ಕಥೆ – ಶುಭಾ ಶ್ರೀನಾಥ್‌

ತಾಯ್ತನದಿಂದ ತನ್ನ ಸೌಂದರ್ಯಕ್ಕೆ ಕುಂದಾಗುತ್ತದೆ ಎಂದು ತಪ್ಪಾಗಿ ಭಾವಿಸಿದ್ದ ಮಾನ್ವಿ, ಮಗು ಹುಟ್ಟಿದ ನಂತರ ತಾಯ್ತನದ ಹಿರಿಮೆ ಅರಿತಳೇ….? ಇವಳ ಮದುವೆಯಿಂದ ದೂರವಾಗಿದ್ದ ಅವಳ ತಾಯಿ ತಂದೆಯರು ಮಗುವಿನ ಆಗಮನದ ನಂತರ ತಮ್ಮ ನಿರ್ಧಾರ ಬದಲಾಯಿಸಿದರೆ….?

`ಬೆಳಗಿನಿಂದ ಸಂಜೆಯವರೆಗೆ ಇವರಿಗೆ ಇದೊಂದೇ ಕೆಲಸ….. ಬಿಟ್ಟರೆ ಬೇರೇನೂ ಇಲ್ಲ,’ ಎಂದು ಗೊಣಗುತ್ತಾ ಮಾನ್ವಿ ಫ್ರೆಶ್‌ ಆಗಿ ಬರುವಷ್ಟರಲ್ಲಿ ಅವಳ ಪತಿ ಅಭಯ್‌ ಕೂಡಾ ಬಂದು ಶೂ ಸಾಕ್ಸ್ ತೆಗೆಯುತ್ತಿದ್ದ.

ಹನ್ನೆರಡು ಕಿ.ಮೀ. ದೂರದಲ್ಲಿದ್ದ ಆಫೀಸಿನಿಂದ ಬೈಕ್‌ ನ್ನು ಬೆಂಗಳೂರಿನ ಟ್ರಾಫಿಕ್‌ ನಲ್ಲಿ ಓಡಿಸಿಕೊಂಡು ಬಂದು ಸುಸ್ತಾಗಿದ್ದ. ಹಣೆಯಿಂದ ಬೆವರು ಕಿತ್ತುಕೊಂಡು ಬರುತ್ತಿತ್ತು.

“ಮಾನ್ವಿ ಟೀ ಕೊಡು….” ಎಂದು ಕೂಗಿಕೊಂಡ.

“ಹ್ಞೂಂ ಕೊಡ್ತೀನಿ. ಬೆಳಗ್ಗೆಯಿಂದ ನಿಮ್ಮಮ್ಮ ಒಂದೂ ಕೆಲಸ ಮಾಡಿಲ್ಲ. ರಾಶಿ ಪಾತ್ರೆಗಳು ಸಿಂಕಿನಲ್ಲಿ ಬಿದ್ದಿವೆ. ಪಾತ್ರೆ ತೊಳೆದುಕೊಂಡು ಟೀ ಮಾಡಿಕೊಂಡು ಬರ್ತೀನಿ,” ಎಂದು ಅಸಮಾಧಾನದಿಂದ ಕೂಗಿ ಹೇಳಿ ಅಡುಗೆಮನೆಗೆ ನಡೆದಳು.

“ಏನಿದು ಅಮ್ಮಾ……?” ಎಂದು ಅಭಯ್‌ ತಾಳ್ಮೆ ಕಳೆದುಕೊಂಡು ಕೇಳಿದ.

“ಹೌದಪ್ಪ…. ನಿನ್ನ ಹೆಂಡತಿ ಹಾಗೆಯೇ, ನಾನು ಬೆಳಗ್ಗೆ ಕಾಫಿ, ತಿಂಡಿ ಮಾಡಿ ನಿಮ್ಮಿಬ್ಬರಿಗೂ ಊಟದ ಡಬ್ಬಿ ಕಟ್ಟುವುದು, ವಾಷಿಂಗ್‌ ಮಿಷನ್‌ ಬಟ್ಟೆ ಹಾಕುವುದು ಎಲ್ಲಾ ಮಾಡ್ತೀನಿ… ಆದ್ರೆ ಅದು ಯಾವುದೂ ಅವಳ ಕಣ್ಣಿಗೆ ಬೀಳುವುದಿಲ್ಲ,” ಎಂದು ಊರ್ಮಿಳಾ ಕೂಡ ಸೊಸೆಗೆ ತಕ್ಕಂತೆ ಜೋರಾಗಿ ಉತ್ತರಿಸಿದರು.

