ದೀಪಾವಳಿ ಎಂದಾಕ್ಷಣ ನಮಗೆ ನೆನಪಾಗುವುದು ಸಾಲು ಸಾಲು ಹಣತೆಗಳು, ಬಣ್ಣಬಣ್ಣದ ರಂಗೋಲಿ, ಪಟಾಕಿಗಳ ಸದ್ದು, ಸಿಹಿತಿಂಡಿಗಳ ಸಂಭ್ರಮ, ಲಕ್ಷ್ಮೀಪೂಜೆ, ಬಲಿಪಾಡ್ಯಮಿ ಮತ್ತು ದೀಪಗಳ ಅಲಂಕಾರ. ಆದರೆ ನಮ್ಮ ಕರ್ನಾಟಕದ ವಿವಿಧ ಭಾಗಗಳಲ್ಲಿ ದೀಪಾವಳಿಯನ್ನು ಆಚರಿಸುವ ರೀತಿ ಒಂದೇ ರೀತಿಯಾಗಿಲ್ಲ. ಆಯಾ ಪ್ರದೇಶದ ಸಂಸ್ಕೃತಿ, ಸಂಪ್ರದಾಯ, ಜನಜೀವನ ಮತ್ತು ಸ್ಥಳೀಯ ನಂಬಿಕೆಗಳಿಗೆ ಅನುಗುಣವಾಗಿ ಹಬ್ಬದ ಆಚರಣೆಯೂ ವಿಭಿನ್ನವಾಗಿರುತ್ತದೆ. ನಮ್ಮ ಹಳೇ ಮೈಸೂರಿನ ಕಡೆ ಆಶ್ವಯುಜ, ಬಹುಳ, ತ್ರಯೋದದಶಿಯಿಂದ ಆರಂಭವಾಗಿ ಕಾರ್ತೀಕ ಶುಕ್ಲ ಬಿದಿಗೆಯವರೆಗೂ ಐದು ದಿನಗಳವರೆಗೂ ದೀಪವಳಿಯನ್ನು ಆಚರಿಸಲಾಗುತ್ತದೆ.
ಮಲೆನಾಡು ಅದರಲ್ಲೂ ಶಿವಮೊಗ್ಗ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ ಮತ್ತು ಉತ್ತರ ಕನ್ನಡದ ಕೆಲವು ಭಾಗಗಳಲ್ಲಿನ ರೈತಾಪಿ ಸಮುದಾಯಗಳಲ್ಲಿ ಅಪರೂಪದ ಮತ್ತು ಅರ್ಥಪೂರ್ಣ ಜನಪದ ಆಚರಣೆಗಳಲ್ಲಿ ಮಲೆನಾಡಿನ ‘ಅಂಟಿಗೆ–ಪಂಟಿಗೆ’ ಕೂಡ ಒಂದು. ದೀಪಾವಳಿಯ ಸಂದರ್ಭದಲ್ಲಿ ಮೂರು ದಿನಗಳ ಕಾಲ ಹಗಲು–ರಾತ್ರಿ ಎನ್ನದೆ ಕೈಯಲ್ಲಿ ಉರಿಯುವ ದೀವಟಿಗೆ ಹಿಡಿದು, ಊರಿನ ಮನೆಮನೆಗೆ ತೆರಳಿ ಜಾನಪದ ಗೀತೆಗಳನ್ನು ಹಾಡುತ್ತಾ, ಪ್ರತಿಯೊಬ್ಬರ ಮನೆಯಲ್ಲೂ ಬೆಳಕನ್ನು ಹಚ್ಚುವ ಈ ಸಂಪ್ರದಾಯವನ್ನು ನೋಡಿದರೆ ನಮ್ಮ ಪೂರ್ವಜರ ಸಾಮಾಜಿಕ ಕಾಳಜಿ, ಧಾರ್ಮಿಕ ನಂಬಿಕೆ ಮತ್ತು ಸಾಮೂಹಿಕ ಜೀವನಶೈಲಿಯ ಪರಿಚಯವಾಗುತ್ತದೆ. ಇದು ಕೇವಲ ದೀಪ ಹಚ್ಚುವ ಆಚರಣೆಯಲ್ಲ. ಊರಿನ ಪ್ರತಿಯೊಂದು ಮನೆಯ ಬಾಗಿಲು ತಟ್ಟುವ, ಜನರ ನಡುವಿನ ಸಂಬಂಧಗಳನ್ನು ಬೆಸೆಯುವ, ಹಿರಿಯರಿಂದ ಕಿರಿಯರಿಗೆ ಜನಪದ ಸಾಹಿತ್ಯವನ್ನು ವರ್ಗಾಯಿಸುವ ಮತ್ತು ಗ್ರಾಮದ ಒಗ್ಗಟ್ಟನ್ನು ಬಲಪಡಿಸುವ ಒಂದು ಸುಂದರ ಸಾಂಸ್ಕೃತಿಕ ಪರಂಪರೆ.
ಆದರೆ ಇಂದು ಆಧುನಿಕ ಜೀವನಶೈಲಿ, ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ, ಕೃಷಿಯಲ್ಲಿನ ಸಂಕಷ್ಟ ಮತ್ತು ಯುವಜನರ ಆಸಕ್ತಿಯ ಕೊರತೆಯಿಂದಾಗಿ ಈ ಅಪರೂಪದ ಸಂಪ್ರದಾಯ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಹಾಗಾದರೆ ಅಂಟಿಗೆ–ಪಂಟಿಗೆ ಎಂದರೇನು? ಈ ಆಚರಣೆಯ ಹಿನ್ನೆಲೆ ಏನು? ದೀಪವನ್ನು ಹೊತ್ತು ಸಾಗುವವರು ಯಾರು? ಅವರು ಹಾಡುವ ಹಾಡುಗಳ ವಿಶೇಷತೆ ಏನು? ಮೂರು ದಿನಗಳ ಕಾಲ ನಡೆಯುವ ಈ ಆಚರಣೆಯಲ್ಲಿ ಪಾಲ್ಗೊಳ್ಳುವವರು ಅನುಸರಿಸುವ ನಿಯಮಗಳೇನು? ಈ ಸಂಪ್ರದಾಯ ಒಂದು ಊರಿನ ಅಭಿವೃದ್ಧಿಗೆ ಹೇಗೆ ಕಾರಣವಾಯಿತು? ಬನ್ನಿ, ನಮ್ಮ ಮಲೆನಾಡಿನ ಜನಪದ ಸಂಸ್ಕೃತಿಯ ಈ ಅಪರೂಪದ ಮುತ್ತಿನ ಬಗ್ಗೆ ತಿಳಿದುಕೊಳ್ಳೋಣ.
ದೀಪಾವಳಿಯ ಐದು ದಿನಗಳು ಮತ್ತು ಮಲೆನಾಡಿನ ಅಂಟಿಗೆ–ಪಂಟಿಗೆ

ನಮ್ಮ ಹಳೇ ಮೈಸೂರು ಭಾಗದಲ್ಲಿ ಆಶ್ವಯುಜ ಬಹುಳ ತ್ರಯೋದಶಿಯಿಂದ ಆರಂಭವಾಗಿ ಕಾರ್ತೀಕ ಶುಕ್ಲ ಬಿದಿಗೆಯವರೆಗೆ ಐದು ದಿನಗಳ ಕಾಲ ದೀಪಾವಳಿಯನ್ನು ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಸಂಭ್ರಮದಿಂದ ಆಚರಿಸುವ ರೂಢಿಯಿದೆ. ಆದರೆ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳು ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳ ಕೃಷಿಕ ಸಮುದಾಯಗಳಲ್ಲಿ ದೀಪಾವಳಿಯ ಸಂದರ್ಭದಲ್ಲಿ ನಡೆಯುವ ಅಂಟಿಗೆ–ಪಂಟಿಗೆ ಆಚರಣೆಗೆ ವಿಶಿಷ್ಟವಾದ ಸ್ಥಾನವಿದೆ. ಈ ಆಚರಣೆಯ ಹೆಸರಿನ ಬಗ್ಗೆಯೂ ಆಸಕ್ತಿದಾಯಕ ವಿವರಣೆಗಳಿವೆ.
ನಮ್ಮ ಗ್ರಾಮೀಣ ಭಾಷೆಯಲ್ಲಿ ದೀಪವನ್ನು ಹಚ್ಚುವುದಕ್ಕೆ ದೀಪವನ್ನು ಅಂಟಿಸು ಎಂಬ ಪದವನ್ನು ಬಳಸುವುದುಂಟು. ಇನ್ನು ಪಂಟಿಗೆ ಎಂಬ ಪದವು ತಮಿಳಿನ ಪಂಡಿಗೈ ಅಥವಾ ತೆಲುಗಿನ ಪಂಡಗ ಎಂಬ ಹಬ್ಬವನ್ನು ಸೂಚಿಸುವ ಪದಗಳಿಂದ ಬಂದಿರಬಹುದು ಎಂಬ ಅಭಿಪ್ರಾಯವೂ ಇದೆ. ಹೀಗಾಗಿ ದೀಪವನ್ನು ಅಂಟಿಸುವ ಹಬ್ಬ ಎಂಬ ಅರ್ಥದಲ್ಲಿ ಅಂಟಿಗೆ–ಪಂಟಿಗೆ ಎಂಬ ಹೆಸರು ರೂಢಿಗೆ ಬಂದಿರಬಹುದು ಎನ್ನಲಾಗುತ್ತದೆ. ಇದು ಭಾಷಾ ಮೂಲದ ಬಗ್ಗೆ ಇರುವ ಒಂದು ಜನಪ್ರಿಯ ವಿವರಣೆಯಷ್ಟೇ. ಆದರೆ ಈ ಆಚರಣೆಯ ವೈಶಿಷ್ಟ್ಯವನ್ನು ಗಮನಿಸಿದರೆ ಹೆಸರಿಗಿಂತಲೂ ಅದರ ಹಿಂದಿರುವ ಸಾಮೂಹಿಕ ಭಾವನೆಯೇ ಹೆಚ್ಚು ಮಹತ್ವದ್ದಾಗಿದೆ.
