ಸತೀಶ : ನಮ್ಮ ದೇಶದ ಮಹಿಳೆಯರು ಬುದ್ಧಿವಂತರೋ ಅಲ್ಲವೋ?
ಮಹೇಶ : ಅಲ್ಲ ಅಂದವರು ಯಾರು? ಮುಚ್ಚಳ ತೆರೆಯದೆ ಡಬ್ಬಾ ಅಲುಗಾಡಿಸಿ ಅದು ಜೀರಿಗೆನೋ, ಸೋಂಪೋ ಹೇಳಿಬಿಡುತ್ತಾರೆ.
ಸುರೇಶ : ಭಾರತದ ಇಂಥ ಶ್ರೀಮತಿಯರಿಗೂ ಭಾರತರತ್ನಕ್ಕೆ ಸಮನಾದ ಒಂದು ಪ್ರಶಸ್ತಿಯನ್ನು ಪ್ರತ್ಯೇಕವಾಗಿ ಮೀಸಲಿಡಬೇಕು.
ಗಿರೀಶ : ಎಂಥ ಮಹಿಳೆಯರಿಗಾಗಿ?
ಸುರೇಶ : ಒಂದು ನಿಮಿಷಕ್ಕೆ 300 ಶಬ್ದಗಳ ವೇಗದಲ್ಲಿ ಬಡಬಡಾಯಿಸಿದರೂ, ಮಾತಿನ ಕೊನೆಯಲ್ಲಿ `ನನ್ನ ಬಾಯಿ ಮಾತ್ರ ತೆರೆಸಬೇಡ. ಇಲ್ಲದಿದ್ದರೆ….’ ಎನ್ನುವವರಿಗೆ!
ಮೋಹನ್ : ಇದೇನು ಇಷ್ಟೊಂದು ಪಾತ್ರೆಯ ರಾಶಿ? ಮನೆ ಯಾಕೆ ತಿಪ್ಪೆಗುಂಡಿ ಆಗಿದೆ?
ಶೇಖರ್ : ಹೆಂಡತಿ ತವರಿಗೆ ಹೋಗಿದ್ದಾಳೆ ಮಾರಾಯ….. ಮನೆ ಗುಡಿಸಿ ಏನಾಗಬೇಕು, ಬೀಗ ಹಾಕಿ ಈಗ ಆಫೀಸಿಗೆ ಹೊರಡೋದೇ ತಾನೇ… ಹೇಗೂ ತಡವಾಗಿದೆ, ಕ್ಯಾಂಟಿನ್‌ನಲ್ಲೇ ಕಾಫಿ ಕುಡಿಯೋಣ. ರಾತ್ರಿ ಅಡುಗೆಗೆ ಬೇಕಾದ್ರೆ ಒಂದು ಬಾಣಲೆ ತೊಳೆದರಾಯ್ತು…..
ಅಪರೂಪಕ್ಕೆ ಬಾಯ್‌ಫ್ರೆಂಡ್ ಪಿಜ್ಜಾ ಕಾರ್ನರ್‌ಗೆ ಕರೆದುಕೊಂಡು ಹೋದಾಗ ವೈವಿಧ್ಯಮಯ ಬಗೆಯ 2 ಪಿಜ್ಜಾಗಳಿಗೆ ಆರ್ಡರ್ ಕೊಟ್ಟು ಇಬ್ಬರೂ ರೊಮ್ಯಾಂಟಿಕ್ ಮೂಡ್‌ನಲ್ಲಿ ಸಂಭಾಷಣೆ ಆರಂಭಿಸಿದರು.
ಪ್ರೇಯಸಿ : ಹಾಯ್ ಡಾರ್ಲಿಂಗ್…. ನನ್ನ ಹೃದಯದ ಬಡಿತ ಪಟಪಟನೆ ಹೆಚ್ಚುವಂಥ ಅದ್ಭುತ ಡೈಲಾಗ್ ಹೇಳಬಾರದೇ?
ಪ್ರಿಯಕರ : ಈ ಆರ್ಡರ್ ಪೂರೈಸುವಷ್ಟು ಹಣ ಖಂಡಿತಾ ನನ್ನ ಬಳಿ ಇಲ್ಲ!
ಮೋಹನ್ : ಏನಾಯ್ತೋ ಸತೀಶ್…. ಯಾಕೆ ಹೀಗೆ ಮೈಯೆಲ್ಲ ಬಾಸುಂಡೆ…. ಬ್ಯಾಂಡೇಜು… ಏನು ಕಥೆ?
