ವಿಮಾನಯಾನದಲ್ಲಿ ಕೊಡುವ ಆಹಾರ ನಿಮ್ಮ ಆರೋಗ್ಯಕ್ಕೆ ಸುರಕ್ಷಿತವಾಗಿದೆಯೇ ಇಲ್ಲವೇ ಎಂದು ತಿಳಿಯುವುದು ಅಗತ್ಯ. ಇದಕ್ಕಾಗಿ ಇಲ್ಲಿ ನೀಡಲಾಗಿರುವ ಸಂಪೂರ್ಣ ವಿವರಗಳನ್ನು ಗಮನಿಸೋಣವೇ……?

ಸಾವಿರಾರು ಮೈಲಿ ದೂರದ ಪ್ರಯಾಣ ಕೆಲವೇ ಗಂಟೆಗಳಲ್ಲಿ ಪೂರೈಸುವುದು ಇಂದಿನ ಆಧುನಿಕ ಟೆಕ್ನಿಕ್‌ ಯುಗದ ಅತ್ಯಂತ ದೊಡ್ಡ ಕೊಡುಗೆಯಾಗಿದೆ. ವಿಮಾನ ಪ್ರಯಾಣ ಎಷ್ಟು ರೋಚಕವಾಗಿರುತ್ತದೋ ಅಲ್ಲಿ ಸಿಗುವ ಆಹಾರ ಅಷ್ಟೇ ಆಕರ್ಷಕ. ಆದರೆ ಕೆಲವು ತಪ್ಪು ಕಲ್ಪನೆಗಳು ಈ ಮೋಜಿನ ಆಹಾರದ ಖುಷಿಯನ್ನು ಕಡಿಮೆ ಮಾಡುತ್ತವೆ. ವಿಮಾನದಲ್ಲಿ ಕೊಡಲಾಗುವ ಆಹಾರ ನಿಜಕ್ಕೂ ಚೆನ್ನಾಗಿ ಇರುವುದಿಲ್ಲವೋ? ದೊಡ್ಡ ದೊಡ್ಡ ಎಕ್ಸ್ ಪರ್ಟ್ಸ್, ಶೆಫ್ಸ್ ತಯಾರಿಸಿದ ಊಟ ತಿಂಡಿ ನಿಜವಾಗಿಯೂ ಉಪಯೋಗವಾಗುದಿಲ್ಲವೋ? ಇದರ ಬಗ್ಗೆ ನಾವು ಏರ್‌ ಇಂಡಿಯಾದ ಕ್ಯಾಬಿನ್‌ ಕ್ರೂ ಅಲೂಕ್‌ ಸಂಧು ಜೊತೆ ಮಾತನಾಡಿದೆವು. ಅವರು ಕಳೆದ 25 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ವಿಮಾನದಲ್ಲಿ ಮೊದಲೇ ಆಹಾರ ಸಂಗ್ರಹವಾಗಿರುತ್ತದೆ. ಅದನ್ನು ಹಲವು ಗಂಟೆಗಳ ನಂತರ ಮತ್ತೆ ಬಿಸಿ ಮಾಡಿ ಸರ್ವ್ ಮಾಡುತ್ತಾರಾ?

ವಿಮಾನದಲ್ಲಿ ನಿಜಕ್ಕೂ ಆಹಾರ ಸಂಗ್ರಹವಾಗಿರುತ್ತದೆ. ಅದನ್ನು ಮತ್ತೆ ಬಿಸಿ ಮಾಡಿ ಸರ್ವ್ ಮಾಡುತ್ತಾರೆ. ಭಾರತದಿಂದ ಅಮೆರಿಕ ತಲುಪಲು 16-17 ಗಂಟೆಗಳು ಬೇಕು. ಅದರಲ್ಲಿ ಕೆಲವು ಹಾರಾಟಗಳ ಮಧ್ಯೆ 7-8 ಗಂಟೆಗಳು ಹಾಲ್ಟ್ ಮಾಡುತ್ತವೆ. ಹಾರಾಟದಲ್ಲಿ ಪ್ರಯಾಣಿಕರಿಗೆ ರಾತ್ರಿ ಅಥವಾ ಬೆಳಗಿನ ಆಹಾರ ಕೊಡಬೇಕಾಗುತ್ತದೆ. ಈ ಆಹಾರವನ್ನು ಆ ಸ್ಥಳದ ಸಮಯಕ್ಕೆ ತಕ್ಕಂತೆ ಕೊಡುತ್ತಾರೆ.

