ಕೆಲವರಿಗೆ ತುಟಿಗಳು ತುಸು ದಪ್ಪ ಇರುತ್ತವೆ. ಅಂಥವರು ತಮ್ಮ ಆಯ್ಕೆ ಪ್ರಕಾರ ಇಷ್ಟ ಬಂದ ಲಿಪ್‌ಸ್ಟಿಕ್ ತೆಗೆದುಕೊಂಡು, ಹೇಗೋ ಬಳಿದುಕೊಂಡು ಅವಸರದಲ್ಲಿ ಪಾರ್ಟಿ, ಶುಭ ಸಮಾರಂಭಗಳಿಗೆ ರೆಡಿಯಾಗಿ ಧಾವಿಸುತ್ತಾರೆ. ಆದರೆ ಅಲ್ಲಿ ಮೇಕಪ್ ಸರಿಹೋಗದೆ, ಹೇಗೋ ಕೆಟ್ಟದಾಗಿ ಬಳಿದ ಲಿಪ್‌ಸ್ಟಿಕ್‌ನಿಂದ ಅಪಹಾಸ್ಯಕ್ಕೆ ಗುರಿಯಾಗುತ್ತಾರೆ. ಹೀಗಾಗುವುದನ್ನು ತಪ್ಪಿಸುವುದು ಹೇಗೆ?
ಮುಖ್ಯವಾಗಿ ದಪ್ಪ ತುಟಿಯ ಹೆಂಗಸರು ಎಲ್ಲಾ ಬಗೆಯ ಲಿಪ್‌ಸ್ಟಿಕ್ ಹಚ್ಚಿಕೊಳ್ಳಲು ಧಾವಿಸಬಾರದು. ಅಂಥವರಿಗೆ ಕೆಲವು ಬಗೆಯ ಶೇಡ್ಸ್ ಮಾತ್ರವೇ ಬ್ಯೂಟಿಫುಲ್ ಅನಿಸುತ್ತದೆ.
ಸಾಮಾನ್ಯಾಗಿ ಲಿಪ್‌ಸ್ಟಿಕ್ ಕೊಳ್ಳಲು ಹೋದಾಗ ಹೆಂಗಸರು ತಮಗೆ ಇಷ್ಟವಾದುದನ್ನೇ ಆರಿಸುತ್ತಾರೆಯೇ ವಿನಾ ತಮಗೆ ಯಾವುದು ಹೊಂದುತ್ತದೆ ಅಂಥದ್ದನ್ನೇ ಕೊಳ್ಳಬೇಕು ಎಂದು ಎಚ್ಚರಿಕೆ ವಹಿಸುವುದಿಲ್ಲ. ತಾವು ಕೊಳ್ಳುವ ಲಿಪ್‌ಸ್ಟಿಕ್ ತಮ್ಮ ಸ್ಕಿನ್‌ಟೋನ್‌ಗೆ ಸೂಟ್ ಆಗುತ್ತದೋ ಇಲ್ಲವೋ ಪರೀಕ್ಷಿಸಬೇಕು. ಸ್ಕಿನ್‌ಟೋನ್ ಮತ್ತು ತುಟಿಗಳನ್ನು ಗಮನದಲ್ಲಿಟ್ಟುಕೊಂಡು ಲಿಪ್‌ಸ್ಟಿಕ್ ಖರೀದಿಸಿದರೆ, ಮುಖದ ಸೌಂದರ್ಯ ಮತ್ತಷ್ಟು ಹೆಚ್ಚುವುದರಲ್ಲಿ ಸಂದೇಹವಿಲ್ಲ. ಹಾಗಿದ್ದರೆ ದಪ್ಪ ತುಟಿಯ ಹೆಂಗಸರು ಎಂಥ ಲಿಪ್‌ಸ್ಟಿಕ್ ಆರಿಸಬೇಕು…. ? ಬನ್ನಿ ವಿವರವಾಗಿ ತಿಳಿಯೋಣ :
ರೆಡ್
ರೆಡ್ ಲಿಪ್‌ಸ್ಟಿಕ್ ಆರಿಸಿಕೊಳ್ಳುವಾಗ ನಿಮ್ಮ ಸ್ಕಿನ್‌ಟೋನ್ ಎಂಥದ್ದೆಂದು ಗಮನಿಸಿ. ನೀವು ಗೌರವರ್ಣದವರಾದರೆ ರಾಯಲ್ ರೆಡ್ ಶೇಡ್ ಲಿಪ್‌ಸ್ಟಿಕ್ ಆರಿಸಬೇಕು. ನಿಮ್ಮದು ಸಾಧಾರಣ ಗೋಧಿ ಬಣ್ಣವಾಗಿದ್ದರೆ, ವೈನ್ ರೆಡ್ ಕಲರ್ ಆರಿಸಿ. ಇದರಿಂದ ನಿಮ್ಮ ಮುಖದ ಸೌಂದರ್ಯ ಇಮ್ಮಡಿಸುತ್ತದೆ.