ದೇವಸ್ಥಾನದ ನಂದಾದೀಪದಿಂದ ಆರಂಭವಾಗುವ ಪವಿತ್ರ ಜ್ಯೋತಿಯ ಪಯಣ

ದೀಪಾವಳಿಯ ಬಲಿಪಾಡ್ಯಮಿಯಂದು ಊರಿನ ಪ್ರಮುಖ ದೇವಸ್ಥಾನದಲ್ಲಿ ಯುವಕರ ತಂಡವೊಂದು ಒಗ್ಗೂಡುತ್ತದೆ. ಮೊದಲಿಗೆ ಗ್ರಾಮದೇವತೆಯನ್ನು ಭಕ್ತಿಯಿಂದ ಪೂಜಿಸಿ, ತಾವು ಮೂರು ದಿನಗಳ ಕಾಲ ಹೊತ್ತು ಸಾಗಿಸಲಿರುವ ದೊಡ್ಡದಾದ ಕಂಚಿನ ಅಥವಾ ಮಣ್ಣಿನ ದೀವಟಿಗೆಯನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಗಟ್ಟಿಯಾದ ಹಿಡಿಕೆಯನ್ನು ಹೊಂದಿರುವ ಈ ದೀವಟಿಗೆಯಲ್ಲಿ ಸಾಕಷ್ಟು ಎಣ್ಣೆ ಹಾಕಿ, ಬತ್ತಿಯನ್ನು ಸಿದ್ಧಪಡಿಸಿ, ದೇವಸ್ಥಾನದ ನಂದಾದೀಪದಿಂದ ಜ್ಯೋತಿಯನ್ನು ಹಚ್ಚಿಸಿಕೊಳ್ಳುತ್ತಾರೆ.
ಹಿಂದಿನ ಕಾಲದಲ್ಲಿ ದೀಪಕ್ಕೆ ಬೇಕಾದ ಎಣ್ಣೆಯನ್ನು ಮಣ್ಣಿನ ಹೂಜಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದರು. ಈಗಿನ ಕಾಲದಲ್ಲಿ ಪ್ಲಾಸ್ಟಿಕ್ ಅಥವಾ ಸ್ಟೀಲ್ ಕ್ಯಾನ್ಗಳನ್ನು ಬಳಸುತ್ತಾರೆ. ಈ ದೀಪ ಕೇವಲ ಬೆಳಕಿನ ಸಾಧನವಲ್ಲ. ಊರಿನ ದೇವಸ್ಥಾನದಿಂದ ಹೊರಟು ಪ್ರತಿಯೊಂದು ಮನೆಗೂ ತಲುಪುವ ದೇವರ ಪ್ರಸಾದದಂತಿರುವ ಪವಿತ್ರ ಜ್ಯೋತಿ ಎಂಬ ಭಾವನೆ ಜನರಲ್ಲಿದೆ.
ಹೀಗಾಗಿ ದಾರಿಯಲ್ಲಿ ಗಾಳಿಗೆ ಅಥವಾ ಬೇರೆ ಕಾರಣಕ್ಕೆ ದೀಪ ಆರಿಹೋಗದಂತೆ ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳುತ್ತಾರೆ. ದೀಪ ಆರಿಹೋಗುವುದನ್ನು ಅಪಶಕುನವೆಂದು ಭಾವಿಸುವ ನಂಬಿಕೆಯೂ ಕೆಲವು ಕಡೆ ಇದೆ. ದೇವಸ್ಥಾನದಲ್ಲಿ ಹಚ್ಚಿದ ಆ ಜ್ಯೋತಿ ಮೂರು ದಿನಗಳ ಕಾಲ ನಿರಂತರವಾಗಿ ಉರಿಯುತ್ತಾ ಊರಿನ ಮನೆಮನೆಗಳನ್ನೂ ಬೆಳಗಿಸುವುದೇ ಈ ಆಚರಣೆಯ ವಿಶೇಷತೆ.
ಮೂರು ದಿನ ನಿದ್ರೆಯಿಲ್ಲದೆ ದೀಪ ಹೊತ್ತು ಸಾಗುವ ಯುವಕರ ತಂಡ!
ಅಂಟಿಗೆ–ಪಂಟಿಗೆಯ ಮತ್ತೊಂದು ವಿಶೇಷವೆಂದರೆ ಅದರಲ್ಲಿ ಪಾಲ್ಗೊಳ್ಳುವ ತಂಡದ ಶಿಸ್ತು ಮತ್ತು ಸಮರ್ಪಣೆ. ಸಾಮಾನ್ಯವಾಗಿ ಏಳೆಂಟು ಅಥವಾ ಅದಕ್ಕಿಂತ ಹೆಚ್ಚಿನ ಸದಸ್ಯರನ್ನು ಒಳಗೊಂಡ ತಂಡವಿರುತ್ತದೆ. ತಂಡದಲ್ಲಿ ಪ್ರತಿಯೊಬ್ಬರಿಗೂ ನಿರ್ದಿಷ್ಟ ಜವಾಬ್ದಾರಿಯಿರುತ್ತದೆ.
ಜ್ಯೋತಿಯನ್ನು ಹೊತ್ತು ಸಾಗುವ ನಾಯಕನು ತಂಡದ ಮಧ್ಯಭಾಗದಲ್ಲಿರುತ್ತಾನೆ. ಅವನ ಮುಂದೆ ಇಬ್ಬರು ಪ್ರಮುಖ ಗಾಯಕರು, ಅಂದರೆ ಮುಮ್ಮೇಳಧಾರಿಗಳು ಸಾಗುತ್ತಾರೆ. ಅವರ ಹಿಂದೆ ದೀವಟಿಗೆ ಹಿಡಿಯುವವರು, ಹಾಡಿನಲ್ಲಿ ದನಿಗೂಡಿಸುವವರು, ಎಣ್ಣೆ ಮತ್ತು ದವಸಧಾನ್ಯಗಳನ್ನು ಸಂಗ್ರಹಿಸುವವರು ಹಾಗೂ ಹಿಮ್ಮೇಳಧಾರಿಗಳು ಸಾಗುತ್ತಾರೆ. ಇವರ ಉಡುಗೆತೊಡುಗೆಯೂ ವಿಶಿಷ್ಟವಾಗಿರುತ್ತದೆ. ಸಾಧಾರಣ ಪಂಚೆ, ಅದಕ್ಕೆ ಹೊಂದುವ ಅಂಗಿ ಅಥವಾ ಜುಬ್ಬಾ, ತಲೆಯ ಮೇಲೆ ಮುಂಡಾಸು ಮತ್ತು ಕೈಯಲ್ಲಿ ಗಟ್ಟಿಯಾದ ದಂಡ. ಹೀಗೆ ಸಾಂಪ್ರದಾಯಿಕ ಉಡುಪಿನಲ್ಲಿ ಸಜ್ಜಾಗುವ ಯುವಕರು ಊರಿನ ಬೀದಿಗಳಲ್ಲಿ ದೀಪ ಹೊತ್ತು ಸಾಗುತ್ತಾರೆ.
ಮೂರು ದಿನಗಳ ಕಾಲ ಹಗಲು–ರಾತ್ರಿ ಎನ್ನದೆ ಮನೆಮನೆಗೆ ತೆರಳಿ ಹಾಡುವುದು, ದೀಪವನ್ನು ಆರದಂತೆ ನೋಡಿಕೊಳ್ಳುವುದು ಮತ್ತು ನಿರಂತರವಾಗಿ ನಡೆದುಕೊಂಡು ಹೋಗುವುದು ಸಾಮಾನ್ಯ ಕೆಲಸವಲ್ಲ. ಇದಕ್ಕಾಗಿ ದೈಹಿಕ ಸಾಮರ್ಥ್ಯ, ಉತ್ತಮ ಕಂಠ, ಹಾಡುಗಳ ನೆನಪು, ಸಮಯಪ್ರಜ್ಞೆ ಮತ್ತು ತಂಡದ ಸಹಕಾರ ಎಲ್ಲವೂ ಅಗತ್ಯ. ವಿಶೇಷವಾಗಿ ರಾತ್ರಿಯಿಡೀ ನಿದ್ರಿಸದೆ ಹಾಡುತ್ತಾ ಸಾಗುವ ಈ ಕಲಾವಿದರ ಪರಿಶ್ರಮವನ್ನು ಮೆಚ್ಚಲೇಬೇಕು.
ಬಾಗಿಲು ತೆರೆಯಮ್ಮ ಭಾಗ್ಯದ ಲಕ್ಷ್ಮಮ್ಮ!

ಅಂಟಿಗೆ–ಪಂಟಿಗೆ ತಂಡವೊಂದು ಮನೆಯ ಮುಂದೆ ಬಂದು ನಿಂತಾಗ ಅಲ್ಲಿನ ವಾತಾವರಣವೇ ಬದಲಾಗುತ್ತದೆ. ಅವರು ಕೇವಲ ದೀಪವನ್ನು ಹಿಡಿದು ಬರುವುದಿಲ್ಲ. ತಮ್ಮೊಂದಿಗೆ ನೂರಾರು ವರ್ಷಗಳ ಜನಪದ ಪರಂಪರೆ, ದೇವರ ಸ್ಮರಣೆ ಮತ್ತು ಶುಭ ಹಾರೈಕೆಗಳನ್ನೂ ಹೊತ್ತು ತರುತ್ತಾರೆ. ಮನೆಯ ಬಾಗಿಲಿನ ಮುಂದೆ ನಿಂತು ಮುಮ್ಮೇಳಧಾರಿಗಳು ತಮ್ಮ ಕಂಠದಿಂದ ಹಾಡು ಆರಂಭಿಸುತ್ತಾರೆ.
