ಕಥೆ – ರಮಾಶ್ರೀ ನಾಡಿಗೇರ
`ಸಂಸಾರದ ಗುಟ್ಟು ವ್ಯಾಧಿ ರಟ್ಟು‘ ಎಂಬಂತೆ ತನ್ನ ಪತ್ನಿಯ ಆಸೆ ನೆರವೇರಿಸಲು ಅಕ್ಷಯ್ ಕೈಗೊಂಡ ಕ್ರಮವೇನು…..?
ನೀರವ ರಾತ್ರಿಯಲ್ಲಿ ಗಡಿಯಾರದ ಟಿಕ್ ಟಿಕ್ ಸದ್ದು ಬಿಟ್ಟರೆ ಬೇರೇನೂ ಕೇಳುತ್ತಿರಲ್ಲಿಲ್ಲ. ಕೋಣೆಯಲ್ಲಿ ಮಿಣುಕು ಹಸಿರು ದೀಪ ಮಾತ್ರ ಬೆಳಗುತ್ತಿದೆ. ನಿದ್ರೆಯಿಲ್ಲದೇ ಅಕ್ಷಯ್ ಒದ್ದಾಡುತ್ತಿದ್ದರೆ, ಪಕ್ಕದಲ್ಲಿ ಮಲಗಿದ್ದ ಸೌಮ್ಯಾಳಿಗೆ ಗಾಢವಾದ ನಿದ್ರೆ.
ಅಕ್ಷಯ್ ಸೌಮ್ಯಾಳ ಮುಖವನ್ನೇ ನಿಟ್ಟಿಸಿದ. ಮಗುವಿನಂಥ ಮುಗ್ಧ ಮುಖ. ಒಳ್ಳೆಯ ಕನಸು ಕಂಡಿದ್ದಳೇನೋ, ಪುಟ್ಟ ನಗುವೊಂದು ತುಟಿಯಲ್ಲಿ ಅರಳಿತ್ತು. ಮನದನ್ನೆಯ ಮೊಗದಲ್ಲಿ ನಗು ಕಂಡು ಅಕ್ಷಯನ ಮುಖದಲ್ಲಿ ಕೂಡ ನಗು ಹರಡಿತು. ಹಿಂದೆಯೇ ನಾಳೆ ಇವಳಿಗೆ ತಿಳಿಯುವ ವಿಷಯದಿಂದ ಆ ನಗು ಶಾಶ್ವತವಾಗಿ ಮಾಯವಾಗುವುದೇನೋ ಎಂಬ ಭಯ ಕೂಡಾ ಕಾಡಿತು.
ಹಾಸಿಗೆ ಮೇಲೆ ಇರಲಾರದೆ ಸೌಮ್ಯಾಳಿಗೆ ಎಚ್ಚರವಾಗದಂತೆ ಸದ್ದು ಮಾಡದೆ ನಿಧಾನವಾಗಿ ಎದ್ದು ಮಲಗುವ ಕೋಣೆ ಬಿಟ್ಟು ಪಕ್ಕದಲ್ಲಿದ್ದ ಸ್ಟಡಿ ರೂಮಿಗೆ ಹೋಗಿ ಕುಳಿತ. `ನಂಗೆ ಮಕ್ಕಳು ಅಂದ್ರೇ ತುಂಬಾ ಇಷ್ಟ ಅಕ್ಷಯ್….. ನಮಗೆ ಕಡಿಮೆ ಅಂದ್ರೂ ಮೂರು ಮಕ್ಕಳು ಬೇಕು,’ ಮದುವೆಯಾದ ಹೊಸತರಲ್ಲಿ ಸೌಮ್ಯಾ ಹೇಳಿದ್ದ ಮಾತು ಅಕ್ಷಯನ ನೆನಪಿಗೆ ಬಂತು.
`ಮೂವರು ಮಕ್ಕಳಾ….. ಯಾವ ಕಾಲದಲ್ಲಿ ಇದೀಯೇ ನೀನು….. ಈಗಲೇ ಮಕ್ಕಳ ಜವಾಬ್ದಾರಿ ಬೇಡ…. ಹಾಗೇ ನೆಮ್ಮದಿಯಾಗಿ ಇರೋಣ ಅನ್ನೋ ಕಾಲ…. ನೀನು ನೋಡಿದ್ರೆ ಮೂರ್ ಮೂರು ಮಕ್ಕಳು ಬೇಕು ಅಂತೀಯಲ್ಲೇ,” ಹೆಂಡತಿಯ ಮಾತು ಕೇಳಿ ಅಕ್ಷಯ್ ಹಾಸ್ಯ ಮಾಡಿದ್ದ.
