ಕಥೆ – ಪದ್ಮಾ ಉಮೇಶ್‌

ಕಾಲೇಜಿನ ಸಹಪಾಠಿಗಳೊಂದಿಗೆ ಉತ್ಸಾಹದ ಬುಗ್ಗೆಯಾಗಿದ್ದ ವರ್ಣಾ, ಮುಂದೆ ಯಾವ ಗಂಭೀರ ಸಮಸ್ಯೆ ಎದುರಿಸಬೇಕಾಯಿತು…..?

ಮಳೆ ಸುರಿಯುತ್ತಿದ್ದನ್ನೇ ನೋಡುತ್ತಿದ್ದ ವರ್ಣಾ ಆಗಸದಲ್ಲಿ ಬಿಸಿಲಿನೊಂದಿಗೆ ಕಾಮನಬಿಲ್ಲು ಮೂಡಿದಾಗ, “ಅಣ್ಣಾ…. ಕಾಮನಬಿಲ್ಲಿನ ಫೋಟೋ ತೆಗಿ ಬಾ,” ಎಂದು ಕೂಗಿ ಕರೆದಳು.

ವಂಶಿ ತನ್ನ ಕ್ಯಾಮೆರಾ ಹಿಡಿದು ಹೊರಗೆ ಬಂದನು, “ಚಿಕ್ಕ ಹುಡುಗಿ ಆಗಿದ್ದಾಗಿನಿಂದ ಏನೇ ಹುಚ್ಚು ನಿಂದು,” ಎನ್ನುತ್ತಾ ಕಾಮನಬಿಲ್ಲಿನ ಚಿತ್ರ ಸೆರೆಹಿಡಿದ.

ವರ್ಣಾಳಿಗೆ ಪ್ರಕೃತಿ ಎಂದರೆ ಒಂದು ವಿಸ್ಮಯ. ಅವಳು ಕಾಮನಬಿಲ್ಲಿನ ಮೇಲೆ ದೃಷ್ಟಿ ನೆಟ್ಟಳು, “ಇದು ಸಪ್ತವರ್ಣಗಳಿಂದ ಕೂಡಿರಲು ಕಾರಣವೇನೆಂದು, ಮಳೆ ಬಂದಾಗೆಲ್ಲಾ ಕಾಮನಬಿಲ್ಲು ಏಕೆ ಮೂಡುವುದಿಲ್ಲವೆಂದು ನಿನಗೆ ಗೊತ್ತಾ….?” ಎಂದು ಪ್ರಶ್ನೆಗಳ ಸರಮಾಲೆಯನ್ನೇ ಅಣ್ಣನ ಮುಂದೆ ಇಟ್ಟಳು.

“ನೀನು ಡಾಕ್ಟರ್‌ ಆಗ್ತಿರೋಳು. ಮನುಷ್ಯನ ದೇಹದಲ್ಲಿ ಯಾವ ಅಂಗಾಂಗಗಳು ಎಲ್ಲಿವೆ? ಎಷ್ಟು ಮೂಳೆ ನರಗಳಿವೆ ಎಂದು ತಿಳಿಯೋದು ಬಿಟ್ಟು ನನ್ನ ತಲೆಗೆ ಕೈ ಹಾಕಬೇಡ ತಾಯೀ…  ನಾನು ನಿನ್ನಷ್ಟು ಬುದ್ಧಿವಂತನಲ್ಲ,” ಎಂದು ಕೈ ಮುಗಿದು ನಕ್ಕ.

ವರ್ಣಾಳ ತಂದೆ ನರಸಿಂಹ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದರು. ತಾಯಿ ಲಕ್ಷ್ಮಿ ಗೃಹಿಣಿಯಾಗಿದ್ದಳು. ಅವಳ ಅಣ್ಣ ವಂಶಿ ಸಾಫ್ಟ್ ವೇರ್‌ ಉದ್ಯಮಿಯಾಗಿದ್ದ. ವರ್ಣಾ ಮೆರಿಟ್‌ ಸ್ಟೂಡೆಂಟ್‌ ಆಗಿದ್ದು ಫ್ರೀ ಸೀಟ್‌ ಪಡೆದು ಮೆಡಿಕಲ್ 2ನೇ ವರ್ಷದಲ್ಲಿ ಓದುತ್ತಿದ್ದಳು. ತಾಯಿತಂದೆಯರ ಪ್ರೀತಿ, ಅಣ್ಣನ ಅಕ್ಕರೆ, ಗೆಳತಿಯರ ಒಡನಾಟದಲ್ಲಿ ವರ್ಣಾ ಪರಮಸುಖಿ.

