ಹಲವಾರು ವರ್ಷಗಳಿಂದ, ಭಾರತೀಯ ಪ್ರಾಂತೀಯ ಭಾಷೆಗಳ ಚಿತ್ರಗಳು, ಹೆಂಗಸರ ಜೀವನದ ಹಲವು ಮಜಲುಗಳನ್ನು ಚಿತ್ರಿಸುವಲ್ಲಿ ಅತಿ ಯಶಸ್ವಿ ಎನಿಸಿವೆ. ಹೆಣ್ಣಿನ ಜೀನನದ ವಿವಿಧ ಘಟ್ಟಗಳು, ಭಾನನೆಗಳು, ಮನೋವೈಜ್ಞಾನಿಕ ಸಿಕ್ಕುಗಳು, ಹೇಳಲಾರದ ಸಂಘರ್ಷಗಳನ್ನು ಅತಿ ಕುಶಲತೆಯಿಂದ ಬಿಂಬಿಸಲ್ಪಟ್ಟಿವೆ. ಈ ರೀತಿ ಪಾತ್ರಗಳ ವೈವಿಧ್ಯಮಯ ಸಂಘರ್ಷ, ಅವರ ವೇದನೆಗಳು, ಅವರ ಜೀವನದ ಅವ್ಯಕ್ತ ರಹಸ್ಯಗಳು, ಮಾನಸಿಕ ಒತ್ತಡಗಳು ಬೇರೆ ಬೇರೆ ರೀತಿಯಲ್ಲಿ ವ್ಯಕ್ತವಾಗಿದ್ದರೂ ಏಕೋಭಾವ ಹೊಂದಿವೆ. ಈ ಚಿತ್ರಗಳು ಕೇವಲ ಮನರಂಜನೆಗಷ್ಟೇ ಸೀಮಿತವಾಗದೆ, ನಿಜಜೀವನದ ಮೌಲ್ಯಗಳ ಸಾಕ್ಷಾತ್ಕಾರ ಮಾಡಿಸುತ್ತವೆ. ಹೀಗಾಗಿ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಬಂಗಾಳಿ, ಮರಾಠಿ, ಗುಜರಾತಿ ಭಾಷೆಗಳ ಸೊಗಡನ್ನು ಈ ಚಿತ್ರಗಳಲ್ಲಿ ಗಮನಿಸಬಹುದು. ಇದು ಭಾರತೀಯ ಸಮಾಜದ ಪ್ರತ್ಯಕ್ಷ ಕೈಗನ್ನಡಿ ಎಂದರೂ ಉತ್ಪ್ರೇಕ್ಷಯಲ್ಲ. ಈ ಎಲ್ಲಾ ಭಾಷಾ ಚಿತ್ರಗಳನ್ನೂ ನೋಡಿಯೇ ಸವಿಯಬೇಕು!
ಕನ್ನಡ : ಊರಬ್ಬ

ಇತ್ತೀಚಿನ ಅತಿ ಯಶಸ್ವಿ ಚಿತ್ರವಾಗಿ ಗುರುತಿಸಲ್ಪಟ್ಟಿದೆ `ಊರಬ್ಬ.’ ಕೌಟುಂಬಿಕ ಪ್ರೇಕ್ಷಕರು ಸೇರಿದಂತೆ ಎಲ್ಲರೂ ಇದನ್ನು ಮೆಚ್ಚಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಉಜ್ಜನಿ ಗ್ರಾಮದಲ್ಲಿ 800 ವರ್ಷಗಳ ಇತಿಹಾಸವುಳ್ಳ ಚೌಡೇಶ್ವರಿ ದೇವಿಯ ಗ್ರಾಮೋತ್ಸವ (ಜಾತ್ರೆ)ದ ಹಿನ್ನೆಲೆಯೇ ಇದರ ಕಥಾಹಂದರ. ಹಳ್ಳಿಯ ಅಪ್ಪಟ ಸೊಗಡು, ಸಾಂಸ್ಕೃತಿಕ ಆಯಾಮ ಇಲ್ಲಿನ ಪ್ರಧಾನ ಆಕರ್ಷಣೆ. ಚಿತ್ರದ ಮೇಕಿಂಗ್ ಕಂಡು ಬುದ್ಧಿಜೀವಿಗಳು, ಜನಪದ ತಜ್ಞರು ಮುಕ್ತವಾಗಿ ಶ್ಲಾಘಿಸಿದ್ದಾರೆ. ಮರೆಯಾಗುತ್ತಿರುವ ಗ್ರಾಮೀಣ ಸಂಸ್ಕೃತಿಯನ್ನು ಆಧುನಿಕರಿಗೆ ಪರಿಚಯಿಸುವುದೇ ಚಿತ್ರದ ಗುರಿ.
