ಮಧುಚಂದ್ರ ಎಂದರೇನೇ ಹಾಗೇ! ಪತಿ ತನ್ನ ಪತ್ನಿಗೆ ಧಾರಾಳ ಪ್ರೇಮ ವ್ಯಕ್ತಪಡಿಸಲು ಕಾತರನಾಗಿರುತ್ತಾನೆ. ಹಾಗೆಯೇ ಸಂಗಾತಿ ತನ್ನ ರೂಪದಿಂದ ಸಂಪೂರ್ಣ ಮಾರುಹೋಗಲಿ ಎಂದು ಪತ್ನಿ ಬಯಸುತ್ತಾಳೆ. ಹೀಗಾಗಿ ತನ್ನ ಪತಿಗಾಗಿ ವಿಶೇಷವಾಗಿ ಅಲಂಕರಿಸಿಕೊಂಡು ಸಿದ್ಧಳಾಗ ಬಯಸುತ್ತಾಳೆ. ಆದರೆ ಮಧುಚಂದ್ರದ ಮಧ್ಯೆ ಮೇಕಪ್‌ ಮಾಡಿಕೊಳ್ಳಲು ಸಮಯಾಕಾಶವಿಲ್ಲ ಅಥವಾ ಹೆಚ್ಚಿನ ಮೇಕಪ್‌ ಸಾಮಗ್ರಿ ಎಲ್ಲಿಂದ ಬರಬೇಕು? ಮದುವೆಯ ದಿನಗಳಲ್ಲಿ ಚೆನ್ನಾಗಿ ಉಟ್ಟುತೊಟ್ಟು ಅಲಂಕರಿಸಿಕೊಂಡು ಪುಟ್ಟಕ್ಕನಾಗಿ ಮಿಂಚಿ, ಈಗ ಮೇಕಪ್‌ ಇಲ್ಲದೆ ಹಾಗೇ ಇದ್ದರೆ ಅವಳು ಅಂದಗೇಡಿ ಎನಿಸುತ್ತಾಳೆ. ಹಾಗೆಂದು ಹನೀಮೂನ್‌ಗೆ ಹೊರೆ ಸಾಮಗ್ರಿ ತೆಗೆದುಕೊಂಡು ಹೋಗುವುದೂ ಸುಲಭವಲ್ಲ. ಹೀಗಾಗಿ ನೀವು ಸುಲಭವಾಗಿ ಕನಿಷ್ಠ ಸಮಯದಲ್ಲಿ ಗರಿಷ್ಠ ಸೌಂದರ್ಯ ಗಳಿಸಲು ಇಲ್ಲಿನ ಸಲಹೆ ಅನುಸರಿಸಿ ನಿಮ್ಮ ಮಧುಚಂದ್ರವನ್ನು ಸ್ಮರಣೀಯವಾಗಿಸಿಕೊಳ್ಳಿ :

ಚಂದ್ರಮುಖಿಯಾಗಿ ಬೆಳಗಲು

ಮೇಕಪ್‌ಗೆ ಮೊದಲು BB CC ಅಥವಾ DD ಕ್ರೀಂ ಹಚ್ಚಿರಿ. ಈ ಕ್ರೀಮುಗಳ ವೈಶಿಷ್ಟ್ಯ ಎಂದರೆ ಹಲವು ಕ್ರೀಮುಗಳ ಕೆಲಸವನ್ನು ಇವು ಒಂದೇ ಮಾಡುತ್ತವೆ. ಇನ್ನು ಹಚ್ಚಿದ ನಂತರ ಪ್ರೈಮರ್‌, ಕನ್ಸೀಲರ್‌, ಫೌಂಡೇಶನ್‌ ಯಾವ ಸನ್‌ಸ್ಕ್ರೀನ್‌ ಹಚ್ಚಬೇಕಾದ ಅಗತ್ಯವಿಲ್ಲ.