ಉಡುಪಿಯ ಸಂಗೀತಾ ಭಟ್‌, ಹೈದರಾಬಾದಿನ ಅನಿತಾ ರೆಡ್ಡಿ ವರ್ಣಾಳ ಆತ್ಮೀಯ ಗೆಳತಿಯರಾಗಿದ್ದು, ಕಾಲೇಜಿನ ಹಾಸ್ಟೆಲ್ ‌ನಲ್ಲಿ ಒಬ್ಬಳು, ಪಿ.ಜಿಯಲ್ಲಿ ಒಬ್ಬಳು ಇದ್ದರು.

ವರ್ಣಾ ಸದಾ ಹೊಸತನ್ನು ಕಲಿಯುವ ಹುಮ್ಮಸ್ಸು, ಉತ್ಸಾಹದಿಂದ ಇರುವ ಮೃದು ಸ್ವಭಾವದ ಹುಡುಗಿಯಾಗಿದ್ದಳು. ಅನಿತಾ ಮಾತಿನಮಲ್ಲಿಯಾಗಿದ್ದರೆ, ಸಂಗೀತಾ ಸಾಹಸ ಪ್ರವೃತ್ತಿಯವಳು. ಸಂಗೀತಾ ಓದಿನಲ್ಲಿ ಜಾಣೆಯಾದರು, ಅವಳ ಸೋದರ ಮಾವ ಕಾಲೇಜಿನ ಪ್ರೆಸಿಡೆಂಟ್‌ ಆಗಿದ್ದರಿಂದ ಉಡುಪಿಯ ಕಾಲೇಜಿನಲ್ಲಿ ಫ್ರೆಂಡ್ಸ್ ಜೊತೆ ಸೇರಿ ಗುಂಪು ಕಟ್ಟಿಕೊಂಡು ತನ್ನದೇ ಹವಾ ಮೇಂಟೇನ್‌ ಮಾಡಿದ್ದಳು. ಆದ್ದರಿಂದ ತಾಯಿ ತಂದೆ ಉಡುಪಿಯಲ್ಲಿ ಸೀಟ್‌ ಸಿಗುವಂತಿದ್ದರೂ, ಬೆಂಗಳೂರಿನ ಮೆಡಿಕಲ್ ಕಾಲೇಜಿಗೆ ಸೇರಿಸಿದ್ದರು.

ಗಂಡಹೆಂಡತಿ ಇಬ್ಬರೂ ಡಾಕ್ಟರ್‌ ಗಳಾಗಿದ್ದು ಅವರದೇ ಸ್ವಂತ ನರ್ಸಿಂಗ್‌ ಹೋಂ ಹೊಂದಿದ್ದರು. ಅವರ ನರ್ಸಿಂಗ್‌ ಹೋಮ್ ನ್ನು ಮುಂದೆ ಅವಳೇ ನೋಡಿಕೊಳ್ಳಬೇಕಾದ್ದರಿಂದ ರಿಸ್ಕ್ ತೆಗೆದುಕೊಳ್ಳಲು ರೆಡಿಯಿಲ್ಲದೆ ಇಲ್ಲಿಗೆ ಸೇರಿಸಿದ್ದಾರೆಂದು ಹೇಳಿ ಕಿಸಕ್ಕನೆ ನಕ್ಕಿದ್ದಳು.

ಆಗ ಅನಿತಾ ತೆಲುಗಿನಲ್ಲಿ, “ಈ ತಲ್ಲಿ ಇಕ್ಕಡಗಾನಿ ಅದೆ ಪನಿ ಚೇಸ್ತುಂದಿ. ಅನಿ ಪಾಪಮ್ ಆಂಟಿ, ಅಂಕಲ್ಕಿ ಏಮ್ ತೆಲಿಸು,” ಎಂದು ವರ್ಣಾಳ ಬಳಿ ಹೇಳಿ ನಕ್ಕರೆ, ತೆಲುಗಿನ ಗಂಧಗಾಳಿ ತಿಳಿಯದ ಸಂಗೀತಾ, “ನನ್ನ ಬೈದುಕೊಳ್ತಿದಿರಲ್ವಾ,” ಎಂದು ಅವರತ್ತ ನೋಡಿ ಮುಖ ಉಬ್ಬಿಸಿದಳು.

