ಕನ್ನಡ ನಾಡಿನ ಪ್ರಸಿದ್ಧ ಭರತನಾಟ್ಯ ಕಲಾವಿದೆ ಸುಮಂಗಲಾ ಪ್ರಭುರವರ ಸಾಧನೆ ಹಿರಿದು. ಇವರ ಬಗ್ಗೆ ಹೆಚ್ಚಿನ ವಿವರಗಳನ್ನು ಈ ಮೂಲಕ ತಿಳಿಯೋಣವೇ….?
ಭಾರತೀಯ ಸಂಸ್ಕೃತಿಯ ಶ್ರೇಷ್ಠ ಕಲಾಪ್ರಕಾರವಾಗಿಯೂ ಮತ್ತು ನಮ್ಮ ದೇಶದ ಪಾರಂಪರಿಕ ಕಲೆಗಳ ಹೆಗ್ಗುರುತುಗಳಲ್ಲಿ ಒಂದಾಗಿಯೂ ಗುರುತಿಸಲ್ಪಟ್ಟಿರುವುದು ಭರತನಾಟ್ಯ. ಇಂತಹ ಭರತನಾಟ್ಯ ಕಲಾವಿದರು ನಮ್ಮ ನಾಡಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರಲ್ಲಿ ಹಲವರು ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡುವುದರೊಡನೆ ನೂರಾರು ಜನರಿಗೆ ಭರತನಾಟ್ಯ ಕಲಿಕೆಯನ್ನೂ ಸಹ ನೀಡುತ್ತಿದ್ದಾರೆ. ಸುಮಂಗಲಾ ಪ್ರಭು ಅಂತಹ ಅಪರೂಪದ ಕಲಾವಿದೆಯಾಗಿದ್ದಾರೆ.
ಸುಮಂಗಲಾ ಕಲಾ ಸಂಕುಲ ಮುಂತಾದ ವೇದಿಕೆಗಳಲ್ಲಿ ಹಾಗೂ ವಾರಾಣಸಿಯ ಟ್ರೇಡ್ ಫೆಸಿಲಿಟೇಶನ್ ಸೆಂಟರ್ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಭರತನಾಟ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಅಲ್ಲದೆ, ಪ್ರಸ್ತುತ ಅನೇಕರಿಗೆ ನೃತ್ಯ ತರಗತಿಗಳನ್ನೂ ಸಹ ನಡೆಸಿಕೊಡುತ್ತಿದ್ದಾರೆ.
ಮೂಲ, ಹಿನ್ನೆಲೆ ಸುಮಂಗಲಾ ಹುಟ್ಟಿ ಬೆಳೆದದ್ದು ಉಡುಪಿಯಲ್ಲಿ, ಆದರೆ ವಿವಾಹದ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಸಾಫ್ಟ್ ವೇರ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು, ಇರ ಪತಿ ಕೂಡ ಅದೇ ಕ್ಷೇತ್ರದಲ್ಲಿ ಉದ್ಯೋಗಲಿದ್ದಾರೆ.

ವ್ಯಾಸಂಗ
ಬೆಂಗಳೂರಿನ ರೇವಾ ವಿಶ್ವವಿದ್ಯಾನಿಲಯದಲ್ಲಿ ಭರತನಾಟ್ಯದಲ್ಲಿ ಎಂ.ಎ. ವ್ಯಾಸಂಗ ಮಾಡಿರುವ ಸುಮಂಗಲಾ, ಗಂಗೂಬಾಯಿ ವಿಶ್ವವಿದ್ಯಾನಿಲಯದಲ್ಲಿ ವಿದ್ವತ್ ಪದವಿ ಹಾಗೂ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಳಿಯಿಂದ ವಿಶಾರದ ಪದವಿ ಪಡೆದಿರುತ್ತಾರೆ.
