ತಂದೆಯ ಪ್ರಧಾನಿಯಾಗುವ ಆಸೆಯ ಕುರಿತು ಸೋನಿಯಾ ಗಾಂಧಿಯವರು ಅಚ್ಚರಿ ವ್ಯಕ್ತಪಡಿಸಿದ್ದನ್ನು ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಪ್ರಶ್ನಿಸಿದ್ದಾರೆ.  ದಶಕಗಳ ರಾಜಕೀಯ ಮತ್ತು ಆಡಳಿತದ ಅನುಭವ, ಅಪಾರ ಪರಿಶ್ರಮ ಹಾಗೂ ಅದ್ಭುತ ಬುದ್ಧಿವಂತಿಕೆಯನ್ನು ಹೊಂದಿದ್ದ ವ್ಯಕ್ತಿಯೊಬ್ಬರು ಪ್ರಧಾನಿಯಾಗಬೇಕೆಂಬ ಆಸೆ ಹೊಂದುವುದರಲ್ಲಿ ತಪ್ಪೇನಿದೆ? ಅದಕ್ಕೆ ಅಚ್ಚರಿ ಪಡುವ ಅಗತ್ಯವೇನು? ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಹೊಂದುವುದು ಅಪರಾಧವೇ?

ತಮ್ಮ ತಂದೆ ಸಾಮಾನ್ಯ ಹಿನ್ನೆಲೆಯಿಂದ ಬಂದವರು. ಯಾವುದೇ ರಾಜಕೀಯ ಕುಟುಂಬದ ಉತ್ತರಾಧಿಕಾರಿಯಾಗಿ ಅವರಿಗೆ ಅಧಿಕಾರದ ಸ್ಥಾನಗಳು ತಟ್ಟೆಯಲ್ಲಿ ಇಟ್ಟು ಕೊಟ್ಟಿರಲಿಲ್ಲ. ತಮ್ಮ ಪರಿಶ್ರಮ, ಪ್ರತಿಭೆ ಮತ್ತು ಅರ್ಹತೆಯಿಂದಲೇ ಅವರು ಹಂತ ಹಂತವಾಗಿ ಬೆಳೆದರು ಎಂದು ಶರ್ಮಿಷ್ಠಾ ಹೇಳಿದ್ದಾರೆ. ಒಮ್ಮೆ ತಾನು ತಂದೆಯನ್ನು ಪ್ರಧಾನಿಯಾಗುವ ಆಸೆ ಇದೆಯೇ ಎಂದು ಕೇಳಿದಾಗ, ಯಾವುದೇ ನಿಜವಾದ ರಾಜಕಾರಣಿಗೆ ಪ್ರಧಾನಿಯಾಗಬೇಕೆಂಬ ಆಸೆ ಇರುವುದು ಸಹಜ ಎಂಬ ಅರ್ಥದಲ್ಲಿ ಅವರು ಉತ್ತರಿಸಿದ್ದರು ಎಂದೂ ಶರ್ಮಿಷ್ಠಾ ತಿಳಿಸಿದ್ದಾರೆ.

ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ಸೋನಿಯಾ ಗಾಂಧಿಯವರು ತಮ್ಮನ್ನು ಪ್ರಧಾನಿಯಾಗುವ ಆಸೆಯ ಬಗ್ಗೆ ಪ್ರಣಬ್ ಮುಖರ್ಜಿ ಅಸಮಾಧಾನಗೊಂಡಿರಬಹುದು ಎಂದು ಭಾವಿಸಿದ್ದರೂ, ತಂದೆ ಯಾರ ಮೇಲೂ ಅಂತಹ ಅಸಮಾಧಾನ ಹೊಂದಿರಲಿಲ್ಲ ಎಂದು ಶರ್ಮಿಷ್ಠಾ ಸ್ಪಷ್ಟಪಡಿಸಿದ್ದಾರೆ. ತಂದೆ ವಾಸ್ತವಿಕ ಮನೋಭಾವದವರಾಗಿದ್ದರು. ಇತರರ ವೈಯಕ್ತಿಕ ಆತಂಕಗಳು ಮತ್ತು ರಾಜಕೀಯ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ಧರಾಗಿದ್ದರು ಎಂಬುದು ಅವರ ವಿವರಣೆ.

ಸೋನಿಯಾ ಗಾಂಧಿ ಮತ್ತು ಪ್ರಣಬ್ ಮುಖರ್ಜಿ  ಇಬ್ಬರ ನಡುವೆ ಯಾರಿಗೆ ಹೆಚ್ಚಿನ ಅನುಭವ?

pranab4

ಇಲ್ಲಿಯೇ ಈ ರಾಜಕೀಯ ಚರ್ಚೆಯ ಅತ್ಯಂತ ಮುಖ್ಯವಾದ ಪ್ರಶ್ನೆ ಎದುರಾಗುತ್ತದೆ. ಸೋನಿಯಾ ಗಾಂಧಿಯವರಿಗೆ ಪ್ರಣಬ್ ಮುಖರ್ಜಿ ಅವರಿಗಿಂತ ಹೆಚ್ಚಿನ ಆಡಳಿತಾತ್ಮಕ ಅನುಭವವಿತ್ತೇ? ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿಯವರಿಗೆ ಅವರಿಗಿಂತ ಹೆಚ್ಚಿನ ರಾಜಕೀಯ ಜ್ಞಾನವಿತ್ತೇ?

