ತಮ್ಮ ಜೀವನದಲ್ಲಿ ನಡೆದ ಯಾವುದೋ ವೈಯಕ್ತಿಕ ಕಹಿ ಘಟನೆಯಿಂದ ಮದುವೆ ಬೇಡವೆಂದು ನಿರ್ಧರಿಸಿದ್ದ ಮಂದಾಕಿನಿ ಗೌತಮ್ ಮುಂದೆ ತಮ್ಮ ನಿರ್ಧಾರ ಬದಲಾಯಿಸಲು ಸಾಧ್ಯವಾಯಿತೇ…..?
ಮಂದಾಕಿನಿ ಡಿಪಾರ್ಟ್ ಮೆಂಟ್ ಗೆ ಹೊಸದಾಗಿ ಎಚ್.ಓ.ಡಿಯಾಗಿ ಕರ್ತವ್ಯಕ್ಕೆ ರಿಪೋರ್ಟ್ ಮಾಡಿಕೊಂಡಿದ್ದ ಗೌತಮ್ ಸರ್ ಬಗ್ಗೆಯೇ ಯೋಚಿಸತೊಡಗಿದ್ದಳು. ಒಳ್ಳೇ ಶಿಸ್ತಿನ ಸಿಪಾಯಿ ಎಂದು ಹೆಸರು ಪಡೆದಿದ್ದ ಗೌತಮ್. ಅಷ್ಟೇ ಪ್ರತಿಭಾವಂತನೂ, ಮೇಧಾವಿಯೂ ಹೌದು. ಕರ್ತವ್ಯಕ್ಕೆ ಹಾಜರಾಗುವುದಕ್ಕಿಂತ ಮೊದಲೇ ಅವರ ಬಗ್ಗೆ ಒಂದಿಷ್ಟು ನೆಗೆಟಿವ್ ಊಹಾಪೋಹಗಳು ಡಿಪಾರ್ಟ್ ಮೆಂಟ್ ನಲ್ಲಿ ಕೇಳಿಬರತೊಡಗಿದ್ದವು. `ಈ ಗೌತಮ್ ತುಂಬಾ ಸ್ಟ್ರಿಕ್ಟ್, ಮುಂಗೋಪಿ, ಸುಮ್ಮಸುಮ್ಮನೇ ತನ್ನ ಕೈಕೆಳಗಿನ ಉದ್ಯೋಗಿಗಳಿಗೆ ಲೆಫ್ಟ್ ರೈಟ್ ತೆಗೆದುಕೊಳ್ಳುತ್ತಾನೆ. ತಾನೇ ಬುದ್ಧಿವಂತ, ತನ್ನದೇ ಸಾರ್ವಭೌಮಾಧಿಕಾರ, ತಾನು ಹೇಳಿದಂತೆಯೇ ನಡೆಯಬೇಕು, ತನ್ನ ಮಾತೇ ಅಲ್ಟಿಮೇಟ್, ಯಾರೂ ಎದುರು ಪ್ರಶ್ನಿಸಬಾರದು, ಬ್ರಹ್ಮಚಾರಿ, ಹೆಂಡತಿ ಮಕ್ಕಳು ಇಲ್ಲದ, ಹೊತ್ತು ಗೊತ್ತಿನ ಪರಿವೇ ಇಲ್ಲದೆ ಕೆಲಸ ಮಾಡು, ಎಲ್ಲರೂ ತನ್ನಂತೆ ಸಮಯದ ಪರಿವೆ ಇಲ್ಲದೇ ಕೆಲಸ ಮಾಡಬೇಕು, ಡಿಪಾರ್ಟ್ ಮೆಂಟ್ ಗೆ ಒಳ್ಳೆಯ ಹೆಸರು ತರಬೇಕು, ವಿಶ್ವವಿದ್ಯಾಲಯದ ಹೆಸರು ರಾಜ್ಯ ಮಟ್ಟದಲ್ಲಿ ಮಿಂಚಬೇಕು,’ ಎಂದು ಗೌತಮ್ ಬಗ್ಗೆ ಕ್ಯಾಂಪಸ್ ನಲ್ಲಿ ಮಾತಾಡಿಕೊಳ್ಳತೊಡಗಿದ್ದರು.
ಗೌತಮನ ಬಗೆಗಿನ ಊಹಾಪೋಹಗಳು ಬರೀ ಊಹಾಪೋಹಗಳೇ ಎಂದು ಸಾಬೀತಾಗತೊಡಗಿವೆ. ಎಲುಬಿಲ್ಲದ ನಾಲಿಗೆಯ ಜನರು ಹೀಗೆಲ್ಲಾ ಕಥೆ ಕಟ್ಟಿ ಅವರ ತೇಜೋವಧೆಗೆ ಪ್ರಯತ್ನಿಸಿದರೇನೋ ಎಂದೆನಿಸತೊಡಗಿದೆ. ಗೌತಮ್ ಬಗ್ಗೆ ಹೊರಿಸಿದ್ದ ಇಲ್ಲಸಲ್ಲದ ಆರೋಪಗಳಲ್ಲಿ ಹುರುಳಿಲ್ಲ ಎಂಬುದು ಅವರು ಕರ್ತವ್ಯಕ್ಕೆ ಹಾಜರಾದ ಕೆಲವೇ ದಿನಗಳಲ್ಲಿ ಮನದಟ್ಟಾಗಿತ್ತು.
ಅವರು ನಮ್ಮ ವಿದ್ಯಾಸಂಸ್ಥೆಗೆ ರಿಪೋರ್ಟ್ ಮಾಡಿಕೊಂಡ ಆರು ತಿಂಗಳಲ್ಲಿ ಅವರೆಂದೂ ಯಾರ ಮೇಲೂ ಹರಿಹಾಯ್ದಿದ್ದನ್ನು ಕಂಡಿಲ್ಲ, ಕೇಳಿಲ್ಲ. ತುಂಬನೇ ಶಾಂತ ಸ್ವಭಾವದ, ಜ್ಞಾನವನ್ನೇ ಮೈಗೂಡಿಸಿಕೊಂಡ ವ್ಯಕ್ತಿ ಅಂತ ಅನ್ನೋದು ನನ್ನ ಗಮನಕ್ಕೆ ಬಂದಿರುವುದಂತೂ ನಿಜ. ಸರಳ, ಸಜ್ಜನಿಕೆಯ ವ್ಯಕ್ತಿ ಅಂತ ಕ್ಯಾಂಪಸ್ ನ ಬಹುತೇಕರಿಗೆ ಈಗಾಗಲೇ ಮನದಟ್ಟಾಗಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ತುಂಬಾ ಡೀಸೆಂಟ್ ಫೆಲೋ ಅಂತ ಎದೆ ತಟ್ಟಿಕೊಂಡು ಹೇಳಬಹುದು.

