ಇಲಿಯಾನಾಳಿಗೆ ತನ್ನ ಮೇಲೆಯೇ ಅತಿ ಪ್ರೀತಿ
ಯಾವ ರಿಲೇಶನ್ ಶಿಪ್ ಸ್ಟೇಟಸ್ ಇನ್ನೂ ರಹಸ್ಯವಾಗಿಯೇ ಉಳಿದಿದೆಯೋ ಅಂಥ ಕೆಲವು ನಟಿಯರ ಪೈಕಿ ಇಲಿಯಾನಾ ಕ್ರೂಸ್ ಸಹ ಒಬ್ಬಳು. ಅವಳ ಲೈಫ್ ನಲ್ಲಿ ಏನಾದರೂ ಸ್ಪೆಷಲ್ ಇದೆಯೋ ಇಲ್ಲವೋ ಸುದ್ದಿ ಸಂಗ್ರಾಹಕರಿಗೆ ಅದು ನಿಗೂಢವಾಗಿಯೇ ಉಳಿದಿದೆ. ಹೀಗಿರುವಾಗ ಫ್ಯಾನ್ಸ್ ಅತಿ ಉತ್ಸುಕರಾಗಿ ಅದನ್ನು ತಿಳಿಯ ಬಯಸಿದರೆ ಅದರಲ್ಲಿ ತಪ್ಪೇನು? ಇತ್ತೀಚೆಗೆ ಒಂದು ಸಮಾರಂಭದಲ್ಲಿ ಫ್ಯಾನ್ಸ್ ಅವಳನ್ನು ನಿನ್ನ ಜೀವನದಲ್ಲಿ ಏನೂ ವಿಶೇಷವಿಲ್ಲವೇ ಎಂದು ನೇರವಾಗಿ ಕೇಳಿದರಂತೆ. ಆಗ ಇಲಿಯಾನಾ ಅವರೆಲ್ಲ ಬೆರಗಾಗುವಂತೆ, ನನಗೆ ಬೇರೆ ಯಾವುದೇ ಸ್ಪೆಷಲ್ ಅಗತ್ಯವೇ ಇಲ್ಲ. ಏಕೆಂದರೆ ನನ್ನ ಮೇಲೆಯೇ ನನಗೆ ಅತಿ ಪ್ರೀತಿ! ನನ್ನೊಂದಿಗೆ ನಾನು ಆನಂದವಾಗಿ ಸಮಯ ಕಳೆಯಬಲ್ಲೆ. ಅವರವರ ಭಾವಕ್ಕೆ ಅವರವರ ಭಕುತಿಗೆ ಇದು ಸರಿ ಇರಬಹುದಮ್ಮ, ಆದರೆ ಬಾಲಿವುಡ್‌ನ ಗಾಸಿಪ್ ಕಲ್ಚರ್‌ಗೆ ಗೊಬ್ಬರ ಹಾಕಲಿಕ್ಕಾದರೂ ಒಬ್ಬ ಬಾಯ್‌ಫ್ರೆಂಡ್ ಬೇಕಲ್ಲವೇ…. ಎನ್ನುತ್ತಾರೆ ಹಿತೈಷಿಗಳು.
ಹೇಗಿದ್ದದ್ದು ಹೇಗಾಯ್ತು ಗೊತ್ತಾ……?