BB ಕ್ರೀಮನ್ನು ಬ್ಲೆಮಿಶ್‌ ಬಾಮ್ ಅಥವಾ ಬ್ಯೂಟಿ ಬಾಮ್ ಎಂದೂ ಹೇಳುತ್ತಾರೆ. ಇದು ಚರ್ಮದಲ್ಲಿ ಸುಲಭವಾಗಿ ವಿಲೀನವಾಗುತ್ತದೆ. ಇದು ಚರ್ಮವನ್ನು ಪೂರ್ತಿ ಕವರ್‌ ಮಾಡಿ, ಅದು ಚೆನ್ನಾಗಿ ಬೆಳಗುವಂತೆ ಮಾಡುತ್ತದೆ. ಮುಖ ತುಸು ಅನ್‌ಈವೆನ್‌ ಬಣ್ಣ ಹೊಂದಿದ್ದರೆ CC ಕ್ರೀಂ ಬಳಸಬೇಕು. ಚರ್ಮದಲ್ಲಿ ವಿಲೀನಗೊಂಡು ಇದು ಹೆಚ್ಚಿನ ಕಾಂತಿ ನೀಡುತ್ತದೆ. ಈ ಕಾರಣದಿಂದಲೇ ಇದನ್ನು ಕಲರ್‌ ಕಂಟ್ರೋಲ್‌ ಕ್ರೀಂ ಎಂದೂ ಹೇಳುತ್ತಾರೆ.

ಚರ್ಮದಲ್ಲಿ ಪಿಗ್ಮೆಂಟೇಶನ್‌ ಯಾ ಕಲೆಗುರುತುಗಳಿದ್ದರೆ, ಡೈನಾಮಿಕ್‌ ಡೂ ಆಲ್ ಯಾ ಡೇಲಿ ಡಿಫೆನ್ಸ್ ಎಂಬ ಹೆಸರುಳ್ಳ DD ಕ್ರೀಂ ಬಳಸಿರಿ. ಮುಖದ ಜೊತೆಗೆ ಕುತ್ತಿಗೆ ಹಾಗೂ ಅದರ ಹಿಂಭಾಗದಲ್ಲೂ ಕ್ರೀಂ ಹಚ್ಚುವುದು ಲೇಸು.

ಗುಲಾಬಿ ಕೆನ್ನೆ

ನಿಮ್ಮ ಚರ್ಮಕ್ಕೆ ತಕ್ಕಂತೆ ಕೆನ್ನೆ ಮೇಲೆ ಬ್ಲಶರ್‌ನ ಬಳಕೆಯಿಂದ ಅದು ಸುಂದರವಾಗಿ ಹೊಳೆಯುತ್ತದೆ. ನವ ವಿವಾಹಿತರು ಮಧುಚಂದ್ರಕ್ಕೆ ಹೋದಾಗ, ಪೀಚ್‌ ಅಥವಾ ಚೆರ್ರಿ ಪಿಂಕ್‌ ಕಲರ್‌ ನಿಮ್ಮ ಕೆನ್ನೆಗೆ ಹೆಚ್ಚಿನ ರಂಗು ತುಂಬಬಲ್ಲದು. ಲೈಟ್‌ ಬಣ್ಣದ ಉಡುಗೆಯ ಜೊತೆ ಪ್ಲಮ್ ಯಾ ಮೆರೂನ್‌ ಹಾಗೂ ಗಾಢ ಬಣ್ಣದ ಉಡುಗೆ ಜೊತೆ ಬೇಜ್‌ ಯಾ ಆಲ್ಮಂಡ್‌ ಉತ್ತಮ ಎನಿಸುತ್ತದೆ. ಚರ್ಮವನ್ನು ಗಮನದಲ್ಲಿಟ್ಟುಕೊಂಡು ಡ್ರೈ ಯಾ ನಾರ್ಮಲ್ ಸ್ಕಿನ್‌ಗಾಗಿ ಕೇಕ್‌ ಕ್ರೀಂ ಬೇಸ್ಡ್ ಬ್ಲಶರ್‌ ಸರಿ ಇರುತ್ತದೆ. ಅದೇ ಆಯ್ಲಿ ಸ್ಕಿನ್‌ಗಾದರೆ ಪೌಡರ್‌ ಬೇಸ್ಡ್ ಬ್ಲಶರ್‌ ಬ್ಯೂಟಿಫುಲ್ ಎನಿಸುತ್ತದೆ. ಈ ಬ್ಲಶ್‌ ಹಚ್ಚಲು ಹೆಚ್ಚಿನ ಸಮಯ ಬೇಡ, ಆದರೆ ಇದರ ಬಳಕೆಯಿಂದ ಕೆನ್ನೆ ಮಾತ್ರವಲ್ಲದೆ, ಇಡೀ ಮುಖ ಕೆಂಪುಕೆಂಪಾಗಿ ಗುಲಾಬಿಯಂತೆ ಅರಳುತ್ತದೆ.