ಲಕ್ಕಿ ಶಂಕರ್ ರ ಮೂಲಕಥೆ, ನಿರ್ದೇಶನ ಚಿತ್ರದ ಜೀವಾಳ. ಪ್ರಮುಖ ಪಾತ್ರದಲ್ಲಿ ನಟಿಸಿ ನಿರ್ಮಾಪಕ ನರೇಶ್ ಗೌಡ ಸೈ ಎನಿಸಿದ್ದಾರೆ. ಎಂ.ಡಿ. ಶ್ರೀಧರ್ ಚಿತ್ರಕಥೆ, ಎಚ್. ವಾಸು ಸಂಭಾಷಣೆ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಅಕ್ಷಯ್ ರಿಷಬ್ ರ ಹಿನ್ನೆಲೆ ಸಂಗೀತ ಚಿತ್ರದ ಗಾಂಭೀರ್ಯ ಹೆಚ್ಚಿಸಿದೆ. ತನಿಷಾ ಕುಪ್ಪಾಂಡ, ಮಿತ್ರಾ, ದೊಡ್ಡಣ್ಣ, ಬಿರಾದರ್, ಬಾಲ್ ರಾಜ್ ವಾಡಿ, ಸಿದ್ದು, ಮೈಕೋ ನಾಗರಾಜ್, ಮಿಮಿಕ್ರಿ ಗೋಪಿ ಮುಂತಾದ ಕಲಾವಿದರ ದಂಡೇ ಇದೆ.
ತಮಿಳು : DC

ಇತ್ತೀಚಿನ ಈ ಯಶಸ್ವೀ ತಮಿಳು ಚಿತ್ರ DC ಅಂದ್ರೆ ದೇವದಾಸ್/ಚಂದ್ರ, ಕ್ರಿಮಿನಲ್ ಚಟುವಟಿಕೆಗಳ ಕಥಾ ಹಂದರ ಹೊಂದಿದೆ. ದೇವದಾಸ್ ತನ್ನ ಗೆಳೆಯರೊಂದಿಗೆ ಗುಂಪು ಕಟ್ಟಿಕೊಂಡು ಗ್ಯಾಂಗ್ ವಾರ್ ನಡೆಸುತ್ತಿರುತ್ತಾನೆ. ಒಮ್ಮೆ ಪೊಲೀಸರೊಂದಿಗೆ ಹೀಗೆ ತಗಾದೆ ಶುರುವಾಗಿ ಅವರ ಆಯುಧಗಳನ್ನು ವಶಪಡಿಸಿಕೊಂಡು ಗುಲ್ಲೆಬ್ಬಿಸುತ್ತಾನೆ. ಅವರು ಇವನ ಕೌಟುಂಬಿಕ ಜೀವನ ಹಾಳು ಮಾಡುತ್ತಾರೆ. ಹಾಗಾಗಿ ಅಂಥವರ ಕೊಲೆ ಮಾಡುತ್ತಾನೆ. ಅಲ್ಲಿಂದ ಓಡಿಹೋಗಿ ಗೆಳೆಯರೊಂದಿಗೆ ಲಾಡ್ಜ್ ನಲ್ಲಿ ಅಡಗಿ, ಸಂಜನಾಳನ್ನು ಭೇಟಿಯಾಗುತ್ತಾನೆ. ಈ ಹೋರಾಟದಲ್ಲಿ ಇವನ ಸಖಿ ಸಂಜನಾ ಸಾಯುತ್ತಾಳೆ. ಈ ಮಧ್ಯೆ ಸೆಕ್ಸ್ ವರ್ಕರ್ ವಾಮಿಕಾ, ಅದೇ ಹೋಟೆಲ್ ರೈಡ್ ನಲ್ಲಿ ತಪ್ಪಿಸಿಕೊಳ್ಳುವಾಗ ಅದೇ ಅವಳಿಗೆ ಸಹಾಯ ಮಾಡುತ್ತಾನೆ. ಮುಂದೆ ಹೇಗೆ ಅವರು ಹೋರಾಡಿದರು ಎಂಬುದೇ ಉಳಿದ ಕಥೆ. ನಿರ್ದೇಶಕರಾಗಿ ಗಮನ ಸೆಳೆದಿದ್ದ ಲೋಕೇಶ್ ಕನಕರಾಜ್ ಇಲ್ಲಿ ನಾಯಕನಾಗಿ ವಿಜೃಂಭಿಸಿದ್ದಾರೆ. ಜೊತೆಗೆ ವಾಮಿಕಾ, ಪಾರ್ವತಿ ಇದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ : ಅರುಣ್ ಮಾಥೇಶ್ವರನ್. ಸಂಗೀತ : ಅನಿರುದ್ಧ್ ರವಿಚಂದರ್.