pranab5

ಸೋನಿಯಾ ಗಾಂಧಿಯವರು 1998ರಿಂದ ಕಾಂಗ್ರೆಸ್ ಅಧ್ಯಕ್ಷರಾಗಿ ದೀರ್ಘಕಾಲ ಕಾರ್ಯನಿರ್ವಹಿಸಿದ್ದಾರೆ. 1999ರಲ್ಲಿ ಲೋಕಸಭೆಗೆ ಆಯ್ಕೆಯಾದ ಅವರು ಪ್ರತಿಪಕ್ಷದ ನಾಯಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 2004ರಲ್ಲಿ ಯುಪಿಎ ಮೈತ್ರಿಕೂಟದ ಚುನಾವಣಾ ಗೆಲುವಿಗೆ ನೇತೃತ್ವ ವಹಿಸಿ, ಯುಪಿಎ ಅಧ್ಯಕ್ಷೆಯಾಗಿ ಸರ್ಕಾರದ ರಾಜಕೀಯ ಸಮನ್ವಯದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಹೀಗಾಗಿ ಸೋನಿಯಾ ಗಾಂಧಿಯವರ ರಾಜಕೀಯ ಸಂಘಟನಾ ಸಾಮರ್ಥ್ಯ, ಮೈತ್ರಿಕೂಟ ನಿರ್ವಹಣೆ ಮತ್ತು ಪಕ್ಷದ ನಾಯಕತ್ವವನ್ನು ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ ಎಂದು ಅವರ ಹಿಂಬಾಲಕರು ಹೇಳುತ್ತಾರಾದರೂ, ಆಕೆ ಕೇವಲ ಮಾಜೀ ಪ್ರಧಾನಿಯ ಸೊಸೆ, ಮತ್ತು ಮಾಜಿ ಪ್ರಧಾನಿಯ ಹೆಂಡತಿಯಾಗಿದ್ದ ಮಾತ್ರಕ್ಕೇ ಆ ರೀತಿಯ ಅಧಿಕಾರ ಪಟ್ಟ ಸಿಕ್ಕಿತ್ತೇ ಹೊರತು ಆಕೆಯ ವಯಕ್ತಿಕ ಸಾಧನೆ ಏನೂ ಇಲ್ಲಾ. ಅದೂ ಅಲ್ಲದೇ ಭಾರತದ ಸೊಸೆ ಆಗಿ ಬಂದ 15 ವರ್ಷಗಳ ನಂತರ ಅನಿವಾರ್ಯ ಕಾರಣದಿಂದಾಗಿಯೇ ಈ ದೇಶದ ನಾಗರೀಕತೆ ಸ್ವೀಕರಿಸಿದರೇ ಹೊರತು, ಆಕೆಗೆ ಭಾರತ ಮತ್ತು ಭಾರತೀಯ ಸಂಸ್ಕೃತಿಯ ಮೇಲೆ ಅಂದಿಗೂ ಇಂದಿಗೂ ಸ್ವಲ್ಪವೂ ಇಚ್ಚೆ ಇಲ್ಲ ಎನ್ನುವುದು ಆಕೆಯೇ ಅನೇಕ ಬಾರಿ ಪ್ರಕಟಿಸಿದ್ದಾರೆ.

ಆದರೆ ಪ್ರಣಬ್ ಮುಖರ್ಜಿ ಅವರ ಅನುಭವದ ಸ್ವರೂಪವೇ ಬೇರೆಯಾಗಿತ್ತು. ಅವರು ಹಣಕಾಸು, ರಕ್ಷಣಾ, ವಿದೇಶಾಂಗ ಮತ್ತು ವಾಣಿಜ್ಯ ಸಚಿವರಾಗಿ ನೇರವಾಗಿ ದೇಶದ ಆಡಳಿತದ ಜವಾಬ್ದಾರಿ ಹೊತ್ತಿದ್ದರು. ಸಂಸತ್ತಿನ ಎರಡೂ ಸದನಗಳಲ್ಲಿ ಕಾರ್ಯನಿರ್ವಹಿಸಿದ್ದರು. ದೇಶದ ಆರ್ಥಿಕ ನೀತಿಗಳು, ವಿದೇಶಾಂಗ ಸಂಬಂಧಗಳು, ಭದ್ರತಾ ನೀತಿಗಳು ಮತ್ತು ಸಂಸದೀಯ ಕಾರ್ಯವಿಧಾನಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಹೀಗಾಗಿ ಆಡಳಿತಾತ್ಮಕ ಅನುಭವ ಮತ್ತು ಸಚಿವ ಸಂಪುಟದ ಕಾರ್ಯನಿರ್ವಹಣೆಯ ದೃಷ್ಟಿಯಿಂದ ಪ್ರಣಬ್ ಮುಖರ್ಜಿ ಅವರ ದಾಖಲೆ ಅತ್ಯಂತ ಬಲಿಷ್ಠವಾಗಿತ್ತು.

