ನಮ್ಮೂರು ಬಾಳಗಂಚಿ ಸುಮಾರು ಮುನ್ನೂರರಿಂದ ನಾಲ್ಕು ನೂರು ಕುಟುಂಬ ಇರುವಂತಹ ಸಣ್ಣ ಹಳ್ಳಿಯಾದರು, ಗುರು ವಿದ್ಯಾರಣ್ಯರು ಹುಟ್ಟಿದ ಊರು ಎಂಬ ಖ್ಯಾತಿ ಇದ್ದರೆ, ಅಷ್ಟು ಸಣ್ಣ ಹಳ್ಳಿಯಲ್ಲೇ ಸುಮಾರು ಹತ್ತು ಹದಿನೈದು ದೇವಸ್ಥಾನಗಳಿವೆ. ಗ್ರಾಮದೇವತೆ ಹೊನ್ನಾದೇವಿ ಮತ್ತು ನಮ್ಮ ಆರಾದ್ಯ ದೈವ ಲಕ್ಷ್ಮೀ ನರಸಿಂಹಸ್ವಾಮಿ ಪ್ರಮುಖವಾದವು.
ಇಂತಹ ಐತಿಹಾಸಿಕ ಊರಿಗೆ ರಜೆ ಬಂದ ಕೂಡಲೇ ಎಲ್ಲಾ ಹುಡುಗರೂ ಬಂದು ಸೇರುತ್ತಿದ್ದೆವು. ನಾನು ಊರಿಗೆ ಬರುತ್ತೇನೆ ಅಂತ ಕಾಗದ ಬರೆಯುತ್ತಿದ್ದಂತೆಯೇ ನಮ್ಮಜ್ಜಿ ಬಹಳ ಚುರುಕಾಗಿ ನಮ್ಮ ಅಕ್ಕ ಪಕ್ಕದ ಸಂಬಂಧೀಕರ ಮನೆಯವರೆಲ್ಲರಿಗೂ ಮೊದಲೇ ಹೇಳಿಕೊಟ್ಟು ದೇವಸ್ಥಾನದ ಕಲ್ಯಾಣಿ ಅಥವಾ ಕೆರೆಯಲ್ಲಿ ಹಬ್ಬದ ಸಮಯ ಬಿಟ್ಟು ಉಳಿದ ಸಮಯ ಈಜಾಡಿದರೆ ದಂಡ ಹಾಕ್ತಾರಂತೆ ಅಂತ ಹೆದರಿಸಿ ಬಿಡುತ್ತಿದ್ದರು. ಆಗೆಲ್ಲಾ ನಮಗೆ ಪಂಚಾಯ್ತಿಕಟ್ಟೆಯಲ್ಲಿ ನಿಂತು ದಂಡ ಹಾಕಿಸಿಕೊಳ್ಳುವುದು ಎಂದರೆ ಅವಮಾನ ಎಂದು ತಿಳಿದಿದ್ದ ಕಾರಣ ಬಹಳವಾಗಿ ಅಂಜುತ್ತಿದ್ದೆವು. ಬೆಳಿಗ್ಗೆ ಸ್ವಲ್ಪ ಹೊತ್ತು ದೇವಸ್ಥಾನದ ಪೂಜೆ, ಹಸುವನ್ನು ಮೇಯಲು ಹೊಲಕ್ಕೆ ಬಿಟ್ಟು ಬಂದ ಮೇಲೆ ಸಂಜೆಯವರೆಗೂ ಬೇಸರ ಕಳೆಯಲು ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗಲೇ, ವರಸೆಯಲ್ಲಿ ಚಿಕ್ಕಪ್ಪನಾಗಬೇಕಾದರೂ ನಮಗಿಂತ ಐದಾರು ವರ್ಷಗಳಷ್ಟು ದೊಡ್ಡವನಾದ ಸೋಮಶೇಖರ ನಮ್ಮೆಲ್ಲರ ಪ್ರೀತಿಯ ಸೋಮ, ಏ ಬನ್ರೋ ನಿಮಗೆಲ್ಲಾ ಸಿನಿಮಾ ತೋರಿಸ್ತೀನಿ! ಎಂದು ಹೇಳಿದಾಗ ನಮಗೆಲ್ಲಾ ಕುತೂಹಲ.
ಅಜ್ಜೀ, ಸೋಮನ ಮನೆಗೆ ಹೋಗಿ ಆಟ ಆಡ್ಕೋಂಡ್ ಬರ್ತೀನಿ ಎಂದಾಗ ಹೇ ಹುಷಾರು, ಕೊಳ ಮತ್ತು ಕೆರೆ ಕಡೆ ಹೋದ್ರೇ ದಂಡ ಹಾಕ್ತಾರೆ ಅಂತಾ ಗೊತ್ತಲ್ಲಾ ಎಂದು ಮತ್ತೊಮ್ಮೆ ಎಚ್ಚರಿಸಲು ಮರೆಯುತ್ತಿರಲಿಲ್ಲ. ಇಲ್ಲಾ ಅಜ್ಜೀ ಹೊರಗೆಲ್ಲೂ ಹೋಗೋದಿಲ್ಲ ಆವರ ಮನೆಯಲ್ಲೇ ಆಡಿಕೊಳ್ತೀವಿ ಎಂದು ಹೇಳಿ ಅವರ ಮನೆಗೆ ಹೋಗುವಷ್ಟರಲ್ಲಿ ಅದಾಗಲೇ ಹತ್ತಾರು ಹುಡುಗರು ಅಲ್ಲಿ ಸೇರಿರುತ್ತಿದ್ದರು. ಇಡೀ ಮನೆಯೆಲ್ಲಾ ಕತ್ತಲೆ. ಒಂದು ಮೂಲೆಯಲ್ಲಿ ಅವರಪ್ಪನ ಪಂಚೆಯನ್ನು ಕಟ್ಟಿರುತ್ತಿದ್ದ ಸೋಮ. ಮಟ ಮಟ ಮಧ್ಯಾಹ್ನದ ಬಿಸಿಲು ಅವರ ಮನೆಯ ಹೆಂಚಿನ ಸಂದಿಯಲ್ಲಿ ಇಣುಕುತ್ತಿದ್ದೇ ತಡ ಅದಕ್ಕೆ ಸರಿಯಾಗಿ ಒಂದು ಕನ್ನಡಿಯನ್ನು ಹಿಡಿದು ಅದರ ಬೆಳಕು ಪರದೆಯತ್ತ ಬೀಳುವಂತೆ ಮಾಡಿ ಅದರ ಮಧ್ಯೆ ಒಂದು ಬೂದುಕನ್ನಡಿ ಹಿಡಿದು ಆ ಬೂದುಗಣ್ಣಡಿಯ ಮುಂದೆ ಸಣ್ಣದಾದ ಫಿಲ್ಮ್ ಹಿಡಿದರೆ ಅದು ಪರದೆಯ ಮೇಲೆ ದೊಡ್ಡದಾಗಿ ಮೂಡಿದ್ದೇ ತಡ ನಮಗೆಲ್ಲರಿಗೂ ಆನಂದವೋ ಆನಂದ. ಎಲ್ಲರು ಜೋರಾಗಿ ಕೂಗುತ್ತಾ ಚಪ್ಪಾಳೆ ತಟ್ಟಿ ಹರ್ಷೋದ್ಗಾರವನ್ನು ವ್ಯಕ್ತಪಡಿಸುತ್ತಿದ್ದೆವು.





