'ಅನಿಮಲ್', 'ಪುಷ್ಪ 2', 'ಛಾವಾ' ಹೀಗೆ ಸತತವಾಗಿ ಮೂರು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿರುವ ನಟಿ ರಶ್ಮಿಕಾ ಮಂದಣ್ಣ ಮಾರ್ಚ್ 28ರಂದು ತೆರೆಕಾಣಲಿರುವ 'ಸಿಕಂದರ್' ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.
ಈ ಸಿನಿಮಾ ರಶ್ಮಿಕಾ ಪಾಲಿಗೆ ವಿಶೇಷವಾಗಿದ್ದು, ಇದರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್‌ಗೆ ರಶ್ಮಿಕಾ ನಾಯಕಿಯಾಗಿದ್ದಾರೆ. ಅಂದಹಾಗೆ, ಈ ಸಿನಿಮಾಕ್ಕಾಗಿ ರಶ್ಮಿಕಾ ಕೈತುಂಬಾ ಸಂಭಾವನೆ ಪಡೆದಿದ್ದಾರೆ.
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‌ನಲ್ಲಿ ಭದ್ರವಾಗಿ ನೆಲೆಯೂರುವ ಸೂಚನೆ ನೀಡಿದ್ದು, 'ಅನಿಮಲ್', 'ಛಾವಾ'ದಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿದ್ದು, ಇದೀಗ ಸಲ್ಮಾನ್ ಖಾನ್ ಜೊತೆ ತೆರೆಹಂಚಿಕೊಂಡಿದ್ದಾರೆ. ಹೌದು, ಸಲ್ಮಾನ್ ನಟನೆಯ 'ಸಿಕಂದರ್' ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅದಕ್ಕಾಗಿ ಕೈತುಂಬಾ ಸಂಭಾವನೆ ಪಡೆದುಕೊಂಡಿದ್ದಾರೆ.
ಈಗಾಗಲೇ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಗಳಿಸಿರುವ ರಶ್ಮಿಕಾ ಮಂದಣ್ಣ, 'ಸಿಕಂದರ್' ಸಿನಿಮಾಕ್ಕಾಗಿ ಸುಮಾರು 5 ಕೋಟಿ ರೂ.ಗಳಿಗೂ ಅಧಿಕ ಸಂಭಾವನೆ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಸ್ಯಾಂಡಲ್‌ವುಡ್ ನಟಿಯರ ಸಂಭಾವನೆ ಇನ್ನೂ ಲಕ್ಷಗಳ ಲೆಕ್ಕದಲ್ಲಿದೆ. ಆದರೆ ಸ್ಯಾಂಡಲ್‌ವುಡ್ ಮೂಲಕವೇ ಬಣ್ಣದ ಬದುಕು ಆರಂಭಿಸಿದ ನಟಿ ರಶ್ಮಿಕಾ, ಇದೀಗ 5 ಕೋಟಿ ರೂ. ಸಂಭಾವನೆ ಪಡೆಯುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.
ಸಾಜಿದ್ ನಾದಿಯಾದ್‌ವಾಲಾ 'ಸಿಕಂದರ್' ಸಿನಿಮಾವನ್ನು ನಿರ್ಮಿಸಿದ್ದಾರೆ. ಸಲ್ಮಾನ್ ಖಾನ್ ಅವರ ಸಂಭಾವನೆಯನ್ನು ಹೊರತುಪಡಿಸಿ, ಈ ಸಿನಿಮಾಕ್ಕೆ 180ರಿಂದ 200 ಕೋಟಿ ರೂ.ವರೆಗೂ ಹಣ ಹಾಕಿದ್ದಾರಂತೆ. ಸಲ್ಮಾನ್ ಖಾನ್ ಅವರಿಗೆ 100ರಿಂದ 120 ಕೋಟಿ ರೂ.ವರೆಗೂ ಸಂಭಾವನೆ ನೀಡಲಾಗಿದ್ದು, ಜೊತೆಗೆ ಸಿನಿಮಾದಿಂದ ಬರುವ ಲಾಭದಲ್ಲಿ ಒಂದಷ್ಟು ಪಾಲು ಕೂಡ ಸಲ್ಮಾನ್ ಖಾನ್‌ಗೆ ಸೇರಲಿದೆ ಎನ್ನಲಾಗಿದೆ.
ಈ ಸಿನಿಮಾದಲ್ಲಿ ನಟಿ ಕಾಜಲ್ ಅಗರ್ವಾಲ್ ಕೂಡ ನಟಿಸಿದ್ದು, ಅವರಿಗೆ 3 ಕೋಟಿ ರೂ. ನೀಡಲಾಗಿದಯಂತೆ. ಉಳಿದಂತೆ ಶರ್ಮನ್ ಜೋಶಿ 75 ಲಕ್ಷ ರೂ., ಪ್ರತೀಕ್ ಬಬ್ಬರ್ 60 ಲಕ್ಷ ರೂ., ಸತ್ಯರಾಜ್ 50 ಲಕ್ಷ ರೂ. ಹಣವನ್ನು ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ. ನಿರ್ಮಾಪಕರು ಬಹುತೇಕ ಹೂಡಿಕೆಯನ್ನು ವಾಪಸ್ ಪಡೆದುಕೊಂಡಿದ್ದು, ಚಿತ್ರಮಂದಿರಗಳಿಂದ ಬರುವ ಹಣವೆಲ್ಲಾ ಲಾಭ ಎನ್ನಲಾಗಿದೆ.
ತಮಿಳು ನಿದೇಶಕ ಎ ಆರ್ ಮುರುಗದಾಸ್ ಅವರು ಈ ಸಿನಿಮಾ ನಿದೇಶಿಸಿದ್ದಾರೆ. ಸದ್ಯ ಸಲ್ಮಾನ್ ಖಾನ್ ಮತ್ತು ಮುರುಗದಾಸ್ ಇಬ್ಬರು ಕೂಡ ಒಂದು ದೊಡ್ಡ ಗೆಲುವಿಗಾಗಿ ಕಾಯುತ್ತಿದ್ದಾರೆ.
ಈ ನಡುವೆ 'ಸಿಕಂದರ್' ರಿಮೇಕ್ ಸಿನಿಮಾ ಎಂಬ ಮಾತು ಕೇಳಿಬಂದಿತ್ತು. ಮುರುಗದಾಸ್ ಅವರೇ ನಿರ್ದೇಶಿಸಿದ್ದ ತಮಿಳಿನ 'ಸರ್ಕಾರ್' ಚಿತ್ರವನ್ನೇ ಹಿಂದಿಗೆ 'ಸಿಕಂದರ್' ಹೆಸರಿನಲ್ಲಿ ರಿಮೇಕ್ ಮಾಡಲಾಗಿದೆ ಎಂಬ ವದಂತಿ ಹಬ್ಬಿತ್ತು. ಆದರೆ ನಿರ್ದೇಶಕರು ಅದಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. "ಇದೊಂದು ಸಂಪೂರ್ಣ ಒರಿಜಿನಲ್ ಕಥೆ ಇರುವ ಸಿನಿಮಾ. ಪ್ರೇಕ್ಷಕರಿಗೆ ಹೊಸ ಅನುಭವ ಸಿಗಲಿ ಎಂಬ ಕಾರಣಕ್ಕೆ ಪ್ರತಿ ಸೀನ್, ಪ್ರತಿ ಫ್ರೇಮ್ ಕೂಡ ನೈಜತೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಹೊಸ ನಿರೂಪಣೆ ಇರಲಿದೆ" ಎಂದು ಹೇಳಿಕೊಂಡಿದ್ದಾರೆ.