ರಾಹುಲ್ ಗಾಂಧಿಯವರು 2004ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಆದರೆ ಕೇಂದ್ರ ಸಚಿವರಾಗಿ ಸರ್ಕಾರದ ಯಾವುದೇ ಪ್ರಮುಖ ಖಾತೆಯನ್ನು ನಿರ್ವಹಿಸಿದ ಅನುಭವ ಅವರಿಗಿಲ್ಲ. ಪ್ರಿಯಾಂಕಾ ಗಾಂಧಿಯವರು ದೀರ್ಘಕಾಲ ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಮತ್ತು ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೂ, 2024ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ಅವರಿಗೂ ಕೇಂದ್ರ ಸಚಿವ ಸಂಪುಟದ ಆಡಳಿತ ಅನುಭವವಿಲ್ಲ.

ಹಾಗಾದರೆ ಈ ಮೂವರಿಗೂ ಪ್ರಣಬ್ ಮುಖರ್ಜಿ ಅವರಿಗಿಂತ ಹೆಚ್ಚಿನ ಆಡಳಿತಾತ್ಮಕ ಅನುಭವವಿತ್ತು ಎಂದು ಖಂಡಿತವಾಗಿಯೂ  ಹೇಳಲು ಸಾಧ್ಯವೇ ಇಲ್ಲ. ಆದರೆ ರಾಜಕೀಯ ನಾಯಕತ್ವ, ಚುನಾವಣಾ ಸಂಘಟನೆ, ಜನಸಂಪರ್ಕ ಮತ್ತು ಆಡಳಿತ ನಿರ್ವಹಣೆ ಇವೆಲ್ಲವೂ ವಿಭಿನ್ನ ಸಾಮರ್ಥ್ಯಗಳು ಎಂಬುದನ್ನೂ ಮರೆಯಬಾರದು. ಇಲ್ಲಿ ಮುಖ್ಯವಾಗಿ ಕೇಳಬೇಕಾದ ಪ್ರಶ್ನೆ, ಕಾಂಗ್ರೆಸ್ ಪಕ್ಷದಲ್ಲಿ ಇಂತಹ ಅಪಾರ ಅನುಭವ ಹೊಂದಿದ್ದ ನಾಯಕರಿಗೆ ಅತ್ಯುನ್ನತ ನಾಯಕತ್ವದ ಅವಕಾಶಗಳು ಎಷ್ಟರಮಟ್ಟಿಗೆ ಮುಕ್ತವಾಗಿದ್ದವು ಎಂಬುದಾಗಿದೆ.

ಕಾಂಗ್ರೆಸ್ ಪಕ್ಷ ಎಂದರೆ ನೆಹರು–ಗಾಂಧಿ ಕುಟುಂಬವೇ?

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ಕಾಂಗ್ರೆಸ್ ಪಕ್ಷಕ್ಕೆ ನೆಹರು ಕುಟುಂಬದೊಂದಿಗೆ ದೀರ್ಘಕಾಲದ ರಾಜಕೀಯ ನಂಟಿದೆ. ಜವಾಹರಲಾಲ್ ನೆಹರು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾದರು. ಅವರ ಪುತ್ರಿ ಇಂದಿರಾ ಗಾಂಧಿ ಪ್ರಧಾನಿಯಾದರು. ನಂತರ ಅವರ ಪುತ್ರ ರಾಜೀವ್ ಗಾಂಧಿ ಪ್ರಧಾನಿಯಾದರು. ರಾಜೀವ್ ಗಾಂಧಿಯವರ ಹತ್ಯೆಯ ನಂತರ ಸೋನಿಯಾ ಗಾಂಧಿಯವರು ರಾಜಕೀಯದಿಂದ ದೂರ ಉಳಿದಿದ್ದರೂ, 1998ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಂಡರು. ಇಲ್ಲಿಂದ ಮುಂದೆ ಕಾಂಗ್ರೆಸ್ ಪಕ್ಷದ ರಾಜಕೀಯದಲ್ಲಿ ಗಾಂಧಿ ಕುಟುಂಬದ ಪ್ರಭಾವ ಮತ್ತಷ್ಟು ಗಟ್ಟಿಯಾಯಿತು ಕಾಂಗ್ರೆಸ್ ಪಕ್ಷದ ಒಳಗಿನ ಅಧಿಕಾರದ ಕೇಂದ್ರದಲ್ಲಿ ಈ ಕುಟುಂಬದ ಪ್ರಭಾವ ದೀರ್ಘಕಾಲ ಮುಂದುವರಿದಿದೆ ಎಂಬ ರಾಜಕೀಯ ಟೀಕೆ ಮಾತ್ರ ನಿರ್ಲಕ್ಷಿಸಲಾಗದ ಸಂಗತಿ..

