ಹೆಚ್ಚಿನ ಮಹಿಳೆಯರಿಗೆ ತಮ್ಮ ಚರ್ಮ ಯಾವ ಬಗೆಯದು ಎಂಬುದೇ ತಿಳಿದಿರುವುದಿಲ್ಲ. ಅವರು ಕೈಗೆ ಸಿಕ್ಕಿದ ಯಾವುದೋ ಫೇಸ್‌ಕ್ರೀಮ್ ನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಮಾರ್ಕೆಟ್‌ನಲ್ಲಿ ಏನಾದರೂ ಹೊಸ ಬಗೆಯ ಕ್ರೀಂ ಬಂದರೆ ಅಥವಾ ಟಿವಿ ಜಾಹೀರಾತಿನ ಮಾಡೆಲ್ ‌ಏನಾದರೂ ಮೆತ್ತಿಕೊಂಡರೆ, ಕೂಡಲೇ ಅದನ್ನು ಕೊಂಡು ತಾವು ಮೆತ್ತಿಕೊಳ್ಳುತ್ತಾರೆ,

ಅದು ತಮ್ಮ ಚರ್ಮಕ್ಕೆ ಅಗತ್ಯವೋ ಇಲ್ಲವೋ, ಚಿಂತಿಸಲು ಹೋಗುವುದೇ ಇಲ್ಲ! ಪರಿಣಾಮವಾಗಿ ಚರ್ಮ ಕಲೆಗುರುತುಗಳಿಂದ ತುಂಬಿಹೋಗುತ್ತದೆ. ಮುಖ ಒಂದು ಕಡೆ ಶುಷ್ಕ ಅನಿಸಿದರೆ ಮತ್ತೊಂದು ಕಡೆ ಆಯ್ಲಿ ಅನಿಸುತ್ತದೆ. ಇದು ಇನ್ನಷ್ಟು ಮುಂದುವರಿದರೆ ಮುಖದ ಮೇಲೆ ಸುಕ್ಕು, ನೆರಿಗೆ, ಜೋತು ಬೀಳುವಿಕೆ ಹೆಚ್ಚಾಗುತ್ತದೆ.

ನೀವು ನಿಮ್ಮ ಚರ್ಮಕ್ಕೆ ಹೀಗಾಗಬಾರದು ಅಂದುಕೊಂಡರೆ, ಎಲ್ಲಕ್ಕೂ ಮೊದಲು ನಿಮ್ಮ ಚರ್ಮ ನಾರ್ಮಲ್, ಆಯ್ಲಿ, ಡ್ರೈ ಸ್ಕಿನ್‌…. ಎಂಥದು ಎಂಬುದನ್ನು ತಿಳಿದುಕೊಳ್ಳಿ. ನಂತರ ಅದರ ಪ್ರಕಾರವೇ ನೀವು ಕಾಸ್ಮೆಟಿಕ್‌ ಪ್ರಾಡಕ್ಟ್ಸ್ ಆರಿಸಿ ನಿಮ್ಮ ಚರ್ಮದ ಆರೈಕೆ ಮಾಡಬೇಕು. ನಿಮ್ಮದು ಎಂಥ ಚರ್ಮ ಎಂದು ತಿಳಿದುಕೊಳ್ಳುವುದು ಭಾರಿ ಕಷ್ಟವೇನಲ್ಲ. ಇದಕ್ಕಾಗಿ ಚರ್ಮತಜ್ಞರು, ಬ್ಯೂಟೀಷಿಯನ್‌ ಬಳಿ ಹೋಗಬೇಕಾದ ಅಗತ್ಯ ಇಲ್ಲ. ಇದನ್ನು ನೀವೇ ಸುಲಭವಾಗಿ ಮಾಡಿಕೊಳ್ಳಬಹುದು. ಅದನ್ನು ಈ ರೀತಿ ಪರೀಕ್ಷಿಸಿ ತಿಳಿಯಿರಿ :

ಎಲ್ಲಕ್ಕೂ ಮೊದಲು ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಮುಖವನ್ನು ಟಿಶ್ಯು ಪೇಪರ್‌ನಿಂದ ನೀಟಾಗಿ ಒರೆಸಿಕೊಳ್ಳಿ.

ನಾರ್ಮಲ್ ಸ್ಕಿನ್‌ : ಟಿಶ್ಯು ಪೇಪರ್‌ ಮೇಲೆ ಯಾವುದೇ ಕಲೆಗುರುತು ಇಲ್ಲದಿದ್ದರೆ, ಅಂದ್ರೆ ಅರ್ಥ ನಿಮ್ಮದು ನಾರ್ಮಲ್ ಸ್ಕಿನ್‌.