ಮಾನ್ವಿ ಮೂರು ಜನಕ್ಕೂ ಬಿಸಿಬಿಸಿ ಟೀ, ಬಿಸ್ಕೆಟ್ಸ್ ತಂದಿಟ್ಟಳು.

ಅಭಯ್‌ ಟೀ ಹೀರುತ್ತ, “ಮಾನ್ವಿ, ನೀನು ಕೇಳಿದ್ದನ್ನು ತಂದಿದ್ದೇನೆ ತೆಗೆದುಕೋ…..” ಎಂದು ಅವಳ ಕೈಗೆ ಪ್ಯಾಡ್‌ ಪ್ಯಾಕೆಟ್ ಕೊಟ್ಟ.

“ಆಗಲೇ ಶುರುವಾಯಿತಾ….? ಎಷ್ಟು ಸಾರಿ ಹೇಳಿದ್ದೀನಿ ಇನ್ನಾದರೂ ಮಕ್ಕಳು ಮಾಡಿಕೊಳ್ಳಿ ಅಂತ. ನೀವಿಬ್ಬರೂ ನನ್ನ ಮಾತು ಕೇಳುವುದೇ ಇಲ್ಲ. ನನ್ನ ಫ್ರೆಂಡ್ಸ್ ಎಲ್ಲಾ ಅಜ್ಜಿಯರಾಗಿದ್ದಾರೆ. ಎಲ್ಲರೂ ವಾಕಿಂಗ್‌ ಹೋಗುವಾಗ ತಮ್ಮ ಮೊಮ್ಮಕ್ಕಳ ಮುದ್ದು ತುಂಟಾಟಗಳನ್ನು ಹೇಳಿಕೊಳ್ಳುತ್ತಾರೆ.

“ನನಗೆ ಎಷ್ಟೊಂದು ಬೇಸರವಾಗುತ್ತದೆ ಗೊತ್ತಾ…. `ಏನ್ರಿ ಊರ್ಮಿಳಾ…. ನಿಮ್ಮ ಮಗಂದು ಮದುವೆಯಾಗಿ ನಾಲ್ಕು ವರ್ಷವಾಯಿತು. ಇನ್ನೂ ಮಕ್ಕಳಾಗಿಲ್ವಾ….’ ಅಂತ ಕೇಳ್ತಾರೆ. ಅದನ್ನು ಕೇಳಿಸಿಕೊಂಡು ಸಾಕಾಗಿದೆ. ನಾನು ಅದಕ್ಕೆ ಇತ್ತೀಚೆಗೆ ವಾಕಿಂಗ್‌ ಹೋಗುವುದನ್ನೇ ಬಿಟ್ಟುಬಿಟ್ಟಿದ್ದೇನೆ,” ಅವರು ತಮ್ಮ ಅಸಮಾಧಾನವನ್ನು ಮತ್ತೆ ಹೊರಗೆ ಹಾಕಿದರು.

“ಅತ್ತೆ…. ಯಾರಿಗೋ ಮಕ್ಕಳಾಯಿತು ಅಂತ ನಾನು ಮಗುವನ್ನು ಹೆರಬೇಕು ಅಂದರೆ ಅದು ನನಗಿಷ್ಟವಿಲ್ಲ. ಇನ್ನೂ ಒಂದೆರಡು ವರ್ಷ ಆರಾಮವಾಗಿ ಹೀಗೆ ಇರುತ್ತೇವೆ. ನನ್ನ ಗೆಳತಿಯರೆಲ್ಲ ಮಕ್ಕಳಾದ ಮೇಲೆ ಡ್ರಮ್ ತರ ಊದಿಕೊಂಡಿದ್ದಾರೆ. ನಾನು ಇನ್ನು ಹೀಗೆ ತೆಳ್ಳಗೆ ಬೆಳ್ಳಗೆ ಬಳುಕುತ್ತಾ ಇದ್ದೇನೆ.

“ಮಗುವಾದರೆ ನನ್ನ ಸೌಂದರ್ಯ ಹಾಳಾಗುತ್ತದೆ. ನಾನೂ ದಪ್ಪಗಾಗುತ್ತೇನೆ. ನಾನು ಹೀಗೆಯೇ ಬಳುಕುತ್ತಾ ಇರಬೇಕು. ಮಿಡಿ, ಪ್ಯಾಂಟ್‌, ಶರ್ಟ್‌ ಎಲ್ಲವನ್ನೂ ಹಾಕಿಕೊಳ್ಳಬೇಕು. ಮಕ್ಕಳಾದರೆ ಅದೆಲ್ಲ ಹಾಕಿಕೊಳ್ಳಲು ಆಗುವುದಿಲ್ಲ. ನೀವು ಸುಮ್ಮನೆ ನಮ್ಮನ್ನು ಬಲವಂತ ಮಾಡಬೇಡಿ. ಆಗುವ ಕಾಲಕ್ಕೆ ಮಕ್ಕಳು ಆಗುತ್ತವೆ,” ಎಂದು ಹೇಳಿ ಟೀ ಕುಡಿದ ಕಪ್‌ ಗಳನ್ನು ಎತ್ತಿಕೊಂಡು ಒಳಗೆ ನಡೆದಳು.

