ಕಥೆ - ಪದ್ಮಾ ಉಮೇಶ್
ಕಾಲೇಜಿನ ಸಹಪಾಠಿಗಳೊಂದಿಗೆ ಉತ್ಸಾಹದ ಬುಗ್ಗೆಯಾಗಿದ್ದ ವರ್ಣಾ, ಮುಂದೆ ಯಾವ ಗಂಭೀರ ಸಮಸ್ಯೆ ಎದುರಿಸಬೇಕಾಯಿತು.....?
ಮಳೆ ಸುರಿಯುತ್ತಿದ್ದನ್ನೇ ನೋಡುತ್ತಿದ್ದ ವರ್ಣಾ ಆಗಸದಲ್ಲಿ ಬಿಸಿಲಿನೊಂದಿಗೆ ಕಾಮನಬಿಲ್ಲು ಮೂಡಿದಾಗ, ``ಅಣ್ಣಾ.... ಕಾಮನಬಿಲ್ಲಿನ ಫೋಟೋ ತೆಗಿ ಬಾ,'' ಎಂದು ಕೂಗಿ ಕರೆದಳು.
ವಂಶಿ ತನ್ನ ಕ್ಯಾಮೆರಾ ಹಿಡಿದು ಹೊರಗೆ ಬಂದನು, ``ಚಿಕ್ಕ ಹುಡುಗಿ ಆಗಿದ್ದಾಗಿನಿಂದ ಏನೇ ಹುಚ್ಚು ನಿಂದು,'' ಎನ್ನುತ್ತಾ ಕಾಮನಬಿಲ್ಲಿನ ಚಿತ್ರ ಸೆರೆಹಿಡಿದ.
ವರ್ಣಾಳಿಗೆ ಪ್ರಕೃತಿ ಎಂದರೆ ಒಂದು ವಿಸ್ಮಯ. ಅವಳು ಕಾಮನಬಿಲ್ಲಿನ ಮೇಲೆ ದೃಷ್ಟಿ ನೆಟ್ಟಳು, ``ಇದು ಸಪ್ತವರ್ಣಗಳಿಂದ ಕೂಡಿರಲು ಕಾರಣವೇನೆಂದು, ಮಳೆ ಬಂದಾಗೆಲ್ಲಾ ಕಾಮನಬಿಲ್ಲು ಏಕೆ ಮೂಡುವುದಿಲ್ಲವೆಂದು ನಿನಗೆ ಗೊತ್ತಾ....?'' ಎಂದು ಪ್ರಶ್ನೆಗಳ ಸರಮಾಲೆಯನ್ನೇ ಅಣ್ಣನ ಮುಂದೆ ಇಟ್ಟಳು.
``ನೀನು ಡಾಕ್ಟರ್ ಆಗ್ತಿರೋಳು. ಮನುಷ್ಯನ ದೇಹದಲ್ಲಿ ಯಾವ ಅಂಗಾಂಗಗಳು ಎಲ್ಲಿವೆ? ಎಷ್ಟು ಮೂಳೆ ನರಗಳಿವೆ ಎಂದು ತಿಳಿಯೋದು ಬಿಟ್ಟು ನನ್ನ ತಲೆಗೆ ಕೈ ಹಾಕಬೇಡ ತಾಯೀ... ನಾನು ನಿನ್ನಷ್ಟು ಬುದ್ಧಿವಂತನಲ್ಲ,'' ಎಂದು ಕೈ ಮುಗಿದು ನಕ್ಕ.
ವರ್ಣಾಳ ತಂದೆ ನರಸಿಂಹ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ತಾಯಿ ಲಕ್ಷ್ಮಿ ಗೃಹಿಣಿಯಾಗಿದ್ದಳು. ಅವಳ ಅಣ್ಣ ವಂಶಿ ಸಾಫ್ಟ್ ವೇರ್ ಉದ್ಯಮಿಯಾಗಿದ್ದ. ವರ್ಣಾ ಮೆರಿಟ್ ಸ್ಟೂಡೆಂಟ್ ಆಗಿದ್ದು ಫ್ರೀ ಸೀಟ್ ಪಡೆದು ಮೆಡಿಕಲ್ 2ನೇ ವರ್ಷದಲ್ಲಿ ಓದುತ್ತಿದ್ದಳು. ತಾಯಿತಂದೆಯರ ಪ್ರೀತಿ, ಅಣ್ಣನ ಅಕ್ಕರೆ, ಗೆಳತಿಯರ ಒಡನಾಟದಲ್ಲಿ ವರ್ಣಾ ಪರಮಸುಖಿ.
