ಸಿನಿಮಾ ಕೇವಲ ಬೆಳ್ಳಿತೆರೆ ಮೇಲೆ ನೆರಳುಬೆಳಕು ತೋರಿಸುವ ಆಟ ಮಾತ್ರವಲ್ಲ. ಅದು ಮಾನವೀಯ ಭಾವನೆ, ಸಾಮಾಜಿಕ ವಾಸ್ತವತೆ, ಸಾಂಸ್ಕೃತಿಕ ಸಮೃದ್ಧಿಯ ಒಂದು ಸಂಯುಕ್ತ ಸ್ವರೂಪ. ಹೀಗಾಗಿ ಇಲ್ಲಿ ನಿಮಗೆ ಕನ್ನಡವನ್ನೂ ಒಳಗೊಂಡಂತೆ, 7 ವಿವಿಧ ಭಾರತೀಯ ಭಾಷೆಗಳ ವೈವಿಧ್ಯಮಯ ಚಿತ್ರಗಳ ಅನೇಕ ಮುಖಗಳನ್ನು ಒಂದೇ ದಾರದಲ್ಲಿ ಪೋಣಿಸಿ ನೀಡುತ್ತಿದ್ದೇವೆ. ಕೆಲವು ಅವಿಭಕ್ತ ಕುಟುಂಬಗಳ ಪ್ರೀತಿ ವಾತ್ಸಲ್ಯದ ದಟ್ಟ ಚಿತ್ರಣ ನೀಡಿದರೆ, ಕೆಲವು ಭಯಾನಕ, ಭೀಭತ್ಸ ರಸಗವಳ ಅಭಿವ್ಯಕ್ತಿ ಆಗಿವೆ. ಕೆಲವು ದೈನಂದಿನ ಜೀವನದ ಕಟು ವಾಸ್ತವ ಚಿತ್ರಣವಾದರೆ, ಉಳಿದ ಪ್ರೇಮಕಾಮಗಳ ವೈಭವೋಪೇತ ಪ್ರದರ್ಶನಗಳು! ಇದರಲ್ಲಿ ರಾಜಕೀಯದಿಂದ ದೆವ್ವ ಭೂತಗಳವರೆಗೂ, ಭೂಗತ ಜಗತ್ತಿನಿಂದ ಮಾನವೀಯ ಮೌಲ್ಯಗಳ ಅಭಿವ್ಯಕ್ತಿಯವರೆಗೂ ವೈವಿಧ್ಯತೆ ಕಾಣಬಹುದು, ಬನ್ನಿ, ಈ ಅದ್ಭುತ ಕಥೆಗಳ ರೋಚಕ ವಿವರಣೆ ಬಗ್ಗೆ ತಿಳಿಯೋಣ….!
ಕನ್ನಡ : ಟಾಕ್ಸಿಕ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ `ಟಾಕ್ಸಿಕ್’ ಚಿತ್ರ ಅದ್ಭುತ ಥಿಯೇಟ್ರಿಕ್ ಪ್ರದರ್ಶನ ಮುಂದುವರಿಸಿದೆ. ಆದರೆ ಬಾಕ್ಸ್ ಆಫೀಸಿನಲ್ಲಿ ಇದು ಅಂದುಕೊಂಡ ಗಳಿಕೆ ಸಾಧಿಸಿಲ್ಲ. ಭರ್ಜರಿ ಓಪನಿಂಗ್ ಇದ್ದರೂ, FB, ಇನ್ ಸ್ಟಾಗಳ ವಿಭಿನ್ನ ಮಿಶ್ರ ಪ್ರಕ್ರಿಯೆಗಳಿಂದ, ಕಲೆಕ್ಷನ್ ಕುಸಿತವಾಗಿದೆ. ಹಲವು ಭಾಷೆಗಳ ಈ ಪ್ಯಾನ್ ಇಂಡಿಯಾ ಚಿತ್ರ 2 ವಾರಕ್ಕೆ ಕೇವಲ 248 ಕೋಟಿ ಗಳಿಸಿದ್ದು ನಿರಾಶಾದಾಯಕ ಎನಿಸಿದೆ. ಹೀಗಾಗಿ ಇದನ್ನು 2 ವಾರಗಳ ನಂತರ ಮಾದರಿಯಲ್ಲೂ ಬಿಡುಗಡೆ ಮಾಡಿದ್ದಾರೆ. KGF ನಂತರ ಕನ್ನಡದ ಏಕೈಕ ನಟರಾಗಿ ಯಶ್ ಈ ಹಿರಿಮೆಗೆ ಭಾಜನರಾಗಿದ್ದಾರೆ. ಕನ್ನಡ ಚಿತ್ರರಂಗದ ತಾಂತ್ರಿಕ ಹಾಗೂ ಜಾಗತಿಕ ವ್ಯಾಪ್ತಿಯಲ್ಲೂ ಹೊಸ ಮೈಲಿಗಲ್ಲು ಸ್ಥಾಪಿಸಿರುವ ನಟ ಎಂಬ ಹೆಗ್ಗಳಿಕೆಗೆ ಯಶ್ ಪಾತ್ರರಾಗಿದ್ದಾರೆ. ಮೂಲಕಥೆ ಹಾಗೂ ಮಹಿಳಾ ನಿರ್ದೇಶಕಿ ಗೀತಾ ಮೋಹನ್ ದಾಸ್ ರ ಈ ಅದ್ಭುತ ಚಿತ್ರ, ಯಶ್ ರ ದ್ವಿಪಾತ್ರದಲ್ಲಿ ಕಳೆಗಟ್ಟಿದೆ. ಇವರೊಂದಿಗೆ ಕಿಯಾರಾ ಅದ್ವಾನಿ, ನಯನತಾರಾ, ಹುಮಾ ಖುರೇಶಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ. ರವಿ ಬಸ್ರೂರು ಅವರ ಮ್ಯೂಸಿಕ್ ಸ್ಕೋರ್ ಹಾಗೂ ಇವರೊಂದಿಗೆ ಇತರ ನಾಲ್ವರು ಪ್ರಮುಖ ಸಂಗೀತಗಾರರ ಹಾಡುಗಳಿವೆ. 1 ಸಾವಿರ ಕೋಟಿ ಭಾರಿ ಹೂಡಿಕೆಯುಳ್ಳ ಈ ಅತಿ ದುಬಾರಿ ಭಾರತೀಯ ಚಿತ್ರ ಗೆಲ್ಲಲೇ ಬೇಕಿದೆ!
ಗುಜರಾತಿ : ಟಾಮ್ & ಚೆರ್ರಿ

ಇದೊಂದು ಅದ್ಭುತ ಮನರಂಜನೆಯ ಗುಜರಾತಿ ಚಿತ್ರ. ಪ್ರೇಕ್ಷಕರು ತಕ್ಷಣ ವಿಶ್ವವಿಖ್ಯಾತ `ಟಾಮ್ & ಜೆರ್ರಿ’ಗೆ ಹೋಲಿಸದೆ ಇರಲಾರರು. ಟೈಟಲ್ ಗೆ ತಕ್ಕಂತೆ ಈ ಚಿತ್ರ ಅತಿ ಡೈನಾಮಿಕ್ ಆಗಿದೆ. ಚಿಕ್ಕ ಹುಡುಗ ಟಾಮ್ ಇದ್ದಕ್ಕಿದ್ದಂತೆ ಕಣ್ಮರೆಯಾದಾಗ, ಅವನನ್ನು ಹುಡುಕಲು ಚೆರ್ರಿ ಕಾಣಿಸುತ್ತಾನೆ. ಈ ಭಾವನಾತ್ಮಕ ಬೆಳವಣಿಗೆ ಕೌಟುಂಬಿಕ ಬಾಂಧವ್ಯ ಹೆಚ್ಚಿಸಿ, ನಗೆಗಡಲಲ್ಲಿ ತೇಲಿಸುತ್ತದೆ. ಒಟ್ಟಾರೆ ಅಪ್ಪಟ ಕೌಟುಂಬಿಕ ಚಿತ್ರವಾಗಿ, ಮಾರಾಮಾರಿ ಚಿತ್ರಗಳನ್ನು ಸಾರಾಸಗಟಾಗಿ ಬದಿಗೆ ಸರಿಸಿದೆ. ಹೆವಿ ಮೆಲೋಡ್ರಾಮಾ ಇಲ್ಲದಿರುವುದು ಇಲ್ಲಿನ ಅತಿ ದೊಡ್ಡ ಪ್ಲಸ್ ಪಾಯಿಂಟ್. ನಿರ್ದೇಶನದ ಬಿಗಿ ಮತ್ತು ನಟನೆ ಎಲ್ಲರ ಮನಸೆಳೆಯುತ್ತದೆ. ಚಿತ್ರದ ನಿರ್ದೇಶಕರು : ಧರ್ಮೇಶ್ ಮೆಹ್ತಾ. ಪ್ರಮುಖ ತಾರಾಗಣದಲ್ಲಿ ಸಿದ್ಧಾರ್ಥ್ ರಣದೇರಿಯಾ, ಧನ್ಯಾ ದೋಶಿ, ನಿಮೇಶ್ ದಿಲೀಪ್ರೈ, ಅನುರಾಗ್ ಪ್ರಸನ್ನ ಇದ್ದಾರೆ. ಸಂಗೀತ ನಿರ್ದೇಶಕರು ಮನೀಶ್ ಭಾನುಶಾಲಿ ಕಾಶಿನಾಥ್ ಕಶ್ಯಪ್. ತೆಲುಗು : ಇರುಮುಡಿ
ತಂದೆ-ಮಗಳ ನಡುವಿನ ಅದ್ಭುತ ಬಾಂಧವ್ಯದ ಬಗ್ಗೆ ಕಟ್ಟಿಕೊಡು ಈ ಚಿತ್ರ, ಅಪ್ಪಟ ಕೌಟುಂಬಿಕ ಮನರಂಜನೆ ಒದಗಿಸಿದೆ. ಮಾಸ್ ಹೀರೋ ರವಿ ತೇಜ ಇಲ್ಲಿ ಸುಪರ್ಬ್ ಆಗಿ ಮಿಂಚಿದ್ದಾರೆ. ಇದಕ್ಕೆ ಕ್ರೈಂ ಹಿನ್ನೆಲೆ ಅದ್ಭುತ ಕಥಾಹಂದರ ಒದಗಿಸುತ್ತದೆ. ಹೆಣ್ಣುಮಕ್ಕಳನ್ನು ಭಯದಿಂದಲ್ಲ, ಧೈರ್ಯ ತುಂಬಿ ಬೆಳೆಸಬೇಕೆಂಬ ಮೆಸೇಜ್ ಸಹ ಇದೆ. ರವಿ ಮತ್ತು ಪುಟ್ಟ ಮಗಳು ನಕ್ಷತ್ರಾಳ ಸ್ಕ್ರೀನ್ ಸೆನ್ಸ್ ಇಡೀ ಚಿತ್ರಕ್ಕೆ ಹೆಚ್ಚಿನ ಶಕ್ತಿ ತುಂಬಿಕೊಡುತ್ತದೆ. ರವಿತೇಜರ ಮಾಸ್ ಆಕರ್ಷಣೆಯೇ ಇಲ್ಲಿ ಪ್ರಮುಖ. ಈ ಚಿತ್ರದ ಭಾವನಾತ್ಮಕ ಅಭಿನಯಕ್ಕೆ ಉತ್ತಮ ಆಯ್ಕೆ ಎನಿಸಿದ್ದಾರೆ. ಚಿತ್ರದ ಪ್ರೀಕ್ಲೈಮ್ಯಾಕ್ಸ್ ಕ್ಲೈಮ್ಯಾಕ್ಸ್ ಅತ್ಯಂತ ರೋಚಕವಾಗಿ ಮೂಡಿಬಂದಿದೆ. ಈ ಚಿತ್ರದ ನಿರ್ದೇಶಕರು : ಶಿವ ನಿರ್ವಾಣ. ರವಿತೇಜ, ಪ್ರಿಯಾ ಭವಾನಿಶಂಕರ್, ಸಾಯಿಕುಮಾರ್, ಬೇಬಿ ನಕ್ಷತ್ರಾ, ಪ್ರಮುಖ ತಾರಾಗಣದಲ್ಲಿದ್ದಾರೆ. ಈ ಚಿತ್ರಕ್ಕೆ ಸಂಗೀತ ಒದಗಿಸಿದವರು ಜಿ.ವಿ. ಪ್ರಕಾಶ್ ಕುಮಾರ್.
