ಕನ್ನಡದ ಮೊಟ್ಟ ಮೊದಲ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ತಮ್ಮ ಕೆರಿಯರ್ ಬಗ್ಗೆ ಇಲ್ಲಿ ಏನು ಹೇಳಿಕೊಂಡಿದ್ದಾರೆ…..?
`ನನ್ನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಸಿಗುವ ಕಲ್ಪನೆಯೂ ನನಗಿರಲಿಲ್ಲ, ಹಾಗೊಮ್ಮೆ ಟಿವಿಯಲ್ಲಿ ನನ್ನ ಹೆಸರು ಘೋಷಣೆಯಾದಾಗ ನನ್ನ ಸಂತೋಷ ತಾಳಲಾಗದೆ ಗಟ್ಟಿಯಾಗಿ ಕೂಗಿದ್ದೂ ಇದೆ. ದೇವರ ಮುಂದೆ ಹಲವು ಘಳಿಗೆ ಕುಳಿತು ಗಟ್ಟಿಯಾಗಿ ಅವನನ್ನು ಕರೆದದ್ದೂ ಇದೆ. ನನಗೆ ನನ್ನ ಅಭಿನಯಕ್ಕೆ ಪ್ರಶಸ್ತಿ ಲಭಿಸಿರುವುದನ್ನು ನಂಬಲು ಸಹ ಹಲವು ಗಂಟೆಗಳ ಕಾಲ ಸಮಯ ಹಿಡಿಯಿತು,’ ಎಂದು ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ ವಿಜೇತರಾದ ನಟಿ ರೂಪಶ್ರೀ ವರ್ಕಾಡಿ ಹೇಳಿದ್ದಾರೆ. ಈ ಪ್ರಶಸ್ತಿ ದೊರಕಿರುವುದು ಅತ್ಯಂತ ಖುಷಿ ನೀಡಿದೆ. ವೃತ್ತಿ ಜೀವನದಲ್ಲಿನ ಸಾಕಷ್ಟು ಏಳುಬೀಳುಗಳ ನಡುವೆ ಈ ಪ್ರಶಸ್ತಿ ಸಂತಸ ತಂದಿದೆ ಎಂದು ಅವರು ಹೇಳಿದ್ದಾರೆ.
ಗಡಿನಾಡು ಕಾಸರಗೋಡಿನ ಮಂಜೇಶ್ವರ ತಾಲ್ಲೂಕಿನ ವರ್ಕಾಡಿ ಮೂಲದ ರೂಪಶ್ರೀ ವರ್ಕಾಡಿ ಅವರಿಗೆ `ಮಿಥ್ಯ’ ಕನ್ನಡ ಚಿತ್ರದ ಅಭಿನಯಕ್ಕಾಗಿ `ಅತ್ಯುತ್ತಮ ಪೋಷಕ ನಟಿ’ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ದೊರಕಿದೆ.

92 ವರ್ಷಗಳ ಸುದೀರ್ಘ ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆಯನ್ನು ಕರಾವಳಿಯ ಪ್ರತಿಭೆಯೊಂದು ಮಾಡಿ ತೋರಿಸಿದ್ದಾರೆ. ಅದೆಷ್ಟೋ ನಟಿಯರು ತೆರೆಯ ಮೇಲೆ ಮಿಂಚಿ ಮರೆಯಾಗಿದ್ದರೂ, ಕನ್ನಡದ ಪೋಷಕ ನಟಿಯೊಬ್ಬರಿಗೆ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯ ಮನ್ನಣೆ ಈವರೆಗೆ ಸಿಕ್ಕಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ `ಮಿಥ್ಯ’ ಕನ್ನಡ ಸಿನಿಮಾದ ಅದ್ಭುತ ಅಭಿನಯಕ್ಕಾಗಿ ಕರಾವಳಿಯ ಹೆಮ್ಮೆಯ ನಟಿ ರೂಪಶ್ರೀ ವರ್ಕಾಡಿರಿಗೆ ರಾಷ್ಟ್ರೀಯ ಪ್ರಶಸ್ತಿ ಒಲಿದುಬಂದಿದ್ದು, ಇಡೀ ಕರ್ನಾಟಕವೇ ಹೆಮ್ಮೆಪಡುವಂತೆ ಮಾಡಿದ್ದಾರೆ. ಈ ಹಿಂದೆ ಅರುಂಧತಿ ನಾಗ್ ರಿಗೆ ಬಾಲಿವುಡ್ ನ `ಪಾ’ ಚಿತ್ರದ ನಟನೆಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರಕಿತ್ತು. ಆದರೆ ಕನ್ನಡ ಚಿತ್ರಕ್ಕೆ ದೊರೆತಿದ್ದು ಇದೇ ಮೊದಲು.