ಸತೀಶ್ : ಏನು ಹೇಳ್ಲೀ….. ಎಲ್ಲ ನನ್ನ ಕರ್ಮ! ನಮ್ಮ ಪಕ್ಕದ ಫ್ಲಾಟಿಗೆ ಹೊಸದಾಗಿ ಒಂದು ಚೈನೀಸ್ ಕುಟುಂಬ ಬಂದಿತ್ತು. ಮದುವೆಯಾದ ಒಂದೇ ವರ್ಷದಲ್ಲಿ ಅವನ ಹೆಂಡತಿ ಸತ್ತುಹೋದಳು…..
ಮೋಹನ್ : ಅದಕ್ಕೆ ನಿನಗೇಕೆ ಈ ದುರ್ದೆಶೆ?
ಸತೀಶ್ : ಅವನಿಗೆ ಸಾಂತ್ವನ ಹೇಳುವ ನೆಪದಲ್ಲಿ ಚೈನಾ ಮಾಲಲ್ವಾ, ಒಂದು ವರ್ಷ ಬಂದಿದ್ದೇ ಹೆಚ್ಚು ಅಂದೆನಪ್ಪಾ… ಅದಕ್ಕೆ ಹೋಗಿ……
ಗ್ರಾಹಕ : ರೀ ಸ್ವಾಮಿ, ಎಂಥ ಜೂಸ್ ಕೊಟ್ಟಿದ್ದೀರಿ… ಇದರಲ್ಲಿ ನೊಣ ಇದೆ….
ಅಂಗಡಿಯವ : ಸ್ವಲ್ಪ ಹೃದಯ ವಿಶಾಲವಾಗಿ ಇಟ್ಕೊಳ್ಳಿ. ಅಂಥ ಪುಟ್ಟ ಜೀವ ನಿಮ್ಮ ಗ್ಲಾಸಿನ ಎಷ್ಟು ಮಹಾ ಜೂಸ್‌ನ್ನು ಕುಡಿದೀತು…?
ಪತಿ : ಆಹಾ…. ಇವತ್ತು ಎಷ್ಟು ಸುಂದರವಾಗಿ ಕಾಣಿಸ್ತಿದ್ದಿ ಗೊತ್ತಾ?
ಪತ್ನಿ : ಹೌದೇನ್ರಿ…? ನಿಮ್ಮ ಬಾಯಿಗೆ ಬೆಲ್ಲ ಹಾಕ! ಈ ಮಾತು ಕೇಳಿ ನನ್ನ ಹೃದಯ ಒಡೆದಂತಾಯಿತು.
ಪತಿ : ಇರು ಇರು… ಇನ್ನೂ 4-5 ಸಲ ಹೇಳಿ ನೋಡ್ತೀನಿ…. ನಿನ್ನ ಮಾತು ತಾನೇ ಯಾವಾಗಲೂ ನಡೆಯೋದು…?
ಗುಂಡಗುಂಡಿ ಜೋರಾಗಿ ಜಗಳವಾಡುತ್ತಿದ್ದರು.
ಗುಂಡ : ಬಿಡು ಬಿಡೇ… ನಿನ್ನಂಥವರು 100 ಮಂದಿ ಸಿಗ್ತಾರೆ!
ಗುಂಡಿ : ನೋಡಿದ್ಯಾ…. ಈಗ್ಲೂ `ನನ್ನಂಥ’ವಳೇ ಬೇಕು ಅಂತೀಯಲ್ಲ….?
ಪತಿ : ಕಳೆದ 4 ತಾಸುಗಳಿಂದ ಎಲ್ಲಿ ಕಣ್ಮರೆಯಾಗಿದ್ದೆ?
ಪತ್ನಿ : ಮಾಲ್ ಗೆ ಹೋಗಿದ್ದೆ…. ಶಾಪಿಂಗ್ ಮಾಡಲು.
ಪತಿ : ಏನೇನು ತಗೊಂಡೆ?
ಪತ್ನಿ : 1 ಹೇರ್‌ಬ್ಯಾಂಡ್…. 4-5 ಸೆಲ್ಛಿಗಳು!
ಗುಂಡ ಪಿ.ಯು.ಸಿ 2ನೇ ವರ್ಷದಲ್ಲಿದ್ದ. ಮೇಡಂ ಕ್ಲಾಸಿನಲ್ಲಿ ಪಾಠ ಮಾಡುವಾಗ ಅವನು ಸದಾ ಗೌರಿ ಕಡೆ ತಿರುತಿರುಗಿ ನೋಡುತ್ತಿದ್ದ. ಕೊನೆಗೆ ಅವಳಿಗೂ ಇದು ಗೊತ್ತಾಗಿ ಒಂದು ದಿನ ಕೇಳೇಬಿಟ್ಟಳು.