ಕಪ್ಪು ನೀಲಿಯಲ್ಲಿ ಶ್ವೇತ ವರ್ಣದ ಡಿಸೈನ್‌ ಬಂದಿದ್ದ ನೈಟ್‌ ಡ್ರೆಸ್‌ ಮಾನ್ವಿಗೆ ತುಂಬಾ ಚೆನ್ನಾಗಿ ಒಪ್ಪುತ್ತಿತ್ತು. ಹಾಲು ಬಿಳಿ ಮೈಬಣ್ಣ, ರೇಷ್ಮೆಯಂತಹ ಕೂದಲು, ಎತ್ತರಕ್ಕೆ ತಕ್ಕಂತಹ ದಪ್ಪ ಮೀನಿನಂಥ ಸುಂದರವಾದ ಕಣ್ಣುಗಳು, ಪುಟ್ಟ ಕೆಂಪು ತುಟಿಗಳು ಅವಳನ್ನು ಸುಂದರಿಯರ ಗುಂಪಿಗೆ ಸೇರಿಸಿದ್ದವು. ಮಾನ್ವಿ ಅಪರೂಪದ ಚೆಲುವೆ. ಅದನ್ನು ನೋಡಿಯೇ ಅಭಯ್‌ ಅವಳ ಕೈ ಹಿಡಿದಿದ್ದ. ಅಭಯ್‌ ಎತ್ತರಕ್ಕೆ ತಕ್ಕ ದಪ್ಪ, ತಲೆ ತುಂಬಾ ಕೂದಲು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದ. ಅಂತಹ ಚೆಲುವೆ ಇವನನ್ನು ಅದು ಹೇಗೆ ಮೆಚ್ಚಿಕೊಂಡು ಮದುವೆಯಾದಳು ಎನ್ನುವುದು ಆಶ್ಚರ್ಯದ ಸಂಗತಿ!

ಮಾನ್ವಿ ಬಿಕಾಂ ಪದವೀಧರೆ. ಕಂಪನಿಯೊಂದರಲ್ಲಿ ರಿಸೆಪ್ಷನಿಸ್ಟ್. ಅವಳ ಉದ್ಯೋಗಕ್ಕೆ ತಕ್ಕಂತೆ ದಿನ ಚಂದದ ಆಧುನಿಕ ಉಡುಗೆಗಳನ್ನು ಧರಿಸುತ್ತಿದ್ದಳು. ಇದಕ್ಕೆ ಅಭಯ್‌ ಏನೂ ಹೇಳುತ್ತಿರಲಿಲ್ಲ. ಕಾರಣ ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಮಾನ್ವಿಯಂತಹ ಚೆಲುವೆ ತನಗೆ ಸಿಕ್ಕಿದ್ದು ಪುಣ್ಯವೆಂದು ಅಭಯ್‌ ತಿಳಿದಿದ್ದ. ಇಬ್ಬರೂ ದಿನ ಯೌವನದ ರಸಘಳಿಗೆಗಳನ್ನು ಸವಿಯುತ್ತಾ ಸದ್ಯಕ್ಕೆ ಮಕ್ಕಳು ಬೇಡವೆಂದು ನಿರ್ಧರಿಸಿದ್ದರು.