“ಬೇರೆಯವರ ವಿಷಯ ನಂಗೊತ್ತಿಲ್ಲ….. ನಂಗೆ ಮಾತ್ರ ಮಕ್ಕಳು ಬೇಕು,” ಹಠ ಮಾಡುವಂತೆ ಹೇಳಿದ್ದಳು.
“ಹೆರಿಗೆ ನೋವು ತುಂಬಾ ಕಷ್ಟ ಅಂತಾರಲ್ಲಾ…. ಅಷ್ಟು ನೋವು ಸಹಿಸೋದು ಬೇಕಾ….. ಯಾವುದಾದ್ರೂ ಮಕ್ಕಳನ್ನು ದತ್ತು ತೊಗೊಂಡ್ರೆ ಆಯ್ತು….” ಹಗುರವಾಗಿಯೇ ನುಡಿದಿದ್ದ ಅಕ್ಷಯ್.
“ನೋ…ನೋ… ನೋ…. ನಂಗೆ ನಮ್ಮ ಮಕ್ಕಳೇ ಬೇಕು. ನನ್ನ ಮಗು ನನ್ನ ಹೊಟ್ಟೆಯಲ್ಲಿ ಓಡಾಡುವುದನ್ನಾ, ಓದೆಯೊದನ್ನಾ….. ತಾಯ್ತನದ ಸುಖವನ್ನ…. ನಾನೂ ಅನುಭವಿಸಬೇಕು. ನನ್ನ ಅಕ್ಕ, ಅತ್ತಿಗೆ ಇಬ್ಬರೂ ಪ್ರೆಗ್ನೆಂಟ್ ಆಗಿದ್ದ ಸಮಯದಲ್ಲಿ ಎಷ್ಟು ಖುಷಿಯಾಗಿ ಇರ್ತಿದ್ರು ಗೊತ್ತಾ….. ಹೊಟ್ಟೆ ಮೇಲೆ ಕೈ ಇಟ್ಟಾಗ ಮಗು ಓಡಾಟ ಎಲ್ಲಾ ಗೊತ್ತಾಗ್ತಾ ಇತ್ತು. ಜಗತ್ತಿನ ಎಲ್ಲಾ ಸುಖ ಒಂದು ಕಡೆ, ತಾಯಿಯಾಗಿ ಮಗುವಿಗೆ ಹಾಲು ಕುಡಿಸುವ ಸುಖವೇ ಒಂದು ಕಡೆ ಅಂತಾ ಇದ್ಲು ನಮ್ಮಕ್ಕ….” ಯಾವುದೋ ಲೋಕದಲ್ಲಿ ತೇಲುತ್ತಿದ್ದಳಂತೆ ಹೇಳಿದ್ದಳು ಸೌಮ್ಯಾ.

“ಹಾ…ಹ್ಹಾ…..ಹ್ಹಾ…… ಅಕಸ್ಮಾತ್ ನಮಗೆ ಮಕ್ಕಳೇ ಆಗದಿದ್ದರೆ…..?!” ಅಕ್ಷಯ್ ಹೇಳಿದಾಗ ಸೌಮ್ಯಾಳ ಕಣ್ಣಲ್ಲಿ ನೀರು ತುಳುಕಿಯೇ ಬಿಟ್ಟಿತ್ತು.
“ಬಿಡ್ತು ಅನ್ನಿ ಅಕ್ಷಯ್….. ತಮಾಷೆಗೂ ಹಾಗೇ ಹೇಳಬೇಡಿ,” ಎಂದು ಅವನ ಕೈಲಿ “ಒಳಿತು,” ಅನ್ನುವವರೆಗೂ ಬಿಟ್ಟಿರಲೇ ಇಲ್ಲ.
ಅಕ್ಷಯ್ ನ ಆ ಮಾತಿಗೆ ದೇವರು ಅಸ್ತು ಎಂದುಬಿಟ್ಟಿದ್ದನೋ ಏನೋ…. ಮದುವೆಯಾಗಿ ಆರು ವರ್ಷಗಳಾದರೂ ಸೌಮ್ಯಾಳ ಮಡಿಲು ತುಂಬಿರಲಿಲ್ಲ.
“ನಮಗೇನು ಮಹಾ ಮಯಸ್ಸಾಗಿರೋದು….. ಮುಂದೆ ಆಗುತ್ತೆ ಬಿಡು,” ಎನ್ನುತ್ತಾ ಇಷ್ಟು ಕಾಲ ಸಮಾಧಾನ ಹೇಳುತ್ತಲೇ ಬಂದಿದ್ದ ಅಕ್ಷಯ್.
