ಚಳಿಗಾಲದಲ್ಲಿ ತ್ವಚೆ ಮತ್ತು ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಈ ಸೀಸನ್‌ನಲ್ಲಿ ನಮ್ಮನ್ನು ನಾವು ಹೆಚ್ಚು ಆರೈಕೆ ಮಾಡಿಕೊಳ್ಳಬೇಕಾಗುತ್ತದೆ.

ಚಳಿಗಾಲದಲ್ಲಿ ಮುಖ್ಯವಾಗಿ, 2 ಭಾಗಗಳನ್ನು ಜೋಡಿಸುವಂಥ ಅಂಗಗಳ ಆರೈಕೆಯತ್ತ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಮೊಣಕೈ, ಮಂಡಿ ಭಾಗ ಇತ್ಯಾದಿ. ಚಳಿಗಾಲದಲ್ಲಿ ಈ ಭಾಗದ ತ್ವಚೆ ಕಪ್ಪಾಗಿ, ಒರಟಾಗುತ್ತದೆ. ದೇಹದ ಈ ಭಾಗದಲ್ಲಿ ಡೆಡ್‌ಸ್ಕಿನ್‌ನ ಒಂದು ಪದರ ರೂಪುಗೊಳ್ಳುತ್ತದೆ. ಅದನ್ನು ತೊಲಗಿಸಿ, ಆ ಭಾಗವನ್ನು ಶುಭ್ರವಾಗಿಟ್ಟುಕೊಳ್ಳುವುದು ಒಂದು ಸವಾಲೇ ಸರಿ.  ಇಂಥ ಭಾಗಗಳನ್ನು ನಿಯಮಿತವಾಗಿ ಆರೈಕೆ ಮಾಡುವುದರಿಂದ ನಿಮ್ಮ ಚಳಿಗಾಲ ಖುಷಿಯಾಗಿ ಸರಿಯುತ್ತದೆ.

ಮೊಣಕೈ ಕಪ್ಪಿನ ನಿವಾರಣೆ

ಅಜ್ಜಿಯ ಮನೆಮದ್ದು : ವಿನಿಗರ್‌ಮತ್ತು ಗ್ಲಿಸರಿನ್‌ನ್ನು ಸಮಪ್ರಮಾಣದಲ್ಲಿ ಬೆರೆಸಿಕೊಂಡು, ಆ ಮಿಶ್ರಣವನ್ನು ಅಗತ್ಯದ ಭಾಗಗಳಿಗೆ ಸವರಿ, ನಿಧಾನವಾಗಿ ಮಸಾಜ್‌ಮಾಡುವುದರಿಂದ ಲಾಭವಿದೆ. ನಂತರ ನೀರಿನಿಂದ ತೊಳೆಯಿರಿ. ಹೀಗೆ ದಿನಕ್ಕೆ 2 ಸಲ ಮಾಡಿ. 2-3 ವಾರಗಳ ನಂತರ ಗಮನಿಸಿದಾಗ, ನಿಮ್ಮ ಮೊಣಕೈ ಮಂಡಿ ಭಾಗ ಒಂದಿಷ್ಟೂ ಕಲೆ ಇಲ್ಲದೆ, ಮೃದುವಾಗಿರುತ್ತದೆ.

ಇಷ್ಟು ಮಾತ್ರವಲ್ಲ, ಅನ್ನ ಬಸಿದ ಗಂಜಿ ಆರಿದ ನಂತರ, ಆ ಗಂಜಿಯಿಂದಲೂ ಇದೇ ತರಹ ಲಾಭ ಪಡೆಯಬಹುದು. ಸ್ನಾನಕ್ಕೆ ಮೊದಲು ಅಂಥ ಭಾಗಗಳಿಗೆ ಗಂಜಿ ಸವರಿ ನಯವಾಗಿ ಮಸಾಜ್‌ ಮಾಡಿ. ಒಣಗಿದ ನಂತರ 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ. ದಿನಕ್ಕೆ 2 ಸಲ ಹೀಗೆ 2-3 ವಾರ ಮಾಡಿ.

ತಜ್ಞರ ಸಲಹೆ : ಮೊಣಕೈ ಮೇಲೆ ಜಮೆಗೊಂಡ ಡೆಡ್‌ ಸ್ಕಿನ್‌ತೊಲಗಿಸಲು, ದಿನಕ್ಕೆ 2 ಸಲ ಯಾವುದೇ ಮೈಲ್ಡ್ ಸ್ಕ್ರಬ್‌ ಬಳಸಿ ಮಸಾಜ್‌ ಮಾಡಿ. ದಿನಕ್ಕೆ 2-3 ಸಲ ಸೆರಾಮೈಡ್‌ಯುಕ್ತ ಮಾಯಿಶ್ಚರೈಸರ್‌ ಬಳಸಿರಿ. ಇದರ ಹೊರತಾಗಿ ತ್ವಚೆಯ ಶುಷ್ಕತೆ ದೂರಗೊಳಿಸಲು ಪ್ರತಿದಿನ ಸ್ನಾನ ಮಾಡುವ ನೀರಿಗೆ 2-3 ಹನಿ ರೋಸ್‌ ಆಯಿಲ್‌, ಶೆಲ್‌ ಆಯಿಲ್, ಆಲಿವ್‌ ಆಯಿಲ್ ಇತ್ಯಾದಿ ಬೆರೆಸಿಕೊಳ್ಳಿ.