ಯಾವ ಸಿಬ್ಬಂದಿಯ ಇಮೇಜಿಗೂ ಧಕ್ಕೆ ತರುವಂತೆ ಯಾವತ್ತೂ ನಡೆದುಕೊಂಡಿಲ್ಲ. ತಾನು ಡಿಪಾರ್ಟ್ ಮೆಂಟಿನ ಎಚ್.ಓ.ಡಿ ಅಂತ ಯಾವತ್ತೂ ಗತ್ತು ತೋರಿಸಿಲ್ಲ. ಮಹಿಳಾ ಸಿಬ್ಬಂದಿಗಳಿಗೆ ತುಂಬಾನೇ ಗೌರವ ಕೊಡುವ ವ್ಯಕ್ತಿ ಅಂತ ಕ್ಯಾಂಪಸ್ ನಲ್ಲಿ ಮನೆಮಾತಾಗಿರುವುದೂ ನಿಜ. ಐವತ್ತರ ಅಂಚಿನಲ್ಲಿರುವ ಗೌತಮ್ ಸರ್ 40ರ ಅಂಚಿನಲ್ಲಿರುವವರೇನೋ ಎಂಬಂತೆ ಫಿಝಿಕಲ್ ಮೇಂಟೇನ್ ಮಾಡಿಕೊಂಡಿರುವುದು ಢಾಳಾಗಿ ಕಾಣುತ್ತಿದೆ. ಜೊತೆಗೆ ಸ್ಛುರದ್ರೂಪಿಯೂ ಹೌದು. ನಿಜವಾಗಿಯೂ ಹ್ಯಾಂಡ್ಸಮ್ ಗೈ. ಒಮ್ಮೆ ನೋಡಿದರೆ ಮತ್ತೆ ನೋಡಬೇಕೆನ್ನುವ ಆಕರ್ಷಕ ಪರ್ಸನಾಲಿಟಿ ಅವರದು. ಅದೇಕೋ ಏನೋ? ಆಸಾಮಿ ಮದುವೆಯನ್ನೇ ಮಾಡಿಕೊಂಡಿಲ್ಲ. ಅದಕ್ಕೂ ಕೆಲವರು, `ಲವ್ ಫೇಲ್ಯೂರ್ ಅಂತೆ, ಯಾವಳನ್ನೋ ತುಂಬಾ ಡೀಪ್ ಆಗಿ ಲವ್ ಮಾಡುತ್ತಿದ್ದರಂತೆ, ಅವಳು ಇವರಿಗೆ ಕೈಕೊಟ್ಟು ಮತ್ಯಾವನ ತೆಕ್ಕೆಯೊಳಗೆ ಸೇರಿಕೊಂಡಳಂತೆ, ಮದುವೆ ಮಾಡಿಕೊಂಡಿದ್ದರಂತೆ, ಹೆಂಡತಿ ಇವರಿಗೆ ಕೈಕೊಟ್ಟು ತನ್ನ ಪ್ರಿಯಕರನ್ನು ಅಪ್ಪಿಕೊಂಡಂತೆ, ಕುಟುಂಬದ ಜವಾಬ್ದಾರಿ ನಿಭಾಯಿಸುವಷ್ಟರಲ್ಲಿ ಮದುವೆ ಮಾಡಿಕೊಳ್ಳುವುದನ್ನೇ ಮರೆತುಬಿಟ್ಟರಂತೆ……’
ಕಪೋಲಕಲ್ಪಿತರು ತಲೆಗೊಂದರಂತೆ ಮಾತಾಡಿಕೊಂಡು ತನುಮನಗಳನ್ನು ಸಂತೈಸಿಕೊಳ್ಳುತ್ತಿರುವುದೂ ಕಾಣುತ್ತಿದೆ. ಆದರೆ ಯಾರೂ ಅವರ ಜೊತೆಗೆ ಕುಳಿತು ಆಪ್ತವಾಗಿ ಮಾತಾಡಿ ಅವರೆದೆಯೊಳಗಿನ ನೋವನ್ನು ಆಲಿಸಿದವರಿಲ್ಲವೆಂದೇ ಹೇಳಬಹುದು. ಬರೀ ಕೊಂಕು, ಕೊಳಕು ಮಾತಾಡುವುದು, ಇನ್ನೊಬ್ಬರ ಮನಸ್ಸಿಗೆ ನೋವಾಗುವಂತೆ ಚುಚ್ಚಿ ಚುಚ್ಚಿ ಮಾತಾಡಿ, ಇಲ್ಲ ಸಲ್ಲದ್ದನ್ನು ಆರೋಪಿಸಿ ಖುಷಿ ಅನುಭವಿಸುವುದೇ ಸುತ್ತಲಿನ ಜನರ ಆದ್ಯಕರ್ತವ್ಯವೇನೋ ಎಂಬಂತಾಗಿ ಹೋಗಿದೆ.
ಆಡಿಕೊಂಡರೂ ಈಗೀಗ ಗೌತವ್ ಸರ್ ರನ್ನು ಅರ್ಥ ಮಾಡಿಕೊಂಡಿದ್ದಾರೆಂದು ಅನಿಸತೊಡಗಿದೆ. ಅಪರಂಜಿ ಯಾವತ್ತಿದ್ದರೂ ಅಪರಂಜಿಯೇ ಅಲ್ಲವೇ….? ಇಲ್ಲಸಲ್ಲದ್ದನ್ನು ಆಡಿಕೊಂಡು ತಮ್ಮ ವಿಕೃತ ಹೀನ ಮನಸ್ಸುಗಳನ್ನು ತಣಿಸಿಕೊಂಡರೂ ಗೌತಮ್ ಸರ್ ರ ಗುಣಗಾನಕ್ಕೆ ಮುಂದಾಗಿರುವುದು ಒಂದು ರೀತಿಯ ಒಳ್ಳೆಯ ಬೆಳವಣಿಗೆ ಎಂದೇ ಹೇಳಬಹುದು. ನಿಜವಾಗಿಯೂ ಹೇಳಬೇಕೆಂದರೆ ಅವರೊಂಥರ ಉದಾತ್ತ ಜೀವಿಯೇ. ಅವರಿವರನ್ನು ಹಳಿದವರಲ್ಲ, ತಮ್ಮ ಕೆಲಸವಾಯಿತು, ತಾವಾಯಿತು ಎಂಬಂತಿದ್ದಾರೆ. ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ತಮ್ಮ ಬದುಕನ್ನೇ ಮೀಸಲಿಟ್ಟಿದ್ದಾರೇನೋ ಎಂದೆನಿಸುತ್ತಿದೆ, ಹೀಗೆ ಸಾಗಿತ್ತು ಮಂದಾಕಿನಿಯ ಯೋಚನಾ ಲಹರಿ.
`ಹೌದು, ಗೌತಮ್ ಸರ್ ಬಗ್ಗೆ ನನಗ್ಯಾಕಿಷ್ಟು ಕಳಕಳಿ, ಚಿಂತೆ, ಯೋಚನೆ….?’ ಎಂಬ ವಿಚಾರ ಹೊಳೆದಾಗ ಮಂದಾಕಿನಿ ಮನಸ್ಸು ನಿರುತ್ತರವಾಯಿತು.
`ಹೌದಲ್ವಾ…..? ನನಗೇಕೆ ಗೌತಮ್ ಸರ್ ಬಗ್ಗೆ ಕುತೂಹಲ….? ಅವರು ನನಗೆ ಬಾಸ್ ಅಷ್ಟೇ. ಅಷ್ಟಲ್ಲದೇ ಮತ್ತೇನಿದೆ ನಮ್ಮಿಬ್ಬರ ಮಧ್ಯೆ….? ಅಷ್ಟೇನಾ….? ಮತ್ತಿನ್ನೇನೂ ಇಲ್ವಾ…..? ಎದೆಯೊಳಗೆ ಥೋಡಾ ಕುಛ್… ಕುಛ್…. ಥೂ….! ಅಂಥದ್ದೇನೂ ಇಲ್ಲಪ್ಪಾ….? ಅವರೊಡನೇಕೆ ಮಾತಿಗಿಳಿಯಬಾರದು…..?
`ಅರೆದೆಯೊಳಗೆ ತಣ್ಣನೆಯ ಹಿಮಾಲಯವಿದೆಯೇ ಅಥಲ ಲಾವಾಗ್ನಿಯನ್ನು ಹೊತ್ತುಕೊಂಡ ಜ್ವಾಲಾಮುಖಿ ಇದೆಯೋ ಎಂಬುದನ್ನು ತಿಳಿದುಕೊಳ್ಳಬೇಕಲ್ಲ…..? ಆವಾಗಲೇ ಅನುಮಾನದ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಅಲ್ಲವೇ….? ಸರಿ, ಹಾಗಾದರೆ ಅಷ್ಟೇ ಮಾಡುವಾ….’ ಎಂತಹುದೋ ಗಟ್ಟಿ ನಿರ್ಧಾರವೆಂದು ಮಂದಾಕಿನಿಯ ಎದೆಯೊಳಗೆ ಅಂಕುರಿಸಿತ್ತು.
ಆ ಶನಿವಾರ ಕೆಲಸದ ಸಮಯ ಮುಗಿದು ಸಿಬ್ಬಂದಿಗಳೆಲ್ಲರೂ ತುರುಸಿನ ವೇಗದಲ್ಲಿ ತಮ್ಮ ತಮ್ಮ ಮನೆಗಳತ್ತ ಹೊರಟಿದ್ದರು. ಮಂದಾಕಿನಿ ಎಚ್.ಓ.ಡಿಯವರ ಕ್ಯಾಬಿನ್ ಗೆ ನುಗ್ಗಿದಳು. ಬಿರುಗಾಳಿಯಂತೆ ಬಂದ ಮಂದಾನಿಕಿಯನ್ನು ಗಮನಿಸಿದ ಗೌತಮ್, “ಬನ್ನಿ ಬನ್ನಿ ಮಂದಾಕಿನಿಯವರೇ, ಬಿರುಗಾಳಿಯಂತೆ ನುಗ್ಗುತ್ತಿರುವಿರಲ್ಲ, ಏನಾದರೂ ತುರ್ತು ವಿಷಯವಿತ್ತಾ….?” ಎಂದು ಆತ್ಮೀಯವಾಗಿ ಹೇಳುತ್ತಾ ಅವಳಿಗೆ ಕುಳಿತುಕೊಳ್ಳಲು ತಿಳಿಸಿದ.
