– ರಾಘವೇಂದ್ರ ಅಡಿಗ ಎಚ್ಚೆನ್.
ದೊಡ್ಡ ಬಜೆಟ್ ಇಲ್ಲ, ದೊಡ್ಡ ತಾರಾಬಳಗವೂ ಇಲ್ಲ. ಕೇವಲ 20 ನಿಮಿಷಗಳ ಕನ್ನಡ ಸಾಕ್ಷ್ಯಚಿತ್ರವೊಂದು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಗೋವಾದಲ್ಲಿ ನಡೆಯುತ್ತಿರುವ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯನ್ ಪನೋರಮಾ ವಿಭಾಗದಲ್ಲಿ ‘ದಿ ಹಗ್ ಆಫ್ ಎಂಪ್ಟಿನೆಸ್’ ಪ್ರದರ್ಶನಗೊಂಡಿದೆ.
ಪ್ರದೀಪ್ ಕುಮಾರ್ ಶೆಟ್ಟಿ, ಅಂದರೆ ಡಾ. ಪ್ರದೀಪ್ ಕೆಂಚನೂರು ನಿರ್ದೇಶನದ ಈ ಸಾಕ್ಷ್ಯಚಿತ್ರ 2025ರಲ್ಲಿ ನಿರ್ಮಾಣವಾಗಿದೆ. ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡು ದಟ್ಟ ಕಾಡಿನಲ್ಲಿ ಏಕಾಂಗಿಯಾಗಿ ಜೀವನ ಸಾಗಿಸುತ್ತಿರುವ ಚಂದ್ರಶೇಖರ್ ಎಂಬ ವ್ಯಕ್ತಿಯ ಕಥೆಯನ್ನು ಇದು ತೆರೆದಿಡುತ್ತದೆ.
ಸುಳ್ಯ ಸಹಕಾರಿ ಬ್ಯಾಂಕ್ನಿಂದ ಪಡೆದ ಸಾಲವನ್ನು ಮರುಪಾವತಿಸಲಾಗದೆ, ಅಡಮಾನವಿಟ್ಟಿದ್ದ ಆಸ್ತಿಯನ್ನು ಚಂದ್ರಶೇಖರ್ 2003ರಲ್ಲಿ ಕಳೆದುಕೊಂಡಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಅವರು ಆರಂಭಿಸಿದ ಕಾನೂನು ಹೋರಾಟ ಇಂದಿಗೂ ಮುಂದುವರಿದಿದೆ. ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಕಳೆದರೂ ಅವರ ಹೋರಾಟಕ್ಕೆ ಅಂತ್ಯ ಸಿಕ್ಕಿಲ್ಲ.
ಆದರೆ ಈ ನಡುವೆ ಚಂದ್ರಶೇಖರ್ ಕಾಡಿನ ನಿರ್ಜನ ಪ್ರದೇಶವನ್ನೇ ತಮ್ಮ ಮನೆಯನ್ನಾಗಿಸಿಕೊಂಡಿದ್ದಾರೆ. ಕಾಡಿನಲ್ಲಿ ಸಿಗುವ ಬಳ್ಳಿಗಳಿಂದ ಬುಟ್ಟಿ ಹೆಣೆದು ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ವಿದ್ಯುತ್, ರಸ್ತೆ ಸೇರಿದಂತೆ ಮೂಲಸೌಕರ್ಯಗಳಿಲ್ಲದ ಪರಿಸರದಲ್ಲೂ ಬದುಕಿನ ಸಂತೋಷವನ್ನು ಕಂಡುಕೊಂಡಿದ್ದಾರೆ.
ಈ ಸಾಕ್ಷ್ಯಚಿತ್ರ ಕೇವಲ ಕಾನೂನು ಹೋರಾಟದ ಕಥೆಯಲ್ಲ. ಕಷ್ಟಗಳ ನಡುವೆಯೂ ಮನುಷ್ಯ ಹೇಗೆ ತನ್ನ ಬದುಕಿಗೆ ಅರ್ಥ ಕಂಡುಕೊಳ್ಳಬಹುದು ಎಂಬುದನ್ನು ತೋರಿಸುತ್ತದೆ ಎಂದು ನಿರ್ದೇಶಕ ಪ್ರದೀಪ್ ಕೆಂಚನೂರು ಹೇಳಿದ್ದಾರೆ.
ಇನ್ನು ಈ ಚಿತ್ರದ ಸಾಧನೆ ಇಲ್ಲಿಗೇ ನಿಂತಿಲ್ಲ. ಈ ವರ್ಷದ ಆರಂಭದಲ್ಲಿ ನಡೆದ 19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಫಿಪ್ರೆಸ್ಕಿ ಅಂತಾರಾಷ್ಟ್ರೀಯ ವಿಮರ್ಶಕರ ಪ್ರಶಸ್ತಿಯನ್ನೂ ಗೆದ್ದಿದೆ.
ವೃತ್ತಿಯಿಂದ ಶಿಕ್ಷಕರಾಗಿರುವ ಪ್ರದೀಪ್ ಕೆಂಚನೂರು ಕೇವಲ ನಾಲ್ಕು ಲಕ್ಷ ರೂಪಾಯಿ ಬಜೆಟ್ನಲ್ಲಿ ಈ ಚಿತ್ರ ನಿರ್ಮಿಸಿದ್ದಾರೆ. ಆಪ್ತ ಸ್ನೇಹಿತರೊಬ್ಬರು ನೀಡಿದ ಆರ್ಥಿಕ ನೆರವು ಈ ಪ್ರಯತ್ನಕ್ಕೆ ಬೆಂಬಲವಾಗಿದೆ. ಸಣ್ಣ ಬಜೆಟ್ನಲ್ಲೂ ದೊಡ್ಡ ಕಥೆ ಹೇಳಬಹುದು ಎಂಬುದಕ್ಕೆ ಈ ಕನ್ನಡ ಸಾಕ್ಷ್ಯಚಿತ್ರ ಮತ್ತೊಂದು ಉದಾಹರಣೆಯಾಗಿದೆ.