ಎರಡೂವರೆ ದಶಕಗಳಿಗೂ ಹೆಚ್ಚಿನ ಕಾಲದ ಕಲಾ ಪಯಣದಲ್ಲಿ ಕನ್ನಡ, ತುಳು ಭಾಷೆಗಳ 700ಕ್ಕೂ ಅಧಿಕ ನಾಟಕಗಳಲ್ಲಿ 4000ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದ ಹೆಗ್ಗಳಿಕೆ ರೂಪಶ್ರೀಯರದಾಗಿದೆ. ರಂಗ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ರ `ಸಂಸಾರದ ಸರ್ಕಸ್’ ನಾಟಕದ ಮೂಲಕ ವೃತ್ತಿಪರ ರಂಗಭೂಮಿಗೆ ಕಾಲಿಟ್ಟಿದ್ದು, ಹಲವು ತಂಡಗಳ ನಾಟಕಗಳಲ್ಲಿ ಪಾತ್ರ ನಿರ್ವಹಿಸಿರುವ ರೂಪಶ್ರೀ ಕ್ರಿಸ್ಟೋಫರ್ ನೀನಾಸಂ ಹಾಗೂ ವಿದ್ದು ಉಚ್ಚಿಲ್ ರಂಗಾಯಣರಿಂದ ರಂಗ ತರಬೇತಿ ಪಡೆದಿದ್ದಾರೆ.
ರೂಪಶ್ರೀ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲ್ಲೂಕಿನ ವರ್ಕಾಡಿ ಗ್ರಾಮದ ಹರೀಶ್ ಶೆಟ್ಟಿಗಾರ್ ಹಾಗೂ ದಿ. ಹೇಮಾವತಿ ದಂಪತಿ ಪುತ್ರಿ. ತುಳು, ಕನ್ನಡ, ಕೊಂಕಣಿ, ಬ್ಯಾರಿ, ಅರೆಭಾಷೆ ಸೇರಿದಂತೆ 85ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 2017-2025ರಲ್ಲಿ ರೆಡ್ ಎಫ್ ಎಂ ತುಳು ಫಿಲಂ ಅವಾರ್ಡ್ ನಲ್ಲಿ ಉತ್ತಮ ಪೋಷಕ ನಟಿ, ಸ್ಯಾಂಡಿಸ್ ಕಂಪನಿ ಆಯೋಜಿಸಿರು ಸಿಎಫ್ಎನಲ್ಲಿ ಸತತ ಮೂರು ಬಾರಿ ಉತ್ತಮ ಪೋಷಕ ನಟಿ ಹಾಗೂ ವರ್ಸಟೈಲ್ ಅಕ್ಬರ್ ಪ್ರಶಸ್ತಿ ಪಡೆದಿರು ರೂಪಶ್ರೀ ವರ್ಕಾಡಿ ಅಭಿನಯದ `ಬ್ಯಾರಿ’ ಚಿತ್ರ ಸ್ವರ್ಣ ಕಮಲ ಪ್ರಶಸ್ತಿ ಹಾಗೂ `ಟ್ರಿಪಲ್ ತಲಾಖ್’ ಚಿತ್ರ ರಾಜ್ಯ ಪ್ರಶಸ್ತಿಯನ್ನೂ ಪಡೆದಿದೆ.

