ಕಥೆ – ಡಾ. ಗೀತಾ ಕುಂದಾಪುರ

ಮೊದಲಿನಿಂದ ತಮ್ಮದೇ ಸಾಂಪ್ರದಾಯಿಕ ಬದುಕಿನ ಶೈಲಿಯಲ್ಲಿ ಪಳಗಿದ್ದ ಕಮಲಮ್ಮನವರಿಗೆ, ಮಾನವೀಯತೆಯೇ ಮಿಗಿಲು ಎಂಬುದು ಯಾತ್ರೆಯಿಂದ ತಿಳಿಯುವಂತಾಯಿತೇ……?

“ಸುಧಾಕರ ನೋಡು, ಪಕ್ಕದ ಮನೆಗೆ ಬಾಡಿಗೆಗೆ ಬಂದರಿಗೆ ರೀತಿ ರಿವಾಜು, ಮಡಿ ಮೈಲಿಗೆ ಒಂದೂ ಇಲ್ಲ. ಹೇಸಿಗೆ ಆಗುತ್ತದಪ್ಪ…..” ಸುಧಾಕರ ಆಫೀಸಿನಿಂದ ಬಂದು ಚಪ್ಪಲಿ ಕಳಚುತ್ತಿದ್ದವನ ಬಳಿ, ಕಳೆದ ವಾರ ಬಾಡಿಗೆಗೆ ಬಂದ ಪಕ್ಕದ ಮನೆಯರನ್ನು ದೂರಿ ಕಮಲಮ್ಮ ಮಾತನಾಡಿದರು.

6-7 ದಶಕಗಳ ಕಾಲ ಹಳ್ಳಿಯಲ್ಲಿದ್ದ ಕಮಲಮ್ಮ 2 ವರ್ಷಗಳ ಹಿಂದೆ ಗಂಡ ತೀರಿಕೊಂಡಿದ್ದರಿಂದ ಬೆಂಗಳೂರಿನಲ್ಲಿರುವ ಮಗನ ಮನೆ ಸೇರಿದ್ದರು. ಬೆಂಗಳೂರಿನ ಜನ ಮತ್ತು ಜನಜೀವನಕ್ಕೆ, ವೇಗದ ಬದುಕಿಗೆ, ಬದಲಾದ ಕಾಲಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದರು.

“ಅಮ್ಮಾ…… ಎಷ್ಟಾದರೂ ಅದು ಪಕ್ಕದ ಮನೆ, ಅವರಿಗಿಷ್ಟ ಬಂದ ಹಾಗೆ ಅವರಿರುತ್ತಾರೆ. ಅವರಿಗೆ ಹಾಗೆಲ್ಲಾ ಹೇಳೋಕ್ಕಾಗಲ್ಲ. ನಾವೇ ಸ್ವಲ್ಪ ಅಡ್ಜೆಸ್ಟ್ ಮಾಡ್ಕೋಬೇಕು,” ಎಂದು ಮಗ ಹೇಳಿದ್ದು ಕಮಲಮ್ಮನಿಗೆ ಸರಿ ಎನಿಸದಿದ್ದರೂ ಚರ್ಚೆ ಬೇಡವೆಂದುಕೊಂಡು ಸುಮ್ಮನಾದರು.

ಕೈಕಾಲು ತೊಳೆದುಕೊಂಡು ಬಂದ ಮಗ, “ನೋಡಮ್ಮಾ….. ತುಂಬಾ ದಿನಗಳಿಂದ ಅಮರನಾಥ್‌ ಯಾತ್ರೆ ಮಾಡ್ಬೇಕು ಅಂತಿದ್ಯಲ್ಲ…. ನಿನ್ನಿಷ್ಟದಂತೆ ಅಮರನಾಥ್‌ ಯಾತ್ರೆಗೆ ಟಿಕೆಟ್‌ ಬುಕ್‌ ಮಾಡಿದ್ದೀನಿ,” ಎನ್ನುತ್ತಾ ಟಿಕೆಟ್‌ ಕೊಟ್ಟ.