ಮರಾಠಿ : ದ್ವಿಧಾ

ಕರ್ತವ್ಯ ಯಾ ಭವಿಷ್ಯದ ಆಯ್ಕೆಯಲ್ಲಿ ಯಾವುದಕ್ಕೆ ಒತ್ತು ಕೊಡಬೇಕು? ತಂದೆ-ಮಗಳ ಭಾವನಾತ್ಮಕ ಸಂಬಂಧ ಗಟ್ಟಿಗೊಳಿಸುವ ಸಂವೇದನಾಶೀಲ ಚಿತ್ರ ಇದು. ಈ ಕೌಟುಂಬಿಕ ಭಾವನಾತ್ಮಕ ಸಂಘರ್ಷವನ್ನು ನಿರ್ದೇಶಕ ನೀಲೇಶ್ ಭಾಸ್ಕರ್ `ದ್ವಿಧಾ’ ಮರಾಠಿ ಚಿತ್ರದಲ್ಲಿ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಎರಡು ವಿರುದ್ಧ ವಿಚಾರಗಳ ತಿಕ್ಕಾಟದಲ್ಲಿ ಯಾವುದಕ್ಕೆ ಮಹತ್ವ ನೀಡಬೇಕು ಎಂಬುದೇ ಇಲ್ಲಿನ ಜಟಿಲ ಪ್ರಶ್ನೆ. ಬುದ್ಧಿಹೃದಯಗಳ ಸಂಘರ್ಷದಲ್ಲಿ ಗೆಲುವು ಯಾರಿಗೆ? ನಾಯಕಿ ಶ್ರಾವಣಿ ವಿವಾಹಿತಳಾಗಿ ಅಮೆರಿಕಾದಲ್ಲಿ ಸೆಟಲ್ಡ್, ಬಹಳ ವರ್ಷಗಳ ನಂತರ ತವರು ಮುಂಬೈಗೆ ಹಿಂದಿರುಗುತ್ತಾಳೆ. ಸತತ ಗರ್ಭಪಾತಕ್ಕೆ ಒಳಗಾದ ಅವಳು, ಈ ಸಲದ ಗರ್ಭವನ್ನು ಉಳಿಸಿಕೊಳ್ಳಬೇಕೆಂದು ಕಟ್ಟುನಿಟ್ಟಾಗಿ ವೈದ್ಯರ ಸಲಹೆ ಅನುಸರಿಸುತ್ತಿರುತ್ತಾಳೆ. ತಾಯಿ ಇಲ್ಲದ ಈಕೆ, ಹಾಸಿಗೆ ಹಿಡಿದ ತಂದೆಯ ಆರೈಕೆಗೆ ಸಿದ್ಧಳಾಗುತ್ತಾಳೆ. ತಂದೆಯನ್ನು ಬಿಡಲಾರಳು, 3ನೇ ಸಲ ಹೊತ್ತ ಗರ್ಭವನ್ನು ಜೋಪಾನವಾಗಿ ಉಳಿಸಿಕೊಳ್ಳಲು ಅಮೆರಿಕಾಗೆ ಪ್ರವಾಸಕ್ಕೆ ಹೋಗಲೇಬೇಕು. ಮಗುವಿನ ಮುಂದಿನ ಭವಿಷ್ಯ ನಿರ್ಲಕ್ಷಿಸಲಾಗದು. ಮುಂದೇನು…. ಎಂಬುದೇ ಚಿತ್ರದ ಉಳಿದಾರ್ಧ. ಮಾನಸಿ ಕುಲಕರ್ಣಿ, ಸತೀಶ್ ಪುಳೇಕರ್, ಆಸ್ತಾದ್ ಕಾಳೆ, ಮನೋಹರ್ ನಾಯಕ್ ಮುಂತಾದವರ ಪ್ರಮುಖ ತಾರಾಗಣವಿದ್ದು, ಸಂಗೀತ : ನಿಲೋತ್ಪ್ ಬೋರಾ ಶೈಲೇಂದ್ರ ಬಾರ್ವೆ.
