ರಾಘವೇಂದ್ರ ಅಡಿಗ ಎಚ್ಚೆನ್.

ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಂದಿದ್ದ ಅಶ್ಲೀಲ ಕಾಮೆಂಟ್‌ಗಳ ವಿರುದ್ಧ ಆರಂಭಿಸಿದ ಕಾನೂನು ಹೋರಾಟ ಈಗ ಮಹತ್ವದ ಹಂತ ತಲುಪಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ನ್ಯಾಯಾಲಯಕ್ಕೆ ವಿಸ್ತೃತ ಚಾರ್ಜ್‌ಶೀಟ್ ಸಲ್ಲಿಸಿದ್ದು, ತನಿಖೆಯಲ್ಲಿ ಹಲವು ಶಾಕಿಂಗ್ ಮಾಹಿತಿ ಹೊರಬಿದ್ದಿದೆ.
ಪೊಲೀಸರು 45ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರು ಆರೋಪಿಗಳ ವಿರುದ್ಧ ಸುಮಾರು 473 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಆರು ಆರೋಪಿಗಳ ಹೇಳಿಕೆಗಳನ್ನು ದಾಖಲಿಸಲಾಗಿದ್ದು, ಬಂಧಿತರಲ್ಲಿ ಕೆಲವರು ಕಿಚ್ಚ ಸುದೀಪ್‌ ಅಭಿಮಾನಿಗಳಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಆರೋಪಿಗಳು ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿಸಿ ಕಾಮೆಂಟ್ ಮಾಡಿದ್ದಾಗಿ ತಿಳಿದುಬಂದಿದೆ. ಕೆಲವರು ವಿಶೇಷವಾಗಿ ಅಶ್ಲೀಲ ಕಾಮೆಂಟ್ ಮಾಡಲು ಮಾತ್ರವೇ ನಕಲಿ ಐಡಿಗಳನ್ನು ತೆರೆದಿದ್ದರು ಎಂಬ ಸಂಗತಿ ಕೂಡ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಬಂಧಿತರು ವಿಜಯಲಕ್ಷ್ಮಿಯನ್ನು ಟಾರ್ಗೆಟ್ ಮಾಡಿ ಅಸಭ್ಯ ರೀತಿಯಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿ ಕಾಮೆಂಟ್ ಮಾಡಿದ್ದರೆಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ತಾವು ಹಾಕಿದ ಪೋಸ್ಟ್‌ಗಳು ಅಶ್ಲೀಲವಾಗಿವೆ ಎಂಬುದು ಗೊತ್ತಿದ್ದರೂ ಕಾಮೆಂಟ್ ಮಾಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

comment

ಈ ಪ್ರಕರಣದಲ್ಲಿ ಆರೋಪಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಫಾರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ. ಎಫ್‌ಎಸ್‌ಎಲ್ ವರದಿ ಇನ್ನಷ್ಟೇ ಬರಬೇಕಿದ್ದು, ಡೇಟಾ ರಿಟ್ರೀವ್ ಪ್ರಕ್ರಿಯೆ ನಡೆಯುತ್ತಿದೆ.
ಇದಲ್ಲದೆ, ಕಾಮೆಂಟ್ ಮಾಡಿದ್ದ 12 ಸಾಮಾಜಿಕ ಜಾಲತಾಣ ಐಡಿಗಳ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಸಂಬಂಧಿತ ಕಂಪನಿಗಳಿಗೆ ಪೊಲೀಸರು ಪತ್ರ ಬರೆದು ಮಾಹಿತಿ ಕೇಳಿದ್ದು, ಉತ್ತರಕ್ಕಾಗಿ ಕಾಯುತ್ತಿದ್ದಾರೆ.
ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕ ಆರೋಪಿಗಳು ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಮಾರ್ಚ್ 24ಕ್ಕೆ ಮುಂದೂಡಿದೆ. ಅಶ್ಲೀಲ ಕಾಮೆಂಟ್ ಪ್ರಕರಣದಲ್ಲಿ ಬಂಧಿತರಾದ ಆರು ಮಂದಿ ಈಗಾಗಲೇ 66 ದಿನಗಳಿಂದ ಜೈಲಿನಲ್ಲಿ ಇದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