ಮೋವ್
ದಪ್ಪ ತುಟಿಯ ಹೆಂಗಸರು ತಮಗೆ ಡಾರ್ಕ್ ಶೇಡ್ಸ್ ಲಿಪ್‌ಸ್ಟಿಕ್ ಹೊಂದುವುದಿಲ್ಲ ಎಂದೇ ಭಾವಿಸುತ್ತಾರೆ. ನೀವು ಹಾಗೆ ಅಂದುಕೊಂಡಿದ್ದರೆ, ಅದು ತಪ್ಪು. ಅಂಥವರಿಗೆ ರೆಡ್ ಶೇಡ್ಸ್ ಮಾತ್ರವಲ್ಲ ಮೋವ್ ಶೇಡ್ಸ್ ಕೂಡ ಅಷ್ಟೇ ಚೆನ್ನಾಗಿ ಒಪ್ಪುತ್ತದೆ. ಮೋವ್ ಶೇಡ್ ಬಹಳ ಶೈನಿ ಎನಿಸುವುದರಿಂದ, ಇದನ್ನು ನಿಯಮಿತವಾಗಿ ಬಳಸುವ ಬದಲು ಪಾರ್ಟಿಯಂಥ ಅಪರೂಪದ ಸಂದರ್ಭಗಳಿಗೆ ಮಾತ್ರ ಬಳಸಿರಿ.
ಸಾಫ್ಟ್ ಪಿಂಕ್
ನೀವು ಡಾರ್ಕ್ ಶೇಡ್ಸ್ ಲಿಪ್‌ಸ್ಟಿಕ್ ಬಳಸಲು ಬಯಸುವುದಿಲ್ಲವಾದರೆ, ಸಿಂಪಲ್ ಸೋಬರ್ ಲುಕ್ಸ್ ಗಾಗಿ ಸಾಫ್ಟ್ ಪಿಂಕ್ ಶೇಡ್‌ನ ಲಿಪ್‌ಸ್ಟಿಕ್ ಬಳಸಬಹುದು. ಇದರಿಂದ ದಪ್ಪ ತುಟಿಗಳು ಹೈಲೈಟ್ ಆಗುವುದಿಲ್ಲ. ಈ ಶೇಡ್ಸ್ ಉದ್ಯೋಗಸ್ಥ ವನಿತೆಯರಿಗೂ ಹೆಚ್ಚು ಸೂಕ್ತ. ಆಫೀಸಿನ ವಿಶೇಷ ಮೀಟಿಂಗ್, ಫಂಕ್ಷನ್‌ಗಳಿಗೆ ಮಾತ್ರವಲ್ಲದೆ ದೈನಂದಿನ ಬಳಕೆಗೂ ಇದು ಒಪ್ಪುತ್ತದೆ.