ಬಾಗಿಲ ತೆರೆಯಮ್ಮ, ಭಾಗ್ಯದ ಲಕ್ಷ್ಮಮ್ಮ, ಜ್ಯೋತ್ಸಮ್ಮನ್ನೊಳಗೆ ಕರಕೊಳ್ಳಿ… ಹಾಗೆಯೇ, ಜ್ಯೋತಿದ್ದ ಮನೆಯಲ್ಲಿ ರೀತ್ಯುಂಟು, ನೀತ್ಯುಂಟು, ಒಳ್ಳೆ ಮಾತುಗಳುಂಟು ಮನದಲ್ಲಿ…
ಎಂಬ ಅರ್ಥಪೂರ್ಣ ಸಾಲುಗಳ ಮೂಲಕ ಮನೆಯವರಿಗೆ ದೀಪ ಹಚ್ಚಿಸಿಕೊಳ್ಳುವಂತೆ ಆಹ್ವಾನಿಸುತ್ತಾರೆ. ಈ ಹಾಡುಗಳಲ್ಲಿ ಮನೆಯೊಳಗೆ ಬೆಳಕು ನೆಲೆಸಲಿ, ಒಳ್ಳೆಯ ಮಾತುಗಳು ಕೇಳಿಬರಲಿ, ಕುಟುಂಬದಲ್ಲಿ ಶಾಂತಿ ಮತ್ತು ಸಮೃದ್ಧಿ ಇರಲಿ ಎಂಬ ಹಾರೈಕೆ ಅಡಕವಾಗಿರುತ್ತದೆ. ತಮ್ಮ ಮನೆಗೆ ಅಂಟಿಗೆ–ಪಂಟಿಗೆ ತಂಡ ಬರುವುದನ್ನೇ ಕಾಯುತ್ತಿದ್ದ ಮನೆಯವರು, ಮನೆಯ ನಂದಾದೀಪವನ್ನು ಅವರು ಹೊತ್ತು ತಂದಿರುವ ಪವಿತ್ರ ಜ್ಯೋತಿಯಿಂದ ಹಚ್ಚಿಕೊಳ್ಳುತ್ತಾರೆ.
ನಂತರ ದೀಪದ ಮುಂದೆ ಎಣ್ಣೆ, ಅಕ್ಕಿ, ತೆಂಗಿನಕಾಯಿ, ಹಬ್ಬಕ್ಕೆ ಮಾಡಿದ ನೈವೇದ್ಯ ಮತ್ತು ದಕ್ಷಿಣೆಯನ್ನು ಇಟ್ಟು ಭಕ್ತಿಯಿಂದ ನಮಸ್ಕರಿಸುತ್ತಾರೆ. ಆ ಸಂದರ್ಭದಲ್ಲಿ ಮನೆಯವರು ಹಾಡುವ ಶುಭ ಹಾರೈಕೆಯ ಸಾಲುಗಳು ಇನ್ನೂ ಮನಮೋಹಕವಾಗಿರುತ್ತವೆ. ರನ್ನದಟ್ಟಾಕೆ ಬಣ್ಣದೇಣಿಯ ಚಾಚಿ, ಸಾಲೆಣ್ಣೆ ಕೊಡುವ ಬಾಯಿಬಿಚ್ಚಿ… ಸಾವಿರ ಕಾಲ ಸುಖಿ ಬಾಳಿ… ಎಂದು ಹಾರೈಸುತ್ತಾ ದೀಪದ ತಂಡಕ್ಕೆ ಗೌರವ ಸಲ್ಲಿಸುತ್ತಾರೆ.
ಮನೆಯವರು ಹತ್ತಿಸಿಕೊಂಡ ನಂದಾದೀಪವನ್ನು ಸಂಪ್ರದಾಯದಂತೆ ಬಲೀಂದ್ರಕಂಬ ಅಥವಾ ನಿಗದಿಪಡಿಸಿದ ಸ್ಥಳದಲ್ಲಿ ಇರಿಸಿ, ತಂಡದವರಿಗೆ ಎಣ್ಣೆ, ದವಸಧಾನ್ಯ ಮತ್ತು ದಕ್ಷಿಣೆ ನೀಡಿ ಮುಂದಿನ ಮನೆಯತ್ತ ಕಳುಹಿಸುತ್ತಾರೆ. ಹೀಗೆ ಒಂದು ಮನೆಯ ಬೆಳಕು ಮತ್ತೊಂದು ಮನೆಗೆ, ಅಲ್ಲಿಂದ ಇನ್ನೊಂದು ಮನೆಗೆ ಎಂಬಂತೆ ಇಡೀ ಊರಿನಲ್ಲಿ ಜ್ಯೋತಿಯ ಪಯಣ ಮುಂದುವರಿಯುತ್ತದೆ.
ದೇವಸ್ಥಾನದ ದೀಪದಿಂದ ಮನೆಮನೆಯ ಅಂತರಂಗದ ಬೆಳಕಿನವರೆಗೆ!

ಅಂಟಿಗೆ–ಪಂಟಿಗೆ ಆಚರಣೆಯಲ್ಲಿರುವ ಅತ್ಯಂತ ಸುಂದರವಾದ ಕಲ್ಪನೆ ಎಂದರೆ ದೇವಸ್ಥಾನದಿಂದ ಹೊರಟ ಜ್ಯೋತಿಯು ಪ್ರತಿಯೊಂದು ಮನೆಯನ್ನೂ ತಲುಪುವುದು. ದೇವಸ್ಥಾನದ ನಂದಾದೀಪದಿಂದ ಜ್ಯೋತಿಯನ್ನು ಹಚ್ಚಿಕೊಂಡು ಬರುವ ತಂಡವು ಮನೆಮನೆಯ ಬಾಗಿಲು ತಟ್ಟುತ್ತದೆ. ಮನೆಯವರು ತಮ್ಮ ಮನೆಯ ದೀಪವನ್ನು ಅದರಿಂದ ಹಚ್ಚಿಕೊಳ್ಳುತ್ತಾರೆ. ಇದರ ಹಿಂದೆ ಒಂದು ಸುಂದರವಾದ ಆಧ್ಯಾತ್ಮಿಕ ಸಂದೇಶವಿದೆ. ಒಂದು ಮನೆಯಲ್ಲಿರುವ ಬೆಳಕು ಮತ್ತೊಂದು ಮನೆಯಲ್ಲಿಯೂ ಬೆಳಗಬೇಕು. ಒಂದು ಕುಟುಂಬದ ಸಂತೋಷ ಮತ್ತೊಂದು ಕುಟುಂಬಕ್ಕೂ ತಲುಪಬೇಕು. ಊರಿನ ಪ್ರತಿಯೊಂದು ಮನೆಯಲ್ಲಿಯೂ ಒಳ್ಳೆಯತನ, ಪ್ರೀತಿ, ವಿಶ್ವಾಸ ಮತ್ತು ನೆಮ್ಮದಿ ನೆಲೆಸಬೇಕು ಎಂಬ ಆಶಯ ಈ ಆಚರಣೆಯಲ್ಲಿದೆ.
ಹೀಗೆ ನೋಡಿದರೆ, ಅಂಟಿಗೆ–ಪಂಟಿಗೆ ಎನ್ನುವುದು ಕೇವಲ ಹೊರಗಿನ ಕತ್ತಲೆಯನ್ನು ದೂರಮಾಡುವ ಆಚರಣೆಯಲ್ಲ. ಮನುಷ್ಯನ ಅಂತರಂಗದಲ್ಲಿರುವ ಅಜ್ಞಾನ, ಅಹಂಕಾರ, ಅಸೂಯೆ ಮತ್ತು ದ್ವೇಷದ ಕತ್ತಲೆಯನ್ನು ದೂರಮಾಡಿ ಪ್ರೀತಿ, ಸಹಕಾರ ಮತ್ತು ಸೌಹಾರ್ದದ ಬೆಳಕನ್ನು ತುಂಬುವ ಒಂದು ಸುಂದರ ಸಂಕೇತವೂ ಹೌದು. ಇಂದಿನ ಕಾಲದಲ್ಲಿ ಮನೆಮನೆಗೆ ಪ್ರತ್ಯೇಕವಾಗಿ ದೀಪ ಹಚ್ಚಿಕೊಳ್ಳುವ ವ್ಯವಸ್ಥೆ ಇದ್ದರೂ, ಊರಿನವರೆಲ್ಲರೂ ಒಂದೇ ಜ್ಯೋತಿಯೊಂದಿಗೆ ಬೆಸೆಯುವ ಈ ಆಚರಣೆಯ ಸಾಮಾಜಿಕ ಮಹತ್ವವನ್ನು ಮರೆಯುವಂತಿಲ್ಲ.
ಅಂಟಿಗೆ–ಪಂಟಿಗೆ ಪದಗಳು. ಮಲೆನಾಡಿನ ಜಾನಪದ ಸಾಹಿತ್ಯದ ಅಪೂರ್ವ ಭಂಡಾರ
ಅಂಟಿಗೆ–ಪಂಟಿಗೆಯ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಈ ಸಂದರ್ಭದಲ್ಲಿ ಹಾಡುವ ಜನಪದ ಗೀತೆಗಳು. ಈ ಹಾಡುಗಳನ್ನು ಸಾಮಾನ್ಯವಾಗಿ ‘ಅಂಟಿಗೆ–ಪಂಟಿಗೆ ಪದಗಳು’ ಎಂದು ಕರೆಯುತ್ತಾರೆ. ಇವು ಕೇವಲ ಮನರಂಜನೆಗಾಗಿ ಹಾಡುವ ಹಾಡುಗಳಲ್ಲ. ಪೌರಾಣಿಕ ಕಥೆಗಳು, ಧಾರ್ಮಿಕ ನಂಬಿಕೆಗಳು, ಕುಟುಂಬ ಸಂಬಂಧಗಳು, ಕೃಷಿ ಬದುಕು, ಸಾಮಾಜಿಕ ಮೌಲ್ಯಗಳು ಮತ್ತು ಜನರ ದೈನಂದಿನ ಜೀವನವನ್ನು ಒಳಗೊಂಡಿರುವ ಮೌಖಿಕ ಸಾಹಿತ್ಯದ ಅಮೂಲ್ಯ ಸಂಪತ್ತು. ಈ ಹಾಡುಗಳಲ್ಲಿ ಹಲವು ಪ್ರಕಾರಗಳಿವೆ.
