ಸಾಮಾನ್ಯವಾಗಿ ಯಾವುದೇ ಹಂತದಲ್ಲಿ ಕ್ರಿಕೆಟ್ ಆಟಗಾರರಾಗಿದ್ದು, ತಮ್ಮ ಯೌವನ ಮುಗಿದ ನಂತರವೂ ಕ್ರಿಕೆಟ್ ಅಟದ ಮೇಲಿನ ಮಮತೆ ಮತ್ತು ಸೆಳೆತದಿಂದಾಗಿ ಕ್ರಿಕೆಟ್ ಅಂಪೈರ್ ಅಗಿ ಮುಂದುವರೆದಿದ್ದನ್ನು ನೋಡಿದ್ದೇವೆ. ಎಲ್ಲೋ ಅಪರೂಪಕ್ಕೆ ಖ್ಯಾತ ಕ್ರಿಕೆಟರ್ ಆಗದೇ ಹೋದರೂ ಕ್ರಿಕೆಟ್ ಆಟದ ಮೇಲಿನ ಪ್ರೀತಿಯಿಂದಾಗಿ ಪ್ರತಿಷ್ಠಿತ IISCನಲ್ಲಿ ಬಹುದೊಡ್ಡ ಹುದ್ದೆಯಲ್ಲಿದ್ದರೂ ಕ್ರಿಕೆಟ್ ಅಂಪೈರ್ ಅಗಿರುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಎ.ಎಲ್. ನರಸಿಂಹನ್ ಅವರೂ ಒಬ್ಬರಾಗಿದ್ದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ

ಐಐಎಸ್‌ಸಿಯಲ್ಲಿ 36 ವರ್ಷಗಳ ಆಡಳಿತಾತ್ಮಕ ಸೇವೆ, ಎರಡು ದಶಕಗಳಿಗೂ ಅಧಿಕ ಕಾಲ ಕ್ರಿಕೆಟ್ ಅಂಪೈರಿಂಗ್, ವಿಶ್ವಕಪ್ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ, ವೇದಾಧ್ಯಯನ ಮತ್ತು ಪ್ರವಚನಗಳು… ಒಂದೇ ವ್ಯಕ್ತಿಯ ಬದುಕಿನಲ್ಲಿ ಇಷ್ಟೆಲ್ಲಾ ವೈವಿಧ್ಯಮಯ ಸಾಧನೆಗಳು ಸಾಧ್ಯವೇ ಎಂದು ಅಚ್ಚರಿಪಡುವಂತೆ ಮಾಡುವ ವ್ಯಕ್ತಿ ಎ.ಎಲ್. ನರಸಿಂಹನ್.

ಕ್ರಿಕೆಟ್ ಅಂಗಳದಲ್ಲಿ ಅಂಪೈರ್ ಆಗಿ ನಿಂತಾಗ ಕ್ಷಣಾರ್ಧದಲ್ಲಿ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ, ಭಾರತೀಯ ವಿಜ್ಞಾನ ಸಂಸ್ಥೆ (IISc)ಯಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದಾಗ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ನಿರ್ವಹಿಸುವ ಹೊಣೆಗಾರಿಕೆ, ಮತ್ತೊಂದೆಡೆ ವೇದಗಳ ಅಧ್ಯಯನ ಮತ್ತು ಆಧ್ಯಾತ್ಮಿಕ ಪ್ರವಚನಗಳಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ. ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಎ.ಎಲ್. ನರಸಿಂಹನ್ ಅವರ ಜೀವನ ನಿಜಕ್ಕೂ ಅಪರೂಪದ ಸಾಧನೆಯ ಪಯಣ.

1994ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಕಪಿಲ್ ದೇವ್ ತಮ್ಮ 432ನೇ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ವಿಶ್ವದಾಖಲೆ ನಿರ್ಮಿಸಿದ್ದರು. ಆ ಐತಿಹಾಸಿಕ ಕ್ಷಣದಲ್ಲಿ ಬ್ಯಾಟ್ಸ್‌ಮನ್ ಹರ್ಷನ್ ತಿಲಕರತ್ನೆ ಔಟಾದಾಗ ‘ಔಟ್!’ ಎಂದು ತೀರ್ಪು ನೀಡಿದ ಅಂಪೈರ್ ಎ.ಎಲ್. ನರಸಿಂಹನ್ ಅವರೇ ಎಂಬುದು ವಿಶೇಷ. ಕ್ರಿಕೆಟ್ ಇತಿಹಾಸದ ಮಹತ್ವದ ಕ್ಷಣವೊಂದಕ್ಕೆ ಸಾಕ್ಷಿಯಾಗಿರುವ ಈ ಕನ್ನಡಿಗನ ಸಾಧನೆಗಳು ಕೇವಲ ಅಂಪೈರಿಂಗ್‌ಗೆ ಸೀಮಿತವಾಗಿಲ್ಲ.

ಮೈಸೂರಿನ ಸಾಂಪ್ರದಾಯಿಕ ಕುಟುಂಬದಲ್ಲಿ ಜನನ

narasimhan1465

 

ಎ.ಎಲ್. ನರಸಿಂಹನ್ ಅವರು 1940ರ ಏಪ್ರಿಲ್ 27ರಂದು ಮೈಸೂರಿನ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದರು.  ಬಾಲ್ಯದಿಂದಲೇ ಶಿಸ್ತು, ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳ ವಾತಾವರಣದಲ್ಲಿ ಜೀವನ ನಡೆಸಿದರು. ಅವರ ಪೂರ್ವಜರು ಪುರೋಹಿತರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಾಗಿದ್ದರು.