ಲಾಕ್‌ಡೌನ್ ತುಸು ಸಡಿಲಗೊಂಡದ್ದೇ ದೇಶಾದ್ಯಂತ ತಾರೆಯರು ಬಂಧನದಿಂದ ಬಿಡುಗಡೆ ಆದಂತಾಗಿದೆ. ಕೆಲವರು ಮೋಜುಮಸ್ತಿಗಿಳಿದರೆ, ಹಲವರು ಸೀರಿಯಸ್ ಆಗಿ ಕೆಲಸಕ್ಕಿಳಿದಿದ್ದಾರೆ. ಹೀಗೆ ಸ್ಟಾರ್ಸ್ ಮನೆಯಿಂದ ಹೊರಬಿದ್ದ ಮೇಲೆ ಸುದ್ದಿ ಸಂಗ್ರಾಹಕರು ಅವರ ಬೆನ್ನು ಬೀಳದೆ ಇರುತ್ತಾರೆಯೇ? ಏಕೆಂದರೆ ಇಷ್ಟು ದಿನ ಇವರ ದಂಧೆ ಬಿಲ್ ಕುಲ್ ಬಂದ್ ಆಗಿತ್ತು. ಹಿಂದೆಲ್ಲ ತಾರೆಯರು ಯಾವ ಸುದ್ದಿಗಾರರನ್ನು ನೋಡಿ ಮುಖ ತಿರುಗಿಸಿಕೊಂಡು ಹೋಗುತ್ತಿದ್ದರೋ ಇಂದು ಅವರೇ ಇವರುಗಳ ಕ್ಯಾಮೆರಾಗೆ ಕೈ ಮುಗಿದು ಪೋಸ್ ನೀಡುತ್ತಿದ್ದಾರೆ. ಇವರುಗಳು ತಮ್ಮ ಬಗ್ಗೆ ಹೀಗೆಲ್ಲ ಗಾಸಿಪ್ ಹರಡದಿದ್ದರೆ, ತಾವು ಜನರ ಮನಸ್ಸಲ್ಲಿ ಉಳಿಯುವುದಾದರೂ ಹೇಗೆ ಎಂಬ ಆತಂಕ ಕಾಣಿಸಿದೆ.
ಸಕ್ಸೆಸ್ ಸ್ಕಿನ್‌ಟೋನ್ ಬಣ್ಣ ನೋಡೋಲ್ಲ
ಇತ್ತೀಚೆಗೆ ಒಂದು ಪ್ರಸಿದ್ಧ ಬ್ರಾಂಡ್ ತನ್ನ ಕ್ರೀಂ ಹೆಸರಿನ ಹಿಂದೆ ಫೇರ್ ಎಂಬುದನ್ನು ರದ್ದುಪಡಿಸಿತು. ಆ ಬ್ರಾಂಡ್‌ನ ಈ ನಿರ್ಧಾರವನ್ನು ಹಲವು ತಾರೆಯರು ಸಮರ್ಥಿಸಿದ್ದಾರೆ. ಆಗ ಕಿಂಗ್ ಖಾನ್‌ನ ಮಗಳು ಸುಹಾನಾ ಆ ಬ್ರಾಂಡ್‌ನ ಈ ನಿರ್ಧಾರದಿಂದ ಹೆಚ್ಚು ಪ್ರಭಾವಿತಳಾದಳು. ಅವಳು ಇದಕ್ಕೆ ಪ್ರತಿಕ್ರಿಯಿಸುತ್ತಾ, ಯಾರು ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕುತ್ತಾರೋ ಅವರಿಗೆ ಬಣ್ಣ ಎಂದೂ ಅಡ್ಡಿಯಾಗದು. ಫೇರ್ ಅಲ್ಲದ ಎಷ್ಟೋ ಮಂದಿ ಯಶಸ್ವಿಗಳಾಗಿರುವುದೇ ಇದಕ್ಕೆ ಸಾಕ್ಷಿ. ಸುಹಾನಾ ಸಹ ಹಾಲಿವುಡ್‌ಗೆ ಜಿಗಿಯಲು ಆತುರದಿಂದ್ದಾಳೆ, ಹೀಗಾಗಿ ಬೇಕಾದ ಎಲ್ಲಾ ತಯಾರಿ ಬಿರುಸಿನಿಂದ ನಡೆಸುತ್ತಿದ್ದಾಳೆ.
ಪರದೆ ಹಿಂದೆ ಆದರೂ ಸರಿ
ಅತ್ತ ಹಿರಿಯ ನಟ ಧರ್ಮೇಂದ್ರರ ಮಗ ಸನ್ನಿ ಡಿಯೋಲ್ ಪರದೆ ಹಿಂದಿನಿಂದ ಬಂದು ಬೆಳ್ಳಿ ತೆರೆಯಲ್ಲಿ ಮತ್ತೆ ಮಿಂಚಲು ಯತ್ನಿಸಿದರೆ, ಇತ್ತ ವಿವೇಕ್ ಓಬಿರಾಯ್ ಪರದೆ ಹಿಂದೆ ಸರಿಯುವ ಯತ್ನ ನಡೆಸಿದ್ದಾನೆ. ಹೌದು, ವಿವೇಕ್ ಈಗ ನಿರ್ಮಾಪಕನಾಗಲು ಹೊರಟಿದ್ದಾನೆ. ಬೇರೆ ಯಾವ ನಿರ್ಮಾಪಕ ನಿರ್ದೇಶಕರೂ ಈತನಿಗೆ ಮಣೆ ಹಾಕದಿದ್ದಾಗ ಇವನು ತಾನೇ ಏನು ಮಾಡಿಯಾನು? ಆದರೆ ಯಾರು ಯಾವ ಕೆಲಸ ಮಾಡಬೇಕೋ ಅವರೇ ಮಾಡಿದರೆ ಸರಿ ಅಲ್ಲವೇ? ಎಷ್ಟೋ ನಟನಟಿಯರು ನಿರ್ಮಾಣಕ್ಕೆ ಕೈ ಹಾಕಿ ದಿವಾಳಿಗಳಾದದ್ದು ವಿವೇಕನ ವಿವೇಕಕ್ಕೆ ಏಕೆ ಎಟುಕುತ್ತಿಲ್ಲ……?
ಮರಳಿ ನಟನೆಗೆ ಬರುತ್ತಿರುವ ಸನ್ನಿ
ಏನೋ ಕೋಪಕ್ಕೆ ಮನೆ ಬಿಟ್ಟವರು ಕೆಲ ಕಾಲದ ನಂತರ ಮನೆಗೆ ಮರಳಿದರೆ, ಆ ಮನೆ ಮಂದಿ ಸಹಜವಾಗಿಯೇ ಆ ತಪ್ಪನ್ನು ಮನ್ನಿಸಿ ಮನೆಗೆ ಬರ ಮಾಡಿಕೊಳ್ಳುತ್ತಾರೆ. ಆದರೆ ಮನೆ ಬಿಟ್ಟವರು ಎಷ್ಟೋ ವರ್ಷಗಳಾದ ಮೇಲೆ ಬಂದರೆ ಅದೇ ಮನೆ ಮಂದಿಗೆ ಅಪರಿಚಿತರು ಎನಿಸದೇ? ಸನ್ನಿ ಡಿಯೋಲ್ ಮಾಡುತ್ತಿರುವುದೂ ಇಂಥದೇ ದುಸ್ಸಾಹಸ. ಇಷ್ಟು ವರ್ಷಗಳಾದ ಮೇಲೆ ಬರುತ್ತಿರುವ ಈತನನ್ನು ಇಂದಿನ ಪ್ರೇಕ್ಷಕರು ಸ್ವೀಕರಿಸುವರೇ ಎಂಬುದೇ ಯಕ್ಷಪ್ರಶ್ನೆ. ಹಿಂದೆಲ್ಲ ನಿರ್ಮಾಣ ನಿರ್ದೇಶನದಿಂದ ಕೈ ಸುಟ್ಟುಕೊಂಡಿರುವ ಸನ್ನಿ ಈ ಬಾರಿ ಕೇವಲ ನಟನೆಯತ್ತ ಮಾತ್ರ ಗಮನ ಹರಿಸುತ್ತಾನಂತೆ! ಹೀಗಾಗಿ ಈಗ ಈತ ದಕ್ಷಿಣದ ಒಬ್ಬ ಖ್ಯಾತ ನಿರ್ದೇಶಕರ ಜೊತೆ ಜಬರ್ದಸ್ತ್ ಆಗಿ ಚಿತ್ರದಲ್ಲಿ ಇನ್‌ವಾಲ್ವ್ ಆಗಲಿದ್ದಾನೆ. ಅಂದುಕೊಂಡಂತೆ ಎಲ್ಲ ನಡೆದರೆ ಈ ಅಂದಕಾಲತ್ತಿಲೆ ಹೀರೋ ಇಂದಿನ ಕಾಲದಲ್ಲಿ ಛಮಕ್ ತೋರಿಸಲಿದ್ದಾನೆ!
