ಮಹಿಳೆಯರಿಗೆ ಹೆಲ್ತ್ ಇನ್‌ಶ್ಯೂರೆನ್ಸ್ ನ ಕುರಿತಾದ ಈ ಮಾಹಿತಿಗಳನ್ನು ತಿಳಿದುಕೊಳ್ಳುವುದು ಹೆಚ್ಚು ಲಾಭಕರ. ಇದರ ಬಗ್ಗೆ ಸಂಪೂರ್ಣ ವಿವರಗಳನ್ನು ಗಮನಿಸೋಣವೇ………?
ಮಹಿಳೆಯರು ಮಾತ್ರವೇ ತಮ್ಮ ಕುಟುಂಬದ ಸ್ವಸ್ಥ ಜೀವನಶೈಲಿಗೆ ಒತ್ತು ನೀಡಲು ಸಾಧ್ಯ. ಮನೆಯವರೆಲ್ಲರನ್ನೂ ಗಮನಿಸಿಕೊಳ್ಳುವ ಆತಂಕದಲ್ಲಿ ಅವರು ತಮ್ಮ ಆರೋಗ್ಯವನ್ನೇ ನಿರ್ಲಕ್ಷಿಸುತ್ತಾರೆ. ಅದರಲ್ಲೂ ಉದ್ಯೋಗಸ್ಥ ವನಿತೆಯರಂತೂ ಅತ್ತ ಕೆರಿಯರ್ ಇತ್ತ ಕುಟುಂಬ ಎನ್ನುತ್ತಾ ಎರಡು ದೋಣಿಗಳಲ್ಲಿ ಒಟ್ಟೊಟ್ಟಿಗೆ ತೇಲುತ್ತಾ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಎಷ್ಟೋ ಮಹಿಳೆಯರಿಗೆ ತಾವು ಸ್ವಸ್ಥರಾಗಿದ್ದರೆ ಮಾತ್ರ ತಮ್ಮ ಕುಟುಂಬದವರ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಸಾಧ್ಯ ಎಂಬುದನ್ನೂ ನಿರ್ಲಕ್ಷಿಸುತ್ತಾರೆ.
ಹೀಗಿರುವಾಗ ಆರೋಗ್ಯ ವಿಮೆಯ ಬಗ್ಗೆ ತಿಳಿದಿರಬೇಕಾದುದು ಸಹ ಅತ್ಯಗತ್ಯ. ಇದು ನಿಮ್ಮನ್ನು ಯಾವುದೇ ಅಪಾಯಕರ ಸ್ಥಿತಿಯಲ್ಲಿ ಕಾಪಾಡುತ್ತದೆ. ನೀವು ತಪಾಸಣೆಗೆ ಒಳಪಟ್ಟು ದೊಡ್ಡ ಕಾಯಿಲೆಯ ವಿಷಯ ಪತ್ತೆಯಾದಾಗ, ಅದರಿಂದ ನಿಮ್ಮ ಆರೋಗ್ಯಕ್ಕಷ್ಟೇ ಹಾನಿಯಲ್ಲ, ಅದು ನಿಮ್ಮ ಇಡೀ ಜೀವನವನ್ನೇ ಕತ್ತಲೆಗೆ ದೂಡಬಹುದು. ಇತ್ತೀಚೆಗಂತೂ ಇಂಥ ದೊಡ್ಡ ಕಾಯಿಲೆಗಳಿಗೆ ಚಿಕಿತ್ಸೆ ಬಲು ದುಬಾರಿಯಾಗುತ್ತಿದೆ. ಯಾವ ವ್ಯಕ್ತಿಗೇ ಆಗಲಿ, ಆರೋಗ್ಯ ವಿಮೆಯ ನೆರವಿಲ್ಲದೆ ಇಂಥ ದೈತ್ಯ ಬಿಲ್‌ಗಳ ಪಾವತಿ ಅಸಾಧ್ಯ ಎಂಬಂತಾಗಿಬಿಟ್ಟಿದೆ.