ಆಯ್ಲಿ ಸ್ಕಿನ್‌ : ಟಿಶ್ಯು ಪೇಪರ್‌ನಿಂದ ಹೀಗೆ ಮುಖ ಒರೆಸಿಕೊಂಡ ನಂತರ, ಅದರ ಮೇಲೆ ಜಿಡ್ಡಿನ ಅಂಶ ಧಾರಾಳ ಕಂಡುಬಂದರೆ, ಇದರರ್ಥ ನಿಮ್ಮದು ಆಯ್ಲಿ ಸ್ಕಿನ್‌. ಇಂಥ ಚರ್ಮಕ್ಕೆ ಬೇಗ ಏಜಿಂಗ್‌, ಸುಕ್ಕುಗಳ ಕಾಟವಿರದು. ಆ್ಯಕ್ನೆ, ಮೊಡವೆಗಳ ಸಮಸ್ಯೆ ಎದುರಿಸಬೇಕಾದೀತು.

ಡ್ರೈ ಸ್ಕಿನ್‌ :  ಟಿಶ್ಯು ಪೇಪರ್‌ನಲ್ಲಿ ಜಿಡ್ಡಿನಂಶ ಇಲ್ಲ, ಆದರೆ ಮುಖದ ಚರ್ಮ ಬಹಳ ಎಳೆದಂತಾಗಿದ್ದರೆ, ಯಾವುದೇ ಕಾಂತಿ ಇಲ್ಲದೆ ಡಲ್ ಆಗಿದ್ದರೆ, ಇದರರ್ಥ ನಿಮ್ಮದು ಡ್ರೈ ಸ್ಕಿನ್‌. ಇಂಥ ಶುಷ್ಕ ಚರ್ಮದಲ್ಲಿ ಬೇಗ ನೆರಿಗೆ, ಸುಕ್ಕು ಕೂಡಿಕೊಳ್ಳುತ್ತದೆ.

ಸೆನ್ಸಿಟಿವ್ ‌ಸ್ಕಿನ್‌ : ಚರ್ಮದ ಸ್ಪರ್ಶ ಮಾತ್ರದಿಂದ ಅದು ಉರಿ ಅಥವಾ ನವೆಯ ಸಮಸ್ಯೆ ಎದುರಿಸಬೇಕಾಗಿ ಬಂದರೆ ನಿಮ್ಮದು ಸೆನ್ಸಿಟಿವ್ ‌ಸ್ಕಿನ್‌.

ಕಾಂಬಿನೇಶನ್‌ ಸ್ಕಿನ್‌ : ಯಾವ ಚರ್ಮ ಡ್ರೈ ಆಯ್ಲಿ ಸ್ಕಿನ್‌ನ ಎರಡೂ ಗುಣಗಳನ್ನು ಹೊಂದಿದೆಯೋ ಅದುವೇ ಕಾಂಬಿನೇಶನ್‌ ಸ್ಕಿನ್‌. ಮೂಗಿನ ಮೇಲೆ ಟಿಶ್ಯು ಪೇಪರ್‌ ಒತ್ತಿ ನೋಡಿ. ಅದು ಅಲ್ಲಿ ಜಿಡ್ಡಿನಂಶ ತೋರಿಸಿ, ಕೆನ್ನೆ ಬಳಿ ಒತ್ತಿದಾಗ ಅಲ್ಲಿ ಡ್ರೈ ಎನಿಸಿದರೆ, ಇದರರ್ಥ ನಿಮ್ಮದು ಕಾಂಬಿನೇಶನ್‌ ಸ್ಕಿನ್‌.

ಆಯ್ಲಿ ಸ್ಕಿನ್‌ ಆರೈಕೆ

ಇಂಥ ಚರ್ಮಕ್ಕೆ ಮೊಸರು ಅತ್ಯುತ್ತಮ ಆಯ್ಕೆ. ಅರ್ಧ ಕಪ್‌ ಮೊಸರಿಗೆ 1 ಚಮಚ ಕಡಲೆಹಿಟ್ಟು ಬೆರೆಸಿಕೊಂಡು ಮುಖದ ಮೇಲೆ ಅದನ್ನು ಹಚ್ಚಿಕೊಳ್ಳಿ. ಅರ್ಧ ಗಂಟೆ ಹಾಗೇ ಬಿಟ್ಟು, ಚೆನ್ನಾಗಿ ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ.