“ಅಂತಹದ್ದೇನಿಲ್ಲ ಸರ್….. ನಾಳೆ ರವಿವಾರ ಅಲ್ವಾ….. ನೀವು ಬೆಳಗಿನ ಮತ್ತು ಮಧ್ಯಾಹ್ನದ ಊಟಕ್ಕೆ ನನ್ನ ಮನೆಗೆ ಬರಬೇಕೆಂದು ಕೇಳಿಕೊಳ್ಳಲು ಬಂದಿರುವೆ,” ಎಂದಳು.
“ಏನಾದರೂ ವಿಶೇಷವಿದೆಯಾ….?”
“ಹಾಗೇನಿಲ್ಲ, ನೀವು ನನ್ನ ಮನೆಗೆ ಬರುವುದೇ ವಿಶೇಷ. ತುಂಬಾ ದಿನಗಳಿಂದ ನಿಮ್ಮನ್ನು ಇನ್ ವೈಟ್ ಮಾಡಬೇಕೆಂದುಕೊಂಡಿದ್ದೆ. ದಯವಿಟ್ಟು ಬೆಳಗ್ಗೆ 9.30ಕ್ಕೆಲ್ಲಾ ಬಂದುಬಿಡಿರಿ,” ಕ್ಯಾಂಪಸ್ ನ ತನ್ನ ವಸತಿ ಗೃಹದ ಬಗ್ಗೆ ವಿವರ ನೀಡಿದಳು ಮಂದಾಕಿಸಿ.
“ಅಲ್ರೀ…. ನಿಮಗ್ಯಾಕೆ ತೊಂದರೆ….?” ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಗೌತಮ್.
“ಇದರಲ್ಲಿ ತೊಂದರೆ ಏನು ಬಂತು ಸರ್…..?” ಮಂದಾಕಿನಿಯ ಆಪ್ತಭಾವದ ಒತ್ತಾಯಕ್ಕೆ ಗೌತಮ್ ಮಣಿಯಲೇ ಬೇಕಾಯಿತು.
ರವಿವಾರ ಬೆಳಗ್ಗೆ 9.30ಕ್ಕೆ ಮೊದಲೇ ಗೌತಮ್ ಮಂದಾಕಿನಿಯ ಮನೆ ಬಾಗಿಲ ಕರೆಗಂಟೆ ಬಟನ್ ಒತ್ತಿದ್ದ.
“ಬಂದೇ….” ಎಂದೆನ್ನುತ್ತಾ ಬಾಗಿಲು ತೆರೆದವಳು ಮಂದಾಕಿನಿಯೇ. ಗೌತಮ್ ನನ್ನು ಕಾಣುತ್ತಲೇ, “ಶುಭೋದಯ ಸರ್. ಬನ್ನಿ ಬನ್ನಿ…. ಒಳಗಡೆ ಬನ್ನಿ…..” ಎಂದು ಸ್ವಾಗತ ಕೋರಿದ ಅವಳ ಮೆಲ್ನುಡಿಯಲ್ಲಿ ಮಧುರತೆ, ಆತ್ಮೀಯತೆ ಇದ್ದವು.
ಗೌತಮ್ ಪ್ರತಿ ಶುಭಾಶಯ ಹೇಳಿದ. ಅವಳ ನಡೆನುಡಿಯಲ್ಲಿ ಹಬ್ಬದ ವಾತಾವರಣದ ಸಂಭ್ರಮವಿತ್ತು. ತಲೆ ಸ್ನಾನ ಮಾಡಿ ಉದ್ದನೆಯ ನಳಿಗೂದಲನ್ನು ಹಗುರವಾಗಿ ಗಂಟು ಹಾಕಿಕೊಂಡಿದ್ದರಿಂದ ಅವಳ ಚೆಲುವು ನೂರ್ಮಡಿಸಿತ್ತು. ಗಾಢ ಹಳದಿ ಮಿಶ್ರಿತ ಕೇಸರಿ ಬಣ್ಣದ ಸೀರೆಯಲ್ಲಿ ಸೌಂದರ್ಯ ದೇವತೆ ಧರೆಗಿಳಿದು ಬಂದಂತೆ ಕಾಣುತ್ತಿದ್ದಳು. ತನ್ನ ಕೈಯಲ್ಲಿದ್ದ ಹಣ್ಣು, ಬಿಸ್ಕತ್ತಿನ ಕ್ಯಾರಿಬ್ಯಾಗ್ ನ್ನು ಅವಳಿಗೊಪ್ಪಿಸಿದ.
“ಅರೇ ಸರ್ ಇದೇನಿದು….?”
“ಅಂತಹದ್ದೇನಿಲ್ಲ ಮಂದಾಕಿನಿ, ಜಸ್ಟ್ ಫಾರ್ ಫಾರ್ಮಾಲಿಟಿ ಅಷ್ಟೇ. ಇರಲಿ, ಇಲ್ಲಿ ಯಾರು ಯಾರು ಇದ್ದೀರಿ….?” ಹಾಗೇ ಪ್ರಶ್ನಿಸಿದ ಗೌತಮನ ಕಣ್ಣುಗಳು ಮಂದಾಕಿನಿಯ ಕುಟುಂಬದ ಸದಸ್ಯರ ಹುಡುಕಾಟಕ್ಕೆ ಮುಂದಾಗಿದ್ದವು.
“ಜಸ್ಟ್ ನಾನೊಬ್ಬಳೇ ಸರ್.”
“ಮತ್ತೆ ವಾಟ್ ಅಬೌಟ್ ಯುವರ್ ಫ್ಯಾಮಿಲಿ ಮೆಂಬರ್ಸ್…..? ಗಂಡ, ಮಕ್ಕಳೂ…..?”
“ನಾನಿರುವುದೇ ಒಬ್ಬಳು.”
“ಹೌದಾ….? ಮತ್ತೆ….?”
“ಸರ್, ಅದೆಲ್ಲ ಆಮೇಲೆ ಮಾತಾಡೋಣ. ಮೊದಲು ಬೆಳಗಿನ ಉಪಾಹಾರ ಸೇವಿಸುವಿರಂತೆ….” ಎನ್ನುತ್ತಾ ಮಂದಾಕಿನಿ ಗೌತಮ್ ನನ್ನು ಡೈನಿಂಗ್ ಟೇಬಲ್ ಬಳಿ ಕರೆದೊಯ್ದಳು.
ಧಾರಾಳವಾಗಿ ತುಪ್ಪ, ದ್ರಾಕ್ಷಿ, ಗೋಡಂಬಿ, ಏಲಕ್ಕಿ, ಲವಂಗ ಹಾಕಿ ಮಾಡಿದ ಘಮಘಮಿಸುವ ಕೇಸರಿಭಾತ್ ನಾಲಿಗೆಯಲ್ಲಿ ನೀರೂರಿಸುವಂತಿತ್ತು. ಜೊತೆಗೆ ಕ್ರಿಸ್ಪಿಯಾಗಿದ್ದ ದೋಸೆ, ಆಲೂಪಲ್ಲೆ, ಕಾಯಿಚಟ್ನಿಗಳು ಇದ್ದವು.
“ಸರ್, ನೀವು ಮೊದಲು ನಾಷ್ಟಾಕ್ಕೆ ಕುಳಿತುಬಿಡಿರಿ. ನಾನು ಬಿಸಿಬಿಸಿ ದೋಸೆ ಹೊಯ್ದು ಕೊಡುವೆ.”
“ಹಾಗೇನೂ ಬೇಡ. ಒಂದ್ನಾಲ್ಕು ದೋಸೆ ಹಾಕಿ ಹಾಟ್ ಬಾಕ್ಸ್ ನಲ್ಲಿ ಹಾಕಿಕೊಂಡುಬಿಡಿರಿ. ನೀವೊಬ್ಬರೇ ಇದ್ದೀರಲ್ಲ, ಜೊತೆಯಾಗೇ ಉಪಾಹಾರ ಸೇವಿಸೋಣ.”