“ಸುನೀತಾ, ಅಮ್ಮ ಹೋಟೆಲಿನ ಊಟ ಮಾಡೋಲ್ಲ, ಅವರಿಗೆ ಇಲ್ಲಿಂದಲೇ ಏನಾದರೂ ಮಾಡಿ, ಕಟ್ಟಿಕೊಂಡು ಹೋಗಬೇಕು. ಯಾತ್ರೆಗೆ ಹೆಚ್ಚು ದಿನ ಉಳಿದಿಲ್ಲ….” ಎಂದು ಸುಧಾಕರ ಹೆಂಡತಿಗೆ ಹೇಳಿದ.

ಸುಧಾಕರ, ಸುನೀತಾ ಮತ್ತು ತಾಯಿ ಕಮಲಮ್ಮ ಅಮರನಾಥ್‌ ಯಾತ್ರೆಗೆ ಹೊರಟರು. ಕಮಲಮ್ಮನಿಗಾಗಿ ಚಪಾತಿ, ಶೇಂಗಾ ಚಟ್ನಿ, ಚಕ್ಕುಲಿ, ಕೋಡುಬಳೆ, ರವೆ ಉಂಡೆ ಕಟ್ಟಿಕೊಂಡರು. ಬೆಂಗಳೂರಿನಿಂದ ದೆಹಲಿ, ಅಲ್ಲಿಂದ ಶ್ರೀನಗರದವರೆಗೆ ವಿಮಾನದಲ್ಲಿ ಹೋದರು, ಶ್ರೀನಗರದಿಂದ ಪೆಹಲ್ಗಾಮ್ ಗೆ ಟ್ಯಾಕ್ಸಿಯಲ್ಲಿ ಸಾಗಿದರು. ಪೆಹಲ್ಗಾಮ್ ನಿಂದ ಅಮರನಾಥ್‌ ಗೆ ಹೆಲಿಕಾಪ್ಟರ್‌ ನಲ್ಲಿ ಸಾಗಬೇಕಿತ್ತು. ಆದರೆ ಅಚಾನಕ್‌ ಆಗಿ ಹವಾಮಾನ ಹದಗೆಟ್ಟಿತು. ಹೆಲಿಕಾಪ್ಟರ್‌ ಸಂಚಾರ ನಿಂತುಹೋಯಿತು. ಚಿಕ್ಕ ಊರು, ಸಾವಿರಗಟ್ಟಲೆ ಯಾತ್ರಾರ್ಥಿಗಳು, ಅತ್ತಿತ್ತ ನೋಡುವುದರಲ್ಲಿ ಅಲ್ಲಿರುವ ಎಲ್ಲಾ ಹೋಟೆಲ್ ‌ಗಳೂ ಭರ್ತಿಯಾದವು.

ವಿಪರೀತ ಚಳಿ, ಸ್ವೆಟರ್‌ ತೊಟ್ಟಿದ್ದರೂ ಕಮಲಮ್ಮ, ಸುಜಾತಾ ನಡುಗುತ್ತಿದ್ದರು. ಗುರುತು ಪರಿಚಯವಿರದ ಈ ಊರಿನಲ್ಲಿ ಹೋಗುವುದೆಲ್ಲಿಗೆ….? ಗಾಬರಿಯಾಗಿ ನಿಂತ ಸುಧಾಕರನಿಗೆ ಡೋಲಿ ಹೊರುವ ಅಶ್ರಫ್‌ ಪರಿಚಯವಾದ.

