Sj*
‘ರಾಜಕಾರಣಕ್ಕೆ ಒತ್ತಾಸೆಯಾಗಿರುವುದು, ಬೆಂಬಲಿಸುವುದು ಸಿನಿಮಾ ಕಲೆಗೆ ಒಗ್ಗುವುದಿಲ್ಲ. ಅಧಿಕಾರಶಾಹಿಯನ್ನು ಪ್ರಶ್ನಿಸುವ ಕಲೆಯಿದು’ ಎಂದು ಹಿರಿಯ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿರುವ ‘ಸಿನಿ ಸಂವಾದ’ ಕಾರ್ಯಾಗಾರದಲ್ಲಿ ‘ವಿಶ್ವ ಸಿನಿಮಾ ಮತ್ತು ಭಾರತೀಯ, ಕನ್ನಡ ಚಿತ್ರರಂಗದ ಕಥನಗಾರಿಕೆ ಹಾಗೂ ನಿರೂಪಣಾ ವಿಧಾನಗಳು ಬೆಳೆದುಬಂದ ಬಗೆ ಮತ್ತು ಪ್ರಮುಖ ಹೆಜ್ಜೆ ಗುರುತುಗಳು’ ವಿಷಯ ಕುರಿತು ಮಾತನಾಡುತ್ತಾ ಅವರು ಶಿಬಿರಾರ್ಥಿಗಳೊಂದಿಗೆ ಸಿನಿಮಾ ಕಲೆ ಕುರಿತಾದ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಕಲಾತ್ಮಕ ಮತ್ತು ವಾಣಿಜ್ಯ ಸಿನಿಮಾಗಳನ್ನು ವಿಶ್ಲೇಷಿಸಿದ ಕಾಸರವಳ್ಳಿಯವರು, ‘ಕಲಾತ್ಮಕ ಸಿನಿಮಾ, ವಾಣಿಜ್ಯ ಸಿನಿಮಾ ಬೇರೆ ಬೇರೆಯಲ್ಲ. ಎರಡೂ ಒಂದೇ. ಬದಲಾಗಿ ಇವುಗಳನ್ನು ಪ್ರಧಾನ ಧಾರೆ ಸಿನಿಮಾ ಮತ್ತು ಪ್ಯಾರಲಲ್ ಸಿನಿಮಾ ಎಂದು ನೋಡಬಹುದು. ಸಿನಿಮಾದ ಉದ್ದೇಶ ಕತೆ ಹೇಳುವುದಷ್ಟೇ ಅಲ್ಲ. ಕತೆಯೊಳಗಿನ ಸತ್ಯವನ್ನು ಹೇಳುವುದು. ಹಾಲಿವುಡ್ ಸಿನಿಮಾ ಚಿಂತನೆಯನ್ನು ಬೇರೆ ರೀತಿ ಅರ್ಥೈಸುತ್ತದೆ. ಬಾಲಿವುಡ್ ಸಿನಿಮಾಗಳಲ್ಲಿ ರಂಜನೆಗೆ ಮೊದಲ ಆಧ್ಯತೆ’ ಎಂದರು.
‘ಸಿನಿಮಾಸ್ ಆಫ್ ಇಂಡಿಯಾ ಬದಲಾಗಿ ಸಿನಿಮಾ ಆಫ್ ಇಂಡಿಯಾ ಇರಬೇಕಾಗುತ್ತದೆ. ಪ್ರತಿಯೊಂದು ರಾಜ್ಯ ತನ್ನದೇ ಆದ ಸಿನಿಮಾ ಚಳುವಳಿಯನ್ನು ಕಟ್ಟಿಕೊಟ್ಟಿದೆ. ಬೆಂಗಾಲಿ, ತಮಿಳು, ಕೇರಳ ಮುಂತಾದ ರಾಜ್ಯಗಳ ಸಿನಿಮಾಗಳನ್ನು ಗಮನಿಸಿದರೆ ನಮಗೆ ಈ ಮಹತ್ವ ತಿಳಿಯುತ್ತದೆ. ನಮ್ಮಲ್ಲಿ ಅಂತಹ ಸಿನಿಮಾ ಪರಂಪರೆಯನ್ನು ನೋಡುವ ಮತ್ತು ವಿಶ್ಲೇಷಿಸುವ ಅಗತ್ಯವಿದೆ. ಇವತ್ತಿನ ಅಗತ್ಯವನ್ನು ಸಿನಿಮಾದ ಮೂಲಕ ಅರ್ಥ ಮಾಡಿಸಬೇಕು. ಉದಾಹರಣೆಗೆ ಬಾಲು ಮಹೇಂದ್ರ ಅವರ ಸಿನಿಮಾಗಳಲ್ಲಿನ ಬೆಳಕು ಅಳವಡಿಸುವ ಕ್ರಮ ನೋಡಬಹುದು. ನಿರ್ದೇಶಕ ಸಿನಿಮಾದ ಅಂತಃಶಕ್ತಿಯನ್ನು ಹೇಳುತ್ತಾ ಪ್ರೇಕ್ಷಕರನ್ನು ಚಿಂತನೆಗೆ ಅನುವು ಮಾಡಿಕೊಡಬೇಕು’ ಎಂದು ಕಾಸರವಳ್ಳಿಯವರು ಹೇಳಿದರು.
ಸಿನಿಮಾದ ಗುಣಲಕ್ಷಣಗಳ ಬಗ್ಗೆ ಸಂವಾದದಲ್ಲಿ ಮಾತನಾಡಿದ ಅವರು ವಿಶ್ವ ಸಿನಿಮಾ, ಭಾರತೀಯ ಸಿನಿಮಾ ಹಾಗೂ ಪ್ರಾದೇಶಿಕ ಸಿನಿಮಾಗಳು ಬೆಳೆದಬಂದ ಬಗೆಯನ್ನು ವಿಶ್ಲೇಷಿಸಿದರು. ಸಂವಾದದ ಕೊನೆಯಲ್ಲಿ ನಂತರ ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು. ಸಮುದಾಯ ಶಿಕ್ಷಣ ತಜ್ಞ ಡಾ.ಮುರಳಿ ಮೋಹನ್ ಕಾಟಿ ಅವರು ಈ ಗೋಷ್ಠಿಯನ್ನು ನಿರ್ವಹಿಸಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿರುವ ಮೂರು ದಿನಗಳ ಈ ಕಾರ್ಯಾಗಾರದಲ್ಲಿ ರಾಜ್ಯದ ಹಲವೆಡೆಯಿಂದ ದೊಡ್ಡ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.





