– ರಾಘವೇಂದ್ರ ಅಡಿಗ ಎಚ್ಚೆನ್.
“ಮದುವೆ ಸ್ವರ್ಗದಲ್ಲಿ ನಿಶ್ಚಯ” ಎನ್ನುವ ನಂಬಿಕೆಗೆ ಕರ್ನಾಟಕದಲ್ಲಿ ಕಳೆದ 5 ವರ್ಷದಲ್ಲಿ ದಾಖಲಾದ 1.7 ಲಕ್ಷ ವಿಚ್ಛೇದನ ದಾವೆಗಳು ಸವಾಲಾಗಿಸಿವೆ. ಸ್ವರ್ಗ ಬಂಧನಕ್ಕೆ ಮುದ್ರೆ ಹಾಕಬಹುದು, ಆದರೆ ಆ ಬಂಧನವನ್ನು ಪೋಷಿಸುವುದು ನಮ್ಮ ಕೈಯಲ್ಲಿದೆ. ವಿಶಾಲ ಸಂಸ್ಕಾರ, ಸಾಮಾಜಿಕ ಒತ್ತಡಗಳ ನಡುವೆ ಸಂವಾದ, ತಾಳ್ಮೆ, ಹೊಂದಾಣಿಕೆಯ ಮೌಲ್ಯಗಳು ಹಿಂದೆ ಸರಿಯುತ್ತಿವೆ..
ಇಂತಹ ಸಂದರ್ಭದಲ್ಲಿ, ಆಕರ್ಷ್ ಆದಿತ್ಯ ಅವರ ‘ಬಯಕೆಗಳು ಬೇರೂರಿದಾಗ’ ಕಾದಂಬರಿ ಮತ್ತು ಎನ್. ಜ್ಯೋತಿಲಕ್ಷ್ಮಿ ಅವರ ನಿರ್ದೇಶನದ ಸದ್ಯಕ್ಕೆ 25 ಪ್ರಶಸ್ತಿ ಪಡೆದ ಚಲನಚಿತ್ರವು ಪ್ರಸ್ತುತವಾಗಿದೆ. ಕುಟುಂಬ ಮೌಲ್ಯಗಳು ಮತ್ತು ಸಂಬಂಧಗಳ ಸೂಕ್ಷ್ಮ ತಂತುಗಳನ್ನು ಚಿತ್ರಿಸುವ ಈ ಕಥೆ, ಸಮಸ್ಯೆಗಳಿಗೆ ದಾರಿ ಹುಡುಕುವಾಗ ಮಹತ್ವದ ಸಂದೇಶ ನೀಡಬಲ್ಲದು. ಒಂದು ಅದ್ಭುತ ಕತೆಗೆ ಎನ್. ಜ್ಯೋತಿ ಲಕ್ಷ್ಮೀ ಅವರು ಆಕ್ಷನ್ ಕಟ್ ಹೇಳಿ ಸುಂದರ, ಭಾವನಾತ್ಮ ಚಲನಚಿತ್ರವಾಗಿ ರೂಪುಗೊಳಿಸಿದ್ದಾರೆ. ಎನ್. ಸುದರ್ಶನ್ ಅವರು ಬಂಡವಾಳ ಹೂಡಿದ ಈ ಚಿತ್ರ,ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. Penzance international film festival Cornwall UK- 2024, Hohe international film festival Germany -2024 ಸೇರಿದಂತೆ ಅನೇಕ ಅವಾರ್ಡ್ ಗಳನ್ನು ಕೂಡಾ ಈ ಸಿನಿಮಾ ಪಡೆದುಕೊಂಡಿದೆ ಎಂಬುದೇ ಹೆಮ್ಮೆಯ ವಿಚಾರ.

ಹತ್ತಕ್ಕೂ ಹೆಚ್ಚು ಧಾರವಾಹಿಗಳಲ್ಲಿ ನಾಯಕ ನಟನ ಪಾತ್ರವನ್ನು ನಿರ್ವಹಿಸಿರುವ ಆಕರ್ಷ್ ಆದಿತ್ಯ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾತಿಚರಾಮಿ ಚಿತ್ರದಲ್ಲಿ ಉತ್ತಮ ನಟಿ ಬಿರುದನ್ನು ಪಡೆದುಕೊಂಡ ಶರಣ್ಯ ಈ ಸಿನಿಮಾದ ನಾಯಕಿ. ಉಳಿದಂತೆ ಶೈಲಜಾ ಜೋಶಿ, ಮಾನಸ ಜೋಶಿ, ಅಜಯ್ ಸತ್ಯನಾರಾಯಣ, ಕಾರ್ತಿಕ್ ಸುಂದರಂ ಮುಖ್ಯ ಪಾತ್ರ ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಫೆಬ್ರವರಿ 6ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು ನೋಡುವುದು ಅಥವಾ ನಿಮ್ಮ ಸುತ್ತಮುತ್ತಲಿನವರಿಗೆ ತಿಳಿಸುವುದು, ಸಂಬಂಧಗಳ ಬಗೆಗೆ ಆಳವಾಗಿ ಯೋಚಿಸುವ ಪ್ರೇರಣೆಯಾಗಬಹುದು. ಸ್ವರ್ಗೀಯ ‘ನಿಶ್ಚಯ’ವನ್ನು ಭೂಮಿಯ ‘ನಿಭಾವಣೆ’ಯಿಂದ ಪೂರ್ಣಗೊಳಿಸಲು, ಇಂತಹ ಕಲಾತ್ಮಕ ಪ್ರಯತ್ನಗಳು ದೀಪಸ್ತಂಭಗಳಾಗಬಲ್ಲವು.