ಮಾನ್ವಿಯ ಮನೆಯಲ್ಲಿ ಅವರಿಬ್ಬರ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಹಾಗಾಗಿ ಮಾನ್ವಿ ಅಭಯ್‌ ಗೋಸ್ಕರ ಮನೆಯನ್ನು ಬಿಟ್ಟು ಬಂದಿದ್ದಳು, ಊರ್ಮಿಳಾರಿಗೆ ಸ್ವಲ್ಪ ಒಪ್ಪಿಗೆ ಇರಲಿಲ್ಲ. ಆದರೆ ಇದ್ದೊಬ್ಬ ಮಗ ಮದುವೆಗೆ ಒಪ್ಪಿಗೆ ಕೊಡಲಿಲ್ಲವೆಂದರೆ ದೂರ ಹೋಗುತ್ತಾನೆ ಎನ್ನುವ ಕಾರಣಕ್ಕೆ ಅವರು ವಿಧಿಯಿಲ್ಲದೆ ಒಪ್ಪಿಗೆ ಕೊಟ್ಟಿದ್ದರು. ಆ ಕೋಪನ್ನು ಯಾವಾಗಲಾದರೂ ಮಾತಿನಲ್ಲಿ ತೀರಿಸಿಕೊಳ್ಳುತ್ತಿದ್ದರು. ಅವರಿಬ್ಬರ ನಡುವೆ ಊರ್ಮಿಳಾ ಮೊಸರಿನಲ್ಲಿ ಕಲ್ಲು ಬಂದಂತೆ ಬರುತ್ತಿದ್ದರು. ಅಭಯ್‌ ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿದ್ದ. ಬೆಂಗಳೂರಿನ ದುಬಾರಿ ಜೀವನದ ಜೊತೆಗೆ ಇಬ್ಬರೂ ವಾರಾಂತ್ಯದಲ್ಲಿ ಸಿನಿಮಾ, ಶಾಪಿಂಗ್‌, ಪಿಕ್ನಿಕ್ ಎಂದು ಜೋಡಿ ಹಕ್ಕಿಗಳಂತೆ ಸುತ್ತುತ್ತಿದ್ದ ಕಾರಣ, ಇಬ್ಬರೂ ದುಡಿಯುತ್ತಿದ್ದರೂ ಬರುತ್ತಿದ್ದ ಸಂಬಳ ಸಾಕಾಗುತ್ತಿರಲಿಲ್ಲ.

ಮಾನ್ವಿಗೆ ಅವಳ ಚೆಲುವಿನ ಮೇಲೆ ಬಹಳ ಹೆಮ್ಮೆಯಿತ್ತು. ತಾನು ಎಲ್ಲರಿಗಿಂತ ಚೆನ್ನಾಗಿ ಕಾಣಬೇಕು ಎಂದು ದೇವರು ಕೊಟ್ಟಿದ್ದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಬ್ಯೂಟಿ ಪಾರ್ಲರ್‌ ಗೆ ಮೊರೆ ಹೋಗುತ್ತಿದ್ದುದಲ್ಲದೆ, ದಿನ ಅಲಂಕಾರಕ್ಕಾಗಿ ಒಂದರ್ಧ ಗಂಟೆ ಮೀಸಲಿಡುತ್ತಿದ್ದಳು.

ಅಭಯ್‌ ಗೂ ಸಹ ಹೆಂಡತಿ ಚೆನ್ನಾಗಿ ಕಾಣಬೇಕು, ತನ್ನ ಸ್ನೇಹಿತರ ಎದುರಿನಲ್ಲಿ ತನ್ನ ಹೆಂಡತಿ ಚೆಲುವೆ ಎಂದು ಗರ್ವದಿಂದ ಹೇಳಿಕೊಳ್ಳುತ್ತಿದ್ದ. ಹೆಂಡತಿಯ ರೂಪಕ್ಕೆ ಮರುಳಾಗಿದ್ದ.

ಮಕ್ಕಳಾದರೆ ತನ್ನ ರೂಪ ಕೆಡುತ್ತದೆ, ಆಗ ಗಂಡನ ಪ್ರೀತಿ ತನ್ನ ಮೇಲೆ ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕೆ ಮಾನ್ವಿ ಮಕ್ಕಳು ಬೇಡ ಎನ್ನುತ್ತಿದ್ದಳು.

ತನ್ನ ಚೆಲುವೆ ಹೆಂಡತಿಯನ್ನು ಸುಖವಾಗಿಟ್ಟುಕೊಳ್ಳುವ ಸಲುವಾಗಿ ಅಭಯ್‌ ಹೆಚ್ಚು ದುಡಿಯುತ್ತಿದ್ದ. ಆಫೀಸಿನಿಂದ ಬಂದ ಮೇಲೆ ಡೇಟಾ ಎಂಟ್ರಿ ಕೆಲಸವನ್ನೂ ಮಾಡುತ್ತಿದ್ದ.

ಇದ್ದೊಬ್ಬ ಮಗನಿಗೆ ಬೇಗ ಮಕ್ಕಳಾಗಲಿ, ವಂಶ ಬೆಳೆಯಲಿ ಎನ್ನುವ ಅಪೇಕ್ಷೆ ಊರ್ಮಿಳಾರಿಗಿತ್ತು.