ಆರೋಗ್ಯ ವಿಮೆ
ಎಲ್ಲಾ ವಯಸ್ಸಿನವರಿಗೂ ಉಪಯುಕ್ತ. ಅವಿವಾಹಿತ ಯುವತಿಯರು ತಮಗೆ ಮಾತ್ರವಲ್ಲದೆ, ತಮ್ಮ ತಾಯಿ ತಂದೆಯರ ಹೆಸರಿನಲ್ಲೂ ಇದನ್ನು ಮಾಡಿಸಬಹುದು. ಅದೇ ತರಹ ವಿವಾಹಿತ ಮಹಿಳೆ ತನಗೂ, ತನ್ನ ಕುಟುಂಬದ ಸದಸ್ಯರಿಗೂ ಇದನ್ನು ಮಾಡಿಸಬಹುದಾಗಿದೆ.
ಆರೋಗ್ಯ ವಿಮೆಯ ಮಹತ್ವ
ಆರೋಗ್ಯ ವಿಮೆ ಎಂಬುದು ಒಂದು ವ್ಯಾಪಕ ಕಾನ್‌ಸೆಪ್ಟ್, ಇದು ಜನರಿಗೆ ಯಾವುದೇ ಅತಿ ದೊಡ್ಡ ವೈದ್ಯಕೀಯ ಆಪತ್ತು ಹಾಗೂ ಅದರಿಂದಾಗುವ ಖರ್ಚಿನಿಂದ ಸುರಕ್ಷತೆ ಒದಗಿಸುತ್ತದೆ. ಇಂದು ಮಾರುಕಟ್ಟೆಯಲ್ಲಿ ಈ ಕುರಿತಾಗಿ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಇದರಲ್ಲಿ ಕಲರ್, ಲಾಭ ಇತ್ಯಾದಿ ಲಭ್ಯವಿವೆ. ಆದರೆ ಪ್ರತಿಯೊಂದರಲ್ಲೂ ಅಲ್ಪಸ್ವಲ್ಪ ಅಂತರ ಇದ್ದೇ ಇರುತ್ತದೆ.
ಮಹಿಳೆಯರಿಗೆಂದೇ ವಿಶೇಷ ವಿಮೆ
ಇಂದಿನ ಮಾರುಕಟ್ಟೆಯಲ್ಲಿ ಮಹಿಳೆಯರಿಗೆಂದೇ ಮೀಸಲಾದ ಅನೇಕ ವಿಶೇಷ ಯೋಜನೆಗಳು ಲಭ್ಯವಿವೆ. ಅದು ಕೇವಲ ಅವರ ವೈಯಕ್ತಿಕ ಅಗತ್ಯಗಳನ್ನು ಪೂರೈಸಿ, ಗಂಭೀರ ಕಾಯಿಲೆಗಳನ್ನೂ ಕವರ್ ಮಾಡುತ್ತದೆ. ಪ್ರಸ್ತುತ, ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಯೋಜನೆಗಳಿಗೆ ಇಂತಿಷ್ಟೇ ಫಿಕ್ಸ್ಡ್ ಪ್ರೀಮಿಯಂ ಎಂದೇನೂ ವಿಶೇಷ ಬಗೆಯದ್ದಿಲ್ಲ.
ಎಲ್ಲಾ ಆರೋಗ್ಯ ವಿಮಾ ಕಂಪನಿಗಳೂ, ಮಹಿಳೆಯರ ಮೇಲೆ ಕೇಂದ್ರೀಕರಿಸಲಾದ ಉತ್ಪನ್ನಗಳನ್ನು ದೊರಕಿಸಿ ಕೊಡುವುದಿಲ್ಲ. ಆದರೆ ಕಂಪನಿಗಳ ನೀತಿಗಳಲ್ಲಿ ಮೆಟರ್ನಿಟಿ ಬೆನಿಫಿಟ್ಸ್ ಶಾಮೀಲಾಗಿರುತ್ತವೆ. ಕಂಪನಿಗಳ ಹೊಸ ಹೊಸ ಯೋಜನೆಗಳನ್ನು ವಿಭಿನ್ನ ವಯಸ್ಸಿನ ಮಹಿಳೆಯರು, ಅವರ ಜೀವನದ ವಿವಿಧ ಘಟ್ಟಗಳನ್ನು ಆಧರಿಸಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರತ್ಯೇಕ ಪಾಲಿಸಿಗಳು, ಬೇರೆ ಪಾಲಿಸಿಗಳಿಗಿಂತ ಖಂಡಿತಾ ವಿಭಿನ್ನವಾಗಿರುತ್ತವೆ. ಎಲ್ಲಾ ಪಾಲಿಸಿಗಳ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿರುತ್ತವೆ :
– ವಿಮೆಯ ಕಂಪನಿಯ ನೆಟ್‌ವರ್ಕ್‌ನ ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್ ಹಾಸ್ಪಿಟೈಲೇಸೇಷನ್‌ಗೆ ಅವಕಾಶ.