2004ರಲ್ಲಿ ಏನಾಯಿತು? ಪ್ರಧಾನಿಯಾಗುವ ಅವಕಾಶ ಪ್ರಣಬ್ ಮುಖರ್ಜಿ ಅವರಿಗೆ ಸಿಗಬಹುದಿತ್ತೇ?

pranab6

2004ರ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೇ ಇದ್ದಾಗ, ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಪರವಾಗಿ ಪ್ರಧಾನಿ ಪಟ್ಟಕ್ಕೇರಲು ಇದೇ ಸೋನಿಯಾ ಗಾಂಧಿಯವರೇ ಅಂದಿನ ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ಅವರ ರಾಷ್ಟ್ರಪತಿ ಭವನಕ್ಕೆ ಎಡತಾಕಿದ್ದನ್ನು ಯಾರೂ ಮರೆಯಲಾಗದು.

ಯಾವಾಗ ಸೋನಿಯಾ ಸ್ವಇಚ್ಚೆಯಿಂದ ಪ್ರಧಾನಿಯಾಗಲು ಬಯಸಿದರೂ, ಗುಲಾಮಿ ಪದ್ದತಿಯ ಕಾಂಗ್ರೆಸ್ ಸಂಸದೀಯ ನಾಯಕರೂ ಅದಕ್ಕೆ ಮರುಮಾತನಾಡದೇ, ಅವರನ್ನೇ ತನ್ನ ಪ್ರಧಾನಿ ಪಟ್ಟಕ್ಕೆ ಆಯ್ಕೆ ಮಾಡಿತ್ತು. ಆದರೆ ಸುಬ್ರಹ್ಮಣ್ಯ ಸ್ವಾಮಿಯವರು ಸೂಕ್ತ ಸಮಯದಲ್ಲಿ ಕಲಾಂ ಅವರನ್ನು ಭೇಟಿಯಾಗಿ ಒಬ್ಬ ವಿದೇಶೀ ಸಂಜಾತೆ ಹೇಗೇ ಮತ್ತು ಏಕೆ ಸಾಂವಿಧಾನಾತ್ಮಕವಾಗಿ ಭಾರತದ ಪ್ರಧಾನಿ ಆಗಲು ಸಾಧ್ಯವಿಲ್ಲಾ ಎಂದು ಹೇಳಿದ್ದನ್ನಷ್ಟೇ ಕೇಳದೇ, ಅದನ್ನು ಇತರೇ ಕಾನೂನು ಪಂಡಿತರ ಅಭಿಪ್ರಾಯ ಪಡೆದು, ಸೋನಿಯಾಗಾಂಧಿ ಪ್ರಧಾನಿ ಆಗಲು ಸಾಧ್ಯವಿಲ್ಲಾ ಎಂದು ಕಲಾಂ ಅವರೇ ವಯಕ್ತಿಕವಾಗಿ ಸೋನಿಯಾ ಗಾಂಧಿಯವರಿಗೆ ತಿಳಿಸಿದಾಗ, ಅಂದು ಎಲ್ಲಾ ಸಾಂಸದರ ಸಹಿ ಹಾಕಿದ್ದ ಪತ್ರವನ್ನು ಹಿಡಿದುಕೊಂಡು ಹೋಗಿದ್ದ ಸೋನಿಯಾ ಇದ್ದಕ್ಕಿದ್ದಂತೆಯೇ ತಮ್ಮ ವರಸೇ ಬದಲಿಸಿ ತಾವೊಬ್ಬ ತ್ಯಾಗಮಯಿ ಎಂದು ತೋರಿಸಿಕೊಳ್ಳುವ ಸಲುವಾಗಿ, ತಾವೇ ಸ್ವಚ್ಚೆಯಿಂದ ಪ್ರಧಾನಮಂತ್ರಿ ಹುದ್ದೆಯನ್ನು ನಿರಾಕರಿಸಿ, ನರಸಿಂಹ ರಾವ್ ಮಂತ್ರಿಮಂಡಲದಲ್ಲಿ ಹಣಕಾಸು ಮಂತ್ರಿಯಾಗಿದ್ದ ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ತಾವು ಮತ್ತು ತಮ್ಮ ಕುಟುಂಬದವರು ಹೇಳುವ ಮಾತನ್ನು ಚಾಚೂ ತಪ್ಪದೇ ಪಾಲಿಸುವ ರಬ್ಬರ್ ಸ್ಟಾಂಪ್ ಆಗಿ ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದ್ದನ್ನೂ ಈ ದೇಶ ಎಂದಿಗೂ ಮರೆಯಲಾಗದು.