ಸೌಮ್ಯಾ ಮನದಲ್ಲೇ ದುಃಖ ಅನುಭವಿಸುತ್ತಾ, ಅಳು ನುಂಗಿಕೊಂಡು ಮುಖದ ಮೇಲೆ ನಗುವಿನ ಹೊದಿಕೆ ಹೊದ್ದಿರುತ್ತಿದ್ದಳು.
ಅಕ್ಷಯನ ತಂಗಿ ಅರ್ಪಣಾಳ ಮದುವೆಯಾಗಿತ್ತು. ಮದುವೆ ಕೆಲಸಗಳನ್ನೆಲ್ಲಾ ಸೌಮ್ಯಾಳೇ ಮುಂದೆ ನಿಂತು ಮಾಡಿದ್ದಳು. ಆದರೆ ತಂಗಿಗೆ ತವರಿನ ಮಡಿಲಕ್ಕಿ ಇಡುವಾಗ ಮಾತ್ರ ಅಮ್ಮ, ಸೌಮ್ಯಾಳನ್ನು ಮುಂದೆ ಬಿಡದೆ ಚಿಕ್ಕಮ್ಮನನ್ನು ಕರೆದಿದ್ದಳು. ಸಣ್ಣ ಮುಖ ಮಾಡಿಕೊಂಡ ಸೌಮ್ಯಾ ಅಕ್ಷಯನ ಸನಿಹ ಬಂದು ನಿಂತಿದ್ದಳು. ತಂಗಿಯನ್ನು ಕಳಿಸಿಕೊಡುವ ದುಃಖದಲ್ಲಿದ್ದ ಅಕ್ಷಯ್ ಸೌಮ್ಯಾಳ ಕಣ್ಣೀರನ್ನು ಗಮನಿಸಿರಲಿಲ್ಲ.
“ನಿಮ್ಮದಿನ್ನೂ ಹನಿಮೂನ್ ಪೀರಿಯಡ್ ಮುಗಿದಿಲ್ವಾ….. ಹೀಗೆ ಲವ್ ಬರ್ಡ್ಸ್ ತರಹ ಹಾರಾಡಿಕೊಂಡು ಇದ್ರೆ….. ಯಾವಾಗ ನಮಗೆಲ್ಲಾ ಸ್ವೀಟ್ ಕೊಡೋದು,” ಬಂದ ನೆಂಟರಲ್ಲಿ ಕೆಲವರು ಹಾಸ್ಯ ಮಾಡಿದರು.
“ಇನ್ನೂ ಗುಡ್ ನ್ಯೂಸ್ ಏನೂ ಕೊಡಲಿಲ್ವಲ್ಲ ಸೌಮ್ಯಾ….. ಇನ್ನೆಷ್ಟು ವರ್ಷ ಪ್ಲಾನಿಂಗ್ ಮಾಡ್ತೀರಾ…..? ಆಗೋ ವಯಸ್ಸಿನಲ್ಲಿ ಆದರೆ ಎಲ್ಲವೂ ಚೆನ್ನ. ನಿಮ್ಮಮ್ಮ ಗಟ್ಟಿಯಿರುವಾಗಲೇ ಮಗು ಆದರೆ ಬಾಣಂತನ ಮಾಡೋಕೂ ಒಳ್ಳೆಯದು. ತುಂಬಾ ವಯಸ್ಸಾದ ಮೇಲೆ ಮಕ್ಕಳಾದರೆ ಮಕ್ಕಳ ಮಾನಸಿಕ ಆರೋಗ್ಯ ಚೆನ್ನಾಗಿರಲ್ಲ ಅಂತಾರೆ….” ಮತ್ತೆ ಕೆಲವರು ಬುದ್ಧಿ ಮಾತು ಹೇಳಿದರು. ಎಲ್ಲರ ಮಾತಿಗೂ ಸೌಮ್ಯಾಳ ಮುಗುಳ್ನಗುವೊಂದೇ ಉತ್ತರ. ಅಕ್ಷಯನಿಗೆ ಮಾತ್ರ ಆ ಮಾತುಗಳು ತಟ್ಟಲೇ ಇಲ್ಲ.