ಕೆಲವು ಆಹಾರ ಪದಾರ್ಥಗಳು ಫ್ರೋಝನ್‌ ಆಗಿರುತ್ತವೆ. ಅವನ್ನು ಕೊಂಚ ಬಿಸಿ ಮಾಡಿ ಸರ್ವ್ ಮಾಡಲಾಗುತ್ತದೆ. ಸಲಾಡ್‌ ಅಥವಾ ಸ್ಯಾಂಡ್‌ವಿಚ್‌ನ್ನು ಫ್ರೆಶ್‌ ಆಗಿ ತಯಾರಿಸುತ್ತಾರೆ. ಫ್ರೋಝನ್‌ ಫುಡ್ಸ್ ನ ರುಚಿ ಅಥವಾ ಬಣ್ಣ ಚೆನ್ನಾಗಿರುವುದಿಲ್ಲ. ಫ್ರೋಝನ್‌ ಫುಡ್‌ ಲ್ಯಾಬ್‌ ಪರೀಕ್ಷೆಯ ನಂತರ ಸರಿಯಾದ ತಾಪಮಾನದಲ್ಲಿ ಪ್ಯಾಕ್‌ ಮಾಡಲಾಗುತ್ತದೆ. ಅದರಿಂದ ಅದರ ಗುಣಮಟ್ಟ ಮತ್ತು ರುಚಿ ಹಾಗೆಯೇ ಇರುತ್ತದೆ. ಭಾರತದಿಂದ ಹೊರಡುವಾಗ ಅದರಲ್ಲಿ ಮಸಾಲೆ ಪದಾರ್ಥಗಳನ್ನು ತಿನ್ನುವವರು ಹೆಚ್ಚಾಗಿರುತ್ತಾರೆ. ಅವರಿಗೆ ವಿಮಾನದಲ್ಲಿ ಮಸಾಲೆಯುಕ್ತ ಆಹಾರವನ್ನೇ ಕೊಡಲು ಪ್ರಯತ್ನಿಸಲಾಗುತ್ತದೆ.

ವಿಮಾನ ಹಾರುವ ಮೊದಲೇ ಕಿಚನ್‌ನಿಂದ ಎಲ್ಲ ಆಹಾರ ಪದಾರ್ಥಗಳನ್ನು ಬೇರೆ ಬೇರೆ ಜಾಗಗಳಲ್ಲಿ ಇಟ್ಟುಕೊಳ್ಳಲಾಗುತ್ತದೆ. ಸೀಫುಡ್‌ ಅಥವಾ ನಾನ್‌ವೆಜ್‌ ಇದ್ದರೆ ಅದನ್ನೂ ಸರಿಯಾಗಿ ಬೇಯಿಸಿ ಅದರಲ್ಲಿ ಬ್ಯಾಕ್ಟೀರಿಯಾ ಉತ್ಪನ್ನವಾಗದಂತೆ ಪ್ಯಾಕ್‌ ಮಾಡಲಾಗುತ್ತದೆ.

ಊಟದ ಗುಣಮಟ್ಟವನ್ನು ಫ್ಲೈಟ್‌ ತಲುಪಿದ ನಂತರ ಮತ್ತೆ ಪರೀಕ್ಷಿಸಲಾಗುತ್ತದೆ. ಹೀಗಾಗಿ ಇದುವರೆಗೆ ಯಾವುದೇ ದೂರು ಬಂದಿಲ್ಲ. ತಾಜ್‌ ಫ್ಲೈಟ್‌ ಕಿಚನ್‌, ಒಬೇರಾಯ್‌ ಫ್ಲೈಟ್‌ ಕಿಚನ್‌, ಅಂಬ್ಯಾಸೆಡರ್‌ ಫ್ಲೈಟ್‌ ಕಿಚನ್‌ ಇತ್ಯಾದಿ ದೊಡ್ಡ ದೊಡ್ಡ ಹೋಟೆಲ್‌ಗಳು ಸಾವಿರಾರು ಮೈಲಿ ದೂರದ ಪ್ರಯಾಣಕ್ಕೆ ಆಹಾರವನ್ನು ಸಿದ್ಧಪಡಿಸುತ್ತವೆ.