ಗೌರಿ : ಏನು ವಿಷಯ?
ಗುಂಡ : ಐ ಲವ್ ಯೂ!
ಗೌರಿ : ಈಗ ನಾನೂ ಸಹ ನಿನಗೆ `ಐ ಲವ್ ಯೂ!’ ಹೇಳಿದರೆ ನಿನಗೆ ಹೇಗನಿಸುತ್ತೆ?
ಗುಂಡ : ಅಯ್ಯಯ್ಯೋ…. ಡಾರ್ಲಿಂಗ್! ನಾನಂತೂ ಖುಷಿಯಿಂದ ಸತ್ತೇಹೋಗ್ತೀನಷ್ಟೆ!
ಬಲು ಚಾಲೂಕು ಹುಡುಗಿ ಗೌರಿ ಓರೆಗಣ್ಣಿನಿಂದ ಅವನ ಕಡೆ ನೋಡಿ, “ಹೋಗು… ಬದುಕಿಕೋ…. ನಾನು ಹಾಗೇನೂ ಹೇಳೋದಿಲ್ಲ ಬಿಡು…..”
ಪತ್ನಿ : ಏನ್ರಿ… ಈ ಸಲದ ಬೇಸಿಗೆ ರಜೆಯಲ್ಲಿ ಎಲ್ಲಿಗೆ ಹೋಗೋಣ ಅಂತೀರಿ?
ಪತಿ : ಸಾಗುತ ದೂರ ದೂರ… ಮೇಲೇರುವ ಬಾರಾ ಬಾರಾ ನಾವಾಗುವ ಚಂದಿರ ತಾರಾ…
ಪತ್ನಿ : ಬಡ್ಕೊಂಡ್ರು ನಿಮ್ ಬುದ್ಧಿಗೆ.. ಮಕ್ಕಳೂ ಬರ್ತಿದ್ದಾರೆ ಅನ್ನೋದು ತಲೇಲಿರ್ಲಿ!
ವಿಶಾಲಮ್ಮ ತಮ್ಮ ಸ್ಥೂಲ ಶರೀರ ಹೊತ್ತು, ಏದುಸಿರು ಬಿಡುತ್ತಾ ಡಾಕ್ಟರ್ ಬಳಿ ಬಂದರು.
ವಿಶಾಲಮ್ಮ : ಡಾಕ್ಟ್ರೇ…. ನೀವೇ ತಾನೇ ಹೇಳಿದ್ರಿ… ಆಟ ಆಡಿದ್ರೆ ನನ್ನ ಮೈ ತೂಕ ಕರಗುತ್ತೆ ಅಂತ…. ಮತ್ತೆ ನೋಡಿ 3 ತಿಂಗಳಿಂದ ಗಂಟೆಗಟ್ಟಲೆ ಆಡಿದ್ರೂ ಏನೂ ಬದಲಾವಣೆ ಇಲ್ಲ.
ಡಾಕ್ಟರ್ : ನೀವು ಯಾವ ಆಟ ಆಡಿದ್ರಿ?
ವಿಶಾಲಮ್ಮ : ಮೊಬೈಲ್ ನಲ್ಲಿ ಕ್ಯಾಂಡಿ ಕ್ರಶ್!
ಪುಟ್ನಂಜಿ : ಅಲ್ಲ ಮಾತಿಗೆ ಕೇಳ್ತೀನಿ, ನಾನು 3-4 ದಿನ ಕಾಣಿಸದೆ ಹೋದರೆ ನಿನಗೆ ಏನು ಅನ್ಸುತ್ತೆ?
ಗುಂಡ : ಅಂಥ ಭಾಗ್ಯ ನನಗುಂಟೇ? ಆ ದಿನಗಳ ಆನಂದವನ್ನು ವರ್ಣಿಸುವುದೆಂತು?
ಪುಟ್ನಂಜಿ ಸೋಮವಾರ ಕಾಣಿಸಲಿಲ್ಲ.
ಪುಟ್ನಂಜಿ ಮಂಗಳವಾರ ಕಾಣಿಸಲಿಲ್ಲ. ಪುಟ್ನಂಜಿ ಬುಧವಾರ ಕಾಣಿಸಲಿಲ್ಲ.
ಪುಟ್ನಂಜಿ ಗುರುವಾರ ಗುಂಡನಿಗೆ ಕಾಣಿಸಲಿಲ್ಲ……!
ಅಂತೂ ಇಂತೂ ಅವನ ಕಣ್ಣಿನ ಊತ ಕಡಿಮೆ ಆದ ಬಳಿಕ ಪುಟ್ನಂಜಿ ಅವನಿಗೆ ಶುಕ್ರವಾರ ಅಸ್ಪಷ್ಟವಾಗಿ ಕಾಣತೊಡಗಿದಳು!