ಶಿಷ್ಯತ್ವ
ಸುಮಂಗಲಾ ವಿದ್ವಾನ್ ಶರತ್ ಸೂರ್ಯನಾರಾಯಣ್ ರ ಶಿಷ್ಯೆಯಾಗಿದ್ದು, ಉಪಾದ್ಯೇ ಸ್ಕೂಲ್ ಆಫ್ ಡ್ಯಾನ್ಸ್ ನಿಂದ ಅಂತರ್ಶಾಲಾ ವಿದ್ಯಾಭ್ಯಾಸ ಮಾಡಿದ್ದಾರೆ. ಅಲ್ಲದೆ, ವಿದ್ವಾನ್ ಮೈತ್ರಿ ರಾವ್ ರಿಂದ ಪ್ರಾಥಮಿಕ ನೃತ್ಯ ತರಬೇತಿ ಹೊಂದಿದ್ದಾರೆ.
ವಿಶೇಷ ಎಂದರೆ ತಮ್ಮ ಪ್ರಾಥಮಿಕ ಶಾಲಾ ದಿನಗಳಲ್ಲಿ ನೃತ್ಯಾಭ್ಯಾಸದಲ್ಲಿ ತೊಡಗಿದ್ದ ಸುಮಂಗಲಾ, ನಂತರ ಅದರಿಂದ ದೂರವಾಗಿ ವಿದ್ಯಾಭ್ಯಾಸದತ್ತ ಒಲವು ತೋರಿದ್ದರು. ಆ ಮೂಲಕ ಎಂಜಿನಿಯರಿಂಗ್ ಮುಗಿಸಿದ ಅವರು, ವಿವಾಹದ ಬಳಿಕ ಮತ್ತೆ ನೃತ್ಯದತ್ತ ತಮ್ಮ ಒಲವು ತೋರಿದ್ದಲ್ಲದೆ, ಸತತ ಅಭ್ಯಾಸ ನಡೆಸಿ ಯಶಸ್ವಿಯಾಗಿದ್ದಾರೆ.
ವಿವಿಧ ಪ್ರದರ್ಶನಗಳು
ಸುಮಂಗಲಾ ಇದುವರೆಗೆ ಹತ್ತು ಹಲವು ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದು, ಅವುಗಳ ಪೈಕಿ ಕೆಲವು ಪ್ರಮುಖವಾದವುಗಳು ಎಂದರೆ, ಹಂಪಿ ಉತ್ಸವ, ಮೈಸೂರು ದಸರಾ, ಚಿದಂಬರಂ, ತಂಜಾವೂರು ಮತ್ತಿತರ ಕಡೆಗಳಲ್ಲಿ ನಡೆಯುವ ನಾಟ್ಯಾಂಜಲಿ ಉತ್ಸವಗಳು.
ಇದರೊಂದಿಗೆ ಸುಮಂಗಲಾ ಪ್ರಭು ಇತ್ತೀಚೆಗೆ ಡೆಲ್ಲಿ ಪ್ರೆಸ್ ಗ್ರೂಪ್ ವತಿಯಿಂದ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ `ಗೃಹಶೋಭಾ ಎಂಪವರ್ ಹರ್ 2026′ ಕಾರ್ಯಕ್ರಮದಲ್ಲಿ ತಮ್ಮ ಮಗಳು ಅದಿತಿ ಪ್ರಭು ಜೊತೆ ವಿಶೇಷ ನೃತ್ಯ ಪ್ರದರ್ಶನ ನೀಡುವ ಮೂಲಕ ನೆರೆದಿದ್ದ ನೂರಾರು ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ.