– ಆಸ್ಪತ್ರೆಯಲ್ಲಿ ದಾಖಲಾಗುವ ಮೊದಲು ಅಥವಾ ದಾಖಲುಗೊಳ್ಳುವ ಸಂದರ್ಭದಲ್ಲಿ ಬರುವ ಖರ್ಚಿನ ನಿರ್ವಹಣೆ.
– ಅಧಿಕೃತ ಕೇಂದ್ರಗಳಲ್ಲಿ ಹೆಲ್ತ್ ಚೆಕಪ್‌ಗೆ ಅವಕಾಶ.
– ಮೆಟರ್ನಿಟಿ ಬೆನಿಫಿಟ್, ಇದು ಆಸ್ಪತ್ರೆಯ ದಾಖಲಾತಿಯ ಖರ್ಚನ್ನೂ ನಿಭಾಯಿಸುತ್ತದೆ. ಪ್ರಸವದ ಮುನ್ನ ಹಾಗೂ ನಂತರದ ಖರ್ಚುಗಳ ಸಹಿತ.
– ನಿಮ್ಮ ಕುಟುಂಬದ ಸದಸ್ಯರನ್ನೂ ಕವರ್ ಮಾಡುವಂತಹ ಪಾಲಿಸಿಗಳನ್ನೇ ಆರಿಸಿ. ಆಗ ಎಲ್ಲರಿಗೂ ಸೇರಿ ಕ್ಯಾನ್ಸರ್, ಹಾರ್ಟ್ ಅಟ್ಯಾಕ್, ಸ್ಟ್ರೋಕ್, ಕಿಡ್ನಿ ಫೇಲ್ಯೂರ್ ಇತ್ಯಾದಿ ಎಲ್ಲಾ ಅಪಾಯಕಾರಿ ಸಂದರ್ಭಗಳಲ್ಲೂ ಸಂಪೂರ್ಣ ನೆರವು ಸಿಗುತ್ತದೆ.
– ಸೆಕ್ಷನ್ 80E ಯಿಂದ ಹೆಚ್ಚಿನ ಲಾಭ.
– ಪಾಲಿಸಿಯಲ್ಲಿ ಮಹಿಳೆಯರ ಗಂಭೀರ ಕಾಯಿಲೆಗಳಾದ ಸ್ತನ ಕ್ಯಾನ್ಸರ್, ಸರ್ವೈಕಲ್ ಕ್ಯಾನ್ಸರ್, ಸ್ಪಾಂಡಿಲೈಟಿಸ್ ಇತ್ಯಾದಿಗಳೂ ಕವರ್ ಆಗುತ್ತವೆ.
ವಿವಾಹಿತೆ, ಅವಿವಾಹಿತೆಯರಿಗಾಗಿಯೂ
ವಿವಾಹಿತೆ ಅಥವಾ ಅವಿವಾಹಿತೆಯರಿರಲಿ, ಮೆಡಿಕಲ್ ಖರ್ಚು ಅಂದ ಮೇಲೆ ಹೆಚ್ಚೇ ಇರುತ್ತದೆ. ಇವರುಗಳ ಕುಟುಂಬದಲ್ಲಿ ಯಾರಿಗಾದರೂ ಗಂಭೀರ ಕಾಯಿಲೆಗಳಾದರೆ, ಅವರ ಚಿಕಿತ್ಸೆಗಾಗಿ ಸುಮಾರು ಹಣ ಖರ್ಚು ಮಾಡಬೇಕಾಗುತ್ತದೆ. ಆಗ ಒಂದು ಸಮಗ್ರ ಹೆಲ್ತ್ ಕೇರ್ ಯೋಜನೆ ಹಾಗೂ ಒಂದು ಗಂಭೀರ ಕಾಯಿಲೆಗಳ ವಿಮಾ ಯೋಜನೆ ಅತ್ಯಗತ್ಯ. ಇದು ಈ ಸಂದರ್ಭದಲ್ಲಿ ಹೆಚ್ಚಿನ ಆರ್ಥಿಕ ಸಹಾಯ ಒದಗಿಸುತ್ತದೆ. ನೀವು ಒಬ್ಬಂಟಿಯಾಗಿ (ಸಿಂಗಲ್ ಮದರ್) ಮಕ್ಕಳ ನಿವರ್ಹಣೆ ಮಾಡುತ್ತಿದ್ದರೆ, ಆರೋಗ್ಯ ವಿಮೆಯ ಮೂಲಕ ಈ ಲಾಭ ಪಡೆಯಬಹುದು :
– ವ್ಯಾಪಕ ಸ್ವಾಸ್ಥ್ಯ ಕವರ್‌ಗಾಗಿ ನಿಮ್ಮ ಜೊತೆ ನಿಮ್ಮ ಮಕ್ಕಳನ್ನೂ ಕವರ್ ಮಾಡಬಹುದು.