ಅಷ್ಟು ದೂರ, ಅಷ್ಟು ಎತ್ತರದಲ್ಲೂ, 3 ದಿನಗಳ ನಂತರ ಅದೇ ನ್ಯೂಟ್ರಿಷನ್‌ ವ್ಯಾಲ್ಯೂ, ಕ್ಯಾಲರೀಸ್‌, ವಿಟಮಿನ್ಸ್, ಪ್ರೋಟೀನ್ಸ್ ಇತ್ಯಾದಿ ಎಲ್ಲದಕ್ಕೂ ಸಂಪೂರ್ಣ ಗ್ಯಾರಂಟಿ ಇರುತ್ತದೆ. ಉಳಿದುಹೋದ ಆಹಾರವನ್ನು ಸ್ಕ್ರ್ಯಾಪ್‌ ಯಾರ್ಡ್‌ಗೆ ಕಳಿಸುತ್ತಾರೆ. ಬರೀ ಬಟರ್‌ ಚಿಪ್ಸ್, ಉಪ್ಪಿನಕಾಯಿ, ಬ್ರೆಡ್‌ ರೋಲ್ಸ್, ಜ್ಯಾಮ್, ಮಾರ್ಮಿಡ್‌ ಇತ್ಯಾದಿ ಹಾಳಾಗದಿರುವುದನ್ನು ಚ್ಯಾರಿಟಿಗೆ ಹಾಕಲಾಗುತ್ತದೆ.

ಬಿಸ್‌ನೆಸ್‌ ಮತ್ತು ಪ್ರಥಮ ಶ್ರೇಣಿಯ ಪ್ರವಾಸಿಗಳಿಗೆ ಒಳ್ಳೆ ಆಹಾರ ಸಿಗುತ್ತದೆಯೇ?

ಅವರು ಹೆಚ್ಚು ಹಣ ಕೊಡುತ್ತಾರೆ. ಅವರಿಗೆ ಒಳ್ಳೆ ಚಾಯ್ಸ್ ಸಿಗುತ್ತದೆ. ಆದರೆ ಎಲ್ಲರಿಗೂ ಉತ್ತಮ ಗುಣಮಟ್ಟದ್ದೇ ಊಟ ಸಿಗುತ್ತದೆ. ಬಿಸ್‌ನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುವವರು ಹೆಚ್ಚಾಗಿ ಶಾಕಾಹಾರಿ ಆಹಾರ ಕೇಳುತ್ತಾರೆ. ಅವರನ್ನು ಎಕಾನಮಿ ಕ್ಲಾಸ್‌ಗೆ ಕರೆತಂದು ಊಟ ಕೊಡಬೇಕಾಗುತ್ತದೆ. ಹಲವು ಬಾರಿ ಅವರೇ ಸ್ವತಃ ಕೇಳಿ ಊಟ ತಿನ್ನುತ್ತಾರೆ. ಹೆಚ್ಚಿನ ಗುಜರಾತಿ ಅಥವಾ ಜೈನ ಸಮುದಾಯದವರು ಪನೀರ್‌ ಇಷ್ಟಪಡುತ್ತಾರೆ. ಅಂತಹುದೇ ಆಹಾರ ಇಷ್ಟಪಡುತ್ತಾರೆ. ಸ್ವತಃ ಅವರೇ ಹೋಗಿ ಎಕಾನಮಿ ಕ್ಲಾಸ್‌ನ ಆಹಾರ ಸೇವಿಸುತ್ತಾರೆ.