ಮಲೆಯಾಳಂ : ತುಡಕ್ಕಂ

ಒಂದು ಸಾಧಾರಣ ಕೌಟುಂಬಿಕ ಚಿತ್ರ ಹೇಗೆ ನಿಧಾನವಾಗಿ ಸರ್ವೈವ್ ಥ್ರಿಲ್ಲರ್ ಆಗಿ ಮಾರ್ಪಡುತ್ತದೆ ಎಂಬುದೇ ಇಲ್ಲಿನ ಹೂರಣ. ಇಲ್ಲಿ ಹಿರಿಯ ನಟ ಮೋಹನ್ ಲಾಲ್ ರ ಮಗಳು ವಿಸ್ಮಯಾಳ ಡೆಬ್ಯು ಇದೆ. ಒಬ್ಬ ಹುಡುಗಿ ತಾನೇ ತನ್ನ ಕಾಲ ಮೇಲೆ ನಿಲ್ಲಲು ಪ್ರಯತ್ನಿಸುವ ಕಥೆ ಇದೆ. ಉತ್ತಮ ಕೌಟುಂಬಿಕ ಬಾಂಧವ್ಯದೊಂದಿಗೆ ಚಿತ್ರ ಮುಂದುವರಿಯುತ್ತದೆ. ಪ್ರಪಂಚ ಸುಂದರವಲ್ಲ ಎಂಬ ಭಾವನೆ, ಒಬ್ಬ ವಿಲನ್ ಇವಳನ್ನು ಆಕ್ರಮಿಸಿದಾಗ ತಿಳಿಯುತ್ತದೆ. ಅವಳನ್ನು ಭಯಪಡಿಸಿ, ಚಿತ್ರಹಿಂಸೆ ಪಡಿಸುತ್ತಲೇ, ತಪ್ಪಿಸಿಕೊಳ್ಳದಂತೆ ತಡೆಯುವ ಪಾಪಿಯಿಂದ ಅವಳು ಹೇಗೆ ಬಚಾವಾದಳು ಎಂಬುದೇ ಚಿತ್ರದ ಉಳಿದಾರ್ಧ. ಹೆಣ್ಣು ಹೀಗೆ ಒಂಟಿಯಾಗಿ ಅಪಾಯಕ್ಕೆ ಸಿಲುಕಿದಾಗ, ಯಾರೋ ರಕ್ಷಿಸಲು ಬರುವುದಿಲ್ಲ, ಅವಳು ಹೇಗೆ ತನಗೆ ತಾನೇ ದಿಕ್ಕಾಗುತ್ತಾಳೆ ಎಂಬುದೇ ಚಿತ್ರದ ಸ್ವಾರಸ್ಯ. ಚಿತ್ರದ ಪ್ರಮುಖ ತಾರಾಗಣದಲ್ಲಿ ವಿಸ್ಮಯಾಳ ಜೊತೆ ವಿಲನ್ ಆಶಿಶ್ ಆ್ಯಂಟನಿ, ಸಾಯಿಕುಮಾರ್, ಗಣೇಶ್ ಕುಮಾರ್, ಜಾಫರ್ ಇಡುಕ್ಕಿ, ಮನೋಜ್ ಮುಂತಾದವರಿದ್ದಾರೆ. ಮೋಹನ್ ಲಾಲ್ ಇಲ್ಲಿ ಅತಿಥಿ ನಟ. ನಿರ್ದೇಶನ : ಜೂಡ್ ಆ್ಯಂಟನಿ, ಸಂಗೀತ : ಜೇಕ್ಸ್ ಬೆಜಾಯ್.