ಕುಟುಂಬದ ಸಂಪ್ರದಾಯಗಳು ಸಾಕಷ್ಟು ಕಟ್ಟುನಿಟ್ಟಾಗಿದ್ದವು. ಇಪ್ಪತ್ತು ವರ್ಷ ವಯಸ್ಸಾಗುವವರೆಗೂ ಚಹಾ ಅಥವಾ ಕಾಫಿ ಕುಡಿಯುವಂತಿರಲಿಲ್ಲ. ದೇವಸ್ಥಾನಕ್ಕೆ ತೆರಳುವಾಗ ಚಪ್ಪಲಿ ಧರಿಸುವುದಕ್ಕೂ ಅವಕಾಶವಿರಲಿಲ್ಲ. ಬರಿಗಾಲಿನಲ್ಲಿ ನಡೆದುಕೊಂಡೇ ಹೋಗಬೇಕಾಗಿತ್ತು. ಅಷ್ಟೇ ಅಲ್ಲ, ಅವರು ಎಂ.ಎಸ್ಸಿ. ಪದವಿಗೆ ಸೇರುವವರೆಗೂ ಧೋತಿಯನ್ನೇ ಧರಿಸುತ್ತಿದ್ದರು. ಮೊದಲ ಬಾರಿಗೆ ಪ್ಯಾಂಟ್ ಹೊಲಿಸಿಕೊಂಡದ್ದು ಸ್ನಾತಕೋತ್ತರ ಪದವಿ ವ್ಯಾಸಂಗದ ಸಮಯದಲ್ಲಿ. ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಹಾಜರಾಗಲು ಮೊದಲ ಜೋಡಿ ಶೂಗಳನ್ನು ಖರೀದಿಸಿದ್ದರು. ಇಂತಹ ಸಾಂಪ್ರದಾಯಿಕ ವಾತಾವರಣದಲ್ಲಿ ಬೆಳೆದಿದ್ದರೂ ನರಸಿಂಹನ್ ಅವರಿಗೆ ಆಧುನಿಕ ಶಿಕ್ಷಣ, ಆಡಳಿತ ಮತ್ತು ಕ್ರೀಡಾ ಕ್ಷೇತ್ರಗಳ ಬಗ್ಗೆ ಅಪಾರ ಆಸಕ್ತಿಯಿತ್ತು. ಸಂಖ್ಯಾಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿ ಪಡೆದ ಅವರು, ತಮ್ಮ ವೃತ್ತಿಜೀವನವನ್ನು ಕರ್ನಾಟಕ ಸರ್ಕಾರದ ಅಂಕಿಅಂಶ ಇಲಾಖೆಯಲ್ಲಿ ಆರಂಭಿಸಿದರು.

ಅನಿರೀಕ್ಷಿತವಾಗಿ ಒಲಿದು ಬಂದ IISc ಉದ್ಯೋಗ

ನರಸಿಂಹನ್ ಅವರ ವೃತ್ತಿಜೀವನದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರವೇಶ ಒಂದು ಮಹತ್ವದ ತಿರುವು. ಎಂ.ಎಸ್ಸಿ. ಪದವಿ ಪೂರ್ಣಗೊಳಿಸಿದ ನಂತರ ಕರ್ನಾಟಕ ಸರ್ಕಾರದ ಅಂಕಿಅಂಶ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ಅವರನ್ನು ಗುಲ್ಬರ್ಗಕ್ಕೆ ನಿಯೋಜಿಸಲಾಗಿತ್ತು. ಅಲ್ಲಿನ ಹವಾಮಾನ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳಲು ಕಷ್ಟವಾದ ಕಾರಣ, ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಮೈಸೂರಿಗೆ ಮರಳಲು ನಿರ್ಧರಿಸಿದರು.

ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ತಮ್ಮ ಚಿಕ್ಕಪ್ಪನನ್ನು ಭೇಟಿಯಾಗಲು ಬಂದಾಗ, ಭಾರತೀಯ ವಿಜ್ಞಾನ ಸಂಸ್ಥೆಯಿಂದ ಜೂನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಸಂದರ್ಶನಕ್ಕೆ ಹಾಜರಾಗುವಂತೆ ಬಂದಿದ್ದ ಪತ್ರದ ಬಗ್ಗೆ ತಿಳಿಯಿತು. ಆದರೆ ಆ ಪತ್ರವನ್ನು ಅವರ ಸಂಬಂಧಿಕರು ಕಳೆದುಕೊಂಡಿದ್ದರಿಂದ ಸಂದರ್ಶನದ ಕೊನೆಯ ದಿನಾಂಕವೂ ಮುಗಿದುಹೋಗಿತ್ತು. ಸಂದರ್ಶನದ ಅವಕಾಶ ಕೈತಪ್ಪಿದ್ದಕ್ಕೆ ಬೇಸರಗೊಂಡಿದ್ದ ನರಸಿಂಹನ್ ಅವರನ್ನು, ಸಂಬಂಧಪಟ್ಟ ಅಧಿಕಾರಿಗಳನ್ನು ನೇರವಾಗಿ ಭೇಟಿ ಮಾಡುವಂತೆ ಚಿಕ್ಕಪ್ಪ ಪ್ರೋತ್ಸಾಹಿಸಿದರು. ಆರಂಭದಲ್ಲಿ ಹಿಂಜರಿದರೂ ಕೊನೆಗೆ IIScಗೆ ತೆರಳಿ ವಿದ್ಯಾರ್ಥಿ ವಿಭಾಗದ ಸಹಾಯಕ ರಿಜಿಸ್ಟ್ರಾರ್ ವೈದ್ಯನಾಥನ್ ಅವರನ್ನು ಭೇಟಿಯಾದರು.