– ಒಂದೇ ಕವರ್‌ನಲ್ಲಿ ಚೈಲ್ಡ್ ಕೇರ್ ಬೆನಿಫಿಟ್ ಸಹ ಲಭ್ಯವಿದೆ.
– ಈ ಕವರ್‌ನಲ್ಲಿ 12 ವರ್ಷದವರೆಗಿನ ಮಕ್ಕಳ ವ್ಯಾಕ್ಸಿನೇಶನ್ ಸಹ ಒಳಗೊಂಡಿರುತ್ತದೆ.
– ನಿಮ್ಮ ಒಂದೇ ಸಿಂಗಲ್ ಕವರ್ ಮೂಲಕ, ನೀವು ನಿಮ್ಮ ಮಕ್ಕಳು, ಪೋಷಕರನ್ನೂ ಕವರ್ ಮಾಡಬಹುದು.
– ಯಾವುದೇ ಗಂಭೀರ ಕಾಯಿಲೆಯ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಆಗುವ ಸಂಪೂರ್ಣ ಖರ್ಚು ಸೇರಿರುತ್ತದೆ.
ನವವಿವಾಹಿತ ದಂಪತಿಗಳಿಗಾಗಿ
ನವವಿವಾಹಿತೆಯರು ತಮ್ಮ ಕುಟುಂಬವನ್ನು ದೊಡ್ಡದಾಗಿಸುವ ಯೋಜನೆ ಕಾರ್ಯಗೊಳ್ಳುವಾಗ, ಮೆಟರ್ನಿಟಿ ಬೆನಿಫಿಟ್ ಸಹ ಲಭ್ಯವಾಗುವಂಥ ವಿಮೆಯ ಯೋಜನೆಯನ್ನೇ ಆರಿಸಬೇಕು. ಪತಿಪತ್ನಿ ಮದುವೆಯಾದ ತಕ್ಷಣ 2 ವರ್ಷಗಳಿಗೆ ಅನ್ವಯವಾಗುವಂತೆ ಈ ಯೋಜನೆ ಕೊಂಡಾಗ, ಅವರಿಗೆ ಇದರ ಲಾಭಗಳು ಸಿಗುತ್ತವೆ.
ಅವಿಭಕ್ತ ಕುಟುಂಬದ ಮಹಿಳೆಯರಿಗಾಗಿ
ಅವಿಭಕ್ತ ಕುಟುಂಬದ ಯಾವ ಮಹಿಳೆಗೇ ಆಗಲಿ, ಅಂಥವರಿಗೂ ಸಹ ಒಮ್ಮೆಲೇ 15 ಜನರನ್ನು ಕವರ್ ಮಾಡುವಂಥ ಪಾಲಿಸಿಗಳು ಲಭ್ಯವಿವೆ. ಅಂದರೆ ಆಕೆ, ಅವಳ ಗಂಡ, ಮಕ್ಕಳು, ಅತ್ತೆಮಾವ, ನಾದಿನಿ (25 ವರ್ಷದ ಅವಿವಾಹಿತೆ), ಅವರನ್ನು ಅವಲಂಬಿಸಿರುವ ತಾಯಿ ತಂದೆ, ತಮ್ಮ ತಂಗಿಯರು, ಅಜ್ಜಿ ತಾತಾ…. ಹೀಗೆ ಎಲ್ಲರನ್ನೂ ಸೇರಿಸಿಕೊಳ್ಳಬಹುದು. (ಗರಿಷ್ಠ 15 ಸದಸ್ಯರು).