- ಶಿವಯೋಗಿ ಪದಗಳು:ಶಿವನ ಮಹಿಮೆ, ಭಕ್ತಿ, ಯೋಗ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಒಳಗೊಂಡ ಹಾಡುಗಳು.
- ದೀಪ ಹಚ್ಚುವ ಪದಗಳು:ಮನೆಯ ಬಾಗಿಲು ತೆರೆಯುವಂತೆ, ನಂದಾದೀಪ ಹಚ್ಚುವಂತೆ ಮತ್ತು ಶುಭವನ್ನು ಸ್ವಾಗತಿಸುವಂತೆ ಹಾಡುವ ಪದಗಳು.
- ಬಲೀಂದ್ರ ಪದಗಳು:ಬಲಿಚಕ್ರವರ್ತಿಯ ಮಹಿಮೆ ಮತ್ತು ಬಲಿಪಾಡ್ಯಮಿಯ ಹಿನ್ನೆಲೆಯನ್ನು ಒಳಗೊಂಡ ಹಾಡುಗಳು.
- ಗೋವಿನ ಪದಗಳು:ಗೋವುಗಳ ಮಹತ್ವ, ಗೋಪೂಜೆ ಮತ್ತು ಗ್ರಾಮೀಣ ಕೃಷಿ ಬದುಕಿನೊಂದಿಗೆ ಸಂಬಂಧ ಹೊಂದಿರುವ ಹಾಡುಗಳು.
- ಕವಲೆ ಹಾಡುಗಳು:ಸಂದರ್ಭಕ್ಕೆ ತಕ್ಕಂತೆ ಹಾಡುವ ವಿಶಿಷ್ಟ ಜನಪದ ಪ್ರಕಾರಗಳು.
- ಎಣ್ಣೆ ಎರೆಯುವ ಪದಗಳು:ಮನೆಯವರು ದೀಪದ ಎಣ್ಣೆ ಮತ್ತು ಇತರ ಕಾಣಿಕೆಗಳನ್ನು ನೀಡುವ ಸಂದರ್ಭದಲ್ಲಿ ಹಾಡುವ ಹಾಡುಗಳು.
- ದ್ರೌಪದಿ ಪದಗಳು:ಮಹಾಭಾರತದ ದ್ರೌಪದಿಗೆ ಸಂಬಂಧಿಸಿದ ಕಥಾನಕಗಳನ್ನು ಒಳಗೊಂಡ ಹಾಡುಗಳು.
- ಗಂಗೆ–ಗೌರಿ ಪದಗಳು:ಗಂಗೆ ಮತ್ತು ಗೌರಿಯ ಮಹಿಮೆ, ಪೌರಾಣಿಕ ಹಿನ್ನೆಲೆ ಹಾಗೂ ಧಾರ್ಮಿಕ ನಂಬಿಕೆಗಳನ್ನು ಬಿಂಬಿಸುವ ಹಾಡುಗಳು.
- ಜೋಗುಳ ಪದಗಳು:ತಾಯ್ತನ, ಮಕ್ಕಳ ಆರೈಕೆ ಮತ್ತು ಕುಟುಂಬದ ಭಾವನೆಗಳನ್ನು ಒಳಗೊಂಡ ಹಾಡುಗಳು.
- ಇವುಗಳಲ್ಲದೆ ಕೌಟುಂಬಿಕ ಪದಗಳು, ಮದುವೆಯ ಹಾಡುಗಳು ಮತ್ತು ಇನ್ನೂ ಅನೇಕ ಪ್ರಕಾರಗಳಿವೆ.
ಈ ಹಾಡುಗಳ ಮತ್ತೊಂದು ವಿಶೇಷತೆ ಎಂದರೆ ಅವುಗಳನ್ನು ಪುಸ್ತಕದಲ್ಲಿ ಬರೆದಿಟ್ಟಿರುವ ಹಾಡುಗಳಂತೆ ಮಾತ್ರ ಹಾಡುವುದಿಲ್ಲ. ಸಂದರ್ಭಕ್ಕೆ ಅನುಗುಣವಾಗಿ ಕಲಾವಿದರು ತಮ್ಮ ಆಶುಕವಿತ್ವವನ್ನೂ ಪ್ರದರ್ಶಿಸುತ್ತಾರೆ. ಉದಾಹರಣೆಗೆ ಮನೆಯಲ್ಲಿರುವ ಮಕ್ಕಳನ್ನು, ಮನೆಯ ಯಜಮಾನನನ್ನು, ಹೊಸದಾಗಿ ಮದುವೆಯಾದ ದಂಪತಿಗಳನ್ನು ಅಥವಾ ಮನೆಯವರ ವಿಶೇಷ ಗುಣಗಳನ್ನು ಆಧರಿಸಿ ತಕ್ಷಣವೇ ಹೊಸ ಸಾಲುಗಳನ್ನು ರಚಿಸಿ ಹಾಡುವ ಸಾಮರ್ಥ್ಯ ಅವರಿಗಿರುತ್ತದೆ. ಇದೇ ಅಂಟಿಗೆ–ಪಂಟಿಗೆ ಕಲಾವಿದರ ನಿಜವಾದ ಪ್ರತಿಭೆ.
ಕೆಲವೊಮ್ಮೆ ಮನೆಯವರ ಕಾಲೆಳೆಯುವ ಭರದಲ್ಲಿ ಹಾಡುಗಳಲ್ಲಿ ಅತಿಯಾದ ಹಾಸ್ಯ ಅಥವಾ ಅಶ್ಲೀಲತೆಯೂ ಸೇರಿಕೊಳ್ಳುವುದುಂಟು. ಅಂತಹ ಸಂದರ್ಭಗಳಲ್ಲಿ ಊರಿನ ಹಿರಿಯರು ಎಚ್ಚರಿಕೆ ನೀಡಿ ಸಂಪ್ರದಾಯದ ಗೌರವ ಉಳಿಸುವಂತೆ ಮಾರ್ಗದರ್ಶನ ಮಾಡುತ್ತಾರೆ.
ಸಂಪ್ರದಾಯದ ಪದಗಳು, ಕಥೆಯ ಪದಗಳು ಮತ್ತು ಸಾಂದರ್ಭಿಕ ಪದಗಳು
ಅಂಟಿಗೆ–ಪಂಟಿಗೆ ಹಾಡುಗಳನ್ನು ಸ್ಥೂಲವಾಗಿ ಮೂರು ಪ್ರಮುಖ ಪ್ರಕಾರಗಳಲ್ಲಿ ಗುರುತಿಸಬಹುದು.
- ಸಂಪ್ರದಾಯದ ಪದಗಳು :ಅಂಗಳ, ತುಳಸಿ ಕಟ್ಟೆ, ಮನೆಯ ಬಾಗಿಲು, ಎಣ್ಣೆ ಎರೆಯುವುದು, ಅಕ್ಕಿ ಮತ್ತು ಹಣ ನೀಡುವುದು ಮುಂತಾದ ಸಂದರ್ಭಗಳಲ್ಲಿ ಹಾಡುವ ಪದಗಳು ಈ ವರ್ಗಕ್ಕೆ ಸೇರುತ್ತವೆ.
- ಕಥೆಯ ಪದಗಳು :ಉತ್ತರದೇವಿ, ಅರ್ಜುನ ಸ್ವಾಮಿ, ಚಂಡಿನ ಪದ, ಬಸವಣ್ಣನ ಹಾಡು, ರತ್ತುಮಾಣಿ ಪದ, ತಿರುಪತಿ ಯಾತ್ರೆಯ ಹಾಡು, ಹುಲಿ ಪದ ಮುಂತಾದ ಕಥಾನಕಗಳನ್ನು ಒಳಗೊಂಡ ಹಾಡುಗಳು ಈ ವರ್ಗಕ್ಕೆ ಸೇರುತ್ತವೆ. ಇವುಗಳ ಮೂಲಕ ಪೌರಾಣಿಕ ಮತ್ತು ಜನಪದ ಕಥೆಗಳು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ತಲುಪುತ್ತವೆ.
- ಸಾಂದರ್ಭಿಕ ಪದಗಳು :ಮದುವೆಯ ಹಾಡುಗಳು, ಮಾಸ್ತಿ ಹಾಡುಗಳು, ಹೊಸಮನೆ ಪ್ರವೇಶದ ಹಾಡುಗಳು, ಗೋಪೂಜೆಯ ಹಾಡುಗಳು ಮತ್ತು ಮನೆಯ ಬಾಗಿಲು ತೆರೆಯಿಸುವ ಹಾಡುಗಳು ಈ ವರ್ಗಕ್ಕೆ ಸೇರುತ್ತವೆ.
ಹೀಗಾಗಿ ಅಂಟಿಗೆ–ಪಂಟಿಗೆ ಎನ್ನುವುದು ಕೇವಲ ಧಾರ್ಮಿಕ ಆಚರಣೆಯಲ್ಲ; ಮಲೆನಾಡಿನ ಜನಪದ ಸಾಹಿತ್ಯ, ಸಂಗೀತ, ಕಥನಶೈಲಿ ಮತ್ತು ಆಶುಕವಿತ್ವದ ಜೀವಂತ ವೇದಿಕೆಯೂ ಹೌದು.
ಹಿರಿಯರು ಮತ್ತು ಕಿರಿಯರ ನಡುವೆ ಹಾಡಿನ ಪೈಪೋಟಿ!