ಕಾಡುವ ಕಂಗಳು

ಕಂಗಳಿಗೆ ಕಾಡಿಗೆ ತೀಡಿರಿ. ಇದು ವಾಟರ್‌ಪ್ರೂಫ್‌ ಆಗಿದ್ದರೆ ಇನ್ನೂ ಉತ್ತಮ. ಮೇಕಪ್‌ಗೆ ನಿಮಗೆ ಸಾಕಷ್ಟು ಸಮಯ ಇದೆ ಎನಿಸಿದರೆ, ಡ್ರೆಸ್‌ಗೆ ಹೊಂದುವ ಐ ಶ್ಯಾಡೋ ಹಚ್ಚಿರಿ. ಮಧುಚಂದ್ರಕ್ಕೆ ಹೋದಾಗ ಯಾವುದೇ ಉತ್ತಮ ಕಂಪನಿಯ 2-3 ಶೇಡ್ಸ್ ವುಳ್ಳ ಪ್ಯಾಕ್‌ ಸಾಕು. ಇದರಲ್ಲಿ ಲೈಟ್‌  ಡಾರ್ಕ್‌ ಎರಡೂ ಶೇಡ್ಸ್ ಇರುತ್ತವೆ. ಯಾವಾಗ ಸಮಯ ಇಲ್ಲವೋ, ಐ ಲೈನರ್‌ ಬಳಸಿಕೊಳ್ಳಿ. ನಿಮ್ಮ ಹುಬ್ಬು ಅಡ್ಡಾದಿಡ್ಡಿ ಎನಿಸಿದರೆ, ಟ್ರಿಂ ಮಾಡಲು ಟೈಂ ಇಲ್ಲದಿದ್ದರೆ, ಅದಕ್ಕೆ ಐ ಬ್ರೋ ಪೆನ್ಸಿಲ್‌ನಿಂದ ಸರಿಯಾದ ಆಕಾರ ನೀಡಿ.

ಮಸ್ಕರಾ ಕಂಗಳ ಅಂದ ಹೆಚ್ಚಿಸುತ್ತದೆ. ಆದರೆ ಮಧುಚಂದ್ರದಲ್ಲಿ ಕೇವಲ ಟ್ರಾನ್ಸ್ ಪರೆಂಟ್‌ ವಾಟರ್‌ಪ್ರೂಫ್‌ ಮಸ್ಕರಾ ಮಾತ್ರ ಬಳಸಬೇಕು. ಟ್ರಾನ್ಸ್ ಪರೆಂಟ್‌ ಮಸ್ಕರಾ ಹಚ್ಚುವುದರಿಂದ ಐ ಮೇಕಪ್‌ ಲೈಟ್‌ ಆಗುತ್ತದೆ, ಕಣ್ಣೆವೆಗಳೂ ಸ್ಪಷ್ಟ ಕಾಣಿಸುತ್ತದೆ.
ತನುಮನ ಸುಗಂಧಿತ

ಮದುವೆಯ ಸಂದರ್ಭದಲ್ಲಿ ಬ್ರೈಡಲ್ ರೊಟೀನ್‌ ಅನುಸಾರ ಅನಗತ್ಯ ಕೂದಲ ನಿವಾರಣೆ ಆಗಿರುತ್ತದೆ. ಆದರೂ ಹನಿಮೂನ್‌ ನಲ್ಲಿ ಇದು ಅಡ್ಡಿಪಡಿಸುತ್ತಿದ್ದರೆ, ವ್ಯಾಕ್ಸಿಂಗ್‌ ಕ್ರೀಂ ಬಳಸಿ ಇದನ್ನು ನಿವಾರಿಸಿಕೊಳ್ಳಿ. ಇದಕ್ಕಾಗಿ ಡೆಪ್ಲಿಟರಿ ಕ್ರೀಂ ಸಹ ಬಳಸಬಹುದು. ಸ್ವಚ್ಛ ಶುಭ್ರವಾದ ದೇಹದಲ್ಲಿ ಡಿಯೋ ಯಾ ಪರ್ಫ್ಯೂಮ್ ಬಳಸಿರಿ. ಪಾರ್ಟ್‌ನರ್‌ ಬಯಸುವಂಥ ಪರ್ಫ್ಯೂಮನ್ನೇ ಬಳಸುವುದು ಲೇಸು. ಚಾಕಲೇಟ್‌ ಯಾ ಡವ್ ಪರ್ಫ್ಯೂಮ್ ಎಲ್ಲರಿಗೂ ಇಷ್ಟವಾಗುತ್ತದೆ, ಟ್ರೈ ಮಾಡಿ ನೋಡಿ!