ಸುಶೀಲಮ್ಮ ಧಾರಾಳವಾಗಿ ಮೇಕಪ್ ಮಾಡಿಕೊಂಡು ಡೆಂಟಿಸ್ಟ್ ರನ್ನು ಭೇಟಿಯಾಗಲು ಬಂದವರೇ ಅವಸರದಲ್ಲಿ ಹೇಳಿದರು, “ನೋಡಿ ಡಾಕ್ಟ್ರೇ, ಬೇಗ ಬೇಗ ಒಂದು ಕೆಲಸ ಆಗಬೇಕು. ನನ್ನ ಬಳಿ ಇರೋದು ಹತ್ತೇ ನಿಮಿಷ. ಯಾವ ಅನೆಸ್ಥೇಶಿಯಾ ಅಥವಾ ಪೇನ್ ಕಿಲ್ಲರ್ ಇಲ್ಲದಿದ್ರೂ ಪರವಾಗಿಲ್ಲ. ಏನು….? ಒಂದಿಷ್ಟು ನೋವಾಗುತ್ತೆ ಆಗಲಿ ಬಿಡಿ. ಆದ್ರೆ ಮಾತ್ರ ನೀವು ಬೇಗ ಬೇಗ ಹಲ್ಲು ಕೀಳುವ ಕೆಲಸ ಮುಗಿಸಬೇಕು, ನಾನೀಗ ಅರ್ಜೆಂಟ್ ಕಿಟಿ ಪಾರ್ಟಿಗೆ ಹೊರಡಬೇಕಿದೆ.
ಡಾಕ್ಟರ್ : ನೀವು ಯಾರೋ ಭಾರಿ ಸಾಹಸದ ಮಹಿಳೆ ಇರಬೇಕು. ಡೆಂಟಿಸ್ಟ್ ಹತ್ತಿರ ಬಂದು ನೋವಾದ್ರೆ ಆಗಲಿ, ಬೇಗ ಹಲ್ಲು ಕೀಳಿ ಅಂತಿದ್ದೀರಿ. ಬೇಗ ಬಂದು ಈ ಚೇರಿನಲ್ಲಿ ಒರಗಿಕೊಳ್ಳಿ.
ಸುಶೀಲಮ್ಮ : ಅಯ್ಯೋ ಬಡ್ಕೊಂಡ್ರು, ನನಗಲ್ಲ ಡಾಕ್ಟ್ರೇ…. ರೀ…. ಬನ್ರಿ ಇಲ್ಲಿ…. ಈ ಚೇರ್ ಮೇಲೆ ಹೀಗೆ ಒರಗಿ. ಡಾಕ್ಟ್ರೇ, ಇವರ ಒಂದು ಹಲ್ಲು ಕೀಳಬೇಕು. ಬೇಗ ಯಾವುದೋ ಒಂದು ಕಿತ್ತು ಕಳುಹಿಸಿ. (ಪತಿಯತ್ತ ತಿರುಗಿ) ರೀ… ನಾನು ಆಟೋಲಿ ಕಾಯ್ತಿರ್ತೀನಿ. ಬೇಗ ಈ ಸಾಮಾನುಗಳನ್ನು ಹೊತ್ಕೊಂಡು ಬನ್ನಿ!
ಅಂತೂ ಇಂತೂ ಜಡ್ಜ್ ಸಾಹೇಬರು ವಿಚ್ಛೇದನದ ತೀರ್ಪು ನೀಡಿದ್ದಾಯಿತು.
ಜಡ್ಜ್ : ನೋಡ್ರಿ, ಇನ್ನು ಮುಂದೆ ಪ್ರತಿ ತಿಂಗಳೂ ನಿಮ್ಮ ಅರ್ಧ ಸಂಬಳ ನಿಮ್ಮ ಮಾಜಿ ಹೆಂಡತಿಗೆ ಕೊಟ್ಟು ಬಿಡಬೇಕು.
ಪತಿ : ಇದು ಸತ್ಯ ತಾನೇ? ಅಬ್ಬಾ! ಇನ್ನು ಮುಂದೆ ನನ್ನ ಅರ್ಧ ಸಂಬಳ ನನ್ನದೇ!
ಸಂಸಾರ ಸಾಗರವನ್ನು ಗುದ್ದಿ ಕೆಡವಬಹುದು, ಆದರೆ ಮಧು ಸಾಗರವನ್ನು ಗುದ್ದಿ ಗೆದ್ದೋರುಂಟೇ….?