ಹಸಿ ಆಲೂಗಡ್ಡೆಯನ್ನು ಮಿಕ್ಸಿಗೆ ಹಾಕಿ ರಸ ಸಿದ್ಧಪಡಿಸಿ ಮುಖಕ್ಕೆ ಸವರಿ ಒಣಗಲು ಬಿಡಿ ಅಥವಾ ಸಿಪ್ಪೆ ಹೆರೆದ ಆಲೂ ಪೇಸ್ಟ್ ಸಿದ್ಧಪಡಿಸಿ ಮುಖಕ್ಕೆ ಫೇಸ್‌ ಪ್ಯಾಕ್‌ ನೀಡಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ಮುಲ್ತಾನಿ ಮಿಟ್ಟಿ (ಚೌಳು ಮಣ್ಣು)ಗೆ ಗುಲಾಬಿ ಜಲ ಬೆರೆಸಿ ಪ್ಯಾಕ್‌ ಸಿದ್ಧಪಡಿಸಿ. ಅರ್ಧ ಗಂಟೆ ಬಿಟ್ಟು, ಒಣಗಿದ ಇದನ್ನು ತಣ್ಣೀರಿನಿಂದ ತೊಳೆಯಿರಿ. ಮುಖದ ಹೆಚ್ಚುವರಿ ಜಿಡ್ಡಿನಂಶ ತೊಲಗಿಸುವಲ್ಲಿ ಇದು ಹೆಚ್ಚಿನ ಪಾತ್ರ ವಹಿಸುತ್ತದೆ.

ಕಡಲೆಹಿಟ್ಟಿಗೆ ನಿಂಬೆರಸ ಬೆರೆಸಿ ಪೇಸ್ಟ್ ಮಾಡಿ, ಮುಖಕ್ಕೆ ಹಚ್ಚಿರಿ. 10 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ನಿಂಬೆ ಚರ್ಮದಲ್ಲಿನ ಜಿಡ್ಡನ್ನು ಸುಲಭವಾಗಿ ನಿವಾರಿಸುತ್ತದೆ.

ಮೊಟ್ಟೆಯ ಬಿಳಿ ಭಾಗಕ್ಕೆ ನಿಂಬೆ ರಸ  ಬೆರೆಸಿಕೊಂಡು ಚೆನ್ನಾಗಿ  ಗೊಟಾಯಿಸಿ, ಮುಖಕ್ಕೆ ನೀಟಾಗಿ ಹಚ್ಚಿರಿ. 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಡ್ರೈ ಸ್ಕಿನ್

ಹಸಿ ಹಾಲನ್ನು ಹತ್ತಿ ಉಂಡೆಯಿಂದ ಮುಖ ಮತ್ತು ಕುತ್ತಿಗೆಗೆ ಸವರಿಕೊಳ್ಳಿ. 20 ನಿಮಿಷ ಬಿಟ್ಟು ತಿಳಿ ನೀರಿನಿಂದ ಮುಖ ತೊಳೆಯಿರಿ. ಮುಖದಲ್ಲಿ ನಿಮಗೆ ಹೆಚ್ಚು ಆರ್ದ್ರತೆ (ಮಾಯಿಶ್ಚರ್‌) ಬೇಕಿದ್ದರೆ, ಹಾಲಿನ ಕೆನೆಯಿಂದ ಮಸಾಜ್‌ ಮಾಡಿ. 10-15 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. ಇದರಿಂದ ಚರ್ಮ ಕಾಂತಿಯುತವಾಗಿ ನಳನಳಿಸುತ್ತದೆ.

ಹತ್ತಿ ಉಂಡೆ ಅಥವಾ ಕಾಟನ್‌ ಪ್ಯಾಡ್‌ನಲ್ಲಿ ಹಿಪ್ಪೆ ಎಣ್ಣೆ (ಆಲಿವ್ ‌ಆಯಿಲ್)ಯನ್ನು ಅದ್ದಿಕೊಂಡು, ಅದನ್ನು ಮೇಕಪ್‌ ರಿಮೂವರ್‌ತರಹ ಬಳಸಿ. ಇದು ಚರ್ಮವನ್ನು ಸ್ವಚ್ಛಗೊಳಿಸುವುದರ ಜೊತೆ, ಅದನ್ನು ಮಾಯಿಶ್ಚರೈಸ್‌ಗೊಳಿಸುತ್ತದೆ.