ವಾರಾಣಸಿಯಲ್ಲಿ ಪ್ರದರ್ಶನ
ಇದಲ್ಲದೆ ಕಾಶಿ ಅಥವಾ ವಾರಾಣಸಿಯ ಪ್ರಸಿದ್ಧ ವಿಶ್ವನಾಥ ಬಾಬಾ ಮಂದಿರದಲ್ಲಿ ಸಹ ಸುಮಂಗಲಾ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಕೊಲ್ಲೂರು ಬ್ರಹ್ಮೋತ್ಸವ, ಉಡುಪಿ ಪರ್ಯಾಯ ಮಂಡೋತ್ಸವ ಸೇರಿ ಇನ್ನೂ ಹಲವು ವಿಶೇಷ ಸಾಂಸ್ಕೃತಿಕ ವೇದಿಕೆಗಳಲ್ಲಿ ಅವರು ಪ್ರದರ್ಶನ ನೀಡಿರುತ್ತಾರೆ. ಸುಮಂಗಲಾರ ಈ ಎಲ್ಲಾ ಕಲಾ ಸಾಧನೆಗೆ ಅವರ ಕುಟುಂಬ ಸಂಪೂರ್ಣ ಬೆಂಬಲ ನೀಡುತ್ತಿದೆ. ಇದರಿಂದಲೇ ತಾವು ಇಷ್ಟು ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಅವರು ಹೇಳುತ್ತಾರೆ.
ವಿಶೇಷ ತರಬೇತುದಾರರು
ಸುಮಂಗಲಾ ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನ ನೃತ್ಯಾರಾಧನಾ ಸ್ಕೂಲ್ ಆಫ್ ಡ್ಯಾನ್ಸ್ ನಲ್ಲಿ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೂರದರ್ಶನದಲ್ಲಿ `ಬಿ’ ಗ್ರೇಡ್ ಕಲಾವಿದೆಯಾಗಿರುವ ಇವರ ಪ್ರತಿಭೆಯನ್ನು ಗುರುತಿಸಿ, ರಾಜ್ಯ ಮತ್ತು ಹೊರರಾಜ್ಯಗಳ ನಾನಾ ಸಂಘ ಸಂಸ್ಥೆಗಳು, ಇವರನ್ನು ಗೌರವಿಸಿ ಸನ್ಮಾನಿಸಿವೆ.
ಪ್ರಶಸ್ತಿ ಪುರಸ್ಕಾರ
ಆಂಧ್ರಪ್ರದೇಶದ ಗುಂಟೂರಿನ ಶ್ರೀಸಾಯಿ ಮಂದಿರ ಕೂಚ್ಚುಪುಡಿ ಅಕಾಡೆಮಿಯಿಂದ `ಯುವ ಕಲಾರತ್ನ’ ಪುರಸ್ಕಾರಕ್ಕೆ ಸುಮಂಗಲಾ ಭಾಜನರಾಗಿದ್ದಾರೆ.
ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಸಂಸ್ಥೆಯವರಿಂದ ಸುಮಂಗಲಾರಿಗೆ `ನಾಟ್ಯ ಮಯೂರಿ’ ಎನ್ನುವ ಬಿರುದು ದೊರಕಿದೆ. ಹೊಸೂರು ನಾಟ್ಯಾಂಜಲಿ ಸಂಸ್ಥೆ ಇವರಿಗೆ ನಾಟ್ಯ ಕಲಾಮಣಿ, ಕಲಾಶ್ರೀ ಮತ್ತು ಭರತ ಕಲಾಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಿದೆ.
ಮುಂದಿನ ಸಾಧನೆಗಳು
ನೃತ್ಯ ಕ್ಷೇತ್ರದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವ ಸುಮಂಗಲಾ ಪ್ರಭುರವರಿಗೆ ತಾವು ಇನ್ನಷ್ಟು ಸಾಧಿಸಬೇಕು, ಮತ್ತಷ್ಟು ಕಲಾಸಕ್ತರಿಗೆ ತರಬೇತಿ ನೀಡಬೇಕು ಎನ್ನುವ ಕನಸಿದೆ. ಅವರ ಎಲ್ಲಾ ಕನಸುಗಳು ಕಾರ್ಯರೂಪಕ್ಕೆ ಬರಲಿ, ಜೀವನದಲ್ಲಿ ಮತ್ತುಷ್ಟು ಹೆಸರು ಗಳಿಸಿ, ನಾಡಿಗೆ ಹೆಚ್ಚಿನ ಕೀರ್ತಿ ತರಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.
– ರಾಘವೇಂದ್ರ ಅಡಿಗ ಎಚ್ಚೆನ್