“ಸಾಬ್‌, ಹವಾಮಾನ ಅನುಕೂಲವಾಗಿ ನಾಳೆಯೇ ಹೆಲಿಕಾಪ್ಟರ್‌ ಸರ್ವೀಸ್‌ ಶುರುವಾಗಬಹುದು. ಆದರೆ ಈ ಹಿಂದೆ ನಾಲ್ಕಾರು ದಿನ ಕಳೆದದ್ದೂ ಇದೆ. ನನ್ನದೊಂದು ಚಿಕ್ಕ ಮನೆ ಇದೆ, ಬೇಕಾದ್ರೆ ಅಲ್ಲಿರಬಹುದು,” ಎಂದ.

`ಅವನ ಮನೆಯಲ್ಲಿರಲು ಅಮ್ಮ ಒಪ್ಪಿಯಾಳೇ….?’ ಸುಧಾಕರ್‌ ಪೇಚಾಟಕ್ಕೀಡಾದ. ಆದರೆ ಅದು ಬಿಟ್ಟು ಬೇರೆ ದಾರಿಯೂ ಇರಲಿಲ್ಲ. ಕಡೆಗೆ ಧೈರ್ಯ ಮಾಡಿಕೊಂಡು, “ಅಮ್ಮಾ….. ಒಂದೆರಡು ದಿನಗಳಲ್ಲಿ ಹೆಲಿಕಾಪ್ಟರ್‌ ಸಂಚಾರ ಶುರುವಾಗಬಹುದು. ಅಲ್ಲಿಯವರೆಗೆ ಅಶ್ರಫ್‌ ನ ಮನೆಯಲ್ಲಿರೋಣ್ವಾ…..?” ಎಂದು ಮೆಲ್ಲನೆ ಕೇಳಿದ.

ಕಮಲಮ್ಮ ಹೌಹಾರಿದರು. ಕಡೆಗೆ `ತನ್ನನ್ನು ಈ ರೀತಿಯಲ್ಲಿ ದೇವರು ಪರೀಕ್ಷಿಸುತ್ತಿದ್ದಾನಿರಬೇಕು, ಇರಲಿ ಎರಡು ದಿನ ತಾನೇ….?’ ಎಂದುಕೊಂಡು ಒಪ್ಪಿದರು.

1487_3

ಗುಡ್ಡದ ಮೇಲಿನ ಪುಟ್ಟ ಹೆಂಚಿನ ಮನೆಯಲ್ಲಿ ಅಶ್ರಫ್‌ ತನ್ನ ಹೆಂಡತಿ, ಮಗಳು ಮತ್ತು ಎರಡು ವರ್ಷದ ಮೊಮ್ಮಗಳೊಂದಿಗೆ ವಾಸಿಸುತ್ತಿದ್ದ. ಅವನ ಅಳಿಯ ಕಳೆದ ವರ್ಷ ಆ್ಯಕ್ಸಿಡೆಂಟ್‌ ನಲ್ಲಿ ತೀರಿಕೊಂಡನೆಂದು ಅವನ ಮಾತಿನಿಂದ ತಿಳಿದು ಬಂದಿತು. ಹೊರಗಿನ ಕೋಣೆಯನ್ನು ಸುಧಾಕರನ ಕುಟುಂಬಕ್ಕೆ ಬಿಟ್ಟುಕೊಟ್ಟರು. ಬೆಂಕಿಯಲ್ಲಿ ಬಿದ್ದರಂತೆ ಕಮಲಮ್ಮ ಎರಡು ದಿನ ಕಳೆದರು. ಅಷ್ಟರಲ್ಲಿ ಹೆಲಿಕಾಪ್ಟರ್‌ ಸರ್ವೀಸ್‌ ಸದ್ಯಕ್ಕೆ ಶುರುವಾಗಲಾರದು, ಬೇಕಿದ್ದರೆ ನಡೆದುಕೊಂಡು ಅಮರನಾಥಕ್ಕೆ ಹೋಗಿ ಬರಬಹುದು ಎನ್ನುವ ವಾರ್ತೆ ಸಿಕ್ಕಿತು.