ಗೌತಮನ ಮಾತಿಗೆ ಮಂದಾಕಿನಿ ಪ್ರತಿಯಾಡಲಿಲ್ಲ. ಕುರುಕುರು ಎನ್ನುವ ಅರ್ಧ ಡಜನ್ ದೋಸೆಗಳನ್ನು ಹಾಟ್ ಬಾಕ್ಸಿಗೆ ಹಾಕಿಕೊಂಡು ನಂತರ ಎರಡು ತಟ್ಟೆಗಳಿಗೆ ಎಲ್ಲವನ್ನೂ ಬಡಿಸಿ ಒಂದನ್ನು ಗೌತಮನ ಮುಂದಿರಿಸಿದಳು. ಇಬ್ಬರೂ ನಿಧಾನವಾಗಿ ತಮ್ಮ ಬಾಯಿಗಳಿಗೆ ಕೆಲಸಕೊಟ್ಟರು.
“ವಾಹ್…! ಕೇಸರಿಬಾತ್, ದೋಸೆ ತುಂಬಾ ರುಚಿಕಟ್ಟಾಗಿವೆ,” ಗೌತಮ್ ಹೇಳಿದಾಗ ಮಂದಾಕಿನಿ ಮತ್ತೆ ಮತ್ತೆ ಬಡಿಸಿದಳು. ಹೊಟ್ಟೆ ಬಿರಿಯುವಂತೆ ತಿಂದ ಗೌತಮ್. ನಂತರ ಘಮಘಮಿಸುವ ಕಾಫಿಯ ಕಪ್ ಕೈಗೆ ಬಂದಿತು.
“ಮಂದಾಕಿನಿಯವರೇ, ನೀವೇಕೆ ಮದುವೆಯಾಗಿಲ್ಲ…..?” ಕಾಫಿ ಹೀರುತ್ತಾ ಮೆಲ್ಲಗೇ ಮಾತಿಗೆ ಮುಂದಾದ ಗೌತಮ್.
“ಅಂತಹ ಗುರುತರವಾದ ಕಾರಣವೇನಿಲ್ಲ. ಹೀಗೇ ಅಷ್ಟೇ. ಬೇಡವೆನ್ನಿಸಿತು, ಒಂಟಿಯಾಗಿ ಆರಾಮಾಗಿದ್ದೇನೆ…..”
“ನಿಮಗೆ ಇನ್ನೂ ವಯಸ್ಸಿದೆ, ರೂಪ ಇದೆ. ಆದಷ್ಟೂ ಬೇಗನೇ ಮದುವೆಯಾಗುವುದು ಒಳಿತು,” ಗೌತಮ್ ಕಳಕಳಿ ವ್ಯಕ್ತಪಡಿಸಿದ.
“ನೋಡೋಣ ಸರ್. ಭಗವಂತನ ತೀರ್ಮಾನ ಏನಿದೆಯೋ, ಹೇಗಿದೆಯೋ ಬಲ್ಲವರಾರು….? ಅದಿರಲಿ, ನೀವು ಒಂಟಿಯಾಗಿದ್ದೀರಲ್ಲ, ಅದೇಕೆ….?”
“ನನ್ನದೋ ಮುಗಿದ ಕಥೆ. ಅರ್ಧ ಶತಕವನ್ನು ಮೊನ್ನೆಯಷ್ಟೇ ತಲುಪಿದ್ದೇನೆ. ಇನ್ನೇನಿದ್ದರೂ ಇಳಿಯಸ್ಸಿನ ಪಯಣ ಅಷ್ಟೇ. ಹೇಗೊ ನಡೆಯುತ್ತೆ. ನಿಮ್ಮದಾದರೂ ಬಾಳು ಬೆಳಗಲಿ ಅಂತ ನನ್ನ ಅನಿಸಿಕೆ. ಆದಷ್ಟೂ ಬೇಗನೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಿ. ಎಲ್ಲವೂ ತಾನಾಗಿಯೇ ಸರಿಹೋಗುತ್ತದೆ.”
“ಈ ಮಾತು ನಿಮಗೂ ಅನ್ವಯವಾಗುವುದಿಲ್ಲವೇ? ಫಿಫ್ಟಿ ಅಂದರೆ ಈಗೇನು ದೊಡ್ಡ ವಯಸ್ಸಲ್ಲ….!”
“ನನಗೀಗ ಮದುವೆಯಾಗುವ ವಯಸ್ಸೇ….?”
“ಅರವತ್ತರ ನಂತರ ಮದುವೆಯಾಗುವ ಗಂಡಸರನ್ನು ನೋಡಿಲ್ಲವೇ….?”
“ಅವರವರ ಭಾವ….” ಮಂದಾಕಿನಿ ಅಷ್ಟಕ್ಕೇ ಸುಮ್ಮನಾದಳು.
ಗೌತಮನ ಸಾನಿಧ್ಯದಲ್ಲಿ ಮಂದಾಕಿನಿಗೆ ಸಮಯ ಸರಿದಿದ್ದೇ ತಿಳಿಯಲಿಲ್ಲ. ಮಾತಾಡ್ತಾ ಮಾತಾಡ್ತಾ ಊಟಕ್ಕೂ ತಯಾರಿ ಮಾಡಿದಳು. ಊಟ ಮಾಡುತ್ತಾ ಗೌತಮ್ ಮಂದಾಕಿನಿಯನ್ನೊಮ್ಮೆ ತೀಕ್ಷ್ಣವಾಗಿ ದಿಟ್ಟಿಸಿದ.
`ಚೆಲುವೆಯರ ಸಾಲಿನಲ್ಲಿ ನಿಲ್ಲುವಂತಹ ರೂಪ ಇವಳದು. ಅದ್ಯಾವ ಕಹಿಘಟನೆಯ ನೋವು ಇವಳೆದೆಯನ್ನು ಅಡರಿಕೊಂಡಿದೆಯೋ ಏನೋ….? ಕಣ್ಣಿಗೆ ಕಾಣದ ಭಗವಂತ ಅನ್ನೋನು ಮನುಷ್ಯ ಜೀವಿಯನ್ನು ತನ್ನಿಚ್ಛೆಯಂತೆ ಕುಣಿಸುತ್ತಿದ್ದಾನೆ ಅಲ್ಲವೇ? ಅಳಿಸುವವನೂ ಅವನೇ, ನಗಿಸುವವನೂ ಅವನೇ. ಅವನಾಟ ಬಲ್ಲವರಾರು?’ ಹೀಗೆ ಏನೇನೋ ಮಥಿಸಿದ ಮನಸ್ಸಿನಲ್ಲಿ. ಊಟ ಮುಗಿಯುತ್ತಲೇ ಗೌತಮ್ ಮಂದಾಕಿನಿಗೆ ಹೃತ್ಪೂರ್ವ ಧನ್ಯವಾದ ಹೇಳಿ ಅಲ್ಲಿಂದ ತನ್ನ ವಸತಿಗೃಹದತ್ತ ಹೆಜ್ಜೆ ಹಾಕಿದ. `ಗೌತಮ್ ಸರ್ ಬಂದಿದ್ದಕ್ಕೆ ಇಂದು ಹೊತ್ತು ಹೋಗಿದ್ದೇ ಗೊತ್ತಾಗಲಿಲ್ಲ. ಅವರೂ ತಮ್ಮ ಬಾಳಿನ ಗೋಳಿನ ಕಥೆಯನ್ನು ಬಿಚ್ಚಿಡಲಿಲ್ಲ, ನಾನೂ ನನ್ನ ಗೋಳಿನ ಕಥೆಯನ್ನು ತೆರೆದಿಡಲಿಲ್ಲ ಅಲ್ಲವೇ….? ಒಬ್ಬೊಬ್ಬರ ಜೀವನ ಒಂದೊಂದು ತರಹ. ದೇವರು ಯಾರನ್ನೂ ಸುಖವಾಗಿಟ್ಟಿಲ್ಲ ಎಂದು ಅನಿಸುತ್ತಿದೆ,’ ಮಂದಾಕಿನಿ ಮನದೊಳಗೇ ಅಂದುಕೊಂಡಳು.