ನರಸಿಂಹನ್ ಅವರನ್ನು ಕಂಡ ವೈದ್ಯನಾಥನ್, ಸಂಸ್ಥೆಯವರು ಈಗಾಗಲೇ ಅವರನ್ನು ಹುಡುಕುತ್ತಿದ್ದ ಸಂಗತಿಯನ್ನು ತಿಳಿಸಿದರು. ಅವರ ವಿಳಾಸಕ್ಕೆ ಅಧಿಕಾರಿಯೊಬ್ಬರನ್ನು ಎರಡು ಬಾರಿ ಕಳುಹಿಸಿದ್ದರೂ ಸಂಪರ್ಕ ಸಾಧ್ಯವಾಗಿರಲಿಲ್ಲವಂತೆ. ಸಂದರ್ಶನದ ದಿನಾಂಕ ಮುಗಿದಿದ್ದರೂ, ನರಸಿಂಹನ್ ಅವರನ್ನು ಹಿಂದಿರುಗಿ ಕಳುಹಿಸದೆ ಅಲ್ಲಿಯೇ ಉಳಿಯುವಂತೆ ಸೂಚಿಸಿದರು. ಊಟ ಮುಗಿಸಿ ಬಂದ ನಂತರ ವಿಶೇಷವಾಗಿ ಸಂದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.

ಮರುದಿನ ಪ್ರೊ. ಸತೀಶ್ ಧವನ್ ಅವರ ನೇತೃತ್ವದ ಆಯ್ಕೆ ಸಮಿತಿಯ ಮುಂದೆ ಸಂದರ್ಶನ ನಡೆಯಿತು. ಸಮಿತಿಯಲ್ಲಿ ಪ್ರೊ. ಆರ್ಕಾಟ್ ರಾಮಚಂದ್ರನ್, ಪ್ರೊ. ಪಿ.ಎಲ್. ಭಟ್ನಾಗರ್ ಮತ್ತು ಪ್ರೊ. ಪಿ.ಎಸ್. ಶರ್ಮಾ ಅವರಂತಹ ಗಣ್ಯರೂ ಇದ್ದರು. ಸಂದರ್ಶನದ ನಂತರ ವೈದ್ಯನಾಥನ್ ಅವರು ಮತ್ತೊಮ್ಮೆ ನರಸಿಂಹನ್ ಅವರಿಗೆ ಅಲ್ಲಿಯೇ ಕಾಯುವಂತೆ ತಿಳಿಸಿದರು. ಕೊನೆಗೆ ಪ್ರೊ. ಸತೀಶ್ ಧವನ್ ಅವರ ಸಹಿಯೊಂದಿಗೆ ನೇಮಕಾತಿ ಪತ್ರ ದೊರೆಯಿತು. 1965ರಲ್ಲಿ ತಮ್ಮ 25ನೇ ವಯಸ್ಸಿನಲ್ಲಿ IIScಗೆ ಸೇರಿದ ನರಸಿಂಹನ್ ಅವರ 36 ವರ್ಷಗಳ ಸುದೀರ್ಘ ಸೇವಾ ಜೀವನ ಹೀಗೆ ಆರಂಭವಾಯಿತು.

IIScಯಲ್ಲಿ 36 ವರ್ಷಗಳ ಆಡಳಿತಾತ್ಮಕ ಸೇವೆ

ಜೂನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ ಆಗಿ ವೃತ್ತಿ ಆರಂಭಿಸಿದ ನರಸಿಂಹನ್, ನಂತರ ಸಹಾಯಕ ರಿಜಿಸ್ಟ್ರಾರ್ ಮತ್ತು ಉಪ ರಿಜಿಸ್ಟ್ರಾರ್ ಹುದ್ದೆಗಳನ್ನು ನಿರ್ವಹಿಸಿದರು. ವಿದ್ಯಾರ್ಥಿಗಳ ಪ್ರವೇಶ, ಶೈಕ್ಷಣಿಕ ವ್ಯವಹಾರಗಳು, ಆಡಳಿತ, ಪರೀಕ್ಷೆಗಳು, ಸಂಸ್ಥೆಯ ಪ್ರಕಟಣೆಗಳು ಸೇರಿದಂತೆ ಹಲವು ಪ್ರಮುಖ ವಿಭಾಗಗಳಲ್ಲಿ ಕೆಲಸ ಮಾಡಿದರು.

ವಿಶೇಷವಾಗಿ IIScಯ ಪ್ರವೇಶ ಪ್ರಕ್ರಿಯೆಯ ನಿರ್ವಹಣೆ ಅತ್ಯಂತ ಜವಾಬ್ದಾರಿಯುತ ಕೆಲಸವಾಗಿತ್ತು. ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದರಿಂದ ಪ್ರವೇಶ ಪರೀಕ್ಷೆಗಳ ವೇಳಾಪಟ್ಟಿ ರೂಪಿಸುವುದು, ಪತ್ರಿಕೆಗಳಿಗೆ ಜಾಹೀರಾತು ನೀಡುವುದು, ಪ್ರವೇಶ ಕೈಪಿಡಿ ಮತ್ತು ಮಾಹಿತಿ ಪುಸ್ತಕಗಳನ್ನು ಸಿದ್ಧಪಡಿಸುವುದು, ಪರೀಕ್ಷಾ ಕೇಂದ್ರಗಳನ್ನು ಆಯೋಜಿಸುವುದು ಹೀಗೆ ಅನೇಕ ಕೆಲಸಗಳನ್ನು ನಿರ್ವಹಿಸಬೇಕಾಗಿತ್ತು.