ಬೆರಿ
ನೈಟ್ ಪಾರ್ಟಿ ಅಥವಾ ಯಾವುದೇ ಸಮಾರಂಭದ ಆಕರ್ಷಣೆಯ ಕೇಂದ್ರಬಿಂದು ಆಗಿರಲು ನೀವು ಬಯಸಿದರೆ, ಥಿಕ್ ಲಿಪ್ಸ್ ಮೇಲೆ ಬೆರಿ ಶೇಡ್‌ನ ಲಿಪ್‌ಸ್ಟಿಕ್ ತೀಡಿರಿ. ಡಾರ್ಕ್ ಬೆರಿ ಶೇಡ್ ಲಿಪ್‌ಸ್ಟಿಕ್ ಡ್ರಾಮಾ ಕ್ವೀನ್ಸ್ ಲುಕ್ಸ್ ಗೆ ಬೆಸ್ಟ್ (ಉದಾ : ಧಾರಾವಾಹಿಗಳ ಘಟವಾಣಿ ಪಾತ್ರಧಾರಿಗಳು). ಆದರೆ ಒಂದು ನೆನಪಿಡಿ, ತುಟಿಗಳಿಗೆ ಬೆರಿ ಶೇಡ್ ಬಳಸಿದಾಗ, ಐ ಮೇಕಪ್ ನ್ಯೂಡ್ ಆಗಿರಬೇಕು. ಡಾರ್ಕ್ ಶೇಡ್ ಲಿಪ್‌ಸ್ಟಿಕ್ ಜೊತೆ ಹೆವಿ ಐ ಮೇಕಪ್ ಗಾಡಿಗಾಡಿ ಅನಿಸುತ್ತದೆ.
ಕಾಪರ್
ಥಿಕ್ ಲಿಪ್ಸ್ ಗೆ ಕಾಪರ್ ಶೇಡ್ ಸಹ ಹೆಚ್ಚು ಶೈನಿಂಗ್ ನೀಡುತ್ತದೆ. ಇದರಿಂದ ದಪ್ಪ ತುಟಿಗಳು ತೆಳುವಾಗಿ ತೋರುತ್ತವೆ. ಪಾರ್ಟಿಯಂಥ ವಿಶೇಷ ಸಂದರ್ಭಗಳಲ್ಲಿ ಡಾರ್ಕ್ ಕಾಪರ್ ಶೇಡ್‌ನ ಲಿಪ್‌ಸ್ಟಿಕ್ ಹೆಚ್ಚು ಒಪ್ಪುತ್ತದೆ. ನಿಮಗೆ ದೈನಂದಿನ ಬಳಕೆಗೂ ಬೇಕೆನಿಸಿದರೆ ಇದರ ಲೈಟ್ ಶೇಡ್ಸ್ ಬಳಸಿರಿ. ಬ್ಯೂಟಿಫುಲ್ ಲುಕ್ಸ್ ಗಾಗಿ ಕಾಪರ್ ಶೇಡ್ಸ್ ಬಳಸಿದಾಗ, ಐ ಮೇಕಪ್‌ಗಾಗಿ ಬ್ರೌನ್ ಐ ಲೈನರ್ ಬಳಸಬೇಕು.
ರೋಸ್
ನಿಮಗೆ ಹೆವಿ ಲಿಪ್ ಮೇಕಪ್ ಬೇಡ ಎನಿಸಿದರೆ, ನಿಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ರೋಸ್ ಲಿಪ್‌ಸ್ಟಿಕ್ ಇರಿಸಿಕೊಳ್ಳಿ. ಇದರ ಹಲವು ಶೇಡ್ಸ್ ಲಭ್ಯವಿವೆ. ಸಿಂಪಲ್ ಲುಕ್ಸ್ ಗಾಗಿ ಲೈಟ್ ರೋಸ್ ಶೇಡ್ಸ್ ಆರಿಸಿ ಹಾಗೂ ಯಂಗ್ ಲುಕ್‌ಗಾಗಿ ಇದರ ಫ್ರೆಶ್ ಶೇಡ್ಸ್ ಬಳಸಿರಿ. ದೈನಂದಿನ ಬಳಕೆಗಾಗಿ ನಿಮ್ಮ ಸ್ಕಿನ್ ಟೋನ್‌ಗೆ ಹೊಂದುವ ರೋಸ್ ಶೇಡ್ಸ್ ನ್ನೇ ಆರಿಸಿ.