ಬಂಗಾಳಿ : ಕೇ ಬೋಲೇ ಬಿಪ್ಲಬೀ ಕೇ ಬೋಲೇ ಡಕೈತ್
ಈ ಚಿತ್ರ ಪ್ರಸಿದ್ಧ ಕ್ರಾಂತಿಕಾರಿ ಅನಂತ್ ಸಿಂಗ್ ನ ಅಸಾಧಾರಣ ಜೀವನದಿಂದ ಪ್ರೇರಿತ. ಸ್ವಾತಂತ್ರ್ಯಪೂರ್ವ ಕಾಲದಿ ಆತ ನಡೆಸುತ್ತಿದ್ದ ಕ್ರಾಂತಿಕಾರಿ ಚಟುವಟಿಕೆಗಳನ್ನು ಕಂಡು ಕೆಲವರು ಆತನನ್ನು ಮಹಾನ್ ಯೋಧ ಎಂದೇ ಕೊಂಡಾಡಿದರೆ, ಹಲವರು ಡಕಾಯಿತಿ ನಡೆಸುವವನು ಎಂದು ಖಂಡಿಸಿದ್ದರು. ಹಾಗಾಗಿ ಈ ಚಿತ್ರ ಆ ದ್ವಂದ್ವಗಳ ಹಿನ್ನೆಲೆಯನ್ನೇ ಆಧರಿಸಿ ರೂಪುಗೊಂಡಿದೆ. ಇಂಥ ಜಟಿಲ, ಸಾಹಸಿ, ಸಂಘರ್ಷಮಯ ವ್ಯಕ್ತಿಯ ಚಟುವಟಿಕೆ, ಸ್ವಾತಂತ್ರ್ಯಪೂರ್ವ ಹೋರಾಟಗಳು ಭಾರೀ ರೋಮಾಂಚನಕಾರಿಯಾಗಿವೆ. ಇದು ಬಂಗಾಳದ ಇತಿಹಾಸ ಪ್ರತಿಬಿಂಬಿಸುತ್ತದೆ. ಈ ಚಿತ್ರ ಅತಿ ಯಶಸ್ವಿ ಎನಿಸಿ, ಎಲ್ಲರ ಪ್ರಶಂಸೆ ಗಿಟ್ಟಿಸಿದೆ. ನಿರ್ದೇಶಕ : ಪಥಿಕೃತ್ ಬಸು, ಸಂಗೀತ : ಶಾಂತನು ಮೊಯಿತ್ರಾ. ಪ್ರಮುಖ ತಾರಾಗಣದಲ್ಲಿ ಜೀತ್, ಟೋಟಾ ರಾಯ್, ಚಂದನ್ ಸೇನಾ, ಲೋಕನಾಥ್ ಡೇ, ಕೌಶಿಕ್ ಸೇನ್, ಪ್ರಿಯಾಂಕಾ ಸರ್ಕಾರ್ ಮುಂತಾದವರಿದ್ದಾರೆ.