500 ರೂ. ಆಸೆಗೆ ನಟನೆ
ರೂಪಶ್ರೀಗೆ ರಂಗಭೂಮಿಯ ಆಕರ್ಷಣೆಯೇನೂ ಇರಲಿಲ್ಲ. ಅದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಅವರನ್ನು ಈ ಜೀವನ ಆಯ್ಕೆಗೆ ಪ್ರೇರೇಪಿಸಿದೆ. ರೂಪಶ್ರೀಯರ ತಾಯಿ, ರೂಪಶ್ರೀ ಚಿಕ್ಕವರಿದ್ದಾಗಲೇ ಅಸುನೀಗಿದ್ದರು. ಇಬ್ಬರು ಅಕ್ಕ ಹಾಗೂ ಒಬ್ಬ ತಂಗಿ ಇದ್ದು, ತಂದೆಯ ದುಡಿಮೆ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಸಣ್ಣದೊಂದು ಹಳ್ಳಿಯ ಮುಗ್ಧ ಹುಡುಗಿಯಾಗಿದ್ದ ರೂಪಶ್ರೀಗೆ 9ನೇ ತರಗತಿಯಲ್ಲಿದ್ದಾಗ ನಟನೆಯ `ಎಬಿಸಿಡಿ’ ಕೂಡ ಗೊತ್ತಿರಲಿಲ್ಲ. ಊರಿನ ನಾಟಕ ತಂಡವೊಂದಕ್ಕೆ ತುರ್ತಾಗಿ ನಟಿಯ ಅಗತ್ಯವಿದ್ದಾಗ ಅವರನ್ನು ಕರೆದರು. ಒಂದು ತಿಂಗಳ ನಾಟಕದ ಕ್ಯಾಂಪ್ ಮುಗಿದ ಮೇಲೆ ಕೊನೆಯಲ್ಲಿ 500 ರೂ. ಸಂಭಾವನೆ ನೀಡಿದರು. 9ನೇ ತರಗತಿ ಕಲಿಯುತ್ತಿದ್ದ ರೂಪಶ್ರೀಗೆ ಅಷ್ಟು ದೊಡ್ಡ ಮೊತ್ತ ಒಟ್ಟಿಗೆ ಸಿಕ್ಕಿದ್ದು ಭಾರಿ ಖುಷಿ ಕೊಟ್ಟಿತ್ತು. ಆ 500 ರೂ. ಆಸೆಗೆ ಮುಂದಿನ ನಾಟಕ ಒಪ್ಪಿಕೊಂಡಿದ್ದಾಗಿತ್ತು. ನಂತರದಲ್ಲಿ 5,000 ರೂ. ಸಿಕ್ಕಿತು. ಹೀಗೆ ಹಣದ ಆಸೆಗೆ ಆರಂಭವಾದ ನಾಟಕದ ಮೇಲಿನ ಗೀಳು, ಕಾಲಕ್ರಮೇಣ ನಟನೆಯ ಮೇಲಿನ ಆಳವಾದ ಪ್ರೀತಿಯಾಗಿ ಬದಲಾಯಿತು. ಅದು ಅವರನ್ನು ಇಂದು ರಾಷ್ಟ್ರ ಪ್ರಶಸ್ತಿ ಪಡೆಯುವವರೆಗೆ ತಂದು ನಿಲ್ಲಿಸಿದೆ.
20 ವರ್ಷಗಳ ನಟನಾ ಅನುಭವ
ಕಳೆದ 20 ವರ್ಷಗಳಿಂದ ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರೂಪಶ್ರೀ, ಪ್ರಮುಖವಾಗಿ ತುಳು, ಬ್ಯಾರಿ, ಕೊಂಕಣಿ, ಹವ್ಯಕ ಹಾಗೂ ಕನ್ನಡ ಭಾಷೆಗಳಲ್ಲಿ 85ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತುಳುವಿನ `ಬಿರ್ಸೆ’ ಅವರ ಮೊದಲ ಸಿನಿಮಾ. ಬ್ಯಾರಿ ಭಾಷೆಯ `ಬ್ಯಾರಿ,’ ಕನ್ನಡದಲ್ಲಿ `ಒಂದು ಮೊಟ್ಟೆಯ ಕಥೆ, ಸೈಕೋ’ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರೂಪಶ್ರೀ, 1920ರ ಹರೆಯದಲ್ಲೇ ನಾಟಕಗಳಲ್ಲಿ ತಾಯಿಯ ಪಾತ್ರಗಳನ್ನು ಮಾಡುತ್ತಿದ್ದರು. `ಮಿಥ್ಯ’ ಚಿತ್ರಕ್ಕೆ 3 ಪ್ರಶಸ್ತಿಗಳ ಗರಿ`ಮಿಥ್ಯ’ನ್ನು ರಕ್ಷಿತ್ ಶೆಟ್ಟಿಯರ ಪರಂ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಸುಮಂತ್ ಭಟ್ ರ ನಿರ್ದೇಶನವಿದೆ. ಇದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಅತೀಶ್ ಎಸ್. ಶೆಟ್ಟಿರವರಿಗೆ ಉತ್ತಮ ಬಾಲನಟ ಪ್ರಶಸ್ತಿ ಹಾಗೂ ಜ್ಯೋತಿ ಪಾತ್ರದಲ್ಲಿ ಕಾಣಿಸಿಕೊಂಡ ರೂಪಶ್ರೀಗೆ ಉತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ. `ಮಿಥ್ಯ’ ಸಿನಿಮಾದ ಪ್ರಧಾನ ಪಾತ್ರದ ಚಿಕ್ಕಮ್ಮನ ಪಾತ್ರದಲ್ಲಿ ರೂಪಶ್ರೀ ನಟಿಸಿದ್ದಾರೆ.