ಸಾಮಾನ್ಯವಾಗಿ ವಿದೇಶೀ ವಿಮಾನಗಳು ವಿಶೇಷವಾಗಿ ಟರ್ಕಿಶ್‌ ಏರ್‌ಲೈನ್ಸ್, ಸ್ವಿಸ್‌ ಏರ್‌ಲೈನ್ಸ್ ನಲ್ಲಿ ಒಳ್ಳೆಯ ಊಟ ಕೊಡಲಾಗುತ್ತದೆ.  ಸ್ವಿಸ್‌ ಏರ್‌ಲೈನ್ಸ್ ನಲ್ಲಿ ಪ್ರಯಾಣಿಸುವ ರೇಷ್ಮಾ ಹೀಗೆ ಹೇಳುತ್ತಾರೆ. ಅವರು ಅಮೆರಿಕಾದಿಂದ ಭಾರತಕ್ಕೆ ಬರುವಾಗೆಲ್ಲ ಸ್ವಿಸ್‌ ಏರ್‌ಲೈನ್ಸ್ ನಲ್ಲೇ ಪ್ರಯಾಣ ಮಾಡುತ್ತಾರೆ. ಅದಕ್ಕೆ ಕಾರಣ ಒಳ್ಳೆಯ ಆಹಾರ ಸಿಗುತ್ತಿರುವುದು. ಅಲ್ಲಿಂದ ಬರುವಾಗ ವಿದೇಶಿ ಆಹಾರ ಸಿಗುತ್ತದೆ. ಇಲ್ಲಿಂದ ಹೋಗುವಾಗ ಭಾರತೀಯ ಆಹಾರ. ಆದರೆ ಎರಡೂ ಕಡೆಯ ಆಹಾರದ ಕ್ವಾಲಿಟಿ ಚೆನ್ನಾಗಿರುತ್ತದೆ. ಕೆಲವು ಏರ್‌ವೇಸ್‌ಗಳು ಎಕಾನಮಿ ಕ್ಲಾಸ್‌ನಲ್ಲಿ ಬಿಸ್‌ನೆಸ್‌ ಕ್ಲಾಸ್‌ನ ಆಹಾರ ಕೊಡಲು ಹೆಚ್ಚು ಹಣ ಕೇಳುತ್ತವೆ. ಅದು ಸುಮಾರು 15 ಡಾಲರ್‌ವರೆಗೆ ಆಗುತ್ತದೆ. ಏರ್‌ಫ್ರಾನ್ಸ್, ಕೆಎಲ್ಎಂ, ಆಸ್ಟ್ರಿಯನ್‌ ಏರ್‌ಲೈನ್ಸ್, ಬ್ರಿಟಿಷ್‌ ಏರ್‌ವೇಸ್‌ ಇತ್ಯಾದಿ ಅದರಲ್ಲಿ ಸೇರಿವೆ.

ಕೆಲವು ಆಹಾರಗಳನ್ನು ಏರ್‌ಲೈನ್ಸ್ ನಲ್ಲಿ ಕೊಡಬಾರದು. ಆದರೆ ಏರ್‌ಲೈನ್ಸ್ ನಲ್ಲಿ ಯಾವಾಗಲೂ ಸರ್ವ್‌ ಮಾಡುತ್ತಿರುತ್ತಾರೆ. ಏಕೆ?

ಪೋರ್ಕ್‌ ಮೀಟ್‌, ಚಿಕನ್‌ ಇತ್ಯಾದಿಗಳನ್ನು ಮೊದಲೇ ಬೇಯಿಸಿ ಫ್ರೀಜ್‌ ಮಾಡುತ್ತಾರೆ. ಚೆನ್ನಾಗಿ ಮ್ಯಾರಿನೇಟ್‌ ಮಾಡಿದ ನಂತರವೇ ಹೆಚ್ಚು ಮಾಂಸಾಹಾರಿ ವ್ಯಂಜನಗಳು ಬೇಯಿಸಲ್ಪಡುತ್ತವೆ. ಅದರಿಂದ ಅದರ ರುಚಿ, ಬಣ್ಣ ಮತ್ತು ಗುಣಮಟ್ಟ ಖಾಯಂ ಆಗಿರುತ್ತದೆ. ಹೆಚ್ಚಾಗಿ ನಾನ್‌ವೆಜ್‌ ಐಟಂಗಳು ಬೋನ್‌ಲೆಸ್‌ ಆಗಿರುತ್ತವೆ. ಹೀಗಾಗಿ ಬೇಗನೆ ಹಾಳಾಗುವುದಿಲ್ಲ.

30 ರಿಂದ 35 ಸಾವಿರ ಅಡಿ ಎತ್ತರದಲ್ಲೂ ಯಾವುದೇ ಆಹಾರ ಪದಾರ್ಥ ತನ್ನ ರುಚಿ ಕಳೆದುಕೊಳ್ಳದಂತೆ ಸಂಪೂರ್ಣ ಗಮನ ಕೊಡಲಾಗುತ್ತದೆ. ಶೆಫ್‌ ಕೂಡ ಬೇಗ ಹಾಳಾಗದಂತಹ ಆಹಾರವನ್ನೇ ತಮ್ಮ ಮೆನುವಿನಲ್ಲಿ ಸೇರಿಸಿಕೊಳ್ಳುತ್ತಾರೆ.

ಫಾಸ್ಟ್ ಫುಡ್‌ ಏರ್‌ಲೈನ್ಸ್ ನಲ್ಲಿ ಸರ್ವ್ ಮಾಡುವ ಆಹಾರಕ್ಕಿಂತ ಉತ್ತಮವೇ?