ಪಾತ್ರೆ ತೊಳೆದು, ರಾತ್ರಿ ಅಡುಗೆ ಮುಗಿಸಿ ಮಾನ್ವಿ, ಪತಿಯನ್ನು ಊಟಕ್ಕೆ ಕರೆದಳು. ಅಭಯ್‌ ಲ್ಯಾಪ್‌ ಟಾಪ್‌ ಶಟ್‌ ಡೌನ್‌ ಮಾಡಿ ಊಟಕ್ಕೆ ಬಂದ. ಬೆಳಗ್ಗೆ ಮಾಡಿದ್ದ ಸಾಂಬಾರ್‌ ಜೊತೆಗೆ ಮೊಟ್ಟೆ ಪಲ್ಯ ಮಾಡಿ, ತಮ್ಮಿಬ್ಬರಿಗೂ ಬಡಿಸಿಕೊಂಡು ರೂಮಿಗೆ ಹೋದಳು. ಊರ್ಮಿಳಾ ಎದ್ದು ಹೋಗಿ ತಾವೇ ಊಟ ಬಡಿಸಿಕೊಂಡು ಮತ್ತೆ ಟಿವಿ ಮುಂದೆ ಕುಳಿತರು.

ಗಂಡ ಹೆಂಡತಿ ಕೋಣೆಯ ಒಳಗೆ ಕುಳಿತು ರೊಮ್ಯಾಂಟಿಕ್‌ ಆಗಿ ಮಾತನಾಡಿಕೊಳ್ಳುತ್ತಾ ಒಬ್ಬರಿಗೊಬ್ಬರು ತಿನ್ನಿಸಿಕೊಂಡು ಊಟ ಮಾಡಿದರು.

“ಬರೀ ರೊಮಾನ್ಸ್ ಒಂದೇ ಆಯಿತು. ಒಂದು ಮಗು ಮಾಡಿಕೊಳ್ಳೋಣ ಅಂತೇನೂ ಇಲ್ಲ….” ಎಂದು ಊಟ ಮುಗಿಸಿ ರೂಮಿನಿಂದ ಹೊರಬಂದ ಸೊಸೆಗೆ ಕೇಳಿಸುವಂತೆ ಹೇಳಿದರು.

“ಸಾಕು…. ಮೂರು ಹೊತ್ತು ಇದೇ ಆಯಿತು,” ಎಂದು ಮಾನ್ವಿ ಸಹ ಗೊಣಗುತ್ತಾ ಅಡುಗೆಮನೆಗೆ ಹೋಗಿ ಕಟ್ಟೆಯನ್ನು ಸ್ವಚ್ಛ ಮಾಡಿ ಮಲಗಲು ಹೋದಳು.

ತಿಂಗಳೆರಡು ಕಳೆದಿತ್ತು. ಅದೊಂದು ದಿನ ಬೆಳಗ್ಗೆ ಮಾನ್ವಿಗೆ ಏಳಲು ಆಗದೆ ಹೊದ್ದು ಮಲಗಿದ್ದಳು. ಏಳಲು ಹೋದರೆ ತಲೆಸುತ್ತು, ಕಣ್ಣು ಕತ್ತಲು ಬಂದಂತಾಗಿ ವಾಂತಿ ಬರುತ್ತಿತ್ತು.

“ಮಾನ್ವಿ, ಇವತ್ತು ಆಫೀಸ್‌ಗೆ ಹೋಗಲ್ವಾ…..? ದಿನಪೂರ್ತಿ ಹೀಗೆ ಮಲಗಬೇಕು ಎಂದುಕೊಂಡಿದ್ದೀಯಾ….?” ಮುದುಡಿ ಮಲಗಿದ್ದ ಮಾನ್ವಿಯನ್ನು ಮತ್ತಷ್ಟೂ ಹತ್ತಿರಕ್ಕೆಳೆದುಕೊಂಡ ಅಭಯ್‌ ಮೆಲ್ಲನೆ ಕೇಳಿದ.

“ಹ್ಞೂಂ…. ರೀ, ಸುಸ್ತು ಹುಷಾರಿಲ್ಲ. ಎದ್ದರೆ ಕಣ್ಣು ಕತ್ತಲೆ ಬರ್ತಿದೆ,” ಎಂದು ಮತ್ತಷ್ಟೂ ಮುದುರಿ ಮಲಗಿದಳು.