ಡ್ರೈ ಸ್ಕಿನ್‌ ಬಲು ಬೇಗ ಪರಿಸರ ಮಾಲಿನ್ಯ ಹಾಗೂ ಸೂರ್ಯನ ತೀಕ್ಷ್ಣ UV ಕಿರಣಗಳ ಬೇಟೆಗೆ ಗುರಿಯಾಗುತ್ತದೆ. ಆದ್ದರಿಂದ ಸದಾ ಸನ್‌ಸ್ಕ್ರೀನ್‌ ಬಳಸಲು ಮರೆಯದಿರಿ. ಇದರ ಬಳಕೆ ಚರ್ಮವನ್ನು ಹಲವು ಸಮಸ್ಯೆಗಳಿಂದ ದೂರವಿಡುತ್ತದೆ.

ಮಾಗಿದ ಬಾಳೆಹಣ್ಣು ಕಿವುಚಿ, ಅದಕ್ಕೆ ಮಾಗಿದ ಪರಂಗಿ ಹಣ್ಣು ಬೆರೆಸಿ ಚೆನ್ನಾಗಿ ಮಸೆದಿಡಿ. ಇದನ್ನು ಮುಖಕ್ಕೆ ನೀಟಾಗಿ ಸವರಿ. 15 ನಿಮಿಷ ಬಿಟ್ಟು ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖದ ಚರ್ಮದಲ್ಲಿ ಬಿಗಿತ ಬರುತ್ತದೆ.

2 ಚಮಚ ಆ್ಯಲೋವೇರಾ ಜೂಸ್‌ಗೆ 1 ಮೊಟ್ಟೆಯ ಬಿಳಿ ಭಾಗ ಬೆರೆಸಿ ಗೊಟಾಯಿಸಿ. ಈ ಮಿಶ್ರಣದಿಂದ ಮುಖವನ್ನು ನಿಧಾನ ಮಸಾಜ್‌ ಮಾಡಿ. ಮಸಾಜ್‌ ನಂತರ ಅರ್ಧ ಗಂಟೆ ಇದನ್ನು ಹಾಗೇ ಬಿಡಿ. ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.

ಸೆನ್ಸಿಟಿವ್ ‌ಸ್ಕಿನ್‌

ಮೊದಲು ಮುಖವನ್ನು ಕ್ಲೆನ್ಸರ್‌ನಿಂದ ತೊಳೆಯಿರಿ. ಇದಕ್ಕಾಗಿ ಮೈಲ್ಡ್ ಸಲ್ಫೇಟ್‌ ಫ್ರೀ ಕ್ಲೆನ್ಸರ್‌ ಹೆಚ್ಚು ಉತ್ತಮ.

ಟೋನಿಂಗ್‌ಗಾಗಿ ಗ್ರೀನ್‌ ಟೀ ಬಳಕೆ ಹೆಚ್ಚು ಸೂಕ್ತ. ಆದರೆ ಚರ್ಮದಲ್ಲಿನ ಆ್ಯಕ್ನೆ, ಮೊಡವೆ ತೊಲಗಿಸಲು ಆಲ್ಕೋಹಾಲ್ ‌ಫ್ರೀ ಟೋನರ್‌ ಬಳಸಿಕೊಳ್ಳಿ.

ಇಂಥ ಚರ್ಮಕ್ಕಾಗಿ ಯಾವುದೇ ತರಹದ ಸುವಾಸನೆರಹಿತ ಮಾಯಿಶ್ಚರೈಸರ್‌ನ್ನೇ ಬಳಸಬೇಕು. ಇಲ್ಲದಿದ್ದರೆ ಅಲರ್ಜಿ ಆದೀತು.

ಸೆನ್ಸಿಟಿವ್ ಸ್ಕಿನ್‌ನ್ನು ಶುಚಿಗೊಳಿಸಲು, ಬಹಳ ತಣ್ಣಗಿನ ಅಥವಾ ಬಹಳ ಬಿಸಿ ನೀರಿನ ಬಳಕೆ ಎರಡೂ ತಪ್ಪು. ಸದಾ ಸುಖೋಷ್ಣತೆ ಇರಲಿ.

ಇಂಥ ಚರ್ಮದವರಿಗೆ ಎಲ್ಲಾ ಬಗೆಯ ಫೇಸ್‌ ಮಾಸ್ಕ್ ಕೆಲಸ ಮಾಡುವುದಿಲ್ಲ. ಇದಕ್ಕಾಗಿ 2 ಚಮಚ ಜವೆಗೋಧಿಯ ಹಿಟ್ಟನ್ನು ಅರ್ಧ ಕಪ್‌ ಮೊಸರಿನಲ್ಲಿ ಕದಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಚರ್ಮದಲ್ಲಿನ ಮಾಯಿಶ್ಚರ್‌ ಹಾಳಾಗುವುದಿಲ್ಲ, ಬದಲಿಗೆ ಡೆಡ್‌ ಸ್ಕಿನ್‌ ತೊಲಗುತ್ತದೆ.