ನ್ಯೂಡ್
ನೀವು ನಿಮ್ಮ ಕಂಗಳಿಗೆ ಸ್ಮೋಕಿ ಲುಕ್ಸ್ ನೀಡಿ ಹೈಲೈಟ್ ಮಾಡಬಯಸಿದರೆ, ಆಗ ಲಿಪ್ ಮೇಕಪ್‌ಗೆ ನ್ಯೂಡ್ ಶೇಡ್ ಲಿಪ್‌ಸ್ಟಿಕ್ ಆರಿಸಿಕೊಳ್ಳಿ. ನೀವು ಐ ಮೇಕಪ್ ಲೈಟ್ ಇರಿಸಿ, ಲಿಪ್ ಮೇಕಪ್ ಹೈಲೈಟ್ ಮಾಡಬಯಸಿದರೆ ತುಟಿಗಳಿಗೆ ನ್ಯೂಡ್ ತೀಡಿ, ಅದರ ಮೇಲೆ ಲಿಪ್‌ಗ್ಲಾಸ್ ಹಚ್ಚಿ, ಲಿಪ್ ಡಸ್ಟ್ ಉದುರಿಸಿ.
ಸ್ಕಿನ್ ಟೋನ್ ಮತ್ತು ಲಿಪ್ಸ್ ಟೈಪ್‌ನ್ನು ಸೂಟ್ ಮಾಡುವಂಥ ಲಿಪ್‌ಸ್ಟಿಕ್ ಆರಿಸುವಾಗ, ನಿಮ್ಮ ಡ್ರೆಸ್ ನಿಮ್ಮ ಮೇಕಪ್‌ಗೆ ಹೊಂದುವಂತಿರಬೇಕು ಎಂಬುದು ಮುಖ್ಯ, ಇಲ್ಲದಿದ್ದರೆ, ನಿಮ್ಮ ಲುಕ್ಸ್ ಕೆಡುತ್ತದೆ. ಈ ಎಲ್ಲಾ ಸಲಹೆ ಅನುಸರಿಸಿ
ನೀವು ಪಾರ್ಟಿಯ ಆಕರ್ಷಕ ಕೇಂದ್ರಬಿಂದು ಆಗಬಲ್ಲಿರಿ.
– ಜಿ. ಪೂರ್ಣಿಮಾ
ತಜ್ಞರ ಸಲಹೆ
ದಪ್ಪ ತುಟಿಗಳಿಗಾಗಿ ಮ್ಯಾಟ್ ಫಿನಿಶ್ ಯಾ ಕ್ರೀಂ ಟೆಕ್ಸ್ ಚರ್‌ವುಳ್ಳ ಲಿಪ್‌ಸ್ಟಿಕ್ ಆರಿಸಿ. ಗ್ಲಾಸಿ ಲಿಪ್‌ಸ್ಟಿಕ್ ಕೊಳ್ಳುವ ತಪ್ಪು ಮಾಡಬೇಡಿ.
– ಲಿಪ್‌ಗ್ಲಾಸ್ ಹಚ್ಚಬಯಸಿದರೆ, ಇಡೀ ತುಟಿಗಳಿಗೆ ಲಿಪ್‌ಗ್ಲಾಸ್ ಹಚ್ಚುವ ಬದಲು, ತುಟಿಗಳ ಮಧ್ಯೆ ಹಚ್ಚಿಕೊಂಡು ಅದನ್ನು ತುಟಿಗಳಿಂದಲೇ ಸವರಿ ಹರಡಿರಿ. ಇದರಿಂದ ತುಟಿಗಳು ದಪ್ಪಗೆ ಕಾಣಿಸುವುದಿಲ್ಲ.
– ತುಟಿಗಳ ಮೇಕಪ್‌ಗಾಗಿ ಲಿಪ್‌ಲೈನರ್ ಬಳಸುವ ಹಾಗಿದ್ದರೆ, ಲಿಪ್‌ಲೈನರ್‌ನ್ನು ತುಟಿಗಳ ಒಳಭಾಗದಿಂದ ಹಚ್ಚಿರಿ. ಹೊರಭಾಗದಲ್ಲಿ ಹಚ್ಚಿದರೆ, ತುಟಿಗಳು ಇನ್ನಷ್ಟು ದಪ್ಪ ಎನಿಸುತ್ತವೆ.