ಆಕರ್ಷಕ ತುಟಿಗಳಿಗಾಗಿ

ಇತ್ತೀಚೆಗೆ ವಿಭಿನ್ನ ಬಗೆಯ ಲಿಪ್‌ಸ್ಟಿಕ್‌ನ ಹಲವು ಶೇಡ್ಸ್ ಲಭ್ಯ. ಬೇರೆ ಬೇರೆ ಸಂದರ್ಭಗಳಲ್ಲಿ ವಿಭಿನ್ನ ಬಗೆಯ ಲಿಪ್‌ಸ್ಟಿಕ್ಸ್ ಬಳಸಿರಿ. ಮಧುಚಂದ್ರ ಪೂರ್ತಿ ತುಟಿಗಳು ಆಕರ್ಷಕವಾಗಿರಲು ಸರಿಯಾದ ಶೇಡ್‌ ಮತ್ತು ಪ್ರಕಾರದ ಲಿಪ್‌ಸ್ಟಿಕ್‌ ಬಳಸಿ ಇದರ ಚೆಲುವು ಹೆಚ್ಚಿಸಿ.
ಈ ಸಂದರ್ಭಕ್ಕಾಗಿ ಕಿಸ್‌ ಪ್ರೂಫ್‌ ಲಿಪ್‌ಸ್ಟಿಕ್‌ ಅತ್ಯುತ್ತಮ ಆಯ್ಕೆ ಎನ್ನಬಹುದು. ಸುತ್ತಾಡಲೆಂದು ಹೊರಗೆ ಹೊರಟಾಗ ಬಹಳ ಹೊತ್ತು ಉಳಿಯುವಂಥ ಲಿಪ್‌ಸ್ಟಿಕ್‌ ಬಳಸುವುದೇ ಲೇಸು. ರೋಸ್‌ ಪಿಂಕ್‌, ಕೋರಲ್ ಯಾ ಕಾಫಿ ಶೇಡ್ಸ್ ಯಾವುದೇ ಸ್ಕಿನ್‌ ಟೋನಿಗೂ ಹೊಂದುತ್ತವೆ. ಇನ್ನು ಹೆಚ್ಚು ಆಕರ್ಷಕಗೊಳಿಸಲು ಶಿಮರ್‌ ಯಾ ಗ್ಲಾಸ್‌ ಲಿಪ್‌ಸ್ಟಿಕ್‌ ಬಳಸಿರಿ. ಇದರಲ್ಲಿ ಡಾರ್ಕ್‌ ವೆಲ್ವೆಟ್‌, ಚಾಕಲೇಟ್‌ ಬ್ರೌನ್‌, ಹಾಟ್‌ ರೆಡ್‌, ಕೆಂಪು ಬ್ರೌನ್‌ಗಳ ಶೇಡ್ಸ್ ಬಹಳ ಸುಂದರ ಎನಿಸುತ್ತವೆ.