ಹಿರಿಯ ನಾಗರಿಕರಿಗಾಗಿ
ಹಿರಿಯ ಮಹಿಳಾ ನಾಗರಿಕರಿಗೆ ಯಾವುದೇ ಕಾಯಿಲೆಗಾಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಅಧಿಕ ಖರ್ಚು ಬಂದಾಗ, ಆರೋಗ್ಯ ವಿಮೆಯ ಲಾಭ ಪಡೆಯಬಹುದು. ಆಸ್ಪತ್ರೆಯಿಂದ ಬಂದ ಮೇಲೆ ನರ್ಸಿಂಗ್ ಸೇವೆ ಸಹ ಪಡೆಯಬಹುದು, ಇಂಥ ಸೇವೆಗಳು ಆ ಸಂದರ್ಭದಲ್ಲಿ ಅತ್ಯಗತ್ಯ ಕೂಡ. ಅದರಲ್ಲೂ ಇಂಥ ಹಿರಿಯರನ್ನು ನೋಡಿಕೊಳ್ಳುವವರು ಯಾರೂ ಇಲ್ಲದಿದ್ದಾಗ, ಕೆಲವು ಪಾಲಿಸಿಗಳಲ್ಲಂತೂ ಹೊಸ ಪಾಲಿಸಿ ಖರೀದಿಸಲು ಯಾವುದೇ ವಯಸ್ಸಿನ ಕಡಿವಾಣ ಇರುವುದಿಲ್ಲ. ಇಂಥ ಹಿರಿಯರಿಗೆ ಒದಗಿಸುವ ವಿಭಿನ್ನ ಪಾಲಿಸಿಗಳ ನಿಯಮ ನಡಾವಳಿಗಳು ವಿಭಿನ್ನವಾಗಿರುತ್ತವೆ.
ವಿಮೆಯ ಹಣ ಹಾಗೂ ಪಡೆಯುವ ಮೊತ್ತ ಆರೋಗ್ಯ ವಿಮೆಯ ಪಾಲಿಸಿಯ ಪ್ರೀಮಿಯಂ ಯೋಜನೆ, ಪ್ಲಾನ್, ಕವರೇಜ್ ಮಿತಿ, ವಿಮೆಯ ಹಣ ಇತ್ಯಾದಿಗಳ ಜೊತೆ ವ್ಯಕ್ತಿಯ ವಯಸ್ಸನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅದರ ಪ್ರಕಾರ ಹೆಚ್ಚು ಅಥವಾ ಕಡಿಮೆ ಆಗಬಹುದು. ಪ್ರೀಮಿಯಂ ಮೊತ್ತವನ್ನು ಕ್ಯಾಶ್, ಚೆಕ್, ಆನ್‌ಲೈನ್ ಮುಖಾಂತರ ಕಟ್ಟಬಹುದು.
ಕ್ಲೇಮ್ಸ್ ನಿರ್ವಹಣೆ
ವಿಮೆ ಕಂಪನಿ ಪಾಲಿಸಿದಾರರಿಗೆ ವಿಸ್ತೃತ ಸಲಹೆ ಸೂಚನೆಗಳನ್ನು ಕಳುಹಿಸುತ್ತಾರೆ. ಅದರಲ್ಲಿ ಕ್ಲೇಮ್ಸ್ ಮಾಡಿ ಹಣ ಪಡೆಯುವುದು ಹೇಗೆಂದು ತಿಳಿಸಲಾಗುತ್ತದೆ. ಆಸ್ಪತ್ರೆಯಲ್ಲಿ ಅಡ್ಮಿಟ್ ಆದ ಕ್ಲೇಮ್ಸ್ ಗಾಗಿ ವಿಮೆಯ ಕಂಪನಿಯ ನೆಟ್‌ವರ್ಕ್‌ನಲ್ಲಿ ಭಾಗವಾದ ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್ ಸೌಲಭ್ಯ ಸಿಗುತ್ತದೆ. ಈ ಆಸ್ಪತ್ರೆಗಳು ಯಾವುವು ಎಂಬ ವಿವರಗಳು ಪಾಲಿಸಿದಾರರಿಗೆ ಮೊದಲೇ ನೀಡಲ್ಪಟ್ಟಿರುತ್ತದೆ. ಈ ನೆಟ್‌ವರ್ಕ್‌ನಲ್ಲಿಲ್ಲದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುದಾದಲ್ಲಿ ಆಗಲೂ ಪಾಲಿಸಿದಾರರಿಗೆ ಷರತ್ತುಗಳ ಅನ್ವಯ ಹಣ ಮರುಪಾತಿ ಆಗುತ್ತದೆ.