ಹೀಗೆ ಇನ್ನೂ ಒಂದು ವರ್ಷ ಉರುಳಿತ್ತು. ಪ್ರತಿ ತಿಂಗಳೂ ಮುಟ್ಟು 4-5 ದಿನ ಮುಂದೆ ಹೋದರೆ, ಸೌಮ್ಯಾಳ ಕಣ್ಣುಗಳಲ್ಲಿ ಕನಸು ಗೂಡು ಕಟ್ಟುತ್ತಿತ್ತು. ಆದರೆ ಒಂದೆರಡು ದಿನಗಳಲ್ಲಿ ಕನಸಿನ ಗೂಡು ಒಡೆದು ಕಣ್ಣಲ್ಲಿ ನೀರು ತುಂಬುತ್ತಿತ್ತು. ದಿನದಿನ ಸೌಮ್ಯಾ ಚಿಂತೆಯಲ್ಲಿ ಸವೆದು ಹೋದಳು.
ಅವಳು ಹೋಗದ ದೇವಾಲಯವಿಲ್ಲ. ಸುತ್ತದ ಅರಳಿಕಟ್ಟೆಯಿಲ್ಲ. ಅಕ್ಷಯನಿಗೆ ಇದಾವುದರ ಪರಿವೆಯೇ ಇಲ್ಲ. ಸೌಮ್ಯಾಳ ದುಃಖಕ್ಕೆ, “ಆಗೋ ಕಾಲಕ್ಕೆ ಆಗುತ್ತೆ…. ಅದಕ್ಕೆ ಯಾಕಿಷ್ಟು ಚಿಂತೆ….?” ಎಂಬ ಮಾತೇ ಅವನ ಉತ್ತರವಾಗಿರುತ್ತಿತ್ತು.
ಅಕ್ಷಯನ ತಂಗಿ ಅಪರ್ಣಾ ಚೊಚ್ಚಲ ಗರ್ಭಿಣಿಯಾಗಿದಳು. ಆಗ ಮಾತ್ರ ಅಕ್ಷಯನ ತಾಯಿ ಶಾರದಮ್ಮ ಸೌಮ್ಯಾಳ ಪಾಲಿಗೆ ಅಕ್ಷರಶಃ ಅತ್ತೆಯಾಗಿದ್ದರು. ಮನೆಯ ಎಲ್ಲಾ ಕೆಲಸಗಳನ್ನು ಸೌಮ್ಯಾಳ ಕೈಯಲ್ಲಿ ಮಾಡಿಸುತ್ತಿದ್ದರೂ ಅಪರ್ಣಾಳಿಗೆ ಸಂಬಂಧಪಟ್ಟ ಯಾವ ಕೆಲಸವನ್ನೂ ಸೌಮ್ಯಾಳ ಕೈಯಲಿ ಮಾಡಿಸುತ್ತಿರಲಿಲ್ಲ. `ಬಂಜೆ’ ಎಂಬ ಪದವನ್ನು ಬಾಯಲ್ಲಿ ಆಡುತ್ತಿರಲಿಲ್ಲ. ಆದರೆ ಕೃತಿಯಲ್ಲಿ ಮಾಡಿ ತೋರಿಸುತ್ತಿದ್ದರು. ಗಂಡ ಇಲ್ಲದಿದ್ದಾಗ ಕಣ್ಣೀರಿನಿಂದ ತನ್ನ ದುಃಖ ಹೊರಹಾಕುತ್ತಿದ್ದ ಸೌಮ್ಯಾ, ಗಂಡನ ಮುಂದೆ ಮಾತ್ರ ತುಟಿ ಎರಡು ಮಾಡುತ್ತಿರಲಿಲ್ಲ.
ಅರ್ಪಣಾಳ ಸೀಮಂತಕ್ಕೆ ದಿನ ನಿಶ್ಚಯವಾಗಿತ್ತು. ಶಾರದಮ್ಮನವರ ಅಕ್ಕತಂಗಿಯರು, ಓರಗಿತ್ತಿಯರು, ನೆಂಟರು ಎಲ್ಲಾ ಮನೆಗೆ ಬಂದಿದ್ದರು. ಅವರೆಲ್ಲರಿಗೂ ಸೌಮ್ಯಾ ನಿಂತಲ್ಲಿ, ಕೂತಲ್ಲಿ ಸೇವೆ ಮಾಡುತ್ತಿದ್ದಳು.