ತಮಿಳು : ಇಮ್ಮಾರ್ಟಲ್

ಇದೊಂದು ಹೊಸ ಶೈಲಿಯ ಹಾರರ್ ಮೂವಿ. ಮಾವನ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಪ್ರಕಾಶ್ ಕೆಲಸ ಮಾಡುತ್ತಿರುತ್ತಾನೆ. ಬಾಡಿಗೆಗೆ ಮನೆ ಬೇಕೇ ಎಂದು ಒಬ್ಬ ಹೆಂಗಸು ಇವನಿಗೆ ಕರೆ ಮಾಡುತ್ತಾಳೆ. ಅದನ್ನು ನಂಬಿ ಈತ ಅಲ್ಲಿಗೆ ಹೋದಾಗ, ಮನೆಗಿಂತ ಅವಳ ಚೆಂದಕ್ಕೆ ಹೆಚ್ಚು ಮಾರುಹೋಗುತ್ತಾನೆ. ಮುಂದೆ ಈಕೆ ರಕ್ತಹೀರುವ ಡ್ರಾಕುಲಾ ಎಂದು ಗೊತ್ತಾಗುತ್ತದೆ, 4 ಸಾವಿರ ವರ್ಷಗಳಿಂದ ಆಕೆ ಹಾಗೇ ಇದ್ದಾಳೆ. ಇಂಥವಳ ಪ್ರೇಮಕಾಮಗಳಿಂದ ಆತ ಹೇಗೆ ಜೀವ ಉಳಿಸಿಕೊಳ್ಳಲು ಹೋರಾಡುತ್ತಾನೆ ಎಂಬುದೇ ಚಿತ್ರದ ಉಳಿದಾರ್ಧ. ಚಿತ್ರಕಥೆ, ಚಿತ್ರ ಸಾಗುವ ಶೈಲಿ ಪ್ರೇಕ್ಷಕರನ್ನು ಸೀಟಿನ ತುದಿಗೆ, ಉಗುರು ಕಚ್ಚುತ್ತಾ ಕೂರುವಂತೆ ಕುತೂಹಲ ಕೆರಳಿಸುತ್ತದೆ. ಚಿತ್ರದ ಕಥೆ/ನಿರ್ದೇಶನ : ಮಾರಿಯಪ್ಪನ್ ಚಿನ್ನ. ಜಿ.ವಿ. ಪ್ರಕಾಶ್ ಕುಮಾರ್, ಖಯಾದು ಲೋಹರ್, ಲೊಳ್ಳುಸಭಾ ಮಾರನ್, ಟಿ.ಎಂ. ಕಾರ್ತಿಕ್, ಕೆ. ನಟರಾಜನ್, ಆದಿತ್ಯ ಮುಂತಾದವರ ಪ್ರಮುಖ ತಾರಾಗಣವಿದ್ದು, ಸಂಗೀತ : ಎಸ್.ಸಿ. ಸ್ಯಾಮ್.
ಬಂಗಾಳಿ : ವಿಂಕಲ್ ಟ್ವಿಂಕಲ್

ಹಳೆಯ ನೆನಪುಗಳು ವಾಸ್ತವದ ಕಠೋರ ಸತ್ಯದೆದುರು ಪ್ರತ್ಯಕ್ಷವಾದಾಗ, ಮನಸ್ಸಿನ ಕಳವಳ ಹೇಳತೀರದು. ಪ್ರಸಿದ್ಧ ಹಳೆಯ ಬಂಗಾಳಿ ನಾಟಕ ಆಧರಿಸಿದ ಈ ಚಿತ್ರ, ನಿರ್ದೇಶಕ ಶ್ರೀಜಿತ್ ಮುಖರ್ಜಿ ಮೂಲಕ ಅತ್ಯುತ್ತಮವಾಗಿ ಮೂಡಿಬಂದಿದೆ. ಹಳೆಯ ನೆನಪು ಮಾತ್ರವಲ್ಲದೆ, ವರ್ತಮಾನಕ್ಕೆ ಅದು ಬಲವಾದ ಹೊಡೆತವಾಗಿದೆ. ಇದು ಕೇವಲ ಒಂದು ರಾಜಕೀಯ ರೂಪಕ ಆಗದೆ, ಅಧಿಕಾರದ ಲಾಲಸೆ ಏನೆಲ್ಲ ಮೂಡಿಸುತ್ತದೆ ಎಂದು ತೋರಿಸುತ್ತದೆ. ಕಾಲಕ್ಕೆ ತಕ್ಕಂತೆ ಜನರ ಮುಖವಾಡ ಕಳಚುತ್ತಾ ಹೋಗುತ್ತದೆ. ಇಲ್ಲಿ ಆದರ್ಶ, ಸ್ವಾರ್ಥ, ಅತಿಯಾದ ದುರಾಸೆಗಳ ಸಂಘರ್ಷವಿದೆ.
