ಐದಲ್ಲ.. ಹತ್ತಲ್ಲ.. ಐವತ್ತಲ್ಲ.. ನೂರೂ ಅಲ್ಲ ಬಿಡಿ.. ಬರೋಬ್ಬರಿ 208 ಕೋಟಿ. ಹೌದು.. 208 ಕೋಟಿ ಮೌಲ್ಯದ ಬರೋಬ್ಬರಿ 121 ಕೆಜಿ ಚಿನ್ನಾಭರಣ ತಿರುಪತಿಯ ತಿಮ್ಮಪ್ಪನಿಗೆ ಅರ್ಪಣೆಯಾಗಿದೆ. ಚೆನ್ನೈ ಮೂಲದ ಉದ್ಯಮಿ ವರ್ಧಮಾನ್ ಜೈನ್ ಅವರು ಕೊಡುಗೆಯಾಗಿ ನೀಡಿದ್ದಾರೆ. ಕಳೆದ ವರ್ಷ ತಮ್ಮ ಕಂಪನಿಯಲ್ಲಿನ ಶೇ.60ರಷ್ಟು ಷೇರುಗಳನ್ನು ಭರ್ಜರಿ 6000 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ಆಗ ಉದ್ಯಮಿ ವರ್ಧಮಾನ್ ಜೈನ್ ಅವರು ಇದರಲ್ಲಿ ಅಲ್ಪ ಭಾಗವನ್ನ ಏಳುಬೆಟ್ಟದೊಡೆಯ ತಿರುಪತಿ ತಿಮ್ಮಪ್ಪನಿಗೆ ಕಾಣಿಕೆ ಕೊಡೋದಾಗಿ ವಾಗ್ದಾನ ಮಾಡಿದ್ದರು. ಅದರಂತೆ ವರ್ಧಮಾನ್ ಜೈನ್ ತಮ್ಮ ಕುಟುಂಬ ಸಮೇತರಾಗಿ ಗುರುವಾರ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಆಗಮಿಸಿ ಬಂಗಾರ ಮತ್ತು ವಜ್ರದ ಆಭರಣಗಳನ್ನ ನೈವೇದ್ಯವಾಗಿ ಸಮರ್ಪಿಸಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಮ್ಮುಖದಲ್ಲಿ ಪತ್ನಿ ರಾಧಿಕಾ ಜೈನ್ ಜೊತೆಗೂಡಿ ಆಡಳಿತ ಮಂಡಳಿಯಾದ ಟಿಟಿಡಿಗೆ ಎಲ್ಲಾ ಆಭರಣಗಳನ್ನ ಹಸ್ತಾಂತರಿಸಿದ್ದಾರೆ. ವಿಶೇಷ ಅಂದರೆ, ಇದುವರೆಗೆ ತಿರುಪತಿ ತಿಮ್ಮಪ್ಪನಿಗೆ ವ್ಯಕ್ತಿಯೊಬ್ಬರು ನೀಡಿದ ಅತಿ ಹೆಚ್ಚು ಮೌಲ್ಯದ ದೇಣಿಗೆ ಇದಾಗಿದೆ ಅಂತಾ ಟಿಟಿಡಿ ಹೇಳಿದೆ.
ತಿರುಮಲಗೆ ಅತಿ ಹೆಚ್ಚು ಮೌಲ್ಯದ ಚಿನ್ನ, ವಜ್ರದ ಆಭರಣ ದೇಣಿಗೆ ನಿಡಿರುವ ವರ್ಧಮಾನ್ ಜೈನ್, ಚೆನ್ನೈ ಮೂಲದ ಕೈಗಾರಿಕೋದ್ಯಮಿ. ಆಕ್ಸೆಸ್ ಹೆಲ್ತ್ ಕೇರ್ ನ ಸಹ-ಸಂಸ್ಥಾಪಕ ಮತ್ತು ಉಪಾಧ್ಯಕ್ಷರಾದ ಇವರು ಟೆಕ್ಸಾಸ್ ವಿಶ್ವವಿದ್ಯಾಲಯದ ಪದವೀಧರರೂ ಹೌದು. ಜೊತೆಗೆ ಕಂಚಿ ಕಾಮಕೋಟಿ ಮಕ್ಕಳ ಟ್ರಸ್ಟ್ ಆಸ್ಪತ್ರೆಯ ವ್ಯವಸ್ಥಾಪಕ ಟ್ರಸ್ಟಿ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮ ಕಂಪನಿಯ ಷೇರುಗಳನ್ನ ಮಾರಿದ್ದಕ್ಕೆ ಪ್ರತಿಯಾಗಿ ಬಂದ ಹೆಚ್ಚು ಲಾಭದಲ್ಲಿ ತಿಮ್ಮಪ್ಪಗೆ ಅಲ್ಪ ಭಾಗವನ್ನ ಅರ್ಪಿಸಿದ್ದಾರೆ. 121 ಕೆಜಿಯ 208 ಕೋಟಿ ಮೌಲ್ಯದ ಚಿನ್ನ, ವಜ್ರಾಭರಣಗಳಲ್ಲಿ 46 ಆಭರಣಗಳ 9 ಸೆಟ್ ಇದ್ದು, ಇದರಲ್ಲಿ ಶ್ರೀವಾರಿ ಕಿರೀಟ, ಪದ್ಮ ಪಾದಗಳು, 238.2 ಕ್ಯಾರಟ್ ವಜ್ರಗಳು, ಚಿನ್ನದ ಹುಲಿ ಉಂಗುರ, ನಾನಾ ಬಗೆಯ ಸರ, ಕಿರೀಟ, ರತ್ನಗಳು ಸೇರಿದಂತೆ ತಿಮ್ಮಪ್ಪನಿಗೆ 106 ಕೆಜಿ, ಶ್ರೀ ಪದ್ಮಾವತಿ ಅಮ್ಮನವರಿಗೆ 15 ಕೆಜಿ ತೂಕದ ಚಿನ್ನಾಭರಣವನ್ನ ಉದ್ಯಮಿ ವರ್ಧಮಾನ್ ಜೈನ್ ಅವರು ಕಾಣಿಕೆ ನೀಡಿದ್ದಾರೆ.





