ಸಾಮಾನ್ಯವಾಗಿ ಯಾವುದೇ ಹಂತದಲ್ಲಿ ಕ್ರಿಕೆಟ್ ಆಟಗಾರರಾಗಿದ್ದು, ತಮ್ಮ ಯೌವನ ಮುಗಿದ ನಂತರವೂ ಕ್ರಿಕೆಟ್ ಅಟದ ಮೇಲಿನ ಮಮತೆ ಮತ್ತು ಸೆಳೆತದಿಂದಾಗಿ ಕ್ರಿಕೆಟ್ ಅಂಪೈರ್ ಅಗಿ ಮುಂದುವರೆದಿದ್ದನ್ನು ನೋಡಿದ್ದೇವೆ. ಎಲ್ಲೋ ಅಪರೂಪಕ್ಕೆ ಖ್ಯಾತ ಕ್ರಿಕೆಟರ್ ಆಗದೇ ಹೋದರೂ ಕ್ರಿಕೆಟ್ ಆಟದ ಮೇಲಿನ ಪ್ರೀತಿಯಿಂದಾಗಿ ಪ್ರತಿಷ್ಠಿತ IISCನಲ್ಲಿ ಬಹುದೊಡ್ಡ ಹುದ್ದೆಯಲ್ಲಿದ್ದರೂ ಕ್ರಿಕೆಟ್ ಅಂಪೈರ್ ಅಗಿರುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಎ.ಎಲ್. ನರಸಿಂಹನ್ ಅವರೂ ಒಬ್ಬರಾಗಿದ್ದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ
ಐಐಎಸ್ಸಿಯಲ್ಲಿ 36 ವರ್ಷಗಳ ಆಡಳಿತಾತ್ಮಕ ಸೇವೆ, ಎರಡು ದಶಕಗಳಿಗೂ ಅಧಿಕ ಕಾಲ ಕ್ರಿಕೆಟ್ ಅಂಪೈರಿಂಗ್, ವಿಶ್ವಕಪ್ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ, ವೇದಾಧ್ಯಯನ ಮತ್ತು ಪ್ರವಚನಗಳು… ಒಂದೇ ವ್ಯಕ್ತಿಯ ಬದುಕಿನಲ್ಲಿ ಇಷ್ಟೆಲ್ಲಾ ವೈವಿಧ್ಯಮಯ ಸಾಧನೆಗಳು ಸಾಧ್ಯವೇ ಎಂದು ಅಚ್ಚರಿಪಡುವಂತೆ ಮಾಡುವ ವ್ಯಕ್ತಿ ಎ.ಎಲ್. ನರಸಿಂಹನ್.
ಕ್ರಿಕೆಟ್ ಅಂಗಳದಲ್ಲಿ ಅಂಪೈರ್ ಆಗಿ ನಿಂತಾಗ ಕ್ಷಣಾರ್ಧದಲ್ಲಿ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ, ಭಾರತೀಯ ವಿಜ್ಞಾನ ಸಂಸ್ಥೆ (IISc)ಯಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದಾಗ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ನಿರ್ವಹಿಸುವ ಹೊಣೆಗಾರಿಕೆ, ಮತ್ತೊಂದೆಡೆ ವೇದಗಳ ಅಧ್ಯಯನ ಮತ್ತು ಆಧ್ಯಾತ್ಮಿಕ ಪ್ರವಚನಗಳಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ. ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಎ.ಎಲ್. ನರಸಿಂಹನ್ ಅವರ ಜೀವನ ನಿಜಕ್ಕೂ ಅಪರೂಪದ ಸಾಧನೆಯ ಪಯಣ.
