ಸರಸ್ವತಿ ಜಾಗೀರ್ದಾರ್*
ಕಿಚ್ಚ ಸುದೀಪ್ ನಟಿಸುತ್ತಿರುವ ಬಹುನಿರೀಕ್ಷಿತ ಮಾರ್ಕ್ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಸರೆಗಮಪ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ 'ಸೈಕ್ ಸೈತಾನ್' ಎಂಬ ಮಾಸ್ ಗೀತೆ ಬಿಡುಗಡೆಯಾಗಿದೆ. ಅನೂಪ್ ಭಂಡಾರಿ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ವಿಜಯ್ ಪ್ರಕಾಶ್, ಅಜನೀಶ್ ಲೋಕನಾಥ್ ಹಾಗೂ ಅನಿರುದ್ಧ ಶಾಸ್ತ್ರಿ ಕಂಠ ಕುಣಿಸಿದ್ದಾರೆ. ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದು, ಸುದೀಪ್ ಪಾತ್ರದ ಮ್ಯಾನರಿಸಂನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ.
*ಹುಕ್‌ಸ್ಟೆಪ್ ಚಾಲೆಂಜ್ ಕೊಟ್ಟ ಚಿತ್ರತಂಡ*
ಮಾರ್ಕ್ ಸಿನಿಮಾದ ಸೈಕೋ ಸೈತಾನ್ ಗೀತೆಗೆ ಕಿಚ್ಚ ಸುದೀಪ್ ಭರ್ಜರಿಯಾಗಿ ಕುಣಿದಿದ್ದಾರೆ. ಸಾಂಗ್ ರಿಲೀಸ್ ಆದ ಬೆನ್ನಲ್ಲೇ ಮಾರ್ಕ್ ಸಿನಿಮಾ ತಂಡ ಸಿನಿಮಾ ಪ್ರೇಮಿಗಳಿಗೆ ಹುಕ್ ಸ್ಟೆಪ್ ಡ್ಯಾನ್ಸ್ ಚಾಲೆಂಜ್ ನೀಡಿದೆ. ʼಈ ಸಾಂಗ್ ಪ್ಲೇ ಮಾಡಿಕೊಂಡು, ಹುಕ್ ಸ್ಟೆಪ್ ಹಾಕಬೇಕು. ಅಂದರೆ ಕಿಚ್ಚ ಸುದೀಪ್ ಅವರು ಸಾಂಗ್‌ನಲ್ಲಿ ಹಾಕಿದ ಸ್ಟೆಪ್‌ಗಳಲ್ಲಿ ಯಾವುದಾದರೂ ಆಯ್ಕೆ ಮಾಡಿಕೊಂಡು ನೀವೂ ಡ್ಯಾನ್ಸ್ ಮಾಡಬೇಕು. ಬಳಿಕ ಇದನ್ನ ನಿಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಪೋಸ್ಟ್ ಮಾಡಬೇಕು. ಹೀಗೆ ವಿಡಿಯೊ ಪೋಸ್ಟ್ ಮಾಡುವಾಗ markthefilm ಇನ್‌ಸ್ಟಾ ಅಕೌಂಟ್‌ನ್ನ ಟ್ಯಾಗ್ ಮಾಡಿರಬೇಕು ಮತ್ತು #MARKHOOKSTEPCHALLENGE ಎಂದು ಹ್ಯಾಷ್‌ಟ್ಯಾಗ್ ಬಳಸಿರಬೇಕು. ಅತ್ಯುತ್ತಮ ರೀಲ್ಸ್‌ನ್ನು markthefilm ಇನ್‌ಸ್ಟಾ ಪೇಜ್‌ನಲ್ಲಿ ಶೇರ್ ಮಾಡಿಕೊಳ್ಳಲು ಮತ್ತು ಅವರಿಗೆ ಬಹುಮಾನ ನೀಡಲು ಚಿತ್ರತಂಡ ತೀರ್ಮಾನ ಮಾಡಿದೆ.
‘ಮ್ಯಾಕ್ಸ್’ ಸಿನಿಮಾದ ಮೂಲಕ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದರು. ಅವರೇ ಈಗ ‘ಮಾರ್ಕ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್ನಲ್ಲಿ ಬರುತ್ತಿರುವ ಎರಡನೇ ಸಿನಿಮಾ ಇದು. 'ಸತ್ಯಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್ಸ್’ ಬ್ಯಾನರ್‌ಗಳು ಜೊತೆಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿವೆ.
ಶೇಖರ್ ಚಂದ್ರ ಛಾಯಾಗ್ರಹಣ, ಗಣೇಶ್ ಬಾಬು ಸಂಕಲನ ಚಿತ್ರಕ್ಕಿದೆ. ಸ್ಟಂಟ್ ಸಿಲ್ವಾ, ಸುಪ್ರೀಂ ಸುಂದರ್, ವಿಕ್ರಮ್ ಮೋರ್, ಕೆವಿನ್ ಕುಮಾರ್ ಸಾಹಸ ಸಂಯೋಜನೆ ಚಿತ್ರಕ್ಕಿದೆ. ಡಿಸೆಂಬರ್ 25 ರಂದು ಮಾರ್ಕ್ ಸಿನಿಮಾ ತೆರೆಗೆ ಬರ್ತಿದೆ.
https://youtu.be/MJdbzjbEy3M?si=M8K1GpTkUhZfzgVE