ಕಾಂಬಿನೇಶನ್‌ ಸ್ಕಿನ್‌

IB125527_125527160642537_SM404204

ಇಂಥ ಚರ್ಮದ ಆರೈಕೆಗಾಗಿ ದಿನವಿಡೀ 2-3 ಲೀ. ನೀರನ್ನು ಅಗತ್ಯ ಕುಡಿಯಿರಿ. ಇದರಿಂದ ಚರ್ಮದ ಮಾಯಿಶ್ಚರ್‌ ಉಳಿಯುತ್ತದೆ. ದೇಹದಲ್ಲಿನ ವಿಷಯುಕ್ತ ಕೆಮಿಕಲ್ಸ್, ಹೊರದಬ್ಬಲು ನೀರು ಅತ್ಯಗತ್ಯವಾಗಿ ಬೇಕು.

ಕಿತ್ತಳೆಯ ಕುಸುಮೆಗಳನ್ನು ಮೊಸರಿಗೆ ಬೆರೆಸಿ, ಕಡೆದು, ಆ ಪೇಸ್ಟ್ ನ್ನು ಮುಖಕ್ಕೆ ಹಚ್ಚಿರಿ. 15 ನಿಮಿಷ ಬಿಟ್ಟು ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಕಿತ್ತಳೆಯಿಂದ ಚರ್ಮಕ್ಕೆ ವಿಟಮಿನ್ಸ್ ಪೂರೈಕೆಯಾಗುತ್ತದೆ. ಇದು ಚರ್ಮವನ್ನು ಸದಾ ಯಂಗ್ ಎನರ್ಜಿಟಿಕ್‌ ಆಗಿ ಇಡುತ್ತದೆ. ಮೊಸರಿನಿಂದ ಚರ್ಮಕ್ಕೆ ಹೆಚ್ಚಿನ ಕಸುವು ದೊರಕುತ್ತದೆ, ಜೊತೆಗೆ ಮುಖವನ್ನು ಸೂಕ್ತವಾಗಿ ಮಾಯಿಶ್ಚರೈಸ್‌ ಸಹ ಮಾಡುತ್ತದೆ.

ಸೌತೆ ರಸಕ್ಕೆ ಜೇನು ಬೆರೆಸಿ ಮುಖಕ್ಕೆ ಹಚ್ಚಿ 10 ನಿಮಿಷ ಹಾಗೇ ಬಿಡಿ, ನಂತರ ಮುಖ ತೊಳೆಯಿರಿ. ಇದು ಚರ್ಮವನ್ನು ಮಾಯಿಶ್ಚರೈಸ್‌ಗೊಳಿಸಿ, ಹೆಚ್ಚು ಟೈಟ್‌ ಮಾಡುತ್ತದೆ. ಜೊತೆಗೆ ಚರ್ಮದ ಟ್ಯಾನಿಂಗ್‌ ಸಹ ದೂರವಾಗುತ್ತದೆ.

1 ಚಮಚ ಆ್ಯಲೋವೇರಾ ಜೆಲ್‌ಗೆ ಅರ್ಧ ಚಮಚ ಅಕ್ಕಿ ಹಿಟ್ಟು, ತೆಂಗಿನ ಹಾಲು ಬೆರೆಸಿ ಮುಖಕ್ಕೆ ಹಚ್ಚಿ, 15 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದರ ಸತತ ಬಳಕೆಯಿಂದ ಮುಖ ಸದಾ ಶುಚಿತ್ವ ಪಡೆಯುತ್ತದೆ, ಕಾಂತಿ ಗಳಿಸುತ್ತದೆ.

ಓಟ್ಸ್ ಪೌಡರ್‌ಗೆ ಮೊಸರು ಬೆರೆಸಿ ಪೇಸ್ಟ್ ತಯಾರಿಸಿ ಮುಖದ ಟೀಝೋನ್‌ಗೆ ಹಚ್ಚಿರಿ, ಕೆನ್ನೆಗಳಿಗಲ್ಲ! 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ 1-2 ಸಲ ಅಗತ್ಯ ಹೀಗೆ ಮಾಡಿ, ಕ್ರಮೇಣ ಚರ್ಮ ಕಾಂತಿಯುತ ಆಗುತ್ತದೆ.

– ಸುಶೀಲಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