ಮಂದಾಕಿನಿ ಹಾಗೇ ಹಾಸಿಗೆಯ ಮೇಲೆ ಒರಗಿದಳು. ಪುಷ್ಕಳ ಊಟವಾಗಿದ್ದರೂ ಕಣ್ರೆಪ್ಪೆಗಳು ಒಂದನ್ನೊಂದು ತಬ್ಬಿಕೊಳ್ಳಲಿಲ್ಲ. ಮನದಲ್ಲಿ ಏನೇನೋ ಯೋಚನೆಗಳು. ಕಾಲೇಜಿನ ದಿನಗಳು ಅವಳ ಮನಕ್ಕೆ ಲಗ್ಗೆ ಇಡತೊಡಗಿದ.
`ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಗ, ನನ್ನ ಮನಸ್ಸಿನೊಳಗೆ ನುಸುಳಿದನು ಪ್ರವೀಣ್ ಎನ್ನುವ ಚಾಕ್ಲೇಟ್ ಹುಡುಗ. ನನ್ನ ಬಾಳಿಗೆ ಹೀರೋ ಆಗಲು ಆಸೆ ವ್ಯಕ್ತಪಡಿಸಿದಾಗ ನನ್ನೆದೆ ಗರಿಗೆದರಿದ ನವಿಲಿನಂತೆ ಕುಣಿದಾಡಿದ್ದು ನಿಜವೇ.
`ಪ್ರವೀಣ್, ಆರ್ಥಿಕವಾಗಿ ಸಬಲವಾಗಿದ್ದ ಕುಟುಂಬದಿಂದ ಬಂದನವಾಗಿದ್ದ ಚೆಂದದ ಹುಡುಗ.
`ಯಾರಿಗುಂಟು ಯಾರಿಗಿಲ್ಲ ಇಂತಹ ಸದವಕಾಶ…’ ಎಂದು ಭಾವಿಸಿ ನಾನವನ ಪ್ರೀತಿಯ ತೆಕ್ಕೆಯೊಳಗೆ ಸೇರಿಕೊಂಡೆ. ಬಿಇ ಮುಗಿಸಿಕೊಂಡ ನಂತರ ಅವನು ಉದ್ಯೋಗಕ್ಕಾಗಿ ಬೆಂಗಳೂರು ಸೇರಿಕೊಂಡ. ಪ್ರತಿಷ್ಠಿತ ಸಾಫ್ಟ್ ಟವೇರ್ ಕಂಪನಿಯೊಂದರಲ್ಲಿ ಅವನಿಗೆ ಕೆಲಸ ಸಿಕ್ಕಿತ್ತು. `ನಾನು ಬಿವಿಬಿಯಲ್ಲೇ ಎಂಟೆಕ್ ಗೆ ಸೇರಿಕೊಂಡೆ. ನಮ್ಮಿಬ್ಬರ ಮಾತುಗಳು ಫೋನ್ ನಲ್ಲಿ ಕಳೆಗಟ್ಟುತ್ತಿದ್ದ. ಪ್ರವೀಣ್ ಕೆಲಸಕ್ಕೆ ಸೇರಿಕೊಂಡು ವರ್ಷದ ಮೇಲಾಗಿತ್ತು. ಅವನಾಗಿಯೇ ಫೋನ್ ಮಾಡಿ ಮಾತಾಡುವುದು ನಿಧಾನವಾಗಿ ಕಡಿಮೆಯಾಗತೊಡಗಿತು.
`ನಂತರದ ದಿನಗಳಲ್ಲಿ ಅವನು ನನ್ನ ಕರೆಯನ್ನು ಸ್ವೀಕರಿಸುವ ಗೊಡವೆಗೇ ಹೋಗುತ್ತಿರಲಿಲ್ಲ. ನಾನು ನಾಲ್ಕುಂಟು ಬಾರಿ ಡಯಲ್ ಮಾಡಿದಾಗ, `ನಾನು ಕೆಲಸದಲ್ಲಿ ತುಂಬಾ ಬಿಜಿ ಇದ್ದೆ…. ಬಾಸ್ ಎದುರುಗಡೆ ಇದ್ದೆ….. ಬೈಕ್ ಓಡಿಸುತ್ತಿದ್ದೆ…..’ ಹಾಗೆ…. ಹೀಗೆ ಎಂದೆಲ್ಲಾ ಹೇಳತೊಡಗಿದ.
`ಕೆಲವು ದಿನಗಳ ನಂತರ, `ಪ್ರವೀಣ್, ಇನ್ನು ಕೆಲವೇ ದಿನಗಳಲ್ಲಿ ನನ್ನ ಎಂಟೆಕ್ ಮುಗಿಯುತ್ತದೆ. ನಾನೂ ಬೆಂಗಳೂರಲ್ಲೇ ಕೆಲಸ ಹುಡುಕ್ತೀನಿ, ಇಬ್ಬರೂ ಕೂಡಿಕೊಳ್ಳೋಣ,’ ಎಂದು ಅವನಿಗೆ ಫೋನ್ ಮಾಡಿ ಹೇಳಿದಿ.
`ಅದಕ್ಕವನು, `ಹ್ಞಾಂ…..! ಮಂದಾಕಿನಿ, ನಾನು ನಿನಗೆ ಹೇಳುವುದನ್ನೇ ಮರೆತುಬಿಟ್ಟೆ. ನಾನಿಲ್ಲಿ ಸಂಯುಕ್ತಾ ಎನ್ನುವ ಹುಡುಗಿಯ ಲವ್ ನಲ್ಲಿ ಬಿದ್ದಿದ್ದೇನೆ. ನಮ್ಮ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದಾಳೆ, ಕಳೆದ ವಾರವಷ್ಟೇ ಸಿಂಪಲ್ಲಾಗಿ ನಮ್ಮಿಬ್ಬರಿಗೂ ಎಂಗೇಜ್ ಮೆಂಟ್ ಆಯಿತು. ಆದ್ದರಿಂದ ನೀನು ನನ್ನನ್ನು ಮರೆತು ಬೇರೆಯವನೊಂದಿಗೆ ನಿನ್ನ ಬದುಕು ಕಟ್ಟಿಕೋ. ಅನಾವಶ್ಯಕವಾಗಿ ಮೇಲಿಂದ ಮೇಲೆ ಫೋನ್ ಮಾಡಿ ನನ್ನ ತಲೆ ತಿನ್ನಬೇಡ. ಗುಡ್ ಬೈ ಮಂದಾಕಿನಿ,’ ಎಂದವನೇ ಪ್ರವೀಣ್ ಫೋನ್ ಕಟ್ ಮಾಡಿದ. ಮುಂದೆ ಆ ನಂಬರ್ ನಲ್ಲಿ ಅವನು ಸಿಗಲೇ ಇಲ್ಲ. ಅಂತಹ ಹೀನ ಮನಸ್ಸಿನ ನೀಚ ಮನುಷ್ಯ ಅವನು.
ಬಿಇ ಕೊನೆಯ ವರ್ಷದಲ್ಲಿದ್ದಾಗ ಒಂದು ದಿನ ಪ್ರವೀಣ್, `ಮಂದಾ, ನಾವಿಬ್ಬರೂ ಮನಸಾರೆ ಪ್ರೀತಿಸುತ್ತಿರುವುದಂತೂ ನಿಜ. ಪದವಿಯ ನಂತರ ಉದ್ಯೋಗಕ್ಕೆ ಸೇರಿ ಮದುವೆಯೂ ಆಗಲಿದ್ದೇವೆ. ನಾಲ್ಕೈದು ದಿನ ಗೋವಾಕ್ಕೆ ಹೋಗಿ ಬೀಚ್ ಗಳಲ್ಲಿ ಸುತ್ತಾಡಿ ಮಜವಾಗಿ ಇದ್ದುಬರೋಣ ಎಂದು ನನ್ನ ಮನಸ್ಸು ಹಂಬಲಿಸುತ್ತಿದೆ. `ಈಗೆಲ್ಲಾ ಮದುವೆಗೆ ಮೊದಲೇ ಪರಸ್ಪರ ಮೈ, ಮನಸ್ಸುಗಳನ್ನು ಒಂದಾಗಿಸಿಕೊಳ್ಳುವುದು ಕಾಮನ್ ಆಗಿದೆ. ನಾವಾದರೂ ಅನಾವಶ್ಯವಾಗಿ ಸಮಯ ಹಾಳು ಮಾಡುವುದೇಕೆ…? ಗೋವಾದಲ್ಲಿ ಜಮ್ಮಂತ ಇದ್ದು ಲೈಫ್ ಎಂಜಾಯ್ ಮಾಡೋಣ,’ ಎಂದು ಗೋಗರೆದಿದ್ದ.