ಇದು ಸಂಪೂರ್ಣವಾಗಿ ಸೋನಿಯಾ ಕುಟುಂಬದ ವೈಯಕ್ತಿಕ ನಿರ್ಧಾರವಗಿತ್ತೇ ಹೊರತು ಅದು ಯಾವುದೇ ರಾಜಕೀಯ ಅಥವಾ ಮೈತ್ರಿಕೂಟದ ಲೆಕ್ಕಾಚಾರವಿರಲಿಲ್ಲ. ಆ ಸಂದರ್ಭದಲ್ಲಿ ನಿಸ್ಸಂದೇಹವಾಗಿ ಮನಮೋಹನ್ ಸಿಂಗ್ ಅವರಿಗಿಂತಲೂ ಪ್ರಣಬ್ ಮುಖರ್ಜಿ ಕಾಂಗ್ರೆಸ್‌ನ ಅತ್ಯಂತ ಹಿರಿಯ ಮತ್ತು ಅನುಭವಿ ನಾಯಕರಾಗಿದ್ದರು ಮತ್ತು ಅವರಿಗೆ ಪ್ರಧಾನಿಯಾಗುವ ಎಲ್ಲಾ ಅರ್ಹತೆ ಇತ್ತು.

pranab7

ಡಾ. ಮನಮೋಹನ್ ಸಿಂಗ್ ಅವರ ಆರ್ಥಿಕ ತಜ್ಞತೆ, ಆಡಳಿತ ಅನುಭವ ಮತ್ತು ಸ್ವಚ್ಛ ವ್ಯಕ್ತಿತ್ವವನ್ನು ಗಮನಿಸಿದರೆ ಅವರ ಆಯ್ಕೆಯೂ ಸಮರ್ಥನೀಯವಾಗಿತ್ತು ಮತ್ತು ಅವರ ನೇತೃತ್ವದಲ್ಲಿ ಯುಪಿಎ ಸರ್ಕಾರ ಹತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸಿತು ಎಂದು ಕಾಂಗ್ರೇಸ್ಸಿಗರು ಹೇಳುತ್ತಾರಾದರೂ, ಮನಮೋಹನ್ ಸಿಂಗ್ ಅವರು ಸ್ವತಂತ್ರವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಅಸಮರ್ಥರಾಗಿದ್ದಲ್ಲದೇ, ಸೋನಿಯಾಗಾಂಧಿ ಮತ್ತು ಆವರ ಕುಟುಂಬವೇ ಹಿಂಬಾಗಿಲಿನಿಂದ ಅಧಿಕಾರ ನಡೆಸಿದ್ದನ್ನೂ ಈ ದೇಶದ ಜನರು ನೋಡಿದ್ದಾರೆ.

ಪಕ್ಷ ಸಂಘಟನೆ, ರಾಜಕೀಯದ ಮತ್ತು ಅಧಿಕಾರದ ಅನುಭವ ನೋಡಿದ್ದಲ್ಲಿ ಖಂಡಿತವಾಗಿಯೂ ಪ್ರಣಬ್ ಮುಖರ್ಜಿ ಅವರಂತಹ ಅನುಭವಿ ನಾಯಕರು ಮನಮೋಹನ್ ಸಿಂಗ್ ಅವರಿಗಿಂತಲೂ ಪ್ರಧಾನಮಂತ್ರಿ ಹುದ್ದೆಗೆ ಅರ್ಹರಾಗಿದ್ದರು. ಆದರೆ ಪ್ರಣಬ್ ಮುಖರ್ಜಿಯವರು ಎಂದಿಗೂ ಇಂದಿರಾ ಕುಟುಂಬದ ಗುಲಾಮರಾಗಿರಲಿಲ್ಲ ಎನ್ನುವುದಕ್ಕೆ 1986 ರ ಏಪ್ರಿಲ್ 24 ರಂದು ಆಗಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿಯವರೊಂದಿಗೆ ಭಿನ್ನಾಭಿಪ್ರಾಯ ಇದ್ದ ಕಾರಣ, ಪ್ರಣಬ್ ಮುಖರ್ಜಿ ಅವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಕಾಲ ಹೊರಹಾಕಲಾಗಿತ್ತು.

ಆದೇ ಸಮಯದಲ್ಲೇ ಪ್ರಣಬ್ ಮುಖರ್ಜಿ ಅವರು ತಮ್ಮದೇ ಆದ ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದರೂ ನಂತರ ಅದೇ ರಾಜೀವ್ ಗಾಂಧಿ ಪ್ರಣಬ್ ಅವರೊಂದಿಗೆ ರಾಜಿ ಮಾಡಿಕೊಂಡು 1989 ರಲ್ಲಿ ಪಕ್ಷಕ್ಕೆ ಕರೆದುಕೊಂಡಿದ್ದರು. ಹೀಗೆ ಪ್ರಣಬ್ ಮುಖರ್ಜಿ ಎಂದಿಗೂ ತಮ್ಮ ಮಾತನ್ನು ಕೇಳುವವರಲ್ಲಾ ಎಂಬುದನ್ನು ಅರಿತಿದ್ದ ಸೋನಿಯಾ ಕುಟುಂಬ ಹಿಂದೆ ಬಂದರೆ ಹಾಯ ಬೇಡಿ ಮುಂದೆ ಬಂದರೆ ಒದೆಯ ಬೇಡಿ ಎನ್ನುವಂತಹ ಸಾಧು ಪ್ರಾಣಿ ಮನಮೋಹನ್ ಸಿಂಗ್ ಆವರನ್ನು ಆಯ್ಕೆ ಮಾಡುವ ಮೂಲಕ ನೆಹರು ನಂತರ ನಮ್ಮ ದೇಶದ elected prime minister ಗಿಂತ selected prime minister ಆಗಿದ್ದು ನಿಜಕ್ಕೂ ದುರ್ದೈವ

