ಚಿತ್ರ: ಲಕ್ಷ್ಮೀ ಪುತ್ರ
ನಿರ್ಮಾಪಕ: ಅನ್ನಪೂರ್ಣ ಎ.ಪಿ. ಅರ್ಜುನ್
ನಿರ್ದೇಶನ: ವಿಜಯ್ ಎಸ್. ಸ್ವಾಮಿ
ತಾರಾಗಣ: ಚಿಕ್ಕಣ್ಣ, ತಾರಾ ಅನುರಾಧಾ, ವಂದಿತಾ, ಕುರಿ ಪ್ರತಾಪ್, ಧರ್ಮಣ್ಣ ಕಡೂರ್, ಶಿವರಾಜ್ ಕೆ ಆರ್ ಪೇಟೆ, ಮಿತ್ರಾ ಮೊದಲಾದವರು
ರೇಟಿಂಗ್: 3/5 ***
- ರಾಘವೇಂದ್ರ ಅಡಿಗ ಎಚ್ಚೆನ್.
ಮಂಡ್ಯದ ಹುಡುಗ ಕೃಷ್ಣ (ಚಿಕ್ಕಣ್ಣ). ಹೊಟ್ಟೆಪಾಡಿಗಾಗಿ ಮೊಬೈಲ್ ಅಂಗಡಿ ಇಟ್ಟುಕೊಂಡಿರುವ ಕೃಷ್ಣನಿಗೆ ಊರವರ ಎತ್ತುಗಳನ್ನ ಕದ್ದು ಸಂಕ್ರಾಂತಿ ಹಬಕ್ಕೆ ಕಿಚ್ಚು ಹಾಯಿಸುವುದೆಂದರೆ ಅಚ್ಚುಮೆಚ್ಚು. ಕೃಷ್ಣನ ತಾಯಿ ಲಕ್ಷ್ಮಮ್ಮ (ತಾರಾ). ಪತಿ ಹಾಗೂ ಕುಟುಂಬ ಇಲ್ಲದ ಲಕ್ಷ್ಮಮ್ಮನಿಗೆ ಮಗನೆಂದರೆ ಪ್ರಾಣ. ಪದೇ ಪದೇ ಕೆಟ್ಟ ಕನಸು ಬೀಳ್ತಿರೋದ್ರಿಂದ ಒಮ್ಮೆ ಕಾಶಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬರಬೇಕು ಅನ್ನೋದು ಲಕ್ಷ್ಮಮ್ಮನ ಬಯಕೆ. ಮಗನಿಗೆ ಮದುವೆ ಮಾಡಬೇಕು ಅನ್ನೋದು ಲಕ್ಷ್ಮಮ್ಮನ ಆಸೆ. ಇವೆರಡೂ ಈಡೇರುತ್ತಾ ಎನ್ನುವುದು ತಿಳಿಯಲು ನೀವು ಈ ವಾರ (ನವೆಂಬರ್ 27) ಬಿಡುಗಡೆ ಆದ ಲಕ್ಷ್ಮೀ ಪುತ್ರ ಚಿತ್ರ ನೋಡಬೇಕು.
ಕನ್ನಡ ಚಿತ್ರರಂಗದ ಸ್ಟಾರ್ ಹಾಸ್ಯನಟ ಚಿಕ್ಕಣ್ಣ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ 'ಲಕ್ಷ್ಮೀಪುತ್ರ' ಖ್ಯಾತ ನಿರ್ದೇಶಕ ಎ.ಪಿ. ಅರ್ಜುನ್ ಅವರ ಕಥೆ, ಸಾಹಿತ್ಯ ಹಾಗೂ 'ಎ.ಪಿ. ಅರ್ಜುನ್ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ಅನ್ನಪೂರ್ಣ ಎ.ಪಿ. ಅರ್ಜುನ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ವಿಜಯ್ ಎಸ್. ಸ್ವಾಮಿ ನಿರ್ದೇಶನವಿದೆ. ಚಿತ್ರದಲ್ಲಿ ಚಿಕ್ಕಣ್ಣ ಅವರಿಗೆ ನಾಯಕಿಯಾಗಿ ವಂದಿತಾ ಗೌಡ ಅಭಿನಯಿಸಿದ್ದು, ಹಿರಿಯ ನಟಿ ತಾರಾ ಅನುರಾಧಾ ಅವರು ತಾಯಿಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಾಯಕನಾಗಿ ಚಿಕ್ಕಣ್ಣ ಅವರ ಕಾಮಿಡಿ ಟೈಮಿಂಗ್ ಮತ್ತು ಭಾವನಾತ್ಮಕ ಅಭಿನಯಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ. ಅಲ್ಲದೆ, ತಾಯಿಯ ಪಾತ್ರದಲ್ಲಿ ಹಿರಿಯ ನಟಿ ತಾರಾ ಅನುರಾಧಾ ಅವರ ಸಹಜ ನಟನೆ ಚಿತ್ರದ ಹೈಲೈಟ್ ಆಗಿದೆ.

ಹೊಸತನವಿಲ್ಲದೆ ಸಾಗುವ ಈ ಸಿನಿಮಾ ಕ್ಲೈಮ್ಯಾಕ್ಸ್ ಹಂತದಲ್ಲಿ ಹಾಡೊಂದರ ಕಾರಣ ಮನಸ್ಸಿಗೆ ಹಿತ ಆಗುತ್ತದೆ. ಹಲವೆಡೆ ಚಿತ್ರಕಥೆಗೆ ಗಟ್ಟಿತನವಿಲ್ಲ. ಊಹಿಸಬಹುದಾದ ಚಿತ್ರಕಥೆ ಸಿನಿಮಾದಲ್ಲಿದೆ.
ನಗುವಿನ ಕಚಗುಳಿ ಇಡುವ ಹಾಸ್ಯದ ಜೊತೆಗೆ ತಾಯಿ-ಮಗನ ಬಾಂಧವ್ಯದ ಭಾವನಾತ್ಮಕ ಕಥಾಹಂದರವನ್ನು ಹೊಂದಿರುವ 'ಲಕ್ಷ್ಮೀಪುತ್ರ' ಚಿತ್ರದ ‘ಇನ್ಮೇಲೆ..’ ಹಾಗೂ ‘ಎಲ್ಲ ದೇವರು ಪೂಜಿಸೊ ದೈವ ಅಮ್ಮ..’ ಹಾಡು ಇಷ್ಟ ಆಗುತ್ತೆ.
ಒಟ್ಟಿನಲ್ಲಿ ಸಿನಿಮಾ ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಎನ್ನುವುದು ಸಮಾಧಾನದ ಸಂಗತಿ.