ನೀನೇಕೆ ಸೋಶಿಯಲ್ ಮೀಡಿಯಾ ತ್ಯಜಿಸಿದೆ?
ಬಹು ದಿನಗಳಿಂದ ದಬಂಗ್ ನಾಯಕಿ ಸೋನಾಕ್ಷಿ ಸಿನ್ಹಾ ಬಾಲಿವುಡ್ ಚಿತ್ರಗಳಿಂದ ದೂರ ಉಳಿದಿದ್ದಾಳೆ. ಇತ್ತೀಚಿನ ಸುದ್ದಿ ಎಂದರೆ ಅವಳು ತನ್ನ ಟ್ವೀಟರ್ ಅಕೌಂಟ್ ಸಹ ಕ್ಲೋಸ್ ಮಾಡಿದ್ದಾಳಂತೆ. ಅಸಲಿಗೆ ಸುಶಾಂತ್‌ನ ಸಾವಿನ ನಂತರ ನೆಂಟಸ್ತನದ ಸಂಬಂಧಗಳ ಕುರಿತು ಬಾಲಿವುಡ್‌ನ ತಾರೆಯರೆಲ್ಲ ಬಹು ಚರ್ಚೆಯಲ್ಲಿ ಮುಳುಗಿದ್ದಾರೆ. ಯಾವುದು ಸರಿ, ತಪ್ಪು ಎಂಬ ವಾಗ್ವಾದಗಳಾಗುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಸಿಲ್ವರ್ ಸ್ಪೂನ್ ಹೊಂದಿದ ತಾರೆಯರು ನೆಟ್ಟಿಗರ ವಾಗ್ಬಾಣಗಳನ್ನು ಎದುರಿಸಬೇಕಾಗಿದೆ. ಸೋನಾ ಬೇಬಿ ಇಂಥದ್ದನ್ನೆಲ್ಲ ಸಹಿಸಿಕೊಳ್ಳಲಾಗದ ಸುಕೋಮಲೆ, ಹೀಗಾಗಿ ಟ್ವೀಟರ್ ಸಹವಾಸವೇ ಬೇಡ ಎಂದು ಕೈ ಮುಗಿದುಬಿಟ್ಟಳು. ಈ ರೀತಿ ಮಾಡಿದ್ದು ಇವಳೊಬ್ಬಳೇ ಅಲ್ಲ, ಜಹೀರ್ ಇಕ್ಬಾಲ್, ಆಯುಷ್ ಶರ್ಮ ಮುಂತಾದ ಹಲವು ಸೆಲೆಬ್ರಿಟಿಗಳೂ ಹಾಗೇ ಮಾಡಿದ್ದಾರೆ.