ಆದರೆ ಕಮಲಮ್ಮನಿಗೆ ಕಾಲಿನಲ್ಲಿ ವಿಪರೀತ ನೋವು ಕಾಣಿಸಿತು. ಹೆಜ್ಜೆ ಇಡಲೂ ಕಷ್ಟಪಡುತ್ತಿದ್ದರು. ಅಮ್ಮನ ಕಷ್ಟ ನೋಡಿ ಸುಧಾಕರ ವಾಪಸ್ಸು ಹೋಗೋಣ ಎಂದ.

“ಸುಧಾಕರ, ನೀವಿಬ್ಬರೂ ಹೋಗಿ ಅಮರನಾಥ ಶಿವಲಿಂಗ ದರ್ಶನ ಮಾಡಿಕೊಂಡು ಬನ್ನಿ. ಅಲ್ಲಿಯವರೆಗೆ ನಾನು ಇಲ್ಲೇ ಇರ್ತೀನಿ. ನನಗ್ಯಾಕೋ ಅದೃಷ್ಟವಿಲ್ಲ, ಎಲ್ಲದಕ್ಕೂ ಕೇಳಿಕೊಂಡು ಬಂದಿರಬೇಕು….” ಎಂದು ಕಮಲಮ್ಮ ಕಣ್ಣೀರು ಒರೆಸಿಕೊಂಡರು.

ಯಾತ್ರೆಗೆ ಹೊರಟಿರುವುದೇ ಅಮ್ಮನಿಗಾಗಿ. ಅವರನ್ನೇ ಬಿಟ್ಟು ಹೋಗುವುದೆಂದರೆ….!! ಅಲ್ಲದೆ, ಸದಾ ಮಡಿ…. ಮಡಿ…. ಎನ್ನುವ ಅಮ್ಮನನ್ನು ಇಲ್ಲಿ ಬಿಟ್ಟು ಹೋಗುವುದಾದರೂ ಹೇಗೆ….? ಕಡೆಗೆ ಬೇರೆ ಉಪಾಯವಿಲ್ಲದೆ ಗಂಡ, ಹೆಂಡತಿ ಅಮರನಾಥ್ ಯಾತ್ರೆಯನ್ನು ಮುಂದುವರಿಸಿದರು.

ಅತ್ತ ಮಗ ಸೊಸೆ ಅಮರನಾಥಕ್ಕೆ ಬರಿಗಾಲಲ್ಲಿ ನಡೆದುಕೊಂಡು ಹೊರಟಾಗ, ಇತ್ತ ಕಮಲಮ್ಮನಿಗೆ ತಾನು ಯಾತ್ರೆಗೆ ಹೋಗಲು ಆಗಲಿಲ್ವಾ ಎಂಬುದೇ ದೊಡ್ಡ ಕೊರಗಾಯಿತು. ಅದೇ ಕೊರಗಲ್ಲಿ ಅವರು ಜ್ವರದಿಂದ ಹಾಸಿಗೆ ಹಿಡಿದರು. ಆಗ ಅವರ ಸ್ವಂತ ಮಗಳಂತೆಯೇ ಅಶ್ರಫನ ಮಗಳು ರುಬಿಯಾ, ಮನಃಪೂರ್ವಕವಾಗಿ ಇವರ ಸೇವೆ ಮಾಡಿದಳು. ಇದರಿಂದ ದೈವತ್ವಕ್ಕಿಂತ ಮಾನವೀಯತೆಯೇ ಅತಿ ಅಮೂಲ್ಯ ಎಂಬುದನ್ನು ಆಕೆ ಗುರುತಿಸಿದರು.

ನಾಲ್ಕು ದಿನಗಳ ಯಾತ್ರೆ ಮುಗಿಸಿ, ಸುಧಾಕರ ವಾಪಸ್ಸು ಬಂದಾಗ, ಅಶ್ರಫನ ಮಗಳು ಬಿಸಿ ಬಿಸಿ ರೊಟ್ಟಿ ತಟ್ಟಿ ಕೊಡುತ್ತಿದ್ದರೆ, ಕಮಲಮ್ಮ ಸೊಪ್ಪಿನ ಹುಳಿ ನಂಜಿಕೊಂಡು ತಿನ್ನುತ್ತಿದ್ದರು.