ಅಭಯ್‌ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ, ಕಾಫಿ ಕುಡಿದು ಬಂದರೂ ಮಾನ್ವಿ ಇನ್ನೂ ಹಾಗೆಯೇ ಮಲಗಿದ್ದಳು. ಅವನಿಗೆ ಗಾಬರಿಯಾಗಿ, “ಅಮ್ಮಾ…. ಮಾನ್ವಿಗೆ ಹುಷಾರಿಲ್ಲ. ಡಾಕ್ಟರ್‌ ಹತ್ತಿರ ಕರೆದುಕೊಂಡು ಹೋಗಲು ಆಟೋ ತೆಗೆದುಕೊಂಡು ಬರ್ತೀನಿ,” ಎಂದ. ಊರ್ಮಿಳಾ ಕೋಣೆಯ ಒಳಗೆ ಬಂದು, “ಮಾನ್ವಿ ನೀನು ಈ ತಿಂಗಳು ನೀರು ಹಾಕಿಕೊಂಡಿಲ್ಲಾ ಅಲ್ವಾ…..?” ಎಂದರು.

ಮಾನ್ವಿ ನೆನಪು ಮಾಡಿಕೊಂಡು, “ಹ್ಞೂಂ….” ಎಂದಳು, `ಅಯ್ಯೋ….. ತಾವಿಬ್ಬರೂ ಯಾವುದೋ ಘಳಿಗೆಯಲ್ಲಿ ಎಚ್ಚರ ತಪ್ಪಿದ್ದೇವೆ ಎಂದು ಅರಿವಾಯಿತು. ಏನು ಮಾಡುವುದು….? ಅಯ್ಯೋ ನನ್ನ ಸೌಂದರ್ಯವೆಲ್ಲಾ ಹಾಳಾಗಿ ಹೋಗುತ್ತದೆ, ಮಗುವಿಗೆ ಹಾಲು ಕುಡಿಸುವುದು, ಸ್ಟ್ರೆಚ್‌ ಮಾರ್ಕ್ಸ್, ದಪ್ಪಗಾಗಿ ಬಿಡುತ್ತೇನೆ. ಅಭಯ್‌ ಗೆ ನನ್ನ ಮೇಲೆ ಪ್ರೀತಿ ಕಡಿಮೆಯಾಗುತ್ತದೆ,’ ಎಂದು ನೆನೆದು ಮಾನ್ವಿಗೆ ದುಃಖವಾಯಿತು.

ಡಾಕ್ಟರ್‌ ಹತ್ತಿರ ಅದೆಲ್ಲಾ ಹೇಳಿ ಮಗು ಬೇಡವೆಂದಾಗ ಡಾಕ್ಟರ್‌ ನಕ್ಕು, “ನೋಡಿ ಅದೆಲ್ಲಾ ಏನಿಲ್ಲ…. ನಿಜವಾದ ಪ್ರೀತಿ ಶುರುವಾಗುವುದು ಮಗುವಾದ ಮೇಲೆಯೇ. ನಿಮ್ಮ ಅತ್ತೆಯವರಿಗೆ ಮಕ್ಕಳೆಂದರೆ ಬಹಳ ಇಷ್ಟ. ವಯಸ್ಸಾದವರು, ಅವರ  ಆಸೆಗಳಿಗೂ ಬೆಲೆ ಕೊಡಬೇಕಲ್ವಾ…..? ನೀವು ಸರಿಯಾಗಿ ವ್ಯಾಯಮ ಮಾಡಿ, ಪೌಷ್ಟಿಕ ಆಹಾರ ಸೇವಿಸಿದರೆ ನಿಮ್ಮ ಸೌಂದರ್ಯ ಹಾಳಾಗುವುದಿಲ್ಲ. ಈಗ ಹೇಗಿದ್ದೀರೋ ಮಗುವಾದ ನಂತರ ಹಾಗೆಯೇ ಇರಬಹುದು. ಒಂದು ವಯಸ್ಸಿಗೆ ಬಂದ ಮೇಲೆ ಮಕ್ಕಳಾಗಬೇಕು. ತೀರಾ ತಡ ಮಾಡಿಕೊಂಡರೆ ತಾಯಿ ಮತ್ತು ಮಗು ಇಬ್ಬರ ಆರೋಗ್ಯಕ್ಕೆ ಕೂಡಾ ತೊಂದರೆಯಾಗುತ್ತದೆ,” ಎಂದು ಹೇಳಿದಾಗ, ಗತ್ಯಂತರವಿಲ್ಲದೆ ಮನೆಗೆ ಬಂದರು.