“ಅಮ್ಮಾ ತಾಯೀ…. ಇಲ್ಲಿ ಕೂಡ ರೌಡಿಸಂ ಮಾಡ್ತೀಯ ಅಂತ ಹೇಳಿದ್ಲು ಅಷ್ಟೇ…..” ಎಂದಾಗ ಅವಳು ಪಕಪಕನೇ ನಕ್ಕುಬಿಟ್ಟಳು.

ಹೀಗೆ ಗೆಳತಿಯರೊಂದಿಗೆ ನಕ್ಕುನಲಿದು ಸಂತಸದಿಂದ ಇರುತ್ತಿದ್ದ ವರ್ಣಾಳಿಗೆ ತಿಳಿದಿರಲಿಲ್ಲ, ಅವಳನ್ನು ನುಂಗಲು ಅವಳ ದೇಹದೊಳಗೆ ಬೆಚ್ಚಗೆ ಮನೆ ಮಾಡಿ ಕುಳಿತಿತ್ತು ಕ್ಯಾನ್ಸರ್‌ ಎಂಬ ಗುಮ್ಮ!

ಇತ್ತೀಚೆಗೆ ವರ್ಣಾ ತಿಂಗಳಲ್ಲಿ ಐದಾರು ದಿನ ಕಾಲೇಜಿಗೆ ಬರುತ್ತಿರಲಿಲ್ಲ. ಬಂದರೂ ಅವಳು ಸದಾ ನಿರುತ್ಸಾಹಿಯಾಗಿ ಇರುತ್ತಿದ್ದಳು. ಮನೆಯಲ್ಲಿದ್ದರೂ ತುಂಬಾ ಸುಸ್ತುಗೊಳ್ಳುತ್ತಿದ್ದಳು. ಗೈನಾಕಾಲಜಿಸ್ಟ್ ಗೆ ತೋರಿಸಿದರೂ ಏನೂ ಕಡಿಮೆಯಾಗದೆ, ತಿಂಗಳ ಸಾಮಾನ್ಯ ಸಮಸ್ಯೆಯೆಂದು ಮತ್ತೊಮ್ಮೆ ಮೆಡಿಸನ್‌ ಬರೆದು ಕೊಟ್ಟಿದ್ದರು.

ತನ್ನ ತಾಯಿಗೆ ಹೇಳಿದರೆ ಭಯಗೊಳ್ಳುವರೆಂದು ತನ್ನ ಆರೋಗ್ಯದಲ್ಲಿ ಆಗುತ್ತಿದ್ದ ಬದಲಾವಣೆಗಳಿಂದ ತನಗೇನೋ ಆಗಿದೆ ಎಂದು ಕಳವಳ ಉಂಟಾಗಿ ಗೆಳತಿ ಸಂಗೀತಾಳಲ್ಲಿ ಪ್ರಸ್ತಾಪಿಸಿ, ಅವಳ ತಾಯಿಯನ್ನು ವಿಚಾರಿಸುವಂತೆ ಕೇಳಿಕೊಂಡಳು.

ಸಂಗೀತಾ ತನ್ನ ತಾಯಿ ಬಳಿ ಎಲ್ಲವನ್ನೂ ವಿವರಿಸಿ ತಾನು ಅಬ್ಸರ್ವ್ ‌ಮಾಡಿದ ಆರೋಗ್ಯದ ಬಗ್ಗೆ ಕೂಡ ಮಾತನಾಡಿದಳು. ಅವರು ಗೈನಾಕಾಲಜಿಸ್ಟ್ ಆಗಿದ್ದರಲ್ಲದೆ, ಕ್ಯಾನ್ಸರ್‌ ಗೆ ಚಿಕಿತ್ಸೆ ನೀಡುವ ಆಂಕಾಲಜಿ ಕೋರ್ಸ್‌ ನಲ್ಲಿ ವಿಶೇಷ ಪರಿಣತಿ ಹೊಂದಿದ್ದರು. ಅವರ ವೈದ್ಯಕೀಯ ವೃತ್ತಿಯಲ್ಲಿನ ಅನುಭವ ಥಟ್ಟನೆ ಕ್ಯಾನ್ಸರ್‌ ಎಂದು ಶಂಕಿಸಿತು, ಆದರೆ ಅಷ್ಟೇ ಬೇಗ ತಳ್ಳಿ ಹಾಕಿದರು.