ಗಮನಿಸಿ : ಮೊಣಕೈ, ಮಂಡಿ ಭಾಗಗಳಿಗೆ ಮಾಯಿಶ್ಚರೈಸರ್‌ ಸವರಿ ವೃತ್ತಾಕಾರವಾಗಿ 5 ನಿಮಿಷ ಮಸಾಜ್‌ ಮಾಡಬೇಕು.

ಹಿಮ್ಮಡಿ ಒಡೆತದಿಂದ ಮುಕ್ತಿ

ಹಿಮ್ಮಡಿ ಒಡೆತದ ಪರಿಣಾಮವಾಗಿ ಎಷ್ಟೋ ಸಲ ಆ ಭಾಗದಿಂದ ರಕ್ತ ಜಿನುಗುವುದು, ನೋವು, ಉರಿ, ಹಿಂಸೆ ಎನಿಸುತ್ತದೆ. ಹಿಮ್ಮಡಿಯ ಚರ್ಮ ಬಹಳ ಡ್ರೈ ಆಗುವುದರಿಂದ ಇದು ಒಡೆಯುತ್ತದೆ.

ಅಜ್ಜಿಯ ಮನೆಮದ್ದು : 1 ದೊಡ್ಡ ಚಮಚ ಗ್ಲಿಸರಿನ್‌ಗೆ 2 ದೊಡ್ಡ ಚಮಚ ಗುಲಾಬಿ ಜಲ, ಅರ್ಧ ಚಮಚ ನಿಂಬೆರಸ ಬೆರೆಸಿ ಮಿಶ್ರಣ ಸಿದ್ಧಪಡಿಸಿ. ಇದನ್ನು ಹಿಮ್ಮಡಿಗೆ ಸವರಿ ಚೆನ್ನಾಗಿ ಮಸಾಜ್‌ಮಾಡಿ. ಇದು ಇಡೀ ರಾತ್ರಿ ಹಾಗೇ ಇರಲಿ. ಗ್ಲಿಸರಿನ್‌, ಗುಲಾಬಿ ಜಲ ಹಿಮ್ಮಡಿಗೆ ಮಾಯಿಶ್ಚರೈಸ್‌ ಮಾಡುವುದಲ್ಲದೆ, ನೋವಿನಿಂದಲೂ ನಿವಾರಣೆ ನೀಡುತ್ತದೆ. ದಿನಕ್ಕೆ 2 ಸಲ ಹೀಗೆ ಮಾಡಿ.

1 ದೊಡ್ಡ ಚಮಚ ಓಟ್‌ಮೀಲ್‌ ಪೌಡರ್‌ಗೆ, ತುಸು ಜೋಜೋಬಾ ಆಯಿಲ್‌ ಬೆರೆಸಿ ಗಾಢ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಹಿಮ್ಮಡಿಗೆ ಸವರಿ 1 ತಾಸು ಹಾಗೇ ಬಿಡಿ. ನಂತರ ನೀರಿನಿಂದ ತೊಳೆದು, ಒರೆಸಿ, ವ್ಯಾಸಲೀನ್‌ ಹಚ್ಚಿರಿ.

ತಜ್ಞರ ಸಲಹೆ : ಒಡೆದ ಹಿಮ್ಮಡಿಗಾಗಿ ಮೆಡಿಕೇಟೆಡ್‌ ಕ್ರೀಮ್ ಬಳಸುವುದು ಅತ್ಯಗತ್ಯ. ಆದ್ದರಿಂದ ಯೂರಿಯಾ ಲ್ಯಾಕ್ಟಿಕ್‌ ಆ್ಯಸಿಡ್‌ಯುಕ್ತ ಕ್ರೀಂ ಬಳಸಬೇಕು. ಮನೆಯಲ್ಲೇ ತಯಾರಿಸಿದ ಬೆಣ್ಣೆ ಕಾಸಿದ ತುಪ್ಪವನ್ನು ಸಹ ಒಡೆದ ಹಿಮ್ಮಡಿಗೆ ಬಳಸಬಹುದು. ಚಳಿ ಆರಂಭಗೊಂಡ ತಕ್ಷಣವೇ ತುಪ್ಪ ಸವರಲು ಆರಂಭಿಸಿ. ಇದರಿಂದ ಹಿಮ್ಮಡಿಗಳಲ್ಲಿನ ಆರ್ದ್ರತೆ ಹಾಳಾಗುವುದಿಲ್ಲ, ಒಡೆತ ತಪ್ಪುತ್ತದೆ.