ಇಂದಿನಂತೆ ಕಂಪ್ಯೂಟರ್ ಮತ್ತು ಆನ್‌ಲೈನ್ ವ್ಯವಸ್ಥೆಗಳು ಇಲ್ಲದ ಕಾಲದಲ್ಲಿ ಈ ಎಲ್ಲ ಕೆಲಸಗಳು ಸಂಪೂರ್ಣವಾಗಿ ಕೈಯಾರೆ ನಡೆಯುತ್ತಿದ್ದವು. ಪ್ರಶ್ನೆಪತ್ರಿಕೆಗಳ ಮುದ್ರಣ, ಅವುಗಳ ಗೌಪ್ಯತೆ ಕಾಪಾಡುವುದು, ಪರೀಕ್ಷಾ ಕೇಂದ್ರಗಳಿಗೆ ಸುರಕ್ಷಿತವಾಗಿ ತಲುಪಿಸುವುದು, ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಿ ಮೌಲ್ಯಮಾಪನಕ್ಕೆ ಕಳುಹಿಸುವುದು ಎಲ್ಲವೂ ದೊಡ್ಡ ಸವಾಲಾಗಿತ್ತು.

ಆಗಿನ ದಿನಗಳಲ್ಲಿ ಪ್ರಶ್ನೆಪತ್ರಿಕೆಗಳಿದ್ದ ಮೊಹರು ಮಾಡಿದ ದೊಡ್ಡ ಟ್ರಂಕ್‌ಗಳನ್ನು ರೈಲಿನ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲಾಗುತ್ತಿತ್ತು. ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಸಂಬಂಧಪಟ್ಟ ಅಧ್ಯಾಪಕರಿಗೆ ಮೌಲ್ಯಮಾಪನಕ್ಕಾಗಿ ಕಳುಹಿಸಬೇಕಾಗಿತ್ತು. ಪರೀಕ್ಷಾ ಕೇಂದ್ರದಿಂದ ಉತ್ತರ ಪತ್ರಿಕೆಗಳಿದ್ದ ಪೆಟ್ಟಿಗೆ ಕಾಣೆಯಾದರೂ ಗಂಭೀರ ಸಮಸ್ಯೆ ಎದುರಾಗುತ್ತಿತ್ತು.

ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯೂ ಸುಲಭವಾಗಿರಲಿಲ್ಲ. ವಿವಿಧ ವಿಭಾಗಗಳ ಅಧ್ಯಾಪಕರು ಒಟ್ಟಾಗಿ ಸಭೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದರು. ಈ ಸಭೆಗಳು ಕೆಲವೊಮ್ಮೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ನಡೆಯುತ್ತಿದ್ದವು. ಆಗಿನ ಡೀನ್ ಪ್ರೊ. ಸಿ.ವಿ. ಜೋಗಾ ರಾವ್ ಅವರು ತಡರಾತ್ರಿಯವರೆಗೂ ಕಚೇರಿಯಲ್ಲಿದ್ದು ಸಿಬ್ಬಂದಿಗೆ ಮಾರ್ಗದರ್ಶನ ನೀಡುತ್ತಿದ್ದುದನ್ನು ನರಸಿಂಹನ್ ವಿಶೇಷವಾಗಿ ಸ್ಮರಿಸುತ್ತಾರೆ. ಇಷ್ಟೆಲ್ಲಾ ಕಠಿಣ ಪ್ರಕ್ರಿಯೆಗಳ ನಡುವೆಯೂ ಪ್ರತಿ ವರ್ಷ ಆಗಸ್ಟ್ 1ರಂದು ಶೈಕ್ಷಣಿಕ ವರ್ಷ ಆರಂಭವಾಗುವ ಗಡುವನ್ನು ತಪ್ಪಿಸದೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸುವುದು ಅವರ ತಂಡದ ಪ್ರಮುಖ ಸಾಧನೆಯಾಗಿತ್ತು.

narasimhan1

ಹಲವು ವಿಭಾಗಗಳಲ್ಲಿ ಜವಾಬ್ದಾರಿಯುತ ಕೆಲಸ

ನರಸಿಂಹನ್ ಅವರು ಕೇವಲ ವಿದ್ಯಾರ್ಥಿಗಳ ಪ್ರವೇಶ ವಿಭಾಗಕ್ಕೆ ಸೀಮಿತವಾಗಿರಲಿಲ್ಲ. ಸುಮಾರು ಐದು ವರ್ಷಗಳ ಕಾಲ ಕೌನ್ಸಿಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿ, ಸಂಸ್ಥೆಯ ಕೌನ್ಸಿಲ್ ಮತ್ತು  ಹಣಕಾಸು ಸಮಿತಿ ಹಾಗೂ ಹೂಡಿಕೆ ಸಮಿತಿಯ ಸಭೆಗಳ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದರು.

ಸುಮಾರು ಏಳು ವರ್ಷಗಳ ಕಾಲ GATE ಪರೀಕ್ಷಾ ಕಚೇರಿಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದರು. ಮೂರು ವರ್ಷಗಳ ಕಾಲ ಸಂಪರ್ಕ ಅಧಿಕಾರಿಯಾಗಿ, ಐದು ವರ್ಷಗಳ ಕಾಲ ನಿರಂತರ ಶಿಕ್ಷಣ ಕೇಂದ್ರದಲ್ಲಿ ಸಹಾಯಕ ರಿಜಿಸ್ಟ್ರಾರ್ ಆಗಿ ಹಾಗೂ ಒಂದೆರಡು ವರ್ಷ ಹಿಂದಿ ವಿಭಾಗದ ಉಸ್ತುವಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಂಸ್ಥೆಯ ವಾರ್ಷಿಕ ವರದಿ ಮತ್ತು ಲೆಕ್ಕಪತ್ರಗಳನ್ನು ಹಿಂದಿಗೆ ಅನುವಾದಿಸುವ ಕೆಲಸದಲ್ಲಿಯೂ ಅವರು ತೊಡಗಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ತಮ್ಮ ಸಹೋದರಿ ಡಾ. ಎ. ಜಾನಕಿ ಅವರ ಸಹಾಯವನ್ನೂ ಪಡೆದಿದ್ದರು. ತಮ್ಮ ಅಧಿಕಾರಾವಧಿಯಲ್ಲಿ IIScಯ ಪ್ರಕಟಣೆಗಳಿಗೆ ಸಂಬಂಧಿಸಿದ ಜವಾಬ್ದಾರಿಯನ್ನೂ ನಿರ್ವಹಿಸಿದ್ದರು.

ಅಧ್ಯಾಪಕರ ನೇಮಕಾತಿ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು, ವಿವಿಧ ಆಡಳಿತಾತ್ಮಕ ಕಾರ್ಯವಿಧಾನಗಳನ್ನು ಸರಳಗೊಳಿಸುವುದು ಮತ್ತು ಅಧ್ಯಾಪಕರ ರಜೆಯ ನಿರ್ವಹಣೆಯಂತಹ ಸೂಕ್ಷ್ಮ ಜವಾಬ್ದಾರಿಗಳನ್ನೂ ಅವರು ನಿಭಾಯಿಸಿದ್ದರು.ವಿದ್ಯಾರ್ಥಿಗಳ ಸಮಸ್ಯೆಗಳನ್ನು ನಿರ್ವಹಿಸುವಾಗ ಎದುರಾದ ಕೆಲವು ಘಟನೆಗಳು ಅವರ ವೃತ್ತಿಜೀವನದ ಅತ್ಯಂತ ಕಠಿಣ ಅನುಭವಗಳಾಗಿದ್ದವು. ವಿಶೇಷವಾಗಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದ ವಿಚಾರಣೆಗಳು, ಪೊಲೀಸ್ ತನಿಖೆಗಳೊಂದಿಗೆ ಸಮನ್ವಯ ಮತ್ತು ದುಃಖತಪ್ತ ಕುಟುಂಬಗಳನ್ನು ಎದುರಿಸುವುದು ಮಾನಸಿಕವಾಗಿ ಬಹಳ ನೋವುಂಟುಮಾಡುತ್ತಿದ್ದುದಾಗಿ ಅವರು ನೆನಪಿಸಿಕೊಳ್ಳುತ್ತಾರೆ.

ಬೋಧನೆಯಲ್ಲಿಯೂ ಆಸಕ್ತಿ

ಆಡಳಿತಾತ್ಮಕ ಕೆಲಸಗಳ ನಡುವೆಯೂ ನರಸಿಂಹನ್ ಅವರಿಗೆ ಬೋಧನೆಯ ಬಗ್ಗೆ ವಿಶೇಷ ಆಸಕ್ತಿಯಿತ್ತು. IIScಯ ಅನುಮತಿಯೊಂದಿಗೆ 1971ರಿಂದ 1983ರವರೆಗೆ ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನ ಸಂಜೆ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅಲ್ಲಿ ವ್ಯವಹಾರ ಅಂಕಿಅಂಶಗಳು ಮತ್ತು ಅನ್ವಯಿಕ ಅಂಕಿಅಂಶಗಳ ಜೊತೆಗೆ ವ್ಯವಹಾರ ಆಡಳಿತ, ಉತ್ಪಾದನಾ ನಿರ್ವಹಣೆ ಮತ್ತು ಮಾರುಕಟ್ಟೆ ನಿರ್ವಹಣೆಯ ವಿಷಯಗಳನ್ನು ಬೋಧಿಸಿದರು. IIScಯಲ್ಲಿಯೂ ಸುಮಾರು ಆರು ವರ್ಷಗಳ ಕಾಲ ಸಿಬ್ಬಂದಿಯ ಸೇವಾವಧಿ ತರಬೇತಿ ಕಾರ್ಯಕ್ರಮದ ಭಾಗವಾಗಿ ಹಿಂದಿ ಭಾಷೆಯನ್ನು ಕಲಿಸಿದರು.

ಕ್ರಿಕೆಟ್ ಮೇಲಿನ ಪ್ರೀತಿ. ಆಟಗಾರನಾಗದಿದ್ದರೂ ಅಂಪೈರ್ ಆದರು!