“ನೋಡೋ ಸುಧಾಕರ, ಅಶ್ರಫನ ಮಗಳು ರುಬಿಯಾ ನನ್ನ ಕಾಲಿಗೆ ಎಣ್ಣೆ ಹಾಕಿ ತಿಕ್ಕಿ…. ತಿಕ್ಕಿ… ನಾನು ನಡೆಯುವಂತೆ ಮಾಡಿದ್ದಾಳೆ. ಯಾವ ಜನ್ಮದ ಋಣಾನುಬಂಧವಿದು….?” ಎಂದು ತುಳುಕಿದ ಕಣ್ಣೀರನ್ನು ಒರೆಸಿಕೊಂಡರು.

ಅಮ್ಮನ ಸ್ವಭಾವ ಬದಲಾಗಿ ಪರಿಸ್ಥಿತಿಗೆ ಮತ್ತು ಅಲ್ಲಿನ ಜನರಿಗೆ ಹೊಂದಿಕೊಂಡಿದ್ದು ನೋಡು ಸುಧಾಕರನಿಗೆ ಖುಷಿಯಾಯಿತು. ಮತ್ತೊಂದು ಶುಭ ಸಮಾಚಾರವಿತ್ತು.

“ಅಮ್ಮಾ…. ಹೆಲಿಕಾಪ್ಟರ್‌ ಸರ್ವೀಸ್‌ ಪುನಃ ಶುರುವಾಗಿದೆ. ಅಮರನಾಥ್‌ ಗುಹೆಗೆ ಹೋಗಲು ವ್ಯವಸ್ಥೆ ಮಾಡುತ್ತೇನೆ. ಹೋಗಿ ಬಾ….” ಎಂದ.

“ಬೇಡ ಸುಧಾಕರ…. ನನ್ನೊಳಗಿನ ಪರಮಾತ್ಮನ ದರ್ಶನವಾಯಿತು. ಜನಾರ್ಧನನಿಗಿಂತ ಜನರೇ ಮುಖ್ಯ ಎಂಬುದನ್ನು ಈ ಕೆಲವು ದಿನಗಳ ಅನುಭವದಿಂದ ಅರ್ಥ ಮಾಡಿಕೊಂಡಿದ್ದೇನೆ. ನಾನು ಬಂದ ಉದ್ದೇಶ ಈಡೇರಿತು, ಪರಮಾತ್ಮ ಇದಕ್ಕಾಗಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದ ಎನಿಸುತ್ತದೆ. ನನ್ನ ಯಾತ್ರೆ ಮುಗಿಯಿತು. ನಡಿ ಊರಿಗೆ ಹೋಗೋಣ,” ಎನ್ನುತ್ತಾ ಮೇಲೆದ್ದರು. ಅವರ ಮುಖದಲ್ಲಿ ಇನ್ನಿಲ್ಲದ ಖುಷಿ ಕಾಣಿಸುತ್ತಿತ್ತು.

ಅವರು ಅಲ್ಲಿಂದ ಮರುದಿನ ವಾಪಸ್ಸು ಬೆಂಗಳೂರಿಗೆ ಹೊರಟಾಗ ಕಮಲಮ್ಮ ರುಬಿಯಾಳನ್ನು ತಬ್ಬಿಕೊಂಡು, ಕಂಬನಿ ಮಿಡಿಯುತ್ತಾ, ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕೊಟ್ಟರು. ಎಲ್ಲರ ಮುಖದಲ್ಲೂ ಖುಷಿ, ಯಾತ್ರೆಯ ಸಾರ್ಥಕತೆ ಎದ್ದು ಕಾಣುತ್ತಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