ಗಮನಿಸಿ : ನಿಮ್ಮ ಹಿಮ್ಮಡಿ ಒಡೆಯುತ್ತಿದ್ದರೆ ಸದಾ ಸಾಕ್ಸ್ ಧರಿಸಿರಿ. ಪಾದಗಳನ್ನು ಧೂಳಿನಿಂದ ದೂರವಿರಿಸಿ ಹಾಗೂ ದಿನಕ್ಕೆ 2-3 ಸಲ ಮಾಯಿಶ್ಚರೈಸರ್‌ ಹಚ್ಚಿಕೊಳ್ಳಿ.

ತುಟಿಗಳ ಕಡೆ ಗಮನವಿರಲಿ

ಚಳಿಗಾಲದಲ್ಲಿ ನೀವು ಶುಷ್ಕ ತುಟಿಗಳಿಂದ ಪ್ರಯಾಸಪಡುತ್ತಿದ್ದರೆ, ನೀವು ಅಗತ್ಯ ಈ ಸಲಹೆಗಳನ್ನು ಪಾಲಿಸಿ.

ಅಜ್ಜಿಯ ಮನೆಮದ್ದು : ನಿಂಬೆರಸಕ್ಕೆ ಗುಲಾಬಿ ಜಲ ಬೆರೆಸಿ ಪ್ರತಿ ರಾತ್ರಿ ಮಲಗುವ ಮುನ್ನ ತುಟಿಗಳಿಗೆ ಹಚ್ಚಿಕೊಳ್ಳಿ. ಈ ಪ್ರಕ್ರಿಯೆಯಿಂದ ತುಟಿಗಳ ಶುಷ್ಕತೆ ದೂರ ಆಗುತ್ತದೆ, ಜೊತೆಗೆ ತುಟಿಗಳು ಇನ್ನಷ್ಟು ಮೃದುವಾಗಿ ಬಣ್ಣ ತೇಲುತ್ತದೆ.

ಇಷ್ಟು ಮಾತ್ರವಲ್ಲದೆ ಮಲಗುವ ಮೊದಲು ಗ್ಲಿಸರಿನ್‌, ಗುಲಾಬಿ ಜಲ, ಕೇಸರಿ ಬೆರೆಸಿಕೊಂಡು ಆ ಮಿಶ್ರಣವನ್ನು ತುಟಿಗಳಿಗೆ ಸವರಬೇಕು. ಕೆಲವೇ ದಿನಗಳಲ್ಲಿ ನಿಮಗೆ ವ್ಯತ್ಯಾಸ ತಿಳಿಯುತ್ತದೆ.

ತಜ್ಞರ ಸಲಹೆ : ವ್ಯಾಕ್ಸ್, ಸೆರಾಮೈಡ್‌, ಪೆಟ್ರೋಲಿಯಂ ಜೆಲ್ಲಿ ಮಿಶ್ರಣ ಇರುವಂಥ ಲಿಪ್‌ ಬಾಮ್ ಬಳಸಿರಿ. ಕಲರ್‌, ಫ್ರಾಗ್ರೆನ್ಸ್ ಬೆರೆತಿರುವಂಥ ಬಾಮ್ ಬಳಸಬೇಡಿ. ಇದು ತುಟಿಗಳನ್ನು ಮತ್ತಷ್ಟು ಹೆಚ್ಚು ಡ್ರೈ ಮಾಡುತ್ತದೆ.

ಗಮನಿಸಿ : ಚಳಿಗಾಲದಲ್ಲಿ ಎಂದೂ ತುಟಿಗಳನ್ನು ಹಾಗೇ ಡ್ರೈ ಆಗಿರಲು ಬಿಡಬೇಡಿ. ಸದಾ ನಾಲಿಗೆಯಿಂದ ತುಟಿಗಳನ್ನು ಒರೆಸುತ್ತಿರಬೇಡಿ. ಬದಲಿಗೆ ಒಡೆದ ತುಟಿಗಳಿಗೆ ಪೆಟ್ರೋಲಿಯಂ ಜೆಲ್ಲಿ, ಗ್ಲಿಸರಿನ್‌, ಕೊಬ್ಬರಿ ಎಣ್ಣೆ, ಹಿಪ್ಪೆ ಎಣ್ಣೆಗಳ ಮಿಶ್ರಣ ಹಚ್ಚಿರಿ. ತುಟಿ ಅಗತ್ಯಕ್ಕಿಂತ ಹೆಚ್ಚು ಶುಷ್ಕವಾಗಿದ್ದರೆ ಮ್ಯಾಟ್‌ ಲಿಪ್‌ಸ್ಟಿಕ್‌ ಹಚ್ಚಲೇಬೇಡಿ. ಬದಲಿಗೆ ಜೆಲ್ಲಿ ಬೇಸ್ಡ್ ಲಿಪ್‌ಸ್ಟಿಕ್‌ ಹಚ್ಚಿರಿ.