2010ರ ಸಂಭಾಷಣೆ ಮತ್ತು 2012ರ ರಾಷ್ಟ್ರಪತಿ ಸ್ಥಾನ

pranab8

ಪ್ರಣಬ್ ಮುಖರ್ಜಿ ಅವರ ಬದಲಾಗಿ ತಮ್ಮ ರಬ್ಬರ್ ಸ್ಟಾಂಪ್ ಮನಮೋಹನ್ ಸಿಂಗ್ ಆವರನ್ನು ಎರೆಡೆರಡು ಬಾರಿ ಪ್ರಧಾನಿಯಾಗಿ ಸೋನಿಯಾ ಆಯ್ಕೆ ಮಾಡಿದ್ದನ್ನು ವಿರೋಧ ಪಕ್ಷಗಳು ವಿರೋಧಿಸಿ ಥೂ! ಛೀ! ಎಂದು ಆಡಿಕೊಳ್ಳುತ್ತಿದ್ದನ್ನು ಅಲ್ಪ ಮಟ್ಟಿಗೆ ತಡೆಯುವ ಸಲುವಾಗಿ 2012ರಲ್ಲಿ ಇದೇ ಸೋನಿಯಾ ನೇತೃತ್ವದ ಯುಪಿಎ ಸರ್ಕಾರ ಪ್ರಣಬ್ ಮುಖರ್ಜಿ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿ ಋಣ ಸಂದಾಯ ಮಾಡಿತು. 2012ರ ಜುಲೈ 25ರಂದು ಭಾರತದ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಪ್ರಣಬ್ ಮುಖರ್ಜಿ ಅವರು 2017ರವರೆಗೆ ದೇಶದ ಪ್ರಥಮ ಪ್ರಜೆಯಾಗಿ ಸೇವೆ ಸಲ್ಲಿಸಿದರು.

2019ರಲ್ಲಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ನೀಡಿ ಗೌರವಿಸಲಾಯಿತು. ಇದಕ್ಕೂ ಮೊದಲು 2008ರಲ್ಲಿ ಪದ್ಮವಿಭೂಷಣ, 1997ರಲ್ಲಿ ಅತ್ಯುತ್ತಮ ಸಂಸದ ಪ್ರಶಸ್ತಿ ಮತ್ತು 2011ರಲ್ಲಿ ಅತ್ಯುತ್ತಮ ಆಡಳಿತಗಾರ ಪ್ರಶಸ್ತಿಯೂ ಅವರಿಗೆ ಸಂದಿದ್ದವು. ಪ್ರಣಬ್ ಮುಖರ್ಜಿ ಅವರ ಸಾಧನೆಗಳು ಯಾವುದೇ ಒಂದು ಪಕ್ಷದ ರಾಜಕೀಯ ಮಿತಿಯನ್ನು ಮೀರಿದವು ಎಂಬುದಕ್ಕೆ ಈ ಗೌರವಗಳೇ ಸಾಕ್ಷಿ.

ಪ್ರಣಬ್ ಮುಖರ್ಜಿ ಪ್ರಧಾನಿಯಾಗಿದ್ದರೆ ಭಾರತದ ರಾಜಕೀಯ ಹೇಗಿರುತ್ತಿತ್ತು?

ಇದು ಸಹಜವಾಗಿಯೇ ಮೂಡುವ ಕಾಲ್ಪನಿಕ ಪ್ರಶ್ನೆ. ಪ್ರಣಬ್ ಮುಖರ್ಜಿ ಅವರು ಪ್ರಧಾನಿಯಾಗಿದ್ದರೆ ಭಾರತದ ಆರ್ಥಿಕ ನೀತಿಗಳು, ವಿದೇಶಾಂಗ ಸಂಬಂಧಗಳು, ಆಡಳಿತ ವ್ಯವಸ್ಥೆ ಮತ್ತು ಸಂಸತ್ತಿನ ಕಾರ್ಯನಿರ್ವಹಣೆ ಹೇಗಿರುತ್ತಿತ್ತು ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಅವರ ಅಪಾರ ಸಂಸದೀಯ ಅನುಭವ, ವಿವಿಧ ಪಕ್ಷಗಳ ನಾಯಕರೊಂದಿಗೆ ಹೊಂದಿದ್ದ ಉತ್ತಮ ಸಂಬಂಧ, ಮೈತ್ರಿಕೂಟಗಳನ್ನು ನಿರ್ವಹಿಸುವ ಸಾಮರ್ಥ್ಯ ಮತ್ತು ಆಡಳಿತಾತ್ಮಕ ಪರಿಣತಿ ಅವರನ್ನು ಸಮರ್ಥ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದವು ಎಂಬುದರಲ್ಲಿ ಎರಡು ಮಾತಿಲ್ಲ.

