ಪಟಾಕಿಗಿಂತ ದೀಪ ಬೆಳಗಿಸುವುದೇ ಇಷ್ಟ
ಸಿಂಪಲ್ ತಾರೆ ಶ್ವೇತಾ ಶ್ರೀವಾತ್ಸವ್ ಅಭಿನಯದ ಸೂಕ್ಷ್ಮತೆ ಜೊತೆಗೆ ನಮ್ಮ ನೆಲದ ಸಂಸ್ಕೃತಿ, ಸಂಪ್ರದಾಯ ಹಾಗೂ ಆಚರಣೆಗಳನ್ನು ಮೈಗೂಡಿಸಿಕೊಂಡಿರುವ ನಟಿ. ಬೆಳಕಿನ ಹಬ್ಬದ ಸಂಭ್ರಮಕ್ಕೆ ಪಟಾಕಿಗಳಿಗಿಂತಲೂ ಮನೆ ತುಂಬ ದೀಪ ಬೆಳಗಿಸುವುದೇ ಇಷ್ಟ ಎನ್ನುತ್ತಾರೆ. ಮಕ್ಕಳು ಮನೆಯಲ್ಲಿದ್ದರೆ ಅದೇ ದೊಡ್ಡ ರಿಲೀಫ್. ಮಗಳ ಮುದ್ದುತನ, ತುಂಟಾಟ ಹಬ್ಬದ ಸಡಗರವನ್ನು ಹೆಚ್ಚಿಸಿದೆ. ಮಗಳಿಗೆ ಹೊಸ ಬಟ್ಟೆ ತೊಡಿಸುವುದು, ಆಕೆಯ ಚಿಣ್ಣಾಟಗಳನ್ನು ವಿಡಿಯೋಗಳಲ್ಲಿ ಸೆರೆಹಿಡಿಯುವುದು, ಫೋಟೋ ಶೂಟ್ ಮಾಡಿಸುವುದು ಹೀಗೆ…. ಅನೇಕ ಚಟುವಟಿಕೆಗಳು ಹಬ್ಬದ ಖುಷಿ ಹೆಚ್ಚಿಸುತ್ತದೆ ಎನ್ನುತ್ತಾರೆ ಶ್ವೇತಾ. ದೀಪಾವಳಿ ಸಂದರ್ಭದಲ್ಲಿ ಕುಟುಂಬದ ಸದಸ್ಯರೆಲ್ಲರೂ ಒಂದುಗೂಡುತ್ತೇವೆ. ಹಬ್ಬದ ಸಂದರ್ಭದಲ್ಲಿ ಅಮ್ಮ ಮಾಡುವ ಸಿಹಿತಿನಿಸುಗಳನ್ನು ಸವಿಯುವುದೇ ಆನಂದದಾಯಕ. ಅಮ್ಮನ ಕೈರುಚಿಯಂತೂ ಅದ್ಭುತ ಎನ್ನುತ್ತಾರೆ.