OTT ಚಿತ್ರಸರಣಿ ಶುರುವಾಗಿದೆ
ಮೊಬೈಲ್ ಮೂವಿ ಫ್ಲಾಟ್ ಫಾರ್ಮ್ಸ್ ಅಂದ್ರೆ ನೆಟ್‌ಫ್ಲಿಕ್ಸ್, ಅಮೆಝಾನ್ ಪ್ರೈಮ್, ಡಿಸ್ನಿ ಹಾಟ್‌ಸ್ಟಾರ್ ಮುಂತಾದವು ಕೊರೋನಾ ಮಾರಿ ದೆಸೆಯಿಂದ ಲಾಟ್ರಿ ಹೊಡೆದಂತೆ ಹಣ ಬಾಚುತ್ತಿವೆ! ಕೇವಲ ಸಣ್ಣಪುಟ್ಟ ಚಿತ್ರಗಳು ಮಾತ್ರ ಇಲ್ಲಿ ಬಿಡುಗಡೆ ಆಗುತ್ತಿದ್ದವು. ಇದೀಗ ಭಾರಿ ಬಜೆಟ್ ಚಿತ್ರಗಳೂ ಇದಕ್ಕೇ ಶರಣಾಗಿವೆ. ಗುಲಾಬೋ ಸಿತಾಬೋ, ಭುಜ್, ಸಡಕ್-2, ಲಕ್ಷ್ಮೀಬಾಂಬ್ ಮುಂತಾದವು ಸಹ ಇದೀಗ OTTಯಲ್ಲಿ ಬಿಡುಗಡೆಗೆ ಸಾಲಾಗಿ ಕಾದು ನಿಂತಿವೆ. ಥಿಯೇಟರ್‌ನಲ್ಲಿ ಶಿಳ್ಳೆ, ಚಪ್ಪಾಳೆ, ಕೂಗಾಟಗಳಿಂದ ತಮ್ಮ ಹರ್ಷ ವ್ಯಕ್ತಪಡಿಸುತ್ತಿದ್ದ ಗಾಂಧಿಕ್ಲಾಸ್ ಪ್ರೇಕ್ಷಕರು ಇದೀಗ ಹೋಮ್ ಮಿನಿಸ್ಟರ್ ಕಂಟ್ರೋಲ್ಡ್ ಮನೆಗಳಲ್ಲಿ ಹೇಗೆ ತಮ್ಮ ಸಂತಸ ಹಂಚಿಕೊಳ್ಳಬಹುದು? ಕೇವಲ ಮೊಬೈಲ್ ನಲ್ಲಿ ನೋಡಿ ಸಪ್ಪೆ ಎಂಜಾಯ್ ಮಾಡಿದರೆ ಸಾಕೇ? ಬೆಳ್ಳಿ ಪರದೆ ಮೇಲೆ ಹೂವು, ಕಾಸು ಎಸೆಯುತ್ತಾ, ಕಟ್‌ಔಟ್‌ಗಳಿಗೆ ಹಾಲಿನ ಅಭಿಷೇಕ ಮಾಡುತ್ತಿದ್ದ ಆ ವೈಭವಗಳು ಇನ್ನೂ ಕನಸಿನ ಮಾತೇ…..?
ನಾನು ಹುಟ್ಟುವುದೇ ಅಮ್ಮನಿಗೆ ಬೇಕಿರಲಿಲ್ಲ!
ಭಾರತಿ ಸಿಂಗ್ ಇದೀಗ ಬಾಲಿವುಡ್ ಹಾಗೂ ಕಿರುತೆರೆಯ ಮಹಾ ಕಾಮಿಡಿ ಕ್ವೀನ್ ಮಟ್ಟಕ್ಕೆ ಬಂದುಬಿಟ್ಟಿದ್ದಾಳೆ. ಇಲ್ಲಿನವರೆಗೂ ತಲುಪಲು ಭಾರತಿ ಬಹಳ ಸಂಘರ್ಷಪಟ್ಟಿದ್ದಾಳೆ. ಹಿಂದೆ ಒಂದು ಕಾಲದಲ್ಲಿ ನಮ್ಮ ಮನೆ ಪರಿಸ್ಥಿತಿ ಎಷ್ಟು ಹೀನಾಯವಾಗಿತ್ತು ಎಂದರೆ, ಅಮ್ಮ ನನ್ನನ್ನು ಗರ್ಭದಲ್ಲೇ ಕೊನೆಗಾಣಿಸಲು ಯತ್ನಿಸಿದ್ದಳು, ಎಂದು ಒಂದು ಸಂದರ್ಶನದಲ್ಲಿ ಭಾರತಿ ಹೇಳಿಕೊಂಡಿದ್ದಾಳೆ. ಇದರಿಂದ ಈಗ ಭಾರತಿಗಿಂತ ಅವರಮ್ಮನಿಗೇ ಹೆಚ್ಚು ಪಶ್ಚಾತ್ತಾಪ ಆಗಿದೆಯಂತೆ. ಅಂದೇ ಸಾಯಬೇಕಿದ್ದ ಆ ಪಿಂಡ, ಇಂದು ಸಮಾಜದಲ್ಲಿ ತಾಯಿ ಗೌರವವಾಗಿ ಬದುಕಲು ದಾರಿ ಮಾಡಿದೆ. ಆತ್ಮಹತ್ಯೆ ಒಂದೇ ದಾರಿ ಎನ್ನುವವರಿಗೆ ಭಾರತಿ ಹೋರಾಟವೇ ಬದುಕು ಎಂದು ಸಾಧಿಸಿ, ಇದೀಗ ಸುಖೀ ಗೃಹಿಣಿ ಎನಿಸಿದ್ದಾಳೆ.