ಪಾಲಿಸಿ ಖರೀದಿ ಹೇಗೆ?
ಆನ್‌ಲೈನ್‌ನಲ್ಲೂ ಪಾಲಿಸಿ ಖರೀದಿ ಮಾಡಬಹುದು. ಇದಲ್ಲದೆ ನೀವು ವಿಮೆಯ ಕಂಪನಿಯ ಹತ್ತಿರದ ಬ್ರಾಂಚ್, ಕಾಲ್‌ಸೆಂಟರ್‌ಗಳಿಗೆ ಕರೆ ಮಾಡಿಯೂ ಕೆಲಸ ಮುಗಿಸಬಹುದು. ಅದಾದ ಮೇಲೆ ಅವರು ಸಂಬಂಧಿಸಿದ ಅಧಿಕಾರಿ ನಿಮ್ಮನ್ನು ಬಂದು ಕಾಣುವಂತೆ ಮಾಡುತ್ತಾರೆ. ಅವರು ನಿಮಗೆ ಹೆಚ್ಚಿನ ಎಲ್ಲಾ ವಿವರ ತಿಳಿಸುತ್ತಾರೆ.
ಎಂಥ ವಿಮೆ ಕಂಪನಿ ಆರಿಸಬೇಕು?
ಯಾವ ವ್ಯಕ್ತಿಯೇ ಆಗಲಿ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುವ ವಿಮೆ ಕಂಪನಿಯನ್ನೇ ಆರಿಸಿಕೊಳ್ಳಬೇಕು. ಅದರ ಸೇವೆ, ಕ್ಲೇಮ್ಸ್ ಪರಿಹಾರದ ರೆಕಾರ್ಡ್ ಉತ್ತಮ ಗುಣಮಟ್ಟದ್ದಾಗಿರಬೇಕು. ವಾಸ್ತವದಲ್ಲಿ ನೀವು ಹೃದಯಾಘಾತದಂಥ ಹಿಂಸೆಗೆ ಸಿಕ್ಕಿದಾಗ, ಆ ಟೆನ್ಶನ್ ಮಧ್ಯೆ ಈ ಕಂಪನಿಗಳು ನಿಮಗೆ ಅನುಕೂಲವಾಗಿ ಪರಿಣಮಿಸಬೇಕು. ಅಗ್ಗದ ಪಾಲಿಸಿಗಳೇನೋ ಸಿಗುತ್ತವೆ. ಇವುಗಳ ಸೇವೆ ಅತ್ಯುತ್ತಮ ಎಂದು ಹೇಳಲಾಗದು. ಕವರೇಜ್ ಕ್ಲೇಮ್ಸ್ ನ್ನು ಜಂಜಾಟಗಳಿಲ್ಲದೆ ಒದಗಿಸಬಲ್ಲಂಥ ಪಾಲಿಸಿಯನ್ನೇ ಆರಿಸಿರಬೇಕು. ಅವರು ಒದಗಿಸಿದ ಸಂಪೂರ್ಣ ಮಾಹಿತಿಯನ್ನು ಸಮಗ್ರವಾಗಿ ಓದಿ, ಸಂದೇಹಗಳಿದ್ದಲ್ಲಿ ಮೊದಲೇ ನಿವಾರಿಸಿಕೊಳ್ಳಿ. ಇದರಲ್ಲಿ ನೀವು ಎಷ್ಟು ಕಾಲ ಮರುಪಾವತಿಗಾಗಿ ಕಾಯಬೇಕು, ಯಾವ ಸೌಲಭ್ಯ ಇದೆ ಇಲ್ಲ ಎಂಬ ವಿವರ, ಪಾಲಿಸಿಯ ಇತಿಮಿತಿ ಇತ್ಯಾದಿ ಎಲ್ಲಾ ನೋಡಿಕೊಳ್ಳಿ. ಅದನ್ನು ಒಪ್ಪಿ ನೀವು ಸಹಿ ಮಾಡುವ ಮೊದಲು 2-3 ಬಗೆಯದ್ದನ್ನು ವಿವರವಾಗಿ ಪರಿಶೀಲಿಸಿರಬೇಕು.
– ಡಿ. ಶ್ರೀಲತಾ