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಕನ್ನಡದ ಕಿರಿಕ್ ಪಾರ್ಟಿ ಮೂಲಕ ನಟನೆಗೆ ಎಂಟ್ರಿ ಕೊಟ್ಟು, ನ್ಯಾಶನಲ್ ಕ್ರಶ್ ಎಂಬ ಖ್ಯಾತಿ ಪಡೆದರು. ವಿಜಯ್ ದೇವರಕೊಂಡ ತೆಲುಗು ಚಿತ್ರರಂಗದ ಉದಯೋನ್ಮುಖ ನಟ. 2011ರಲ್ಲಿ ತೆರೆಕಂಡ `ನುವ್ವಿಲಾ’ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಇವರಿಗೆ ಖ್ಯಾತಿ ತಂದುಕೊಟ್ಟಿದ್ದು ನಾನಿ ನಾಯಕನಾಗಿ ನಟಿಸಿದ `ವಿಡೇ ಸುಬ್ರಹ್ಮಣ್ಯ’ ಚಿತ್ರದ ಮೂಲಕ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ 2026ರ ಫೆಬ್ರವರಿಯಲ್ಲಿ ವಿವಾಹವಾದರು. ಅದಕ್ಕೂ ಮುನ್ನ ಅವರು ಎಂಟು ವರ್ಷ ಪರಸ್ಪರ ಪರಿಚಯವಿದ್ದರು. ಈ ಜೋಡಿಯ ಮದುವೆ ಸಾಕಷ್ಟು ಸುದ್ದಿಯಾಗಿತ್ತು. ವಿವಾಹವಾದ ಸ್ಥಳ, ಅವರ ಶೈಲಿ ಹಾಗೂ ಸಮಾರಂಭದ ಆಪ್ತ ಕ್ಷಣಗಳವರೆಗೆ ಹೀಗೆ ಪ್ರತಿಯೊಂದನ್ನೂ ಕಂಡು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಹಬ್ಬ ಹರಿದಿನಗಳನ್ನು ಒಟ್ಟಾಗಿ ಸಂಭ್ರಮಿಸುವ ಈ ಜೋಡಿ, ದೀಪಾವಳಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ `ರಣಬಾಲಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 16 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿರುವ ಮದುವೆಯ ಬಳಿಕ ಈ ಜೋಡಿ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದೆ.
ಸಂಜನಾ ಗ್ರಾನಿ ಮನೆಯಲ್ಲಿ ಹಬ್ಬ ಬಲು ಜೋರು

ಕನ್ನಡ, ತೆಲುಗು, ತಮಿಳು, ಮಲೆಯಾಳಂ ಚಿತ್ರರಂಗದ ಖ್ಯಾತ ನಟಿ ಸಂಜನಾ ಗ್ರಾನಿ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಅಜೀಜ್ಪಾಷಾರನ್ನು ಸಂಜನಾ ಗ್ರಾನಿ ಮದುವೆಯಾಗಿದ್ದಾರೆ. ಪತಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಸಂಜನಾ ಗ್ರಾನಿ ಎರಡೂ ಧರ್ಮದ ಹಬ್ಬಗಳನ್ನು ಅದ್ಧೂರಿಯಾಗಿಯೇ ಆಚರಿಸುತ್ತಾರೆ. ಸಂಜನಾ ಪರಿಸರ ಕಾಳಜಿಗೆ ಹೆಚ್ಚು ಒತ್ತು ನೀಡುತ್ತಾರೆ. ತಮ್ಮ ಕುಟುಂಬದೊಂದಿಗೆ ಯಾವುದೇ ಪಟಾಕಿ ಸಿಡಿಸದೆ ಕೇವಲ ಮಣ್ಣಿನ ದೀಪಗಳನ್ನು ಹಚ್ಚುವ ಮೂಲಕ ಪರಿಸರಸ್ನೇಹಿ ಹಾಗೂ ಶಾಂತಿಯುತ ದೀಪಾವಳಿ ಆಚರಿಸಲು ಇಷ್ಟಪಡುತ್ತಾರೆ. ಸಂಜನಾರ ಮನೆಯಲ್ಲಿ ದೀಪಾವಳಿ, ಹೋಳಿ ಮಾತ್ರವಲ್ಲದೆ, ರಂಜಾನ್ ಹಬ್ಬವನ್ನು ಕೂಡ ಕುಟುಂಬದವರೆಲ್ಲರೂ ಒಟ್ಟಾಗಿ ಅತ್ಯಂತ ಅದ್ಧೂರಿಯಾಗಿ ಆಚರಿಸುತ್ತಾರೆ. `ಖುಷಿಗೆ ಯಾವುದೇ ಧರ್ಮವಿಲ್ಲ, ಕೇವಲ ಹೃದಯಗಳ ಒಕ್ಕೂಟವಷ್ಟೇ’ ಎಂದು ಅವರು ತಮ್ಮ ಹಬ್ಬದ ಸಂದೇಶಗಳಲ್ಲಿ ಹೇಳುತ್ತಾರೆ.