ಪ್ರಿಯಾಂಕಾ ಇದೀಗ ಟಿವಿಯ ಗ್ಲೋಬಲ್ ಫೇಸ್
ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಿಂದ ಹಾಲಿವುಡ್‌ಗೆ ಹಾರಿ ಮಾಡಿದ ಸಾಧನೆ, ಅವಳ ಕೆರಿಯರ್‌ನ್ನೇ ಬದಲಿಸಿದೆ. ಅಲ್ಲಿಂದ ಮುಂದೆ ವಿದೇಶೀ ಚಿತ್ರ ಮಾಮೂಲಿ ಆದಾಗ, ವಿದೇಶೀ ಟಿವಿಯಲ್ಲೂ ಜನಪ್ರಿಯಳಾದಳು. ವರ ಸಿಕ್ಕಿದ್ದೂ ವಿದೇಶಿಗನೇ! ಇದೀಗ ತಾಜಾ ಸುದ್ದಿ ಎಂದರೆ ಪ್ರಿಯಾಂಕಾ ಅಮೆಝಾನ್ ಜೊತೆ ಹಲವು ಕೋಟಿಗಳ ಟಿವಿ ಕಾಂಟ್ರಾಕ್ಟ್ ಸೈನ್ ಮಾಡಿದ್ದಾಳಂತೆ! ಬಾಲಿವುಡ್‌ನಲ್ಲಿ ಎಲ್ಲೆಲ್ಲೂ ದಟ್ಟವಾಗಿ ಹರಡಿರುವ ನೆಂಟಸ್ತನದ ಗಾಡ್‌ಫಾದರ್‌ಗಿರಿ, ಮೂವಿ ಮಾಫಿಯಾ ಸ್ಥಳೀಯರನ್ನು ಬೆಳೆಯಲು ಬಿಡುತ್ತಿಲ್ಲ. ಸ್ವಪ್ರತಿಭೆ ಇದ್ದರೆ ವಿಶ್ವಾದ್ಯಂತ ಗೆಲ್ಲಬಹುದು ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ? ಕಂಗ್ರಾಟ್ಸ್ ಪ್ರಿಯಾಂಕಾ! ವಿದೇಶೀ ಲೋಕದಲ್ಲಿ ಮುಳುಗಿಹೋಗಿ ಸ್ವದೇಶಿ ಫ್ಯಾನ್ಸ್ ಗೆ ನಿರಾಸೆ ಮಾಡಬೇಡಿ ಎಂಬುದೇ ಅಭಿಮಾನಿಗಳ ಕೋರಿಕೆ.
