– ರಾಘವೇಂದ್ರ ಅಡಿಗ ಎಚ್ಚೆನ್.

ಸಿನಿಮಾ ಪ್ರಚಾರಕ್ಕಾಗಿ ಶಾಲೆ-ಕಾಲೇಜುಗಳ ಕ್ಯಾಂಪಸ್ ಬಳಸಿಕೊಳ್ಳುವ ಚಿತ್ರತಂಡಗಳಿಗೆ ಇನ್ಮುಂದೆ ನಿರ್ಬಂಧ ಎದುರಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತೆಲಂಗಾಣ ಸರ್ಕಾರ ಕಾಲೇಜು ಆವರಣಗಳಲ್ಲಿ ಸಿನಿಮಾ ಪ್ರಮೋಷನ್ ಮತ್ತು ಖಾಸಗಿ ಕಾರ್ಯಕ್ರಮಗಳ ಮೇಲೆ ಕಡಿವಾಣ ಹಾಕಲು ಮುಂದಾಗಿದೆ.

ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ, ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳನ್ನು ಮುಖ್ಯವಾಗಿ ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಸೀಮಿತಗೊಳಿಸುವ ಚಿಂತನೆ ನಡೆಸಿದೆ. ಕೆಲವು ಕಾಲೇಜು ಆಡಳಿತ ಮಂಡಳಿಗಳು ಸಿನಿಮಾ ಪ್ರಚಾರ ಹಾಗೂ ಖಾಸಗಿ ಕಾರ್ಯಕ್ರಮಗಳಿಗಾಗಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿವೆ ಎಂಬ ಆಕ್ಷೇಪವೂ ಸರ್ಕಾರದ ಗಮನಕ್ಕೆ ಬಂದಿದೆ.

ಇದಕ್ಕೆ ಕಾರಣವಾಗಿರುವುದು ಇತ್ತೀಚಿನ ಎರಡು ಅಪಘಾತಗಳು. ‘ಟಾಕ್ಸಿಕ್’ ಸಿನಿಮಾದ ಪ್ರಚಾರ ಕಾರ್ಯಕ್ರಮ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆದಿತ್ತು. ಈ ವೇಳೆ ಸೌಂಡ್ ಬಾಕ್ಸ್‌ಗಳು ಕುಸಿದು ಬಿದ್ದು ಕೆಲವರು ಗಾಯಗೊಂಡಿದ್ದರು. ಮತ್ತೊಂದೆಡೆ, ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ದಾಂಡಿಯಾ ನೈಟ್ ಕಾರ್ಯಕ್ರಮದ ವೇಳೆ 80 ಅಡಿ ಎತ್ತರದ ತಾತ್ಕಾಲಿಕ ಲೈಟಿಂಗ್ ಕಂಬ ಕುಸಿದು ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದರು. ಕನಿಷ್ಠ 14 ಮಂದಿ ಗಾಯಗೊಂಡಿದ್ದರು.

ಈ ಘಟನೆಗಳ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದೆ. ಯಾವ ಕಾರ್ಯಕ್ರಮಗಳಿಗೆ ಕ್ಯಾಂಪಸ್‌ನಲ್ಲಿ ಅನುಮತಿ ನೀಡಬೇಕು, ಯಾವುದನ್ನು ನಿಷೇಧಿಸಬೇಕು ಎಂಬ ಬಗ್ಗೆ ಸಮಗ್ರ ಅಧ್ಯಯನ ನಡೆಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಈಗಾಗಲೇ ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ರಜೆ ಘೋಷಿಸುವ ವಿಚಾರದಲ್ಲೂ ತೆಲಂಗಾಣ ಉನ್ನತ ಶಿಕ್ಷಣ ಮಂಡಳಿ ಕಾಲೇಜು ಆಡಳಿತ ಮಂಡಳಿಗಳಿಗೆ ನೋಟಿಸ್ ನೀಡಿದೆ. ಇನ್ನು ಮುಂದೆ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಲು ಶಿಕ್ಷಣ ಇಲಾಖೆ ಹಾಗೂ ಪೊಲೀಸರ ಪೂರ್ವಾನುಮತಿ ಕಡ್ಡಾಯಗೊಳಿಸುವ ಸಾಧ್ಯತೆಯೂ ಇದೆ.

ಒಟ್ಟಿನಲ್ಲಿ, ವಿದ್ಯಾರ್ಥಿಗಳ ಶಿಕ್ಷಣ, ಶಿಸ್ತು ಮತ್ತು ಸುರಕ್ಷತೆಗೆ ಧಕ್ಕೆಯಾಗದಂತೆ ಕಾಲೇಜು ಕ್ಯಾಂಪಸ್‌ಗಳಲ್ಲಿ ನಡೆಯುವ ವಾಣಿಜ್ಯ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ತೆಲಂಗಾಣ ಸರ್ಕಾರ ಕಡಿವಾಣ ಹಾಕಲು ಸಜ್ಜಾಗಿದೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