`ಅಯ್ಯೋ ಬೇಡಪ್ಪಾ…. ಇಂಥದ್ದೆಲ್ಲ ಮದುವೆಗೆ ಮುಂಚೆ ಬೇಡ. ಸ್ವಾತಂತ್ರ್ಯವಿದೆ ಎಂದು ಸ್ವೇಚಾಚಾರಕ್ಕೆ ಇಳಿದವರು ನಮಗೆ ಆದರ್ಶಪ್ರಾಯರಲ್ಲ. ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ. ಯಾರು ಹೇಗೇ ಇರಲಿ, ನನಗೆ ನನ್ನತನ ಮುಖ್ಯ ಅಷ್ಟೇ. ಮತ್ತೊಮ್ಮೆ ಈ ವಿಷಯವನ್ನು ಪ್ರಸ್ತಾಪಿಸಬೇಡ,’ ಎಂದು ನಿಷ್ಠೂರ ಮತ್ತು ಕಠೋರವಾಗಿ ಹೇಳಿದ್ದೆ.
ಇವಳು ಎಟುಕದ ಹಣ್ಣು ಎಂದುಕೊಂಡ ಪ್ರವೀಣ್, ಒಲ್ಲದ ಮನಸ್ಸಿನಿಂದ ಅಷ್ಟಕ್ಕೇ ಸುಮ್ಮನಾಗದೆ, `ನೀನೊಂಥರ ಅಡಗೂಲಜ್ಜಿ ತರಹ. ಹೋಗಿ ಹೋಗಿ ನಾನು ನಿನ್ನನ್ನು ಪ್ರೀತಿಸಿದೆ,’ ಎಂದು ಬಡಬಡಿಸಿದ್ದ.
`ನಾನವನ ಮಾತನ್ನು ಅಷ್ಟಾಗಿ ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಅಂದು ಲೂಜಾಗಿ ವರ್ತಿಸಿದ್ದರೆ, ನನ್ನ ಬಾಳು ಎಕ್ಕುಟ್ಟಿ ಹೋಗುತ್ತಿತ್ತಲ್ಲವೇ….? ಅಂದಿನಿಂದ ನನಗೆ ಗಂಡಸರೆಂದರೆ ಯಾಕೋ ಅಷ್ಟಕ್ಕಷ್ಟೇ. ಗಂಡು ಪ್ರಾಣಿ ಇರುವುದೇ ಹೆಣ್ಣಿನ ಶೋಷಣೆಗಾಗಿ ಎಂದೆನಿಸತೊಡಗಿತು. ಬೆಂಗಳೂರಿಗೂ ಹೋಗುವುದೂ ಬೇಡವೆನಿಸಿತು. ಇಲ್ಲೇ ಉದ್ಯೋಗ ಹುಡುಕಿಕೊಂಡೆ.
`ಕೆಲಸಕ್ಕೆ ಸೇರಿದ ನಂತರ ಇಲ್ಲೂ ಒಬ್ಬ ಪ್ರಾಧ್ಯಾಪಕ ನನ್ನ ಸ್ನೇಹ ಬೆಳೆಸಿದ. ತುಸು ದಿನಗಳ ಸ್ನೇಹದ ಒಡನಾಟದಲ್ಲಿ ಅವನೂ ಕೂಡ ನನ್ನ ಭೌತಿಕ ದೇಹವನ್ನು ಬಯಸಿ ಛೀಮಾರಿ ಹಾಕಿಸಿಕೊಂಡ. ಹೆಂಗಸರೆಂದರೆ ಗಂಡಸರಿಗೆ ಬರೀ ಭೋಗದ ವಸ್ತುಗಳೇನೋ ಎಂದೆನಿಸತೊಡಗಿತು.
`ಆಗಿನಿಂದ ಗಂಡಸರೆಂದರೆ ನನಗೇಕೋ ಅಲರ್ಜಿ. ಈಗ ಸುವಿಚಾರದ ಗೌತಮ್ ಸರ್ ಬಗ್ಗೆ ಅದೇನೋ ಒಂಥರ ಗೌರವ ಮೂಡತೊಡಗಿದೆ ಅಷ್ಟೇ…..’ ಹೀಗೆ ಯೋಚನೆಗಳ ಭರಾಟೆಯಲ್ಲಿ ಮಂದಾಕಿನಿ ಯಾವಾಗೋ ನಿದ್ದೆಗೆ ಜಾರಿದಳು.
ಅಂದು ರಾತ್ರಿ ಹಳೆಯ ಅನಪೇಕ್ಷಿತ ಘಟನೆಗಳು ಗೌತಮನ ಮನಸ್ಸನ್ನೂ ಕಾಡಿದ. `ನನ್ನ ಹಿರಿಯಕ್ಕನ ಮಗಳು ನಿಮಿತಾ ನನಗಾಗಿ ಹುಟ್ಟಿದಳೆಂದು ಅಕ್ಕ, ಅಮ್ಮ ಎಲ್ಲರೂ ಮೊದಲಿನಿಂದಲೂ ಹೇಳುತ್ತಿದ್ದರು. ಅವರ ಮಾತುಗಳೇ ನಾನವಳನ್ನು ಪ್ರೀತಿಸಲು ಕುಮ್ಮಕ್ಕು ನೀಡಿದ್ದ. ಬೆಳೆಯುತ್ತಾ ಬೆಳೆಯುತ್ತಾ ಅವಳು ನನಗಿಷ್ಟ ಆಗತೊಡಗಿದಳು.
`ನನ್ನಂತೆ ಅವಳಿಗೂ ನಾನು ಇಷ್ಟವಾಗತೊಡಗಿದೆ. ಪ್ರೀತಿಯ ಪಯಣ ಆರಂಭವಾಯಿತು. ಪಿಯುಸಿಯ ನಂತರ ಇಬ್ಬರದೂ ಲೈನ್ ಆಫ್ ಎಜುಕೇಶನ್ ಬೇರೆಯಾದ. ಅವಳು ಬಿಎಸ್ಸಿ, ಎಂಎಸ್ಸಿ ಮಾಡಿಕೊಂಡರೆ, ನಾನು ಬಿಟಿ, ಎಂಟೆಕ್ ಮಾಡಿಕೊಂಡೆ. ನಿಮಿತಾ ಬಿಎಡ್ ನಂತರ ಡಾಕ್ಟರೇಟ್ ಸಹ ಮಾಡಿಕೊಂಡಳು. ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಮಾಡುವಾಗಲೇ ಬೇರೊಬ್ಬನ ಪ್ರೀತಿಯನ್ನು ಅಂಗೀಕರಿಸಿ ನನ್ನೆದೆಯ ಪ್ರೀತಿಗೆ ಕೊಳ್ಳಿ ಇಟ್ಟಳು.
`ಗಂಡಸರೆಂದರೆ ಹೆಣ್ಣನ್ನು ಶೋಷಣೆ ಮಾಡುವ ಕ್ಷುದ್ರಜೀವಿ ಎಂದು ಹೆಣ್ಣು ಹೇಳುತ್ತಿದ್ದರೆ, ಹೆಣ್ಣೆಂದರೆ ಗಂಡಸರ ಪ್ರೀತಿಗೆ ಕೊಳ್ಳಿ ಇಡುವ ಕೊಳ್ಳಿ ದೆವ್ವಗಳು ಎಂದು ನನಗನಿಸತೊಡಗಿತು. ನನ್ನ ಮನಸ್ಸಿನ ಭಾವನೆಗೆ ಇಂಬುಕೊಡುವಂತೆ ನನ್ನಂತೆ ಹಲವು ಭಗ್ನಪ್ರೇಮಿಗಳ ಮುಖ ಕಂಡಾಗ ನನಗೇಕೋ ಹೆಣ್ಣಿನ ಒಡನಾಟ ಬೇಡವೆನಿಸಿ ಹೆಣ್ಣಿನಿಂದ ದೂರವೇ ಉಳಿದಿದ್ದೇನೆ. ಹಾಗಂತ ಹೆಣ್ಣಿನ ಬಗ್ಗೆ ಗೌರವ ಇಲ್ಲಿಂದಲ್ಲ. ಏಕೆಂದರೆ ನನಗೆ ಜನ್ಮವಿತ್ತಳು ಹೆಣ್ಣೇ ಅಲ್ಲವೇ….?