ನಾಜೂಕು ಅಂಗಗಳ ಆರೈಕೆ

ಚಳಿಗಾಲದಲ್ಲಿ ದೇಹದ ನಾಜೂಕು ಅಂಗಾಂಗಗಳ ಆರೈಕೆಯತ್ತಲೂ ಗಮನ ಕೊಡಬೇಕು. ವಿಶೇಷವಾಗಿ ಮುಟ್ಟಾದ ಮಹಿಳೆಯರು ಹೆಚ್ಚು ಎಚ್ಚರವಾಗಿರಬೇಕು.

ಅಜ್ಜಿಯ ಮನೆಮದ್ದು : ನಾಜೂಕು ಅಂಗಗಳ ಒಳಭಾಗದ ಶುಭ್ರತೆಗಾಗಿ 1 ಮಗ್‌ ಬೆಚ್ಚಗಿನ ನೀರಿಗೆ ಉಪ್ಪು ಹಾಕಿ ಕರಗಿಸಿ. ಆ ನೀರಿನಿಂದ ಒಳಭಾಗವನ್ನು ಶುಚಿಗೊಳಿಸಿ. ಉಪ್ಪು ನ್ಯಾಚುರಲ್ ಆ್ಯಂಟಿಸೆಪ್ಟಿಕ್‌ ಆಗಿರುವುದರಿಂದ ಶುಷ್ಕ ತ್ವಚೆಯನ್ನು ಮೃದುಗೊಳಿಸುತ್ತದೆ.

ಇದಾದ ಮೇಲೆ, ತೆಳು ಕಾಟನ್‌ಬಟ್ಟೆಯಿಂದ ಒಳಭಾಗ ಒರೆಸಿ, ಕೊಬ್ಬರಿ ಎಣ್ಣೆ ಸವರಬೇಕು.

ತಜ್ಞರ ಸಲಹೆ : ವಜೈನ್‌ ಏರಿಯಾದಲ್ಲಿ ಉರಿ, ತುರಿಕೆಯ ಸಮಸ್ಯೆಯೇ? ಅಂಥವರು ನೇರವಾಗಿ ವಜೈನ್‌ ವಾಶ್‌ ಬಳಸಬಾರದು. ಏಕೆಂದರೆ ಆ ಭಾಗದ ಪಿಎಚ್ ಮಟ್ಟ ಹಾಳಾಗಬಹುದು. ಹಾಗಾಗಿ ಅದರ ಬದಲು ಸೆರಾಮೈಡ್‌ಸೈನ್‌ಯುಕ್ತ ಮಾಯಿಶ್ಚರೈಸರ್‌ಬಳಸಬೇಕು. ಗಮನಿಸಬೇಕಾದ ಅಂಶವೆಂದರೆ, ಯಾವ ಪ್ರಾಡಕ್ಟ್ ಬಳಸಿದರೂ ಅದರಲ್ಲಿ ಸ್ಟೆರಾಯ್ಡ್ ಇರಬಾರದು.

ಗಮನಿಸಿ : ಚಳಿಗಾಲದಲ್ಲಿ ಟೈಟ್‌ ಪ್ಯಾಂಟ್‌ ಧರಿಸಬೇಡಿ. ಹೀಗೆ ಮಾಡಿದರೆ ಚರ್ಮಕ್ಕೆ ಸಹಜವಾಗಿ ಆಕ್ಸಿಜನ್‌ ಸಿಗದೆ, ಅದು ಮತ್ತಷ್ಟು ಹೆಚ್ಚು ಡ್ರೈ ಆಗುತ್ತದೆ. ಜೊತೆಗೆ ಈ ಅಂಗಗಳನ್ನು ತುಂಬಾ ಬಿಸಿ ನೀರಿನಲ್ಲೂ ತೊಳೆಯಬಾರದು, ಉಗುರು ಬೆಚ್ಚಗಿನ  ನೀರಷ್ಟೇ ಸಾಕು. ನಾಜೂಕು ಅಂಗಗಳ ಕುರಿತಾದ ಈ ವಿಷಯಗಳನ್ನು ಎಂದೂ ಕಡೆಗಣಿಸದಿರಿ.

– ಮಮತಾ ರಾವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