ಅನಿರೀಕ್ಷಿತವಾಗಿ ಹೆತ್ತವರನ್ನು ಕಳೆದುಕೊಂಡ 11 ವರ್ಷದ ಮಿಥುನ್, ಮುಂಬೈನಿಂದ ಕರಾವಳಿ ಉಡುಪಿಗೆ ಸ್ಥಳಾಂತರಗೊಂಡು, ಚಿಕ್ಕಮ್ಮನ ಮನೆಯಲ್ಲಿ ಹೊಸ ಬದುಕಿಗೆ ಹೊಂದಿಕೊಳ್ಳಲು ಹೆಣಗಾಡುವ ಭಾವನಾತ್ಮಕ ಹೋರಾಟವೇ ಈ ಚಿತ್ರದ ಕಥೆಯಾಗಿದೆ.
ತುಳು ಚಿತ್ರ `ಇಂಬು‘ಗೆ ಗೌರವ
ಈ ಸಾಲಿನ ಚಲನಚಿತ್ರ ರಾಷ್ಟ್ರ ಪ್ರಶಸ್ತಿಗಳಲ್ಲಿ ಕನ್ನಡದ ಜೊತೆಗೆ ತುಳು ಭಾಷೆಯ `ಇಂಬು’ ಸಿನಿಮಾಗೆ ಸಹ ಗೌರವ ಸಂದಿದೆ. ಕರಾವಳಿಯ ಭಾಷೆಯಾದ ತುಳುವಿನ `ಇಂಬು’ ಉತ್ತಮ ತುಳು ಚಿತ್ರ ಎನಿಸಿಕೊಂಡಿದೆ. ಅವಿದ್ಯಾವಂತ ಬಡ ದೈವ ಪಾತ್ರಯ ಬದುಕು ಒಂದು ಫೋನ್ ನಿಂದ ಬದಲಾಗುತ್ತಾ ಹೋಗುವ ಪಲ್ಲಟವನ್ನು ಚಿತ್ರಿಸಿರುವ `ಇಂಬು’ ಸಿನಿಮಾದಲ್ಲಿ ನವೀನ್ ಡಿ. ಪಡೀಲ್ಗಂಭೀರ ಪಾತ್ರದಲ್ಲಿ ನಟಿಸಿದ್ದಾರೆ. 18 ವರ್ಷದ ಹಿಂದೆ `ಗಗ್ಗರ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದಕ್ಕಿಸಿಕೊಂಡಿದ್ದ ನಿರ್ದೇಶಕ ಶಿವಧ್ವಜ್ ಶೆಟ್ಟಿ ಪಾಲಿಗಿದು ಎರಡದೇ ರಾಷ್ಟ್ರ ಪ್ರಶಸ್ತಿ ಎನಿಸಿದೆ. `ಇಂಬು’ ಸಿನಿಮಾ ಎಂಟಕ್ಕೂ ಹೆಚ್ಚು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ.
ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ ಸಿನಿಮಾ ಬಗೆಗಿನ ಉತ್ತಮ ಪುಸ್ತಕವೆಂಬ ಗೌರವಕ್ಕೆ ಪಾತ್ರವಾಗಿದೆ ಎನ್ನುವ ಸಂಗತಿ ಗಮನಾರ್ಹವಾಗಿದೆ.
– ರಾಘವೇಂದ್ರ ಅಡಿಗ ಎಚ್ಚೆನ್





