ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ವೇದಿಕೆ – ಬೆಂಗಳೂರು ಅಂತಾರಾಷ್ಟ್ರೀ ಚಿತ್ರೋತ್ಸವದ ಕೊನೆಯ ದಿನವಾದ ಶುಕ್ರವಾರ, ಕನ್ನಡ ಚಿತ್ರರಂಗದಲ್ಲಿ ೫೦ ವರ್ಷಗಳನ್ನು ಪೂರೈಸಿರುವುದರ ಜೊತೆಗೆ ಕನ್ನಡ ಚಿತ್ರರಂಗಕ್ಕೆ ಗಣನೀಯ ಕೊಡುಗೆ ನೀಡಿದ ಗಣ್ಯರನ್ನು ʼಸುವರ್ಣ ಸಂಭ್ರಮʼ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಮತ್ತು ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಮತ್ತು ನಟಿ, ಮಾಜಿ ಸಚಿವೆ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ, ಅವರನ್ನು ಆತ್ಮೀಯವಾಗಿ ಗೌರಿಸಲಾಯಿತು. ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರ ಪರಾವಾಗಿ ಅವರ ಮಗಳು ಪೂರ್ಣಿಮಾ ರಾಮ್‌ಕುಮಾರ್ ಮತ್ತು ಛಾಯಾಗ್ರಾಹಕ ಎಸ್. ರಾಮಚಂದ್ರ ಅವರ ಪರವಾಗಿ ಅವರ ಸಹೋದರ ಶಂಕರ್ ಐತಾಳ್ ಅವರನ್ನು ಗೌರವಿಸಲಾಯಿತು. ಈ ಸಮಾರಂಭದಲ್ಲಿ ಮುಖ್ಯಮಂತ್ರಿಗಳಾದ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಹಾಜರಿದ್ದರು. ಅಕಾಡೆಮಿ ವತಿಯಿಂದ ಡಾ. ಸಾಧು ಕೋಕಿಲ, ಎಲ್ಲಾ ಗಣ್ಯರನ್ನು ಸ್ವಾಗತಿಸಿ ಸನ್ಮಾನಿಸಿದರು.

ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಮಾತನಾಡಿ, ʼಡಾ.ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಅವರು ಇಲ್ಲದಿರುವುದರಿಂದ ಕನ್ನಡ ಚಿತ್ರರಂಗದ ಪರಿಸ್ಥಿತಿ ಹೀಗಾಗಿದೆ. ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಅವರು ಜೊತೆಗೆ ಇರುತ್ತಿದ್ದರು. ಏನೇ ಸಮಸ್ಯೆ ಬಂದರೂ, ಕೆ.ಜಿ. ರಸ್ತೆಗೆ ಡಾ. ರಾಜಕುಮಾರ್ ಬರುತ್ತಿದ್ದರು. ಅವರು ಬಂದರೆ ಜನರನ್ನು ತಡೆಯೋದು ಕಷ್ಟ ಎಂದು ಪೊಲೀಸ್ ಕಮಿಷನರ್ ಒಮ್ಮೆ ಹೇಳಿದ್ದರು. ಅವರು ಬಂದರೆ ಇಡೀ ರಾಜ್ಯ ನಡಗುತ್ತಿತ್ತು. ಕನ್ನಡ ಚಿತ್ರಗಳಿಗೆ ಶೇ.೧೦೦ ತೆರಿಗೆ ವಿನಾಯ್ತಿಯನ್ನು ಘೋಷಿಸಿ, ಸಚಿವರೇ ಆದೇಶ ಪ್ರತಿಯನ್ನು ಕೆ.ಜಿ. ರಸ್ತೆಗೆ ತಂದಿದ್ದರು. ಒಬ್ಬ ನಾಯಕನಿಲ್ಲದೆ ಇವತ್ತು ಯಾವ ಸ್ಥಿತಿಗೆ ಬಂದಿದ್ದೇವೆ ಎಂದು ಎಲ್ಲರಿಗೂ ಗೊತ್ತಿದೆʼ ಎಂದರು.
ಇವತ್ತಿನ ಕನ್ನಡ ಚಿತ್ರರಂಗದ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ʼಪಾರ್ವತಮ್ಮನವರು ಹೆಚ್ಚಾಗಿ ಕಾದಂಬರಿ ಆಧಾರಿತ ಚಿತ್ರಗಳನ್ನು ಮಾಡುತ್ತಿದ್ದರು. ಆದರೆ, ಈಗ ಯಾವ ಹೀರೋ ಹತ್ತಿರ ಕಾದಂಬರಿಯನ್ನು ತೆಗೆದುಕೊಂಡು ಹೋದರೆ, ಮನಗೆ ಸೇರಿಸುವುದಿಲ್ಲ. ನಾವು ನಮ್ಮ ಇತಿಹಾಸ, ಸಂಸ್ಕೃತಿ, ಮಣ್ಣಿನ ವಾಸನೆಯನ್ನು ಮರೆಯುತ್ತಿದ್ದೇವೆ. ಅದೇ ಕಾರಣಕ್ಕೆ ಜನ ಚಿತ್ರಮಂದಿರದತ್ತ ಬರುತ್ತಿಲ್ಲ. ಡಾ. ರಾಜಕುಮಾರ್ ಅವರಿದ್ದ ಸಮಯ ಸುವರ್ಣ ಯುಗ. ಅವರಿಲ್ಲದಿರುವುದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಿದೆ. ಪರೀಕ್ಷೆ, ಕ್ರಿಕೆಟ್ ಮುಂತಾದ ಬರಗಾಲದಲ್ಲಿ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುತ್ತಿವೆ. ಮಿಕ್ಕಂತೆ ಸಂಕ್ರಾಂತಿ, ಉಗಾದಿ ಸಂದರ್ಭದಲ್ಲಿ ಚಿತ್ರಮಂದಿರಗಳು ಬೇರೆ ಭಾಷೆಗಳಿಗೆ ಸಿಗುತ್ತಿವೆʼ ಎಂದು ಬೇಸರಿಸಿಕೊಂಡರು.

ಕೆ.ವಿ. ಪ್ರಭಾಕರ್ ಅವರ ಸಮ್ಮುಖದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದ ಅವರು, ʼಚಲನಚಿತ್ರೋತ್ಸವನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಾಡುವಂತಾಗಬೇಕು. ಈ ಮೂಲಕ ಅಲ್ಲಿಯ ಜನರಿಗೂ ಸಿನಿಮಾ ಅಭಿರುಚಿ ಬೆಳೆಯಬೇಕು. ಕನಿಷ್ಠ ವರ್ಷಕ್ಕೆ ಮೂರು ದಿನಗಳಾದರೂ ಬೇರೆ ಊರುಗಳಲ್ಲೂ ಚಿತ್ರೋತ್ಸವ ಮಾಡಬೇಕು. ಇದರ ಜೊತೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಒಂದು ಪ್ರತ್ಯೇಕ ನಿರ್ದೇಶನಾಲಯ ಬೇಕು. ಚಿತ್ರೋತ್ಸವದ ಕೆಲಸಗಳು ವರ್ಷಪೂರ್ತಿ ನಡೆಯುತ್ತಿರಬೇಕುʼ ಎಂದು ಅವರು ಹೇಳಿದರು.