ಗುಜರಾತಿ : ಮಾರನ್
ಇದು ಕಮರ್ಷಿಯಲ್ ಮನರಂಜನೆಗಿಂತ ಮರೆಯಲಾಗದ ಭಾವನಾತ್ಮಕ ಪ್ರಭಾವ ಬೀರುವ ಚಿತ್ರ. ಇದು ಹೆಂಗಸರ ಕಳ್ಳಸಾಗಾಣಿಕೆ, ಪಿತೃಪ್ರಭುತ್ವ, ಹಿಂಸೆ ಕುರಿತಾದ ಪ್ರಭಾವಶಾಲಿ ಕಥಾಹಂದರ ಹೊಂದಿದೆ. ಎರಡೂವರೆ ಗಂಟೆಯ ಸೀಮಿತ ಕಾಲಾವಧಿಯಲ್ಲಿ ನಿರ್ದೇಶಕರು ಅತಿ ಕ್ಲಿಷ್ಟಕರ ಕಾನ್ಸೆಪ್ಟ್ ವಿವರಿಸಲು ಪ್ರಯತ್ನಿಸಿದ್ದಾರೆ, ಇದು ಪ್ರಶಂಸನೀಯ. ಯಶ್ ಸೋನಿ ಇಲ್ಲಿ ಅತಿ ಪ್ರಬುದ್ಧ ಅಭಿನಯದಿಂದ ಇಡೀ ಚಿತ್ರದ ಜವಾಬ್ದಾರಿ ಹೊತ್ತಿದ್ದಾರೆ. ದೀಕ್ಷಾ ಜೋಶಿ ಇವರಿಗೆ ಭಾವನಾತ್ಮಕ ಪದರಗಳ ಜೊತೆ ನೀಡಿದ್ದಾರೆ. ತರ್ಜನಿ ಭಾದ್ಲಾ ತಮ್ಮ ಮರೆಯಲಾಗದ ಅಭಿನಯದಿಂದ ಸದಾ ನೆನಪಲ್ಲಿ ಉಳಿಯುತ್ತಾರೆ. ದಿವ್ಯಾ ಮಹೇಂದ್ರಭಾಯಿ ತಮ್ಮ ಚಿತ್ರಕಥೆಯನ್ನು ಅದ್ಭುತವಾಗಿ ಹೆಣೆದಿದ್ದಾರೆ.
ಇದು ಕೇವಲ ಥ್ರಿಲ್ಲರ್, ಮಾರಾಮಾರಿಗೆ ಮೀಸಲಾಗದೆ, ಸಾಮಾಜಿಕ ಕಳಕಳಿಯುಳ್ಳ ಗಟ್ಟಿ ಕಥಾವಸ್ತುವನ್ನು ಯಶಸ್ವಿಯಾಗಿ ನಿರೂಪಿಸುವ ಚಿತ್ರ ಎನಿಸಿದೆ. ನಮಗೆ ತಿಳಿಯದ ವಾಸ್ತವಿಕ ಕ್ರೂರ ಲೋಕದ ಪರಿಚಯ ಇಲ್ಲಿದೆ. ಇತ್ತೀಚಿನ ಎಲ್ಲಾ ಗುಜರಾತಿ ಚಿತ್ರಗಳನ್ನೂ ಹಿಂದಿಕ್ಕಿ ಇದು ಗೆಲ್ಲುತ್ತದೆ. ಸಂಗೀತ : ಆಲಾಪ್/ಪಾರ್ಥ್ ದೀಪೀಶ್ ದೇಸಾಯಿ.
ಮರಾಠಿ : ಮಾಮಾಚ್ಯಾ ಗೋವ್ಯಾಲಾ ಜಾಯಾ

ಸ್ನೇಹಿತರೆಲ್ಲರೂ ಕೂಡಿ ಮಜಾ ಉಡಾಯಿಸಲು ಒಂದು ಸಲವಾದರೂ ಗೋವಾಗೆ ಹೋಗಬೇಕೆಂಬುದು ಎಲ್ಲಾ ಪಡ್ಡೆ ಹುಡುಗರ ಕನಸು. ಈ ಇಡೀ ಚಿತ್ರ ಹುಡುಗರ ಇಂಥ ಕನಸಿನ ಸುತ್ತಲೇ ಸುತ್ತುತ್ತದೆ. ಪ್ಲಾನಿಂಗ್ ವರ್ಷಗಟ್ಟಲೇ ನಡೆದರೂ, ಯಾವುದೂ ಫಲಿಸದು. ಇವೆಲ್ಲ ಪೀಕಾಟ ಸೇರಿ ಉತ್ತಮ ಹಾಸ್ಯಮಯ ಚಿತ್ರವಾಗಿ ಇದು ಯಶಸ್ವಿ ಎನಿಸದೆ. ಚಿತ್ರಕಥೆಯೇ ಇಡೀ ಚಿತ್ರದ ಹೈಲೈಟ್. ಆ ಮೂಲಕ ನಿರ್ದೇಶಕರು ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಾರೆ. ಮೂವರು ಸ್ನೇಹಿತರು ಗೋವಾಗೆ ಹೊರಡಬೇಕೆನ್ನುವ ತರಾತುರಿಯಲ್ಲಿ ತಂದುಕೊಂಡ ಗೋಜಲುಗಳ ಸಂಗಮ ಈ ಕಾಮಿಡಿ ಚಿತ್ರ. ಗೋವಾದ ರಮ್ಯ ಚಿತ್ರಣ ಇಡೀ ಚಿತ್ರದ ಪ್ಲಸ್ ಪಾಯಿಂಟ್. ನಿರ್ದೇಶನ : ವಿಜೂ ಮಾನೇ, ಸಂಗೀತ : ಅಧೂತ್ ಗುಪ್ತಾ. ಪ್ರಮುಖ ತಾರಾಗಣದಲ್ಲಿ ಅಭಿಜಿತ್, ಮೃಣಮಯೀ, ಸಾಹಿಲ್, ಶುಭಂಕರ್, ಆರ್ಯಾ, ದೇವೇಂದ್ರ, ನಿನಾದ್ ಸಾನಿಯಾ ಮುಂತಾದವರಿದ್ದಾರೆ.