ಚಿಕ್ಕ ವಯಸ್ಸಿಗೆ ಕ್ಯಾನ್ಸರ್‌ ಬರುವ ಸಾಧ್ಯತೆ ತುಂಬಾ ತುಂಬಾ ಕಡಿಮೆ ಇತ್ತು. ಅವರ ಮುಂದೆ ನಿಷ್ಕಲ್ಮಶ ನಗುವಿನ ವರ್ಣಾಳ ಮುಖ ಕಂಡಿತು. `ನಳನಳಿಸುವ ಹೂ ಎಂದೂ ಬಾಡದಿರಲಿ, ತಮ್ಮ ಊಹೆ ಇಲ್ಲಿ ಸುಳ್ಳಾಗಲಿ,’ ಎಂದು ದೇವರಲ್ಲಿ ಬೇಡಿಕೆ ಇಟ್ಟರು.

ಡಾಕ್ಟರ್‌ ಆದರೂ ಆಕೆಯೂ ಒಬ್ಬ ತಾಯಿಯಲ್ಲವೇ….? ಅದಲ್ಲದೆ, ಒಬ್ಬಂಟಿಯಾಗಿ ಬೆಳೆದ ತಮ್ಮ ಮಗಳಿಗೆ ಸ್ನೇಹಿತೆಯಾಗಿ, ಸೋದರಿಯಂತೆ ಪ್ರೀತಿ ತೋರಿಸಿದ ವರ್ಣಾಳೆಂದರೆ, ಅವರಿಗೆ ಅವಳ ಮೇಲೆ ಮಮತೆ ಇತ್ತು. ಆದರೆ ಅವಳು ಹೂವಷ್ಟೇ ಆಯುಸ್ಸನ್ನು ಹೊತ್ತು ಬಂದಿದ್ದಳೆಂದು ಅವರಿಗೂ ತಿಳಿದಿರಲಿಲ್ಲ.

ವರ್ಣಾಳಿಗೆ ಕೆಲವೊಂದು ಟೆಸ್ಟ್ ಗಳನ್ನು ಮಾಡಿಸುವಂತೆ ಅವಳ ಪೋಷಕರಿಗೆ ತಿಳಿಸು ಎಂದು ಮಗಳಿಗೆ ವಾಟ್ಸ್ ಆ್ಯಪ್‌ ಮೆಸೇಜ್‌ಮಾಡಿದರು ಸಂಗೀತಾಳ ತಾಯಿ. ವರ್ಣಾಳ ತಾಯಿ ಅವರ ಸಲಹೆ ಮೇರೆಗೆ ಸ್ಕಾಲ್ ವೇಯ್ನಿಂಗ್‌ ಸೆಂಟರ್‌ ಗೆ ಕರೆದುಕೊಂಡು ಹೋದಾಗಲೇ ಅವರಿಗೆ ತಿಳಿದಿದ್ದು, ಅವರು ಗರ್ಭಕೋಶದ ಕ್ಯಾನ್ಸರ್‌ ಟೆಸ್ಟ್ ಮಾಡಿಸಲು ಹೇಳಿದ್ದಾರೆಂದು. ಅವರು ಥಟ್ಟನೆ ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದಲ್ಲದೆ, ಸಂಗೀತಾ ಮನೆಗೆ ಬಂದಾಗ ತಿಂಡಿ, ಕಾಫಿ ಕೊಡಲಿಲ್ಲ. ಜೊತೆಗೆ ಮುಖ ಕೊಟ್ಟು ಮಾತನಾಡಲೂ ಇಲ್ಲ. ತಾಯಿ ತಂದೆಯರಿಂದ ದೂರ ಇರುವ ಹುಡುಗಿಯರೆಂದು ಯಾವುದೇ ಹಬ್ಬ ಹರಿದಿನವಾದರೂ ಕರೆದು ಉಪಚಾರ ಮಾಡಿ, ಮಮತೆಯಿಂದ ಕಾಣುತ್ತಿದ್ದರು ಇಂದು ಸಂಗೀತಾಳ ತಾಯಿಯ ಮೇಲಿನ ಕೋಪವನ್ನು ಅವಳ ಮೇಲೆ ತಿರುಗಿಸಿದ್ದರು.

“ಅವರ ಮಗಳಿಗಿಂತ ನಮ್ಮ ವರ್ಣಾ ಎಲ್ಲದರಲ್ಲೂ ಜಾಣೆಯೆಂಬ ಹೊಟ್ಟೆಕಿಚ್ಚಿಗೆ ನಮ್ಮ ಮಗಳಿಗೆ ಈ ಟೆಸ್ಟ್ ಗಳನ್ನು ಹೇಳಿದ್ದಾರೆ,” ಎಂದು ಗಂಡನ ಮುಂದೆ ಕಣ್ಣೀರಿಟ್ಟರು.