“ಶಾರದಾ…. ಅಪ್ಪಿಯ ಊಟ ತಿಂಡಿ ಎಲ್ಲಾ ನೀನೇ ನೋಡಿಕೊಳ್ತಾ ಇದೀಯ ತಾನೇ….. ಕಣ್ ದೃಷ್ಟಿಗೆ ಕಲ್ಲು ಕೂಡಾ ಸಿಡಿಯುತ್ತೆ ಅಂತಾರೆ…. ಸೌಮ್ಯಾ ಏನೋ ಒಳ್ಳೆಯವಳೇ…. ಆದರೆ ಕಾಲ…. ಬುದ್ಧಿ ಒಂದೇ ಸಮ ಇರಲ್ಲ ನೋಡು,” ತನ್ನ ಸ್ವಂತ ದೊಡ್ಡಮ್ಮನೇ ತನ್ನ ತಾಯಿಯ ಹತ್ತಿರ ಹೇಳುತ್ತಿದ್ದುದನ್ನು ಕೋಣೆಯ ಹೊರಗಿದ್ದ ಅಕ್ಷಯ್ ಅಕಸ್ಮಾತ್ ಕೇಳಿಸಿಕೊಂಡಾಗ, ಅವನಿಗೆ ಸಿಟ್ಟು ತಡೆಯಲು ಆಗಲಿಲ್ಲ.
“ಇಲ್ಲಾ ಅಕ್ಕಾ…. ಬೇರೆ ಎಲ್ಲಾ ಕೆಲಸ ಸೌಮ್ಯ ಮಾಡ್ತಾಳೆ. ಆದ್ರೆ ಬಸುರಿ ಆರೈಕೆ ಮಾತ್ರ ನಂದೇ. ಅವಳಿಗೆ ಒಂದು ಲೋಟ ನೀರು ಕೂಡ ಕೊಡುವುದಕ್ಕೆ ನಾನು ಬಿಡಲ್ಲ. ಸೌಮ್ಯಾ ಏನೋ ಒಳ್ಳೆಯವಳೇ, ಆದ್ರೆ……” ಎಂದು ಶಾರದಮ್ಮ ಸೊಸೆ ಬಂಜೆ ಎಂಬುದನ್ನು ಬಾಯಿಬಿಟ್ಟು ಹೇಳಲಿಲ್ಲ.
ದೊಡ್ಡಮ್ಮನಿಗೆ ಉತ್ತರಿಸಲು ಹೊರಟ ಅಕ್ಷಯನ ಬಾಯಿ ತಾಯಿಯ ಮಾತು ಕೇಳಿ ಬಂದಾಗಿತ್ತು. ಆಗ ಅವನಿಗೆ ತನ್ನ ಹೆಂಡತಿ ಸೌಮ್ಯಾ ಅನುಭವಿಸುತ್ತಿರಬಹುದಾದ ನರಕದ ಅಂದಾಜು ಸಿಕ್ಕಿತ್ತು.
“ಅಮ್ಮಾ….. ನಾನು, ಸೌಮ್ಯಾ ಶ್ರೀಲಂಕಾಗೆ ಹೊರಟಿದೀವಿ, ಬರೋದು ಇನ್ನೊಂದು ವಾರ ಆಗುತ್ತೆ,” ಎಂದು ಕೋಣೆಯ ಒಳಗೆ ಬಂದು ಹೇಳಿದ ಅಕ್ಷಯ್.
“ಮನೇಲಿ ಕಾರ್ಯಕ್ರಮ ಇಟ್ಕೊಂಡು ಮನೆ ಮಗ ಸೊಸೆ ಹೀಗೆ ಹೊರಟ್ರೆ ಹೇಗಪ್ಪಾ….? ಅಪರ್ಣಾಳ ಸೀಮಂತ ಆದಮೇಲೆ ಹೋಗುವಿರಂತೆ,” ಎಂದರು ಶಾರದಮ್ಮ.
“ಬೇಡಮ್ಮಾ…. ನಾನು ನನ್ನ ಹೆಂಡತಿ ಇಲ್ಲಿ ಇದ್ದು ಅಪರ್ಣಾಳಿಗೆ ನಮ್ಮ ದೃಷ್ಟಿ ಬಿದ್ದರೆ ಕಷ್ಟ. ನಿಮಗೆ ಯಾಕೆ ಸುಮ್ಮನೆ ತೊಂದರೆ, ಬೇಸರ….?” ಎಂದು ಸ್ವಲ್ಪ ಗಡುಸಾಗಿ ಹೇಳಿದ.
ಶಾರದಮ್ಮ ತಲೆ ತಗ್ಗಿಸಿದರು. ಅಷ್ಟರಲ್ಲಿ ಒಳಗಿ ಬಂದ ಸೌಮ್ಯಾ, “ ರೀ ಮನೆ ಅಂದ್ಮೇಲೆ ಒಂದು ಮಾತು ಬರುತ್ತೇ… ಒಂದು ಮಾತು ಹೋಗುತ್ತೆ…. ಅದಕ್ಕೆಲ್ಲಾ ಸಿಟ್ಟು ಮಾಡಿಕೊಂಡು ಮನೆಯ ಕಾರ್ಯಕ್ರಮ ಬಿಟ್ಟು ಹೋಗೋದಕ್ಕೆ ಆಗುತ್ತಾ…..” ಎನ್ನುತ್ತಾ ಅಕ್ಷಯ್ ನನ್ನು ಸಮಾಧಾನಪಡಿಸಿದಳು.