ಹಬ್ಬಗಳನ್ನು ವಿಶಿಷ್ಟವಾಗಿ ಆಚರಿಸುವ ರಾಧಾ ಮಿಸ್
ಆರ್.ಜೆ. ಪ್ರದೀಪ್ ಮತ್ತು ಶ್ವೇತಾ ಆರ್. ಪ್ರಸಾದ್ ಕನ್ನಡ ಮನರಂಜನಾ ಲೋಕದ ಜನಪ್ರಿಯ ಹಾಗೂ ಪ್ರಭಾವಿ ದಂಪತಿ. ಖ್ಯಾತ ರೇಡಿಯೋ ಜಾಕಿ, ನಿರೂಪಕ, ನಟ ಆಗಿರುವ ಆರ್.ಜೆ. ಪ್ರದೀಪ್ ಝಿ 5 ಕನ್ನಡದ ಕಂಟೆಂಟ್ ಹೆಡ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ಕಿರುತೆರೆ ಮತ್ತು ಸಿನಿಮಾರಂಗದ ಪ್ರತಿಭಾವಂತ ನಟಿ ಶ್ವೇತಾ ಆರ್. ಪ್ರಸಾದ್. `ರಾಧಾ ರಮಣ, ಶ್ರೀರಸ್ತು ಶುಭಮಸ್ತು’ ಧಾರಾವಾಹಿಗಳ ಮೂಲಕ ಮನೆಮಾತಾದರು. `ಕಳ್ಬೆಟ್ಟದ ದರೋಡೆಕೋರರು, ಪದವಿಪೂರ್ವ, ಕಾಟೇರ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ ಉದ್ಯಮಿ ಹಾಗೂ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕಾಲೇಜಿನ ದಿನಗಳಿಂದ ಪರಸ್ಪರ ಪ್ರೀತಿಸಿ ಮದುವೆಯಾದ ಈ ಜೋಡಿ, ಹಬ್ಬಗಳನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ ಅನಾಥಾಶ್ರಮದ ಮಕ್ಕಳಿಗೆ ಹೊಸ ಬಟ್ಟೆಗಳನ್ನು ಕೊಡಿಸಿ, ಅವರೊಂದಿಗೆ ಹಬ್ಬದ ಖುಷಿಯನ್ನು ಹಂಚಿಕೊಳ್ಳುವುದೇ ಇವರಿಗೆ ಖುಷಿ. ಶ್ವೇತಾ ಪ್ರಸಾದ್ ನಿರ್ಮಾಪಕಿಯಾಗಿ ಹಾಗೂ ಪ್ರದೀಪ್ ಜೊತೆಗೆ ವಿವಿಧ ಕಲಾತ್ಮಕ ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ಇವರು ಒಟ್ಟಾಗಿ ಸಂದರ್ಶನಗಳು ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.
