- ರಾಘವೇಂದ್ರ ಅಡಿಗ ಎಚ್ಚೆನ್.

ತೆಲುಗು ಚಿತ್ರರಂಗದಿಂದ ಮತ್ತೊಂದು ದುಃಖದ ಸುದ್ದಿ ಹೊರಬಿದ್ದಿದೆ. ತಮ್ಮ ವಿಭಿನ್ನ ಅಭಿನಯದ ಮೂಲಕ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿದ್ದ ಹಿರಿಯ ನಟ ಗಿರಿಬಾಬು (Giri Babu) ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ನವೆಂಬರ್ 14ರಂದು ಕೊನೆಯುಸಿರೆಳೆದಿದ್ದಾರೆ. ನಾಯಕನಾಗಿ, ಖಳನಾಯಕನಾಗಿ, ಹಾಸ್ಯನಟನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಮಿಂಚಿದ್ದ ಗಿರಿಬಾಬು ಅವರ ಅಗಲಿಕೆಯಿಂದ ಟಾಲಿವುಡ್‌ನಲ್ಲಿ ಶೋಕ ಆವರಿಸಿದೆ.

ಸ್ಟೈಲಿಷ್ ವಿಲನ್ ಆಗಿ ಮಿಂಚಿದ್ದ ಗಿರಿಬಾಬು!

ತೆಲುಗು ಸಿನಿಮಾಗಳಲ್ಲಿ ಖಳನಾಯಕನ ಪಾತ್ರಗಳಿಗೆ ಹೊಸ ಮೆರುಗು ನೀಡಿದ ನಟರಲ್ಲಿ ಗಿರಿಬಾಬು ಕೂಡ ಒಬ್ಬರು. ಸೂಟು, ಬೂಟು ಧರಿಸಿ, ಸಿಗರೇಟ್ ಸೇದುತ್ತಾ ನಿಧಾನವಾಗಿ ಡೈಲಾಗ್ ಹೇಳುವ ಅವರ ಸ್ಟೈಲ್ ಪ್ರೇಕ್ಷಕರ ಗಮನ ಸೆಳೆದಿತ್ತು. ಆರಂಭದಲ್ಲಿ ನೆಗೆಟಿವ್ ಪಾತ್ರಗಳ ಮೂಲಕ ಜನಪ್ರಿಯತೆ ಗಳಿಸಿದ್ದ ಅವರು,

ನಂತರ ಹಾಸ್ಯ ಹಾಗೂ ಪೋಷಕ ಪಾತ್ರಗಳಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದರು. ಮೆಗಾಸ್ಟಾರ್ ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ ಸೇರಿದಂತೆ ತೆಲುಗಿನ ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ಗಿರಿಬಾಬು ಅಭಿನಯಿಸಿದ್ದರು.

ನಟನಾಗುವ ಕನಸು ಹೊತ್ತು ಮದ್ರಾಸ್‌ಗೆ ಬಂದಿದ್ದ ಗಿರಿಬಾಬು!

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ರಾವೂರು ಗ್ರಾಮದಲ್ಲಿ ರೈತ ಕುಟುಂಬದಲ್ಲಿ ಜನಿಸಿದ್ದ ಗಿರಿಬಾಬು ಅವರ ಮೂಲ ಹೆಸರು ಶೇಷಗಿರಿ ರಾವ್. ಬಾಲ್ಯದಿಂದಲೇ ನಟನೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು.

ಸಿನಿಮಾ ನಟನಾಗಬೇಕೆಂಬ ಕನಸು ಹೊತ್ತು ಮದ್ರಾಸ್‌ಗೆ ತೆರಳಿದ್ದ ಗಿರಿಬಾಬು, 1973ರಲ್ಲಿ ಬಿಡುಗಡೆಯಾದ ‘ಜಗಮೇ ಮಾಯ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅಲ್ಲಿಂದ ಆರಂಭವಾದ ಅವರ ಸಿನಿ ಪಯಣ ಸುಮಾರು ಐದು ದಶಕಗಳ ಕಾಲ ಮುಂದುವರಿಯಿತು.

600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ!

ಗಿರಿಬಾಬು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಒಂದೇ ರೀತಿಯ ಪಾತ್ರಗಳಿಗೆ ಸೀಮಿತವಾಗದೆ ನಾಯಕ, ವಿಲನ್, ಹಾಸ್ಯನಟ ಹಾಗೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದರು.

ಹಿರಿಯ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ಗಿರಿಬಾಬು, ಹೊಸ ತಲೆಮಾರಿನ ನಟರ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದರು. ಹೀಗಾಗಿ ಹಲವು ತಲೆಮಾರಿನ ಸಿನಿಮಾ ಪ್ರೇಕ್ಷಕರಿಗೆ ಅವರು ಚಿರಪರಿಚಿತರಾಗಿದ್ದರು.

ನಟನೆ ಮಾತ್ರವಲ್ಲ, ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದರು!

ಗಿರಿಬಾಬು ಕೇವಲ ನಟರಾಗಿ ಮಾತ್ರ ಗುರುತಿಸಿಕೊಂಡಿರಲಿಲ್ಲ. ನಿರ್ದೇಶಕ ಹಾಗೂ ನಿರ್ಮಾಪಕರಾಗಿಯೂ ತೆಲುಗು ಚಿತ್ರರಂಗಕ್ಕೆ ಕೊಡುಗೆ ನೀಡಿದ್ದರು. ‘ಜಯಭೇರಿ ಆರ್ಟ್ ಪ್ರೊಡಕ್ಷನ್ಸ್’ ಎಂಬ ಸ್ವಂತ ನಿರ್ಮಾಣ ಸಂಸ್ಥೆ ಸ್ಥಾಪಿಸಿ ಹಲವು ಚಿತ್ರಗಳನ್ನು ನಿರ್ಮಿಸಿದ್ದರು. ‘ದೇವತಲಾರ ದೀವಿಂಚಂಡಿ’, ‘ರಾಣಿಕಾಸುಲ ರಂಗಮ್ಮ’ ಮತ್ತು ‘ಇಂದ್ರಜಿತ್’ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು.

ಗಿರಿಬಾಬು ಅಗಲಿಕೆಗೆ ಚಿತ್ರರಂಗ ಕಂಬನಿ!

ಐದು ದಶಕಗಳ ಕಾಲ ತೆಲುಗು ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಗಿರಿಬಾಬು ಅವರ ನಿಧನಕ್ಕೆ ಚಿತ್ರರಂಗದ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ಖಳನಾಯಕನಾಗಿ ಹೆದರಿಸಿದ್ದ, ಹಾಸ್ಯ ಪಾತ್ರಗಳಲ್ಲಿ ನಗಿಸಿದ್ದ ಹಾಗೂ ಪೋಷಕ ಪಾತ್ರಗಳಲ್ಲಿ ಮನಗೆದ್ದಿದ್ದ ಗಿರಿಬಾಬು ಈಗ ನೆನಪು ಮಾತ್ರ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