ಅವರು ರಾಜಕೀಯದಲ್ಲಿ ಕೇವಲ ಅಧಿಕಾರಕ್ಕಾಗಿ ಬದುಕಿದವರಲ್ಲ. ಪಕ್ಷದ ಕಷ್ಟದ ಸಂದರ್ಭಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ನಾಯಕ, ಮೈತ್ರಿಕೂಟದ ನಾಯಕರೊಂದಿಗೆ ಮಾತುಕತೆ ನಡೆಸುವ ಸಂಧಾನಕಾರ ಮತ್ತು ಸಂಸತ್ತಿನ ಕಾರ್ಯವಿಧಾನಗಳನ್ನು ಆಳವಾಗಿ ತಿಳಿದಿದ್ದ ಸಂಸದೀಯ ಪಟು ಎಂಬ ಹೆಗ್ಗಳಿಕೆ ಹೊಂದಿದ್ದರು. ಅವರನ್ನು ಹಲವರು ಭಾರತ ಕಂಡ ಅತ್ಯುತ್ತಮ ಪ್ರಧಾನಿಯಾಗಬಹುದಾಗಿದ್ದ ವ್ಯಕ್ತಿಗಳಲ್ಲಿ ಒಬ್ಬರು ಎಂದು ಬಣ್ಣಿಸಿರುವುದೂ ಇದೇ ಕಾರಣಕ್ಕೆ.

ಕಾಂಗ್ರೆಸ್‌ಗೆ ಕುಟುಂಬಕ್ಕಿಂತ ಅರ್ಹತೆ ಮುಖ್ಯವಾಗಬೇಕಿರಲಿಲ್ಲವೇ?

ಪ್ರಜಾಪ್ರಭುತ್ವದಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೆ ತನ್ನ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಅದೇ ರೀತಿ ಆ ಪಕ್ಷದ ಸದಸ್ಯರು ಮತ್ತು ಕಾರ್ಯಕರ್ತರಿಗೆ ನಾಯಕತ್ವದ ಆಯ್ಕೆಯ ಕುರಿತು ಪ್ರಶ್ನಿಸುವ ಹಕ್ಕೂ ಇದೆ. ಒಂದು ಪಕ್ಷದಲ್ಲಿ ಕುಟುಂಬದ ಸದಸ್ಯರು ನಾಯಕತ್ವ ವಹಿಸಿಕೊಳ್ಳುವುದೇ ತಪ್ಪು ಎಂದು ಹೇಳಲಾಗದು. ಆದರೆ ಕುಟುಂಬದ ಹಿನ್ನೆಲೆಯೊಂದೇ ಅತ್ಯುನ್ನತ ಸ್ಥಾನಕ್ಕೆ ಏರಲು ಮುಖ್ಯ ಅರ್ಹತೆಯಾಗಬಾರದು.

ಒಬ್ಬ ವ್ಯಕ್ತಿಯ ರಾಜಕೀಯ ಅನುಭವ, ಜನರೊಂದಿಗಿನ ಸಂಪರ್ಕ, ಆಡಳಿತದ ಪರಿಣತಿ, ಪ್ರಾಮಾಣಿಕತೆ, ನಾಯಕತ್ವದ ಗುಣ ಮತ್ತು ದೇಶದ ಹಿತಾಸಕ್ತಿಯನ್ನು ಕಾಪಾಡುವ ಸಾಮರ್ಥ್ಯವೇ ಮುಖ್ಯವಾಗಬೇಕು. ಪ್ರಣಬ್ ಮುಖರ್ಜಿ ಅವರ ವಿಚಾರದಲ್ಲಿ ಚರ್ಚೆಯಾಗಬೇಕಾದದ್ದು ಇದೇ.

ದೇಶದ ಹಣಕಾಸು ಸಚಿವರಾಗಿದ್ದವರು, ರಕ್ಷಣಾ ಸಚಿವರಾಗಿದ್ದವರು, ವಿದೇಶಾಂಗ ಸಚಿವರಾಗಿದ್ದವರು, ಸಂಸತ್ತಿನ ಎರಡೂ ಸದನಗಳಲ್ಲಿ ಸೇವೆ ಸಲ್ಲಿಸಿದ್ದವರು, ಐದು ದಶಕಗಳಿಗೂ ಹೆಚ್ಚು ರಾಜಕೀಯ ಅನುಭವ ಹೊಂದಿದ್ದವರು ಪ್ರಧಾನಿಯಾಗುವ ಆಸೆ ವ್ಯಕ್ತಪಡಿಸಿದರೆ ಅದರಲ್ಲಿ ಅಚ್ಚರಿಪಡುವಂತಹದ್ದೇನಿದೆ? ಅವರ ಆಸೆಯನ್ನು ಗೌರವಿಸುವ ಬದಲು ಅದನ್ನು ಅಚ್ಚರಿಯ ಸಂಗತಿಯೆಂದು ಬಣ್ಣಿಸುವುದೇ ಚರ್ಚೆಗೆ ಕಾರಣವಾಗಿದೆ.