“ಸೌಮ್ಯಾ….. ತಪ್ಪು ತಿಳಿದುಕೊಳ್ಳಬೇಡಮ್ಮ,” ಎಂದರು ಶಾರದಮ್ಮ.
“ಇರ್ಲಿ ಬಿಡಿ ಅತ್ತೆ,” ಎಂದು ನಿಟ್ಟುಸಿರುಬಿಟ್ಟು ಅಲ್ಲಿಂದ ಹೊರ ಹೋದಳು ಸೌಮ್ಯಾ.
ಅಪರ್ಣಾಳ ಸೀಮಂತದ ದಿನ ಸೌಮ್ಯಾ ಮೇಲುಗೆಲಸ ನೋಡಿಕೊಂಡಳೇ ವಿನಾ ಹಸೆಮಣೆಯಿಂದ ದೂರವೇ ಇದ್ದಳು. ಶಾರದಮ್ಮ ಕೂಡಾ ಸೌಮ್ಯಾಳನ್ನು ಯಾವ ಶಾಸ್ತ್ರಕ್ಕೂ ಕರೆಯಲಿಲ್ಲ.
ಮರುವಾರದಲ್ಲೇ, ಗಂಡ ಹೆಂಡತಿ ಇಬ್ಬರೂ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದರು. ಮೂರು ದಿನದ ನಂತರ ಫಲಿತಾಂಶ ಬರುವುದೆಂದು ಹೇಳಿದ್ದರು. ಡಾಕ್ಟರ್ ಅಕ್ಷಯನ ಸ್ನೇಹಿತೆಯಾಗಿದ್ದರಿಂದ ಒಂದು ದಿನ ಮುಂಚೆಯೇ ಫಲಿತಾಂಶ ಅವನು ತಿಳಿದುಕೊಂಡಿದ್ದ. ಸೌಮ್ಯಾ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಳು. ಆದರೆ ಅಕ್ಷಯನಲ್ಲಿ ಗುಣವಾಗದ ತೊಂದರೆ ಇತ್ತು.
`ಮಕ್ಕಳೆಂದರೆ ಜೀವ ಬಿಡುವ ಸೌಮ್ಯಾಳಿಗೆ ಈ ವಿಷಯ ತಿಳಿದಾಗ ಎಷ್ಟು ನೊಂದುಕೊಳ್ಳುವಳೋ….. ಏನು ಮಾಡ್ಲಿ ….. ವಿಷಯ ಹೇಗೆ ತಿಳಿಸಲಿ…..’ ಇದೆಲ್ಲಾ ಯೋಚಿಸಿಯೇ ಅಕ್ಷಯನ ನಿದ್ದೆ ಹಾರಿಹೋಗಿತ್ತು.
“ಏನ್ರೀ…. ಇವತ್ತು ರಿಪೋರ್ಟ್ ಕೊಡ್ತಾರೆ ಅಲ್ವಾ….” ಬೆಳಗಾಗುತ್ತಲೇ ಆಸೆಗಣ್ಣಿನಿಂದ ಸೌಮ್ಯಾ ಕೇಳಿದಳು.
“ಹ್ಞೂಂ…. ಇವತ್ತು ಸಂಜೆ ಕೊಡ್ತಾರಂತೆ. ನಾನು ಆಫೀಸ್ ನಿಂದ ಸೀದಾ ಅಲ್ಲಿಗೆ ಹೋಗಿ ಕಲೆಕ್ಟ್ ಮಾಡಿಕೊಂಡು ಬರ್ತೀನಿ,” ಸೌಮ್ಯಾಳ ದೃಷ್ಟಿ ತಪ್ಪಿಸುತ್ತಾ ಹೇಳಿದ ಅಕ್ಷಯ್.
“ಸೌಮ್ಯಾ…. ರಿಪೋರ್ಟ್ ಎಲ್ಲ ಒಳ್ಳೇದಾಗಿ ಬರಲಿ ಅಂತಾ ದೇವರಲ್ಲಿ ಬೇಡಿಕೋ. ಇವತ್ತು ದೇವಸ್ಥಾನಕ್ಕೆ ಹೋಗಿಬರೋಣ. ಎಲ್ಲಾ ಒಳ್ಳೆದಾದ್ರೆ ಸಾಕಪ್ಪಾ….” ಎನ್ನುತ್ತಾ ಗೋಡೆಯ ಮೇಲಿದ್ದ ದೇವರಪಟಕ್ಕೆ ಕೈಮುಗಿದರು ಶಾರದಮ್ಮ.