`ಏಕಾಂಗಿಯಾಗಿ ನಾನಂತೂ ಆರಾಮವಾಗೇ ಇದ್ದೀನಿ. ನನಗೆ ಊಟ ಹಾಕುತ್ತಿರುವ ವಿದ್ಯಾಸಂಸ್ಥೆಗೆ ನ್ಯಾಯ ಒದಗಿಸುತ್ತಿದ್ದೇನೆ. ಬಾಳಲ್ಲಿ ಸಂತೃಪ್ತಿ ಇದೆ, ನೆಮ್ಮದೆ ಇದೆ. ಮತ್ತಿನ್ನೇನು ಬೇಕು ಮನುಷ್ಯ ಜೀವಿಗೆ…..?’ ಹಾಗೇ ಯೋಚಿಸುತ್ತಿದ್ದವನನ್ನು ನಿದ್ರಾ ದೇವಿ ಅಪ್ಪಿಕೊಂಡಿದ್ದರಿಂದ ಅಷ್ಟಕ್ಕೇ ಗೌತಮನ ಯೋಚನಾ ಲಹರಿ ತುಂಡಾಗಿತ್ತು.
ಕಾಲ ಹೀಗೆ ಸರಿಯುತ್ತಲಿತ್ತು. ಮಂದಾಕಿನಿ ಹಬ್ಬದ ದಿನಗಳಲ್ಲಿ ಮತ್ತೆ ಮತ್ತೆ ಗೌತಮನನ್ನು ಊಟಕ್ಕೆ ಆಹ್ವಾನಿಸುವುದು ಸಾಮಾನ್ಯವಾಗಿಬಿಟ್ಟಿತು. ಅಂದು ದೀಪಾವಳಿ ಹಬ್ಬ. ಗೌತಮ್ ಮಂದಾಕಿನಿಯ ಮನೆಗೆ ಊಟಕ್ಕೆ ಹೋಗಿದ್ದ. ಊಟ ಮುಗಿದ ನಂತರ ಇಬ್ಬರೂ ಲೋಕಾಭಿರಾಮವಾಗಿ ಮಾತಿಗೆ ಮುಂದಾಗಿದ್ದರು.
“ಮಂದಾಕಿನಿ, ನಿಮ್ಮ ಮದುವೆಯ ಬಗ್ಗೆ ಯಾವ ನಿರ್ಧಾರ ತೆಗೆದುಕೊಂಡಿರುವಿರೆಂಬುದು ತಿಳಿಯಲೇ ಇಲ್ಲ…..?”
“ಸರ್, ಈ ಬೆಳಕಿನ ಹಬ್ಬದ ಶುಭ ಸಂದರ್ಭದಲ್ಲಿ ನಾನು ನನ್ನ ಬಾಳಲ್ಲಿ ಬೆಳಕಿನ ಜ್ಯೋತಿ ಬೆಳಗಿಸಬೇಕೆಂದು ನಿರ್ಧರಿಸಿದ್ದೇನೆ. ಖುಷೀನಾ…..?”
“ಖುಷಿಯಾಗದೇ ಇರುತ್ತದಾ…? ಗುಡ್ ಡಿಸಿಶನ್. ತುಂಬು ಹೃದಯದ ಅಭಿನಂದನೆಗಳು! ಸಿಹಿ ಸುದ್ದಿ ನೀಡಿದಂತೆ ಬೇಗನೇ ಸಿಹಿ ಊಟವನ್ನೂ ಹಾಕಿಸಿಬಿಡಿ.”
“ಸರ್, ಮತ್ತೆ ನೀವು ನಿಮ್ಮ ಮೊದಲಿನ ನಿರ್ಧಾರವನ್ನು ಬದಲಿಸಿಕೊಂಡುಬಿಡಿರಿ.”
“ನನ್ನದಿರಲಿ, ಹುಡುಗ ಯಾರು….?”
“ಸರ್, ಒಬ್ಬ ಹುಡುಗ ಶಾರ್ಟ್‌ಲಿಸ್ಟ್ ನಲ್ಲಿದ್ದಾನೆ. ಕನ್ಛರ್ಮ್ ಆದ ಮೇಲೆ ತಿಳಿಸುವೆ,” ಮಂದಾಕಿನಿಯ ಮಾತಿಗೆ ಗೌತಮ್ ಗೋಣಾಡಿಸಿದ.
ಮಕರ ಸಂಕ್ರಾಂತಿ ಬಂತು. ಹಬ್ಬದೂಟಕ್ಕೆಂದು ಗೌತಮ್ ಮತ್ತೆ ಮಂದಾಕಿನಿಯ ಮನೆಯಲ್ಲಿದ್ದ.
“ಮಂದಾಕಿನಿ, ಸಿಹಿ ಊಟ ಯಾವಾಗ…..?”
“ಶಾರ್ಟ್ ಲಿಸ್ಟ್ ನಲ್ಲಿರುವ ಹುಡುಗ ತನ್ನ ಮನಸ್ಸಿನಲ್ಲಿ ಇರುವುದನ್ನು ಹೇಳುತ್ತಿಲ್ಲ….”
“ಹೌದಾ….? ಆ ಹುಡುಗನ ಫೋನ್ ನಂಬವವರಾದರೂ ಕೊಡಿ. ನಾನೂ ಪ್ರಯತ್ನಿಸುವೆ.”
ಮಂದಾಕಿನಿ ನಂಬರ್ ಹೇಳಿದಳು. “ಅರೇ, ನನ್ನ ಫೋನ್ ನಂಬರ್ ನ್ನು ನನಗೇ ಹೇಳುತ್ತಿರುವಿರಲ್ಲ…..?”
“ಹೌದು ಸರ್, ನಾನು ಲವ್ ಮಾಡುತ್ತಿರುವುದು ನಿಮ್ಮನ್ನೇ….” ನಾಲ್ಕೂ ಕಣ್ಣುಗಳು ಮಾತಾಡಿಕೊಳ್ಳತೊಡಗಿದ.
“ಮಂದಾಕಿನಿ, ಈಗ ನಿಮಗೆಷ್ಟು ವಯಸ್ಸು….?”
“ಸರ್, ಜಸ್ಟ್ 30 ಅಷ್ಟೇ…..?”
“ನಿಮಗೆ ಬುದ್ಧಿಗಿದ್ದಿ ಇದೆಯೇನ್ರೀ…..? 50 ಎಲ್ಲಿ…..? 30 ಎಲ್ಲಿ…..? ಇಜ್ಜೋಡಾಗುತ್ತೆ. ಮೇಲಾಗಿ ನನಗೆ ಈ ವಯಸ್ಸಿನಲ್ಲಿ ಯಾವ ಲವ್ವು ಇಲ್ಲ….. ಲಸ್ಟೂ ಇಲ್ಲ……”
“ಹಿಂದೆ 60ರ ರಾಜ ಮಹಾರಾಜರು ಹದಿಮೂರರ ಹುಡುಗಿಯರನ್ನು ಮದುವೆಯಾಗಿ ಮಕ್ಕಳನ್ನು ಹುಟ್ಟಿಸುತ್ತಿದ್ದರಂತೆ. ಮನಸ್ಸು ಚಟವಟಿಕೆಯಿಂದ ಉಲ್ಲಾಸಭರಿತವಾಗಿದ್ದರೆ ಎಲ್ಲವೂ ಸೊಗಸು. ನನಗೂ ದೈಹಿಕ ಕಾಮನೆಗಳೇನು ಕಾಡುತ್ತಿಲ್ಲ. ತೀಟೆ ತೀರಿಸಿಕೊಳ್ಳುವುದಕ್ಕೋಸ್ಕರ ನಾನೇನು ಮದುವೆಯಾಗಲು ಬಯಸುತ್ತಿಲ್ಲ. ಇಳಿಯಸ್ಸಿನಲ್ಲಿ ನನ್ನವರೆಂದು ಯಾರೂ ಇರದ ಸಮಯದಲ್ಲಿ ಒಬ್ಬರಿಗೊಬ್ಬರು ಆಸರೆಯಾಗುತ್ತೇವೆ ಎಂದುಕೊಂಡಾಗ ನನಗೆ ನಿಮ್ಮಲ್ಲಿ ಪ್ರೀತಿ ಹುಟ್ಟಿತು.