ಕೊನೆಯ ಮಾತು. ಪ್ರಧಾನಮಂತ್ರಿ ಹುದ್ದೆ ಯಾರೊಬ್ಬರ ಕುಟುಂಬದ ಸ್ವತ್ತಲ್ಲ!

ಭಾರತದ ಪ್ರಧಾನಮಂತ್ರಿ ಹುದ್ದೆ ಯಾವುದೇ ರಾಜಕೀಯ ಕುಟುಂಬದ ಸ್ವತ್ತಲ್ಲ. ಅದು ದೇಶದ ಜನರು ನೀಡುವ ಜನಾದೇಶ ಮತ್ತು ಸಂಸತ್ತಿನ ಬಹುಮತದ ಬೆಂಬಲದ ಮೂಲಕ ದೊರೆಯುವ ಸಾಂವಿಧಾನಿಕ ಜವಾಬ್ದಾರಿ.

ನೆಹರು ಕುಟುಂಬದವರು ಪ್ರಧಾನಿಯಾಗಿದ್ದರೂ, ಅವರ ನಂತರವೂ ಅನೇಕ ಅರ್ಹ ನಾಯಕರು ದೇಶವನ್ನು ಮುನ್ನಡೆಸಿದ್ದಾರೆ. ಹಾಗಿರುವಾಗ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಕುಟುಂಬದ ಪ್ರಭಾವದ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಆ ಪಕ್ಷವೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪ್ರಣಬ್ ಮುಖರ್ಜಿ ಅವರಂತಹ ಅನುಭವಿ ನಾಯಕನಿಗೆ ಪ್ರಧಾನಿಯಾಗುವ ಅವಕಾಶ ಸಿಗದಿರುವುದು ಭಾರತೀಯ ರಾಜಕೀಯದ ಒಂದು ಗಮನಾರ್ಹ ಅಧ್ಯಾಯ. ಸೋನಿಯಾ ಗಾಂಧಿಯವರ ಆತ್ಮಕಥನದ ಈ ಬಹಿರಂಗದ ನಂತರ ಆ ಅಧ್ಯಾಯ ಮತ್ತೊಮ್ಮೆ ಚರ್ಚೆಗೆ ಬಂದಿದೆ.

ಸೋನಿಯಾ ಗಾಂಧಿಯವರಿಗೆ ಪ್ರಣಬ್ ಮುಖರ್ಜಿ ಅವರ ಆಡಳಿತಾತ್ಮಕ ಅನುಭವವಿತ್ತೇ? ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರಿಗೆ ಅವರಿಗಿಂತ ಹೆಚ್ಚಿನ ರಾಜಕೀಯ ಪರಿಣತಿ ಇತ್ತೇ? ಅಥವಾ ಗಾಂಧಿ ಕುಟುಂಬದ ರಾಜಕೀಯ ಪ್ರಭಾವವೇ ಕಾಂಗ್ರೆಸ್‌ನಲ್ಲಿ ನಿರ್ಣಾಯಕವಾಗಿತ್ತೇ? ಈ ಪ್ರಶ್ನೆಗಳಿಗೆ ಉತ್ತರ ನೀಡಬೇಕಾದವರು ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು.

ಪ್ರಣಬ್ ಮುಖರ್ಜಿ ಅವರು ಪ್ರಧಾನಿಯಾಗಲಿಲ್ಲ ಎಂಬುದು ಅವರ ವೈಫಲ್ಯವಲ್ಲ. ಐದು ದಶಕಗಳ ಸಾರ್ವಜನಿಕ ಜೀವನದಲ್ಲಿ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿ, ಭಾರತ ರತ್ನ ಗೌರವ ಪಡೆದದ್ದು ಅವರ ಸಾಧನೆಯ ಎತ್ತರವನ್ನು ತೋರಿಸುತ್ತದೆ. ಆದರೆ ಇಂತಹ ಸಮರ್ಥ ನಾಯಕನಿಗೆ ಪ್ರಧಾನಿಯಾಗುವ ಅವಕಾಶ ದೊರೆತಿದ್ದರೆ ದೇಶದ ಆಡಳಿತಕ್ಕೆ ಮತ್ತೊಂದು ರೀತಿಯ ಅನುಭವ ದೊರೆಯುತ್ತಿತ್ತೇ ಎಂಬ ಪ್ರಶ್ನೆ ಮಾತ್ರ ಇತಿಹಾಸದ ಪುಟಗಳಲ್ಲಿ ಉಳಿಯುತ್ತದೆ. ಪ್ರಜಾಪ್ರಭುತ್ವದಲ್ಲಿ ವಂಶಕ್ಕಿಂತ ಅರ್ಹತೆ, ನಿಷ್ಠೆಗಿಂತ ಸಾಮರ್ಥ್ಯ ಮತ್ತು ಕುಟುಂಬಕ್ಕಿಂತ ದೇಶದ ಹಿತಾಸಕ್ತಿ ಮುಖ್ಯವಾಗಬೇಕಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