ಬದಲಾಯ್ತು ಕರಣ್‌ನ ವರ್ಚಸ್ಸು
ಕರಣ್ ಪಟೇಲ್ ಟಿವಿ ಲೋಕದ ಜನಪ್ರಿಯ ತಾರೆ. ಹಾಗೆಂದು ಆತನ ವರ್ತನೆ ಬದಲಾಗಿದೆ, ಟಾಪ್‌ಗೆ ಹೋಗಿದ್ದಾನೆ ಎಂದೆಲ್ಲ ತಿಳಿಯಬೇಡಿ. ಇತ್ತೀಚೆಗೆ ಆತ ತನ್ನ ಸಂಭಾವನೆ ದರ ಹೆಚ್ಚಿಸಿದ್ದಾನೆ. ಒಂದು ಎಪಿಸೋಡ್‌ಗೆ ಈಗ ತನಗೆ 3 ಲಕ್ಷ ಕೊಡಬೇಕೆಂದು ಚಾರ್ಜ್ ಮಾಡುತ್ತಿದ್ದಾನೆ. ಇತ್ತೀಚೆಗೆ ಹಿರಿ/ಕಿರಿ ನಿರ್ಮಾಪಕರು ತಾರೆಯರೊಂದಿಗೆ ಮಾಡಿಕೊಂಡಿರುವ ಮನವಿ ಎಂದರೆ ಕೊರೋನಾ ಲಾಕ್‌ಡೌನ್ ಕಾರಣ, ದಯವಿಟ್ಟು ಸಂಭಾವನೆ ಕಡಿಮೆ ಮಾಡಿ ಅಂತ. ಹೀಗಿರುವಾಗ ಸಂದರ್ಭ ಅರ್ಥ ಮಾಡಿಕೊಳ್ಳದೆ ಕರಣ್ ಹೀಗಾಡಿದರೆ, ಮುಂದೆ ಅವನನ್ನು ಕ್ಯಾರೇ ಅನ್ನುವವರೂ ಇರುವುದಿಲ್ಲ ಎಂಬುದು ಹಿತೈಷಿಗಳ ಕಿವಿಮಾತು.
ಅವರ ಸ್ಟ್ರಗಲ್ ನಮಗಿಂತ ಹಿರಿದು
ಅಲಾಯಾ ಫರ್ನೀಚರ್ ಇದೀಗ ಧಾರಾಳ ಬಿಡುವಾಗಿರುವುದರಿಂದ ಹಿಂದೆ ತಾನು ಕಲಿಯಲಾಗದ್ದನ್ನೆಲ್ಲ ಕಷ್ಟಪಟ್ಟು ಕಲಿಯುತ್ತಿದ್ದಾಳಂತೆ. ತನ್ನ ವಿಡಿಯೋ ಎಡಿಟಿಂಗ್ ಸ್ಕ್ರೀನ್ಸ್ ನ್ನೂ ಸುಧಾರಿಸಿದ್ದಾಳೆ. ನೆಂಟಸ್ತನದ ದಾದಾಗಿರಿ ಬಗ್ಗೆ ಕೇಳಿದಾಗ, ಸ್ಟಾರ್ ಕಿಡ್ಸ್ ಸಹ ರಿಜೆಕ್ಷನ್ ಎದುರಿಸಬೇಕಾಗುತ್ತದೆ, ಹಾಗಿರುವಾಗ ಹೊರಗಿನವರು ಅದರ 100 ಪಟ್ಟು ಕಷ್ಟಪಡಬೇಕು ಎಂದಳು. ಸ್ಟಾರ್ ಕಿಡ್ಸ್ ಗಿಂತ ಹೊರಗಿನವರು ಈ ವಿಷಯದಲ್ಲಿ ಅತಿ ಹೆಚ್ಚು ಸಂಘರ್ಷ ಎದುರಿಸುತ್ತಾರೆ. ಯಾವುದೇ ಪರಿಸ್ಥಿತಿಯಲ್ಲೂ ಸೋಲು ಒಪ್ಪಬಾರದು ಎಂಬುದೇ ಅಲಾಯಾಳ ಆಶಯ. ತಾಳಿದವನು ಬಾಳಿಯಾನು ಎಂದು ಇವಳೇನೋ ಬಿಟ್ಟಿ ಸಲಹೆ ನೀಡಿದಳು, ಅದನ್ನು ಸಹಿಸಲಾಗದೆ ಪ್ರಾಣ ಬಿಟ್ಟ ಸುಶಾಂತ್‌ನಂಥವರಿಗೆ ತಾನೇ ಆ ವೇದನೆ ಗೊತ್ತು?