ನರಸಿಂಹನ್ ಅವರ ಜೀವನದ ಅತ್ಯಂತ ಆಸಕ್ತಿದಾಯಕ ಅಧ್ಯಾಯವೆಂದರೆ ಕ್ರಿಕೆಟ್ ಅಂಪೈರಿಂಗ್. ಬಾಲ್ಯದಿಂದಲೇ ಅವರಿಗೆ ಕ್ರಿಕೆಟ್ ಮೇಲೆ ಅಪಾರ ಪ್ರೀತಿ. ಆದರೆ ಕುಟುಂಬದ ಸಂಪ್ರದಾಯ ಮತ್ತು ಕಟ್ಟುನಿಟ್ಟಿನ ವಾತಾವರಣದಿಂದಾಗಿ ಕ್ರಿಕೆಟ್ ಆಟಗಾರನಾಗಿ ಬೆಳೆಯುವ ಅವಕಾಶ ಅವರಿಗೆ ಸಿಗಲಿಲ್ಲ.

ಆದರೂ ಕ್ರಿಕೆಟ್‌ನಿಂದ ದೂರ ಉಳಿಯಲು ಅವರಿಗೆ ಸಾಧ್ಯವಾಗಲಿಲ್ಲ. 1959ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ಮೈಸೂರಿನಲ್ಲಿ ಜೈ ಹಿಂದ್ ಕ್ರಿಕೆಟ್ ಕ್ಲಬ್ ಆರಂಭಿಸಿದರು. ಫಸ್ಟ್ ಡಿವಿಷನ್ ಲೀಗ್ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾಗ ಬಿ.ಎಸ್. ಚಂದ್ರಶೇಖರ್, ಇ.ಎ.ಎಸ್. ಪ್ರಸನ್ನ ಮತ್ತು ಜಿ.ಆರ್. ವಿಶ್ವನಾಥ್ ಅವರಂತಹ ಖ್ಯಾತ ಕ್ರಿಕೆಟಿಗರ ವಿರುದ್ಧ ಆಡುವ ಅವಕಾಶವೂ ಅವರಿಗೆ ದೊರೆಯಿತು. ಆದರೆ ಕ್ರಿಕೆಟ್‌ನಲ್ಲಿ ಮುಂದುವರಿಯಲು ಆಟಗಾರನಾಗಲೇಬೇಕೆಂಬ ನಿಯಮವಿಲ್ಲವಲ್ಲ! ಆಟದ ಮೇಲಿನ ಪ್ರೀತಿಯನ್ನು ಬೇರೆ ರೀತಿಯಲ್ಲಿ ವ್ಯಕ್ತಪಡಿಸಲು ಅವರು ಅಂಪೈರಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಡೆಸಿದ ಅಂಪೈರಿಂಗ್ ಲಿಖಿತ ಪರೀಕ್ಷೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಗಳಿಸಿದ್ದು ಅವರ ಸಾಮರ್ಥ್ಯಕ್ಕೆ ಸಾಕ್ಷಿ.

1983ರಿಂದ 1993ರ ಅವಧಿಯಲ್ಲಿ ನಾಲ್ಕು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದರು. 1992ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಗೆ ಭಾರತದಿಂದ ನಾಮನಿರ್ದೇಶನಗೊಂಡ ಅಂಪೈರ್‌ಗಳಲ್ಲಿ ಇವರೂ ಒಬ್ಬರಾಗಿದ್ದರು. 1993-94ರಲ್ಲಿ ಅಹಮದಾಬಾದ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುವ ಮೂಲಕ ಟೆಸ್ಟ್  ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

ಕಪಿಲ್ ದೇವ್ ಅವರ 432ನೇ ವಿಕೆಟ್‌ಗೆ ‘ಔಟ್’ ಎಂದವರು!

narasimhan3

1994ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ಆ ಪಂದ್ಯದಲ್ಲಿ ಭಾರತದ ದಿಗ್ಗಜ ವೇಗದ ಬೌಲರ್ ಕಪಿಲ್ ದೇವ್, ಶ್ರೀಲಂಕಾದ ಹರ್ಷನ್ ತಿಲಕರತ್ನೆ ಅವರನ್ನು ಔಟ್ ಮಾಡುವ ಮೂಲಕ ತಮ್ಮ 432ನೇ ಟೆಸ್ಟ್ ವಿಕೆಟ್ ಪಡೆದರು. ಇದರಿಂದ ಅಂದಿನವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದ ರಿಚರ್ಡ್ ಹ್ಯಾಡ್ಲಿ ಅವರ ದಾಖಲೆಯನ್ನು ಹಿಂದಿಕ್ಕಿ ವಿಶ್ವದಾಖಲೆ ನಿರ್ಮಿಸಿದರು.

ಆ ನಿರ್ಣಾಯಕ ಕ್ಷಣದಲ್ಲಿ ‘ಔಟ್!’ ಎಂದು ತೀರ್ಪು ನೀಡಿದವರು ಎ.ಎಲ್. ನರಸಿಂಹನ್. ತಮ್ಮ ಅಂಪೈರಿಂಗ್ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಇದೂ ಒಂದು ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಭಾರತದ ಜೊತೆಗೆ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾದಂತಹ ತಂಡಗಳು ಭಾಗವಹಿಸಿದ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿಯೂ ಅವರು ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ ಇರಾನಿ ಟ್ರೋಫಿ, ದುಲೀಪ್ ಟ್ರೋಫಿ, ರಣಜಿ ಟ್ರೋಫಿ, ವಿಲ್ಸ್ ಟ್ರೋಫಿ ಮತ್ತು ದೇವಧರ್ ಟ್ರೋಫಿಯಂತಹ ಪ್ರಮುಖ ದೇಶೀಯ ಪಂದ್ಯಾವಳಿಗಳಲ್ಲಿಯೂ ಅಂಪೈರಿಂಗ್ ಮಾಡಿದ್ದಾರೆ.