ಏರ್‌ಲೈನ್ಸ್ ನಲ್ಲಿ ಹಾರುವ ಮೊದಲು ಅದರ ಫುಡ್‌, ಸ್ವಚ್ಛತೆ, ಏರ್‌ಫ್ರೆಶ್‌ನೆಸ್‌ ಇತ್ಯಾದಿ ಪರೀಕ್ಷಿಸಲಾಗುತ್ತದೆ. ಬರ್ಗರ್‌, ಫ್ರೆಂಚ್‌ಫ್ರೈಜ್‌ ಚಿಲ್ಡ್ ಮೀಲ್‌, ಸ್ಪೆಷಲ್ ಮೀಲ್‌, ಲೋಕಾರ್ಬ್‌, ಸೀಫುಡ್‌ ಇತ್ಯಾದಿ ಎಲ್ಲದರ ಗುಣಮಟ್ಟದ ಸರ್ಟಿಫಿಕೇಟ್‌ ಕ್ಯಾಟೆರರ್‌ನಿಂದ ಪಡೆಯಲಾಗುತ್ತದೆ. ಕಡಿಮೆ ಅವಧಿಯ ಪ್ರಯಾಣದಲ್ಲಿ ಹೆಚ್ಚಾಗಿ ಸ್ನ್ಯಾಕ್ಸ್ ಇರುತ್ತದೆ. ದೀರ್ಘಾವಧಿಯ ಪ್ರಯಾಣದಲ್ಲಿ ಹೆಚ್ಚಾಗಿ ವೆರೈಟಿ ಊಟ ಇರುತ್ತದೆ. ಯೂರೋಪ್‌ನಿಂದ ಬರುವಾಗ ಊಟ ಅಲ್ಲಿನ ಪ್ರಕಾರ ಇರುತ್ತದೆ. ಫಾಸ್ಟ್ ಫುಡ್‌ ವಿಮಾನಯಾನದ ಊಟಕ್ಕಿಂತ ಚೆನ್ನಾಗಿರುತ್ತದೆ ಎಂಬುದು ತಪ್ಪು. ನೈಟ್‌ಫ್ಲೈಟ್‌ನಲ್ಲಂತೂ ಕ್ಯಾಬಿನ್‌ ಕ್ರೂ ಪ್ರವಾಸಿಗಳ ಅಗತ್ಯಕ್ಕೆ ಬಹಳಷ್ಟು ಗಮನ ಕೊಡುತ್ತವೆ.

ಏರ್‌ಲೈನ್ಸ್ ನ ಊಟ ರಿಲ್ಯಾಕ್ಸ್ ಆಗಲು ಅಥವಾ ನಿದ್ರಿಸುವ ಉದ್ದೇಶದಿಂದ ತಯಾರಾಗುತ್ತದೆಯೇ?

ಹೀಗೆಂದೂ ಆಗುವುದಿಲ್ಲ. ದೀರ್ಘ ಪ್ರಯಾಣದಲ್ಲಿ ಹೆಚ್ಚು ಸಮಯದವರೆಗೆ ಆಕಾಶದಲ್ಲಿ ಇರಬೇಕಾಗುತ್ತದೆ. ಅಲ್ಲಿ ಏರ್‌ಪ್ರೆಷರ್‌ ಕಡಿಮೆ. ಆಕ್ಸಿಜೆನ್‌ ಕಡಿಮೆ ಇದ್ದು ಜನಕ್ಕೆ ಸ್ಲೀಪಿ ಅಥವಾ ಸುಸ್ತು ಅನ್ನಿಸುತ್ತದೆ. ಆಗೆಲ್ಲಾ ಜನ ಗ್ರೀನ್‌ ಟೀ ಕುಡಿದು ಮಲಗುತ್ತಾರೆ. ವಯಸ್ಸಾದವರು ಮಲಗುತ್ತಾರೆ. ಚಿಕ್ಕ ಮಕ್ಕಳು ಅಥವಾ ಟೀನೇಜರ್ಸ್‌ ಪ್ರಯಾಣವನ್ನು ಎಂಜಾಯ್‌ ಮಾಡುತ್ತಾರೆ. ವಿಮಾನಯಾನದಲ್ಲಿ ಸರ್ವ್ ಮಾಡಿದ ಡ್ರಿಂಕ್ಸ್ ಅಥವಾ ಊಟ ಶೇ.100 ರಷ್ಟು ಪರೀಕ್ಷಿಸಿದ ನಂತರವೇ ಪ್ರವಾಸಿಗಳಿಗೆ ಕೊಡುತ್ತಾರೆ.

– ಶ್ಯಾಮಲಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