ಅವರ ಅನುಭವ, ಉನ್ನತ ವ್ಯಕ್ತಿತ್ವ ತಿಳಿದಿದ್ದ ವರ್ಣಾಳ ತಂದೆ, “ಅವರು ಅಂಥ ಮನಸ್ಸಿನವರಲ್ಲ,” ಎಂದು ಹೆಂಡತಿಗೆ ಸಮಾಧಾನಿಸಿ, “ಅವಳ ಆರೋಗ್ಯದ ಮುಂಜಾಗ್ರತೆಗಾಗಿ ಒಮ್ಮೆ ಈ ಎಲ್ಲಾ ಟೆಸ್ಟ್ ಗಳನ್ನು  ಮಾಡಿಸೋಣ,” ಎಂದು ಹೆಂಡತಿಯನ್ನು ಹರಸಾಹಸದಿಂದಲೇ ಒಪ್ಪಿಸಿದರೂ, ಮನದೊಳಗೆ ಮಗಳ ಆರೋಗ್ಯದ ಬಗ್ಗೆ ಭಯ ಮೂಡಿತು.

ಎಲ್ಲಾ ಟೆಸ್ಟ್ ಗಳು ಮುಗಿದು ರಿಪೋರ್ಟ್‌ ಬಂದ ನಂತರ ಅವರ ಕಾಲ ಕೆಳಗಿನ ನೆಲವೇ ಕುಸಿದಂತಾಗಿತ್ತು. ವರ್ಣಾಳಿಗೆ ಗರ್ಭಕೋಶದ ಕ್ಯಾನ್ಸರ್‌ ಕೊನೆಯ ಹಂತದಲ್ಲಿತ್ತು. ಸಂಗೀತಾ ತಾಯಿ ತಂದೆ ತಮ್ಮ ನರ್ಸಿಂಗ್‌ ಹೋಮ್ ನಲ್ಲೇ ಅಡ್ಮಿಟ್‌ಮಾಡಿ ಟ್ರೀಟ್‌ ಮೆಂಟ್‌ ಕೊಡುವುದಾಗಿ ಹೇಳಿದರೂ, ತೀರಾ ಉಲ್ಬಣಗೊಂಡಾಗಲೇ ರೋಗದ ಲಕ್ಷಣಗಳನ್ನು ಹೊರಹಾಕಿದ್ದರಿಂದ ಮಗಳ ಸಾವನ್ನು ಬಹಳ ಕಾಲ ಮುಂದೂಡಲು ಸಾಧ್ಯವಿಲ್ಲ, ಅವಳ ಸಾವು ಖಚಿತವೆಂದ ಮೇಲೆ, ಅವಳು ಇರುವವರೆಗೂ ತಮ್ಮ ಕಣ್ಮುಂದೆಯೇ ಇರಲಿ ಎಂದು ಹೇಳಿ ನಿರಾಕರಿಸಿಬಿಟ್ಟರು.

ಭಾವುಕ ಜೀವಿಯಾಗಿದ್ದ ವರ್ಣಾ ತನಗೆ ಕ್ಯಾನ್ಸರ್‌ ಎಂದು ತಿಳಿದಾಗ ಮಾನಸಿಕವಾಗಿ ಕುಗ್ಗಿಹೋದಳು. ಅವಳ ಕನಸೆಲ್ಲಾ ನುಚ್ಚುನೂರಾಗಿದ್ದವು. ಖಿನ್ನತೆಗೊಳಗಾಗಿ ತಿಂಡಿ, ಊಟ ಬಿಟ್ಟಿದ್ದರಿಂದ ಕಿಮೋಥೆರಪಿ ಟ್ರೀಟ್‌ ಮೆಂಟ್‌ ಗೆ ಅವಳ ದೇಹ ಸ್ಪಂದಿಸುತ್ತಿರಲಿಲ್ಲ. ದಿನ ಕಳೆದಂತೆ, ಅವಳ ದೇಹ ಕೃಶವಾಗಿದ್ದಲ್ಲದೆ, ಹೆಚ್ಚು ನೋವಿನಿಂದ ನರಳತೊಡಗಿದಳು. ಗೆಳತಿಯರು ಅವಳ ಸ್ಥಿತಿ ನೋಡಿ ತತ್ತರಿಸಿ ಹೋಗಿದ್ದರು. ಸಂಗೀತಾಳಂತೂ ಊರಿಗೆ ಹೋಗಿ ತಾಯಿಯ ತೋಳಿಗೆ ತೆಕ್ಕೆಬಿದ್ದು ಕಣ್ಣೀರು ಮಿಡಿದಿದ್ದಳು. ಏನಾದರೂ ಮಾಡಿ ಗೆಳತಿಯನ್ನು ಉಳಿಸುವಂತೆ ತಾಯಿಯ ಬಳಿ ಗೋಗರೆದಳು. ದೇವರ ಮುಂದೆ ಎಲ್ಲರೂ ಅಸಹಾಯಕರೇ ಎಂದು ಅವರು ಮಗಳ ತಲೆ ಸವರಿ ಸಮಾಧಾನಿಸಿದ್ದರು.

