ರೇಡಿಯೋ ಜಾಕಿಯಿಂದ ಹಾಸ್ಯ ಕಲಾವಿದೆ, ನಟಿ, ನಿರೂಪಕಿ ಮತ್ತು ಡಿಜಿಟಲ್ ಸ್ಟಾರ್ ಆಗಿ ಬೆಳೆದ ಶ್ರದ್ಧಾ ಜೈನ್ ಅವರ ಆಸಕ್ತಿದಾಯಕ ಜೀವನಗಾಥೆ
ಕೆಲವೊಮ್ಮೆ ಜೀವನದಲ್ಲಿ ನಾವು ಊಹಿಸದ ಭಾಷೆಯೇ ನಮ್ಮ ಬದುಕಿನ ದಾರಿಯಾಗುತ್ತದೆ. ನಮಗೆ ಪರಿಚಯವೇ ಇಲ್ಲದ ಕ್ಷೇತ್ರವೊಂದು ನಮ್ಮನ್ನು ಕೈಹಿಡಿದು ಮುನ್ನಡೆಸುತ್ತದೆ. ಯಾವುದೇ ಪೂರ್ವಸಿದ್ಧತೆ ಇಲ್ಲದೆ ಆರಂಭಿಸಿದ ಕೆಲಸವೇ ನಮ್ಮ ಗುರುತಾಗುತ್ತದೆ. ಇದಕ್ಕೆ ಅತ್ಯಂತ ಆಸಕ್ತಿದಾಯಕ ಉದಾಹರಣೆ ಎಂದರೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನರನ್ನು ನಗಿಸುತ್ತಿರುವ ಅಯ್ಯೋ ಶ್ರದ್ಧಾ (Aiyyo Shraddha) ಎಂದೇ ಜನಪ್ರಿಯರಾಗಿರುವ ಶ್ರದ್ಧಾ ಜೈನ್.

ಒಂದು ಕಾಲದಲ್ಲಿ ಕನ್ನಡದ ಒಂದೇ ಒಂದು ಅಕ್ಷರವನ್ನೂ ಓದಲು, ಮಾತನಾಡಲು ಬಾರದಿದ್ದ ಶ್ರದ್ಧಾ, ಇಂದು ಕನ್ನಡದಲ್ಲಿಯೇ ತಮ್ಮದೇ ಆದ ಹಾಸ್ಯ ಪ್ರಪಂಚವನ್ನು ಸೃಷ್ಟಿಸಿದ್ದಾರೆ. ಕನ್ನಡದ ಜನಜೀವನ, ಮಧ್ಯಮ ವರ್ಗದ ಕುಟುಂಬಗಳ ಮನೋಭಾವ, ಅತ್ತೆ-ಸೊಸೆ ಸಂಬಂಧ, ಅಕ್ಕಪಕ್ಕದ ಮನೆಯವರ ಮಾತುಕತೆ, ಕಚೇರಿಯ ರಾಜಕೀಯ, ಅಪಾರ್ಟ್ಮೆಂಟ್ಗಳ ಜಗಳ, ಮದುವೆ ಮನೆಗಳ ಗಾಸಿಪ್ ಹೀಗೆ ನಮ್ಮ ದಿನನಿತ್ಯದ ಬದುಕಿನ ಸಣ್ಣಪುಟ್ಟ ಘಟನೆಗಳನ್ನೇ ಹಾಸ್ಯದ ವಸ್ತುವನ್ನಾಗಿಸಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಅವರ ವಿಡಿಯೋಗಳನ್ನು ನೋಡಿದಾಗ, ಅಯ್ಯೋ! ನಮ್ಮ ಮನೆಯಲ್ಲೂ ಹೀಗೆಯೇ ನಡೆಯುತ್ತದಲ್ಲಾ, ನಮ್ಮ ಅಕ್ಕಪಕ್ಕದ ಮನೆಯವರೂ ಹೀಗೆಯೇ ಮಾತನಾಡುತ್ತಾರಲ್ಲಾ, ನಮ್ಮ ಆಫೀಸಿನಲ್ಲೂ ಇಂತಹವರೇ ಇದ್ದಾರಲ್ಲಾ ಎಂದು ಅನಿಸದಿರದು!