ನಂತರ BCCIಯಲ್ಲಿ ಮ್ಯಾಚ್ ರೆಫರಿ ಮತ್ತು ಅಂಪೈರ್ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದರು. ಕರ್ನಾಟಕ ಕ್ರಿಕೆಟ್ ಅಂಪೈರ್‌ಗಳ ಸಂಘದ ಸ್ಥಾಪಕ ಸದಸ್ಯರಾಗಿದ್ದ ಅವರು, ಅದರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಂಪೈರ್‌ಗಳ ಪರೀಕ್ಷಾ ಮಂಡಳಿಯಲ್ಲಿಯೂ ಸದಸ್ಯರಾಗಿದ್ದರು. ಕ್ರಿಕೆಟ್ ನಿರೂಪಕರಾಗಿಯೂ ತಮ್ಮ ಆಸಕ್ತಿಯನ್ನು ಮುಂದುವರಿಸಿದ ಅವರು ಆಕಾಶವಾಣಿಯಲ್ಲಿ ಜಿ.ಆರ್. ವಿಶ್ವನಾಥ್ ಮತ್ತು ಬಿ.ಎಸ್. ಚಂದ್ರಶೇಖರ್ ಅವರಂತಹ ಖ್ಯಾತ ಕ್ರಿಕೆಟಿಗರನ್ನು ಸಂದರ್ಶಿಸುವ ಅವಕಾಶ ಪಡೆದಿದ್ದರು.

ಅಂಪೈರಿಂಗ್ ಕಲಿಸಿದ ಶಿಸ್ತು ಆಡಳಿತಕ್ಕೂ ನೆರವಾಯಿತು

 

ಅಂಪೈರ್ ಆಗಿ ಕಾರ್ಯನಿರ್ವಹಿಸುವುದು ಎಂದರೆ ಕೇವಲ ಆಟಗಾರ ಔಟಾಗಿದ್ದಾನೆಯೇ ಇಲ್ಲವೇ ಎಂಬುದನ್ನು ನಿರ್ಧರಿಸುವುದಲ್ಲ. ಆಟದ ಒತ್ತಡದ ಕ್ಷಣಗಳಲ್ಲಿ ಶಾಂತವಾಗಿರುವುದು, ನಿಯಮಗಳನ್ನು ಸ್ಪಷ್ಟವಾಗಿ ತಿಳಿದಿರುವುದು ಮತ್ತು ಯಾವುದೇ ಒತ್ತಡಕ್ಕೆ ಮಣಿಯದೆ ತಕ್ಷಣ ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಮುಖ್ಯ. ನರಸಿಂಹನ್ ಅವರ ಪ್ರಕಾರ, ಅಂಪೈರಿಂಗ್‌ನಲ್ಲಿ ಬೆಳೆಸಿಕೊಂಡ ಈ ಗುಣಗಳು IIScಯ ಆಡಳಿತಾತ್ಮಕ ಕೆಲಸಗಳಲ್ಲಿಯೂ ಬಹಳ ಸಹಾಯ ಮಾಡಿವೆ. ಸಿಬ್ಬಂದಿಯೊಂದಿಗೆ ಸಂವಹನ ನಡೆಸುವಾಗಲೂ, ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸುವಾಗಲೂ ಅಂಪೈರಿಂಗ್‌ನಿಂದ ಕಲಿತ ತಾಳ್ಮೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ನೆರವಾಯಿತು. IIScಯ ನಿರ್ದೇಶಕರಾಗಿದ್ದ ಪ್ರೊ. ಸತೀಶ್ ಧವನ್ ಮತ್ತು ಪ್ರೊ. ಜಿ. ಪದ್ಮನಾಭನ್ ಅವರಂತಹ ಗಣ್ಯರೊಂದಿಗೆ ಕ್ರಿಕೆಟ್ ಆಡುವ ಅವಕಾಶವೂ ಅವರಿಗೆ ದೊರೆತಿತ್ತು. ಸಂಸ್ಥೆಯ ಹಿರಿಯರು ಅವರ ಅಂಪೈರಿಂಗ್ ಆಸಕ್ತಿಯನ್ನು ಸದಾ ಪ್ರೋತ್ಸಾಹಿಸುತ್ತಿದ್ದರು.

IIScಯ ನೆನಪುಗಳು ಮತ್ತು ನಿವೃತ್ತಿ ಜೀವನ

2000ರ ವೇಳೆಗೆ ತಮ್ಮ 36 ವರ್ಷಗಳ ಸುದೀರ್ಘ ಸೇವೆಗೆ ವಿರಾಮ ನೀಡಿದ ನರಸಿಂಹನ್ ಅವರಿಗೆ IISc ಕೇವಲ ಉದ್ಯೋಗದ ಸ್ಥಳವಾಗಿರಲಿಲ್ಲ. ಅದು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿತ್ತು.