ಈ ಆಚರಣೆಯಲ್ಲಿರುವ ಮತ್ತೊಂದು ಮೋಜಿನ ಸಂಗತಿಯೆಂದರೆ ಹಿರಿಯರು ಮತ್ತು ಕಿರಿಯರ ನಡುವಿನ ಆರೋಗ್ಯಕರ ಸ್ಪರ್ಧೆ. ದೀಪಾವಳಿಗೆ ಹಲವು ದಿನಗಳ ಮುಂಚೆಯೇ ಯುವಕರ ಸಂಘಗಳು ಮತ್ತು ತಂಡಗಳು ಹಾಡಿನ ಅಭ್ಯಾಸ ಆರಂಭಿಸುತ್ತಿದ್ದವು. ವಿಶೇಷವಾಗಿ ಭೂಮಿಹುಣ್ಣಿಮೆಯ ಹಿಂದಿನ ದಿನದಿಂದಲೇ ರಾತ್ರಿ ಸಮಯದಲ್ಲಿ ಯುವಕರು ಒಟ್ಟುಗೂಡಿ ಹಾಡುಗಳನ್ನು ಅಭ್ಯಾಸ ಮಾಡುತ್ತಿದ್ದರು. ಊರಿನ ಹಿರಿಯರು ಅವರಿಗೆ ಹಳೆಯ ಹಾಡುಗಳನ್ನು ಕಲಿಸುತ್ತಿದ್ದರು. ಹಾಡುಗಳ ಅರ್ಥ, ರಾಗ, ಏರಿಳಿತ ಮತ್ತು ಹಾಡುವ ಕ್ರಮವನ್ನು ತಿಳಿಸುತ್ತಿದ್ದರು. ಹೀಗೆ ದೀಪಾವಳಿ ಬರುವಷ್ಟರಲ್ಲಿ ಹತ್ತಾರು ಹಾಡುಗಳನ್ನು ಕಂಠಪಾಠ ಮಾಡಿಕೊಂಡು, ರಾತ್ರಿ ಇಡೀ ಹಾಡಲು ಬೇಕಾದ ದೈಹಿಕ ಮತ್ತು ಕಂಠದ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಿದ್ದರು.
ಇಲ್ಲಿ ಹಿರಿಯರು ಮತ್ತು ಕಿರಿಯರ ನಡುವೆ ನಡೆಯುವ ಸಣ್ಣಪುಟ್ಟ ಪೈಪೋಟಿಯೂ ಬಹಳ ಮೋಜಿನ ಸಂಗತಿಯಾಗಿತ್ತು. ಹಿರಿಯರು ತಮ್ಮ ಅನುಭವ ಮತ್ತು ಗಟ್ಟಿಯಾದ ಕಂಠದಿಂದ ದೀರ್ಘವಾಗಿ ಹಾಡುತ್ತಾ, ನೀವು ಸಣ್ಣ ಹೈಕ್ಳು, ಅದೇನ್ ಹಾಡ್ತೀರೋ! ಎಂದು ಕಿರಿಯರನ್ನು ಚುಡಾಯಿಸುತ್ತಿದ್ದರು.
ಅದಕ್ಕೆ ಕಿರಿಯರು, ಅರೇ ಅಜ್ಜಾ! ನಿಮಗೇನು ಗೊತ್ತು ನಮ್ಮ ಹಾಡಿನ ಗಮ್ಮತ್ತು!’ ಎಂದು ತಿರುಗೇಟು ನೀಡುತ್ತಿದ್ದರು. ಗಣೇಶ ಮತ್ತು ಸುಬ್ರಹ್ಮಣ್ಯರು ನಾನು ಹೆಚ್ಚೋ, ನೀನು ಹೆಚ್ಚೋ ಎಂದು ಪೈಪೋಟಿ ನಡೆಸಿದಂತೆ ಈ ಹಿರಿಯರು ಮತ್ತು ಕಿರಿಯರ ತಂಡಗಳಲ್ಲಿಯೂ ಸಾಂಕೇತಿಕ ಸ್ಪರ್ಧೆ ನಡೆಯುತ್ತಿತ್ತು.
ಕಿರಿಯರು ಹೆಚ್ಚು ಮನೆಗಳಿಗೆ ತೆರಳಿ ಹಾಡಿ ಬಂದರೆ, ತಾವೇ ಗೆದ್ದೆವು ಎಂದು ಹೆಮ್ಮೆಪಡುತ್ತಿದ್ದರು. ಹಿರಿಯರು ಮಾತ್ರ ತಮ್ಮ ಅನುಭವ ಮತ್ತು ಹಾಡಿನ ವೈಭವವನ್ನು ಮುಂದಿಟ್ಟು ತಾವೇ ಶ್ರೇಷ್ಠರು ಎಂದು ಹೇಳಿಕೊಳ್ಳುತ್ತಿದ್ದರು. ಇಂತಹ ಆರೋಗ್ಯಕರ ಪೈಪೋಟಿಯಿಂದಾಗಿ ಯುವಜನರಲ್ಲಿ ಹಾಡು ಕಲಿಯುವ ಆಸಕ್ತಿ ಹೆಚ್ಚಾಗುತ್ತಿತ್ತು. ಜೊತೆಗೆ ಹಿರಿಯರ ಜ್ಞಾನ ಮತ್ತು ಅನುಭವವೂ ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತಿತ್ತು.
ಎರಡು ತಂಡಗಳು ಎದುರಾದರೆ ದೀಪ–ದೀಪೋಳ್ಗೆ ಎಂಬ ಕೂಗು!
ಅಂಟಿಗೆ–ಪಂಟಿಗೆ ಆಚರಣೆಯಲ್ಲಿ ಪಾಲ್ಗೊಳ್ಳುವ ತಂಡಗಳು ಸಾಮಾನ್ಯವಾಗಿ ತಮ್ಮ ತಮ್ಮ ಊರಿನ ಅಥವಾ ನಿರ್ದಿಷ್ಟ ಪ್ರದೇಶದ ಮನೆಗಳಿಗೆ ತೆರಳುತ್ತವೆ. ಕೆಲವೊಮ್ಮೆ ಎರಡು ವಿಭಿನ್ನ ತಂಡಗಳು ಒಂದೇ ದಾರಿಯಲ್ಲಿ ಎದುರಾಗುವ ಸಂದರ್ಭವೂ ಇರುತ್ತದೆ. ಅಂತಹ ಸಮಯದಲ್ಲಿ ಪರಸ್ಪರ ಎಚ್ಚರಿಕೆ ನೀಡಲು ದೀಪ–ದೀಪೋಳ್ಗೆ ಎಂದು ಗಟ್ಟಿಯಾಗಿ ಕೂಗುತ್ತಾರೆ. ಇದರಿಂದ ಎರಡೂ ತಂಡಗಳಿಗೆ ಎದುರಿನಿಂದ ಮತ್ತೊಂದು ಜ್ಯೋತಿಯ ತಂಡ ಬರುತ್ತಿರುವುದು ತಿಳಿಯುತ್ತದೆ. ನಂತರ ತಮ್ಮ ತಮ್ಮ ದಾರಿಯಲ್ಲಿ ಸಾಗುತ್ತಾರೆ. ಇದು ಆ ಆಚರಣೆಯಲ್ಲಿರುವ ವಿಶಿಷ್ಟವಾದ ಸಂಪ್ರದಾಯಗಳಲ್ಲಿ ಒಂದಾಗಿದೆ.
ಇನ್ನು ಕೆಲವು ಪ್ರದೇಶಗಳಲ್ಲಿ ದೀಪ ಸ್ವೀಕರಿಸುವ ಮನೆಗಳಿಗೂ ಕೆಲವು ನಿಯಮಗಳಿರುತ್ತವೆ. ಕುಟುಂಬದಲ್ಲಿ ಮುಟ್ಟು, ಬಾಣಂತನದ ಪುರುಡು ಅಥವಾ ಸಾವಿನ ಸೂತಕದಂತಹ ಧಾರ್ಮಿಕ ಮೈಲಿಗೆಗಳಿದ್ದರೆ ಆ ಮನೆಯವರು ದೀಪವನ್ನು ಸ್ವೀಕರಿಸುವುದಿಲ್ಲ ಎಂಬ ನಂಬಿಕೆಯೂ ಇದೆ. ಕೆಲವು ಕಡೆ ಇಂತಹ ಮನೆಗಳಿಗೆ ಮೂರು ವರ್ಷಗಳ ನಂತರವೇ ತಂಡ ಭೇಟಿ ನೀಡುತ್ತದೆ ಎಂಬ ಸ್ಥಳೀಯ ಸಂಪ್ರದಾಯವಿದೆ. ಇವುಗಳ ಆಚರಣೆಯಲ್ಲಿ ಊರಿನಿಂದ ಊರಿಗೆ ವ್ಯತ್ಯಾಸಗಳಿರಬಹುದು. ಆದರೂ ತಮ್ಮ ಪೂರ್ವಜರು ಪಾಲಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಗೌರವಿಸುವ ಮನೋಭಾವವೇ ಎಲ್ಲೆಡೆ ಸಾಮಾನ್ಯವಾಗಿದೆ.
ಮೂರು ದಿನಗಳ ನಂತರ ಮತ್ತೆ ದೇವಸ್ಥಾನಕ್ಕೆ ಮರಳುವ ಪವಿತ್ರ ಜ್ಯೋತಿ
ಹೀಗೆ ಮೂರು ದಿನಗಳ ಕಾಲ ನಿರಂತರವಾಗಿ ಮನೆಮನೆಗೆ ತೆರಳಿ, ದೀಪ ಹಚ್ಚಿಸಿ, ಹಾಡುಗಳನ್ನು ಹಾಡಿ, ಊರಿನ ಜನರಿಂದ ಎಣ್ಣೆ, ದವಸಧಾನ್ಯ, ಹಣ ಮತ್ತು ಉಡುಗೊರೆಗಳನ್ನು ಸ್ವೀಕರಿಸಿದ ನಂತರ ತಂಡವು ಮತ್ತೆ ತಾವು ಆರಂಭಿಸಿದ ದೇವಸ್ಥಾನಕ್ಕೇ ಮರಳುತ್ತದೆ. ದೇವಸ್ಥಾನದಲ್ಲಿ ಸಂಗ್ರಹಿಸಿದ ಎಲ್ಲ ಕಾಣಿಕೆಗಳನ್ನು ಸಮರ್ಪಿಸಿ, ವಿಶೇಷ ಪೂಜೆ ಸಲ್ಲಿಸುತ್ತಾರೆ. ದೇವಸ್ಥಾನದ ಜ್ಯೋತಿಯಿಂದ ಆರಂಭವಾದ ಪಯಣ ಮತ್ತೆ ಅದೇ ದೇವಸ್ಥಾನದಲ್ಲಿ ಪೂರ್ಣಗೊಳ್ಳುತ್ತದೆ. ತಾವು ಹೊತ್ತು ತಂದಿದ್ದ ದೀವಟಿಗೆಯನ್ನು ಮುಂದಿನ ವರ್ಷದ ಆಚರಣೆಯವರೆಗೆ ದೇವಸ್ಥಾನದಲ್ಲಿಯೇ ಸುರಕ್ಷಿತವಾಗಿ ಇರಿಸುತ್ತಾರೆ. ಹೀಗೆ ಆ ವರ್ಷದ ಅಂಟಿಗೆ–ಪಂಟಿಗೆ ಆಚರಣೆಗೆ ಮಂಗಳ ಹಾಡಲಾಗುತ್ತದೆ.