ಆದರೆ ಈ ನಗುವಿನ ಹಿಂದಿರುವ ಅವರ ಜೀವನದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಮುಂಬೈನಲ್ಲಿ ಬೆಳೆದ ತುಳುನಾಡಿನ ಕುಟುಂಬದ ಹುಡುಗಿ, ಇಂಜಿನಿಯರಿಂಗ್ ಪದವೀಧರೆ, ಸಾಫ್ಟ್ವೇರ್ ಉದ್ಯೋಗಿ, ರೇಡಿಯೋ ಜಾಕಿ, ಕಿರುತೆರೆ ನಿರೂಪಕಿ, ಕಾರ್ಯಕ್ರಮಗಳ ಸೃಜನಶೀಲ ನಿರ್ದೇಶಕಿ, ವೆಬ್ಸೀರೀಸ್ ನಟಿ, ಸ್ಟ್ಯಾಂಡ್ಅಪ್ ಕಾಮಿಡಿಯನ್ ಮತ್ತು ಸಾಮಾಜಿಕ ಜಾಲತಾಣದ ಜನಪ್ರಿಯ ಕಲಾವಿದೆಯಾಗಿ ಬೆಳೆದಿರುವುದು ನಿಜಕ್ಕೂ ಕುತೂಹಲಕಾರಿ. ಹಾಗಾದರೆ ಯಾರು ಈ ಶ್ರದ್ಧಾ ಜೈನ್? ಅವರ ಜನನ, ಬಾಲ್ಯ, ಕುಟುಂಬ, ಶಿಕ್ಷಣ, ಕನ್ನಡ ಕಲಿತ ರೋಚಕ ಕಥೆ ಮತ್ತು ವಿವಿಧ ಮಾಧ್ಯಮಗಳಲ್ಲಿ ಅವರು ಸಾಧಿಸಿದ ಯಶಸ್ಸಿನ ಹಿಂದಿನ ಪರಿಶ್ರಮವೇನು? ಎಂಬೆಲ್ಲಾ ಕುತೂಹಲಕಾರಿ ಸಂಗತಿಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
ತುಳುನಾಡಿನ ಮೂಲ, ಮುಂಬೈನಲ್ಲಿ ಜನನ ಮತ್ತು ಬಾಲ್ಯ
ಶ್ರದ್ಧಾ ಜೈನ್ ಅವರ ಕುಟುಂಬದ ಮೂಲ ದಕ್ಷಿಣ ಕನ್ನಡ ಜಿಲ್ಲೆಯ ತುಳುನಾಡು. ತಂದೆ ವರ್ಧಮಾನ್ ಜೈನ್ ಅವರು ನೆಲ್ಲಿಕಾರ್ ಮೂಲದವರು. ತಾಯಿ ಸುಶೀಲ ಅವರು ಕಾರ್ಕಳದ ನಿಟ್ಟೆ ಮೂಲದವರು. ತಂದೆ-ತಾಯಿ ಉದ್ಯೋಗ ಮತ್ತು ಕುಟುಂಬದ ಬದುಕಿನ ಹಿನ್ನೆಲೆಯಲ್ಲಿ ಶ್ರದ್ಧಾ ಅವರು ಮುಂಬೈನಲ್ಲಿ ಹುಟ್ಟಿ ಬೆಳೆದು ಶಿಕ್ಷಣ ಪಡೆದರು. ಅವರ ತಂದೆ ವರ್ಧಮಾನ್ ಜೈನ್ ಅವರು ಎಸ್. ಕುಮಾರ್ ಸೂಟಿಂಗ್ಸ್ ಆಂಡ್ ಶರ್ಟಿಂಗ್ಸ್ ಸಂಸ್ಥೆಯ ಲೆಕ್ಕಪತ್ರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಸುಶೀಲ ಅವರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಶ್ರದ್ಧಾ ಅವರಿಗೆ ಅಪೇಕ್ಷಾ ಎಂಬ ತಂಗಿಯೂ ಇದ್ದಾರೆ. ಅವರು ಖಾಸಗಿ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾರೆ.