ಋತ್ವಿಕ್ ಚಕ್ರವರ್ತಿ, ಪರಮ್ ಬ್ರಿತ್ ಚಟ್ಟೋಪಾಧ್ಯಾಯ, ಸೋಹಿನಿ ಸರ್ಕಾರ್, ಅನಸೂಯಾ ಮಜುಮದಾರ್ ಮುಂತಾದವರ ಉತ್ತಮ ತಾರಾಗಣ ಇವರು ಈ ಚಿತ್ರಕ್ಕೆ ಸಂಗೀತ ಒದಗಿಸಿದರು : ತಮಾಲಿಕಾ ಗೋಲ್ಡರ್.
ಮಲೆಯಾಳಂ : ಬೆತ್ಲೇಹೇಮ್

ಕುಡುಂಬ ಯೂನಿಟ್ ಇದೊಂದು ಸರಳ ಸುಂದರ ರೊಮ್ಯಾಂಟಿಕ್ ಕಾಮಿಡಿ ಚಿತ್ರ. ಫೀಲ್ ಗುಡ್ ಫಿಲ್ಮ್ ಎಂದೇ ಪ್ರೇಕ್ಷಕರು ಖುಷಿಪಡುತ್ತಾರೆ. ಇಡೀ ಚಿತ್ರದ ತುಂಬಾ ಹಾಸ್ಯ ಸಹಜವಾಗಿ ಬೆರೆತಿದೆ. ಕುಟುಂಬದ ಚಿತ್ರಣ, ಗಾಸಿಪ್, ಹಿರಿಯರ ಗತ್ತು, ನೆರೆಹೊರೆ ಕಾಟ, ಇಡೀ ಮಧ್ಯಮ ವರ್ಗದ ಪ್ರಾಕ್ಟಿಕಲ್ ಜೀವನದ ಸ್ಪಷ್ಟ ಚಿತ್ರಣವಿದೆ. ನಾಯಕ ನಾಯಕಿಯರ ನಡುವಿನ ಕೆಮಿಸ್ಟ್ರಿ ಇಡೀ ಚಿತ್ರದ ಜೀವಾಳ. ರೊಮ್ಯಾಂಟಿಕ್ ಕಾಮಿಡಿಯ ಹೂರಣ ಮೊದಲಾರ್ಧದಲ್ಲಿ ಚುರುಕಾಗಿದ್ದರೂ, ದ್ವಿತೀಯಾರ್ಧ ಕುಂಟುತ್ತದೆ. ಲೋ ಬಜೆಟ್ ನ ಈ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ವಿಶ್ವ ಮಟ್ಟದಲ್ಲಿ 275 ಕೋಟಿ ಕಲೆಕ್ಷನ್ ಮೀರಿ ಮುಂದುವರಿದಿದೆ!
ಈ ಚಿತ್ರದ ನಿರ್ದೇಶಕರು ಎ.ಡಿ. ಗಿರೀಶ್. ಪ್ರಮುಖ ತಾರಾಗಣದಲ್ಲಿ ನವೀನ್ ಪಾಲಿ, ಮಮತಾ ಬೈಜು, ಸಂಗೀತ್ ಪ್ರತಾಪ್ ಮುಂತಾದವರಿದ್ದಾರೆ. ಸಂಗೀತ ಒದಗಿಸಿದವರು ವಿಷ್ಣು ವಿಜಯ್.





