ತಮಿಳುನಾಡಿನ ತಂಜಾವೂರು ಬೃಹದೇಶ್ವರ ದೇವಾಲಯದಂತೆಯೇ ಅತಿ ವಿಶಾಲವಾಗಿರುವ ಗಂಗೈಕೊಂಡ ಚೋಳಪುರಂ ದೇವಾಲಯದ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯೋಣವೇ…….?

ನಾವು ಕುಂಭಕೋಣಂನಿಂದ ಹೊರಟಿದ್ದು 60 ಕಿಮೀ. ದೂರವಿರುವ ಶ್ರೀಮುಷ್ಣಂಗೆ. ಇದು ವಿಷ್ಣುವಿನ ವರಾಹ ಅವತಾರ. ಅಸುರ ಹಿರಣ್ಯಾಕ್ಷನು ಭೂದೇವಿಯನ್ನು ಹೊತ್ತುಕೊಂಡು ಹೋಗುತ್ತಿರುವಾಗ ನಾರಾಯಣನು ವರಾಹ ರೂಪದಲ್ಲಿ ಬಂದು ಅವನೊಡನೆ ಯುದ್ಧ ಮಾಡಿ ಕಾಪಾಡುತ್ತಾನೆ.

ಇದು ಪುರಾತನ ದೇವಾಲಯವಾಗಿದ್ದು ವಿಷ್ಣುವಿಗೆ ಅರ್ಪಿತ. ದಕ್ಷಿಣ ಭಾರತ ಶೈಲಿಯಲ್ಲಿ ಕಟ್ಟಿರುವ ಹಿಂದೂ ದೇವಾಲಯವಾಗಿದ್ದು, ಲಕ್ಷ್ಮಿ ಅಂಬುಜವಲ್ಲಿಯಾಗಿ ಅವನ ಜೊತೆ ಇರುವ ಭಂಗಿ ಸುಂದರವಾಗಿದೆ. ಇದಕ್ಕೆ ಎತ್ತರದ ರಾಜ ಗೋಪರವಿದ್ದು ವಿಷ್ಣುವಿನ ವಿವಿಧ ಭಂಗಿಯ ಚಿತ್ರ ಕಣ್ಮನ ಸೆಳೆಯುತ್ತದೆ.

IMG20250924161844

ಭವ್ಯ ವಿಷ್ಣು ದೇವಾಲಯ

ಒಳಗಡೆ ದೊಡ್ಡ ಕಂಬಗಳ ಮೇಲೆ ಕೆತ್ತಿರುವ ಕೆತ್ತನೆಗಳು ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತವೆ ಎಂದರೆ ಅತಿಶಯೋಕ್ತಿಯಲ್ಲ. ಕೊಳಲು ಊದುತ್ತಿರುವ ಕೃಷ್ಣ ರುಕ್ಮಿಣಿ ಒಂದಕ್ಕಿಂತ ಒಂದು ಸೊಗಸಾಗಿದೆ!

ತಂಜಾವೂರು ನಾಯಕ ಅಚ್ಯುತಪ್ಪನಾಯಕನಿಂದ ವಿಜಯನಗರ ಅರಸರ ಅವಧಿಯಲ್ಲಿ ಈ ದೇವಾಲಯ ಕಟ್ಟಲ್ಪಟ್ಟಿದೆ. ಗ್ರಾನೈಟ್ ಗೋಡೆಗಳಿಂದ ಸುತ್ತುವರಿದಿದ್ದು, ವಿಶಾಲವಾದ ಪ್ರಾಂಗಣವಿದೆ. ಮಧ್ವಾಚಾರ್ಯರು ಇಲ್ಲಿಗೆ ಅನೇಕ ಸಲ ಬಂದು ಹೋಗಿದ್ದರಂತೆ. ಭೂ ವಿವಾದ, ಮದುವೆ ಇತ್ಯಾದಿ ಸಮಸ್ಯೆಗಳನ್ನು ಹೊತ್ತು ಬಂದವರಿಗೆ ಇಲ್ಲಿ ಬೇಗ ಪರಿಹಾರವಾಗುತ್ತೆ ಎನ್ನುತ್ತಾರೆ.

IMG20250924185229

ಇಲ್ಲಿಂದ 6 ಕಿ.ಮೀ. ದೂರದಲ್ಲಿ ಅಶ್ವತ್ಥನಾರಾಯಣ ಮತ್ತು ಸುಂದರ ಪುಷ್ಕರಣಿ ಇದೆ. ಇದು 1000 ವರ್ಷಗಳ ಹಳೆಯ ದೇವಾಲಯವಾಗಿದೆ. ಅಶ್ವತಮರದಿಂದ ಆವೃತವಾಗಿದೆ. ಲಕ್ಷ್ಮಿ ನರಸಿಂಹ ಮುಖ್ಯ ದೇವರು.