ಇಲ್ಲಿ ಸಂಗ್ರಹವಾದ ಕಾಣಿಕೆಗಳನ್ನು ಕೆಲವು ಗ್ರಾಮಗಳಲ್ಲಿ ದೇವಸ್ಥಾನದ ಪೂಜೆ, ಜಾತ್ರೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳುವ ರೂಢಿಯಿದೆ. ಅಂದರೆ ಊರಿನ ಜನರು ನೀಡುವ ಸಣ್ಣಪುಟ್ಟ ಕಾಣಿಕೆಗಳು ಒಟ್ಟಾಗಿ ಗ್ರಾಮದ ಧಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ನೆರವಾಗುತ್ತವೆ.
ಅಂಟಿಗೆ–ಪಂಟಿಗೆಗೆ ತಯಾರಿ. ಒಂದು ತಿಂಗಳ ಹಿಂದಿನಿಂದಲೇ ಆರಂಭವಾಗುತ್ತಿದ್ದ ಅಭ್ಯಾಸ!
ಸುಮಾರು ಕೆಲವು ದಶಕಗಳ ಹಿಂದೆ ಅಂಟಿಗೆ–ಪಂಟಿಗೆಗೆ ಇದ್ದ ಮಹತ್ವ ಮತ್ತು ಸಿದ್ಧತೆ ಇಂದಿನ ಪೀಳಿಗೆಗೆ ಅಚ್ಚರಿಯೆನಿಸಬಹುದು. ದೀಪಾವಳಿಯ ದಿನ ಬಂದಾಗ ಮಾತ್ರ ಯುವಕರು ಒಟ್ಟುಗೂಡುತ್ತಿರಲಿಲ್ಲ. ಅದಕ್ಕೂ ಹಲವು ದಿನಗಳ ಮುಂಚೆಯೇ ಹಾಡುಗಳ ಅಭ್ಯಾಸ ಆರಂಭವಾಗುತ್ತಿತ್ತು. ಹಿರಿಯರು ತಮ್ಮ ಅನುಭವದಿಂದ ಹಾಡುಗಳನ್ನು ಕಲಿಸುತ್ತಿದ್ದರು. ಯಾವ ಹಾಡನ್ನು ಯಾವ ಮನೆಯಲ್ಲಿ ಹಾಡಬೇಕು, ಯಾವ ಸಂದರ್ಭದಲ್ಲಿ ಯಾವ ಪದ ಬಳಸಬೇಕು, ಯಾವ ರಾಗದಲ್ಲಿ ಹಾಡಬೇಕು ಎಂಬುದನ್ನು ತಿಳಿಸುತ್ತಿದ್ದರು.
ಒಂದು ತಂಡದಲ್ಲಿ ಎಲ್ಲರೂ ಹಾಡುಗಾರರಾಗಿರಲಿಲ್ಲ. ಕೆಲವರು ದೀಪದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದರು. ಇನ್ನು ಕೆಲವರು ಎಣ್ಣೆ ತುಂಬಿಸುವುದು, ಕಾಣಿಕೆ ಸಂಗ್ರಹಿಸುವುದು ಮತ್ತು ತಂಡದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಇದರ ಮೂಲಕ ಯುವಕರಲ್ಲಿ ತಂಡದ ಕೆಲಸ, ಜವಾಬ್ದಾರಿ ಹಂಚಿಕೆ, ಶಿಸ್ತು, ಪರಸ್ಪರ ಸಹಕಾರ ಮತ್ತು ಹಿರಿಯರ ಬಗ್ಗೆ ಗೌರವ ಬೆಳೆದುಬರುತ್ತಿತ್ತು. ಇಂದಿನ ಯುವಜನರು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹಾಡುಗಳನ್ನು ಕಲಿಯುವ ಕಾಲದಲ್ಲಿ, ಹಿಂದಿನವರು ಪರಸ್ಪರ ಮುಖಾಮುಖಿಯಾಗಿ ಕುಳಿತು ಹಾಡು ಕಲಿಯುತ್ತಿದ್ದ ಆ ದಿನಗಳನ್ನು ನೆನಪಿಸಿಕೊಂಡರೆ ನಮ್ಮ ಜನಪದ ಪರಂಪರೆಯ ಶ್ರೀಮಂತಿಕೆ ಅರ್ಥವಾಗುತ್ತದೆ.
ಅಂಟಿಗೆ–ಪಂಟಿಗೆಯಿಂದ ಒಂದು ಊರಿನ ಬದುಕೇ ಬದಲಾಯಿತು!
ಈ ಆಚರಣೆಯ ಸಾಮಾಜಿಕ ಮಹತ್ವವನ್ನು ತಿಳಿಯಬೇಕಾದರೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹುಲಿಸರ–ಹಣಗೋಡು ಗ್ರಾಮಸ್ಥರ ಪ್ರಯತ್ನವನ್ನು ಖಂಡಿತವಾಗಿಯೂ ನೆನಪಿಸಿಕೊಳ್ಳಬೇಕು. ಸುಮಾರು 60 ವರ್ಷಗಳ ಹಿಂದೆಯೇ ಅಂಟಿಗೆ–ಪಂಟಿಗೆ ಸಂಪ್ರದಾಯ ಮುಂದಿನ ದಿನಗಳಲ್ಲಿ ಕಣ್ಮರೆಯಾಗಬಹುದು ಎಂಬ ದೂರದೃಷ್ಟಿಯಿಂದ ಈ ಗ್ರಾಮದ ಹಿರಿಯರು ಒಂದು ಮಹತ್ವದ ನಿರ್ಧಾರ ಕೈಗೊಂಡರು.
1962ರಲ್ಲಿ ತಮ್ಮ ಗ್ರಾಮದೇವತೆಯ ಹೆಸರಿನಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಂಟಿಗೆ–ಪಂಟಿಗೆ ಸಂಘವನ್ನು ಸ್ಥಾಪಿಸಿದರು. ಆಗಿನ ಪರಿಸ್ಥಿತಿಯಲ್ಲಿ ಈ ಸಂಘದ ರಚನೆ ಕೇವಲ ಒಂದು ಧಾರ್ಮಿಕ ಆಚರಣೆಯನ್ನು ಮುಂದುವರಿಸುವ ಪ್ರಯತ್ನವಾಗಿರಲಿಲ್ಲ. ಇಡೀ ಊರಿನ ಜನರನ್ನು ಒಗ್ಗೂಡಿಸಿ ಗ್ರಾಮದ ಅಭಿವೃದ್ಧಿಗೆ ಶಕ್ತಿ ತುಂಬುವ ಪ್ರಯತ್ನವೂ ಆಗಿತ್ತು.
ಶರಾವತಿ ನದಿಯ ದಡದಲ್ಲಿದ್ದ ಈ ಗ್ರಾಮವು ಮುಖ್ಯವಾಗಿ ಕೃಷಿಯನ್ನು ಅವಲಂಬಿಸಿತ್ತು. ಸರಿಯಾದ ರಸ್ತೆ ಸಂಪರ್ಕವಿರಲಿಲ್ಲ. ಮಳೆಗಾಲದ ಮೂರು ತಿಂಗಳುಗಳಲ್ಲಿ ಗ್ರಾಮವು ಬಹುತೇಕ ದ್ವೀಪದಂತಾಗುತ್ತಿತ್ತು. ಹೊರಜಗತ್ತಿನ ಸಂಪರ್ಕ ಕಡಿತವಾಗುತ್ತಿತ್ತು. ರಸ್ತೆ ಮತ್ತು ವಿದ್ಯುತ್ ಸಂಪರ್ಕದ ಸಮಸ್ಯೆಗಳೂ ಇದ್ದವು. ಇಂತಹ ಪರಿಸ್ಥಿತಿಯಲ್ಲಿ ಗ್ರಾಮದ ಹಿರಿಯರು ಅಂಟಿಗೆ–ಪಂಟಿಗೆಯನ್ನು ಒಂದು ಸಾಮೂಹಿಕ ಸಂಘಟನೆಯಾಗಿ ರೂಪಿಸಿದರು. ಪ್ರತಿವರ್ಷ ಯುವಕರ ತಂಡವನ್ನು ಸಿದ್ಧಪಡಿಸಿ, ಹಿರಿಯರಿಂದ ಕಿರಿಯರಿಗೆ ಹಾಡುಗಳನ್ನು ಕಲಿಸಿ, ಗ್ರಾಮಸ್ಥರನ್ನು ಒಂದೆಡೆ ಸೇರಿಸಿ ಈ ಆಚರಣೆಯನ್ನು ಮುಂದುವರಿಸಿದರು. ಅಂಟಿಗೆ–ಪಂಟಿಗೆಯ ಮೂಲಕ ಸಂಗ್ರಹವಾದ ಹಣ ಮತ್ತು ಕಾಣಿಕೆಗಳನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳುವ ವ್ಯವಸ್ಥೆಯನ್ನೂ ಮಾಡಿದರು.