ಗಂಡು ಮಗುವಾಗಬೇಕೆಂದು ಊರ್ಮಿಳಾ ಹಗಲು ರಾತ್ರಿ ಜಪಿಸುತ್ತಿದ್ದರು. ಎಲ್ಲಾ ದೇವರಿಗೂ ಹರಕೆ ಕಟ್ಟಿಕೊಂಡಿದ್ದರು. ಈಗೆಲ್ಲಾ ಸೊಸೆಗೆ ಏನೇನು ಇಷ್ಟವೆಂದು ತಿಳಿದು ಅದನ್ನೆಲ್ಲಾ ಮಾಡಿಕೊಡುತ್ತಿದ್ದರು. ಹಾಲು, ಹಣ್ಣು, ತರಕಾರಿ, ಮೊಳಕೆಕಾಳುಗಳನ್ನು ಆಹಾರದಲ್ಲಿ ಕೊಟ್ಟು ಉಪಚರಿಸುತ್ತಿದ್ದರು. ಎಲ್ಲಿಲ್ಲದ ಪ್ರೀತಿ ತೋರಿಸುತ್ತಿದ್ದರು.

ಮಾನ್ವಿ ಗರ್ಭಿಣಿಯಾಗಿದ್ದು ಖುಷಿಯಾಗಿದ್ದರೂ ಕೈಯಲ್ಲಿ ದುಡ್ಡಿಲ್ಲದ ಕಾರಣ ಅಭಯ್‌ ಗೆ ಭಯವಾಗುತ್ತಿತ್ತು. ಹೆರಿಗೆ, ಬಾಣಂತನ, ಮಗುವಿನ ಖರ್ಚು ವೆಚ್ಚಗಳನ್ನೆಲ್ಲಾ ನೆನೆದರೆ ಭಯ ಅಧಿಕವಾಗಿತ್ತು. ಮಾನ್ವಿ ಕೂಡ ಕೆಲಸ ಬಿಟ್ಟುಬಿಟ್ಟಳು. ಅವನು ಹಗಲು ರಾತ್ರಿ ಬಿಡುವಿಲ್ಲದೆ ದುಡಿಯತೊಡಗಿದ.

ಊರ್ಮಿಳಾ ತಮ್ಮ ನೆರೆಹೊರೆಯ ಮುತ್ತೈದೆಯರನ್ನು ಕರೆದು ಮಾನ್ವಿಗೆ ಹೊಸ ಸೀರೆ, ಕುಪ್ಪಸ ತಂದು, ಹಬ್ಬದ ಅಡುಗೆ ಮಾಡಿಸಿ, ಆರತಿ ಬೆಳಗಿ ಸೀಮಂತ ಕಾರ್ಯ ಮಾಡಿದರು.

ಏಳನೇ ತಿಂಗಳಲ್ಲಿ ಸ್ಕ್ಯಾನಿಂಗ್‌ ಮಾಡಿಸಿದಾಗ, ಊರ್ಮಿಳಾ, ಡಾಕ್ಟರ್‌ ಹತ್ತಿರ, “ಯಾವ ಮಗು,” ಎಂದು ಆತುರದಿಂದ ಕೇಳಿದರು.

“ನೋಡಿ, ಹಾಗೆಲ್ಲಾ ಭ್ರೂಣದ ಲಿಂಗವನ್ನು ಹೇಳಲು ಆಗುವುದಿಲ್ಲ. ಅದು ಕಾನೂನಿನ ಪ್ರಕಾರ ಅಪರಾಧ,” ಎಂದು ಡಾಕ್ಟರ್ ಗದರಿಸಿ ಹೇಳಿದಾಗ ಪೆಚ್ಚಾದರು.

ಮಾನ್ವಿಗೆ ತಿಂಗಳು ಕಳೆದ ಹಾಗೆಲ್ಲಾ ಹೊಟ್ಟೆಯಲ್ಲಿ ಮಗು ಮಿಸುಕಾಡಿದಾಗ, ಹೊಟ್ಟೆಯ ಮೇಲೆ ಕೈಯಾಡಿಸಿದರೆ ಏನೋ ಪುಳಕ ಉಂಟಾಗುತ್ತಿತ್ತು. ತನ್ನ ಮುದ್ದು ಮಗುವನ್ನು ಕಾಣಲು ಆತುರದಿಂದ ಕಾದಿದ್ದಳು.

ಅಂತೂ ಎಲ್ಲರೂ ಕಾಯುತ್ತಿದ್ದ ಘಳಿಗೆ ಬಂದೇಬಿಟ್ಟಿತು. ಮಾನ್ವಿ ಎರಡು ಹಗಲು, ಎರಡು ಇರುಳು ನೋವು ತಿಂದು, ಮುದ್ದಾದ ಹೆಣ್ಣುಮಗುವಿಗೆ ಜನ್ಮ ಕೊಟ್ಟಳು.