ತಾಂತ್ರಿಕತೆಯ ಮಾಂತ್ರಿಕ ಕನ್ನಡದ ಕನಸುಗಾರ

ಸ್ಯಾಂಡಲ್ ವುಡ್ ಕ್ರೇಜಿ ಸ್ಟಾರ್ ರವಿಚಂದ್ರನ್ ಕನಸಿಗೂ ನಿಲುಕದ, ಸಿಲುಕದ, ಅಗಾಧ ಕಲ್ಪನೆಗಳ ಮಹಾನ್ ಮಾಂತ್ರಿಕ. ಸಿನಿಮಾಗಳ ತಯಾರಿಯಲ್ಲಿರೋ ಆ ತಾಂತ್ರಿಕತೆಗೆ ಇವರಿಗೆ ಇವರೇ ಸಾಟಿ. ತಾಂತ್ರಿಕತೆಯ ಮಾಂತ್ರಿಕ ಅಂತಲೂ ಅವರನ್ನು ಕರೆಯುವುದುಂಟು. ಈ ಮಾತನ್ನು ಅವರು ಒಪ್ಪೋದು ಇದೆ. ತಾಂತ್ರಿಕತೆಯ ಮಾಂತ್ರಿಕ ನಾನಾದ್ರೆ, ನಾನೊಬ್ಬ ಆರ್ಟಿಸ್ಟ್ ಅಲ್ವೇ? ಅಂತಲೂ ರವಿಚಂದ್ರನ್ ಕೇಳಿದ್ದು ಇದೆ. ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ಹಾಗೂ ಬೆಳ್ಳಿಪರದೆಗೆ ಹೊಸರಂಗು ತಂದುಕೊಟ್ಟ ಹೆಗ್ಗಳಿಕೆ ವಿ. ರವಿಚಂದ್ರನ್ ಅವರದು. ಅನೇಕ ರೀಮೇಕ್ ಸಿನಿಮಾಗಳನ್ನು ಕನ್ನಡಕ್ಕೆ ತಂದರೂ ಮೂಲಸಿನಿಮಾದ ಛಾಯೆ ಇರದ ತಮ್ಮದೇ ಆದ ಶೈಲಿಯಲ್ಲಿ ಕನ್ನಡ ಸೊಗಡಿನ ಸೂಪರ್ ಹಿಟ್ ಗಳನ್ನು ನೀಡಿದ್ದಾರೆ. ಬಹುಮುಖ ಪ್ರತಿಭೆಯ ಈ ನಟ, ಚಿತ್ರ ನಿರ್ಮಾಣ, ನಿರ್ದೇಶನ, ಸಾಹಿತ್ಯ, ಸಂಗೀತ, ಸಂಕಲನ, ಸಂಭಾಷಣೆ ಮುಂತಾದ ಚಿತ್ರರಂಗದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. `ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ, ಯುಗಪುರುಷ, ಯುದ್ಧಕಾಂಡ, ರಾಮಾಚಾರಿ, ಅಂಜದ ಗಂಡು, ಸ್ವಾಭಿಮಾನ, ನಾನು ನನ್ನ ಹೆಂಡ್ತಿ, ಮನೆದೇವ್ರು, ಗೋಪಿಕೃಷ್ಣ, ಬಣ್ಣದಗೆಜ್ಜೆ, ಶ್ರೀರಾಮಚಂದ್ರ, ಅಣ್ಣಯ್ಯ, ಗಡಿಬಿಡಿ ಗಂಡ, ರಸಿಕ, ಕಲಾವಿದ, ಸಿಪಾಯಿ, ಪುಟ್ನಂಜ, ಕನಸುಗಾರ, ಮಾಂಗಲ್ಯಂ ತಂತುನಾನೇನ, ಪ್ರೀತ್ಸೋದ್ ತಪ್ಪಾ, ಯಾರೇ ನೀನು ಚೆಲುವೆ, ನಾನು ನನ್ನ ಹೆಂಡ್ತೀರು, ಓ ನನ್ನ ನಲ್ಲೇ, ಏಕಾಂಗಿ, ಮಲ್ಲ, ರಾಮಕೃಷ್ಣ, ಕೋದಂಡರಾಮ, ಅಹಂ ಪ್ರೇಮಾಸ್ಮಿ, ಸಾಹುಕಾರ, ಹಠಾಜಿ, ಹೂ, ಅಪೂರ್ವ’ ಮುಂತಾದ ಜನಪ್ರಿಯ ಚಿತ್ರಗಳನ್ನು ಚಂದನವನಕ್ಕೆ ನೀಡಿದ್ದಾರೆ. ನನ್ನೆಲ್ಲಾ ಶ್ರಮದ ಹಿಂದೆ ನನ್ನ ಪತ್ನಿ ಸುಮತಿಯ ಪಾತ್ರವೇ ಬಹಳ ಮುಖ್ಯವಾಗಿದೆ ಎಂದು ಸದಾ ಹೇಳುವ ಈ ರಾಮಚಾರಿ, ಎಲ್ಲ ಕಪಲ್ಸ್ ಗೂ ರೋಲ್ ಮಾಡೆಲ್ ಎನ್ನಬಹುದು. ಮಗ ಸೊಸೆ, ಕುಟುಂಬದ ಎಲ್ಲರೊಡನೆ ಅದ್ಧೂರಿಯಾಗಿ ದೀಪಾವಳಿ ಆಚರಿಸುವುದೇ ಇವರ ವೈಶಿಷ್ಟ್ಯ.