ತುಟಿಗಳು ಕಾಂತಿಯುತ, ಹೊಳೆಯುತ್ತಿರುವ ಹಾಗೆ ಮಾಡಲು ಮತ್ತು ಬಹು ಹೊತ್ತು ಬಾಳಿಕೆ ಬರಲು ಮತ್ತೊಂದು ಉತ್ತಮ ಆಪ್ಶನ್‌ ಎಂದರೆ ಲಿಪ್‌ ಸ್ಟಾನ್‌. ಇದು ಬಹುತೇಕ ದ್ರವ ರೂಪದಲ್ಲಿ ಬರುತ್ತದೆ. ಅದು ಬಣ್ಣ, ಆಯಿಲ್‌ಗಳ ಮಿಶ್ರಣ. ಇದರಿಂದ ತುಟಿಗಳು ಒಣಗಿದಂತಾಗುತ್ತದೆ. ಹೀಗಾಗಿ ಇದನ್ನು ಬಳಸುವ ಮೊದಲು ಕ್ರೀಂ ಯಾ ಲಿಪ್‌ಬಾಮ್ ಅಗತ್ಯ ಬಳಸಿರಿ. ಮಧುಚಂದ್ರದಲ್ಲಿ ಇಂಥ ಒದ್ದೆ ತುಟಿಗಳು ಪತಿಯನ್ನು ಮಂತ್ರಮುಗ್ಧ ಆಗಿಸುತ್ತದೆ. ಈ ಪರಿಯ ತುಟಿಗಳ ಪ್ರಣಯ ನಿವೇದನೆ ಡಿಫರೆಂಟ್‌ ಆಗಿರುತ್ತದೆ.

ಸುಂದರ ಕೈಗಳು

ಕೈಗಳ ಚೆಲುವು ಎಷ್ಟೋ ಪಟ್ಟು ಉಗುರುಗಳನ್ನೇ ಆಧರಿಸಿವೆ. ಇತ್ತೀಚೆಗಂತೂ ನೇಲ್ ಆರ್ಟ್‌ ಬಲು ಚಾಲ್ತಿಯಲ್ಲಿದೆ. ಮಧುಚಂದ್ರದಲ್ಲಿ ಉಗುರಿನ ಸಿಂಗಾರಕ್ಕಾಗಿ ಹೆಚ್ಚಿನ ಸಮಯ ಇರುವುದಿಲ್ಲ. ಹಾಗೆಂದು ಇದನ್ನು ನಿರ್ಲಕ್ಷಿಸಲೂಬಾರದು. ಇದಕ್ಕಾಗಿ ಅತ್ಯುತ್ತಮ ವಿಧಾನ ಎಂದರೆ ಕೆಲವು ಅತ್ಯಾಕರ್ಷಕ ನೇಲ್‌ಪೇಂಟ್ಸ್ ಕೊಂಡೊಯ್ಯುವುದು. ಉದಾ : ರೇನ್‌ಬೋ ಕಲರ್‌, ಮಿಂಟ್‌ ಗ್ರೀನ್‌ ಯಾ ಮ್ಯಾಟ್‌ ಬ್ಲ್ಯಾಕ್‌. ಕೈಗಳಲ್ಲಿ ಇನ್ನೂ ಮದುವೆಯ ಕೆಂಪಿನ ಬಳೆ ಹಾಗೇ ಇದ್ದರೆ, ಲೈಟ್‌ ಕಲರ್‌ ನೇಲ್‌ಪೇಂಟ್‌ ಚೆನ್ನಾಗಿರುತ್ತದೆ. ಕೆಂಪಿನ ಬಳೆಗೆ ಬದಲಾಗಿ ಬ್ರೇಸ್ಲೆಟ್‌, ಇತರ ಗಾಜಿನ ಬಳೆಗಳಿದ್ದರೆ ನೇಲ್‌ಪಾಲಿಶ್‌ ನಂತರ `ಗ್ಲಿಟರ್‌ ಡಸ್ಟ್’ ಬಳಸಲು ಮರೆಯದಿರಿ, ಅದು ಬಳಸಲಿಕ್ಕೂ ಸುಲಭ.