“ಐ ಡೋಂಟ್ ನೋ ಮೇಘಾ….. ಈ ವಿಷಯನಾ ಸೌಮ್ಯಾಗೆ ಹೇಗೆ ತಿಳಿಸೋದು….. ಅವಳಿಗೆ ಮಕ್ಕಳು ಅಂದ್ರೆ ತುಂಬಾ ಇಷ್ಟ. ಮಕ್ಕಳಾಗೋದಿಲ್ಲ ಅಂದ್ರೆ….” ಅಕ್ಷಯ್ ಬೇಸರದಿಂದ ತನ್ನ ಡಾಕ್ಟರ್ ಗೆಳತಿ ಬಳಿ ಹೇಳಿದ.
“ಅಕ್ಷಯ್…. ಡೋಂಟ್ ವರಿ, ಸೌಮ್ಯಾಳಿಗೆ ಮಕ್ಕಳಾಗುತ್ತೆ. ಅವಳು ತಾಯಿ ಆಗಬಹುದು,” ಎಂದು ಡಾ. ಮೇಘಾ ಹೇಳಿದಾಗ, ಅಕ್ಷಯ್ಬೆಚ್ಚಿಬಿದ್ದ.
“ಐವಿಎಫ್…. ಥ್ರೂ ಡೋನರ್…. ಸೌಮ್ಯಾ ಮಗವನ್ನು ಪಡೆಯಬಹುದು,” ಡಾ. ಮೇಘಾ ಮಾತು ಕೇಳಿ ಅಕ್ಷಯನಿಗೆ ತಲೆತಿರುಗಿತು.
“ಅಂದ್ರೆ…. ನನ್ನ ಸೌಮ್ಯಾ ತಾಯಿ ಆಗಬಹುದು….. ಆದರೆ ಆ ಮಗುವಿಗೆ ತಂದೆ ನಾನಲ್ಲ. ನನ್ನ ಸೌಮ್ಯಾಳ ಒಡಲಲ್ಲಿ ಬೇರೆ ಯಾರದ್ದೋ ಮಗು….” ಅಕ್ಷಯನಿಗೆ ಕಲ್ಪಿಸಿಕೊಳ್ಳುವುದು ಕಷ್ಟವಾಯಿತು.
“ಹೌದು ಅಕ್ಷಯ್. ಸ್ವಲ್ಪ ಕಾಮ್ ಆಗಿ ಯೋಚನೆ ಮಾಡು. ಡೋನರ್ ಯಾರು ಅನ್ನೋದು ಯಾರಿಗೂ ಗೊತ್ತಾಗೋಲ್ಲ…. ನಿಮಗೂ ಕೂಡ ಗೊತ್ತಾಗಲ್ಲ…. ತಾಯಿಯಾಗುವ ಸೌಮ್ಯಾಳ ಆಸೆಯೂ ನೆರವೇರುತ್ತೆ. ಯೋಚನೆ ಮಾಡು,” ಎಂದರು ಡಾಕ್ಟರ್. ಅಕ್ಷಯ್ ಏನೂ ಉತ್ತರಿಸದೆ ಮನೆಯ ದಾರಿ ಹಿಡಿದ. ಮನೆ ತಲುಪಿದಾಗ ಸೌಮ್ಯಾ ದೇವಸ್ಥಾನಕ್ಕೆ ಹೋಗಿದ್ದಳು. ಶಾರದಮ್ಮ ತನ್ನ ತಂಗಿಯ ಬಳಿ ಫೋನ್ನಲ್ಲಿ ಸೌಮ್ಯಾಳ ಬಗ್ಗೆಯೇ ಮಾತನಾಡುತ್ತಿದ್ದುದು ಕೇಳಿ ಹಾಗೆ ನಿಂತ.
“ಇವತ್ತು ರಿಪೋರ್ಟ್ ಬರುತ್ತೆ. ಸೌಮ್ಯಾಳಿಗೆ ಮಕ್ಕಳಾಗುವುದಿಲ್ಲ ಅಂತೇನಾದ್ರೂ ರಿಪೋರ್ಟ್ ಬಂದ್ರೆ. ಅಕ್ಷಯ್ ನಿಂದ ಸೌಮ್ಯಾಳಿಗೆ ಡೈವೋರ್ಸ್ ಕೊಡಿಸಿ, ಅವನಿಗೆ ಬೇರೆ ಮದುವೆ ಮಾಡ್ತೀನಿ. ಅವನು ಒಪ್ಪದೇ ಇದ್ರೆ ಉಪವಾಸ ಹಿಡಿದಾದ್ರೂ ಒಪ್ಪಿಸ್ತೀನಿ,” ಎಂದು ಹೇಳುತ್ತಿದ್ದರು.