1994ರಲ್ಲಿ ಅಹಮದಾಬಾದ್ನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಕಪಿಲ್ ದೇವ್ ತಮ್ಮ 432ನೇ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ವಿಶ್ವದಾಖಲೆ ನಿರ್ಮಿಸಿದ್ದರು. ಆ ಐತಿಹಾಸಿಕ ಕ್ಷಣದಲ್ಲಿ ಬ್ಯಾಟ್ಸ್ಮನ್ ಹರ್ಷನ್ ತಿಲಕರತ್ನೆ ಔಟಾದಾಗ ‘ಔಟ್!’ ಎಂದು ತೀರ್ಪು ನೀಡಿದ ಅಂಪೈರ್ ಎ.ಎಲ್. ನರಸಿಂಹನ್ ಅವರೇ ಎಂಬುದು ವಿಶೇಷ. ಕ್ರಿಕೆಟ್ ಇತಿಹಾಸದ ಮಹತ್ವದ ಕ್ಷಣವೊಂದಕ್ಕೆ ಸಾಕ್ಷಿಯಾಗಿರುವ ಈ ಕನ್ನಡಿಗನ ಸಾಧನೆಗಳು ಕೇವಲ ಅಂಪೈರಿಂಗ್ಗೆ ಸೀಮಿತವಾಗಿಲ್ಲ.
ಮೈಸೂರಿನ ಸಾಂಪ್ರದಾಯಿಕ ಕುಟುಂಬದಲ್ಲಿ ಜನನ

ಎ.ಎಲ್. ನರಸಿಂಹನ್ ಅವರು 1940ರ ಏಪ್ರಿಲ್ 27ರಂದು ಮೈಸೂರಿನ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದಲೇ ಶಿಸ್ತು, ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳ ವಾತಾವರಣದಲ್ಲಿ ಜೀವನ ನಡೆಸಿದರು. ಅವರ ಪೂರ್ವಜರು ಪುರೋಹಿತರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಾಗಿದ್ದರು.
ಕುಟುಂಬದ ಸಂಪ್ರದಾಯಗಳು ಸಾಕಷ್ಟು ಕಟ್ಟುನಿಟ್ಟಾಗಿದ್ದವು. ಇಪ್ಪತ್ತು ವರ್ಷ ವಯಸ್ಸಾಗುವವರೆಗೂ ಚಹಾ ಅಥವಾ ಕಾಫಿ ಕುಡಿಯುವಂತಿರಲಿಲ್ಲ. ದೇವಸ್ಥಾನಕ್ಕೆ ತೆರಳುವಾಗ ಚಪ್ಪಲಿ ಧರಿಸುವುದಕ್ಕೂ ಅವಕಾಶವಿರಲಿಲ್ಲ. ಬರಿಗಾಲಿನಲ್ಲಿ ನಡೆದುಕೊಂಡೇ ಹೋಗಬೇಕಾಗಿತ್ತು. ಅಷ್ಟೇ ಅಲ್ಲ, ಅವರು ಎಂ.ಎಸ್ಸಿ. ಪದವಿಗೆ ಸೇರುವವರೆಗೂ ಧೋತಿಯನ್ನೇ ಧರಿಸುತ್ತಿದ್ದರು. ಮೊದಲ ಬಾರಿಗೆ ಪ್ಯಾಂಟ್ ಹೊಲಿಸಿಕೊಂಡದ್ದು ಸ್ನಾತಕೋತ್ತರ ಪದವಿ ವ್ಯಾಸಂಗದ ಸಮಯದಲ್ಲಿ. ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಹಾಜರಾಗಲು ಮೊದಲ ಜೋಡಿ ಶೂಗಳನ್ನು ಖರೀದಿಸಿದ್ದರು. ಇಂತಹ ಸಾಂಪ್ರದಾಯಿಕ ವಾತಾವರಣದಲ್ಲಿ ಬೆಳೆದಿದ್ದರೂ ನರಸಿಂಹನ್ ಅವರಿಗೆ ಆಧುನಿಕ ಶಿಕ್ಷಣ, ಆಡಳಿತ ಮತ್ತು ಕ್ರೀಡಾ ಕ್ಷೇತ್ರಗಳ ಬಗ್ಗೆ ಅಪಾರ ಆಸಕ್ತಿಯಿತ್ತು. ಸಂಖ್ಯಾಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿ ಪಡೆದ ಅವರು, ತಮ್ಮ ವೃತ್ತಿಜೀವನವನ್ನು ಕರ್ನಾಟಕ ಸರ್ಕಾರದ ಅಂಕಿಅಂಶ ಇಲಾಖೆಯಲ್ಲಿ ಆರಂಭಿಸಿದರು.