ರೇಷ್ಮೆಯಂಥ ಕೂದಲಿಗಾಗಿ

ಚೆಲುವಾದ ಕೂದಲು ಹೆಣ್ಣಿನ ಸೌಂದರ್ಯಕ್ಕೆ ಕಳಸವಿಟ್ಟಂತೆ. ಶ್ಯಾಂಪೂ ಜೊತೆ ಕಂಡೀಶನರ್‌ ಬಳಸಲು ಮರೆಯದಿರಿ. ಕೂದಲು ಶಾರ್ಟ್‌ ಆಗಿದ್ದರೆ ತೊಳೆಯಲಿಕ್ಕೂ ಸುಲಭ. ಆದರೆ ಉದ್ದದ ಕೂದಲು ತೊಳೆಯುವುದು ಅಷ್ಟು ಸುಲಭವಲ್ಲ. ಹೀಗಾಗಿ ಒದ್ದೆ ಬಾಚಣಿಗೆ ಯಾ ಬ್ರಶ್‌ನಿಂದ ಕೂದಲನ್ನು ಬಾಚಿ, ಹೇರ್‌ ಕ್ರೀಂ ಹಚ್ಚಿರಿ. ಗುಂಗುರು ಕೂದಲಿದ್ದರೆ ಅದನ್ನು ಓಪನ್‌ ಆಗಿ ಹಾಗೇ ಬಿಡಿ. ಸ್ಟ್ರೇಟ್‌ ಹೇರ್‌ ಸಹ ಓಪನ್‌ ಆಗಿದ್ದರೇನೇ ಚೆಂದ. ಕೂದಲಿಗೆ ಬೇರೆ ಹೊಸ ರೂಪ ನೀಡ ಬಯಸಿದರೆ, ಮೇಲ್ಭಾಗದ ಕೂದಲು ತೆಗೆದುಕೊಂಡು ಫ್ರೆಂಚ್‌ ಟೇಲ್‌ ಯಾ ಹಾಫ್‌ ಬನ್‌ ಯಾ ಅರ್ಧ ಕೂದಲಿನ ಪೋನಿ ಸಹ ನೀಡಬಹುದು. ಮತ್ತೊಂದು ಸುಲಭ ವಿಧಾನ ಎಂದರೆ, ಎರಡೂ ಬದಿಯಿಂದ ಸ್ವಲ್ಪ ಕೂದಲು ತೆಗೆದುಕೊಂಡು, ಟ್ವಿಸ್ಟ್ ಮಾಡಿ, ಹಿಂಬದಿಗೆ ಕಟ್ಟಿರಿ ಹಾಗೂ ಹೇರ್‌ಪಿನ್‌ ಸಿಗಿಸಿರಿ. ಬ್ಲ್ಯಾಕ್‌ ಯಾ ಐವರಿ ಕಲರ್‌ನ ಹೇರ್‌ಪಿನ್ಸ್ ಎಲ್ಲ ತರಹದ ಡ್ರೆಸ್‌ಗೂ ಹೊಂದುತ್ತವೆ.

ಉತ್ತಮ ಪಾದಗಳಿಗಾಗಿ

ಪಾದಗಳಿಗೆ ಹೆಚ್ಚಿನ ಹೊಳಪಿಲ್ಲದ ಡಾರ್ಕ್‌ ಕಲರ್‌ ನೇಲ್‌ಪಾಲಿಶ್‌ ಎಲ್ಲಾ ಉಡುಗೆಗಳಿಗೂ ಒಪ್ಪುತ್ತವೆ. ಸ್ಕರ್ಟ್‌ ಯಾ ಕೇಪ್ರಿ ಜೊತೆ ಪಾದಕ್ಕೆ ಕಾಲ್ಗೆಜ್ಜೆ ಸಹ ಧರಿಸಬಹುದು. ಸ್ಯಾಂಡ್‌ ಆ್ಯಂಕ್ಲೆಟ್ಸ್ ಧರಿಸಿದ್ದರೆ ಹೊರಗಿನ ಸುತ್ತಾಟದಲ್ಲಿ ಎಚ್ಚರವಿರಲಿ.

ಮಧುಚಂದ್ರದ ಆನಂದ ಹೆಚ್ಚಿಸುವಲ್ಲಿ ಮೇಕಪ್‌ನ ಪಾತ್ರ ಅಲ್ಲಗಳೆಯಲಾಗದು. ಗಮನಿಸತಕ್ಕ ಅಂಶವೆಂದರೆ, ನೀವು ಕೊಂಡೊಯ್ಯುವ ಮೇಕಪ್‌ ಕಿಟ್‌ನಲ್ಲಿ ಎಲ್ಲ ಕ್ವಾಲಿಟಿ ಪ್ರಾಡಕ್ಟ್ಸ್ ಆಗಿರಬೇಕು. ಅಗ್ಗದ ಮಾಲು ಹಾನಿ ಮಾಡುತ್ತದೆ. ಅದರಿಂದ  ಮಧುಚಂದ್ರದ ಸಂತಸಕ್ಕೆ ಧಕ್ಕೆ ಆಗದಿರಲಿ.

– ಮಧು ಶರ್ಮ

Tags:
COMMENT