ಮದುವೆ ಆಗದವರು, ಮಕ್ಕಳಾಗದವರು, ಭೂ ವಿವಾದ, ರಾಹುಕೇತು ದೋಷ ಎಲ್ಲದಕ್ಕೂ ಇಲ್ಲಿ ಪರಿಹಾರವಿದೆ. ಮರದಲ್ಲಿ ಮೂಡಿದ ಗಣಪ, ಹನುಮ, ಲಕ್ಷ್ಮಿ ಶಿಲ್ಪಗಳು ಅಚ್ಚರಿ ಮೂಡಿಸುತ್ತವೆ.

ಗಂಗೈಕೊಂಡ ಚೋಳಪುರಂ ದೇವಾಲಯ

ನಮ್ಮ ಮುಂದಿನ ಪಯಣ ಗಂಗೈಕೊಂಡ ಚೋಳಪುರಕ್ಕೆ. ನಾವು ಹೋಗುವಾಗ ರಾತ್ರಿಯಾಗಿ, ಮಳೆ ಬರುತ್ತಿತ್ತು. ತಂದೆಯಂತೆಯೇ ಖ್ಯಾತಿವೆತ್ತ ಮಗ ದಕ್ಷಿಣ ಭಾರತವನ್ನು ಆಳಿದ ರಾಜಮನೆತನದಲ್ಲಿ ಚೋಳ ಸಾಮ್ರಾಜ್ಯ ಒಂದು. 250 ವರ್ಷಗಳ ರಾಜ್ಯಭಾರ ಮಾಡಿದ ಹಿರಿಮೆ ಇವರದ್ದು. ಚೋಳರು ವೀರ ಯೋಧರಾಗಿದ್ದರೂ, ಅತ್ಯುನ್ನತ ನಿರ್ಮಾಣ ಮಾಡಿದರು. ಶಿವನನ್ನು ಆರಾಧಿಸುತ್ತಿದ್ದ ಇವರು ತಮ್ಮದೇ ಆದ ವಿಶಿಷ್ಟ ವಾಸ್ತುಶೈಲಿಯ ಶಿಲ್ಪಗಳಿಗಾಗಿ ಪ್ರಸಿದ್ಧರಾದರು.

ಕೇರಳ, ಕರ್ನಾಟಕ, ತಮಿಳುನಾಡು, ಶ್ರೀಲಂಕಾ, ಅಂಡಮಾನ್‌, ಕಾಂಬೋಡಿಯ, ಮಲೇಷಿಯಾವನ್ನು ಆಳಿ ದೇಗುಲಗಳನ್ನು ನಿರ್ಮಿಸಿದರು.

ಗಂಗಾ ನದಿಯ ತಟದ ರಾಜ್ಯವೊಂದನ್ನು ಗೆದ್ದ ಗುರುತಿಗೆ ಒಂದನೇ ರಾಜೇಂದ್ರನು ಗಂಗೈಕೊಂಡ ಚೋಳಪುರಂ ಎಂಬ ಪಟ್ಟಣ ಕಟ್ಟಿ, ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು.

IMG20250924164249

ಬೃಹದೇಶ್ವರ ದೇವಾಲಯದ ಹೋಲಿಕೆ

ತನ್ನ ತಂದೆ ರಾಜಾ ಚೋಳ ಕಟ್ಟಿದ ಬೃಹದೇಶ್ವರ ದೇವಾಲಯದ ರೀತಿಯಲ್ಲೇ ಗಂಗೈಕೊಂಡ ಚೋಳಪುರದಲ್ಲಿ ಶಿವನ ಅದ್ಭುತ ದೇವಾಲಯ ಕಟ್ಟಿಸಿದ್ದಾನೆ. ಇದು ತಾಂತ್ರಿಕವಾಗಿ ಹಾಗೂ ಶಿಲ್ಪಕಲೆಯ ದೃಷ್ಟಿಯಿಂದ ಉತ್ಕೃಷ್ಟವಾಗಿದೆ. ಅಂತಾರಾಷ್ಟ್ರಿಯ ಮಟ್ಟದ ವಾಸ್ತು ಶಿಲ್ಪಗಾರರನ್ನು ಆಕರ್ಷಿಸಿ, ದ್ರಾವಿಡ ಶೈಲಿಯಿಂದ ಹೆಸರುವಾಸಿಯಾಗಿದೆ.

530 ಅಡಿ ಅಗಲ, 320 ಅಡಿ ಉದ್ದದ ಕಟ್ಟಡವೊಂದರ ಮೇಲೆ ಶಿವಲಿಂಗವಿದೆ. ಗೋಪುರ 180 ಅಡಿ ಎತ್ತರವಿದ್ದು, ತಂಜಾವೂರಿನ ಬೃಹದೇಶ್ವರ ದೇವಾಲಯದ ಗೋಪುರಕ್ಕಿಂತ ಮೂರು ಅಡಿ ಚಿಕ್ಕದಾಗಿದೆ. ಅಂದರೆ ತಂದೆ ಹಾಗೂ ಮಗನ ಸ್ಥಾನ ಸೂಚಿಸುವ ಸಂಕೇತವಾಗಿ ಗೋಪುರದ ಎತ್ತರವನ್ನು ತಗ್ಗಿಸಿದೆ.