ಚಟಪಟ ಪಟಾಕಿ ಸಿಡಿಸುವ ಅನುಶ್ರೀ

ಪಟಪಟ ಎಂದು ಮಾತನಾಡುತ್ತಾ, ವೇದಿಕೆಯ ಮೇಲೆ ಆ ಸನ್ನಿವೇಶಕ್ಕೆ ತಕ್ಕಂತೆ ಆ ವಿಷಯವನ್ನು ಹೇಳುತ್ತಾ, ಸದಾ ಎಲ್ಲರನ್ನೂ ನಕ್ಕು ನಗಿಸೋರು ಆ್ಯಂಕರ್ ಅನುಶ್ರೀ. ಕನ್ನಡ ಕಿರುತೆರೆಯ ಜನಪ್ರಿಯ ಆ್ಯಂಕರ್ ಅನುಶ್ರೀ ಪ್ರತಿವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಶೇಷ ಫೋಟೋಶೂಟ್, ವಿಡಿಯೋಗಳು ಅಥವಾ ಝೀ ಕನ್ನಡ ವಾಹಿನಿಯ ದೀಪಾವಳಿಯ ವಿಶೇಷ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರಿಗೆ ಹಬ್ಬದ ಶುಭಾಶಯ ಕೋರುತ್ತಾರೆ. ಅನುಶ್ರೀ ಸೋಶಿಯಲ್ ಮೀಡಿಯಾ ಮತ್ತು ಯೂಟ್ಯೂಬ್ ಚಾನೆಲ್ ಗಳಲ್ಲಿ ಅಭಿಮಾನಿಗಳಿಗೆ ಪ್ರತಿವರ್ಷ ದೀಪಾವಳಿ ಹಬ್ಬದ ಶುಭಾಶಯ ಹಂಚಿಕೊಳ್ಳುತ್ತಾರೆ. ಹಬ್ಬದ ದಿನಗಳಲ್ಲಿ ಸಾಂಪ್ರದಾಯಿಕ ರೇಷ್ಮೆ ಸೀರೆಗಳು, ಲಂಗಾದಾವಣಿ ಉಡುಪುಗಳು ಮತ್ತು ಅವರ ವಿಶೇಷ ಅಲಂಕಾರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ವೈರಲ್ ಆಗುತ್ತವೆ. ಆ್ಯಂಕರ್ ಅನುಶ್ರೀ ಸದ್ಯ ತಾವು ಮನಮೆಚ್ಚಿದ ಹುಡುಗ ರೋಷನ್ ಅವರನ್ನು ಮದುವೆಯಾಗಿ ಸುಖಮಯ ದಾಂಪತ್ಯ ನಡೆಸುತ್ತಿದ್ದು, ದೀಪಾವಳಿಯನ್ನು ಸಂಭ್ರಮಿಸುತ್ತಿದ್ದಾರೆ.