ದಿನದಿನಕ್ಕೂ ವರ್ಣಾಳ ಆರೋಗ್ಯ ಹದಗೆಡುತ್ತಿತ್ತು. ಅವಳ ಅಣ್ಣ, ತಂದೆ ಅವಳ ಸ್ಥಿತಿ ನೋಡಿ ಕಣ್ಣೀರು ಮಿಡಿಯುತ್ತಿದ್ದರು. ಅವಳ ತಾಯಿ, `ಮಗಳ ಸಾವು ನೋಡುವ ಮೊದಲು ತಮಗೆ ಸಾವು ಬರಬಾರದೇ,’ ಎಂದು ಬೇಡುತ್ತಿದ್ದರು. ಆದರೆ ಮರುಕ್ಷಣವೇ, `ತಾನು ಸತ್ತರೆ, ಕೃಶವಾದ ತನ್ನ ಕಂದಮ್ಮನನ್ನು ನೋಡಿಕೊಳ್ಳುವವರು ಯಾರು….?’ ಎಂದು ತಾವೇ ಮನಸ್ಸು ಗಟ್ಟಿ ಮಾಡಿಕೊಂಡು ಗಂಡನಿಗೂ, ಮಗನಿಗೂ ಧೈರ್ಯ ತುಂಬುತ್ತಿದ್ದರು.

ತಾಯಿ ಹೃದಯ ಎಂದರೆ ಹಾಗೇ ಅಲ್ಲವೇ….! ಆಕೆ ಮಮತಾಮಯಿ, ಕರುಣಾಮಯಿ, ಭೂಮಿಯಷ್ಟೇ ಸಹನೆ, ತಾಳ್ಮೆ ಉಳ್ಳವಳು. ಆದರೆ ಮಕ್ಕಳ ತಂಟೆಗೆ ಬಂದರೆ ಯಾರನ್ನೂ ಬಿಡದವಳು. ಹಾಗೆಂದು ದೇವರೊಂದಿಗೆ ಜಗಳ ಮಾಡಲು ಸಾಧ್ಯವೇ….? ಹಾಗೆ ಜಗಳ ಮಾಡಿದರೂ ಗೆಲ್ಲಲು ಸಾಧ್ಯವೇ….? ಫಲವಂತೂ ಶೂನ್ಯ! ಆಕೆ ಮಗಳ ನೋವು ನೋಡದೆ, ದುಃಖ ತಡೆಯದಾದಗ ದೇವರನ್ನೇ ಶಪಿಸುತ್ತಿದ್ದರು. ಕೊನೆಗೆ ತಾವೇ ಸೋತು ಮಗಳಿಗೆ ಮುಕ್ತಿಯಾದರೂ ಕೊಡು ಎಂದು ದೇವರಲ್ಲಿ ಬೇಡುತ್ತಿದ್ದರು. ಅಂತೂ ದೇವರ ತಥಾಸ್ತು ಎಂದನೇನೋ ವರ್ಣಾ ನಿದ್ದೆಯಲ್ಲೇ ಕೊನೆ ಉಸಿರೆಳೆದಳು.

ಬಣ್ಣ ಬಣ್ಣದ ಕನಸುಗಳನ್ನು ಹೊತ್ತ ವರ್ಣಾ ಜೀವನ ಸೌಂದರ್ಯದ ಎಲ್ಲಾ ಬಣ್ಣಗಳನ್ನು ಸವಿಯುವ ಮೊದಲೇ ಮಳೆಯ ನಂತರ ಮೂಡಿ ಮರೆಯಾಗುವ ಕಾಮನಬಿಲ್ಲಿನಂತೆ ತಾಯಿತಂದೆಯರ ಜೀವನದಿಂದ ಹಾಗೆ ಬಂದು ಹೀಗೆ ಮರೆಯಾಗಿ ಹೋದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