ಚಿತ್ರ: ಅನಂತ ಪಯಣ
ನಿರ್ದೇಶನ: ಶ್ರೀಕಾಕ
ನಿರ್ಮಾಣ: ಸಂತೋಷ್ ಅಶೋಕ್ ಹೆಗ್ಡೆ
ತಾರಾಗಣ: ಶ್ರೀಕಾಕ, ನಿವಿಷ್ಕಾ ಪಾಟೀಲ್, ಬಲರಾಜವಾಡಿ, ಲಕ್ಷ್ಮಿ ಸಿದ್ದಯ್ಯ ಹಾಗೂ ಪ್ರಶಾಂತ್ ಸಿದ್ದಿ ಮುಂತಾದವರು
ರೇಟಿಂಗ್: 3/5 ***
– ರಾಘವೇಂದ್ರ ಅಡಿಗ ಎಚ್ಚೆನ್.
ಕುರಿಗಾಹಿಗಳ ಬದುಕು, ಅವರ ನಿರಂತರ ಸಂಚಾರ, ಕುಟುಂಬದ ಜವಾಬ್ದಾರಿ ಮತ್ತು ಸಮಾಜದ ಸಂಕಷ್ಟಗಳನ್ನು ಆಧರಿಸಿರುವ ಕನ್ನಡ ಸಿನಿಮಾ ‘ಅನಂತ ಪಯಣ’ ಈ ವಾರ (ನವೆಂಬರ್ 27) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ನಿರ್ದೇಶಕ ಹಾಗೂ ನಾಯಕ ನಟ ಶ್ರೀಕಾಕ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರವು ಸಂಚಾರಿ ಕುರಿಗಾಹಿಗಳ ಜೀವನವನ್ನು ಕಥೆಯ ಕೇಂದ್ರವಾಗಿಸಿಕೊಂಡಿದೆ.
ಒಂದು ಕಡೆ ನೆಲೆ ನಿಲ್ಲದೇ, ಕುರಿಗಳನ್ನು ಮೇಯಿಸಲು ಊರೂರು ಸುತ್ತುತ್ತ ಜೀವನ ಸಾಗಿಸುವ ಜನರ ಬದುಕಿನ ಕುರಿತು ಈ ಸಿನಿಮಾ ಮೂಡಿಬಂದಿದೆ. ಕುರಿಗಾಹಿಗಳ ಜೀವನಮೌಲ್ಯ ಮತ್ತು ಆಚಾರಗಳನ್ನು ಚಿತ್ರ ಎಳೆಎಳೆಯಾಗಿ ಬಿಡಿಸಿ ತೋರಿಸಿದೆ. ಜೊತೆಗೆ ಅವರ ಅಲೆಮಾರಿ ಜೀವನ ಕಾರಣ ಎದುರಾಗುವ ನಾನಾ ಬಗೆಯ ಕಷ್ಟಗಳನ್ನು ಸಹ ಹೇಳಲಾಗಿದೆ.
ಸಿನಿಮಾದಲ್ಲಿ ಶ್ರೀಕಾಕಾ ಅವರ ಜೊತೆಗೆ ನಿವಿಷ್ಕಾ ಪಾಟೀಲ್, ಬಾಲ ರಾಜ್ವಾಡಿ, ಲಕ್ಷ್ಮಿ ಸಿದ್ದಯ್ಯ, ಅಪೂರ್ವ, ಪ್ರಶಾಂತ್ ಸಿದ್ದಿ, ಮಂಜುನಾಥ ಹೆಗಡೆ, ಸಂದೀಪ್ ನೀನಾಸಂ, ಅನನ್ಯ ಮುಂತಾದವರು ನಟಿಸಿದ್ದಾರೆ. ಇದು ಗಂಭೀರವಾದ ಕಥೆಯ ಸಿನಿಮಾ ಆದರೂ ಕೂಡ ಇದರಲ್ಲಿ ಒಂದು ಸಣ್ಣ ಪ್ರೇಮಕಥೆ, ತೆಳುವಾದ ಹಾಸ್ಯವನ್ನು ಕೂಡ ಬೆರೆಸಲಾಗಿದೆ. ಹಾಡುಗಳಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಹೊಡಿಬಡಿ ದೃಶ್ಯಗಳು ಕೂಡ ಇವೆ. ಅಷ್ಟೇ ಅಲ್ಲದೇ, ಐಟಂ ಸಾಂಗ್ ಸಹ ಇದೆ. ಆ ಮೂಲಕ ಒಂದಷ್ಟು ಕಮರ್ಷಿಯಲ್ ಅಂಶಗಳನ್ನು ಸೇರಿಸಲಾಗಿದೆ.
ಈ ಚಿತ್ರ ಅತ್ತ ಸಂಪೂರ್ಣ ಕಲಾತ್ಮಕ ಚಿತ್ರವೂ ಆಗದೆ ಇತ್ತ ಸಂಪೂರ್ಣ ಕಮರ್ಷಿಯಲ್ ಚಿತ್ರ ಸಹ ಆಗದೆ ಎರಡರ ಮಿಶ್ರಣ ಆಗಿರುವುದು ಪ್ರೇಕ್ಷಕರಿಗೆ ಕೆಲವು ಕಡೆ ಗೊಂದಲ ಸೃಷ್ಟಿಸುವ ಸಾಧ್ಯತೆ ಇದೆ. ಸಿನಿಮಾ ತಾಂತ್ರಿಕವಾಗಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಒಟ್ಟಿನಲ್ಲಿ ನೈಜ ಕಥನ ಮತ್ತು ವಿಭಿನ್ನ ವಿಷಯಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ಈ ಸಿನಿಮಾ ಉತ್ತಮ ಆಯ್ಕೆ.