ಅವರು 2000ನೇ ಇಸವಿಯವರೆಗೂ ಸಂಸ್ಥೆಯ ಕ್ಯಾಂಪಸ್‌ನಲ್ಲಿಯೇ ವಾಸಿಸುತ್ತಿದ್ದರು. ಆಗ ಕ್ಯಾಂಪಸ್‌ನಲ್ಲಿದ್ದ ಅಧಿಕಾರಿಗಳ ಮನೆಗಳಲ್ಲಿ ಹಬ್ಬ ಹರಿದಿನಗಳನ್ನು ಎಲ್ಲರೂ ಒಟ್ಟಾಗಿ ಆಚರಿಸುತ್ತಿದ್ದರು. ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವುದು, ತಿಂಗಳಿಗೊಮ್ಮೆ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಲ್ಲಿನ ಜೀವನದ ಭಾಗವಾಗಿತ್ತು. ನಿವೃತ್ತಿಯ ನಂತರವೂ ಅವರು ಕ್ರಿಯಾಶೀಲ ಜೀವನವನ್ನು ಮುಂದುವರಿಸಿದ್ದಾರೆ. ವೇದಗಳ ಅಧ್ಯಯನದಲ್ಲಿ ಆಸಕ್ತಿ ಹೊಂದಿರುವ ಅವರು, ಸ್ನೇಹಿತರು ಮತ್ತು ಕುಟುಂಬದವರ ಸಭೆಗಳಲ್ಲಿ ವೇದ ಪ್ರವಚನಗಳನ್ನು ನೀಡುತ್ತಾರೆ. ಭಜನೆ ಮತ್ತು ಕೀರ್ತನೆಗಳ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಈ ಚಟುವಟಿಕೆಗಳು ತಮ್ಮನ್ನು ಮಾನಸಿಕವಾಗಿ ಉತ್ಸಾಹಭರಿತವಾಗಿರಿಸಿವೆ ಎಂದು ಅವರು ಹೇಳುತ್ತಾರೆ. ಅವರ ಹಿರಿಯ ಆಚಾರ್ಯರು ಅವರನ್ನು ಪ್ರೀತಿಯಿಂದ ಕ್ರಿಕೆಟ್ ನರಸಿಂಹನ್ ಎಂದು ಕರೆಯುತ್ತಾರೆ.

ಬಹುಮುಖ ಸಾಧನೆಯ ಅಪರೂಪದ ವ್ಯಕ್ತಿತ್ವ

ಒಬ್ಬ ವ್ಯಕ್ತಿ ಒಂದೇ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಒಂದು ರೀತಿಯ ಯಶಸ್ಸಾದರೆ, ಸಂಪೂರ್ಣ ವಿಭಿನ್ನವಾದ ಹಲವು ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವುದು ನಿಜಕ್ಕೂ ವಿಶೇಷ ಸಾಧನೆ. ಎ.ಎಲ್. ನರಸಿಂಹನ್ ಅವರ ಜೀವನ ಅದಕ್ಕೆ ಉತ್ತಮ ಉದಾಹರಣೆ.

ಒಂದೆಡೆ ದೇಶದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯಾದ IIScಯಲ್ಲಿ 36 ವರ್ಷಗಳ ಕಾಲ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿಭಾಯಿಸಿದವರು. ಮತ್ತೊಂದೆಡೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿ, ಕಪಿಲ್ ದೇವ್ ಅವರ ವಿಶ್ವದಾಖಲೆಯ ಕ್ಷಣಕ್ಕೆ ಸಾಕ್ಷಿಯಾದವರು. ಜೊತೆಗೆ ಬೋಧನೆ, ಕ್ರಿಕೆಟ್ ಸಂಘಟನೆ, ಮ್ಯಾಚ್ ರೆಫರಿ, ಅಂಪೈರ್ ತರಬೇತಿ, ನಿರೂಪಣೆ ಮತ್ತು ವೇದಾಧ್ಯಯನದಲ್ಲಿಯೂ ತೊಡಗಿಸಿಕೊಂಡವರು.

ಕ್ರಿಕೆಟ್ ಆಟಗಾರನಾಗುವ ಕನಸು ನನಸಾಗದಿದ್ದರೂ, ಕ್ರಿಕೆಟ್‌ನಿಂದ ದೂರವಾಗದೆ ಅಂಪೈರ್ ಆಗಿ ತಮ್ಮದೇ ಆದ ಸ್ಥಾನವನ್ನು ಗಳಿಸಿದರು. ಜೀವನದಲ್ಲಿ ಒಂದು ಅವಕಾಶ ಕೈತಪ್ಪಿದರೆ ಪಯಣವೇ ಮುಗಿಯಿತು ಎಂದು ಭಾವಿಸದೆ, ಮತ್ತೊಂದು ದಾರಿಯನ್ನು ಕಂಡುಕೊಂಡು ಸಾಧನೆಯ ಶಿಖರ ಏರಬಹುದು ಎಂಬುದಕ್ಕೆ ಅವರ ಬದುಕೇ ಸಾಕ್ಷಿ.

ಕ್ರಿಕೆಟ್ ಅಂಗಳದಲ್ಲಿ ನ್ಯಾಯದ ತೀರ್ಪು ನೀಡಿದ ಅಂಪೈರ್, ವಿಜ್ಞಾನ ಸಂಸ್ಥೆಯಲ್ಲಿ ಆಡಳಿತದ ಜವಾಬ್ದಾರಿ ನಿಭಾಯಿಸಿದ ಅಧಿಕಾರಿ, ವಿದ್ಯಾರ್ಥಿಗಳಿಗೆ ಪಾಠ ಹೇಳಿದ ಶಿಕ್ಷಕ ಮತ್ತು ನಿವೃತ್ತಿಯ ನಂತರ ವೇದಗಳ ಬೆಳಕನ್ನು ಹಂಚುತ್ತಿರುವ ವಿದ್ವಾಂಸ , ಎ.ಎಲ್. ನರಸಿಂಹನ್ ಅವರ ವ್ಯಕ್ತಿತ್ವ ನಿಜಕ್ಕೂ ಅನನ್ಯ. ಹಾಗಾಗಿಯೇ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಎಂದರೂ ತಪ್ಪಾಗದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