- ರಾಘವೇಂದ್ರ ಅಡಿಗ ಎಚ್ಚೆನ್.
ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (92) ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶನಿವಾರ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರ ಶ್ರಮದ ನಡುವೆಯೂ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ವಯೋಸಹಜ ಸಮಸ್ಯೆಗಳಿಂದ ಕೂಡ ಅವರು ಬಳಲುತ್ತಿದ್ದರು ಎನ್ನಲಾಗಿದೆ.
ಆಶಾ ಭೋಸ್ಲೆ ಅವರು ಭಾರತೀಯ ಸಂಗೀತ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಅವರ ನಿಧನಕ್ಕೆ ಸಂಗೀತ ಲೋಕದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ.
1943ರಲ್ಲಿ ಮರಾಠಿ ಸಿನಿಮಾ ‘ಮಾಝಾ ಬಾಲ್’ ಮೂಲಕ ಕೇವಲ ಹತ್ತು ವರ್ಷದ ಬಾಲಕಿಯಾಗಿದ್ದಾಗಲೇ ವೃತ್ತಿಜೀವನ ಆರಂಭಿಸಿದ ಆಶಾ, ನಂತರ ಹಿಂತಿರುಗಿ ನೋಡಲೇ ಇಲ್ಲ. ಎಂಟು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಅವರು ಹಿಂದಿ, ಕನ್ನಡ ಸೇರಿದಂತೆ 20ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಬರೋಬ್ಬರಿ 11,000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಈ ಅಪೂರ್ವ ಸಾಧನೆಗಾಗಿ ಅವರು ಗಿನ್ನೆಸ್ ದಾಖಲೆಯನ್ನೂ ನಿರ್ಮಿಸಿರುವುದು ಅವರ ಗಾಯನ ಶಕ್ತಿಗೆ ಸಾಕ್ಷಿಯಾಗಿದೆ.
ಕೇವಲ ಮೆಲೋಡಿ ಹಾಡುಗಳಷ್ಟೇ ಅಲ್ಲದೇ, ಗಜಲ್, ಶಾಸ್ತ್ರೀಯ ಸಂಗೀತ ಮತ್ತು ಅಂದಿನ ಕಾಲದ ಫಾಸ್ಟ್ ನಂಬರ್ ಕ್ಯಾಬರೆ ಹಾಡುಗಳ ಮೂಲಕ ಅವರು 'ವರ್ಸಟೈಲ್ ಸಿಂಗರ್' ಎನಿಸಿಕೊಂಡಿದ್ದರು. ಅವರ ಧ್ವನಿಯಲ್ಲಿದ್ದ ಮಾಧುರ್ಯ ಮತ್ತು ಲವಲವಿಕೆ ತಲೆಮಾರುಗಳ ಗಡಿಯನ್ನು ಮೀರಿ ರಸಿಕರನ್ನು ಸೆಳೆದಿತ್ತು. ಆಶಾ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಪ್ರಧಾನ ಮಂತ್ರಿಗಳು ಹಾಗೂ ರಾಜಕೀಯ ಮುಖಂಡರು ತೀವ್ರ ಸಂತಾಪ ಸೂಚಿಸಿದ್ದು, ದೇಶವು ಒಬ್ಬ ಶ್ರೇಷ್ಠ ಕಲಾತಪಸ್ವಿಯನ್ನು ಕಳೆದುಕೊಂಡಿದೆ ಎಂದು ಕಂಬನಿ ಮಿಡಿದಿದ್ದಾರೆ. ಆಶಾ ಭೋಂಸ್ಲೆ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದು, ನಾಳೆ ಅಂದರೆ ಸೋಮವಾರ (ಏಪ್ರಿಲ್ 13) ಮುಂಬೈನ ಐತಿಹಾಸಿಕ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಮಹಾರಾಷ್ಟ್ರ ಸರ್ಕಾರವು ಅವರ ಅಂತ್ಯಸಂಸ್ಕಾರಕ್ಕೆ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ದೇಶದ ಪ್ರಮುಖ ಗಣ್ಯರು ಈ ಅಂತಿಮ ಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.