ತೆಲುಗು : ರಾವ್ ಬಹಾದ್ದೂರ್
ಮಾಮೂಲಿ ಕಮರ್ಷಿಯಲ್ ಮನರಂಜನೆ ಬಿಟ್ಟು, ಉತ್ತಮ ನಟನೆ, ಪ್ರಯೋಗಾತ್ಮಕತೆ ಬಯಸುವ ಪ್ರೇಕ್ಷಕರಿಗೆ ಇದು ಹೇಳಿ ಮಾಡಿಸಿದ ಯಶಸ್ವೀ ಚಿತ್ರ. ಇಂಥ ಪ್ರಯೋಗಶೀಲ ಚಿತ್ರದ ದಕ್ಷ ನಿರ್ದೇಶನದಿಂದ, ಅವರು ಇಡೀ ಪ್ರೇಕ್ಷಕ ಸಮುದಾಯ ಸಹನೆಯಿಂದ ಕ್ಲೈಮ್ಯಾಕ್ಸ್ ಗೆ ಕಾಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕ ಇಲ್ಲಿ ವಿಭಿನ್ನ ಗೆಟಪ್ಸ್ ನಲ್ಲಿ ಕಾಣಿಸಿಕೊಳ್ಳುವುದೊಂದು ಹೊಸ ಪರಿಯಾಗಿದೆ. 70ರ ದಶಕದ ಈ ಕಥೆ ರಾಮಪ್ಪ ರಾವ್ ಬಹಾದ್ದೂರ್ ಕುರಿತಾಗಿದೆ. ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಆತ ಕೆಲವೇ ದಿನಗಳ ಅತಿಥಿ, ಎಂದು ವೈದ್ಯರು ಹೇಳುತ್ತಾರೆ. ಆದರೂ ಆತ ಹಲವು ಸಾಹಸಕ್ಕಿಳಿದು, ಚಿತ್ರವಿಚಿತ್ರ ಕಲ್ಪನೆಗಳಿಂದ, ಮಾನಸಿಕ ಉದ್ವೇಗಕ್ಕೆ ಒಳಗಾಗುತ್ತಾನೆ. ಇದೊಂದು ವಿಭಿನ್ನ ಸೈಕಲಾಜಿಕಲ್ ಡ್ರಾಮಾ. ರಾಯ್ ಸ್ಟೋರಿ ಆಗಿದ್ದರೂ, ಸಮಾಜದಲ್ಲಿ ಅನೇಕ ಪೀಳಿಗೆಗಳ ವಿಭಿನ್ನ ಮುಖಗಳನ್ನು ಹೇಗೆ ಡೀಲ್ ಮಾಡುತ್ತಾರೆ ಎಂಬುದೇ ಕುತೂಹಲಕಾರಿ ಅಂಶ. ನಿರ್ದೇಶನ : ವೆಂಕಟೇಶ್ ಮಹಾ, ಸಂಗೀತ : ವಿಜಯ್ ಏಸುದಾಸ್. ಮುಖ್ಯ ತಾರಾಗಣದಲ್ಲಿ ಸತ್ಯದೇವ್, ವಿಕಾಸ್ ಮುಪ್ಪಾಲಾ, ದೀಪಾ ಥಾಮಸ್ ಮುಂತಾದವರಿದ್ದಾರೆ.