ಮೂರು ಅಂತಸ್ತುಗಳ ದೇವಾಲಯ ವಿವಿಧ ದೇವ ದೇವತೆಯರ ಶಿಲ್ಪಕಲೆಯನ್ನು ಸೂಕ್ಷ್ಮವಾಗಿ ಕೆತ್ತಲಾಗಿದ್ದು, ಅಂದಿನ ಕುಶಲ ಕರ್ಮಿಗಳ ನೈಪುಣ್ಯತೆಯನ್ನು ಎತ್ತಿ ತೋರಿಸುತ್ತದೆ. ಗರ್ಭಗುಡಿಯ ವೈಭವ ಹದಿಮೂರು ಅಡಿ ಶಿವಲಿಂಗ ದೊಡ್ಡದಾಗಿದ್ದು, ಚಂದ್ರಕಾಂತ ಎಂಬ ಶಿಲೆಯನ್ನು ಗರ್ಭಗುಡಿಯಲ್ಲಿ ಬಳಸಿರುವುದರಿಂದ ಬೇಸಿಗೆಯಲ್ಲಿ ತಂಪಾಗಿಯೂ, ಚಳಿಗಾಲದಲ್ಲಿ ಬೆಚ್ಚಗೂ ಇರುತ್ತದೆ.

ಗರ್ಭಗುಡಿಯ ಎದುರಿಗೆ ಇರುವ ನಂದಿಯತೂ ತನ್ನ ಸುಂದರ ಕೆತ್ತನೆ, ಎತ್ತರ, ಸೂರ್ಯನ ಕಿರಣ ಪ್ರತಿಫಲಿಸಿ ಶಿವಲಿಂಗದ ಮೇಲೆ ಬೀಳುವಂತೆ ವಿನ್ಯಾಸ ಹೊಂದಿದೆ.

ಇದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋದ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲ್ಪಟ್ಟಿದೆ. ಇದು ತಂಜಾವೂರು ದೇವಾಲಯಕ್ಕೆ ಹೋಲುವ ಸ್ಮಾರಕ ಮತ್ತು ವಾಸ್ತುಶಿಲ್ಪಗಳಿಂದ ಅದ್ಭುತವಾಗಿದೆ.

ವಾಸ್ತುಶಿಲ್ಪಗಳ ವೈಭವ

ಬೆಂಗಳೂರಿನಿಂದ ಸುಮಾರು 385 ಕಿ.ಮೀ. ದೂರವಿದೆ. ನಾವು ಕುಂಭಕೋಣಂನಿಂದ ಒಂದು ಟ್ಯಾಕ್ಸಿ ಮಾಡಿಕೊಂಡು ಮಧ್ಯಾಹ್ನ 3ಕ್ಕೆ ಬಿಟ್ಟೆವು. ಮೊದಲು ಶ್ರೀಮುಷ್ಣಂ ನೋಡಲು ಹೋದೆವು. ಇನ್ನೂ ಬಾಗಿಲು ತೆರೆದಿರಲಿಲ್ಲ. ಹಾಗಾಗಿ ಅಶ್ವತ್ಥನಾರಾಯಣ ಹತ್ತು ನಿಮಿಷದ ದಾರಿಯಾಗಿತ್ತು ಅದನ್ನು ನೋಡಿಕೊಂಡು ವಾಪಸ್ಸು ಶ್ರೀಮುಷ್ಣಮ್ ಗೆ ಬಂದು ಅಲ್ಲಿಂದ ಗಂಗೈಕೊಂಡ ಶಿವ ದೇವಾಲಯ ನೋಡಿ ಕುಂಭಕೋಣಂ ತಲುಪಿದಾಗ, ರಾತ್ರಿ 8 ಗಂಟೆಯಾಗಿತ್ತು.

ನಾವು ಒಟ್ಟು ಒಂಬತ್ತು ಜನರಿದ್ದೆವು. 3000 ರೂ. ತೆಗೆದುಕೊಂಡರು. ಹಾಗಾಗಿ ನೀವು ಕಡಲೂರು ಟ್ರೇನ್‌ ಹತ್ತಿ ಕುಂಭಕೋಣಂ ತಲುಪಿದರೆ, ಅಲ್ಲಿಂದ ಸುಮಾರು ದೇಗುಲಗಳ ದರ್ಶನ ಮಾಡಬಹುದು. ಇಂತಹ ಸುಂದರ ದೇವಾಲಯಗಳ ದರ್ಶನ ಪಡೆದು ನಮ್ಮ ಜೀವನ ಪಾವನ ಮಾಡಿಕೊಳ್ಳಬಹುದು.

– ಭಾರತಿ ಹೆಬ್ಬಾರ್‌

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