“ನಿಮ್ಮನ್ನೂ ನನ್ನನ್ನೂ ಯಾರೂ ಕರೆದು ಕಟ್ಟಿ ಹಾಕುವವರಿಲ್ಲ, ತುರುಸಿ ಮೇವು ಹಾಕುವವರಿಲ್ಲ. ಜೋಡಿಯಾದರೆ ಪರಸ್ಪರ ಪ್ರೀತಿಯಲ್ಲಿ ಭಾವೀ ಜೀವನವನ್ನು ಕಟ್ಟಿಕೊಳ್ಳಬಹುದು. ನನಗೆ 40 ವರ್ಷ ತುಂಬುವಷ್ಟರಲ್ಲಿ ನನ್ನೊಡಲಲ್ಲಿ ಒಂದೆರಡು ಕುಸುಮಗಳು ಅರಳಿ ಘಮಘಮಿಸಿದರೆ ನನ್ನ ಜೀವನ ಸಾರ್ಥಕತೆ ಕಂಡುಕೊಳ್ಳುತ್ತದೆ. ಕುಸುಮಗಳು ಅರಳದಿದ್ದರೂ ನಿಮ್ಮ ಸಾಂಗತ್ಯದಲ್ಲಿ ಬದುಕು ಬಣ್ಣದಲ್ಲಿ ಮಿಂದೆದ್ದರೆ ಸಾಕು,” ಎಂದಳು ಸುದೀರ್ಘವಾಗಿ.
ಮಂದಾಕಿನಿಯ ಒಲವಿನ ಮಾತುಗಳು ಗೌತಮನ ಎದೆಯೊಳಗೆ ನುಸುಳಿ ಕಲರವ ಹುಟ್ಟಿಸಲಿಲ್ಲ.
“ನನಗೆ ಮದುವೆಯಾಗುವ ಮನಸ್ಸಿಲ್ಲ,” ಎಂಬ ನಿರಾಶಾಭಾವದ ನುಡಿಯೊಂದಿಗೆ ಗೌತಮ್ ತನ್ನ ವಸತಿಗೃಹಕ್ಕೆ ತೆರಳಿದ.
ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಡಗರ, ಸಂಭ್ರಮ ವಿಜೃಂಭಿಸತೊಡಗಿತ್ತು. ಬೆಳಗಿನ ನಾಷ್ಟಾಕ್ಕೆ ಗೌತಮನಿಗೆ ಮಂದಾಕಿನಿಯ ಪ್ರೀತಿಯ ಆಹ್ವಾನವಿತ್ತು. ಮಂದಾಕಿನಿ ಗೌತಮನ ಒಲವಿನೊಪ್ಪುಗೆಯ ಮಾತುಗಳಿಗೆ ಹಂಬಲಿಸುತ್ತಿದ್ದಳು. ಶಿರಾ ಉಪ್ಪಿಟ್ಟಿನ ಜುಗಲ್ಪಂಧಿಯ ನಾಷ್ಟವಾದ ರುಚಿ ಸವಿದು ಗೌತಮ್ ಢರ್ ಎಂದು ತೇಗಿದ್ದೂ ಆಯಿತು.
“ಸರ್, ನಿಮಗಿಷ್ಟವಾದ ಕಡಕ್ ಚಹಾ ಮಾಡಿಕೊಂಡು ಬರುವೆ,” ಎಂದೆನ್ನುತ್ತಾ ಮಂದಾಕಿನಿ ನವಿಲಿನ ಹೆಜ್ಜೆಯಲ್ಲಿ ಅಡುಗೆಮನೆ ಸೇರಿಕೊಂಡಳು.
`ಇಳಿವಯಸ್ಸಿನಲ್ಲಿ ಜೊತೆಗೆ ಮಿಡಿಯುವ ಜೀವೊಂದಿದ್ದರೆ ಬದುಕು ನಿಜವಾಗಿಯೂ ಸುಂದರ ಅಲ್ಲವೇ….? ಮಕರ ಸಂಕ್ರಾಂತಿ ಹಬ್ಬದ ದಿನದಂದು ಮಂದಾಕಿನಿ ಹೇಳಿದ ಮಾತಿನಲ್ಲಿ ತುಂಬಾನೇ ಅರ್ಥವಿದೆ. ನನಗಾದರೂ ಈ ಹಟವೇಕೆ…..? ಯಾವಳೋ ಒಬ್ಬಳು ಕೈಕೊಟ್ಟವಳೆಂದು ಯೌವನದ ಉತ್ತುಂಗ ದಿನಗಳನ್ನು ಕಳೆದುಕೊಂಡ ನನ್ನ ಮೂರ್ಖತನ ಕೊನೆಗೊಳಿಸುವುದೇ ಲೇಸು,’ ಎಂದುಕೊಂಡ ಗೌತಮ್ ಅಡುಗೆಮನೆಯತ್ತ ಹೆಜ್ಜೆ ಹಾಕಿದ. ಮಂದಾಕಿನಿಯನ್ನು ಹಿಂದಿನಿಂದ ಬಳಸಿ, `ಮಂದಾ, ನಾನೂ ನಿನ್ನ ಮನಸಾರೆ ಪ್ರೀತಿಸುತ್ತಿರುವೆ. ಇಷ್ಟು ದಿನ ಕಾಯಿಸಿದ್ದಕ್ಕೆ ಈ ಮೂರ್ಖನನ್ನು ಮನ್ನಿಸು,’ ಎನ್ನುತ್ತಾ ಗೌತಮ್ ಅವಳ ಕುತ್ತಿಗೆ ಕೆಳಗಿನ ಮಾಟವಾದ ಬೆನ್ನಿಗೆ ತುಟಿಯನ್ನೊತ್ತಿ ತನ್ನೆಡೆಗೆ ತಿರುಗಿಸಿಕೊಂಡು ಬಿಗಿದಪ್ಪಿಕೊಂಡ.
ಮಂದಾಕಿನಿಯ ಕೆನ್ನೆಗಳಲ್ಲಿ ಹೊಸ ಹೊಳಪಿನ ರಂಗು ಮಿಂಚತೊಡಗಿತ್ತು. ಇಬ್ಬರೂ ಸಂತೋಷದ ಪರಾಕಾಷ್ಠೆಯಲ್ಲಿ ಮಿಂದು ಮೀಯ್ದರು. ನಂತರ ದಿನಗಳಲ್ಲಿ ಮಂದಾಕಿನಿ ಗೌತಮರ ಪ್ರೀತಿ ಕ್ಯಾಂಪಸ್ ನ ಎಲ್ಲೆಡೆ ಗುಲ್ಲಾಯಿತು. ಕೆಲವರ ಟೀಕೆಟಿಪ್ಪಣಿಗಳು, ಕೊಳಕುಕೊಂಕು ಮಾತುಗಳ ಮಧ್ಯೆ ಇಬ್ಬರೂ ಹಣೆ ಮಣೆ ಏರಿ ಸತಿಪತಿಗಳಾದರು. ಒಲವಿನ ಸಾಮರಸ್ಯ, ಸ್ವಾದಭರಿತ ಸಂಸಾರದಲ್ಲಿ ಪ್ರೀತಿ, ಸಂಭ್ರಮ್ ಎಂಬ ಕುಸುಮಗಳೆರಡು ಅರಳಿ ಘಮಘಮಿಸತೊಡಗಿದಾಗ ಆಡಿಕೊಂಡವರೆಲ್ಲರೂ ಹುಬ್ಬೇರಿಸಿ ಹರಸತೊಡಗಿದರು. ಬರಡಾಗಿದ್ದ ಜೀವಿಗಳೆರಡರ ಬಾಳಲ್ಲಿ ಹುಣ್ಣಿಮೆಯ ಚಂದಿರನುದಯಿಸಿ ಹಾಲಿನಂತಹ ಬೆಳಕನ್ನು ಉಕ್ಕಿಸತೊಡಗಿದ್ದ.
`ಪ್ರೀತಿಯೇ ಜೀವನ. ಪ್ರೀತಿಯೊಂದಿದ್ದರೆ ಬಾಳೆಲ್ಲ ಸುಂದರ ಅಲ್ಲವೇ ಸರ್…..?’ ಎಂದು ಮಂದಸ್ಮಿತೆ ಮಂದಾಕಿನಿ ಆಗಾಗ ಗೌತಮನೆದೆಯಲ್ಲಿ ಪಿಸಗುಡುತ್ತಿದ್ದಳು.