ನರ್ಸ್‌ ಮಾನ್ವಿ ಪಕ್ಕದಲ್ಲಿ ಮಗುವನ್ನು ತಂದು ಮಲಗಿಸಿದಾಗ, ಮಗುವಿನ ಹಾಲುಬಿಳಿ ಮೈಬಣ್ಣ, ತಲೆಯ ತುಂಬಾ ಇದ್ದ ಕಪ್ಪು ಕೂದಲು, ಹವಳದ ತುಟಿ, ಪುಟ್ಟ ಪುಟ್ಟ ಕಣ್ಣನ್ನು ಪಿಳಿಪಿಳಿ ಬಿಟ್ಟು ನೋಡುತ್ತಿದ್ದ ಮುಗ್ಧ ಮಗುವನ್ನು ನೋಡುತ್ತಾ ಮಾನ್ವಿಯೊಳಗಿದ್ದ ತಾಯಿ ಜಾಗೃತಳಾದಳು. ಹಸಿವೆಂದು ಮಗು ಅತ್ತಾಗ ಹಾಲುಣಿಸಿದಳು. ಮೃದುವಾದ ಸ್ಪರ್ಶ ಹಿತವೆನಿಸಿತು. ಮಗುವನ್ನು ಅಪ್ಪಿ ಮುತ್ತಿಟ್ಟಳು.

ಹೆಣ್ಣುಮಗು ಎಂದಾಗ ನಿರಾಸೆಯಿಂದ ತಾಯಿ ಮಗುವನ್ನು ನೋಡಲೆಂದು ಒಳಗೆ ಹೋದ ಊರ್ಮಿಳಾ, ಮಾನ್ವಿ ಪಕ್ಕದಲ್ಲಿ ಮುದ್ದಾಗಿ ಮಲಗಿದ್ದ ಅವರ ಮೊಮ್ಮಗಳನ್ನು ನೋಡಿ ಎತ್ತಿಕೊಂಡರು. ಮಗುವಿನ ಮುದ್ದಾದ ಸ್ಪರ್ಶ ಅದುವರೆಗೆ ಗಂಡುಮಗುವೇ ಬೇಕೆಂದು ಹಂಬಲಿಸಿದ್ದ ಅವರ ಆಸೆಯನ್ನು ದೂರ ಮಾಡಿತ್ತು.

“ಎಷ್ಟು ಮುದ್ದು ಮುದ್ದಾಗಿದೆ ನನ್ನ ಬಂಗಾರ! ಕಣ್ಣು, ಮೂಗು ಎಲ್ಲಾ ಎಷ್ಟು ಲಕ್ಷಣಾಗಿವೆ. ನಮ್ಮನೆ ಮಹಾಲಕ್ಷ್ಮಿ……” ಎಂದು ಎದೆಗೆ ಅವುಚಿಕೊಂಡರು.

“ಅಮ್ಮಾ…. ನಿಜ ಹೇಳಿದೆ. ಇವಳು ನಮ್ಮನೆಯ ಮಹಾಲಕ್ಷ್ಮಿ. ಇವಳು ಹುಟ್ಟಿದ ಘಳಿಗೆ ನೋಡು, ನನಗೆ ಕೆಲಸದಲ್ಲಿ ಬಡ್ತಿ ಸಿಕ್ಕಿ, ಸಂಬಳ ಜಾಸ್ತಿಯಾಯಿತು,” ಎಂದು ಅಭಯ್‌ ಮಗಳ ತಲೆಯನ್ನು ನೇವರಿಸಿ, ಕೆನ್ನೆ ಸವರಿದ.

“ಎಲ್ಲಾ ಸಂತೋಷ ನೀವೇ ಪಟ್ಟರೆ ಹೇಗೆ….? ನಮಗೂ ಸ್ವಲ್ಪ ಉಳಿಸಿ. ಅವಳು ನಮಗೂ ಮೊಮ್ಮಗಳು!” ಎನ್ನುತ್ತಾ ಮಾನ್ವಿಯ ತಂದೆ ತಾಯಿ ಒಳಗೆ ಬಂದರು.

ಅವರನ್ನು ಕಂಡು ಎಲ್ಲರ ಮೊಗದಲ್ಲಿ ಸಂತಸ ಮಿನುಗಿತು. ಮಾನ್ವಿಯ ಮಗಳು ಎಲ್ಲರನ್ನೂ ಹತ್ತಿರಕ್ಕೆ ಸೆಳೆದುಕೊಂಡಿದ್ದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