ಆದರೆ ಅವರ ಕಾರ್ಯ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಗ್ರಾಮಕ್ಕೆ ಅಗತ್ಯವಿದ್ದ ರಸ್ತೆ ಸಂಪರ್ಕ ಮತ್ತು ಶರಾವತಿ ನದಿಗೆ ಸೇತುವೆ ನಿರ್ಮಾಣದಂತಹ ಮೂಲಸೌಕರ್ಯಗಳಿಗಾಗಿ ಗ್ರಾಮಸ್ಥರನ್ನು ಒಗ್ಗೂಡಿಸಿ ಸಂಘಟಿತ ಪ್ರಯತ್ನ ನಡೆಸಿದರು. ರಾಜಕೀಯ ಮತ್ತು ಆಡಳಿತಾತ್ಮಕ ಮಟ್ಟದಲ್ಲಿ ಒತ್ತಡ ತಂದು ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದರು. ನಂತರ ಊರಿಗೆ ಉತ್ತಮ ರಸ್ತೆ ಸಂಪರ್ಕ ದೊರೆಯಿತು. ರಸ್ತೆ ಡಾಂಬರೀಕರಣಗೊಂಡಿತು. ವಿದ್ಯುತ್ ಮತ್ತು ದೂರವಾಣಿ ಸಂಪರ್ಕವೂ ವಿಸ್ತರಿಸಿತು. ಯುವಜನರಿಗೆ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳು ಹೆಚ್ಚಾದವು. ಗ್ರಾಮಸ್ಥರು ಪಟ್ಟಣಗಳೊಂದಿಗೆ ಸುಲಭವಾಗಿ ಸಂಪರ್ಕ ಬೆಳೆಸಲು ಸಾಧ್ಯವಾಯಿತು.
ಹೀಗೆ ಧಾರ್ಮಿಕ ಆಚರಣೆಯೊಂದನ್ನು ಆಧಾರವಾಗಿಟ್ಟುಕೊಂಡು ಒಂದು ಗ್ರಾಮ ತನ್ನ ಸಾಮಾಜಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಾಮೂಹಿಕವಾಗಿ ಶ್ರಮಿಸಿದ ಉದಾಹರಣೆಯಾಗಿ ಹುಲಿಸರ–ಹಣಗೋಡು ಗ್ರಾಮವನ್ನು ಗುರುತಿಸಬಹುದು. 1962ರಲ್ಲಿ ಆರಂಭವಾದ ಶ್ರೀ ದುರ್ಗಾಪರಮೇಶ್ವರಿ ಅಂಟಿಗೆ–ಪಂಟಿಗೆ ಸಂಘವು ಹಲವು ದಶಕಗಳ ಕಾಲ ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವುದು ನಿಜಕ್ಕೂ ಶ್ಲಾಘನೀಯ. ಇದಕ್ಕಿಂತ ನಮ್ಮ ಹಬ್ಬಗಳು ಸಮಾಜವನ್ನು ಒಗ್ಗೂಡಿಸುವ ಶಕ್ತಿ ಹೊಂದಿವೆ ಎಂಬುದಕ್ಕೆ ಬೇರೆ ಉದಾಹರಣೆ ಬೇಕೇ?
ಆಧುನಿಕತೆಯ ಅಬ್ಬರದಲ್ಲಿ ಕಣ್ಮರೆಯಾಗುತ್ತಿರುವ ಅಂಟಿಗೆ–ಪಂಟಿಗೆ!
ಒಂದು ಕಾಲದಲ್ಲಿ ಮಲೆನಾಡಿನ ಹಳ್ಳಿಗಳಲ್ಲಿ ದೀಪಾವಳಿ ಬಂತೆಂದರೆ ಅಂಟಿಗೆ–ಪಂಟಿಗೆ ತಂಡಗಳ ಸಂಚಾರವೇ ಒಂದು ದೊಡ್ಡ ಸಂಭ್ರಮವಾಗಿತ್ತು. ಮನೆಯವರು ತಂಡದ ಬರುವಿಕೆಗೆ ಕಾಯುತ್ತಿದ್ದರು. ಮಕ್ಕಳು ದೀಪವನ್ನು ನೋಡಲು ಮನೆಯ ಅಂಗಳದಲ್ಲಿ ನಿಂತಿರುತ್ತಿದ್ದರು. ಹಿರಿಯರು ಹಾಡುಗಳನ್ನು ಕೇಳಿ ಆನಂದಿಸುತ್ತಿದ್ದರು. ಯುವಕರು ತಂಡದೊಂದಿಗೆ ಸೇರಿ ಹಾಡಲು ಉತ್ಸುಕರಾಗಿರುತ್ತಿದ್ದರು. ಆದರೆ ಇಂದು ಆ ಚಿತ್ರಣ ನಿಧಾನವಾಗಿ ಬದಲಾಗುತ್ತಿದೆ.
ಕೃಷಿಯಲ್ಲಿ ಆದಾಯ ಕಡಿಮೆಯಾಗಿರುವುದು, ಮಳೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಕೃಷಿ ಬದುಕು ಸಂಕಷ್ಟಕ್ಕೆ ಸಿಲುಕಿರುವುದು, ಗ್ರಾಮೀಣ ಪ್ರದೇಶಗಳಿಂದ ಯುವಕರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿರುವುದು ಈ ಆಚರಣೆಯ ಮೇಲೆ ಪರಿಣಾಮ ಬೀರಿದೆ. ಇಂದಿನ ಯುವಕರಲ್ಲಿ ಬಹುತೇಕರಿಗೆ ಮೂರು ದಿನಗಳ ಕಾಲ ನಿದ್ರೆಯಿಲ್ಲದೆ ಊರಿನ ಮನೆಮನೆಗೆ ತೆರಳಿ ಹಾಡಲು ಸಮಯವಿಲ್ಲ. ಕೆಲವರಿಗೆ ಆಸಕ್ತಿಯಿದ್ದರೂ ಉದ್ಯೋಗ, ಕುಟುಂಬ ಮತ್ತು ಇತರ ಜವಾಬ್ದಾರಿಗಳಿಂದ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.
ಇನ್ನು ಕೆಲವರು, ಹೋಗು ಮಾರಾಯಾ, ಮೂರು ರಾತ್ರಿ ನಿದ್ದೆಗೆಟ್ಟು ಊರೆಲ್ಲಾ ಅಲೆಯುವ ಗೋಳು ಯಾರಿಗೆ ಬೇಕು? ಎಂದು ತಮಾಷೆ ಮಾಡುತ್ತಾ ದೂರ ಉಳಿಯುತ್ತಾರೆ. ಹಾಡುಗಳನ್ನು ಕಲಿಸುವ ಹಿರಿಯರ ಸಂಖ್ಯೆ ಕಡಿಮೆಯಾಗುತ್ತಿದೆ. ಹಳೆಯ ಹಾಡುಗಳ ಅರ್ಥ, ರಾಗ ಮತ್ತು ಅವುಗಳ ಹಿಂದಿನ ಕಥೆಗಳು ಹೊಸ ಪೀಳಿಗೆಗೆ ತಲುಪುತ್ತಿಲ್ಲ. ಹೀಗೆ ಒಂದೊಂದಾಗಿ ಹಾಡುಗಳು ಕಣ್ಮರೆಯಾಗುತ್ತಿವೆ. ಅವುಗಳೊಂದಿಗೆ ಅವುಗಳನ್ನು ನೆನಪಿಟ್ಟುಕೊಂಡಿದ್ದ ಹಿರಿಯರ ಅನುಭವವೂ ಮರೆಯಾಗುತ್ತಿದೆ. ಇದು ಕೇವಲ ಒಂದು ಹಬ್ಬದ ಆಚರಣೆ ಕಡಿಮೆಯಾಗುತ್ತಿರುವುದಲ್ಲ. ನಮ್ಮ ಜನಪದ ಸಾಹಿತ್ಯ, ಸಂಗೀತ, ಮೌಖಿಕ ಇತಿಹಾಸ ಮತ್ತು ಗ್ರಾಮೀಣ ಜೀವನಶೈಲಿಯ ಅಮೂಲ್ಯ ಭಾಗವೊಂದು ಕಳೆದುಹೋಗುತ್ತಿರುವುದಕ್ಕೆ ಸಂಕೇತವಾಗಿದೆ.
ಈ ಸಂಪ್ರದಾಯವನ್ನು ಉಳಿಸಲು ನಾವೇನು ಮಾಡಬಹುದು?
ಅಂಟಿಗೆ–ಪಂಟಿಗೆಯಂತಹ ಆಚರಣೆಗಳನ್ನು ಕೇವಲ ಹಿರಿಯರ ಜವಾಬ್ದಾರಿಯೆಂದು ಬಿಟ್ಟುಬಿಡಬಾರದು. ಇದನ್ನು ಉಳಿಸುವ ಹೊಣೆಗಾರಿಕೆ ಮುಂದಿನ ಪೀಳಿಗೆಯ ಮೇಲೂ ಇದೆ.
- ಪ್ರತಿಯೊಂದು ಗ್ರಾಮದಲ್ಲಿಯೂ ಅಂಟಿಗೆ–ಪಂಟಿಗೆ ಯುವಕರ ಸಂಘಗಳನ್ನು ರಚಿಸಬೇಕು.
- ಊರಿನ ಹಿರಿಯರಿಂದ ಹಳೆಯ ಹಾಡುಗಳನ್ನು ಸಂಗ್ರಹಿಸಿ ಧ್ವನಿಮುದ್ರಣ ಮಾಡಬೇಕು.
- ಹಾಡುಗಳ ಸಾಹಿತ್ಯ ಮತ್ತು ಅರ್ಥವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು.
- ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಈ ಸಂಪ್ರದಾಯದ ಪರಿಚಯ ಮಾಡಿಸಬೇಕು.
- ಸ್ಥಳೀಯ ಸಾಂಸ್ಕೃತಿಕ ಉತ್ಸವಗಳಲ್ಲಿ ಅಂಟಿಗೆ–ಪಂಟಿಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು.