ಉಡುಪಿಯ ಸಂಗೀತಾ ಭಟ್, ಹೈದರಾಬಾದಿನ ಅನಿತಾ ರೆಡ್ಡಿ ವರ್ಣಾಳ ಆತ್ಮೀಯ ಗೆಳತಿಯರಾಗಿದ್ದು, ಕಾಲೇಜಿನ ಹಾಸ್ಟೆಲ್ ನಲ್ಲಿ ಒಬ್ಬಳು, ಪಿ.ಜಿಯಲ್ಲಿ ಒಬ್ಬಳು ಇದ್ದರು.
ವರ್ಣಾ ಸದಾ ಹೊಸತನ್ನು ಕಲಿಯುವ ಹುಮ್ಮಸ್ಸು, ಉತ್ಸಾಹದಿಂದ ಇರುವ ಮೃದು ಸ್ವಭಾವದ ಹುಡುಗಿಯಾಗಿದ್ದಳು. ಅನಿತಾ ಮಾತಿನಮಲ್ಲಿಯಾಗಿದ್ದರೆ, ಸಂಗೀತಾ ಸಾಹಸ ಪ್ರವೃತ್ತಿಯವಳು. ಸಂಗೀತಾ ಓದಿನಲ್ಲಿ ಜಾಣೆಯಾದರು, ಅವಳ ಸೋದರ ಮಾವ ಕಾಲೇಜಿನ ಪ್ರೆಸಿಡೆಂಟ್ ಆಗಿದ್ದರಿಂದ ಉಡುಪಿಯ ಕಾಲೇಜಿನಲ್ಲಿ ಫ್ರೆಂಡ್ಸ್ ಜೊತೆ ಸೇರಿ ಗುಂಪು ಕಟ್ಟಿಕೊಂಡು ತನ್ನದೇ ಹವಾ ಮೇಂಟೇನ್ ಮಾಡಿದ್ದಳು. ಆದ್ದರಿಂದ ತಾಯಿ ತಂದೆ ಉಡುಪಿಯಲ್ಲಿ ಸೀಟ್ ಸಿಗುವಂತಿದ್ದರೂ, ಬೆಂಗಳೂರಿನ ಮೆಡಿಕಲ್ ಕಾಲೇಜಿಗೆ ಸೇರಿಸಿದ್ದರು.
ಗಂಡಹೆಂಡತಿ ಇಬ್ಬರೂ ಡಾಕ್ಟರ್ ಗಳಾಗಿದ್ದು ಅವರದೇ ಸ್ವಂತ ನರ್ಸಿಂಗ್ ಹೋಂ ಹೊಂದಿದ್ದರು. ಅವರ ನರ್ಸಿಂಗ್ ಹೋಮ್ ನ್ನು ಮುಂದೆ ಅವಳೇ ನೋಡಿಕೊಳ್ಳಬೇಕಾದ್ದರಿಂದ ರಿಸ್ಕ್ ತೆಗೆದುಕೊಳ್ಳಲು ರೆಡಿಯಿಲ್ಲದೆ ಇಲ್ಲಿಗೆ ಸೇರಿಸಿದ್ದಾರೆಂದು ಹೇಳಿ ಕಿಸಕ್ಕನೆ ನಕ್ಕಿದ್ದಳು.
ಆಗ ಅನಿತಾ ತೆಲುಗಿನಲ್ಲಿ, ``ಈ ತಲ್ಲಿ ಇಕ್ಕಡಗಾನಿ ಅದೆ ಪನಿ ಚೇಸ್ತುಂದಿ. ಅನಿ ಪಾಪಮ್ ಆಂಟಿ, ಅಂಕಲ್ಕಿ ಏಮ್ ತೆಲಿಸು,'' ಎಂದು ವರ್ಣಾಳ ಬಳಿ ಹೇಳಿ ನಕ್ಕರೆ, ತೆಲುಗಿನ ಗಂಧಗಾಳಿ ತಿಳಿಯದ ಸಂಗೀತಾ, ``ನನ್ನ ಬೈದುಕೊಳ್ತಿದಿರಲ್ವಾ,'' ಎಂದು ಅವರತ್ತ ನೋಡಿ ಮುಖ ಉಬ್ಬಿಸಿದಳು.
``ಅಮ್ಮಾ ತಾಯೀ.... ಇಲ್ಲಿ ಕೂಡ ರೌಡಿಸಂ ಮಾಡ್ತೀಯ ಅಂತ ಹೇಳಿದ್ಲು ಅಷ್ಟೇ.....'' ಎಂದಾಗ ಅವಳು ಪಕಪಕನೇ ನಕ್ಕುಬಿಟ್ಟಳು.