ಕ್ಯೂಟ್ ಕಪಲ್ ಡಾಲಿ ಧನಂಜಯ್ ಧನ್ಯಾ

ತಾಡಾಲಿ ಧನಂಜಯ್ ಕನ್ನಡ ಚಿತ್ರರಂಗದ ಬಹುಮುಖ ಮತ್ತು ಬಹುಮೂಲ್ಯ ಕಲಾಪ್ರತಿಭೆ. ಐತಿಹಾಸಿಕದಿಂದ ಆಧುನಿಕದವರೆಗೂ ವಿಭಿನ್ನ ಮತ್ತು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿರುವ ಧನಂಜಯ ರಂಗಭೂಮಿಯ ಹಿನ್ನೆಲೆಯಿಂದ ಚಿತ್ರರಂಗಕ್ಕೆ ಬಂದರು. ಇನ್ಛೋಸಿಸ್ ನಲ್ಲಿ ದೊರೆತ ಉದ್ಯೋಗ ನಿರಾಕರಿಸಿ ಮೈಸೂರಿನ ರಂಗಾಯಣ ಸೇರಿದರು. `ಡೈರೆಕ್ಟರ್ ಸ್ಪೆಷಲ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅವರು ನಟಿಸಿದ ಕಿರುಚಿತ್ರ `ಜಯನಗರ 4th ಬ್ಲಾಕ್’ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಮುಂದೆ `ರಾಟೆ, ಬಾಕ್ಸರ್, ಜೆಸ್ಸಿ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದರು. ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ `ಟಗರು’ ಚಿತ್ರದಲ್ಲಿ ಡಾಲಿ ಖಳನಟನ ಪಾತ್ರದಲ್ಲಿ ಮಿಂಚಿದರು. ಇತ್ತೀಚೆಗಷ್ಟೇ ಡಾ. ಧನ್ಯತಾರನ್ನು ಮದುವೆಯಾಗಿರುವ ಧನಂಜಯ್ ರಿಗೆ ದೀಪಾವಳಿ ಹಬ್ಬ ಅತ್ಯಂತ ವಿಶೇಷವಾಗಿರುತ್ತದೆ. ತಮ್ಮ ಹಬ್ಬದ ಸಂಭ್ರಮವನ್ನು ತಮ್ಮ ಪುತ್ರ `ಎರೆಯ’ನ ಜೊತೆಯ ಹೊಸ ಉಡುಪುಗಳನ್ನು ಧರಿಸಿ ಸಂಭ್ರಮಿಸಿದ್ದಾರೆ.
ಮಗಳೇ ಮನೆಗೆ ಬೆಳಕು ಎನ್ನುವ ಅದಿತಿ

ಅದಿತಿ ಪ್ರಭುದೇವ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. `ಗುಂಡ್ಯಾನ ಹೆಂಡತಿ’ ಎಂಬ ಕಿರುತೆರೆ ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಅದಿತಿ, ನಾಗಕನ್ನಿಕೆ ಸೀರಿಯಲ್ ನಲ್ಲಿ ಶಿವಾನಿ ಪಾತ್ರ ಮಾಡಿದ್ದರು. ನಂತರ ಅಜಯ್ ರಾವ್ ರ `ಧೈರ್ಯಂ’ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ `ಸಿಂಗ, ಬ್ರಹ್ಮಚಾರಿ, ಓಲ್ಟ್ ಮಾಂಕ್, ರಂಗನಾಯಕಿ, ಬಜಾರ್, ತೋತಾಪುರಿ, ಕುಸ್ತಿ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು. ಅದಿತಿ ಪ್ರಭುದೇವ್ ರಲ್ಲಿ ಉದ್ಯಮಿ ಯಶಸ್ ಪಟ್ಲ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಂಪತಿಗಳಿಗೆ ನೇಸರಾ ಎಂಬ ಮಗಳಿದ್ದು, ನಮ್ಮ ಪ್ರತಿ ಹಬ್ಬಕ್ಕೂ ನಮ್ಮ ಮಗಳೇ ಸ್ಛೂರ್ತಿ ಎನ್ನುತ್ತಾರೆ ಈ ದಂಪತಿ.





