`ಪುರುಷರ ಮುಂದೆ ಸ್ತ್ರೀ ಮಾಯೆ ಎಂಬ ಅಭಿಮಾನವಾಗಿ ಕಾಡಿತ್ತು ನೋಡಾ.....' ಈ ಮಾತಿಗೆ ಹೆಣ್ಣುಮಕ್ಕಳು ಅಬಲೆಯರಾಗಿ ಎಷ್ಟು ಅಸಹಾಯಕರಾಗಿದ್ದಾರೋ, ಸಬಲೆಯರಾಗಿ ಗಂಡನ್ನು ಬಗ್ಗು ಬಡಿಯುವಲ್ಲೂ ಮುಂದಾಗಿದ್ದಾರೆ. ಹೆಣ್ಣಿನ ಹಕ್ಕುಗಳ ಹೋರಾಟಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿರುವ ಸುಮಿತ್ರಾರ ಕುರಿತು ವಿವರವಾಗಿ ತಿಳಿಯೋಣವೇ......?
ಮಾರ್ಚ್ 8 ರಾಷ್ಟ್ರೀಯ ಮಹಿಳಾ ದಿನಾಚರಣೆ. ಈ ಒಂದು ದಿನವನ್ನು ಮಹಿಳೆಯರ ಗೌರವಾರ್ಥವಾಗಿ ಆಚರಿಸುವುದರ ಹಿಂದೆ ಅನೇಕ ಮಹಿಳೆಯರ ತ್ಯಾಗ, ಬಲಿದಾನ ಹೋರಾಟದ ಕುರುಹುಗಳಿವೆ. ಅವರುಗಳು ಇಟ್ಟ ದಿಟ್ಟ ಹೆಜ್ಜೆಯ ಗುರುತುಗಳಿವೆ. ಪುರುಷ ಪ್ರಧಾನ ಸಮಾಜನದಲ್ಲಿ ಶತಶತಮಾನಗಳಿಂದಲೂ ಹೆಣ್ಣು ತನ್ನ ಹಕ್ಕು ಬಾಧ್ಯತೆಗಳಿಗಾಗಿ ಪುರುಷನೊಂದಿಗೆ ಸಮಾಜದೊಂದಿಗೆ ಸಂಘರ್ಷ ನಡೆಸುತ್ತಲೇ ಬಂದಿದ್ದಾಳೆ. ಅವಳು ಎದುರಿಸಿದ, ಎದುರಿಸುವ ಸವಾಲುಗಳು ಅನೇಕ. ಅವುಗಳಲ್ಲಿ ಲಿಂಗ ತಾರತಮ್ಯ ಅಸಮಾನತೆ (ಗ್ಲಾಸ್ ಸೀಲಿಂಗ್) ಪ್ರಮುಖವಾದ ಅಂಶಗಳು.
ಸ್ತ್ರೀ ಸಮಾನತೆಯ ಮತ್ತು ಅವಳ ಹಕ್ಕಿನ ಹೋರಾಟ ಕೇವಲ ನಮ್ಮ ದೇಶದ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಇಂದು ತಮ್ಮನ್ನು ತಾವು ಮುಂದುವರಿದ ದೇಶಗಳು ಎಂದು ಭುಜ ತಟ್ಟಿ ಹೇಳಿಕೊಳ್ಳುವ ಅನೇಕಾನೇಕ ದೇಶಗಳಲ್ಲಿಯ ದಿಟ್ಟ ಮಹಿಳೆಯರು ಕೂಡ ಪುರುಷರ ಅಹಂನ ವಿರುದ್ಧ, ಲಿಂಗ ತಾರತಮ್ಯದ ವಿರುದ್ಧ, ಗಂಡಿನ ದಬ್ಬಾಳಿಕೆಯ ವಿರುದ್ಧ ತಮ್ಮ ಅಸ್ಮಿತೆಯ ಹಕ್ಕಿಗಾಗಿ ಪುರುಷರ ಮುಂದೆ ಎದೆ ಸೆಟಿಸಿ ನಿಂತು ಅಹರ್ನಿಶಿ ಬಡಿದಾಡಿದ್ದಾರೆ. ಕೆವಲ ಧೀರ ಮಹಿಳೆಯರಂತೂ ತಮ್ಮ ಬದುಕನ್ನು ಕೇವಲ ಮಹಿಳೆಯರ ಹಕ್ಕಿನ ಹೋರಾಟಕ್ಕೆ ಮುಡಿಪಾಗಿರಿಸಿ ನೆನಪಿನ ನಕ್ಷತ್ರಾಗಿ ಅಜರಾಮರರಾಗಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿ ಮುಂದಿನ ಪೀಳಿಗೆಯರ ದಾರಿ ಸುಗಮಾಗಿಸಿದ್ದಾರೆ. ಇಂದಿಗೂ ಅಂತಹ ಅನೇಕ ಮಹಿಳೆಯರ ಮತ್ತು ಅವರು ಮಾಡಿದ ಸಾಧನೆಗಳು, ಪಡೆದ ಕೀರ್ತಿಗಳು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ. ಅಂತಹ ಮಹಿಳೆಯರ ಸಾಹಸದ ಬದುಕಿನ ಒಂದು ಮೆಲುಕು ಮತ್ತು ಅಂತಹ ಮಹಿಳೆಯರ ಗೌರವ ಸೂಚಕವಾಗಿ ಈ ಮಹಿಳಾ ದಿನಾಚರಣೆ ಸಮರ್ಪಿತ. ಈ ಒಂದು ದಿನದ ಆಚರಣೆಯಿಂದ ಮಹಿಳೆಯರ ಬದುಕು ಸುರಕ್ಷಿತವಾಗಿದೆ ಎಂದು ಪರಿಗಣಿಸಬಹುದೇ? ಮತ್ತವರು ಕುಟುಂಬದಲ್ಲಾಗಲಿ, ಸಮಾಜದಲ್ಲಾಗಲಿ ನಿರ್ಭೀತಿಯ ಜೀವನ ನಡೆಸುತ್ತಿದ್ದಾರೆಯೇ? ಎಂಬ ಪ್ರಶ್ನೆ ಜಿಜ್ಞಾಸೆ ಸಹಜವಾಗಿ ನಮ್ಮನ್ನು ಕಾಡುತ್ತದೆ. ಇಂದಿಗೂ ಮಹಿಳೆಯರು ತಮ್ಮ ಕುಟುಂಬ ಮತ್ತು ಸಮಾಜದಲ್ಲಾಗಲಿ ಸುರಕ್ಷಿತರಾಗಿಲ್ಲ ಎಂದು ಹೇಳಲು ಮನಸ್ಸಿಗೆ ನೋವಾಗುತ್ತದೆ. ಇವತ್ತಿಗೂ ಅವರು ತಮ್ಮ ಮೇಲಾಗುವ ಅನ್ಯಾಯ ಅತ್ಯಾಚಾರದ ವಿರುದ್ಧ ತಮ್ಮ ಹೋರಾಟವನ್ನು ಮುಂದುರಿಸುವಂತಾಗಿದೆ. ಇಂದಿಗೂ ಮಹಿಳೆಯರು ತಮ್ಮ ಕುಟುಂಬ, ಕೆಲಸ ಮಾಡುವ ಸ್ಥಳ, ಸಾರ್ವಜನಿಕ ಸ್ಥಳ ಮುಂತಾದ ಕಡೆಗಳಲ್ಲಿ ಅನ್ಯಾಯ ಅವಮಾನವನ್ನು ಸಹಿಸುತ್ತಿದ್ದಾರೆ. ಅತ್ಯಾಚಾರದಂಥ ಘೋರಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ.

ಲಿಂಗ ಸಮಾನತೆಯ ಸಮಸ್ಯೆ
ಇಂದಿನ ದಿನಗಳಲ್ಲೂ ಕೂಡ ಅನೇಕ ಧೀಮಂತ ಮಹಿಳೆಯರು ಲಿಂಗ ಸಮಾನತೆಯ ಮತ್ತು ಹೆಣ್ಣಿನ ಮೇಲೆ ನಡೆಯುವ ಅನ್ಯಾಯ ದೌರ್ಜನ್ಯದ ವಿರುದ್ಧ ಹೋರಾಡಲು ತಮ್ಮ ಬದುಕನ್ನೇ ಮುಡುಪಾಗಿರಿಸಿದರು ಇಂದಿಗೂ ನಮ್ಮ ನಡುವೆ ಇದ್ದಾರೆ. ಇಂದಿನ ಸುಸಂದರ್ಭದಲ್ಲಿ ಒಂದು ಅಸಾಮಾನ್ಯ ಕುಟುಂಬದಿಂದ ಬಂದು ಅಸಾಮಾನ್ಯ ಸಾಧನೆಗೈದ ಒಬ್ಬ ಮಹಿಳೆಯ ಬಗ್ಗೆ ತಿಳಿಯೋಣ. ಅವರೇ `ರಾಷ್ಟ್ರೀಯ ಮಹಿಳಾ ಒಕ್ಕೂಟ'ದ ಪ್ರಧಾನ ಕಾರ್ಯದರ್ಶಿಯಾದ ಸುಮಿತ್ರಾ.