`ತೊಂದರೆ ಇರೋದು ಸೌಮ್ಯಾಳಲ್ಲಿ ಅಲ್ಲ….. ನನ್ನಲ್ಲಿ…..’ ಎಂದು ಅಕ್ಷಯ್ ಗೆ ಕೂಗಿ ಹೇಳುವ ಮನಸ್ಸಾಯಿತು. ಆದರೆ ಧೈರ್ಯ ಬರಲಿಲ್ಲ. ಎದೆಯಲ್ಲಿ ಬೆಂಕಿ ಬಿದ್ದ ಅನುಭವ. ತನಗೆ ತಿಳಿದಿರುವ ಸತ್ಯ ಹೇಳಲೂ ಆಗದೇ ಬಿಡಲೂ ಆಗದೇ ಸಿಂಬಳದಲ್ಲಿ ಸಿಕ್ಕಿ ಬಿದ್ದ ನೊಣದಂತೆ ಒದ್ದಾಡಿದ.
“ರಿಪೋರ್ಟ್ ಬಂತಾ….” ಎದೆಯ ಢವಢವಿಕೆ ಅದುಮಿಡುತ್ತಾ ಸೌಮ್ಯಾ ಕೇಳಿದಳು.
“ಇಲ್ಲ ಸೌಮ್ಯಾ….. ನಾಳೆ ಸಂಜೆ ಕೊಡ್ತಾರಂತೆ,” ತನ್ನ ತುಮುಲ ಮುಚ್ಚಿಡುತ್ತಾ ಹೇಳಿದ ಅಕ್ಷಯ್.
ಅವನ ಮನ ದ್ವಂದ್ವದಲ್ಲಿ ಮುಳುಗಿ ಹೋಗಿತ್ತು. ತನ್ನ ದೌರ್ಬಲ್ಯ ಎಲ್ಲರಿಗೂ ತಿಳಿಸಲಾರದೆ, ಸೌಮ್ಯಾಳ ಕಣ್ಣೀರನ್ನು ಕೂಡಾ ನೋಡಲಾಗದೆ ಒಳಗೊಳಗೇ ಬೆಂದುಹೋಗಿದ್ದ.
ಒಂದಿಡೀ ರಾತ್ರಿ ಮಳೆ ಸುರಿದ ನಂತರ, ಆಗಸ ಶುಭ್ರವಾದಂತೆ ಅಕ್ಷಯನ ಮನದ ತೊಳತಾಟ ಕೂಡ ತಹಬಂದಿಗೆ ಬಂದಿತ್ತು. ಮುಂದೆ ವರ್ಷವೊಂದು ಕಳೆದಿತ್ತು. “ನಿಮ್ಮ ಮೊಮ್ಮಗನ ಕಣ್ಣುಮೂಗು ನನ್ನ ತರಾನೇ ಇದೆ. ಆದ್ರೆ ಕಿವಿ ಮಾತ್ರ ನಿಮ್ಮ ಮಗನ ಕಿವಿ ತರಾನೇ ಇದೆ. ಅಲ್ವಾ ಅತ್ತೆ….” ಮಗುವಿಗೆ ನೀರೆರೆಯಲು ಎಣ್ಣೆ ಹಚ್ಚುತ್ತಿದ್ದ ಅತ್ತೆ ಶಾರದಮ್ಮನನ್ನು ಸೌಮ್ಯಾ ಕೇಳಿದಳು.
“ಹೌದು ಕಣೇ….. ಕಿವಿ ನಿನ್ನ ಗಂಡನ ತರ. ಬಾಯಿ ಮಾತ್ರ ಅವರ ಅಜ್ಜನ ತರಾನೇ…..” ಶಾರದಮ್ಮ ಹೇಳಿದಾಗ ಕೋಣೆಯಲ್ಲಿದ್ದು ಇವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದ ಅಕ್ಷಯನ ಮನ ನಕ್ಕಿತ್ತು.
ಸೌಮ್ಯಾ ತಾಯಿಯಾಗಿದ್ದು ಹೇಗೆಂಬ ಗುಟ್ಟು ಡಾ. ಮೇಘಾ ಮತ್ತು ಅಕ್ಷಯ್ ರ ನಡುವೆಯೇ ಉಳಿದುಹೋಯಿತು.