- ಯುವಕರಿಗೆ ಹಾಡು ಕಲಿಸುವ ಕಾರ್ಯಾಗಾರಗಳನ್ನು ನಡೆಸಬೇಕು.
- ದೇವಸ್ಥಾನ ಮತ್ತು ಗ್ರಾಮ ಪಂಚಾಯಿತಿಗಳ ಸಹಕಾರದಿಂದ ಆಚರಣೆಗೆ ಬೇಕಾದ ವ್ಯವಸ್ಥೆ ಮಾಡಬೇಕು.
- ಹಳೆಯ ಕಲಾವಿದರನ್ನು ಗುರುತಿಸಿ ಗೌರವಿಸಬೇಕು.
- ವಿಶೇಷವಾಗಿ ಈ ಆಚರಣೆಯ ವಿಡಿಯೋಗಳನ್ನು ಚಿತ್ರೀಕರಿಸಿ, ಹಾಡುಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬೇಕು. ಏಕೆಂದರೆ ಒಂದು ತಲೆಮಾರಿನ ಹಿರಿಯರು ನಮ್ಮನ್ನು ಅಗಲಿದರೆ ಅವರೊಂದಿಗೆ ನೂರಾರು ಹಾಡುಗಳೂ ಶಾಶ್ವತವಾಗಿ ಕಣ್ಮರೆಯಾಗುವ ಸಾಧ್ಯತೆಯಿದೆ.
ನಮ್ಮ ಜನಪದ ಪರಂಪರೆಯನ್ನು ಉಳಿಸುವುದಕ್ಕೆ ಆಧುನಿಕ ತಂತ್ರಜ್ಞಾನವನ್ನೂ ಬಳಸಿಕೊಳ್ಳಬೇಕಾದ ಕಾಲವಿದು.
ಕೊನೆಯದಾಗಿ, ಮನೆಮನೆಗೆ ಬೆಳಕು ಹಚ್ಚುವುದಷ್ಟೇ ಅಲ್ಲ, ಇಡೀ ಊರಿನ ಮನಸ್ಸುಗಳನ್ನು ಬೆಸೆಯುತ್ತಿದ್ದ ಹಬ್ಬ!
ಅಂಟಿಗೆ–ಪಂಟಿಗೆ ಆಚರಣೆಯನ್ನು ಗಮನಿಸಿದಾಗ ನಮ್ಮ ಪೂರ್ವಜರ ದೂರದೃಷ್ಟಿ ಮತ್ತು ಸಾಮಾಜಿಕ ಕಾಳಜಿಯ ಬಗ್ಗೆ ಅಪಾರ ಗೌರವ ಮೂಡುತ್ತದೆ. ಒಂದು ದೇವಸ್ಥಾನದ ನಂದಾದೀಪದಿಂದ ಆರಂಭವಾಗುವ ಜ್ಯೋತಿ ಮೂರು ದಿನಗಳ ಕಾಲ ಊರಿನ ಪ್ರತಿಯೊಂದು ಮನೆಗೂ ತಲುಪುತ್ತದೆ. ದೀಪದೊಂದಿಗೆ ಹಾಡುಗಳು ಬರುತ್ತವೆ. ಹಾಡುಗಳೊಂದಿಗೆ ಶುಭ ಹಾರೈಕೆಗಳು ಬರುತ್ತವೆ. ಅವುಗಳೊಂದಿಗೆ ಊರಿನ ಜನರ ನಡುವಿನ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುತ್ತವೆ. ಒಂದೇ ಊರಿನ ಜನರು ಪರಸ್ಪರರ ಮನೆಗಳಿಗೆ ತೆರಳಿ, ಮನೆಯ ಬಾಗಿಲು ತಟ್ಟಿ, ಹಾಡು ಹಾಡಿ, ದೀಪ ಹಚ್ಚಿ, ಶುಭ ಹಾರೈಸುವಂತಹ ಸಂಪ್ರದಾಯ ಇಂದಿನ ಅಪಾರ್ಟ್ಮೆಂಟ್ ಜೀವನದಲ್ಲಿ ಕಲ್ಪಿಸಿಕೊಳ್ಳುವುದೂ ಕಷ್ಟ.
ನಮ್ಮ ಹಿರಿಯರು ಹಬ್ಬಗಳನ್ನು ಕೇವಲ ದೇವರ ಪೂಜೆ ಮತ್ತು ಮನರಂಜನೆಗೆ ಸೀಮಿತಗೊಳಿಸಿರಲಿಲ್ಲ. ಅವುಗಳ ಮೂಲಕ ಜನರನ್ನು ಒಗ್ಗೂಡಿಸುತ್ತಿದ್ದರು. ಪರಸ್ಪರ ಸಹಾಯ ಮಾಡುವ ಮನೋಭಾವ ಬೆಳೆಸುತ್ತಿದ್ದರು. ಜನಪದ ಸಾಹಿತ್ಯವನ್ನು ಉಳಿಸುತ್ತಿದ್ದರು. ಗ್ರಾಮದ ಅಭಿವೃದ್ಧಿಗೂ ಹಬ್ಬಗಳನ್ನೇ ವೇದಿಕೆಯನ್ನಾಗಿಸಿಕೊಳ್ಳುತ್ತಿದ್ದರು.
ಹುಲಿಸರ–ಹಣಗೋಡು ಗ್ರಾಮದ ಉದಾಹರಣೆ ಇದಕ್ಕೆ ಸಾಕ್ಷಿ. ಅಂಟಿಗೆ–ಪಂಟಿಗೆಯಂತಹ ಒಂದು ಜನಪದ ಆಚರಣೆ ಒಂದು ಗ್ರಾಮದ ಒಗ್ಗಟ್ಟು, ಸ್ವಾಭಿಮಾನ ಮತ್ತು ಅಭಿವೃದ್ಧಿಗೆ ಹೇಗೆ ನೆರವಾಗಬಹುದು ಎಂಬುದನ್ನು ಆ ಗ್ರಾಮ ತೋರಿಸಿಕೊಟ್ಟಿದೆ.
ಇಂದು ನಾವು ದೀಪಾವಳಿಯಂದು ಸಾವಿರಾರು ರೂಪಾಯಿ ಖರ್ಚು ಮಾಡಿ ವಿದ್ಯುತ್ ದೀಪಗಳನ್ನು ಅಲಂಕರಿಸುತ್ತೇವೆ. ಪಟಾಕಿ ಸಿಡಿಸುತ್ತೇವೆ. ಹೊಸ ಬಟ್ಟೆ ಧರಿಸುತ್ತೇವೆ. ಸಿಹಿತಿಂಡಿಗಳನ್ನು ಹಂಚಿಕೊಳ್ಳುತ್ತೇವೆ. ಆದರೆ ನಮ್ಮ ಪೂರ್ವಜರು ರೂಪಿಸಿದ್ದ ಇಂತಹ ಅಪರೂಪದ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನೂ ಮಾಡಬೇಕಲ್ಲವೇ? ಮೂರು ದಿನ ನಿದ್ರೆಯಿಲ್ಲದೆ ದೀಪ ಹೊತ್ತು ಸಾಗುತ್ತಿದ್ದ ಆ ಯುವಕರ ಪರಿಶ್ರಮ, ಅವರ ಕಂಠದಲ್ಲಿ ಮೊಳಗುತ್ತಿದ್ದ ಜಾನಪದ ಹಾಡುಗಳು, ಮನೆಯ ಬಾಗಿಲು ತೆರೆದು ಅವರನ್ನು ಸ್ವಾಗತಿಸುತ್ತಿದ್ದ ಜನರ ಆತ್ಮೀಯತೆ ಮತ್ತು ಊರಿನ ಜನರೆಲ್ಲರೂ ಒಂದೇ ಕುಟುಂಬದಂತೆ ಬದುಕುತ್ತಿದ್ದ ಆ ಜೀವನಶೈಲಿ ಮತ್ತೆ ಮರಳಬೇಕಿದೆ.
ದೀಪಾವಳಿ ಎಂದರೆ ಕೇವಲ ಹಣತೆ ಹಚ್ಚುವುದಲ್ಲ. ನಮ್ಮೊಳಗಿನ ಕತ್ತಲೆಯನ್ನು ದೂರಮಾಡಿ, ಮತ್ತೊಬ್ಬರ ಬದುಕಿನಲ್ಲಿಯೂ ಬೆಳಕಾಗುವುದೇ ನಿಜವಾದ ದೀಪಾವಳಿ ಎಂಬ ಸಂದೇಶವನ್ನು ಅಂಟಿಗೆ–ಪಂಟಿಗೆ ನಮಗೆ ಸಾರುತ್ತದೆ. ಇಂತಹ ಅಪರೂಪದ ಜನಪದ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಲ್ಲವೇ?
ಏನಂತೀರೀ?
ನಿಮ್ಮವನೇ,
ಉಮಾಸುತ
ವಿಶೇಷ ಕೃತಜ್ಞತೆ: ಅಂಟಿಗೆ–ಪಂಟಿಗೆ ಆಚರಣೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿರುವ, ಸ್ವತಃ ಈ ಜನಪದ ಪರಂಪರೆಯ ಕಲಾವಿದರೂ ಹಾಗೂ ನನ್ನ ಆತ್ಮೀಯರೂ ಆಗಿರುವ ತೀರ್ಥಹಳ್ಳಿ ಸಮೀಪದ ಪುರಾಣಪ್ರಸಿದ್ಧ ಮೃಗವಧೆಯ ಶ್ರೀ ಅಭಿನಂದನ್ ಅವರ ಲೇಖನ ಮತ್ತು ಅನುಭವಗಳಿಗೆ ಕೃತಜ್ಞತೆಗಳು. ಅವರಿಂದ ದೊರೆತ ಮಾಹಿತಿಯು ಈ ಲೇಖನವನ್ನು ಇನ್ನಷ್ಟು ಸಮೃದ್ಧಗೊಳಿಸಿದೆ.





